ಯಾವುದು ಇಲ್ಲವೆಂದು ನಾನು ಕೂಗಿದ್ದು?
ಪಬ್ಲಿಕ್ಕಾಗಿ ಕೂಗಿ, ರಣಾರಣ ರೇಗಿ
ಎಲ್ಲರೆದುರು ಬೀಗಿದ್ದು?
“ನನ್ನ ಬುದ್ಧಿ ನನ್ನ ಉತ್ತರ ಮುಖಿ,
ಅಳೆದ ಸತ್ಯ ದಡ ದೂರದ ಮುಳುಗು ತತ್ವವಾದರೂ ಸರಿ
ಅದರಲ್ಲೇ ಪೂರ್ತಿ ಸುಖಿ,
ನೋವಿಗೊಂದು ರಕ್ಷಯೆಂದು ನಂಬಿ ಬಾಳಲೇ” ಎಂದು
ಯಾಕಾಗಿ ನಂಬುವವರನ್ನು ಗುದ್ದಿ ಬಂದದ್ದು?
ತರ್ಕದಲ್ಲಿ ನೆಲ ಹೊರಳಿಸುತ್ತೇನೆ,
ಹೂವರಳಿಸುತ್ತೇನೆ
ನದಿ ಮರಳಿಸುತ್ತೇನೆ
ಏನು ಅಂಕೆ ತಪ್ಪಿತಾ ಎಲ್ಲ?” –
ಎಂದು ಅಬ್ಬರಿಸಿ ಮಲಗಿದ್ದು?
ನಡುರಾತ್ರಿ ಏನೋ ಮಂಪರ
ದೀಪಕಚ್ಚಿದ ರೂಮಿನಲ್ಲಿ ಕಿರಿಬೆಳಕಿನೆಚ್ಚರ;
ಸುತ್ತ ನೀರು
ನಡುಗಡ್ಡೆ ಮನೆ
ತಳಸೇರಿದ್ದ ದೆವ್ವಭೂತ ಏಣಿಹತ್ತುವ ಶಬ್ದ
ಕಿಲಕಿಲಲಹೋ ಕೇಕೆ
ಮೂಳೆ ಕೈ ಕಾಲುಗಳ ತಾಳಲಯದಲ್ಲಿ ತೂಗಿ
ಸದ್ಯಕ್ಕೇ ಬಂದುವು;
ಎದೆ ಕಲ್ಲುಮಾಡಿ
‘ಗೊತ್ತು ಹೋಗಿ ಪ್ರಾಚೀನಗಳೆ’ ಎಂದು ನಕ್ಕೆ
ಬಂದವರು
‘ಬಂದಿದ್ದೇವೆ ನಾವು
ಪಿತಾಮಹರು’ – ಎಂದರು.
ತಿಥಿ ಮಾಡಿದ್ದೇನೆ
ಜನಿವಾರ ಎಡಕ್ಕೆ ಹಾಕಿ ಸ್ತುತಿಮಾಡಿದ್ದೇನೆ. ಆದರೂ
ಮುಖದಲ್ಲಿ ನೀರೊಡೆಯುವ ದೈನ್ಯ
‘ಇಟ್ಟುಕೋ’ ಎಂದು ಕರುಳಬಳ್ಳಿಯಲ್ಲಿ ಬರೆದರು.
ತರ್ಕಶಾಸ್ತ್ರ ತೋರಿಸಿ
‘ಯಾಕೆ ಕಾಡುತ್ತೀರಿ ಹೀಗೆ? ಎಲ್ಲಿದೆ ಶ್ರದ್ದೆ?
ಗುಣಾಕಾರ ತಿಳಿಯದ? ಮನೆ ಬಿಡಿ’ ಎಂದು
ಅಟ್ಟಿ ಅಗುಳಿ ಹಾಕಿದೆ.
ಅಂತೂ ಸಾಲ ತೀರಿತೋ ಸದ್ಯಕ್ಕೆ?
ಈಗ ನಾನೇ ಪಾಯ
ನಾನೇ ಕಂಬ
ನಾನೇ ಶಿಖರ
ಸಾಗಲಿ ಎಂದೆನೋ-
ದೀಪದ ಕೊಚ್ಚೆಬೆಳಕು ಫಳಾರನೆ ಮಿಂಚಿ
ಎದುರಿನ ಕನ್ನಡಿಯಲ್ಲಿ ಚಿತ್ರ ಉರಿದವು.
ಸೃಷ್ಟಿ-ಪ್ರಳಯ
ಪ್ರಪಂಚದ ಮರಗಳೆಲ್ಲ ಮತ್ತೆ ಮತ್ತೆ ಒಣಗಿ ಚಿಗುರಿದವು
ಪಕ್ಷಿಲೋಕ ಹುಟ್ಟಿ ಸತ್ತು ಹುಟ್ಟಿ ಸತ್ತು ಹುಟ್ಟಿ
ಪ್ರಾಣಿಗಳೆಲ್ಲ ಒಡಲು ಮಗುಚಿದವು
ಎದ್ದು ಅರಚಿದವು.
ನಾಟಿ ಕೊಯಿಲು ಭೇಟಿಯಾಗಿ
ಕೈಕೈ ಹಿಡಿದು
ಕಣ್ಣು ಹೊಡೆದು
ನನ್ನ ಕಡೆ ತಿರುಗಿ ಕೇಳಿದವು
‘ಹೌದಾ, ಎಲ್ಲ ಗುಣಾಕಾರವಾ?’
ಸಮುದ್ರ ತರೆ ತರೆಗೂ ಬಾಯಿ ತೆರೆದು
ಒಡಲೊಳಗಿನ ಅಗಾಧಲೋಕ ಮೈ ಮುರಿದು
ಮಂದರದಂಥ ದನಿ ಮೇಲೆದ್ದು ಅಬ್ಬರಿಸಿತು
‘ಹೌದಾ, ಎಲ್ಲ ಗುಣಾಕಾರವಾ’?
ಗ್ರಹಗಳೆಲ್ಲ ಗತಿಗೆಟ್ಟು ಹಾಯುತ್ತ
ನಕ್ಷತ್ರ ಗಂಗೆಗಳು ಭೀಕರವಾಗಿ ತೂಗುತ್ತ
ಪರ್‍ವತ ಕಕ್ಕಿದ ಉರಿಹೊಳೆ ದಿಕ್ಕು ದಿಕ್ಕಿಂದ ಹರಿದು
ಕಾಲ ಬಳಿಗೆ ಬಂದು ಮೊರೆಯುವ ಮೊದಲೇ
ಚೀರಿ ಎದ್ದು ಓಡಿದೆ,
ಗೂಡೆಲ್ಲ ಕೆದಕಾಡಿ
ಹಾಳು ಸ್ಕೇಲನ್ನು ತಂದು
ನೀರೊಲೆಗೆ ಹಾಕಿದೆ.
*****