ಬಾನ ಗೂಡಾರವನು, ಬೆಟ್ಟ, ನಡುಗೋಲಂತೆ
ತುಟ್ಟತುದಿಗೋಪುರದ ಮೇಲೆತ್ತಿ ಹಿಡಿದಂತೆ
ನಿಂತಿರಲು ದೂರದೊಳು, ಸುತ್ತ ನಭವಿಳಿದಿರಲು
ಸಂಜೆರಂಗಿನ ಮೋಡ ಅದನಂದಗೊಳಿಸಿರಲು,
ಸರಸಿಯೊಳು ಝಗಝಗಿಸಿ ರವಿಯ ಛವಿಯಾರುವೊಲು
ಹಕ್ಕಿವಿಂಡಿಂಚರಿಸಿ ಮರದೊಳಡಗುತಲಿರಲು,
ಬೈಗಿನ ಮಲರ್ವುಡಿಯೊ ಎಂಬ ತೆರ ಕಣಿವೆಯೊಳು
ನೀಲಿ ನಸುಕಿನ ಜತೆಗೆ ಕೆಂಬೆಳಕು ಬೆರೆದಿರಲು,
ಲೋಕ ನಿಶ್ಚೇಷ್ಟಮಿರೆ ನೀರವತೆ ಹಬ್ಬುತಿರೆ
ಕಾಣ್ಕೆ ಕೇಳಿಕೆಗಿಂಬ ಕಾಣದೊಲು ಮರುಳುತಿರೆ
ಕರಣ, ಮಾನಸಗೃಹಕೆ; ಉಪರತಿಯನಾನುವೊಲು
ಜ್ಞಾನ ಧ್ಯಾನಕೆ ಸಂದು, ಸ್ವಪ್ನದೊಳಗೆಚ್ಚರಲು
ಮತ್ತೆ ತನಗಾದಂತೆ ವಿಷಯವಿಹರಣಲೀಲೆ
ತನ್ನರ್ಥಗಳ ತಾನೆ ಸೃಜಿಸುತ್ತಲಿರುವೋಲೆ;
ನಾನಂದು ಮುತ್ತಣ್ಣ ದೊರೆಸಾಮಿಯೊಡಗೂಡಿ
ಪುಷ್ಕರಿಣಿ ತೀರದೊಳು ಸಂಜೆ ಬಿಡುವನು ಮಾಡಿ
ಮೂವರೂ ಮೌನಮಿರೆ ತಂತಮ್ಮ ಕನಸಿನೊಳು
ಸುಳಿದು ದತ್ತಾತ್ರೇಯಮುನಿಯೆನ್ನ ನೆನಹಿನೊಳು
ನಡೆದರಾ ‘ಪರಿಧಾನ ಶಿಲೆ’ಯತ್ತ ಹೊಗರಿಡುತ
ತಮವ ಮಿಂಚಿನ ತೆರದೊಳೆನ್ನರಿವ ಹೆದರಿಸುತ.
ಮುತ್ತಣ್ಣಗಿದನೊರೆಯೆ ಅಭಿನಂದಿಸುತ ನನ್ನ
“ಭಗವಂತನನು ಕಂಡೆ ನೀ ಪುಣ್ಯಸಂಪನ್ನ”
ಎನ್ನುತಾ ಪರಮಋಷಿ ಇಲ್ಲಿ ತಪಮಿರುತಿರುವ
ಮನದ ಹದವರಿತೊಮ್ಮೆ ಗೊಮ್ಮೆ ದರ್ಶನಕೊಡುವ
ಪರಿಯ ವಿವರಿಸಿ ಅವರು ಶಾಂಡಿಲ್ಯರೊಡಗೂಡಿ
ಇಲ್ಲೆ ಋಷಿಗಳ ಜತೆಗೆ ಸಲ್ಲಾಪಗಳ ಮಾಡಿ
ನಿತ್ಯವಿರುತಿಹರೆಂಬ ದಂತಕಥೆಗಳ ಹೇಳಿ,
“ಅದರೊಳೊಂದತಿ ಸೋಜಿಗದ ಕಥೆಯಿದನು ಕೇಳಿ”
ಎಂದ:
ಈ ಬನದಲ್ಲೆ ಮರ್ಕಟವದೊಂದಿತ್ತು.
ತನ್ನ ವಾಸದ ಮರಕೆ ನರನೊರ್ವ ಭಯವೆತ್ತು
ಓಡಿ ಬಂದೇರುತಿರೆ, ಹಿಂದೆ ಹುಲಿಯಟ್ಟಿಬರೆ,
ಶಾರ್ದೂಲದಿಂ ಕೋತಿ ಸೌಮ್ಯವಾಗಿಯೆ ತೋರೆ
ಆತನಿದರಾಸರೆಯ ಕೋರಿ ಸನಿಯಕೆ ಬಂದು
ಶರಣೆನ್ನೆಲಾತಂಗೆ ಕೊತಿ ಕರುಣೆಗೆ ಸಂದು
ಅಭಯಕೊಡೆ, ಹುಲಿಯದಕೆ ಕ್ಷುಧಾದೈನ್ಯತೆವೆತ್ತು
ಇಂತೆಂದಿ “ತಲೆ ಮಿತ್ರ, ಎನಗಪ್ಪಯಾ ಮಿತ್ತು?
ನೀ ಪೊರೆಯುವೀ ನರಂ ವಿಧಿಯಿತ್ತ ತುತ್ತೆನಗೆ.
ತರವಲ್ಲ, ವನಚರಾ, ನನ್ನ ನಿನ್ನಯ ಕೆಳೆಗೆ
ನೀನವನ ರಕ್ಷಿಪುದು-ಇಂತೆನ್ನ ಶಿಕ್ಷಿಪುದು;
ಅವನ ಮರದಿಂ ತಳ್ಳಿ ಹಿತವೆಸಗೆ ಉಚಿತವದು”
ಎನ್ನಲಾ ವಾನರಂ “ಶರಣಾಗತರ ರಕ್ಷೆ
ಸರ್ವಧರ್ಮಕು ಮಿಗಿಲು-ಇದುವೆ ನನ್ನಯ ದೀಕ್ಷೆ
ಬೇರೆ ಬೇಟೆಯನರಸಿ ನನ್ನ ಧರ್ಮವ ಪೊರೆ”
ಎಂದು ನಿರ್ಧರವೊರೆದು ಹದುಳದಿಂ ನಿದ್ದಿಸಿರೆ,
ವ್ಯಾಘ್ರನಾ ಭಯಮೂಢಮನುಜನ ಕುರಿತಂತು
ಸಂಬೋಧನೆಯ ಮಾಡಿ “ತಲೆ ಕೆಳೆಯ, ಕೆಳೆ ಎಂತು
ನನಗು ನಿನಗೆನಬೇಡ-ಹಸಿದಗನ್ನವೆ ಮೊದಲು
ನೀತಿನಂಟಾಬಳಿಕ-ಪ್ರಕೃತಿಋತಮಿಂತಿರಲು
ಮಧುರಭಾವವ ಮರೆತು ತುಡುಕಲೆಳಸಿದೆ ನಿನ್ನ;
ನನ್ನವನೆ ನಾನಲ್ಲ ಈ ಹಸಿವು ತೀರ್ವನ್ನ.
ಆ ಕೋತಿಯನು ತಳ್ಳಿ ನನ್ನ ಹರಣವನುಳಿಸು
ನನ್ನ ನಿಂತುಪಕರಿಸಿ ನಿನ್ನ ಹದುಳವ ಗಳಿಸು”
ಇಂತೆನುವ ಹುಲಿಗೆ ಆ ಜೀವಲೋಭಿಯು ಹಿಗ್ಗಿ
ತನ್ನ ಕೊಳೆಬಾಳ್ವೆಗೀ ಕೊಳಚೆಯೆಸಕವೆ ಸುಗ್ಗಿ
ಎಂಬಂತೆ ತನ್ನ ಬಳಿ ನಿಶ್ಶಂಕೆ ನಿದ್ದಿ ಸಿಹ
ಹಿತಕಾರಿವಾನರನ ಕೆಳಗೆ ತಳ್ಳಿದನಹಹ!
ಬೀಳುವಂತೆಚ್ಚರುವ ಆ ಕೋತಿಯನು ಹಿಡಿದು
ಗಹಗಹಿಸಿ ನಗುತ ಹುಲಿ, ಬಾಲಬಡಿದುರೆ ನೆಗೆದು
“ತಕ್ಕುದೆಸಗಿದ ನಿನಗೆ” ಎಂದಾರೆ, ಮರ್ಕಟಂ
ವ್ಯಾಘ್ರದಾಭೀಲಮುಖವೀಕ್ಷಣಭಯೋತ್ಕಟಂ
ದಿಙ್ಮೂಢನಾಗಿರಲು, ಮರಳಿ ಹುಲಿಯದ ಕುರಿತು
ಇಂತೆಂದಿ “ತೆಲೆ ಮರುಳೆ, ಸದಸತ್ತುಗಳನರಿತು
ಧರ್ಮಚಾರಣೆಯೊಳಿತು-ನರನವಂ ಮೃಗವೈರಿ
ಅವನಸುವೆ ಬೆಲೆಯವಗೆ-ಫಲವೇನವನ ದೂರಿ.
ನಾವು ನೆರೆಯವರಲಾ-ನಮಗೊಲ್ಮೆಯೇ ಕ್ಷೇಮ
ಒಬ್ಬಗೊಬ್ಬೊದಗುವುದೆ ನಮ್ಮ ಹದುಳದ ನೇಮ.
ನಿನ್ನ ಬಿಡುವೆನು-ಪೋಗು. ಆ ನರನ ತಳ್ಳಿಲ್ಲೆ”
ಎನ್ನಲಾ ಕಪಿ, ಧರ್ಮಮತಿಮುಷ್ಟಿ, “ಒಲ್ಲೊಲ್ಲೆ
ನಾನಳಿದರೇನೆನ್ನ ನನ್ನಿ ಯುಳಿಯಲಿ” ಎಂದು
ಶರಣುಬಂದರ ಪೊರೆವ ಛಲವೆ ತನಗಿನಿದೆಂದು,
ಅಸುವಾದರದರ ಬೆಲೆ ಈವೆ ಕೋ-ಎಂದಿತೈ-
ಎಂಬಚ್ಚರಿಯ ಕತೆಯ ಋಷಿವೃಂದವೊರೆದಿತೈ.
ದತ್ತರಿದ ಲಾಲಿಸುತ ಶಾಂಡಿಲ್ಯರೆಡೆ ನೋಡೆ,
ಅವರೊಂದು ಕತೆಯೊರೆದರೆಂತೆನಲು: ಈ ಕಾಡೆ
ಸರಸಿಯೊಳಕೊಂಡೊಂದು ಹಂಸಕೆಡೆಯಾಗಿತ್ತು
ತಿಳಿಜಲದ ಬಿಳಿಮುಗಿಲ ಲೀಲೆಯೇ ಮೈವೆತ್ತು
ಇಂಥ ಚೆಲುವಾಯ್ಎತನಲು, ಹೆಸರು ನಾಳೀಜಂಘ,
ಅದಕಿತ್ತು ಗಂಧರ್ವರಾಜನೊರ್ವನ ಸಂಗ.
ಒಮ್ಮೆ ಆ ಸರಸ್ತೀರಕೊರ್ವ ಪಾರ್ವನು ಬಂದು
ಬಡತನವ ಹಲುಬುತ್ತ ಮರಣವೇ ಲೇಸೆಂದು
ನೀರಿನೊಳು ದುಮ್ಮಿಕ್ಕಲೀ ಹಂಸವದ ಕಂಡು
ಈಸಿಬಂದುಳಿಸಿ ಸವಿನುಡಿದು ಮರುಕಗೊಂಡು
ಗಂಧರ್ವರಾಜನೆಡೆ ಕುರುಹನಿತ್ತವನಟ್ಟಿ
ಸೊಗಮಿರಲು; ಅಲ್ಲಾಗೆ ಪಾರ್ವನಿಗೆ ಧನವೃಷ್ಟಿ
ಹೊರಲಾರದದ ಹೊತ್ತು ಬಳಲಿ ಬೆಂಡಾಗುತ್ತ
ಹಸಿವು ಬಾಯಾರಿಕೆಯೊಳಸವಳಿದು ಬೀಳುತ್ತ
ಬರಲು, ಸರದೆಡೆಯೊಳೀ ಹಂಸ ನಿದ್ದಿಸುತಿರಲು
ಇವನಳಲ ಬೆಂಕಿಗದು ಹಿಮಖಂಡದಂತಿರಲು,
ಕಂಡದನೆ ಕೊಂದು ಬೇಯಿಸಿ ತಿಂದನೇವೇಳ್ವೆ!
ಇದನರಿತ ಗಂಧರ್ವರಿಂದಿವನ ಹೊಲೆಬಾಳ್ವೆ
ನಂದಿ ನರಕಕೆ ಸಂದಿತಾ ಹಂಸಕಾಯ್ತು ದಿವ.
ಆದೊಡಿಲ್ಲಿಗೆ ನಿಲ್ಲದಿದು ಕೇಳಿ ಮುಂದಿನ ಹದವ.
ವಿಪ್ರಗಾದೀ ಗತಿಯನರಿಯುತಾ ಸಾರಸಂ
ಕಡುನೊಂದು “ಏಕೆನಗೆ ಸುಕೃತಿಯೆಂಬೀ ಜಸಂ
ಉಪಕೃತಿಯ ಗೈವೆನೆಂದಪಕಾರಿ ನಾನಾದೆ
ನನ್ನಿಂದಲಸುವಳಿದು ಜತೆಗೆ ನರಕದ ಬಾಧೆ
ಈ ಬಡವಗಾಯ್ತೆ”ಂದು ಹಂಸ ಮಮ್ಮಲಮರುಗಿ
ಸ್ವರ್ಗಭೋಗವ ತೊರೆದು ದೇವೇಂದ್ರನಡಿಗೆರಗಿ
ದೇವರೆಲ್ಲರ ಕ್ಷಮೆಯ ವಿಪ್ರನಿಗೆ ಯಾಚಿಸುತ
ತನ್ನೆಲ್ಲ ಪುಣ್ಯಗಳನವಗೆ ಮೀಸಲನಿಡುತ
ಕರೆತರಿಸಿತಾ ದಿವಕೆ ತನ್ನ ಕೊಲೆಪಾತಕನ!-
ಎನೆ; “ಚಿತ್ರತರಮಿದುವು ಶಾಂಡಿಲ್ಯರೀ ಕಥನ
ಆ ಕೋತಿಗೂ ಮಿಗಿಲು ಈ ಹಂಸ”ವೆಂದೆನುತ
ಋಷಿವೃಂದ ಶಾಂಡಿಲ್ಯರನ್ನು ಹೊಗಳಿತೈ-ಎನುತ
ಮುತ್ತಣ್ಣ ಕತೆ ಮುಗಿಸೆ, ದೊರೆಸಾಮಿ ಎಚ್ಚರುತ
“ಮರ್ಕಟವೆ ಮಿಗಿಲು ಸೈ ಅದರ ಚರಿತವೆ ಚರಿತ!
ಆಪತ್ತಿನೊಳಮದುವು ಅಪಕಾರಗೈದವನ
ಹದುಳವನೆ ಬಯಸಿತಲ, ಶರಣು ಬಂದಿರುವವನ
ಪೊರೆಯಲೀ ಮತಿ ಲೇಸು” ಎನಲು, “ಹಂಸವೆ ಮಿಗಿಲು.
ಅದುವೊ ಛಲ-ಇದೊ ಚಿತ್ತಪರಿಪಾಕ ಫಲ” ವೆನಲು
ಮುತ್ತಣ್ಣ, ನಾನಿವರನವರ ವಾದಕೆ ಬಿಟ್ಟು
ಈ ಕತೆಗಳಾಮೋದದಾವರಣೆಗೆದೆಕೊಟ್ಟು-
“ಇವ ಕುರಿತ ಮನ ಹಿರಿದು, ಇವನೊರೆದ ಮನ ಹಿರಿದು
ಇವರ ಮಹಿಮೆಯನರಿತು ಸರಿಯೇಂಬ ಮತಿ ಹಿರಿದು!
ಅಪಕಾರಿಗುಪಕಾರವೆಸಗುವೀ ಬಗೆಯೇಕೆ
ಪರದುಃಖ ಶಮನವನೆ ಬಯಸುವಾಸೆಯದೇಕೆ
ಮನುಜಗಾಯಿತ್ತೆ”ನುತ ನಾ ಧ್ಯಾನಪರನಾಗೆ
ಜಗದ ಸಚ್ಚರಿತೆಗಳು ನನ್ನ ಚಿತ್ರದ ತೂಗೆ,
“ಹಿಂಡನಗಲಿದ ಮೃಗಕೆ ಹಿಂಡೊಂದೆ ಹಂಬಲಿಕೆ
ಭೂತಂಗಳೊಳು ಚೆದರಿ ಭೀತವಾದಾತ್ಮಕ್ಕೆ
ಭೂತಹಿತರತಿ ಸಚ್ಚಿದಾನಂದ ಸಂಗತಿಗೆ
ಆನಂದದೀ ತುಯ್ತಕನುವಾಗುವಾ ಮತಿಗೆ
ಇಂಥ ನಡೆಯೇ ಸಹಜ”ವೆಂದಾನು ಭಾವಿಸಿರೆ-
ತೀರ್ಥಸಾನ್ನಿಧ್ಯದೊಳು ಮನ ಭವ್ಯವಾಗುತಿರೆ-
ಸಂಧ್ಯಾಸ್ತನತ್ರುಟಿತ ಅಮೃತಬಿಂದುಗಳೆನಲು
ಮೂಡಿರ್ದುವಾಗಸದೊಳಲ್ಲಲ್ಲಿ ಚುಕ್ಕಿಗಳು.
ಎಡಬಲದ ಕಂದರದಿ ಸೃಷ್ಟಿ ಸುಪ್ರಿಯೊಳಿತ್ತು
ಋಷಿಗಣವ ನಲಿಪನೆನೆ ತನ್ನ ದರ್ಶನವಿತ್ತು
ಸುಂದರಶ್ಯಾಮನಾ ನಭೋಮಂಡಲದಲ್ಲಿ
ತೆರೆತುಂತುರಂತರಿಲು ತೊಳಗುತಿರೆ ಮೈಯಲ್ಲಿ
ಕ್ಷೀರಸಾಗರದಲ್ಲಿ ಪವಡಿಸಿರುವಂದದೊಳು
ಯಾಮಿನೀಕಾಳಿಮದ ವಿಕ್ರಾಂತರೂಪದೊಳು
ಮೇಲೆ ಮೆರೆದನು ದಿವ್ಯ ವಿಶ್ವರೂಪವ ತೋರಿ.
ಅರಿವತ ಪರಿಯುತಿರೆ ನನ್ನ ಮನದಿಂ ಜಾರಿ
ನಿಶ್ಚಲ ನಿರಂಜನಂ ನಿರ್ವಿಕಲ್ಪಕಭಾವ
ನಿಷ್ಕಳ ನಿರಾಖ್ಯಾತ ಶುದ್ದನೇಕೋದೇವ
ಎಂಬ ಶ್ರುತಿಮರ್ಮರಂ ನನ್ನ ಚೇತದಿ ಮೊರೆಯೆ
ಸದ್ದರ್ಶನಾನಂದವನುಭಾವದೊಳು ನೆರೆಯೆ,
ದಿವ್ಯಪ್ರಾದುರ್ಭಾವದರಿವು ಚಿತ್ತವ ಸೋಕಿ
ಮೌನಕೆಡೆಮಾಡಿತೆನೆ ನೀತಿ ತರ್ಕವ ನೂಕಿ
ಮುತ್ತಣ್ಣ ದೊರೆಸ್ವಾಮಿ ಇರ್ವರೂ ಬಳಿಸಾರೆ,
ನನ್ನ ಸೋಕುತ ಕುಳಿತು ಸ್ಪರ್ಶದಿಂ ಸೊಗವೇರೆ
ತುಸಕಾಲವಲ್ಲಿರ್ದೆವೇಕಾನುಭವದೊಳಗೆ
ನಮ್ಮ ಹಂಕೃತಿ ಮರಳಿ ಎಚ್ಚರವ ತಹವರೆಗೆ.
*****