ಚಿವೂ ಚಿವೂ ಚಿವೂ ಆಹಾ…
ಎಂಥ ಮಧುರ ಧ್ವನಿಯಿದು!
ಬರುತಲಿಹುದು ಯಾವ ಕಡೆಯೋ
ಕೇಳಲೆನಿತು ತನಿಯಿದು!
ರಾಗ ತಾಳ ಲಯಕೆ ಬೆಸೆದ
ನಿನ್ನ ಗಾನ ಸೊಗಸಿದೆ
ತಾಳವಿಲ್ಲ ತಬಲವಿಲ್ಲ
ಅದರದರ ಲಿಂಪಿದೆ ||
ಹೂವು ಎಲೆಯ ಮರೆಯ ತಾಣ
ನಿನ್ನ ಅರಮನೆ ಏನೆ?
ಸುತ್ತಿ ಸುಳಿವು ದುಂಬಿಸಾಲು
ಸಭಿಕರೇನೆ, ಹೇಳೆ ಚಂದನೆ? ||
ಕತ್ತನೆತ್ತಿ ಒಮ್ಮೆ ನೋಡು
ಬರುತಲಿಹ ವಸಂತನು
ನಿನ್ನ ಮಧುರ ಹಾಡು ಕೇಳಿ
ನಲಿಯಲೆಂದು ಬರುವನು ||
ಲಜ್ಜೆ ಏಕೆ ನಿನಗೆ ಹಕ್ಕಿ
ಒಮ್ಮೆ ಮೊಗವ ತೋರುತ
ಎದುರು ಬಂದು ಒಮ್ಮೆ ಹಾಡು
ಹೆಮ್ಮೆ ಪಡುವೆ ಕೇಳುತ ||
*****