ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ ಚಳಿಯಲ್ಲೂ ಹಿತ ಎನಿಸಿತು. ಅಪಘಾನಿಸ್ತಾನದಲ್ಲಿ ನಡೆದ ಯುದ್ಧದ ಸಮಾಚಾರ ನೋಡುವ ಕಾತುರದಿಂದ ಕಣ್ಣುಜ್ಜಿ ಕೊಳ್ಳುತ್ತಾ ಗೇಟ್ ನತ್ತ ನಡೆದ. ಮನೆಯ ಓನರ್ ಸಾಕಿದ ನಾಯಿ ಸ್ನೂಪಿ ಬಾಲ ಆಡಿಸುತ್ತಾ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿತು. ಹಕ್ಕಿಗಳ ಕಲರವ ಆಗತಾನೇ ಆರಂಭವಾಗಿತ್ತು. ಹೂಗಿಡಗಳಲ್ಲಿನ ಮೊಗ್ಗುಗಳು ಸೂರ್ಯನ ಸ್ಪರ್ಶಕ್ಕಾಗಿ ಕಾದಿದ್ದವು. ಪೇಪರ್ ಹಾಕುವ ಹುಡುಗ ಆಗಲೇ ಬಂದು ಹೋಗಿದ್ದ. ಕುಮಾರ್ ಗೆ ಈ ದೇಶದಲ್ಲಿ ದುಡಿವ ವರ್ಗದ ನಿಯತ್ತು ಒಂದು ಕ್ಷಣ ಮನಪಟಃಲ ದಲ್ಲಿ ಹಾದುಹೋಯ್ತು. ಪ್ರತಿ ಕ್ಷಣ ಲೂಟಿಯನ್ನೇ ಯೋಚಿಸುವ ಗುತ್ತಿಗೆದಾರರು, ರಾಜಕಾರಣಿಗಳ ಭಾಷಣ, ಅಧಿಕಾರಿಗಳ್ಳ ಸೋಗಲಾಡಿತನ ಎಲ್ಲವೂ ನುಗ್ಗಿ ಬಂದಂತಾದವು. ಆಕಾಶದೆಡೆಗೆ ದೃಷ್ಟಿಹೋಯಿತು. ಅರೇ ಎಷ್ಟು ದಿನವಾಯ್ತಲ್ಲಾ ಆಕಾಶ ನೋಡದೇ ಎಂದುಕೊಳ್ಳುತ್ತಾ ಕ್ಷಣ ಬಾನನ್ನು ದಿಟ್ಟಿಸಿ ಪೇಪರ್ ಕೈಗೆತ್ತಿಕೊಂಡ. ತೋರಾಬೋರಾ ಪ್ರದೇಶದಲ್ಲಿ ಕಾಣದ ಲಾಡೆನ್ ಗಾಗಿ ಅಮೆರಿಕಾ ಯುದ್ಧ ವಿಮಾನಗಳು ಬಾಂಬ್ ಸುರಿಸುತ್ತಲೇ ಇದ್ದ ಚಿತ್ರ. ಯುದ್ಧ ಮನುಷ್ಯನ ಅಹಂಕಾರದ, ಅಧಿಕಾರದ ದರ್ಪದ ಸಂಕೇತವೆನಿಸಿ, ಇನ್ನು ಕೆಲದಿನಗಳಲ್ಲಿ ಮುಷರಫ್ – ವಾಜಪೇಯಿ ಯುದ್ಧಕ್ಕೆ ಅಣಿಯಾಗುತ್ತಾರೇನೋ ಎಂದೆನಿಸಿ ಮನೆಯೊಳಗೆ ಬಂದ ಚಳಿಗೆ ಸಣ್ಣಗೆ ನಡುಗಿದ ಕುಮಾರ ಬಾಗಿಲು ಹಾಕಿ, ಮತ್ತೆ ಹಾಸಿಗೆಗೆ ಮೈಚಾಚಿ ಪತ್ರಿಕೆಯ ಪುಟ ತಿರುವ ತೊಡಗಿದ….
ಕುಮಾರ್ ಗೆ ತಟ್ಟನೆ ನಿತಿನ್ ಬರುತ್ತೇನೆಂದು ಹೇಳಿದ್ದು ನೆನಪಾಯ್ತು. ಆತನನ್ನು ಬರಮಾಡಿಕೊಳ್ಳಲು ರೈಲ್ವೆ ನಿಲ್ದಾಣಕ್ಕೆ ಹೋಗಬೇಕಿತ್ತು. ಸ್ನಾತಕೋತ್ತರ ಪದವಿ ಅಧ್ಯಯನದ ಕಾಲ. ನಿತಿನ್ ನಾಟಕ ತಂಡಕಟ್ಟಿ ಸ್ಪರ್ಧೆಗಳಿಗೆ ನಾಟಕ ಸಿದ್ಧಮಾಡಿಕೊಂಡು ಪ್ರವಾಸ ಮಾಡುತ್ತಿದ್ದ ಕಾಲವದು. ನಾಟಕ ತಂಡದಲ್ಲಿದ್ದ ಹುಡುಗಿಯರನ್ನು ಲಪಟಾಯಿಸುತ್ತಿದ್ದ ಅವನ ಚಾಲಕಿತನ ಸ್ನೇಹಿತರ ಹರಟೆಯ ಪ್ರಮುಖ ವಸ್ತುವಾಗಿತ್ತು. ನಾಟಕದ ಪೂರ್ವ ತಯಾರಿ, ನಿರ್ದೇಶನದ ವೇಳೆ ಆತನ ಹೊಸಲೋಕ ಬಿಚ್ಚಿ ಕೊಳ್ಳುತ್ತಿತ್ತು. ಆತ ಮಾತು ಮತ್ತು ನಟನೆಯಿಂದಲೇ ಪಕ್ಕದಲ್ಲಿದ್ದವರ ಮನಕ್ಕೆ ಕನ್ನ ಹಾಕುತ್ತಿದ್ದ. ಇರುವುದೆಲ್ಲವ ಬಿಟ್ಟು ತುಡಿವ ಅವನ ಜೀವನ ರೋಚಕವಾಗಿತ್ತು. ಕಳೆದ ಘಟನೆಗಳನ್ನ ನೆನಸಿಕೊಳ್ಳಲು ಹೆದರುತ್ತಿದ್ದ ಪ್ರಾಣಿಯಂತಿದ್ದ ಆತ ಕುಮಾರನ ಎದುರು ಮಾತ್ರ ತನ್ನ ವಂಚನೆಯನ್ನ ತೆರೆದಿಡುತ್ತಿದ್ದ…..
***
ಪತ್ರಿಕೆಯ ಪುಟ ನಾಲ್ಕರಲ್ಲಿ ವಿಷಸೇವಿಸಿ ಯುವತಿಯ ಆತ್ಮಹತ್ಯೆ ಎಂಬ ಸುದ್ದಿಯ ಮೇಲೆ ಕಣ್ಣಾಡಿಸುತ್ತಿದ್ದಂತೆ ಅಲ್ಲಿದ್ದ ಸುದ್ದಿಯ ಕೇಂದ್ರ ರಾಮಪುರದ ಗೀತಾ ಎಂಬ ಯುವತಿ ಎಂದು ತಿಳಿದು ಆತಂಕವಾಯ್ತು. ನಿತಿನ್ ನ ನೆಚ್ಚಿನ ಹುಡುಗಿ ವಿಷಸೇವಿಸಿದ್ದೇಕೆ? ಎಂಬುದಕ್ಕೆ ಉತ್ತರಗಳು ಸಿಗದಾದವು. ಸಂಶಯಗಳು ಆಗತಾನೆ ಗದ್ದೆ ಮಡಿಯಲ್ಲಿ ಮೊಳೆಕೆ ಯೊಡೆದಂತೆ ಹುಟ್ಟತೊಡಗಿದವು. ನಾಟಕವೆಂದು ಊರೂರು ಅಲೆದ ಹುಡುಗಿ ಎಂತೆಂತಹ ಹುಡುಗರನ್ನೂ ಸೂಜಿಗಲ್ಲಿನಂಥ ನೋಟದಲ್ಲಿ ಸೆಳೆದುಕೊಳ್ಳುತ್ತಿದ್ದಳು. ಅಂಥ ಹುಡುಗಿಗೆ ವಿಷಸೇವಿಸುವಂಥ ಪರಿಸ್ಥಿತಿ ಏನಿರಬಹುದು ಎಂಬ ನಿಗೂಢತೆ ಹೊಸ ಬೆಳೆಯಂತೆ ಬೆಳೆಯುತ್ತಲೇ ಹೋಯ್ತು. ಯೋಚಿಸುತ್ತಾ ಕುಳಿತವನಿಗೆ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಪಕ್ಕದ ಮನೆಯ ಹುಡುಗ ಶಾಲೆಗೆ ಹೋಗುವ ಮುನ್ನ ಎಂದಿನಂತೆ ಮಾತನಾಡಿಸಿದಾಗ ಎಚ್ಚರವಾಗಿ ಟ್ರೇನ್ ಆಗಮನಕ್ಕೆ ಸಮಯ ಸನ್ನಿಹಿಸುತ್ತಿದೆ ಎನಿಸಿ ಸ್ನಾನ ಮಾಡಲು ನಡೆದ. ರೈಲ್ವೇ ನಿಲ್ದಾಣ ತಲುಪಿದಾಗ ಟ್ರೇನ್ ಬರಲು ಹತ್ತು ನಿಮಿಷ ಮಾತ್ರ ಬಾಕಿ. ಟ್ರೇನ್ ಸರಿಯಾದ ವೇಳೆಗೆ ಬಂತು. ಹತ್ತುವವರ ಇಳಿಯುವವರ ನಡುವೆ ಕಣ್ಣುಗಳು ನಿತಿನ್ ಗಾಗಿ ಹುಡುಕತೊಡಗಿದವು. ನಿತಿನ್ ರೈಲ್ವೆಯ ಬೋಗಿ ಯೊಂದರಿಂದ ಹತ್ತುವವರ ನೂಕುನುಗ್ಗಲ ನಡುವೆ ಸೀಳಿಕೊಂಡು ಇಳಿದು ಬಂದ. ದಣಿದಂತಿದ್ದರೂ ತೋರಿಸಿಕೊಳ್ಳದ ಅವನು ಕುಮಾರನ ಕೈಕುಲಿಕಿದವನೇ ಪಕ್ಕದ ಹೋಟೆಲ್ ನ ಒಳನುಗ್ಗಿ ಚಹಾ ಹೀರಿ ಕುಮಾರನ ಮನೆಯತ್ತಾ ಹೆಜ್ಜೆ ಹಾಕಿದರು. ಕುಮಾರ್ ನ್ ಮನೆದೊಳಗೆ ಸುಳಿದಾಡುತ್ತಿದ್ದ ವಿಷಯವನ್ನು ನಿತಿನ್ ಎದುರು ಪ್ರಸ್ತಾಪಿಸಲು ಸಂದರ್ಭಕ್ಕಾಗಿ ಕಾಯುತ್ತಿದ್ದ. ಒಂದು ಕ್ಷಣ ….ಗೀತಾಗಳ ಸಾವಿನ ಸಂಗತಿ ನಿತಿನ್ ಗೆ ತಿಳಿದಿದೆಯೋ ಇಲ್ಲವೋ ಎಂಬ ಅನುಮಾನ ಸಹ ಕಾಡತೊಡಗಿತ್ತು. ಅವರ ಸ್ನೇಹದ… ಸಲುಗೆಯ…… ಒಡನಾಟದ ದಿನಗಳು ಉರುಳಿದ್ದು ಗೊತ್ತಿತ್ತು. ನಂತರದ ದಿನಗಳಲ್ಲಿ ಏನೇನಾಯ್ತು ಎಂಬ ವಿವರಗಳು ಕುಮಾರ್ ಗೆ ತಿಳಿದಿರಲಿಲ್ಲ. ಅವರ ಪೂರ್ವದ ಇತಿಹಾಸ ಮಾತ್ರ ಬುದ್ಧಿ ಭಾವದಲ್ಲಿ ಹುಗಿದಿತ್ತು. ನಂತರದ ತಿರುವುಗಳು, ಕುಸಿದುಹೋದ ಸಂಬಂಧಗಳ ವಿವರಕ್ಕಾಗಿ ಕಾದಿದ್ದ. ಅವಸರವಸರವಾಗಿ ನಿತಿನ್ ಬಂದದ್ದು ಯಾಕೆ? ಗೀತಾಳ ಸಾವಿಗೂ ಈತನ ಧಿಡೀರ್ ಆಗಮನಕ್ಕೂ ಸಂಬಂಧ ಇದೆಯೇ? ಎಂಬ ತರ್ಕ ಹುಟ್ಟಿಕೊಂಡಿತ್ತು. ಮನಸ್ಸು ತಾಕಲಾಟಕ್ಕೆ ಸಿಲುಕಿತ್ತು. ನಿತಿನ್ ಬಗ್ಗೆ, ಅವನ ಜೀವನದ ವೇಗದ ಬಗ್ಗೆ ಇದ್ದ ವಿವರಗಳತ್ತ ಕುಮಾರ್ ನ ಮನಸ್ಸು ಸುತ್ತತೊಡಗಿತು.
***
ಮರವೊಂದು ಮಣ್ಣಿನ ಗರ್ಭಕ್ಕೆ ಬಿಟ್ಟುಕೊಂಡ ಬೇರುಗಳಂತೆ ನಿತಿನ್ ಬದುಕು ನಿಗೂಢವಾಗಿತ್ತು. ತಂದೆ ಯಾರೆಂದೇ ಅವನ್ಗೆ ತಿಳಿದಿರಲಿಲ್ಲ. ತಂದೆಯ ಆವಶ್ಯಕತೆ ಇದೆ ಎಂದು ಯಾವತ್ತೂ ಅವನು ಹೇಳಿಕೊಂಡಿರಲಿಲ್ಲ. ತಾಯಿ ಅವನ ಅವಶ್ಯಕತೆಗಳನ್ನು ಕೊರತೆಯಿಲ್ಲದಂತೆ ಪೂರೈಸಿದ್ದಳು. ಮಹಿಳಾ ಸಂಘಟನೆಯೊಂದರಲ್ಲಿ ದುಡಿಯುತ್ತಿದ್ದ ಆಕೆ ಮಗನನ್ನು ಸ್ವತಂತ್ರವಾಗಿ ಬೆಳೆಸಿದ್ದರು. ಪುಣೆಯ ರಂಗಕಲೆಗೆ ಸೇರಿದ ಮನೆತನದಿಂದ ಬಂದಿದ್ದ ಆಕೆ ಬಂಡಾಯ ಸ್ವಭಾವದವಳು. ಆತ ಸ್ವತಃ ತನಗಿಷ್ಟವಾದ ಬದುಕು ಕಂಡುಕೊಳ್ಳಲಿ. ಪ್ರತಿಭೆಗೆ ಹೊಂದುವಂತಹ ಕೆಲಸ ಮಾಡಲಿ ಎಂಬ ಬಯಕೆ ಅವರದಾಗಿತ್ತು. ಆತನಿಗಿರುವ ಹುಡುಗಿಯರ ಸಂಬಂಧದ ಬಗ್ಗೆ ಸಹ ಅವರು ತಲೆಕೆಡಿಸಿಕೊಂಡಿರಲಿಲ್ಲ. ತಾಯಿಯ ಚಟುವಟಿಕೆಗಳ ಬಗ್ಗೆ ನಿತಿನ್ ಸಹ ಗಾಢವಾಗಿ ಯೋಚಿಸಿದವನೇ ಅಲ್ಲ. ಉಡಾಫೆ ಯಂತೆ ಬದುಕುತ್ತಿದ್ದ ಅವನು ಕೆಲಬಾರಿ ಸೀರಿಯಸ್ಸಾಗಿ ಆಡುತ್ತಿದ್ದ ಮಾತುಗಳು ಅಷ್ಟೇ ವಿಚಿತ್ರವಾಗಿರುತ್ತಿದ್ದವು. ಅನೇಕ ಹುಡುಗಿಯರ ಸಹವಾಸ ಮಾಡಿ ಕೆಲದಿನಗಳಲ್ಲಿ ದೂರವಾಗುತ್ತಿದ್ದ ನಿತಿನ್ ಗೀತಾಳ ಜೊತೆ ಮಾತ್ರ ವರ್ಷಗಟ್ಟಲೇ ಸಾಗಿ ಬಂದಿದ್ದ. ಇನ್ನೇನು ಈ ಸಂಬಂಧ ಗಟ್ಟಿಯಾಗಿ ನಿಲ್ಲುವಂತೆ ಕಾಣುತ್ತಿದೆ ಎಂದು ಕ್ಯಾಂಪಸ್ ಗೆಳೆಯರು ಆಡಿಕೊಳ್ಳುತ್ತಿದ್ದ ಕಾಲದಲ್ಲೆ ಕ್ಯಾಂಪಸ್ ನಿಂದ ನಾವೆಲ್ಲಾ ಪರೀಕ್ಷೆ ಎಂಬ ಕಠಿಣ ಕಾಲ ಕ್ಷಣಗಳನ್ನು ಹೊರಹಾಕಿ ಚದುರಿದ್ದೆವು. ಬಹುದಿನಗಳ ನಂತರ ಭೇಟಿ. ಈ ನಡುವೆ ಸಂಬಂಧ ಬೆಸುಗೆ ಉಳಿಸಿದ್ದು ಪತ್ರ ಬರಹ. ಬಿಟ್ಟರೆ ಒಂದೆರಡು ಸಲ ಫೋನ್. ಅಪರೂಪದ ಭೇಟಿಗಳು ಮಾತ್ರ……
****
ನಿತಿನ್ ಗೀತಾಳ ವಿಷಯ ಪ್ರಸ್ತಾಪಿಸಲೇ ಇಲ್ಲ. ಕುಮಾರ್ ಗೆ ಕುತೂಹಲ ಹೆಚ್ಚುತ್ತಲೇ ಇತ್ತು. ಗೀತಾಳ ಸಾವಿನ ವಿಷಯ ಪ್ರಸ್ತಾಪಿಸಲೇ ಬೇಡವೇ ಎಂಬ ಹೊಯ್ದಾಟದಲ್ಲಿ ಅವರೀರ್ವರು ಕಡಲತೀರಕ್ಕೆ ನಡೆದರು. ಸಂಜೆ ಕಡಲನ್ನು ತಬ್ಬುತ್ತಿತ್ತು. ನಿತಿನ್ ಅಂತರ್ಮುಖಿ ಯಾಗಿದ್ದ. ನಿಟ್ಟುಸುರಿಗೆ ಕಡಲು ಸಹ ಸಾಥ್ ನೀಡಿದಂತಿತ್ತು. ಮೌನ ಅವರೀರ್ವರ ಬಳಿ ಎಷ್ಟೋ ಹೊತ್ತು ಕಾಲ್ಮುರಿದಂತೆ ಬಿದ್ದುಕೊಂಡಿತ್ತು. ನೋಡಿದಷ್ಟು ಕಣ್ಣಗಲಕ್ಕೆ ಹರಡಿಕೊಂಡಿದ್ದ ಸಮುದ್ರರಾಜನ ಮೇಲೆ ದೂರದೂರದಲ್ಲಿ ಬೃಹತ್ ಹುಡಗುಗಳು ನಿಂತಂತೆ ಭಾಸವಾಗುತ್ತಿತು. ಕುಮಾರ್ ನನ್ನು ಉದ್ದೇಶಿಸಿ ’ನಾನುಇಲ್ಲಿರಬೇಕಿತ್ತು ಎಂದ’ನಿತಿನ್. ’ಯಾಕೆ ಅಲ್ಲೇನಾಗಿದೆ” ಕುಮಾರ್ ಪ್ರಶ್ನಿಸಿದ. ನಿತಿನ್ ನನ್ನು ಕೆಣಕಿದಂತಿದ್ದ ಪ್ರಶ್ನೆಗೆ ಆತ ಪ್ರತಿಕ್ರಿಯಿಸಲಿಲ್ಲ.
ಸಮುದ್ರ ಗೋಗರೆಯುತ್ತಿತ್ತು. ತಣ್ಣಗೆ ಸುಳಿದಾಡುತ್ತಿದ್ದ ಗಾಳಿ ರಭಸ ಹೆಚ್ಚಿಸಿಕೊಂಡಿತು. ಗಾಳಿಯ ವೇಗಕ್ಕೆ ಮರಳು ಆಗಾಗ ರಾಚತೊಡಗಿತು. ಸಂಜೆ ಜಾರಿ ರಾತ್ರಿಗೆ ಮುತ್ತಿಕ್ಕಿತ್ತು. ಕತ್ತಲ ಸಾಮ್ರಾಜ್ಯದಲ್ಲಿ ದೀಪಗಳು ಹೊತ್ತಿಕೊಂಡು ಮಿನುಗತೊಡಗಿದವು. ಭೂಮಿಯ ಮೇಲೆ ನಕ್ಷತ್ರಗಳ ಹರಡಿದ ಚಿತ್ರ ಬರೆದಂತೆ ಊರು ಕಾಣತೊಡಗಿತು. ಕಡಲದಂಡೆಯಿಂಡ ಎದ್ದವರೇ, ನೇರ ಕರಾವಳಿ ಬಾರ್ ಹೊಕ್ಕ ಗೆಳೆಯರು ತಡರಾತ್ರಿಯವರೆಗೆ ಯುನಿವರ್ಸಿಟಿ ದಿನಗಳನ್ನು ಮೆಲುಕು ಹಾಕಿದ್ರು. ತಪ್ಪಿಯೂ ಗೀತಾಳ ವಿಷಯವನ್ನ ನಿತಿನ್ ಪ್ರಸ್ತಾಪಿಸಲಿಲ್ಲ. ಗೀತಾಳ ಸಾವಿನ ವಿಷ್ಯಾ ತಿಳಿದಿದೆಯೋ ಇಲ್ಲವೋ ಎಂಬ ಅನುಮಾನ ಕುಮಾರ್ ನನ್ನ ಕಾಡುತ್ತಲೇ ಇತ್ತು……
******************
ಮನೆಗೆ ಬಂದು ಹಾಸಿಗಿಗೆ ಮೈಕೊಡುವ ಮುನ್ನ ಗೀತಾ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಕೇಳಲೇ, ಬೇಡವೇ ಎಂದು ಕುಮಾರ್ ಗೊಂದಲಕ್ಕೆ ಬಿದ್ದ. ವಿಷ್ಯಾ ಗೊತ್ತಾಗಿದೆಯೋ ಇಲ್ಲವೋ? ಗೊತ್ತಿದ್ದು ನಾಟಕ ಆಡುತ್ತಿದ್ದಾನೋ? ಅಪರಾಧಿ ಪ್ರಜ್ಞೆ ಯಿಂದ ತಪ್ಪಿಸಿಕೊಳ್ಳಲು ಇಲ್ಲಿಗೆ ಬಂದನೋ ಎಂಬ ಪ್ರಶ್ನೆಗಳು ಕಾಡತೊಡಗಿದವು. ಟ್ರೇನ್ ನಿಂದ ಇಳಿದು ಬಂದಾಗಿನಿಂದ ನಿತಿನ್ ಯಾವುದೇ ಉದ್ವಿಗ್ನತೆಯನ್ನು ತೋರಿಸಿಕೊಂಡಿರಲಿಲ್ಲ.
ಅನೇಕ ಹುಡುಗಿಯರನ್ನು ಅನುಭವಿಸಿದ್ದ ನಿತಿನ್ ಗೀತಾಳ ವಿಷ್ಯಾದಲ್ಲಿ ಕೆಲ ಬದ್ಧತೆ ತೋರಿಸಿದ್ದ. ಅತ್ಯಂತ ಸೂಕ್ಷ್ಮಮತಿಯಾಗಿದ್ದಳು ಆಕೆ. ಯಾವುದೇ ಹುಡುಗಿಯರಲ್ಲಿ ಸಿಗದ ಸಾನಿಧ್ಯ, ಸ್ಫೂರ್ತಿ, ತನ್ಮಯತೆ ಆಕೆಯಲ್ಲಿದೆ. ಆಕೆಯ ಜೊತೆ ನಿರಂತರ ಸಾನಿಧ್ಯ ಸಾಧ್ಯವೇ ಎಂಬ ಯೋಚನೆಯಲ್ಲಿದ್ದೇನೆ.
ಆದರೆ ಆಕೆ ನಾಟಕದಲ್ಲಿ ಇತರೆ ಹುಡುಗಿಯರ ಜೊತೆ ಸಲಿಗೆಯಿಂದ ಇರುವುದನ್ನ ಸಹಿಸುವುದಿಲ್ಲ. ಈ ವಿಷಯದಲ್ಲಿ ಜಗಳಗಳು ಆಗಿವೆ ಎಂದು ನಿತಿನ್ ಕ್ಯಾಂಪಸ್ ನಲ್ಲಿದ್ದಾಗ ಹೇಳಿದ್ದು ಕುಮಾರ್ ಗೆ ನೆನಪಾಯ್ತು. ಗೀತಾಳನ್ನು ಮದ್ವೆ ಯಾಗಲು ನಿರಾಕರಿಸಿದ್ದೇ ಆಕೆಯ ಆತ್ಮಹತ್ಯೆಗೆ ಶರಣಾದಳೇ? ಎಂಬ ಯೋಚನೆಯೂ ತೇಲಿ ಬಂತು. ಅಪರಾಧಿಯ ಜೊತೆ ನಾನು ಮಲಗಿದ್ದೇನೆಂದು ಕುಮಾರ್ ಗೆ ಅನಿಸತೊಡಗಿತು.
ದೀರ್ಘಕಾಲದ ಸಂಬಂಧಕ್ಕೆ ನಿತಿನ್ ಇಂಥ ಮುಕ್ತಾಯದ ಗೆರೆ ಎಳೆದದ್ದು ಯಾಕೆ? ಯಾವ ಸುಖಕ್ಕೆ ಇವ್ನು ಹೀಗೆ ಬದುಕುತ್ತಿದ್ದಾನೆ? ಮುಖವಾಡದ ದರಿದ್ರ ಬದುಕಿನ ಬಗ್ಗೆ ಎಬ್ಬಿಸಿ ಕೇಳಲೇ? ಹಚ್ಚಿಕೊಂಡವಳ ಬದ್ಕು ಹೀನಾಯ ಅಂತ್ಯ ಕಂಡರೂ ಇವ್ರಿಗೆ ಎಷ್ಟು ಸಲೀಸು?…… ಹೀಗೆ ಬರೀ ಪ್ರಶ್ನೆಗಳ ತಾಂಡವ ನಡೆಯಿತು. ಕುಮಾರ್ ಹತ್ತಿರವೂ ನಿದ್ದೆ ಸುಳಿಯಲಿಲ್ಲ. ಕಣ್ಣುರಿಯಲ್ಲಿ ಮನಸ್ಸು ಒದ್ದಾಡತೊಡಗಿತು. ಆದರೆ ಕುಮಾರ್ ಗೆ ಪಕ್ಕದಲ್ಲೇ ಮಲಗಿದ್ದ ಸ್ನೇಹಿತನನ್ನು ಕೊನೆಗೂ ಪ್ರಶ್ನಿಸಲಾಗಲಿಲ್ಲ. ನಿತಿನ್ ನನ್ನು ಕೇಳಲೇ ಬೇಕಾಗಿದ್ದ ಸಂಚಾರಿ ಭಾವವೊಂದು ಸ್ಥಾಯಿ ಯಾಗಿ ಉಳಿದು ಹೋಯಿತು. ಬಗೆ ಹರಿಯದ, ತರ್ಕಕ್ಕೆ ಇತಿಶ್ರೀ ಹಾಕಬೇಕೆಂಬ, ಗೊಂದಲದ ಪ್ರಶ್ನೆಗೆ ಉತ್ತರವನ್ನು ಪಡೆದುಕೊಳ್ಳಬೇಕೆಂಬ ಹಂಬಲ ಹುಟ್ಟಿದ ದಿನವೇ ಸತ್ತು ಹೋದದ್ದು ಕುಮಾರ್ ನಲ್ಲಿ ಸೋತ ಭಾವನೆಯನ್ನು ಉಳಿಸಿತ್ತು.
ಪೂರ್ಣಜಿಪ್ ಎಳೆಯದ ನಿತಿನ್ ಬ್ಯಾಗ್ ನ ತುದಿಯಲ್ಲಿ ದಿನಪತ್ರಿಕೆ ಕಾಣಿಸಿತು. ಗೀತಾಳ ಸಾವಿನ ಸಂಗತಿ ಇಂದಿನ ಪತ್ರಿಕೆಯ ಸುದ್ದಿಯ ಮೂಲಕವಾಗಲಿ ಅಥವಾ ನನ್ನಲ್ಲಿಗೆ ಬರುತ್ತಿದ್ದೇನೆಂದು ದೂರವಾಣಿ ಕರೆ ಮಾಡಿದಾಗಾಗಲಿ ತಿಳಿದಿರಬೇಕು ಎಂದು ಕೊಂಡ ಕುಮಾರ್. ಆತನ ಯೋಚನಾಸರಣಿ ಮುಂದುವರಿದಿತ್ತು. ಬೆಳಕು ಕಿಟಿಕಿಯಿಂದ ಕೋಣೆ ಪ್ರವೇಶಿಸಿತ್ತು. ಇದಾವುದರ ಪರಿವೆಯೇ ಇಲ್ಲದಂತೆ ನಿಶ್ಚಿಂತೆಯಿಂದ ನಿತಿನ್ ನಿದ್ದೆಹೋಗಿದ್ದ…..
*****
*ಟಿಪ್ಪಣಿ* ೨೭ ಜನವರಿ ೨೦೦೨ ಬರೆದ ಕಥೆ ಯೊಂದನ್ನು ಮರು ಓದಿನನಂತರ ಅಗಸ್ಟ ೨೦೦೯ ರಲ್ಲಿ ಮರಳಿ ಬರೆದೆ. ಕಥೆಯ ಕೊನೆಯ ಭಾಗವನ್ನು ಬದಲಿಸಿದ್ದು ವಿಶೇಷ.
(ಜನವರಿ ೨೦೦೨)