ಕಮಲಪುರದ ಹೊಟ್ಲಿನಲ್ಲಿ

ಕಮಲಪುರದ ಹೊಟ್ಲಿನಲ್ಲಿ

ಕಮಲಪುರದ ಬಂದರ್ ಸ್ಥಳವು ವಸಂತ ಋತುವಿನ ಸಂಧ್ಯಾತಪದಿಂದ ಸುಖ ಹೊಂದುತ್ತಲಿತ್ತು. ವೀರಪುರದಿಂದ ಬಂದು ದಂಡೆಯಲ್ಲಿ ನಿಂತಿದ್ದ. ಒಂದೆರಡು ದೋಣಿಗಳು ನೀರಿನ ಸಣ್ಣ ಅಲೆಗಳ ಮೇಲೆ ಕುಣಿಯುತ್ತಲಿದ್ದವು. ದೋಣಿಗಾರನು ಈಳಿಗೆಯನ್ನು ಕಾಲಿಂದ ಒತ್ತಿ ಹಿಡಿದು, ಕೈಯಲ್ಲಿದ್ದ ಮೀನನ್ನು ತರಿದು, ಬಳಿಯ ನೀರು ತುಂಬಿದ ಮಣ್ಣಿನ ಪಾತ್ರೆಗೆ ಒಟ್ಟುತ್ತಿದ್ದನು. ಆಗಾಗ ಹಾರಿ ಬರುವ ಕಾಗೆಗಳನ್ನು ಅಟ್ಟುತ್ತಿದ್ದನು. ಸ್ವಲ್ಪ ದೂರದಲ್ಲಿ ಅಂಬಿಗರ ಹೆಂಗಸರು ಸೊಂಟಕ್ಕೆ ಮುಟ್ಟುವಷ್ಟು ನೀರಿಗೆ ಇಳಿದು ಫಕ್ಕನೆ ಮುಳುಗು ಹಾಗಿ ಕೆಸರಿನಲ್ಲದ್ದ ಚಿಪ್ಪು ಮೀನುಗಳನ್ನು ಕೈತುಂಬಾ ಆಯ್ದುಕೊಂಡು ತಮ್ಮ ಮೈ ಬಟ್ಟೆಯ ಪದರಿನ ಚೀಲವನ್ನು ತುಂಬಿಸುತ್ತಿದ್ದರು. ದಡದ ಮೇಲಿದ್ದ ‘ಮಾಪಿಳ್ಳೆ’ ಯುವಕನು ಕೃಷ್ಣಕಾಯರಾದ ಈ ಯೋಜನಗಂಧಿಯರನ್ನು ಕದ್ದು ನೋಡುತ್ತಾ ಏನು ಏನೋ ಯೋಚಿಸುತ್ತಿದ್ದನು. ಎಲ್ಲಿ ನೋಡಿದರೂ ಜನಗಳ ಗಲಭೆ, ಬಂಡಿಗಳ ಚೀತ್ಕಾರ, ಹೊರೆಯಾಳುಗಳ ಕಲರವ. ಈ ಕಡೆಯಲ್ಲಿ ಗಟ್ಟದಿಂದ ಇಳಿದ ಕಾಫಿಯ ಮೂಟೆಗಳನ್ನು ಸಮುದ್ರದಲ್ಲಿನ ಹಡಗುಗಳಿಗೆ ಸಾಗಿಸುತ್ತಿರುವರು. ಇದೋ ಇಲ್ಲಿ ರಾಶಿ ಹಾಕಿದ ಅಕ್ಕಿ ಹೊರೆಗಳನ್ನು ಎಣಿಸಿ ಎಣಿಸಿ ವರ್ತಕನು ಆಳುಗಳನ್ನು ಕೂಗಿ ಕರೆಯುತಿರುವನು. ಅಲ್ಲ ಬೊಂಬಯಿಂದ ಬಂದ ಜೀನಸುಗಳನ್ನು ದಡದ ಮೇಲೆ ಇಳಿಸುತ್ತಿರುವರು. ಇಲ್ಲಿ ‘ಮಾನಿಫೆಸ್ತ್’ ಬರೆಯುವ ಗುಮಾಸ್ತ ಮುದುಕನು ಕನ್ನಡಕದ ಕಣ್ಣುಗಳನ್ನು ಎತ್ತಿ ಹಿಡಿದು ಕಿವಿಯ ಮೇಲಿನ ಲೇಖನಿಯನ್ನು ಆಗಾಗ ಸೆಳಯುತ್ತಾ ಪಾರುಪತ್ಯವನ್ನು ನಡೆಸುತ್ತಲಿರುವನು. ಬಿಳೀ ಸರದಾರನೊಬ್ಬನು ಬಿಳೀದೋಣಿಯ ಚುಕ್ಕಾಣಿಯನ್ನು ಕೈಯಿಂದ ಹಿಡಿದು ಕಡಲ ತಡಿಗೆ ಹೋಗುತ್ತಿರುವನು. ದೋಣಿಯಲ್ಲಿ ಅವನ ಪೇದೆಯು ಕೋವಿಯನ್ನು ಹಿಡಿದು ನಿಂತಿರುವನು. ಇತ್ತ ಕೆಲವು ಮಂದಿ ಗೃಹಸ್ಥರು ವಾಯುಸೇವನೆಗೆ ‘ಕಮಿಟೀ’ ಮಾಡಿಕೊಂಡು ತಮ್ಮ ಭೂಷಣೆಯನ್ನೇ ಸಾರುತ್ತಿರುವರು. ಸರಕಾರದ ಆಫೀಸುಗಳ ಗುಮಾಸ್ತರೆಲ್ಲಾ ಸಾಯಂಕಾಲದ ವಿಹಾರಕ್ಕೆ ಬರುವುದಕ್ಕೆ ಇನ್ನೂ ಹೊತ್ತಾಗಿರಲಿಲ್ಲ. ಬಂದಿದ್ದವರಲ್ಲಿ ಒಬ್ಬಿಬ್ಬರು ಮೂರು ಪೈಸೆ ‘ಹೋಟ್ಲಿ’ನ ಕಡೆ ಹೋಗುತ್ತಿದ್ದರು. ಹೋಟ್ಲಿನಲ್ಲಿ ನೈವೇದ್ಯವನ್ನು ತೀರಿಸಿದವರಲ್ಲಿ ಕೆಲವರು ಮೀಸೆಗೆ ವಸ್ತ್ರಪೂಜೆಯನ್ನು ಮಾಡುತ್ತಿದ್ದರು. ಕೆಲವರು ಚುಟ್ಟಾವಿನ ಹೂಗೆಯಿಂದ ಧೂಪವನ್ನು ಹಾಕುತ್ತಿದ್ದರು. ಮತ್ತೂ ಕೆಲವರು ಬೀಡಿ ಸೇದುವುದಕ್ಕೆ ಬೆಂಕಿ ಹಚ್ಚಿ ದೀಪಾರಾಧನೆಯನ್ನು ಮಾಡುತ್ತಿದ್ದರು. ಎಲ್ಲರೂ ಹಣಕ್ಕೆ ಮೊದಲೇ ಅರ್ಘ್ಯವನ್ನು ಕೊಟ್ಟಿದ್ದರು.

‘ಹೊಟ್ಲಿ’ನ ಯಜಮಾನರು ಪೂರ್ಣಸಾಮಿ ಅಯ್ಯಂಗಾರರು. ಈ ಹೆಸರನ್ನು ಕೆಲವರು ಪೊನ್ನುಸ್ವಾಮಿ ಎಂದು ಸಂಕ್ಷೇಪಿಸಿರುವರು. ಕೆಲವರು ಪೆಣ್ಣುಸ್ವಾಮಿ ಎಂದೂ ಪೊಣ್ಸಾಮಿ ಎಂದೂ ಸಕಾರಣವಾಗಿ ಕರೆಯುವುದುಂಟು. ಏಕೆಂದರೆ, ೨ಂ ವರ್ಷಗಳ ಕೆಳಗೆ ಅಯ್ಯಂಗಾರರು ಒಂದು ಹಣ್ಣಿಗೋಸ್ಕರ ಊರುಬಿಟ್ಟು ಹೋಗಿದ್ದರು. ಬಳಿಕ ಶ್ರೀರಂಗ, ತಿರುಪತಿ, ಜಗನ್ನಾಥ, ರಾಮೇಶ್ವರ, ಮೊದಲಾದ ಪುಣ್ಯಸ್ಥಳಗಳಿಗೆ ಯಾತ್ರೆ ಮಾಡಿ, ಅಂತು ಸ್ವಲ ಹಣವನ್ನು ಹೇಗೋ ಕಟ್ಟಿಕೊಂಡು, ಮರಳಿ ಕಮಲಪುರಕ್ಕೆ ಬಂದು, ಈ ‘ಹೊಟ್ಲ’ನ್ನು ಪರೋಪಕಾರಾರ್ಥವಾಗಿಯೇ ಇಲ್ಲಿ ಸ್ಥಾಪಿಸಿದರು. ಯಾತ್ರೆಗಳಿಂದ ಲಾಭವುಂಟೆಂದು ಹೇಳುವರು. ನಮ್ಮ ಅಯ್ಯಂಗಾರರಾದರೋ, ದೇಶವಿದೇಶದ ಮಿಠಾಯಿಯ ಕ್ರಮವನ್ನೂ, ನಾನಾ ಭಾಷೆಗಳು ಅಲ್ಪಸ್ವಲ್ಪ ಪರಿಚಯವನ್ನೂ, ಆಶ್ಚರ್ಯಕರವಾದ ಸಮಾಚಾರ ಸಂಗ್ರಹವನ್ನೂ ಮಾಡಿಕೊಂಡಿದ್ದರು. ಅವರಿಗೆ ಮಕ್ಕಳು ಮರಿ ಇರಲಿಲ್ಲ. ಆದರೂ ನಲ್ಲೂರು ನೀಲಾಂಬೆಯ ಕಿರಿಯ ಮಗನು ಮಾತ್ರ ಇವರನ್ನು “ಅಪ್ಪಾ! ಅಪ್ಪಯ್ಯ!” ಎಂದು ಕೂಗಿ ಕರೆಯುತ್ತ ದಿನಕ್ಕೆ ಎರಡು ಬಾರಿ ಕಾಸು ಕೊಂಡು ಹೋಗುತ್ತಿದ್ದನು. ಸ್ವತಂತ್ರವಾದ ಜೀವನವನ್ನು ಕಲ್ಪಿಸಬೇಕೆಂಬ ಉದ್ದೇಶದಿಂದ ‘ಹೊಟ್ಲ’ನ್ನು ತಾನು ಮಾಡಿರುವೆನಲ್ಲದೆ, ಅದರಿಂದ ಪ್ರಯೋಜನಾಂಶವೇನೂ ಇಲ್ಲವೆಂದು ಅವರು ಯಾವ ಕಾರಣದಿಂದಲೋ ಗೊಣಗುಟ್ಟುತ್ತಿದ್ದರು. ಆದರೂ ಗ್ರಾಹಕರ ಸಂಖ್ಯೆ ದಿನೇ ದಿನೇ ಏರಿ ಹೋಗುತ್ತಲಿತ್ತು. ಒಂದು ಪೈಸೆಯ ಕಾಫಿ ಕುಡಿಯುವುದಕ್ಕೆ ಬಂದವನು ಸಹ ಅಯ್ಯಂಗಾರರ ಯಾತ್ರಾ ಸಮಾಚಾರವನ್ನು ಕೇಳುತ್ತ ಕೇಳುತ್ತ, ತಿಂದ ತಿಂಡಿಯನ್ನು ತಿಳಿಯದೆ, ಉಡಿಯಲ್ಲಿದ್ದ ಹಣವನ್ನೆಲ್ಲಾ ಸಮರ್ಪಿಸಿ ಹೋಗುತ್ತಿದ್ದನು. ಒಬ್ಬಿಬ್ಬರು, ಅಯ್ಯಂಗಾರರು ತಮ್ಮ ಸಮಾಚಾರಗಳ ‘ಮೂಟೆಯನ್ನು ಬಿಚ್ಚುವಂತೆ’ ಮಾಡಿ, ಅವರು ಅದರ ಆನಂದದಲ್ಲಿ ಮಗ್ನರಾಗಿದ್ದ ಸಮಯ ನೋಡಿ, ಮೆಲ್ಲನೆ ಮಾಯವಾಗುತ್ತಿದರು. ತತ್‍ಕ್ಷಣದಲ್ಲಿಯೇ ಅಯ್ಯಂಗಾರರು ಬೆಚ್ಚಿಬಿದ್ದಂತಾಗಿ, ಅವರ ಬೆನ್ನು ಹಿಡಿದು, ಹಣವನ್ನು ‘ವಸೂಲ್’ ಮಾಡುತ್ತಿದ್ದರು.

ಮೊದಲು ಮೊದಲು ಪೂರ್ಣ ಸ್ವಾಮಿಯವರಿಗೆ ಕಮಲಪುರದ ಯುವಕರನ್ನು ಕುರಿತು ಒಳ್ಳೆಯ ಅಭಿಪ್ರಾಯವಿತ್ತು. ಇತ್ತಲಾಗೆ ಆ ಅಭಿಪ್ರಾಯವು ಬೇರೆಯಾಗಿ ಹೋಯಿತು. ಅನೇಕ ಗ್ರಾಹಕರು ಲಡ್ಡು ತಿನ್ನುವ ಬದಲಾಗಿ ದುಡ್ಡು ತಿನ್ನಲು ಪ್ರಾರಂಭಿಸಿದರು. ಈ ರೋಗವನ್ನು ನಿವಾರಿಸುವುದಕ್ಕೆ ಅಯ್ಯಂಗಾರರು ನಾನಾ ಉಪಾಯ ಮಾಡಿದರು. ಬರತಕ್ಕ ಹಣವನ್ನು ಪುಸ್ತಕದಲ್ಲಿ ಮುಂದೆ ಸಾಗಿಸುತ್ತ ಹೋದರು. ಕಾರಣಾಂತರಗಳಿಂದ ದೂರ ದೇಶಗಳಿಗೆ ಹೋಗಿದ್ದ ಪ್ರಿಯ ಗ್ರಾಹಕರಿಗೆ ತನ್ನ ಕ್ಷೇಮವಾರ್ತೆಯನ್ನು ಕುರಿತು ಕಾಗದಗಳನ್ನು ಬರೆದು ನೋಡಿದರು. ‘ಬಡವನ ಬಿನ್ನಹ’ ಎಂದು ಹಲಗೆಯಲ್ಲಿ ಸಾಲಗಾರನ ಹೆಸರು ಬರೆದು ‘ಹೊಟ್ಲಿ’ನ ಗೋಡೆಗೆ ತೂಗಾಡಿಸಿದರು. ಕೊನೆಗೆ ಲೆಕ್ಕವನ್ನು ಹೇಗೂ ಸರಿ ಮಾಡದೆ ಬಿಡಲಿಲ್ಲ; ಆರು ವರ್ಷಗಳಿಂದ ಸಾಗಿಸಿತಂದ ಸಾಲಗಾರರ ಹೆಸರನ್ನೆಲ್ಲಾ ಲೆಕ್ಕದ ಪುಸ್ತಕದಲ್ಲಿ ಕೆಂಪು ಶಾಯಿಯ ಗೆರೆಗಳಿಂದ ಅಡಗಿಸಿಬಿಟ್ಟರು.

ಈ ದಿನ ಸಾಯಂಕಾಲದಲ್ಲಿ ‘ಹೂಟ್ಲಿ’ನೊಳಕ್ಕೆ ಅನೇಕರು ಕೂಡಿದ್ದರು. ಕರಿಯೂರು ಶ್ಯಾಮರಾಯರು ಗೋಧಿಯ ರೊಟ್ಟಿಯನ್ನು ಕಾಫಿ ತುಂಬಿದ ಪಾತ್ರಯಲ್ಲಿ ನೆನೆ ಹಾಕುತ್ತಿದ್ದರು. ಮಲೆನಾಡು ಕುಪಣ್ಣನವರು ‘ಟೀ ಗ್ಲಾಸನ್ನು’ ಮುಂದಿರಿಸಿ, ತುಟಿಯಿಂದ ಮೆಲ್ಲಮೆಲ್ಲನೆ ಚೀಪುತ್ತಿದ್ದರು. ಇವರಿಬ್ಬರ ಮೇಲೆ ಅಯ್ಯಂಗಾರರು ವಕ್ರವಾಗಿದ್ದರು. ಅಯ್ಯಂಗಾರರಿಗೆ ಸಿಟ್ಟು ಬರುವುದೆಂದೇ ಇವರಿಬ್ಬರೂ ಕುಚೇಷ್ಟೆಯನ್ನು ಆರಂಭಿಸುತ್ತಿದ್ದರು. ಎರಡು ದಿನಗಳ ಹಿಂದೆ ಈ ಪುಣ್ಯಾತ್ಮರು ‘ಹೊಟ್ಲಿ’ನಲ್ಲಿ ಹೊಟ್ಟೆತುಂಬಾ ತಿಂದು, ಕುಡಿದು, ಅಯ್ಯಂಗಾರರನ್ನು ಕೆರಳಿಸಿ ಹೋಗಿಬಿಟ್ಟಿದ್ದರು. ಅಯ್ಯಂಗಾರರು “ಸ್ವಂತ ಅನುಭವ”ವನ್ನು ಕುರಿತು ಕೆಲವು ಮಾತುಗಳನ್ನು ಬಂದವರೊಡನೆ ಮನೋರಂಜನೆಗಾಗಿ ಹೇಳುತ್ತಿದ್ದಾಗ, ಅಯ್ಯಂಗಾರರು ಹೇಳುವದೆಲ್ಲಾ ಸುಳ್ಳಂದೂ, ಗ್ರಾಹಕರು ತನ್ನೊಡನೆ ತಿಳಿದೂ, ತಿಳಿಯದೆ ಹೆಚ್ಚು ವ್ಯಾಪಾರ ಮಾಡುವುದಕ್ಕೋಸ್ಕರ ಅತಿಶಯೋಕ್ತಿಯನ್ನು ಹೆಳುವ ಉಪಾಯ ಮಾಡಿರುವರೆಂದೂ ಈ ಮುಟ್ಠಾಳರು ಜಗಳವಾಡಿದರು. ಅಯ್ಯಂಗಾರರು ತಾನೆಂದ ಸಮಾಚಾರ ಸುದ್ದಿಯೆಲ್ಲಾ ಸುಳ್ಳಲ್ಲವೆಂದು ಈ ಅಧಮರಿಗೆ ಮನಗಾಣಿಸುವ ಉಪಾಯವನ್ನು ನಿಶ್ಚಯಿಸಿದರು. ಈ ದಿನ ಕುಪಣ್ಣನವರು ಕಲಹಕ್ಕೆ ನಾಂದಿಯಾಗಿ “ರಾಯರೇ! ಅಯ್ಯಂಗಾರರು ರಾಮೇಶ್ವರ ಸಮುದ್ರವನ್ನು ಈಸಿಹೋದ ಸಂಗತಿಯನ್ನು ಬಲ್ರೇ?” ಎಂದು ಕೇಳಿದರು.

ಪೂರ್ಣಸ್ವಾಮಿ ಅಯ್ಯಂಗಾರರು ಎಂದಿನಂತೆ ಹುಬ್ಬು ಗಂಟಿಕ್ಕದೆ, ಮನಸ್ಸಿನೊಳಗೆ ಆನಂದದಿಂದ ಉಕ್ಕುತ್ತಲಿದ್ದರು.

ಶ್ಯಾಮರಾಯ:- “ಅಂದು ನಿಮ್ಮೂಡನೆ ಯಾರಿದ್ದರು ಅಯ್ಯಂಗಾರ್ರೆ? ಈ ಆಪತ್ತಿನಿಂದಲೂ ನಿಮ್ಮನ್ನು ಪಾರು ಮಾಡಿಸಿದವರು ಆ ಗುಂಡಾಚಾರ್ರೆ?”

ಕುಪಣ್ಣ:- “ಹಾಗಾಗಿರಬೇಕು. ಇಲ್ಲವಾದರೆ ನಮ್ಮ ಅಯ್ಯಂಗಾರ್ರು ಅಂಡಮಾನ್ ದ್ವೀಪಗಳಿಗೆ ಹೋಗುತ್ತಿದ್ದರೋ ಏನೋ?”

ಅಯ್ಯಂಗಾರರು ಮೌನವ್ರತವನ್ನು ಅವಲಂಬಿಸಿದ್ದುದನ್ನು ನೋಡಿ, ಶ್ಯಾಮರಾಯರು “ನಿಮ್ಮ ಗುಂಡಾಚಾರ್ರು ಈಗ ತಾನೆ ಎಲ್ಲಿರುವರು?” ಎಂದು ಕೇಳಿದರು.

ಇಷ್ಟರಲ್ಲಿ ಯಾರೋ ಒಬ್ಬರು ‘ಹೂಟ್ಲಿ’ನ ಒಳಕ್ಕೆ ಕಾಲಿಟ್ಟರು. ಅಯ್ಯಂಗಾರರು ಕಾರ್ಯಾಂತರದಿಂದ ಒಳಕ್ಕೆ ಹೋಗಿದ್ದರಿಂದಲೂ, ಉಳಿದವರ ಪರಿಚಯವು ವ್ಯಕ್ತಿಗೆ ಇಲ್ಲದಿದ್ದುದರಿಂದಲೂ, ಬಂದವನು ಒಂದು ನಿಮಿಷ ಅಲ್ಲಯೇ ನಿಂತುಬಿಟ್ಟನು. ಅಯ್ಯಂಗಾರರು ಹೂರಕ್ಕೆ ಬರುತ್ತಲೇ ವ್ಯಕ್ತಿಯನ್ನು ನೋಡಿ. ಉಬ್ಬಿದರು. ಬಂದವನು ಪ್ರತಿಯಾಗಿ ನಗುವನ್ನು ತೋರಿಸುತ್ತ “ಏನ್ ಅಯ್ಯಂಗಾರರೇ? ಕ್ಷೇಮವೇ?” ಎಂದು ಕೇಳಿದನು.

ಅಯ್ಯಂಗಾರರು ಬಂದವನನ್ನು ಯಥೋಚಿತವಾಗಿ ಮನ್ನಿಸಿ “ಎಂದು ಬಂದ್ರಿ ಗುಂಡಾಚಾರ್ರೆ?” ಎಂದು ಕೇಳಿದರು.

ಉಳಿದವರು ಸ್ತಬ್ಧರಾಗಿ ಬಂದವನನ್ನು ಕಣ್ಣಿಟ್ಟು ನೋಡುತ್ತ ಕುಳಿತರು.

ವ್ಯಕ್ತಿಯು “ಅಯ್ಯಂಗಾರರೇ! ಏನು ಹೇಳಲಿ! ನಿಮ್ಮನ್ನು ೧೦ ವರ್ಷಗಳಿಂದ ನಾವು ಹುಡುಕುತಿದ್ದೇವೆ. ಈ ಹೊತ್ತು ನಿಮ್ಮ ದರ್ಶನವಾಯಿತು.” ಎಂದು ಹೆಳಿ ದಣುವನ್ನು ಆರಿಸುತ್ತಿದ್ದನು. ಅಯ್ಯಂಗಾರರು ಸ್ವಲ್ಪ ಆಲೋಚಿಸಿದಂತೆ ಮಾಡಿ, “ಆ ಬಳಿಕ ನಮಗೂ ತಮಗೂ ಭೇಟಿ ಸಿಗಲಿಲ್ಲ ಅಲ್ಲವೇ?” ಎಂದು ಕೇಳಿ ನಗುತ್ತ, ಕುಪ್ಪಣ್ಣನವರನ್ನು ನೋಡಿದರು.

ಕುಪಣ್ಣ:- ‘ಯಾರ ಭೇಟಿ?’

ಅಯ್ಯಂಗಾರರು ಅಲಕ್ಷ್ಯದಿಂದ “ನಮಗೂ ತಮಗೂ ಆಮೇಲೆ ದರ್ಶನವಾಗಿಲ್ಲ. ನಾನು ರಾಮೇಶ್ವರ ಸಮುದ್ರ ದಾಟಿ, ಮುಣುಗಿದ ಹಡಗನ್ನು ಬೆನ್ನುಕೊಟ್ಟು ತೇಲಿಸಿ ಕುಮಾರಿಯ ಭೂಶಿರವನ್ನು ಮುಟ್ಟಿದ ಮೇಲೆ ತಮ್ಮನ್ನು ನೋಡಲಿಲ್ಲ. ನಿಜ.” ಎಂದು ಹೇಳಿ ಶ್ಯಾಮರಾಯರ ಮೋರೆಯನ್ನೇ ದೃಷ್ಟಿಸಿದರು.

ವ್ಯಕ್ತಿಯು “ಸರಿ ಸರಿ. ಆ ದಿನಗಳೆಲ್ಲಾ ಹೋಯ್ತು. ಈಗ ನಮ್ಮ ಮಾತುಗಳನ್ನು ಕೂಡಾ ನಂಬುವವರು ಯಾರೂ ಇಲ್ಲ” ಎಂದು ಹೇಳಿ ತನ್ನನ್ನ ನೋಡುತ್ತಿದ್ದ ಕುಪ್ಪಣ್ಣನವರನ್ನು ಕುರಿತು ಅಯ್ಯಯಂಗಾರರೊಡನೆ “ಇವರು ಯಾರು?” ಎಂದು ಕೇಳಿದನು.

ಕುಪ್ಪಣ್ಣನವರು ಈ ಸಂದರ್ಭವನ್ನು ಹಿಡಿದು ಮಾತಾಡುವಂತೆ ಮುಂದೆ ಬಂದು “ಆಚಾರ್ರೆ?! ನಿಮ್ಮ ಹೆಸ್ರನ್ನು ನಾವು ಅಯ್ಯಂಗಾರರ ಬಾಯಿಂದ ದಿನೇ ದಿನೇ ಕೇಳಿ ಗೊತ್ತುಂಟು. ನಮ್ಮ ಪೂರ್‍ಣಸ್ವಾಮಿ ಅಯ್ಯಂಗಾರರು ಕಾವೇರಿ ಸ್ನಾನದಲ್ಲಿ…….”

ವ್ಯಕ್ತಿಯು “ಹೌದು! ಹೌದು”! ಎಂದು ತಲೆದೂಗಿ “ಅವರನ್ನು ರಕ್ಷಿಸಿದ ಗುಂಡಾಚಾರ್ರು ನಾವು. ನಾವು ಇಲ್ಲದಿದ್ರೆ ನಮ್ಮ ಅಯ್ಯಂಗಾರರು ಅಂದು ಮೊಸಳಗೆ ಆಹುತಿಯಾಗುತ್ತಿದ್ದರು. ಏನ್ ಅಯ್ಯಂಗಾರರೇ? ೫೦ ಅಡಿ ಉದ್ದ ಮೊಸಳೆ ಎಲ್ಲಿ? ನಮ್ಮ ಚಿಕ್ಕದೊಂದು ಪವಿತ್ರದರ್ಭೆ ಎಲ್ಲಿ? ಇವರು ಯಾರು!” ಎಂದು ಅಯ್ಯಂಗಾರರೂಡನೆ ಕೇಳಿದನು.

ಅಯ್ಯಂಗಾರರು ಅಲಕ್ಷ್ಯದಿಂದ “ಅವರು ದಲಾಲ್ ಕುಪಣ್ಣ. ನಾವೆನ್ನುವುದೆಲ್ಲಾ ಸುಳ್ಳೆಂದು ಹೇಳುವ ಗೃಹಸ್ಥರು. ನಮಗೆ ಅವರ ಗೊಡವೆ ಯಾಕೆ? ಈವೂರಲ್ಲಿ ಯಾರು ಅವನ್ನು ಬಲ್ಲರು?” ಎಂದು ಹೇಳಿದರು.

ಶ್ಯಾಮರಾಯ:- “ಇವರೇ ಏನ್ ಗುಂಡಾಚಾರ್ರು?”

ಗುಂಡಾಚಾರ್ಯ:- ಕಾವೇರಿ ಸ್ನಾನದಲ್ಲಿ ಮೊಸಳೆ ಬಾಯಿಂದ ಅಯ್ಯಂಗಾರರನ್ನು ಬಿಡಿಸಿ ಕಾಯ್ದ ಗುಂಡಾಚಾರ್ಯರು ನಾವೇ! ಮಲೆಯಾಳ ಸೀಮೆಯಲ್ಲಿ ಅಯ್ಯಂಗಾರರು ರೋಗದಿಂದ ಹಾಸಿಗೆ ಹಿಡಿದು ಮಲಗಿದ್ದಾಗ, ಅವರ ನೋಡಿ ಅವರನ್ನು ಬದುಕಿಸಿದ ಗುಂಡಾಚಾರ್ಯರೂ ನಾವೇ! ‘ನಿನ್ನನ್ನು ಎಂದೂ ಮರೆಯಲಾರೆ! ನಿನ್ನನ್ನು ಎಂದೂ ಬಿಟ್ಟು ಹಾಕಲಾರೆ’ ಎಂದು ಅಯ್ಯಂಗಾರರು ನನಗೆ ಮಾತು ಕೊಟ್ಟಿದ್ದರು. ನಾನು ಒಬ್ಬಂಟಿಗನಾಗಿ ತಿರುಗಾಡುತ್ತಿದ್ದಾಗ, ಎಷ್ಟೋ ಸಲ ಅಯ್ಯಂಗಾರರನ್ನು ನೆನೆದೆ. ಒಂದು ಸಲ ಅಯ್ಯಂಗಾರರನ್ನು ನೋಡಿದರೆ, ನನ್ನ ಕಷ್ಟಗಳೆಲ್ಲಾ ಪರಿಹಾರವಾಗುವುವು ಎಂದು ತಿಳಿದುಕೊಂಡೆ. ಶ್ರೀಕೃಷ್ಣನ ದಯೆಯಿಂದ ಈ ಹೊತ್ತು ಅವರನ್ನು ನೋಡಿ ಧನ್ಯನಾದೆ. “ಅಯ್ಯಂಗಾರ್ರೆ! ಎಲ್ಲಾ ಮರತಿರುವಿರೇ?”

ಅಯ್ಯಂಗಾರ:- “ಇಲ್ಲ! ಸ್ವಾಮಿ! ನನ್ನ ಪ್ರಾಣ ಉಳಿದದ್ದು ತಮ್ಮಿಂದ. ತಮ್ಮ ಉಪಕಾರವನ್ನು ಆಜನ್ಮ ಮರೆಯಲಾರೆ. ಪ್ರತ್ಯುಪಕಾರ ಮಾಡಲು ಸಾಮರ್ಥ್ಯವಿದ್ದರೆ ನಾನು ಸಿದ್ಧನಾಗಿದ್ದೇನೆ.

ಕುಪಣ್ಣ:- “ಅವರು ಸಾಯುವ ಹಾಗಿದ್ದರೆ, ನೀವು ಸಹಾಯ ಮಾಡುವುದೇ ಪ್ರತ್ಯುಪಕಾರ.” ಅಷ್ಟರಲ್ಲಿ ಅಯ್ಯಂಗಾರರ ಮಾತಿನ ಪ್ರಕಾರ ನೌಕರನು ಕಾಫಿ ತುಂಬಿದ ಪಾತ್ರೆಗಳನ್ನೂ ತಿಂಡಿಯ ದೊನ್ನೆಗಳನ್ಪೂ ತಂದಿಟ್ಟನು. ಗುಂಡಾಚಾರ್ಯರು ಒಂದು ಕಣ್ಣನ್ನು ಭಕ್ಷ್ಯದ ಕಡೆಗೂ ಒಂದು ಕಣ್ಣನ್ನು ಕುಳಿತವರ ಕಡೆಗೂ ಇಟ್ಟು, “ಅದಕ್ಕಿಂತಲೂ ಸಿಂಹಲ ದ್ವೀಪದಲ್ಲಿ ಇವರನ್ನು ಮೂರು ಕಾಡಾನೆಗಳು ಅಟ್ಟಿಕೊಂಡು ಬಂದಾಗ ನಾವು……” ಎಂದು ಅರೆನುಡಿಯಲ್ಲಿ ತಿಂಡಿಯನ್ನು ನೋಡುತ್ತ ಕುಳಿತರು.

ತಮ್ಮ ‘ಟಿಫಿನ್’ ತೀರಿಸಿ ಕುಳಿತ ಕುಪ್ಪಣ್ಣ, ಶ್ಯಾಮರಾಯರು ಇವರ ಸಮಾಚಾರಕ್ಕೆ ಆಸೆಗೊಂಡು, ಗುಂಡಾಚಾರ್ಯರ ಹತ್ತಿರಕ್ಕೆ ಬಂದರು. ಅಯ್ಯಂಗಾರರು “ತಿನ್ಕಿ! ತಿನ್ನಿ! ಎಂದು ಹೇಳಿದಾಗ ಈ ಮಾತನ್ನು ತನ್ನನ್ನು ಉದ್ದೇಶಿಸಿ ಹೇಳಿದ್ದೆಂದು ತಿಳಿದು, ಕುಪಣ್ಣನವರು ದೊನ್ನೆಯೊಳಗೆ ಬೆರಳು ಮುಳುಗಿಸಿ, ಎಡಗೈಯಿಂದ ಕಾಫಿಯ ಪಂಚಪಾತ್ರೆಯನ್ನು ಹಿಡಿದುಕೊಂಡರು. ಶ್ಯಾಮರಾಯರ ಕೈಗಳೂ ಹಾಗೆಯೇ ಮಾಡತೊಡಗಿದವು. ಅಯ್ಯಂಗಾರರು ಚೇಳು ಕಚ್ಚಿದ ಮೋರೆ ಮಾಡಿದರು.

ನಿಮಿಷ ಮಾತ್ರದಲ್ಲಿ ಭಕ್ಷ್ಯವೆಲ್ಲಾ ಮಾಯವಾಯಿತು. ಗುಂಡಾಚಾರ್ಯರು “ಇನ್ನೂ ದಣುವು ಆರಲಿಲ್ಲ” ಎಂದು ಬೇಸರದಿಂದ ಹೇಳಿದರು. ಅಯ್ಯಂಗಾರರು ಉಳಿದ ಇಬ್ಬರನ್ನು ವಕ್ರದೃಷ್ಟಿಯಿಂದ ನೋಡುತ್ತ, ಮನಸಿಲ್ಲದ ಮನಸ್ಸಿನಿಂದ ಮತ್ತಿಷ್ಟನ್ನು ಗುಂಡಾಚಾರ್ಯರ ಕೈಬಳಿಯಲ್ಲಯೇ ತಂದಿಟ್ಟು, “ಮಹಾರಾಯ್ರೇ! ನಾನು ಮುಂಚೆ ಹೇಳಿದ ಸಂಗತಿಗಳೆಲ್ಲಾ ಪೂರ್ಣಸತ್ಯವೆಂದು ಈಗ ನಂಬುಗೆಯಾಯ್ತೇ?” ಎಂದು ಕೇಳಿದರು.

ಕುಪಣ್ಣ:- “ಈ ಹೊತ್ತಿನ ಫಲಾಹಾರದಲ್ಲಿ ಮೊಸಳೆಯ ಸಂಗತಿಯೊಂದು ನಿಶ್ಚಯವೆಂದು ಕಂಡು ಬಂತು – ಗುಂಡಾಚಾರ್ರೇ! ಇಲ್ಲಿ ಎಷ್ಟು ದಿನವಿರುವಿರಿ?”

ಗುಂಡಾಚಾರ್ಯ:- “ನಮ್ಮ ಋಣಾನುಬಂಧ ಇದ್ದಷ್ಟು ದಿನಾ ಇಲ್ಲಿ ಇರುವೆವು.”

ಅಯ್ಯಂಗಾರರಿಗೆ ಈ ಮಾತು ತಾನೇ ರುಚಿಸಲಿಲ್ಲ. ಗುಂಡಾಚಾರ್ಯರು ಕೈತೊಳದು ನಶ್ಯವನ್ನು ಕೇಳಿದರು. ಅಯ್ಯಂಗಾರರು ನಶ್ಯದ ಡಬ್ಬಿಯನ್ನು ಕೊಟ್ಟರು. ಗುಂಡಾಚಾರ್ಯರು ನಶ್ಯವನ್ನು ಕೈಯಲ್ಲಿ ಸುರಿದು, ಡಬ್ಬಿಯನ್ನು ಶ್ಯಾಮರಾಯರ ಕೈಗಿತ್ತರು. ಇವರು ಎರಡು ಮೂರು ಸಲ ಕೈಯಲ್ಲಿ ಕೊಂಡರೂ ಚಿವಟಿಯು ಸರಿಬಾರದೆ ಇದ್ದುದರಿಂದ, ಅರ್ಧ ತೊಲೆ ನಶ್ಯವನ್ನು ಮೂಗಿಗೆ ಸೇರಿಸುವ ಬದಲು ತಮ್ಮ ಡಬ್ಬಿಗೆ ಸೇರಿಸಿಬಿಟ್ಟರು. ಅಯ್ಯಂಗಾರರು ಹಲ್ಲು ಕಿತ್ತ ಹಾವಿನಂತೆ ತಳಮಳಗೊಂಡರು. ಕೊನೆಗೆ ಶ್ಯಾಮರಾಯರೂ ಕುಪ್ಪಣ್ಣನವರೂ ಮರುದಿನ ಬರುವೆವು ಎಂದು ಇಬ್ಬರಿಗೂ ಅಭಯಕೊಟ್ಟು ನಡೆದುಬಿಟ್ಟರು.

ಗ್ರಾಹಕರೆಲ್ಲರೂ ‘ಹೊಟ್ಲಿಂದ’ ಹೋದ ಬಳಿಕ ಗುಂಡಾಚಾರ್ಯರು ಮೀಸೆ ತಿರುವುತ್ತ “ಅಯ್ಯಂಗಾರರೇ! ನಾನು ಮಾಡಿದ್ದು ಹ್ಯಾಗಾಯಿತು? ಆ ಪಾಪಿಗಳು ನಿಮ್ಮನ್ನು ನಂಬುವ ಹಾಗೆ ಮಾಡಿದೆನೋ ಇಲ್ಲವೋ ಹೇಳಿ” ಎಂದರು.

ಅಯ್ಯಂಗಾರ:- “ಸ್ವಲ್ಪ ತಾನೇ ಮೀರಿ ಹೋಯ್ತು. ನಾನು ಹೇಳಿದಷ್ಟೇ ಆಡಿದ್ದರೆ ಚೆನ್ನಾಗಿತ್ತು. ನೀನು ಸುಳ್ಳು ಹೆಚ್ಚು ಬೆರಿಸಿಬಿಟ್ಟೆ.”

ಗುಂಡಾಚಾರ್ಯ:- “ಹಾಗೆ ಮಾಡಿದ್ರಿಂದ ಆ ಪಾಪಿಗಳು ನಂಬಿದ್ರು. ನಾನು ಬಣ್ಣ ಹಾಕಿದ್ರೂ ನನ್ನ ಮಾತುಗಳನ್ನು ಯಾರೂ ಸುಳ್ಳೆಂದು ಹೇಳಲಾರ್ರು.”

ಅಯ್ಯಂಗಾರ:- “ನನ್ನ ನಶ್ಯವನ್ನೆಲ್ಲಾ ಹಂಚಿಬಿಟ್ಟು ಖಾಲಿ ಡಬ್ಬಿಯನ್ನು ಇಟ್ಟಿದ್ದಿ.

ಗುಂಡಾಚಾರ್ಯ:- “ನಾನು ಮಾತನಾಡುತ್ತಾ ಸ್ವಲ್ಪ ಅವೇಶಗೊಂಡಂತಾದೆ, ನೀವು ಹೇಳಿದ್ದನ್ನೆಲ್ಲಾ ಮರತುಬಿಟ್ಟೆ”.

ಅಯ್ಯಂಗಾರ:- “ಹೌದು, ನೀನು ನಾಡದು ಆಗಬೋಟ ಹತ್ತಿ ಹೊನ್ನೂರಿಗೆ ಹೋಗುತ್ತೇನೆಂದು ಅವರೊಡನೆ ಹೇಳದೆ ಹೋದೆ.”

ಗುಂಡಾಚಾರ್ಯ:- “ನಾಳೆ ಹೇಳಿದರೆ ಸರಿಯಷ್ಟೆ, ಅದು ಹೋಗಲಿ! ನಾವು ಮಾಡಿದ ಆಟ ಆ ಮುಟ್ಠಾಳರ ಕಣ್ಣು ಕಟ್ಟಿತು.”

ಅಯ್ಯಂಗಾರ:- “ನಾಳೆ ಬೆಳಗಿನಿಂದಲೇ ನೀನು ಹೋಗುವೆನೆಂದು ಮೆಲ್ಲನೆ ಹೇಳುತ್ತಿರು. ಅಳಿಯನ ಮನೆಗೆ ಹೋಗುವೆನೆಂದು ಹೇಳು. ನಾಡದು ಹೋಗೋದಾದ್ರೆ, ನಮ್ಮ ಕರಾರ್ ಪ್ರಕಾರ ಒಂದು ವರಹಾ ಕೊಡುತ್ತೇನೆ.”

ಗುಂಡಾಚಾರ್ಯರು ನಗುವನ್ನು ಅಡಗಿಸಿ ಮಾತೆತ್ತುವಷ್ಟರಲ್ಲಿ, ಯಾರೋ ಒಬ್ಬರು ಹೊಟ್ಲಿನ ಬಾಗಿಲ ಹಿಡಿದು ಕರೆದರು. ಅಯ್ಯಂಗಾರರು ಧ್ವನಿಯಿಂದ ಕುಪ್ಪಣ್ಣನವರಾಗಿರಬೇಕು ಎಂದು ತಿಳಿದು, “ಇಷ್ಟು ಹೊತ್ತಿಗೆ ಇಲ್ಲಿ ಕಾಫಿ ಸಿಕ್ಕಲಾರದಯ್ಯಾ!” ಎಂದು ಹೇಳಿ ಒಳಕ್ಕೆ ನಡೆದುಬಿಟ್ಟರು. ಗುಂಡಾಚಾರ್ಯರು ಹೊಟ್ಟೆಗೆ ಹಸಿವಿಲ್ಲದುದರಿಂದ ಅಯ್ಯಂಗಾರರ ಹಾಸಿಗೆಯನ್ನು ಹಾಸಿ ಮಲಗಿಬಿಟ್ಟರು. ಅಯ್ಯಂಗಾರರು ಊಟ ತೀರಿಸಿ ಶಯ್ಯಾಸೀನರಾದ ಗುಂಡಾಚಾರ್ಯರನ್ನು ನೋಡಿ, ಮನದೂಳಗೆ ಕುದಿಯುತ್ತ, ಹಲ್ಲು ಮಸೆಯುತ್ತ, ಒಳಕ್ಕೆ ಹೋದರು.

ಭಾನುವಾರ ಆಗಬೋಟು ಕಮಲಪುರಕ್ಕೆ ಮುಟ್ಟಿತು. ಅಯ್ಯಂಗಾರರು ಆಗಬೋಟು ಬಂದಿದೆ ಎಂದು ಎರಡು ಮೂರು ಸಲ ಗುಂಡಾಚಾರ್ಯರಿಗೆ ತಿಳಿಸಿದರು. ಗುಂಡಾಚಾರ್ಯರು ಈ ಮಾತನ್ನೇ ಕಿವಿಗೆ ಹಾಕಿಕೊಳ್ಳಲಿಲ್ಲ. ‘ಹೊಟ್ಲಿನಲ್ಲಿ’ ಬಂದವರೆಲ್ಲರೂ “ಗುಂಡಾಚಾರ್ಯರು ಈ ದಿನ ಹೋಗುವರು” ಎಂಬುದನ್ನು ತಿಳಿದಿದ್ದರು. ಆದರೆ ಗುಂಡಾಚಾರ್ಯರು ಬಂದವರೊಡನೆ ಮಾತುಕಥೆ ನಡಸುತ್ತಿರುವಾಗ, ತನ್ನ ಪ್ರಸ್ತಾನವನ್ನು ಕುರಿತ ಒಂದು ಸೂಚನೆಯನ್ನಾದರೂ ಹಾಕಲಿಲ್ಲ. ಅಯ್ಯಂಗಾರರು ಅವರ ಮಾತುಗಳ ಪ್ರಸ್ತಾಪವನ್ನು ಆಗಾಗ ತಿರುಗಿಸಲು ಪ್ರಯತ್ನಿಸಿದರು. ಆದರೆ, ಅಯ್ಯಂಗಾರರು ಹೊನ್ನೂರು ರಥೋತ್ಸವವನ್ನು ಪ್ರಸ್ತಾಪಿಸಿ ಹುಬ್ಬುಗಳನ್ನು ಮೀಟುವಾಗ ಗುಂಡಾಚಾರ್ಯರು ಪ್ಲೇಗ್ ಔಷಧವನ್ನು ಕುರಿತು ಮಾತನಾಡುತ್ತಿದ್ದರು. ಅಯ್ಯಂಗಾರರು ಇದನ್ನೆಲ್ಲ ಬಹಳ ತಾಳ್ಮೆಯಿಂದ ಸಹಿಸಿದರು. ಗಿರಾಕಿಗಳೆಲ್ಲರೂ ಕತ್ತಲಾದ ಬಳಿಕ ತಂತಮ್ಮ ಮನೆಗೆ ಹೋದರು.

ಅಯ್ಯಂಗಾರರು ಸಿಟ್ಟಿನಿಂದ ಕಿಡಿಕಿಡಿಯಾಗಿ, “ಇದರ ಅರ್ಥವೇನು?” ಎಂದು ಒದರಿದರು.

ಗುಂಡಾಚಾರ್ಯರು. ಸಮಾಧಾನದಿಂದ ‘ಯಾವುದರ ಅರ್ಥ? ಪೊನ್ಸಾಮಿ?’ ಎಂದರು.

“ನನ್ನನ್ನು ಪೂನ್ನುಸ್ನಾಮಿ ಎಂದು ಕರೀಬೇಡ. ನಾಳೆ ಬೆಳಗ್ಗೆ ನೀನು ಇಲ್ಲಿಂದ ಹೊರಡಬೇಕು, ನೋಡು!” ಎಂದು ಅಯ್ಯಂಗಾರರು ಗರ್ಜಿಸಿದರು.

ಗುಂಡಾಚಾರ್ಯ:- “ಹೋಗಬೇಕು? ಎಲ್ಲಿ ಹೋಗಬೇಕು?”

ಅಯ್ಯಂಗಾರ:- “ಬೇಕಾದಲ್ಲಿ ಹೋಗು! ನೀನು ಇಲ್ಲಿಂದ ಹೋದ್ರೆ ಸರಿ.”

ಗುಂಡಾಚಾರ್ಯ:- “ಅಯ್ಯಂಗಾರ್ರೇ! ಏನೋ ಏನೋ ಮಾತನಾಡುತ್ತಿರುವಿರಿ. ನಿನ್ನೆ ರಾತ್ರಿ ನಿದ್ದ ಹತ್ತಲಿಲ್ಲವೇನು?”

ಅಯ್ಯಂಗಾರ:- “ನಾಳೆ ಬೆಳಿಗ್ಗೆ ನೀನು ಹೋದ್ರೆ ಸರಿ! ಇಲ್ಲಾದ್ರೆ, ನಾನೇ ಕುತ್ತಿಗೆಗೆ ಕೈಯಿಕ್ಕುತ್ತೇನೆ. ನಾನು ಮಾಡಿದ ಕರಾರ್ ಗೊತ್ತುಂಟಲ್ಲವೇ?”

ಗುಂಡಾಚಾರ್ಯ:- “ಯಾವ ಕರಾರ್ ಕರಾರೋ, ಹುಣಸೆ ಪಚ್ಚಿಯೋ! ನಾಳೆ ತಲೆಗೆ ಎಣ್ಣೆ ಬಳಿದುಕೊಂಡು ಸ್ನಾನ ಮಾಡಬೇಕೆಂದಿರುವೆ…”

ಅಯ್ಯಂಗಾರರು ಸಿಟ್ಟನ್ನು ತಡೆಯಲಾರದೆ, “ನೀನು ಹೋಗುವಿಯೋ, ಇಲ್ಲವೋ ನಾಳೆ? ಆ ಅಧಮರಿಗೆ ನಾನು ಹೇಳಿದ್ದೆಲ್ಲಾ ಸರಿಯೆಂದು ತೋರಿಸಲಿಕ್ಕೆ ನಿನ್ನನ್ನು ಒಂದು ಸರಸ ಚೇಷ್ಟೆಗೆ ಇಲ್ಲಿ ಕರೆತಂದೆ. ಇಲ್ಲೇ ಅಂಟಿದೆ ನೀನು.”

ಗುಂಡಾ:- “ಅಂದು ಮಾಡಿದ ಉಪಕಾರವೆಲ್ಲಾ ಮರತು ಹೋಯಿತೇ? ಮೊಸಳೆ ಕಚ್ಚಿದಾಗ ನಾನೊಬ್ಬನೇ ನನ್ನ ಪವಿತ್ರ ದರ್ಭೆಯಿಂದ……”

ಅಯ್ಯಂಗಾರ:- “ಸುಮ್ಮನೆ ತೊಂದರೆ ಕೊಡಬೇಡ. ನನ್ನನ್ನು ಮೊಸಳೆ ಹಿಡಿದದ್ದೂ ಇಲ್ಲ; ಗುಂಡಾಚಾರ್ಯ ಬಿಡಿಸಿದ್ದೂ ಇಲ್ಲ.”

ಗುಂಡಾ:- “ಕೃತಘ್ನತೆಗೆ ಮದ್ದಿಲ್ಲ. ನಾನು ನಿನ್ನ ಜೀವ ಉಳಿಸಿದ್ದನ್ನು ಮರತೆಯಾ?”
ಹೀಗೆಂದು ಹೇಳಿ ಗುಂಡಾಚಾರ್ಯರು ಕಣ್ಣೀರು ಒರಸಿದಂತೆ ತನ್ನ ಕೈಬೆರಳುಗಳಿಂದ ಕಣ್ಣನ್ನು ಸವರುತ್ತಿದ್ದರು. ಹೊರಕ್ಕೆ ಯಾರೋ ಮಾತನಾಡುವಂತೆ ಕೇಳಿಸಿತು.

ಅಯ್ಯಂಗಾರ:- “ಹಾ! ೧೫ ರೂಪಾಯ್ ಕೊಡುವೆ. ನೀನು ಸುಮ್ಮನೆ ಹೋಗುವೆಯಾ?”

ಗುಂಡಾಚಾರ್ಯ:- “ಅಯ್ಯಂಗಾರರೇ! ನೀವು ಈಗ. ನಿದ್ದೆ ಹೋಗಿ ನಾಳೆ ಮಾತನಾಡಬಹುದು. ನಿದ್ದ ಇಲ್ಲದಿದ್ದರೆ ಬುದ್ಧಿ ಹೋಗುತ್ತೆ.”

ಅಯ್ಯಂಗಾರರಿಗೂ ಗುಂಡಾಚಾರ್ಯರಿಗೂ ಜಗಳವಾಗಿತ್ತು ಎಂಬ ಸುದ್ದಿಯು ಊರಲ್ಲಿ ಹಬ್ಬಿತು. ಕುಪಣ್ಣನವರೂ ಶ್ಯಾಮರಾಯರೂ ಇದನ್ನು ಕುರಿತು ಅಯ್ಯಂಗಾರರೊಡನೆ ಕೇಳಬೇಕೆಂದಿದ್ದರು. ಆದರೆ ಇತ್ತಲಾಗೆ ಅಯ್ಯಂಗಾರರು ಕಡ ಕೊಡುವ ಸಾಂಪ್ರದಾಯವನ್ನು ತೆಗೆದು ಹಾಕಿದ್ದರಿಂದ, ಇವರಿಬ್ಬರಿಗೂ ಅಲ್ಲಿ ಹೋಲು ಅಷ್ಟು ಧೈರ್ಯವಿರಲಿಲ್ಲ. ರವಿವಾರ ದಿನದ ಆಗಬೋಟು ಹತ್ತಿ ಹೋಗದಿದ್ದರೆ, ಗುಂಡಾಚಾರ್ಯರು ಇನ್ನೂ ಮೂರು ನಾಲ್ಕು ದಿನಗಳಲ್ಲಿ ತನ್ನ ‘ಹೊಟ್ಲನ್ನು‘ ಹೀರಿಬಿಡುವರೆಂದು ಹೆದರಿ, ಅಯ್ಯಂಗಾರರು “ಎಲೋ! ಗುಂಡಾ! ನೀನು ನಾಳೆ ಹೋದ್ರೆ ಸರಿ! ಇಲ್ಲಾದ್ರೆ ನಾನೇ ಅವರಿಗೆಲ್ಲಾ ನಾಳೆ ಬಾಯ್ಬಿಟ್ಟು ಹೇಳಿ, ನಿನ್ನನ್ನು ಇಲ್ಲಿಂದ ದೊಬ್ಬಿ ಬಿಡುವೆ” ಎಂದರು.

ಗುಂಡ:- “ನಾನು ಬರುವ ಚಂದ್ರವಾರ ಹೋಗ್ತೇನೆ ಆಗದೋ? ಕೈಯಲ್ಲಿ ಕಾಸಿಲ್ಲ. ನೀನು ಕೊಡುವ ೧೫ ರೂಪಾಯಿ ದಾರಿಯ ಖರ್ಚಿಗೆ ಸಾಕಾಗದು. ನಿನಗೋಸ್ಕರ ಇದೆಲ್ಲಾ ಸುಳ್ಳು ಹೇಳಿ ನಾನು ಹಾಳಾದೆ.”

ಅಯ್ಯಂಗಾರ:- “ಇಕೋ! ನೀನು ಹೋದ್ರೆ ಸರಿ” ಎಂದು ಹೇಳಿ, ಅವನ ಕೈಗೆ ೧೬ ರೂಪಾಯ್ ಸುರಿದರು.

ಸೋಮವಾರ ೧೦ ಗಂಟೆಗೆ ಗುಂಡಾಚಾರ್ಯರು ಹೋಗುವರೆಂದು ಊರಲ್ಲಿ ಸುದ್ದಿ ಹಬ್ಲಲು, ಕುಪಣ್ಣನವರು ಮತ್ತು ಶ್ಯಾಮರಾಯರು ಹೊಟ್ಲಿಗೆ ಬಂದರು. ಗುಂಡಾಚಾರ್ಯರು ತೆರಳುವುದಕ್ಕೆ ಸಿದ್ಧರಾಗಿದ್ದರು.

ಗುಂಡಾಚಾರ್ಯರು ಇವರನ್ನೆಲ್ಲಾ ನೋಡುತ್ತಲೇ “ನಾನು ಎಷ್ಟೋ ಊರು ನೋಡಿದೆ. ಎಷ್ಟೋ ಜನಗಳನ್ನು ನೋಡಿದೆ. ಆದರೆ ಇದಕ್ಕಿಂತ ಒಳ್ಳೇದನ್ನೂ ನಿಮಗಿಂತಲೂ ಯೋಗ್ಯರನ್ನೂ ನಾನು ಎಲ್ಲಿಯೂ ನೋಡಿಲ್ಲ.”

ಕುಪಣ್ಣನವರು ಗುಂಡಾಚಾರ್ಯರೊಡನೆ “ನಮ್ಮನ್ನು ಮರೆಯಬಾರದು” ಎಂದು ಬೇಡಿದರು.

ಗುಂಡಾಚಾರ್ಯ: “ಈ ವೃದ್ಧಾಪ್ಯದಲ್ಲು ನಾನು ದಿಕ್ಕಿಲ್ಲದೆ ಊರೂರು ಸುತ್ತುತ್ತಿರುವಾಗ ನಿಮ್ಮ ನೆನಪು ಎಂದೂ ಆಗದೆ ಇರಲಿಕ್ಕಿಲ್ಲ. ಹೂಟ್ಟೆಗೋಸ್ಕರ ನಾನು ಕಷ್ಟ ಪಡುವಾಗ ಈ ‘ಹೊಟ್ಲಿನ’ ಜ್ಞಾಪಕವು…”

ಶ್ಯಾಮರಾಯ: “ನೀವು ಮಗಳ ಮಾವನ ಮನೆಗೆ ಹೂನ್ನೂರಿಗೆ ಹೋಗುವಿರಲ್ಲವೇ?”

ಗುಂಡಾಚಾರ್ಯರು ಮೆಲ್ಲನೆ ನಗುತ್ತ ತಲೆಯಲ್ಲಾಡಿಸಿ “ನನಗೆ ಮಗಳೂ ಇಲ್ಲ, ಬೀಗನೂ ಇಲ್ಲ. ಈ ಲೋಕದಲ್ಲಿ ನಾನು ಒಬ್ಬನೇ, ನನ್ನಿಂದ ಉಪಕಾರ ಹೂಂದಿದವರು ಹಲವರಿದ್ದಾರೆ” ಎಂದರು.

ಈ ಮಾತುಗಳನ್ನು ಕೇಳುತ್ತಲೇ ಎಲ್ಲರೂ ಕನಿಕರಗೊಂಡಂತೆ ಅಯ್ಯಂಗಾರರ ಮುಖ ನೋಡಿದರು.

ಕುಪಣ್ಣ:- ನೀವು ಮಗಳ ಮನಗೆ ಹೋಗುವಿರೆಂದು ಅಯ್ಯಂಗಾರರೇ ನಮ್ಮೊಡನೆ ಹೇಳಿದರಲ್ಲಾ!”

ಅಯ್ಯಂಗಾರರು ಸಿಟ್ಟಿನಿಂದ ಎದ್ದುನಿಂತು ವಕ್ರಮುಖವನ್ನು ಮಾಡಿದರು.

ಶ್ಯಾಮರಾಯರು:- ಅಯ್ಯಂಗಾರರು ನಿಮ್ಮನ್ನು ಒತ್ತಾಯ ಮಾಡಿದರೂ. ನೀವು ಹೊರಡಲಿಕ್ಕೆ ಹಟ ಹಿಡಿದಿರುವಿರೆಂದು ನಮ್ಮೊಡನೆ ಹೇಳಿದರು.

ಗುಂಡಾಚಾರ್ಯ:- “ಶುದ್ಧ ಸುಳ್ಳು! ಅವರು ಒಂದು ಮಾತು ಹೇಳಿದ್ದರೆ ನಾನು ಇಲ್ಲಿಯೇ ಉಳುಕೊಳ್ಳುತ್ತಿದ್ದೆ. ನಾನು ಇಲ್ಲಿರೋದು ಅವರಿಗೆ ಮನಸಿಲ್ಲ. ನನಗೆ ಒಪ್ಪೊತ್ತು ಕೊಡುವ ಊಟ ಅವರ ಕಣ್ಣಿಗೆ ಹೆಚ್ಚಾಗಿ ತೋರುತ್ತೆ. ನಾನು ಹೊನ್ನೂರಿಗೆ ಹೋಗುವೆನೆಂದು ಅವರೇ ಸುದ್ದಿ ಹುಟ್ಟಿಸಿದರು. ಅವರು ಸುಳ್ಳಾಡೋದು ನನಗೆ ಮನಸ್ಸಿರಲಿಲ್ಲ. ಸಟೆಯಿಂದಲೇ ಸಟೆಯನ್ನು ಬಿಗಿ ಮಾಡಬೇಕೆಂದು ಹೇಳಿದ್ರು. ಕಡೆಗೆ ನಾನು ಎಲ್ಲಾದರೂ ಹೋಗಿಬಿಡುವೆನೆಂದು ನಿಶ್ಚಯ ಮಾಡಿದೆ. ಆದರೆ ಹೋಗುವಾಗ ನಿಮ್ಮೊಡನೆ ಸುಳ್ಳಾಡಿ ಹೋಗಬೇಕು ಯಾಕೆ?” ಈ ಮಾತನ್ನು ಕೇಳಿ ಎಲ್ಲರೂ ಸ್ತಬ್ಬರಾದರು.

ಗುಂಡಾಚಾರ್ಯ:- “ನನಗೆ ಮಕ್ಕಳು ಮರಿ ಇಲ್ಲ. ನನ್ನನ್ನು ಹೂರಕ್ಕೆ ಅಟ್ಟಿ ಬಿಡುವೆನೆಂದು ಅಯ್ಯಂಗಾರರು ಗದರಿಸಿದ್ದರಿಂದ ನಾನು ಹೋಗುವೆ. ಅವರು ಒಂದು ಮಾತು ಹೇಳಿದ್ರೆ ಇಲ್ಲೇ ಉಳುಕೊಳ್ಳುತ್ತಿದ್ದೆ.”

ಗುಂಡಾಚಾರ್ಯರು ಹೀಗೆ ಹೇಳಿ ನಗುಗಣ್ಣುಗಳಿಂದ ಅಯ್ಯಂಗಾರರನ್ನು ನೋಡುತ್ತಾ ಹೊರಕ್ಕೆ ನಡೆದುಬಿಟ್ಟರು. ಅವರು ಎಲ್ಲಿ ಹೋದರೋ ಇದುವರಗೆ ತಿಳಿಯಲಿಲ್ಲ. ಕುಪ್ಪಣ್ಣನವರೂ ಶ್ಯಾಮರಾಯರೂ ಇವರು ಹೋದ ಮೇಲೆ ಇವರ ಜಾತಕವನ್ನು ಸ್ಪುಟ ಮಾಡಿದ್ದಲ್ಲಿ, ಇವರು ನಲ್ಲೂರು ನೀಲಾಂಬೆಯ ತಮ್ಮನಾಗಿದ್ದನೆಂದು ತಿಳಿದು ಬಂದಿತು. ಈಗಲೂ ಕೆಲವರು ಅಯ್ಯಂಗಾರರ ಜೀವನ ಚರಿತ್ರೆಯನ್ನು ಅವರ ಇದಿರಿಗೇನೇ ವ್ಯಾಖ್ಯಾನ ಮಾಡುತ್ತಿರುವಾಗ, ಗುಂಡಾಚಾರ್ಯರ ಆಗಮನದ ಕಲವು ಸಂಗತಿಗಳನ್ನು ಟಿಪ್ಪಣಿಯಾಗಿ ಕೊಡುವುದುಂಟು.
*****
(ಸುವಾಸಿನಿ ೧೯೦೦-೩)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಸಾಮಾನ್ಯರು
Next post ಪ್ರಾರ್ಥನೆ

ಸಣ್ಣ ಕತೆ

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…