ಬೆನಕ ನೀ ಬರಬೇಕೊ
ನಮ್ಮನೆಗೆ ಬರಬೇಕೊ
ಪಲ್ಲಕಿ ಗಿಲ್ಲಕಿ ಬೇಡವೆಂದಿ
ಮೂಷಿಕವಾಹನವೊಂದೇ ಸಾಕೆಂದಿ
ಮೆಲ್ಲನೆ ಬರುತೀಯೋ
ಘಲ್ಲನೆ ಬರುತೀಯೋ
ಹೇಗಾದರು ನೀ ಬರಬೇಕೋ
ಗದ್ದೆ ಬದುವಲ್ಲಿ ಹುಷಾರಾಗಿ ಬಾರೋ
ಬಿದ್ದರೆ ಬಿದಿಗೆಯ ಚಂದ್ರ
ನಗುತಾನೋ
ಚಂದ್ರ ನಕ್ಕರೆ ನೀ ಹಲ್ಮುರಿದು
ಹೊಡೀತೀಯೊ
ಹಲ್ಮುರಿದು ಹೊಡೆದರೆ
ಲಡ್ಡೆಂತು ತಿನುತೀಯೊ
ಲಡ್ಡು ಕಟ್ಟಿದ್ದೀವಿ ಕಡುಬು ಮಾಡಿದ್ದೀವಿ
ನೀ ಸೆಡೊಡೆದು ತಿನಬೇಕೊ ಬೆನಕ
ಗಸಗಸೆ ಪಾಯಸ ಬಿಸಿಬಿಸಿ ಉಣಬೇಕೊ
ಹಪ್ಪಳ ಸೆಂಡಿಗೆ ಚಪ್ಪರಿಸಿ ಮೆಲಬೇಕೊ
ಮೂಷಿಕರಾಯನಿಗು ಕುರುಕಲು ಕೊಡಬೇಕೊ
ಹಟ್ಟಿಯ ಹಸುಗಳಿಗೆ ಹೊಟ್ಟೆ ತುಂಬ ತಿನಿಸ್ಬೇಕೊ
ವರ್‍ಷವರ್‍ಷವು ನೀ ಬರಬೇಕೊ ಬೆನಕ
ನಿನ್ನ ದಾರಿಯ ನಾವು ನೋಡುವೆವನಕ
*****