ಮಡಿಕೇರೀಲಿ ರತ್ನ
ಕಂಡಾ ವೊಸಾ ಮತ್ನ. ೧
‘ಮಡಿಕೇರೀಲಿ ಮಡಿಕೆ ಯೆಂಡ
ಯೀರ್ದಿದ್ರ್ ಅಲ್ಲೀಗ್ ವೋದ್ದೂ ದಂಡ’
ಅಂದಿ ರತ್ನ ಪಡಕಾನೇಗೆ
ವೊಂಟಿ, ಬೆಟ್ಟದ ನೆತ್ತಿ ಮೇಗೆ
ವೋಯ್ತಿದ್ದಂಗೆ ನಿಂತ!
ಕಲ್ಲಾದಂಗೆ ಕುಂತ! ೨
ಸುತ್ತ ಸಾಯೋ ಬಿಸಿಲಿನ್ ಚಾಪೆ!
ಅಲ್ಲಲ್ಲಿ ವೊಸಿ ನೆರಳಿನ್ ತೇಪೆ!
ಅಲೆಯಲೆಯಾಗಿ ಬಿಸಿಲಿನ್ ಜೊತೆಗೆ
ಸುತ್ತಿನ್ ಗುಡ್ಡಗೊಳ್ ಕುಣದರ್ ಮೆತ್ಗೆ
ಮನಸೀಗ್ ಅರ್‍ಸ ತರ್‍ತ-
ರತ್ನ ಯೆಂಡ ಮರ್‍ತ! ೩
‘ಮುದಕನ್ ಸಾವೇ ನೋಡಾಕ್ ಚಂದ!’
ಅಂದ್ರೆ ಸೂರ್‍ಯ ಸಾಯಾಲ್ಲೇಂದ;
‘ಸಾಯೋ ಮುದುಕ ಸಂಜೆ ಸೂರ್‍ಯ
ನೆಗತ ನಿಲ್ಲೋಕ್ ಇವ್ಗೇನ್ ಕಾರ್‍ಯ?’
ಅಂತ ಹಿಂದಕ್ಕ್ ತಿರ್‍ಗಿ
ನೋಡ್ದ್ರೆ-ಬತ್ತು ಗಿರ್‍ಕಿ! ೪
ದೇವರದೊಂದು ಚೆಂದದ್ ಸೋತ್ರ
ಕೊಡಗಿನ್ ಮೇಗಿನ್ ಒಂದ್ ನಕ್ಸತ್ರ
ಕೊಡಗಿನ್ ಒಂದ್ ಊ ಗಾಳೀಲ್ ತೇಲ್ತ
ಬಂದಂಗಿದ್ಲು ಅತ್ರ ಕಾಲ್ತಾವ್
ಒಂದು ಕೊಡಗೀನುಡಗಿ!
ಐದಾರೊರಸದ್ ವುಡಗಿ! ೫
ಕೊಡಗಿನ್ ತೋಟದ್ ಕಾಪೀ ಅಣ್ಣು
ತುಟಿಗೊಳ್! ಇಳ್ಳಿನ್ ಬೆಳಕೆ ಕಣ್ಣು!
ಕೆನ್ನೆ ಅನಕ ಕೊಡಗಿನ್ ಕಿತ್ಲೆ!
ಔಳೇಳಿದ್ಲು ನಾ ಕೇಳೂತ್ಲೆ :
‘ನಿಂಗೆ ಯೆಸರೇನಮ್ಮ?’
‘ನನ್ನೆಸರು ಪೂವಮ್ಮ!’ ೬
‘ಪೂವಮ್ಮ!’ ಹಾ ! ಯೆಂತಾ ಯೆಸರು!
ಕಣ್ಣಿಗೆ ಚಿತ್ರ ಕಟ್ಟೋ ಯೆಸರು!
ರೂಪು ರಾಗಕೆ ತಕ್ಕಂತ್ ಯೆಸರು!
ಯಂಗ್ ನೋಡಿದ್ರು ವೊಪ್ಪೋ ಯೆಸರು!
‘ಪೂವಮ್ಮಾ! ಪೂವಮ್ಮಾ!’
‘ಪೂವಮ್ಮಾ! ಪೂವಮ್ಮಾ!’
ಔಳ್ ನೋಡೂತ್ಲೆ ನಂಗ್ ಮತ್ತಾಯ್ತು!
ಔಳ್ ಮಾತ್ಕೇಳಿ ಒಂದ್ ಅತ್ತಾಯ್ತು!
ಔಳ್ ಮಾತ್ ಇನ್ನಾ ಕೇಳ್ಬೇಕೂಂತ
‘ನಾನ್ಯಾರ್ ಗೊತ್ತೆ?’ ಅಂದ್ರೆ ‘ಹೂ’ತ
‘ನೀ ಯೆಂಡಕುಡಕ’ ಅಂದ್ಲು
ನೆಗ್ತ ಅತ್ರ ಬಂದ್ಲು. ೮
‘ನೀ ನಾ ಕುಡಿಯೋದ್ನ್ ಎಲ್ ನೋಡ್ದೇಮ್ಮ?’
ಅಂದ್ರೆ, ‘ಯಾವೋನ್ಗೈತೆ ಜಮ್ಮ
ಔನ್ಗೆ ಯೋಳ್ತಿವ್ ಕೊಡವಾಂತಂದಿ!
ಕುಡದಂಗ್ ಆಡೋನ್ ಕುಡುಕಾಂ’ತ್ ಅಂದಿ
ತೊಡೇನ್ ಅತ್ತಿದ್ಲು ಮೆಲ್ಗೆ!
ಕುಡದೋನ್ ಅಂದ್ರೆ ಸಲ್ಗೆ! ೯
ಕತ್ತಿನ್ ಸುತ್ತ ಕೈ ಆಕ್ಕೊಂಡಿ
‘ಅಣ್ಣ ರತ್ನ’ ಅಂತ್ ನೆಕ್ಕೊಂಡಿ
‘ಯೆಂಡದ ಪದಗೊಳ್ ಏಳ್ ನೋಡಾನೆ!
ನಾನೂ ನಿನ್ನಂಗ್ ಕಲ್ತ್ ಆಡಾನೆ!’
ಅಂದ್ಲು ಮೊಕಾನ್ ನೋಡಿ!
ಕಣ್ಣ ದೊಡ್ದು ಮಾಡಿ! ೧೦
ಇಲ್ದಿದ್ ತಂಗಿ ಆಗ್ ವುಟ್ಟಿದ್ಲು
ಪೂವಮ್ಮಾನೆ ನಂಗೆ ಮೊದಲು!
ತಂಗಿ ವುಟ್ಟಿದ್ ದಿವಸಾಂತೇಳಿ
ಆಡ್ದೆ ಯೆಂಗೀಸ್ ಇಡದಂಗ್ ತಾಲಿ-
ಸೂರ್‍ಯ ಮುಳಗಿದ್ ಕಾಣ್ದೆ!
ಯೆಂಡ ಬೇಕಂತ್ ಅನ್ದೆ!
*****