ಬಹಳ ಮುಖ್ಯವಾದ ಪತ್ರ ಹಿಡಿದು ಆಫೀಸಿಗೆ ಒಬ್ಬ ಓಡಿ ಬರುತಾನೆ. ಕಛೇರಿ ಅವಧಿ
ಮುಗಿದು ಬಾಗಿಲು ಹಾಕಿರುತ್ತದೆ, ಹಾಗೆ,
ಊರಿಗೆ ಪ್ರವಾಹದ ನೀರು ನುಗ್ಗುತ್ತಿದೆ ಎಂದೊಬ್ಬ ಸುದ್ಧಿತರುತಾನೆ. ಅವನ ಭಾಷೆ
ಅವರಿಗೆ ತಿಳಿಯುವುದಿಲ್ಲ. ಹಾಗೆ
ನಾಲ್ಕು ಬಾರಿ ಭಿಕ್ಷೆ ಕೊಟ್ಟ ಮನೆಯ ಮುಂದೆ ಐದನೆಯ ಬಾರಿ ಭಿಕ್ಷುಕ ನಿಂತು ಕೂಗುತ್ತಾನೆ
ಈಗ ಅವನಿಗೆ ನಿಜವಾಗಿ ಹೊಟ್ಟೆಹಸಿದಿದೆ. ಹಾಗೆ
ಡಾಕ್ಟರಿಗೆ ಕಾಯುತ್ತಾ ರೋಗಿಯೊಬ್ಬ ಬಿದ್ದಿದ್ದಾನೆ. ಗಾಯದಿಂದ ರಕ್ತ ಹರಿಯುತ್ತಲೇ ಇದೆ.
ಹಾಗೆ
ನಾವೀಗ ಮುಂದೆ ಬಂದು ಕೆಡುಕು ಸಂಭವಿಸಿದ್ದನ್ನು ಹೇಳುತ್ತಿದ್ದೇವೆ.
ಕಟುಕರಂತೆ ನಮ್ಮ ಗೆಳೆಯರನ್ನು ಕೊಚ್ಚಿ ಹಾಕಿದರೆಂಬ ಸುದ್ದಿ ಮೊದಲಿಗೆ ತಿಳಿದಾಗ
ಭಯದ ಚೇತ್ಕಾರವಿತ್ತು. ನಂತರ ನೂರು ಜನರನ್ನು ಕೊಚ್ಚಿ ಹಾಕಿದರು. ಸಾವಿರ ಜನರನ್ನು
ಕೊಚ್ಚಿದಾಗ ಕಟುಕತನಕ್ಕೆ ಕೊನೆಯಿರಲಿಲ್ಲ. ಮೌನದ ಕಂಬಳಿ ಎಲ್ಲರನ್ನು ಕವಿದಿತ್ತು.
ಕೆಡುಕು ಮಳೆಯಂತೆ ಧೋ ಎಂದು ಸುರಿಯುವಾಗ ಯಾರೂ ಗೊಣಗುವುದಿಲ್ಲ.
ತಪ್ಪಿನ ಮೇಲೆ ತಪ್ಪು, ಕೆಡುಕಿನ ಮೇಲೆ ಕೆಡುಕು ರಾಶಿ ಬೀಳುತ್ತ ಹೋದಾಗ ಅವು
ಯಾವುವೂ ಕಣ್ಣಿಗೇ ಕಾಣದಂತೆ ಅದೃಶ್ಯವಾಗುತ್ತವೆ. ನೋವು ಸಹಿಸಲಾರದಷ್ಟಾದಾಗ
ಅಳು, ಚೇರಾಟಗಳು ಕೂಡ ಕೇಳುವುದಿಲ್ಲ. ಅಳು ಕೂಡ ಬೇಸಗೆ ಮಳೆಯಂತೆ
ಸುರಿಯುತ್ತದೆ.
*****
ಮೂಲ: ಬೆರ್ಟಾಲ್ಟ್ ಬ್ರೆಖ್ಟ್ / Bertolt Brecht