ವಿಮರ್ಶಕರಿದ್ದಾರೆ ಎಚ್ಚರಿಕೆ!

ವಿಮರ್ಶಕರಿದ್ದಾರೆ ಎಚ್ಚರಿಕೆ!

ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ವಿದ್ಯಾರ್ಥಿಯಾದ ನಾನು ಸಾಹಿತ್ಯ ಕಲಿತದ್ದು ಹಳೆಯ ವಿಧಾನದಲ್ಲಿ. ಎಂದರೆ, ಕವಿತೆಯೊಂದು ಪಠ್ಯ ಪುಸ್ತಕದಲ್ಲಿದ್ದರೆ ಮೊದಲು ಕವಿಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವುದು, ನಂತರ ಕವಿತೆಯ ಚರಣಗಳನ್ನು ಓದುತ್ತ, ಅದರ ಶಬ್ದಾರ್ಥಗಳನ್ನು ನಿಘಂಟುವಿನ ಮೂಲಕವೋ ಅಥವಾ ಪಠ್ಯದ ಕೆಳಗಡೆಯಲ್ಲೋ ಕೊನೆಯಲ್ಲೋ ಸಂಪಾದಕರು ಕೊಡುತ್ತಿದ್ದ ಟಿಪ್ಪಣಿಗಳ ಮೂಲಕ ಅರಿತುಕೊಳ್ಳುವುದು. ಇಂಥ ಟಿಪ್ಪಣಿಗಳಲ್ಲಿ ಕೆಲವೊಮ್ಮೆ ಆದಿಯಲ್ಲಿ ಕವಿಯ ಕಿರುಪರಿಚಯವೂ ಇರುತ್ತಿತ್ತು, ಹಾಗೂ ಪಠ್ಯಕ್ಕೆ ಸಂಬಂಧಿಸಿದ ಸಂದರ್ಭ ಸೂಚಿಗಳೂ ಇರುತ್ತಿದ್ದುವು. ತರಗತಿಯಲ್ಲಿ ಪಾಠ ಹೇಳುತ್ತಿದ್ದ ನಮ್ಮ ಪ್ರಾಧ್ಯಾಪಕರು ನಮಗಿಂತ ಹೆಚ್ಚು ತಿಳಿದುಕೊಂಡವರಾದ್ದರಿಂದ ಪಠ್ಯದ ಕುರಿತು ಇನ್ನಷ್ಟು ವಿವರಗಳನ್ನು ನಮಗೆ ನೀಡುತ್ತಿದ್ದರು. ಪಠ್ಯದ ಒಟ್ಟು ಅರ್ಥ ಹಾಗೂ ಕವಿತೆಯ ಮಹತ್ವ ಇತ್ಯಾದಿಯ ಬಗ್ಗೆ ಚರ್ಚಿಸುತ್ತಿದ್ದರೂ ಕೂಡಾ. ಆ ನಂತರ ನಾವು ಪರೀಕ್ಷೆಯ ದೃಷ್ಟಿಯಿಂದ ಕವಿತೆಯನ್ನು ಮತ್ತೆ ಮತ್ತೆ ಅಭ್ಯಾಸ ಮಾಡುತ್ತಲೇ ಇರಬೇಕಾಗುತ್ತಿತ್ತು. ಇಂಥ ಸಾಹಿತ್ಯ ಪಾಠಗಳ ಕುರಿತು ನಮಗೆ ಯಾವ ತಕರಾರೂ ಇರಲಿಲ್ಲ. ನಾನಿಲ್ಲಿ ಹೇಳುತ್ತಿರುವುದು ಇಪ್ತತ್ತನೆಯ ಶತಮಾನದ ಐವತ್ತು ಅರುವತ್ತರ ದಶಕಗಳ ಬಗ್ಗೆ. ಆಗಿನ್ನೂ ಆಧುನಿಕತೆಯೆನ್ನುವುದು ಭಾರತೀಯರ ಮನೋಭೂಮಿಕೆಯನ್ನು ವ್ಯಾಪಕವಾಗಿ ಆಕ್ರಮಿಸಿರಲಿಲ್ಲ. ಆದರೂ ಸಾಹಿತ್ಯ ಕ್ಷೇತ್ರದಲ್ಲಿ ನವ್ಯತೆ ಅಲ್ಲಲ್ಲಿ ಕಾಣಿಸಿಕೊಳ್ಳಲು ಸುರುವಾಗಿತ್ತು. ಅರುವತ್ತರ ದಶಕದ ಮಧ್ಯದಲ್ಲೇ ನಾನು ಬೆಕೆಟ್‌ನ ‘ವೈಟಿಂಗ್ ಫಾರ್’ ಗೊದೋ, ಕಮೂವಿನ ‘ಔಟ್‌ಸೈಡರ್’ ಇತ್ಯಾದಿ ಯುರೋಪಿನ ಆಧುನಿಕ ಕೃತಿಗಳನ್ನು ಓದಿದ ನೆನಪಿದೆ. ಆದರೂ ಸಾಹಿತ್ಯ ಕ್ಷೇತ್ರವನ್ನು ಆಧುನಿಕ ವಿಮರ್ಶೆ ಅಷ್ಟಾಗಿ ಪ್ರವೇಶಿಸಿರಲಿಲ್ಲ. ಶಿಕ್ಷಣ ಕ್ಷೇತ್ರವಂತೂ ಇದೆಲ್ಲದರಿಂದ ‘ಸುರಕ್ಷಿತ’ ದೂರದಲ್ಲಿತ್ತು.

ಆದರೆ ಅರುವತ್ತರ ದಶಕದ ಮಧ್ಯಭಾಗದಲ್ಲಿ ಇದೆಲ್ಲವೂ ಬದಲಾಗುತ್ತಿರುವುದನ್ನು ಗಮನಿಸಿದೆ. ಅಲ್ಲಲ್ಲಿ ಹೊಸ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸೆಮಿನಾರುಗಳು ನಡೆಯತೊಡಗಿದುವು. ಈ ‘ಸೆಮಿನಾರ್’ (‘ಸಂಕೀರ್ಣ’) ಎಂಬ ಶಬ್ದವನ್ನು ನಾನು ಕೇಳಿದ್ದು ಅದೇ ಮೊದಲ ಸಲ. ಈಗ ಸೆಮಿನಾರುಗಳು ಉನ್ನತ ಶಿಕ್ಷಣದ ಅವಿಭಾಜ್ಯ ಅಂಗವಾಗಿದ್ದರೂ, ನಾನು ಕಲಿಯುತ್ತಿರುವಾಗ ಹಾಗಿರಲಿಲ್ಲ. ಈ ಸಾಹಿತ್ಯ ಸೆಮಿನಾರುಗಳಲ್ಲಿ ನನಗೆ ಮೊತ್ತಮೊದಲಿಗೆ ನವ್ಯ ಸಾಹಿತಿಗಳ ಜತೆ ಜತೆಗೇ ಹೊಸ ವಿಮರ್ಶೆಯ ಪರಿಚಯವೂ ಆಯಿತು. ಅಡಿಗರ ‘ಭೂಮಿ ಗೀತ’, ಕಾರಂತರ ‘ಮರಳಿ ಮಣ್ಣಿಗೆ’, ಬೇಂದ್ರೆಯವರ ಕಾವ್ಯದಲ್ಲಿ ಜನಪದ ಜೀವನ ದರ್ಶನ ಮುಂತಾದ ವಿಷಯಗಳ ಮೇಲೆ ಸಾಹಿತಿಗಳು, ವಿದ್ವಾಂಸರು ಪೇಪರ್ ಓದುತ್ತಿದ್ದರು, ಅರ್ಥಾತ್ ವಿಮರ್ಶೆಗಳನ್ನು ಮಂಡಿಸುತ್ತಿದ್ದರು. ಆಮೇಲೆ ಅವುಗಳ ಬಗ್ಗೆ ಚರ್ಚೆಯಾಗುತ್ತಿತ್ತು. ಗೋಪಾಲಕೃಷ್ಣ ಅಡಿಗ, ಅನಂತಮೂರ್ತಿ, ಕೀರ್ತಿನಾಥ ಕುರ್ತಕೋಟಿ, ಎಂ. ಜಿ. ಕೃಷ್ಣಮೂರ್ತಿ, ಜಿ. ಎಚ್. ನಾಯಕ, ಸುಮತೀಂದ್ರ ನಾಡಿಗ, ಪಿ. ಲಂಕೇಶ, ಗಿರಡ್ಡಿ ಗೋವಿಂದರಾಜ, ಗೋವಿಂದ ಜಾಲೀಹಾಳ, ಬಿ. ದಾಮೋದರ ರಾವ್, ಡಿ. ರಘುನಾಥ ರಾವ್ ಮುಂತಾದವರನ್ನೆಲ್ಲ ನಾನು ಮೊದಲು ಭೇಟಿ ಮಾಡಿದುದು ಇಂಥ ಸೆಮಿನಾರುಗಳಲ್ಲೇ. ಹೆಚ್ಚಾಗಿ ಇವರೆಲ್ಲ ಒಂದು ಹೋಟೆಲಿನಲ್ಲೋ ಅತಿಥಿ ಗೃಹದಲ್ಲೋ ಇಳಿದುಕೊಂಡಿರುತ್ತಿದ್ದರು. ಅಲ್ಲೂ ಸಾಹಿತ್ಯದ ಬಗ್ಗೆ ಅನೌಪಚಾರಿಕವಾದ ಚರ್ಚೆಗಳು ನಡೆಯುತ್ತಿದ್ದುವು. ಮದ್ಯಪಾನ, ಧೂಮಪಾನಗಳು ಇರುತ್ತಿದ್ದುವು. ನಾನಿನ್ನೂ ಅನಾಮಿಕನಾಗಿದ್ದುದರಿಂದ ಎಲ್ಲರನ್ನೂ, ಎಲ್ಲವನ್ನೂ ಕುತೂಹಲದಿಂದ ವೀಕ್ಷಿಸುತ್ತಿದ್ದೆ. ಈ ವೀಕ್ಷಣೆಯಿಂದ ನನಗನಿಸಿದ್ದು: ಸಾಹಿತ್ಯ ಓದಿ ಸುಖಪಡುವ ಸಾಧನವಲ್ಲ! ಅದು ಗಹನವಾಗಿ ಚಿಂತಿಸುವುದಕ್ಕಿರುವ ಸಾಧನ! ಈ ಚಿಂತಿಸುವಿಕೆಯ ಪರಿಣಾಮವೋ ಏನೋ ಇದರಲ್ಲಿ ಭಾಗವಹಿಸುತ್ತಿದ್ದ ಹೆಚ್ಚಿನವರ ಮೋರೆಯಲ್ಲೂ ಚಿಂತೆ ಕಪ್ಪಿಟ್ಟು ಕೂತಿರುತ್ತಿತ್ತು. ಅವರು ಈ ಲೋಕದ ಭೂತ ವರ್ತಮಾನ ಭವಿಷ್ಯವೆಲ್ಲವೂ ಸಾಹಿತ್ಯದ ಮೇಲೆ ಅವಲಂಬಿಸಿದೆ ಎಂಬಂತೆ ಮಾತಾಡುತ್ತಿದ್ದರು. ಮಾತು ಮಾತಿಗೆ ಮಾರ್ಕ್, ಲೆನಿನ್, ಲೋಹಿಯಾ, ಸಾರ್ತೃ, ಕಮೂ, ಕಾಫ್ಕಾ ಮುಂತಾದವರು ಬರುತ್ತಿದ್ದರು. ಮಾರ್ಕ್ಸ್‌ವಾದ ಉಣ್ಣವುದಕ್ಕೆ, ಅಸ್ತಿತ್ವವಾದ ನಂಜಿಕೊಳ್ಳುವುದಕ್ಕೆ ಎಂಬಂಥ ವಾತಾವರಣ. ಎಂ. ಜಿ. ಕೃಷ್ಣಮೂರ್ತಿ, ಕುರ್ತಕೋಟಿ ಸ್ವಲ್ಪ ಮನುಷ್ಯರಂತೆ ಇರುತ್ತಿದ್ದರು. ಒಬ್ಬರು ಪೈಪು ಸೇದುತ್ತಿದ್ದರೆ ಇನ್ನೊಬ್ಬರು ವೀಳಯ ಹಾಕಿಕೊಳ್ಳುತ್ತಿದ್ದರು. ಇಬ್ಬರ ಮುಖದಲ್ಲೂ ಮುಗುಳುನಗೆ ಇರುತ್ತಿತ್ತು. ಪೈಪು ಸೇದುವುದಕ್ಕೂ ವೀಳಯ ಹಾಕುವುದಕ್ಕೂ ಹೆಚ್ಚಿನ ವ್ಯತ್ಯಾಸ ಇಲ್ಲ ಎನ್ನುವುದನ್ನು ನಾನು ಕಂಡುಕೊಂಡೆ. ಈ ಎರಡೂ ಕ್ರಿಯೆಗಳಿಗೂ ಅವುಗಳದ್ದೇ ಆದ ಕ್ರಿಯಾವಿಧಾನಗಳು ಇವೆಯೆಂದಲ್ಲದೆ, ಎರಡೂ ಮನುಷ್ಯನಿಗೆ ಬೇಕೆಂದಾಗ ಮೌನವಾಗುವುದಕ್ಕೆ ಮಾರ್ಗಗಳಾಗುತ್ತವೆ. ಸುಮತೀಂದ್ರ ನಾಡಿಗರು ಯಾವಾಗಲೂ ಲವಲವಿಕೆಯಿಂದಲೇ ಇರುತ್ತಿದ್ದರು. ಬಹುಶಃ ಅವರೊಬ್ಬರೇ ಮನ ತುಂಬಿ ನಗುತ್ತಿದ್ದುದು. ಉಳಿದವರೆಲ್ಲ ನಗೆಯ ವಿರೋಧಿಗಳಂತೆ ವರ್ತಿಸುತ್ತಿದ್ದರು. ಯಾಕೆಂದರೆ ನಗು ಆಧುನಿಕ ವಿಮರ್ಶೆಗೆ ವಿರುದ್ಧವಾದ ಸಂಗತಿಯಾಗಿದ್ದಿತು. ನಗು ಮಾತ್ರವೇ ಅಲ್ಲ, ಸಂತೋಷ, ಹಾಸ್ಯ, ಕಳಕಳಿ, ಕ್ರೋಧದ ಹೊರತಾದ ಇನ್ನು ಯಾವುದೇ ಭಾವವಿಕಾರ, ಎಲ್ಲವೂ ಇವರು ಹೊತ್ತುಕೊಂಡಿದ್ದ ಸಾಹಿತ್ಯದ ಹೊಣೆಗಾರಿಕೆಯ ವೈರಿಗಳಾಗಿದ್ದುವು. ಇಂಗ್ಲಿಷ್ ನಾಟಕಕಾರ ಜಾನ್ ಆಸ್ಬಾರ್ನ್‌ನ ‘ಲುಕ್ ಬ್ಯಾಕ್ ಇನ್ ಆಂಗರ್‌ (ಸಿಟ್ಟಿನಿಂದ ತಿರುಗಿ ನೋಡು) ಎಂಬುದರ ಕಾಲವಾಗಿತ್ತು ಅದು ಎಂದು ಹೇಳಿದರೆ ಎಲ್ಲವನ್ನೂ ಹೇಳಿದ ಹಾಗಾಗುತ್ತದೆ. ಆ ಕಾಲದಲ್ಲೇ ಅಡಿಗರು ನಡೆದು ಬಂದ ದಾರಿಯ ಕಡೆ ತಿರುಗಿ ನೋಡಬೇಡ ಎಂದುದು ಕೂಡಾ. ನೋಡುವುದಾದರೆ ಕ್ರೋಧದಿಂದ ನೋಡು ಎಂಬುದು ಅವರ ಮಾತಿನ ಅರ್ಥ.

ಕನ್ನಡ ಸಾಹಿತ್ಯವಾಗಲಿ ವಿಮರ್ಶೆಯಾಗಲಿ ಹಿಂತಿರುಗಿ ನೋಡಲಿಲ್ಲ. ಅಕರ್ಮಕ (intrasitive) ವಾಗಬೇಕಾಗಿದ್ದ ಸಾಹಿತ್ಯ ಸಕರ್ಮಕ್ (transitive)ವಾಯಿತು; ಹಾಗೂ ಸಾಹಿತ್ಯವಿಮರ್ಶೆಯೆನ್ನುವುದು ಸಾಹಿತ್ಯಕ್ಕೆ ಪದೇ ಪದೇ ಅದರ ರಾಜಕೀಯ ಜವಾಬ್ದಾರಿಯನ್ನು ನೆನಪು ಮಾಡಿಕೊಡುವ, ಅದು ಮರೆತಲ್ಲಿ ಅದನ್ನು ಶಿಕ್ಷಿಸುವ ಸಾಧನವಾಯಿತು. ಆದ್ದರಿಂದ ಸಾಹಿತ್ಯ ಮತ್ತು ವಿಮರ್ಶೆ ಎರಡೂ ರಾಜಕೀಯವಾಗಿ ಮಾರ್ಪಟ್ಟುವು. ಇದಕ್ಕೆ ಹಿಂದೆಯೂ ಸಾಹಿತ್ಯಕ್ಕೆ ರಾಜಕೀಯ ಗಂಧವಿರಲಿಲ್ಲವೇ? ಇರಲಿಲ್ಲ ಎನ್ನುವಂತಿಲ್ಲ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅದು ಸ್ವಾತಂತ್ರ್ಯ ಚಳುವಳಿಯ ಭಾಗವಾಯಿತು. ನಂತರದ ಪ್ರಗತಿಶೀಲ ಚಳುವಳಿಯ ಕಾಲದಲ್ಲಂತೂ ಅದು ನೇರವಾಗಿ ಸಮಾಜೋದ್ಧಾರದ ಮಾಧ್ಯಮವಾಯಿತು. ಅದಕ್ಕೂ ಹಿಂದೆ ಸಾಹಿತ್ಯವು ಧರ್ಮಪ್ರಚಾರಕ್ಕೆ ನೆರವಾಯಿತು. ಶುದ್ಧಸಾಹಿತ್ಯವೆನ್ನುವುದು ಎಂದೂ ಇರಲಿಲ್ಲ. ಇರುವುದು ಸಾಧ್ಯವೂ ಇಲ್ಲ. ಯಾಕೆಂದರೆ ಮನುಷ್ಯಸಮಾಜದ ನಡುವೆಯೇ ಸಾಹಿತ್ಯದ ಸೃಷ್ಟಿಯಾಗಬೇಕು. ಅದು ಉಪಯೋಗಿಸುವ ಭಾಷೆಯಂತೂ ಜನಪದದಿಂದ ‘ಕಲುಷಿತ’ವಾದುದು. ಆದರೂ ಆಧುನಿಕಪೂರ್ವ ಸಾಹಿತ್ಯ ತನ್ನ ಅಕರ್ಮಕತೆಯನ್ನು ಎಲ್ಲೋ ಒಂದೆಡೆ ಒಂದು ಕಲ್ಪನೆಯಂತಾದರೂ ಜೀವಂತವಾಗಿ ಇಟ್ಟುಕೊಂಡಿತ್ತು. ನವ್ಯದ ನಂತರದ ದಲಿತ-ಬಂಡಾಯದ ದಿನಗಳಲ್ಲಿ ಅಂಥ ಕಲ್ಪನೆಯೇ ನಿಂದನೆಗೆ ಒಳಗಾದುದನ್ನು ಕಾಣುತ್ತೇವೆ. ಆದ್ದರಿಂದ ಇಡೀ ಸಾಹಿತ್ಯಪರಂಪರೆಯೇ ಬೂಸವೆನಿಸುತ್ತದೆ. ಹೊಸ ಕೃತಿಗಳು ಹೊಸ ಪರಂಪರೆಯನ್ನು ನಿರ್ಮಿಸುತ್ತವೆ. ಇಕ್ರಲೋ ವದೀರ್‍ಲೋ, ಖಡ್ಗವಾಗಲಿ ಕಾವ್ಯ ಮುಂತಾದ ನಿರ್ದೇಶನಗಳು ಬರುತ್ತವೆ. ಇವನ್ನು ರೂಪಕವಾಗಿ ತೆಗೆದುಕೊಳ್ಳಬೇಕೋ ನಿಜಾರ್ಥದಲ್ಲಿ ತೆಗೆದುಕೊಳ್ಳಬೇಕೋ ಎನ್ನುವುದು ಗೊತ್ತಾಗದೆ ಜನ ತಮಗೆ ಬೇಕಾದಂತೆ ತಿಳಿಯಲು ಸ್ವತಂತ್ರರಾಗಿರುತ್ತಾರೆ. ಆದ್ದರಿಂದಲೇ ಕಾವ್ಯ (ಇವತ್ತು ಯಾರೂ ಉಪಯೋಗಿಸದ) ಖಡ್ಗ ಯಾಕೆ ಆಗಬೇಕು? ಬಾಂಬ್, ಏ.ಕೆ.೪೭, ಗ್ರೆನೇಡ್ ಆಗಿದ್ದರೆ ಚೆನ್ನಲ್ಲವೇ ಎಂಬ ಪ್ರಶ್ನೆಯೇಳುತ್ತದೆ. ಹಾಗೂ ಇಂಥ ನಿರ್ದೇಶನಗಳನ್ನು ನೀಡಿದವರೇ ಒಂದು ವೇಳೆ ಈ ಕುರಿತು ಮುಜುಗರ ಪಟ್ಟರೂ ಇತರರು ಇವನ್ನು ಮರೆಯಲು ಬಿಡುವುದಿಲ್ಲ. ಯಾಕೆಂದರೆ ಈಗ ರೂಕ್ಷ ಆತ್ಮಹತ್ಯಾದಳಗಳ ಕಾಲ. ಅಂತೆಯೇ ಸಾಹಿತ್ಯ ಕೃತಿಯೂ ತಾನು ಉರಿದು ಇತರರನ್ನು ಉರಿಸುತ್ತದೆ.

ನವ್ಯ, ದಲಿತ-ಬಂಡಾಯ, ಸ್ತ್ರೀವಾದ ಮುಂತಾದ ಚಳುವಳಿಗಳು ಮೂಡಿ ಬಂದುದರಿಂದ ಸಾಹಿತ್ಯಕ್ಕೆ ಹೊಸ ಧ್ವನಿಗಳು ಮತ್ತು ಜೀವನದ್ರವ್ಯಗಳು ಸಿಕ್ಕಿದವು ನಿಜ. ಇದರಿಂದ ಇಡೀ ಸಾಹಿತ್ಯಸ್ವರೂಪವೇ ಮಾರ್ಪಟ್ಟಿತು. ಆದರೆ ಬಿಡಿ ಬಿಡಿಯಾಗಿ ಸಾಹಿತ್ಯ ಕೃತಿಗಳು ಶ್ರೀಮಂತವಾದುವೇ? ಬದಲಿಗೆ, ಇಂಥ ಒಂದೊಂದು ಕೃತಿಯೂ ಇತರ ಎಲ್ಲಾ ಆಯಾಮಗಳನ್ನು ತಿರಸ್ಕರಿಸುತ್ತ ಕಾಗದದ ಹಾಳೆಯಂತೆ ಚಪ್ಪಟೆಯಾಗಲಿಲ್ಲವೇ? ಇದೇ ಮಾತು ಸಾಹಿತ್ಯ ವಿಮರ್ಶೆಗೂ ಸಲ್ಲುತ್ತದೆ. ಯಾಕೆಂದರೆ ತಾನು ಬದ್ಧವಾದ ಈ ಹೊಸ ಆಯಾಮಗಳನ್ನು ಮಾತ್ರ ಎತ್ತಿ ಹಿಡಿಯುತ್ತ ವಿಮರ್ಶೆ ಇತರ ಆಯಾಮಗಳಿಗೆ ಸ್ಪಂದಿಸಲಾರದೆ ಹೋಗುತ್ತಿದೆ. ಆದ್ದರಿಂದ ಸಾಹಿತ್ಯದಲ್ಲಿ ‘ಸಮಗ್ರತೆ’ ಎಂಬುದೇ ಅವಿಮರ್ಶಾತ್ಮಕ ಪದವಾಗಿಬಿಟ್ಟದೆ. ಇದು ಕನ್ನಡವೊಂದರ ಸಮಸ್ಯೆಯೂ ಅಲ್ಲ. ದೇಶವಿದೇಶಗಳ ಎಲ್ಲ ಸೆಮಿನಾರುಗಳಲ್ಲೂ, ಸಮ್ಮೇಳನಗಳಲ್ಲೂ, ವಿಶ್ವವಿದ್ಯಾಲಯಗಳಲ್ಲೂ ಇದೇ ಅವಸ್ಥೆ. ನಗುವಾಗಲಿ, ಲವಲವಿಕೆಯಾಗಲಿ ಎಲ್ಲೂ ಇಲ್ಲ-ದುಗುಡವೊಂದೇ ಸ್ಥಾಯೀಭಾವ. ಹಾಗೂ ಅಲ್ಲಿ ಓದುವ ಪೇಪರುಗಳ ಭಾಷೆ ಕೂಡಾ ಎಷ್ಟು ಜಿಗುಟುಗಟ್ಚಿದೆ! ಶೇಕ್ಸ್‌ಪಿಯರ್ ಎಲಿಜಬೆತನ್ ಕಾಲದಲ್ಲಿ ಹುಟ್ಟಿದ್ದಕ್ಕೆ ಆಯಿತು; ಆತನೇನಾದರೂ ನಮ್ಮ ಈ ಕಾಲದಲ್ಲಿ ಹುಟ್ಟಿದ್ದರೆ ಆ ಅಂಥ ‘ಸಮಗ್ರ’ ನಾಟಕಗಳನ್ನು ಬರೆಯುವುದು ಅವನಿಂದ ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಇದು ನಮ್ಮ ನೆಲದ ಗುಣ ಮಾತ್ರವೂ ಅಲ್ಲ, ನಿಂತ ‘ಕಾಲಗುಣ’ವೂ ಹೌದು!

ಸಾಹಿತ್ಯದ ಮೇಲೆ ಪರೋಪಜೀವಿಯಾಗಿರುವ ಇಂಥದೇ ಇನ್ನೊಂದು ವಿಮರ್ಶಾ ವಿಭಾಗವೆಂದರೆ ಸಂಸ್ಕೃತಿ ವಿಮರ್ಶೆ. ಇದಾದರೆ ಸಿಕ್ಕವರ ಆಡುಂಬೊಲ. ಇಲ್ಲಿ ಏನು ಬೇಕಾದರೂ ಹೇಳಬಹುದು. ಉದಾಹರಣೆಗೆ ಹನ್ನೆರಡನೆಯ ಶತಮಾನದಷ್ಟು ಕ್ರಿಯಾಶೀಲವಾಗಿದ್ದ ಕಾಲ ಇನ್ನೊಂದು ಇರಲಿಲ್ಲ ಎನ್ನಬಹುದು. ಯಾರು ನೋಡಿದ್ದಾರೆ? ಇಡೀ ಮಾಯನ್ ನಾಗರಿಕತೆ ಪ್ರಾಚೀನ ಹಿಂದೂ ನಾಗರಿಕತೆಯ ಸಂಕ್ಷಿಪ್ತ ರೂಪ. ಯಾರು ಅಲ್ಲ ಎನ್ನುತ್ತಾರೆ? ಕರ್ನಾಟಕಕ್ಕೆ ಜೈನ ಧರ್ಮ ಬರದೇ ಇರುತ್ತಿದ್ದರೆ ಚಂಪೂ ಕಾವ್ಯವೇ ಇರುತ್ತಿರಲಿಲ್ಲ. ಪರೀಕ್ಷಿಸುವುದು ಹೇಗೆ? ಇಂಥ ಸಾರಾಸಗಟಾದ ಹೇಳಿಕೆಗಳನ್ನು ಯಾರು ಬೇಕಾದರೂ ಕೊಡಬಹುದು. ಯಾರೂ ಓದಿರದ ಒಂದೆರಡು ಪುಸ್ತಕಗಳನ್ನು ಓದಿಕೊಂಡರೆ ಸೆಮಿನಾರುಗಳಲ್ಲಿ ಕೂತವರನ್ನು ಮರುಳುಗೊಳಿಸಬಹುದು.

ವಿಮರ್ಶೆಯೇ ಬೇಡ ಎಂದು ಬಹುಶಃ ಯಾರೂ ಹೇಳುವುದಿಲ್ಲ. ಆದರೆ ಸಾಹಿತ್ಯ ಮತ್ತು ವಿಮರ್ಶೆಯ ಅಂತರವೇ ಹೊರಟುಹೋದಾಗ ಗೊಂದಲ ಉಂಟಾಗುತ್ತದೆ. ವಿಮರ್ಶೆ ಹೇಗೂ ಆರ್ಥಿಕ, ಸಾಮಾಜಿಕ, ರಾಜಕೀಯ ವಿಶ್ಲೇಷಣೆಯಾಗಿದೆ-ಸಾಹಿತ್ಯ ಅದಕ್ಕೀಗ ಕೇವಲ ಒಂದು ನೆಪ. ವಿಮರ್ಶೆಯೇ ಸಾಹಿತ್ಯದ ಓದನ್ನು ಈ ರೀತಿ ನಿರ್ದೇಶಿಸುವುದಾದರೆ ಸಾಹಿತ್ಯವೇ ಯಾಕೆ ಈ ಕೆಲಸವನ್ನು ಮಾಡಬಾರದು? ಹೀಗೆ ಮಾಡುವ ಸಾಹಿತ್ಯವನ್ನೇ ನಾವೀಗ ಕಾಣುತ್ತಿರುವುದು. ಸಾಹಿತ್ಯ ಪುರಾಮಾನವಶಾಸ್ತ್ರ, ಚರಿತ್ರೆ, ಸಮಾಜವಿಜ್ಞಾನ, ರಾಜಕೀಯ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಎಲ್ಲವೂ ಆಗುತ್ತಿದೆ. ಇದರ ಉದ್ದ ಪಡಿನೆರಳನ್ನು ಸದ್ಯದ ಸಾಹಿತ್ಯ ಸಮ್ಮೇಳನಗಳಲ್ಲಿ ನೋಡಬಹುದು. ಇಲ್ಲಿ ಎಲ್ಲರೂ ಇರುತ್ತಾರೆ, ಆದರೆ ಸಾಹಿತಿಗಳು ಇರುವುದಿಲ್ಲ; ಉಳಿದೆಲ್ಲಾ ವಿಷಯಗಳ ಕುರಿತಾದ ಚರ್ಚೆ ನಡೆಯುತ್ತದೆ, ಆದರೆ ಒಳ್ಳೆಯ ಸಾಹಿತ್ಯ ಕೃತಿಗಳ ಕುರಿತಾದ ವಿವೇಚನೆ ಸಿಗುವುದಿಲ್ಲ.

ಸಾಹಿತ್ಯದ ಕುರಿತಾದ ಅಸಹನೆಯೇ ಇದಕ್ಕೆ ಕಾರಣ. ನಾವು ಸಾಹಿತ್ಯದಿಂದ ಅದು ಮಾಡಲಾಗದ್ದನ್ನೆಲ್ಲ ನಿರೀಕ್ಷಿಸುತ್ತೇವೆ. ಸಾಹಿತ್ಯ ಸಾಮಾಜಿಕ ಕ್ರಾಂತಿ ತರಬೇಕು, ಆರ್ಥಿಕ ಸುಧಾರಣೆ ಮಾಡಬೇಕು, ರಾಜಕೀಯ ಹಸ್ತಕ್ಷೇಪ ನಡೆಸಬೇಕು, ಶಿಕ್ಷಣ ನೀಡಬೇಕು, ನಮ್ಮ ನೈತಿಕ ಮೌಲ್ಯ ಸುಧಾರಿಸಬೇಕು ಎಂಬಿತ್ಯಾದಿಯಾಗಿ ಬಯಸುತ್ತೇವೆ. ಸಾಹಿತ್ಯ ಇದು ಯಾವುದನ್ನೂ ಮಾಡಲಾರದು-ಅಥವಾ ಮಾಡುವುದಾದರೆ ಪರೋಕ್ಷವಾಗಿ ಮಾತ್ರ ಸಾಧ್ಯ. ಇದೇ ನಮ್ಮ ಅಸಹನೆಗೆ ಕಾರಣ. ಆಗ ನಾವು ಸಾಹಿತ್ಯ ಹೀಗಿರಬೇಕು, ಹಾಗಿರಬೇಕು ಎಂಬ ಒತ್ತಾಯಗಳನ್ನು ಹೇರತೊಡಗುತ್ತೇವೆ. ಇಂಥ ಒತ್ತಾಯಗಳು ಸಾಹಿತ್ಯವನ್ನು ನಿರ್ಬಂಧಿಸಿ ಅದರ ಸ್ವಾತಂತ್ರ್ಯಹರಣ ಮಾಡುತ್ತವೆ. ಸೃಷ್ಟಿಯ ಆಟದಂತೆ ಸ್ವಾಯತ್ತತೆಯಲ್ಲಿ ನಿರ್ಮಾಣವಾಗಬೇಕಾದ ಸಾಹಿತ್ಯ ಇಂದು ‘ಸಭಾಕಂಪನ’ವನ್ನು ಮೈಗೂಡಿಸಿಕೊಂಡು ಸ್ವಯಂ ಕಾವಲುಗಾರನಾಗುವುದರಲ್ಲಿ ತನ್ನ ಶಕ್ತಿಯನ್ನು ವ್ಯಯಮಾಡುತ್ತಿದೆ. ಈ ಸ್ವಾಯತ್ತತೆ ಎನ್ನುವುದು ಕೇವಲ ಭ್ರಮೆ, ನಿಜವಾದ ಸ್ವಾಯತ್ತತೆ ಇಲ್ಲ ಎಂದು ವಾದಿಸಬಹುದು; ಒಂದು ವೇಳೆ ಈ ಸ್ವಾಯತ್ತತೆ ಒಂದು ಭ್ರಮೆಯೇ ಆದರೂ ಸಾಹಿತ್ಯ ಸೃಷ್ಟಿಗೆ ಇಂಥ ಭ್ರಮೆ ಅಗತ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆಡುಕು ಮತ್ತೆ ಮಳೆಯಂತೆ ಸುರಿಯುವಾಗ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩೦

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…