ಜನ ಪೆಟ್ಟಿಗೆ ಸಾಮಾನು ಸರಂಜಾಮುಗಳೊಂದಿಗೆ ಗೇಟಿನತ್ತ ಧಾವಿಸುತ್ತಿದ್ದಂತೆ ಗಾಳಿ ಮಳೆ ಹೊಡೆಯುವುದಕ್ಕೆ ಶುರುವಾಯಿತು. ದೊಡ್ಡ ದೊಡ್ಡ ಮಳೆಯ ಹನಿಗಳು ಸ್ಟೇಷನ್ನಿನ ಹಂಚಿನ ಮಾಡಿನ ಮೇಲೆ ಬಿದ್ದು ಶಬ್ದ ಮಾಡಿದವು. ಹೊರಗೆ ಕಾದಿದ್ದ ಟ್ಯಾಕ್ಸಿ ಟಾಂಗಾಗಳು ಪ್ರಯಾಣಿಕರನ್ನು ಹೊತ್ತುಕೊಂಡು ಹೊರಟುಹೋದುವು. ಜನರೊಂದಿಗೆ ನಾಯಕ ತನ್ನ ಭಾರವಾದ ಸೂಟ್ ಕೇಸನ್ನು ಕೈಯಲ್ಲಿ ತೂಗಿಕೊಂಡು ಹೊರಬಾಗಿಲಿಗೆ ಬಂದು ನಿಂತ. ಈ ಧಾರಾಕಾರವಾದ ಮಳೆ ಸ್ವಲ್ಪವಾದರೂ ನಿಲ್ಲದೆ ಪೇಟೆ ಕಡೆ ಹೋಗುವುದು ಸಾಧ್ಯವಿರಲಿಲ್ಲ. ಅನಿರೀಕ್ಷಿತ ಮಳೆ, ವಾಹನಗಳೂ ಎಲ್ಲ ಹೊರಟುಹೋಗಿದ್ದವು. ಕ್ರಮೇಣ ಕತ್ತಲಾಗುತ್ತಿರುವಂತೆ ಕಂಡುಬಂತು.
ಅಷ್ಟರಲ್ಲಿ ಅವನ ಸುತ್ತ ಕೂಲಿ ಹುಡುಗರು ಸೇರಿದರು, “ಸಾರ್, ಸೂಟ್ ಕೇಸೆ ಇಲ್ಲಿ ಕೊಡಿ ಸಾರ್, ನೀವು ಹೇಳಿದಲ್ಲಿಗೆ ಹೊತ್ತು ತರುತ್ತೇನೆ.” ಎಂದು ರಂಪಾಟ.
“ಇಲ್ಲಿಂದ ಟೌನ್ ಎಷ್ಟು ದೂರ? ” ಎಂದು ನಾಯಕ ಕೇಳಿದ. ಒಬ್ಬ “ಎರಡು ಮೈಲಿ ಸಾರ್” ಎಂದು ಹೇಳುವಷ್ಟರಲ್ಲಿ ಇನ್ನೊಬ್ಬ “ಬರೇ ಒಂದು ಮೈಲಿ ಸಾರ್, ನಾನು ಬರ್ತೇನೆ ಸಾರ್” ಎಂದ. ಕೂಲಿಗಳು ಪೇಟೆಯ ನಿಜವಾದ ದೂರದ ಕುರಿತಾಗಿ ವಾಗ್ವಾದ ಮಾಡಲು ತೊಡಗಿದರು.
ಇವರ ಚರ್ಚೆ ಮುಕ್ತಾಯಗೊಳ್ಳುವುದಕ್ಕೆ ಕಾಯದೆ ನಾಯಕ ಸೂಟ್ ಕೇಸನ್ನು ಹಿಡಿದುಕೊಂಡು ಪ್ಲಾಟ್ ಫ಼ಾರಂಗೆ ಹಿಂದಿರುಗಿದ. ಮೇಲು ಗಾಡಿ ಬರುವಾಗ ಇದ್ದ ಸಡಗರ ಈಗ ಮಾಯವಾಗಿ, ಸ್ಟೇಷನ್ನು ನಿರ್ಜನವಾದಂತೆ ಕಂಡಿತು, ಅತ್ತಿತ್ತ ಸುತ್ತಾಡುತ್ತಿರುವಾಗ ಒಂದು ಕೊನೆಯಲ್ಲಿ ಚಹಾದ ಅಂಗಡಿಯೊಂದು ಕಾಣಿಸಿತು. ನಾಯಕ ಅಲ್ಲಿಗೆ ಹೋಗಿ, ಕೆಟಲ್ ಹೊಗೆಯಾಡುತ್ತಿರುವುದನ್ನು ಗಮನಿಸಿ, ಒಂದು ಚಹಾ ಕೇಳಿದ. ಬೀಡಿ ಸೇದುತ್ತ ಕುಳಿತಿದ್ದ ವ್ಯಕ್ತಿ ಒಡನೆಯೇ ಯಂತ್ರದಂತೆದ್ದು ಚಹಾ ಸಿದ್ಧಮಾಡಿಕೊಟ್ಟಿತು. ಕುಡಿಯುತ್ತ ನಾಯಕ, “ಇಲ್ಲಿಂದ ಟೌನ್ ಎಷ್ಟು ದೂರ?” ಎಂದು ಕೇಳಿದ. ಆದರೆ ಚಹಾದವನು ಮಾತಿನ ಮೂಡಿನಲ್ಲಿದ್ದಂತೆ ತೋರಲಿಲ್ಲ. “ಸ್ವಲ್ಪ ದೂರ ಅದೆ” ಎಂದು ಆತ ನಿರ್ವಿಕಾರ ಚಿತ್ತದಿಂದ ಉತ್ತರಿಸುವಾಗ ನಾಯಕನಿಗೆ ಮತ್ತೆ ಕೇಳಬೇಕೆಂದೆನಿಸಲಿಲ್ಲ.
ಸಿಮೆಂಟಿನ ಸೋಫಾದ ಮೇಲೆ ಕುಳಿತು ಸಿಗರೇಟು ಸೇದತೊಡಗಿದ. ಮಳೆ ಮೆಲ್ಲ ಮೆಲ್ಲಗೆ ಸಣ್ಣದಾಗುತ್ತಿದ್ದರೂ ಬೇಗನೆ ನಿಲ್ಲುವಂತೆ ಕಾಣಲಿಲ್ಲ. ಥಂಡಿಗಾಳಿ ಬೀಸುತ್ತಿತ್ತು. ಹೇಗಿದ್ದರೂ ಹಚ್ಚಿದ ಸಿಗರೇಟು ಸೇದಿ ಮುಗಿದ ಕೊಡಲೆ ಹೊರಟುಬಿಡುವುದೆಂಬ ನಿರ್ಧಾರಕ್ಕೆ ಬಂದ. ಕತ್ತಲಾಗುವ ಮೊದಲೆ ಪ್ರೊಫ಼ೆಸರರ ಮನೆ ಕಂಡು ಹುಡುಕಬೇಕಾಗಿತ್ತು. ಕತ್ತಲಾದರೆ ಅದು ಮತ್ತೆ ಸ್ವಲ್ಪ ಕಷ್ಟದ ಸಂಗತಿ.
ಕೊನೆಗೂ ಸ್ಟೇಷನ್ನಿನಿಂದ ಹೊರಟಾಗ ಬೀದಿ ದೀಪಗಳು ಉರಿಯುತ್ತಿದ್ದವು. ಕೂಲಿಯವರನ್ನು ನಿರಾಕರಿಸಿ ಸೂಟ್ ಕೇಸನ್ನು ತಾನೆ ಎತ್ತಿಕೊಂಡು ಹೊರಟ. ಹನಿಮಳೆ ಬೀಳುತ್ತಲೇ ಇತ್ತು. ಗಾಳಿ ಬೇರೆ ಇದ್ದುದರಿಂದ ಮೈಯೆಲ್ಲ ಬಹುಬೇಗ ಒದ್ದೆ ಯಾಯಿತು. ಅಪರಿಚಿತವಾದ ಮಾರ್ಗ, ಅಪರಿಚಿತ ಜನರು, ಆದರೆ ಒಮ್ಮೆ ಪೇಟೆ ಮುಟ್ಟಿದರೆ ಮತ್ತೆ ಸುಲಭವಾಗಬಹುದು. ಸೂಟ್ ಕೇಸಿನ ಭಾರ ಮಾತ್ರ ಕ್ಷಣಕ್ಷಣಕ್ಕೆ ಹೆಚ್ಚಾಗುತ್ತಿರುವಂತೆ ತೋರುತ್ತಿತ್ತು. ಅಂಗೈ ನೋಯುತ್ತಿತ್ತು. ಎರಡೂ ಕೈಗಳ ನಡುವೆ ಅತ್ತಿತ್ತ ರವಾನಿಸತೊಡಗಿದ. ಎರಡೂ ಕೈಗಳೂ ಸೋತಾಗ ಹೆಗಲಿಗೇರಿಸಿದ.
ನಡೆಯುತ್ತಾ ನಡೆಯುತ್ತಾ ಪೇಟಿಯ ದೀಪಗಳು ದೂರದಲ್ಲಿ ಕಾಣಿಸಿದವು. ಪೇಟೆ ತಲುಪಬೇಕಾದರೆ ಇನ್ನೂ ನಡೆಯಬೇಕಾಯಿತು. ಕೊನೆಗೆ ಪೇಟೆಯ ಕವಲು ದಾರಿಗಳಿಗೆ ಬಂದು ಸೇರಿದಾಗ ಸ್ವಲ್ಪ ಹಾಯೆನಿಸಿತು. ಒದ್ದೆ ಮೈ ಕೂಡ ಈಗ ಬೆವರುತ್ತಿತ್ತು. ಕವಲು ದಾರಿಗಳಿಗೆ ಬಂದ ಮೇಲೆ ಮುಂದಿನ ದಾರಿ ಗುರುತು ಕೇಳಿ ತಿಳಿದು ಕೊಳ್ಳುವ ಅಗತ್ಯವಿತ್ತು. ಮೊದಲಿಗೆ ಅವನು ರೆಂಟ್ ಸ್ಟ್ರೀಟ್ ಕಂಡುಕೊಳ್ಳಬೇಕಿತ್ತು. ಆಮೇಲೆ ಎಲ್ಲವೂ ಸುಲಭ. ರೆಂಟ್ ಸ್ಟ್ರೀಟ್ ನ ಮೂರನೇ ಕ್ರಾಸಿನಲ್ಲಿ ಎಡಕ್ಕೆ ತಿರುಗಿದರೆ ಮಸೀದಿಯಿಂದ ಐದನೆ ಮನೆ. ವಿಳಾಸ ಸುಲಭವಾಗಿತ್ತು. ಬದಿಯಲ್ಲಿದ್ದ ಒಂದು ಬೀಡಾಬೀಡಿ ಅಂಗಡಿಗೆ ಹೋಗಿ ನಾಯಕ ಒಂದು ಪ್ಯಾಕ್ ಸಿಗರೇಟು ಕೊಂಡುಕೊಂಡ, ಆಮೇಲೆ ” ಇಲ್ಲಿ ರೆಂಟ್ ಸ್ಟ್ರೀಟ್ ಎಲ್ಲಿದೆ?” ಎಂದು ಕೇಳಿದ. ಅಂಗಡಿಯವ ತುಸು ಆಶ್ಚರ್ಯದಿಂದ, “ರೆಂಟ್ ಸ್ಟ್ರೀಟೇ? ರೆಂಟ್ ಸ್ಟ್ರೀಟ್ ಎಲ್ಲಿದೆ? ನೋಡಿ ಸ್ವಾಮಿ, ನಾನಿಲ್ಲಿ ಅಂಗಡಿಯಿಟ್ಟು ಹತ್ತು ವರ್ಷಗಳಾಗುತ್ತ ಬಂದವು. ಅದಕ್ಕೆ ಮೊದಲು ಪಿ.ಡಬ್ಲ್ಯೂ.ಡಿ ಯಲ್ಲಿ ಕೆಲಸಕ್ಕಿದ್ದೆ. ರೋಡಿನ ಕೆಲಸ. ಆರೋಗ್ಯ ಕೆಟ್ಟಿತು. ಗುಡ್ಡಲಿ ಕೆಲಸ ಮಾಡಿದರೆ ಸತ್ತುಹೋಗುತ್ತಿಯಾ ಎಂತ ಡಾಕ್ಟರು ಹೇಳಿದರು. ಸಾಯುವುದಕ್ಕೆ ಯಾರಿಗೆ ಮನಸ್ಸಿದೆ ಹೇಳಿ? ಹಾಗೆ ಒಂದಷ್ಟು ಕಡ ಮಾಡಿ ಈ ಅಂಗಡಿ ಇಟ್ಟೆ. ಆದ್ದರಿಂದ ಇನ್ನೂ ಬದುಕಿದ್ದೇನೆಂತ ಕಾಣುತ್ತದೆ. ಅಂದರೆ ಇಲ್ಲಿನ ಒಂದೊಂದು ಬೀದಿಯೂ ನನಗೆ ಗೊತ್ತು. ಪಿ.ಡಬ್ಲ್ಯೂ.ಡಿ. ಯಲ್ಲಿ ಹನ್ನೆರಡು ವರ್ಷ ದುಡಿದೆ ನೋಡಿ. ಆದರೂ ರೆಂಟ್ ಸ್ಟ್ರೀಟ್ ಅಂತ ಒಂದು ಸ್ಟ್ರೀಟ್ ನಾನು ಕೇಳಿಲ್ಲ. ಅದು ಹೊಸ ಹೆಸರಾಗಿದ್ದರೂ ಇರಬಹುದು. ರೆಂಟ್ ಸ್ಟ್ರೀಟ್ ಅಂತ ಒಂದು ಸ್ಟ್ರೀಟ್ ನಾನು ಕೇಳಿಲ್ಲ. ಅದು ಹೊಸ ಹೆಸರಾಗಿದ್ದರೂ ಇರಬಹುದು. ರೆಂಟ್ ಸ್ಟ್ರೀಟಿನಲ್ಲಿ ನಿಮಗೆ ಯಾರನ್ನು ಕಾಣ ಬೇಕಿತ್ತೋ?” ಎಂದು ಕೇಳಿದ.
“ಪ್ರೊಫ಼ೆಸರ್ ಮಾಗಡಿಯವರನ್ನು ಕಾಣಬೇಕಿತ್ತು.”
“ಓಹೋ! ಪ್ರೊಫ಼ೆಸರರನ್ನೋ? ನನಗವರ ಪರಿಚಯವಿಲ್ಲ ಬಿಡಿ.”, ಎಂದು ಆತ ನಕ್ಕ. ಆಮೇಲೆ ವಿವರಿಸಿದ.
“ಆದರೂ ಈ ಕಾಲೇಜು ಲೆಕ್ಚರರು ಪ್ರೊಫ಼ೆಸರರ ಜಾತಿ ಎಂಥದ್ದೆಂದು ನನಗೆ ಗೊತ್ತು ಸ್ವಾಮಿ. ಉದಾಹರಣೆಗೆ ಹೇಳ್ತೀನಿ. ಇಲ್ಲಿ ಕಾಲೇಜಿನಲ್ಲೊಬ್ಬ ಪ್ರೊಫ಼ೆಸರರು – ಅವರ ಹೆಸರು ಬೇಡ – ದಿನಾ ಬೆಳಗ್ಗೆ ಒಂದೋ ಎರಡೋ ಪ್ಯಾಕೇಟು ಸಿಗರೇಟು, ಬೀಡಾ, ಇತ್ಯಾದಿ ಕೊಳ್ಳುತ್ತಿದ್ದರು, ದುಡ್ಡು ಯಾವಾಗಾದರೊಮ್ಮೆ ಒಟ್ಟಿಗೆ ಕೊಡುವ ಪದ್ಧತಿ, ಈಗ್ಗೆ ನಾಲ್ಕು ತಿಂಗಳು ಗಳಿಂದ ದುಡ್ಡು ಬರಬೇಕು. ದೊಡ್ಡ ಜನ, ಕೊಡ್ತಾರೆ ಅಂತ ನಾನು ಕೇಳಲೂ ಇಲ್ಲ. ಒಂದು ವಾರದ ಕೆಳಗೆ ತಿಳೀತು ಅವರು ವರ್ಗವಾಗಿ ಹೋಗಿದ್ದಾರೆ ಅಂತ. ರೂಪಾಯಿ ಪ್ರಶ್ನೆ ಅಲ್ಲ, ವಿಶ್ವಾಸದ ಪ್ರಶ್ನೆ.”
ನಾಯಕ ಅನುಕಂಪದ ನಗೆ ಸೂಸಿ ಅಲ್ಲಿಂದ ಹೊರಟ. ರೆಂಟ್ ಸ್ಟ್ರೀಟ್ ಕಂಡು ಹುಡುಕುವ ಬಗೆ ಹೇಗೆಂದು ಚಿಂತಿಸಿದ. ಅಂಗಡಿಯವನ ಪ್ರಕಾರ ಇಂಥದೊಂದು ಸ್ಥಳವೇ ಇಲ್ಲ. ಆದರೆ ಇದೀಗ ಹೊಸ ಹೆಸರಾಗಿರಬಹುದಾದ್ದ ರಿಂದ ಬೇರೆಯವರನ್ನು ಕೇಳುವುದು ಅಗತ್ಯ. ಸ್ವಲ್ಪ ಮುಂದೆ ನಡೆದಾಗ ನಿಯೋನ್ ಲೈಟಿನಲ್ಲಿ ಜಗಜಗಿಸುವ ಒಂದು ಹೊಟೇಲು ಕಾಣಿಸಿತು. ಇಲ್ಲಿ ಸ್ವಲ್ಪ ಚಹಾ ಕುಡಿಯಬಹುದು. ಸ್ಟ್ರೀಟ್ ನ ಪತ್ತೆ ಕೇಳಬಹುದು ಎಂದುಕೊಂಡು ಹೊಟೇಲಿಗೆ ನುಗ್ಗಿದೆ.
ಚಹಾ ಕುಡಿದ ಮೇಲೆ ಕ್ಯಾಶಿಯರನೊಂದಿಗೆ ತಾನು ಬಂದ ಮುಖ್ಯ ವಿಚಾರ ಪ್ರಸ್ತಾಪ ಮಾಡಿದ. ಕ್ಯಾಶಿಯರ್ ಒಳ್ಳೆ ವ್ಯಕ್ತಿ ಯಂತೆ ಕಾಣುತ್ತಿದ್ದ. ಕಾರಣ ಅವನು ಪ್ರಸನ್ನವದನನಾಗಿದ್ದ. ಬಹುಶಃ ಅವನ ವ್ಯಾಪಾರ ಚೆನ್ನಾಗಿ ನಡೆಯುತ್ತಿರಬಹುದು. ರೆಂಟ್ ಸ್ಟ್ರೀಟಿನ ಕುರಿತು ಅನ್ವೇಷಿಸಿದೊಡನೆ ಅವನು ತುಸು ಆಶ್ಚರ್ಯದಿಂದ ಒಂದು ಕ್ಷಣ ಯೋಚಿಸಿ, ಅಂಥದೊಂದು ಸ್ಟ್ರೀಟ್ ಇಲ್ಲಿಲ್ಲ. ನೀವು ಬಹುಶಃ ಕೆಂಟ್ ಸ್ಟ್ರೀಟಿನ ಕುರಿತು ಅನ್ವೇಷಿಸುತ್ತಿರಬಹುದು.” ಎಂದ. ನಾಯಕ ತನ್ನ ಜೇಬಿನಿಂದ ಪ್ರೊಫ಼ೆಸರ್ ಮಾಗಡಿ ಯವರ ಪತ್ರ ತೆಗೆದು ಅದರ ಮೇಲೆ ನಮೂದಿಸಿದ್ದ ವಿಳಾಸವನ್ನು ಮತ್ತೊಮ್ಮೆ ಓದಿದ. ಇಂಗ್ಲೀಷಿನಲ್ಲಿ ಸ್ಪಷ್ಟವಾಗಿ ರೆಂಟ್ ಎಂದೇ ಬರೆದಿತ್ತು. ಆದರೆ ಪ್ರೊಫ಼ೆಸರ್ ಮಾಗಡಿ ಯವರಿಗೆ ಕೈತಪ್ಪು ಬಂದದ್ದಿರಬಹುದು. ಕಾರಣ : ಇಲ್ಲದ ಒಂದು ಸ್ಟ್ರೀಟಿನ ಹೆಸರನ್ನು ಅವರು ಕೊಡಬೇಕಾದ್ದಿಲ್ಲ. ಆದ್ದರಿಂದ ಇಲ್ಲದ ಒಂದು ಸ್ಟ್ರೀಟನ್ನು ಕಂಡು ಹುಡುಕಲು ಪ್ರಯತ್ನಿಸುವುದರಲ್ಲಿ ಅರ್ಥವಿಲ್ಲವೆಂದೆನಿಸಿ ನಾಯಕ. “ನನಗೆ ತಪ್ಪಿರಲೂಬಹುದು. ಕೆಂಟ್ ಸ್ಟ್ರೀಟ್ ಹಾಗಾದರೆ ಎಲ್ಲಿದೆ?” ಎಂದು ಕೇಳಿದ.
“ಕೆಂಟ್ ಸ್ಟ್ರೀಟ್ ಇಲ್ಲಿ ಎಲ್ಲರಿಗೂ ಗೊತ್ತು. ಅದನ್ನು ಪತ್ತೆ ಹಚ್ಚುವುದು ಪ್ರಯಾಸದ ಕೆಲಸವಲ್ಲ. ನೀವು ಇದೇ ಬೀದಿಯಲ್ಲಿ ಮುಂದುವರಿದರೆ ಮೊದಲು ನಿಮಗೆ ಎಂಪಯರ್ ಸರ್ಕಲ್ ಸಿಗುವುದು. ಈ ಸರ್ಕಲ್ ನ ನಡುವೆ ಸಣ್ಣದೊಂದು ಪಾರ್ಕು, ಕಾರಂಜಿ ಇತ್ಯಾದಿ ಇವೆ. ಇಲ್ಲಿ ನಿಲ್ಲದೆ ನೀವು ಇನ್ನೂ ಮುಂದಕ್ಕೆ ಹೋದರೆ ಕೆಲವೇ ಸೆಕೆಂಡುಗಳಲ್ಲಿ ಮಹಾತ್ಮಾ ಗಾಂಧಿ ಸರ್ಕಲ್ ಸಿಗುವುದು. ಈ ಸರ್ಕಲಿನ ನಡುವೆ ಗಾಂಧಿ ಪ್ರತಿಮೆಯಿದೆ. ಗಾಂಧಿ ಪ್ರತಿಮೆ ಪೂರ್ವಕ್ಕೆ ಮುಖ ಮಾಡಿದೆ. ಆದರೆ ಪೂರ್ವಕ್ಕೆ ಹೋಗಬೇಡಿ. ಗಾಂಧಿಯ ಬಲಕ್ಕೆ ತಿರುಗಿದರೆ ಸಿಟಿಮಾರ್ಕೆಟ್ಟು ಸಿಗುವುದು ನೀವು ಈ ದಿಕ್ಕಿನಲ್ಲೂ ಹೋಗುವ ಅಗತ್ಯವಿಲ್ಲ. ಏಕೆಂದರೆ ಕೆಂಟ್ ಸ್ಟ್ರೀಟ್ ಅದರ ವಿರುದ್ಧ ದಿಕ್ಕಿನಲ್ಲಿ ಎಂದರೆ ಗಾಂಧಿಯ ಎಡಕ್ಕೆ ಇರುವುದು, ಎಡಕ್ಕೆ ತಿರುಗಿ ಸುಮಾರೆಂದರೆ ಎರಡು ಫ಼ರ್ಲಾಂಗು ದೂರ ಹೋದಾಗ ಅಶೋಕ ಸಿನಿಮಾ ಥಿಯೇಟರು ಸಿಗುವುದು. ಇದರೊತ್ತಿಗೆ ಇರುವುದೇ ಕೆಂಟ್ ಸ್ಟ್ರೀಟ್.”
ಕ್ಯಾಶಿಯರನ ವಿವರಣೆಯನ್ನು ಗಮನದಲ್ಲಿಟ್ಟು ಕೇಳಿದ. ಆಮೇಲೆ ಥ್ಯಾಂಕ್ಸ್ ಹೇಳಿ ಹೊರಬಂದ. ಸ್ವಲ್ಪ ದೂರ ನಡೆದ ಮೇಲೆ ಅನ್ನಿಸಿತು. ಪ್ರೊಫ಼ೆಸರ್ ಮಾಗಡಿ ಯವರ ವಿಚಾರ ಇವನಲ್ಲಿ ಕೇಳಬಹುದಿತ್ತು ಎಂದು. ಆದರೆ ಈಗಗಲೆ ಮುಂದೆ ನಡೆದಾಗಿತ್ತು. ಎಂಪಯರ್ ಸರ್ಕಲಿನ ವಿವರಣೆಗೆ ಸರಿಹೊಂದುವ ಸರ್ಕಲ್ ಬಂತು. ಅದನ್ನು ಹಾದು ಹಾದು ಮುಂದುವರಿದ. ಪೇವ್ ಮೆಂಟಿನ ಮೇಲೆ ಮೂಗಿಗೆ ನೇರ ನಡೆಯುತ್ತ ಹೋಗುತ್ತಿದ್ದರೂ ಸುತ್ತಲೂ ಗಮನವಿರಿಸಬೇಕಿತ್ತು. ಕಾಂಕ್ರೀಟಿನ ಚಪ್ಪಡಿ ಗಳು ಈತ ಕಾಲಿಡುತ್ತಿದ್ದಂತೆಯೇ ಶಬ್ದ ಮಾಡುತ್ತಿದ್ದವು. ಕೆಳಗೆ ಚರಂಡಿಯಿರಬೇಕು. ಅದ್ದರಿಂದ ಜಾಗರೂಕತೆಯಿಂದ ನಡೆಯಬೇಕಾಯಿತು. ತುಂತುರು ಮಳಿಯಿಂದಾಗಿ ವಿದ್ಯುದ್ದೀಪಗಳ ಬೆಳಕಿನಲ್ಲಿ ಒಂದು ಮಸಕು ವಾತಾವರಣ ಏರ್ಪಟ್ಟುಕೊಂಡಿತ್ತು. ಆಗಾಗ ಹಾದುಹೋಗುತ್ತಿದ್ದ ವಾಹನಗಳ ಬೆಳಕುಗಳು ಬೇರೆ. ನಾಯಕನಿಗೆ ಇದರಿಂದಾಗಿ ನಗರದ ಸ್ವರೂಪ ಸ್ಪಷ್ಟವಾಗಿಲಿಲ್ಲ. ಇದೆಲ್ಲಕ್ಕೆ ಹಿಮ್ಮೇಳವಾಗಿ ಅಸ್ಪಷ್ಟವಾದ ಸಾವಿರ ಧ್ವನಿಗಳ ಗಲಾಟೆ ಬೇರೆ.
ಹೀಗೆ ನಡೆಯುತ್ತಿದ್ದಂತೆ ಮಾರ್ಗಗಳ ಮಧ್ಯೆ ಒಂದು ಚಿಕ್ಕ ಸರ್ಕಲಿನಲ್ಲಿ ಗಾಂಧಿ ಪ್ರತಿಮೆ ಕಂಡಿತು. ಅಥವ ಆ ಪ್ರತಿಮೆ ಗಾಂಧಿಯದಾಗಿರಬೇಕೆಂದು ತಾನು ಊಹಿಸಿದ್ದು. ಸರ್ಕಲಿನ ಬದಿಯಲ್ಲಿರಿಸಿದ್ದ ವಿದ್ಯುದ್ದೀಪದ ಬುರುಡೆಯೊಂದು ಸುತ್ತಮುತ್ತ ಸಾಕಷ್ಟು ಬೆಳಕು ಚೆಲ್ಲಿತ್ತು. ನಾಯಕ ಅಲ್ಲಿ ನಿಂತು ಪ್ರತಿಮೆಯ ಗುರುತು ಹಿಡಿಯುವುದಕ್ಕೆ ಶ್ರಮಿಸಿದ. ಬಸ್ಟ್ ಮಾದರಿಯ ಪ್ರತಿಮೆ ಅದು. ಬಹಳ ಹಿಂದೆ ನಿಲ್ಲಿಸಿದ್ದಾಗಿರಬೇಕು, ಸವೆದು ಹೋಗುತ್ತಿರುವಂತೆ ಕಾಣುತ್ತಿತ್ತು. ಪ್ರತ್ಯೇಕವಾದ ಯಾವ ಬಣ್ಣವೂ ಅದಕ್ಕೆ ಇದ್ದಂತ ತೋರಲಿಲ್ಲ. ಗಾಂಧಿ ನಿಜಕ್ಕೂ ಹೇಗಿದ್ದರು ಎಂಬುದು ನಾಯಕನಿಗೆ ತಿಳಿಯದು. ಮಳೆಯ ದೆಸೆಯಿಂದ ಪ್ರತಿಮೆ ತೊಯ್ದು ಹೋಗಿತ್ತಲ್ಲದೆ ಬೆಳಕು ಅದರ ಮೇಲೆ ಅಲ್ಲಲ್ಲಿ ಪ್ರತಿಫಲಿಸುತ್ತಿತ್ತು. ಇದರಿಂದಾಗಿ ಪ್ರತಿಮೆಯ ನಿಜಸ್ವರೂಪ ತಿಳಿಯುವುದೇ ಕಷ್ಟವಾಗಿತ್ತು. ಹೀಗೆ ಸಂಶಯ ಬಂದು, ಸಂಶಯ ನಿವಾರಣೆಗಾಗಿ, ಬದಿಯಲ್ಲಿ ಸಾಗುತ್ತಿದ್ದ ವ್ಯಕ್ತಿಯನ್ನು ತಡೆದು.
“ಇದು ಯಾರ ಪ್ರತಿಮೆ ಹೇಳಬಹುದೆ?” ಎಂದು ಕೇಳಿದ.
ಅದಕ್ಕವನು, “ನಿಮ್ಮದಾಗಿರಲಾರದು. ನನ್ನದಂತೂ ಅಲ್ಲ. ಎಂದ ಮೇಲೆ ಬೇರೊಬ್ಬನದ್ದಾಗಿರಬೇಕು. ಬೇರೊಬ್ಬ ಯಾರು?” ಎಂದು ದುರುಗುಟ್ಟಿ ನೋಡಿ, ನಿಲ್ಲದೆ ಹೋದ.
ನಾಯಕನಿಗೆ ವ್ಯಥೆಯಾಯಿತು. ಮುಖ್ಯ ತಾನು ಕೇಳಿದ ಪ್ರಶ್ನೆಯ ರಚನೆ ಸರಿಯಾಗಿಲ್ಲ ಎಂದುಕೊಂಡ. “ಇದು ಗಾಂಧೀಜಿಯವರ ಪ್ರತಿಮೆ ತಾನೆ?” ಎಂದು ವಿನಯಪೂರ್ವಕವಾಗಿ ಕೇಳಬಹುದಿತ್ತು. ಹೌದು, ವಿನಯವೇ ಎಲ್ಲದಕ್ಕೂ ಮುಖ್ಯ. ಹೀಗೆಯೇ ಸರಿ ಎಂದುಕೊಂಡು ಪ್ರಶ್ನೆಯನ್ನು ಸರಿಯಾಗಿ ರಚಿಸಿ ಬಾಯಿಪಾಠ ಮಾಡಿಕೊಂಡು ಪ್ರಶ್ನೆ ಕೇಳುವುದಕ್ಕೆ ಇನ್ನೊಬ್ಬ ವ್ಯಕ್ತಿಯನ್ನು ಅರಿಸುವುದಕ್ಕಾಗಿ ಕಾದು ನಿಂತ. ದಾರಿಯಲ್ಲಿ ಹೋಗುವವರೆಲ್ಲರೂ ಬಿರುಸಾಗಿ ಕೊಡೆಯ ಮರೆಗೆ ನಡೆದು ಹೋಗುತ್ತಿದ್ದರು. ಯಾರೊಬ್ಬನೂ ಇವನನ್ನು ಗಮನಿಸುವಂತೆ ತೋರಲಿಲ್ಲ. ಇನ್ನು ಕಾಯಲಾರದೆ ಒಬ್ಬನನ್ನು ವಿನಯಪೂರ್ವಕ ತಡೆದು ನಿಲ್ಲಿಸಿ.
“ಇದು ಗಾಂಧೀಜಿಯವರ ಪ್ರತಿಮೆ ತಾನೆ?” ಎಂದು ಕೇಳಿದ.
“ಅಲ್ಲ”, ಎಂಬ ಉತ್ತರ ಬಂತು.
“ಎಂದರೆ ಇದು ಗಾಂಧಿ ಸರ್ಕಲ್ ಅಲ್ಲವೇನು?” ಕೇಳಿದಮೇಲೆ ಈ ಪ್ರಶ್ನೆ ಅಧಿಕ ಪ್ರಸಂಗದಿಂದ ಕೂಡಿದ್ದೆಂದು ತೋರಿತು. ಆದರೆ ಅದಕ್ಕೆ ಆ ವ್ಯಕ್ತಿ ಕೊಟ್ಟ ಉತ್ತರದಿಂದ ಆಶ್ಚರ್ಯವೆನಿಸಿದರೂ, ಪ್ರಶ್ನೆ ಕೇಳಿದ್ದೇ ಸರಿಯೆನಿಸಿತು.
“ಇದು ಗಾಂಧಿ ಸರ್ಕಲ್ ಹೌದು. ಪಟೇಲರ ಪ್ರತಿಮೆ ಗಾಂಧಿಯವರದಲ್ಲ. ಇದು ಸರ್ದಾರ್ ಪಟೇಲರ ಪ್ರತಿಮೆ. ಪಟೇಲರ ಪ್ರತಿಮೆ ಸವೆದು ಹೋದ್ದರಿಂದ ಈಗಿನ ಜನ ಇದನ್ನು ಗಾಂಧಿ ಪ್ರತಿಮೆಯೆಂದು ತಪ್ಪು ತಿಳಿದುಕೊಂಡಿದ್ದಾರೆ. ಅವರನ್ನು ಕೇಳಿದರೆ ನಾವೇ ಸರಿ ಹಿಂದಿನವರೇ ತಪ್ಪು ಎಂದಾರು. ಹೇಗಿದ್ದರೂ ಈ ಸರ್ಕಲಿಗೀಗ ಗಾಂಧಿ ಹೆಸರೇ ಬಂದಿದೆ ನೋಡಿ.” ಎಂದು ಆ ವ್ಯಕ್ತಿ ಉತ್ತರಿಸಿ ನಕ್ಕು ಹೋದ. ಆ ನಗೆಯಲ್ಲಿ ಸಿನಿಸಿಸಂ ಇತ್ತೇ, ವ್ಯಂಗ್ಯವಿತ್ತೇ, ರಹಸ್ಯವಿತ್ತೇ ಎಂಬುದು ನಾಯಕನಿಗೆ ಗೊತ್ತಾಗಿಲಿಲ್ಲ.
ಅಲ್ಲಿಂದ ಎಡಕ್ಕೆ ಹೋಗುವಂತೆ ಕ್ಯಾಶಿಯರ್ ಸೂಚಿಸಿದ್ದ. ಹಾಗೆ ನಾಯಕ ಎಡಬದಿಯ ರೋಡಿಗೆ ತಿರುಗಿದ. ಅದು ಅಗಲ ಕಿರಿದಾದ ರೋಡು. ಟ್ಯಾಕ್ಸಿಗಳು ಹಾದು ಹೋಗುತ್ತಿದ್ದಂತೆ ಕಟ್ಟಿನಿಂತ ನೀರು ರಾಚುತ್ತಿತ್ತು. ಅದ್ದರಿಂದ ನಾಯಕ ಜಾಗರೂಕ ನಾಗಿ ಮುಂದರಿದ. ಅನತಿ ದೂರದಲ್ಲೆ ಅಶೋಕ ಥಿಯೇಟರಿನ ಹೆಸರು ಥಳಥಳಿಸುತ್ತಿದ್ದುದು ಕಂಡು ಬಂತು. ಕಾಲುಗಳು ಚುರುಕಾದವು.
ಥಿಯೇಟರಿನಲ್ಲಿ ಯಾವದೋ ಹಿಂದಿ ಪಿಕ್ಚರು ನಡೆಯುತ್ತಿತ್ತು. ಹೊರಗಿನ ಗೇಟು ಹಾಕಿದ್ದರು, ಗೇಟಿನ ಬದಿಯಲ್ಲಿ ನಾಲ್ಕಾರು ಜನ ಬೀಡಿ ಸೇದುತ್ತ ಹರಟೆ ಹೊಡೆಯುತ್ತಿರುವಂತೆ ಕಂಡಿತು. ನಾಯಕ ಥಿಯೇಟರಿನ ಬದಿಗೆ ತೋರಿಸಿ, ” ಕೆಂಟ್ ರೋಡ್ ಎಂದರೆ ಇದೇ ಏನು?” ಎಂದು ಆ ಜನರನ್ನುದ್ದೇಶಿಸಿ ಕೇಳಿದ. ಅವರು ಯಾರೂ ಉತ್ತರಿಸಿಲಿಲ್ಲ. ಬಹುಶಃ ಈ ಪ್ರಶ್ನೆ ಯಾರಿಗೆ ಕೇಳಿದ್ದು, ಯಾರು ಉತ್ತರಿಸಬೇಕಾದ್ದು ಎಂದು ತಿಳಿಯದೆ ಅವರು ಸಂದೇಹದ ಸುಳಿಯಲ್ಲಿ ಸಿಲುಕಿದಂತೆ ಕಂಡಿತು. ಕೊನೆಗೆ ಅವರಲ್ಲೊಬ್ಬ, “ಹೌದು” ಎಂದ. ಇದರಿಂದ ಉತ್ತೇಜಿತನಾಗಿ ನಾಯಕ, “ಪ್ರೊಫ಼ೆಸರ್ ಮಾಗಡಿಯವರ ಮನೆ ಗೊತ್ತೇನು? ” ಎಂದು ಕೇಳಿದ. ಈ ಪ್ರಶ್ನೆ ನಿರರ್ಥಕ, ಅನವಶ್ಯಕ ಎಂಬಂತೆ ಅವರು ತಲೆ ಯಾಡಿಸಿದರು. ಕೊನೆಗೆ ನಾಯಕ ಈ ಬೀದಿಯಲ್ಲಿ ಹೋಗುವುದನ್ನು ನೋಡುವುದೇ ತಮ್ಮ ಉದ್ದೇಶವೆಂಬಂತೆ ಅವರೆಲ್ಲ ಕುತೂಹಲದಿಂದ ಕಾದು ಕುಳಿತರು, ನಾಯಕ ಕೆಂಟ್ ಸ್ಟ್ರೀಟಿನತ್ತ ಹೆಜ್ಜಿ ಹಾಕಿದ.
ಇಕ್ಕಟ್ಟಾದ ಬೀದಿ ಅದು. ಎರಡೂ ಕಡೆಗೆ ಎತ್ತರವಾಗಿ ಕಾಂಪೌಂಡುಗಳು, ಅವುಗಳೊಳಗೆ ಹಳೆಯ ಭಾರಿ ಮನೆಗಳು, ಪ್ರತಿಯೊಂದು ಕಾಂಪೌಂಡಿನೊಳಕ್ಕೆ ಪ್ರವೇಶಿಸಲು ಬೀದಿಯಿಂದ ಕಲ್ಲಿನ ಪಾವಟೆಗಳು ಏರಿ ಹೋಗುತ್ತಿದ್ದವು. ಬೀದಿ ನೇರ ವಾಗಿಲ್ಲದೆ, ಸುತ್ತು ಬಳಸಾಗಿದ್ದರಿಂದಲೂ ಬೀದಿ ದೀಪ ಮಂಕಾಗಿ ಮಾತ್ರವೆ ಉರಿಯುತ್ತಿದ್ದರಿಂದಲೂ ದಾರಿ ಸ್ಪಷ್ಟವಾಗುತ್ತಿರಲಿಲ್ಲ. ಮಳೆ ಈಗ ಪೂರ್ಣ ನಿಂತು ಹೋಗಿತ್ತು ಎಂದಷ್ಟೆ.
ಈಗ ಯಾರ ಬಳಿ ದಾರಿ ಕೇಳುವುದು ಎಂದು ಯೋಚಿಸುತ್ತ ನಡೆಯುತ್ತಿದ್ದಂತೆ ಒಂದು ಕಾಂಪೌಂಡ್ ಗೇಟಿನ ಹತ್ತಿರ ಮುದುಕನೊಬ್ಬ ಕುಳಿತಿದ್ದುದು ದೃಷ್ಟಿಗೆ ಬಿತ್ತು. ನಾಯಕ ಒಂದೆರಡು ಪಾವಟಿಗಳೇರಿ ಅವನ ಬಳಿ ಹೋಗಿ, “ಅಜ್ಜ, ನನಗೆ ಸ್ವಲ್ಪ ಸಹಾಯ ಮಾಡಬಲ್ಲಿರ?” ಎಂದು ಮಾತಾಡಿಸಿದ. ಆದರೆ ಅಜ್ಜ ಈತನನ್ನು ಗಮನಕ್ಕೆ ತೆಗೆದುಕೊಂಡಂತೆ ಅನಿಸಿದ್ದರಿಂದ, “ಇಲ್ಲಿ ಪ್ರೊಫ಼ೆಸರ್ ಮಾಗಡಿಯವರ ಮನೆ ಎಲ್ಲಿ ಗೊತ್ತೆ? ” ಎಂದು ಸ್ವಲ್ಪ ಎತ್ತರವಾಗಿ ಕೇಳಿದ. ಮುದುಕ ಮಾತಾಡದೆ, ಎತ್ತಲೋ ಖಾಲಿಯಾಗಿ ನೋಡುತ್ತ ಕುಳಿತಿದ್ದವ ಹಾಗೆಯೇ ಇದ್ದ. ಈತನೊಂದಿಗೆ ಸಂಪರ್ಕ ಬೆಳೆಸಲು ಯತ್ನಿಸುವುದು ವ್ಯರ್ಥವೆಂದು ಭಾವಿಸಿ, ನಾಯಕ ಪಾವಟಿಗೆಗಳನ್ನಿಳಿದು ಮತ್ತೆ ಅದೇ ಬೀದಿಯಲ್ಲಿ ಮುಂದರಿದ.
ದಾರಿ ವಿಚಾರಿಸಿ ತಿಳಿಯುವುದು ಅತ್ಯಂತ ತುರ್ತಿನ ಕೆಲಸವಾಗಿತ್ತು, ಯಾಕೆಂದರೆ ಸುಮ್ಮನೆ ಹೀಗೆ ಮುಂದುವರಿಯುತ್ತ ಹೋದರೆ ಮತ್ತೆ ವಾಪಸ್ಸು ಬರಬೇಕಾಗಿ ಬಂದೀತು. ಮಾತ್ರವಲ್ಲ ಸುಮ್ಮನೆ ಹೀಗೆ ಮುಂದುವರಿಯುವುದು ಉದ್ದೇಶವೂ ಅಲ್ಲ. ಹೀಗೆಂದು, ಮುಂದಿನ ವ್ಯಕ್ತಿ ಗಾಗಿ ನಿರೀಕ್ಷಿಸುತ್ತ ನಡೆದ. ಸ್ವಲ್ಪ ಸಮಯದಲ್ಲಿ ಆತ ಸಿಕ್ಕಿದಂತೆ ಕಂಡುಬಂತು. ಲೈಟು ಕಂಭವೊಂದಕ್ಕೆ ಆತುಕೊಂಡು ಸಿಗರೇಟು ಸೇದುತ್ತ ಆತ ಯಾರಿಗಾಗಿಯೋ ಕಾಯುತ್ತಿರುವಂತೆ ಇತ್ತು, ನಾಯಕ ಅವನನ್ನು ಸಮೀಪಿಸಿ, ಸೂಟ್ ಕೇಸನ್ನು ನೆಲದಮೇಲಿಳಿಸಿ, ” ನನಗೆ ಸ್ವಲ್ಪ ದಾರಿ ತೋರಿಸಬಲ್ಲಿರ?” ಎಂದು ಆ ವ್ಯಕ್ತಿ ಯನ್ನು ಕೇಳಿದ. ವ್ಯಕ್ತಿ ಸಲಿಗೆಯಿಂದ ನಕ್ಕು , “ಓಹೋ ಅದಕ್ಕೇನಂತೆ. ಸಿಗರೇಟು ಸೇದುತ್ತೀರ?” ಎಂದು ಪ್ಯಾಕೆಟ್ ಮುಂದೆ ನೀಡಿದ.
ನಾಯಕ ತಾನೊಂದು ಸಿಗರೇಟು ಹಚ್ಚಿಕೊಂಡು,
ಇಲ್ಲೆಲ್ಲೋ ಒಂದು ಮಸೀದಿ ಇರಬೇಕಲ್ಲ, ಎಲ್ಲೆಂದು ಹೇಳಬಹುದೆ?” ಎಂದು ಕೇಳಿದ.
“ನೀವು ಮಸೀದಿಯ ಕುರಿತು ಕೇಳುತ್ತೀರೋ? ಅಥವ ದೇವಾಲಯದ ಕುರಿತೋ?”
ನಾಯಕ ಸಂಶಯದಿಂದ ವ್ಯಕ್ತಿಯ ಮುಖ ನೋಡುತ್ತ, ಎಂದರೆ ಪತ್ರದಲ್ಲಿ ಮಸೀದಿ ಎಂದಿದೆ. ಪ್ರಾರ್ಥನಾ ಮಂದಿರವಾಗಬಹುದು. ಆದರೆ ಮುಸಲ್ಮಾನರ ಪ್ರಾರ್ಥನಾ ಮಂದಿರವನ್ನು ಮಸೀದಿ ಎನ್ನುತ್ತಾರಲ್ಲವೆ?” ಎಂದು ಕೇಳಿದ.
“ಪ್ರಾರ್ಥನಾ ಮಂದಿರವೆಂಬುದು ಖರೆ, ಆದರೆ ಪ್ರಾರ್ಥನಾ ಮಂದಿರಗಳಿಗೆ ಮಸೀದಿ, ದೇವಸ್ಥಾನ, ಇಗರ್ಜಿ, ಪಗೋಡಾ, ಸಿನಗಾಗ್ ಇತ್ಯಾದಿ ಬೇರೆಬೇರೆ ಹೆಸರು ಗಳನ್ನು ಯಾಕೆ ಕೊಡಬೇಕೋ ನನಗೆ ಅರ್ಥವಾಗುವುದಿಲ್ಲ. ಹತ್ತು ಜನ ಎಲ್ಲಿ ಒಟ್ಟಿಗೆ ಕಲೆತು ಪ್ರಾರ್ಥನೆ ಮಾಡುತ್ತಾರೋ ಅದು ಪವಿತ್ರ ಸ್ಥಳವೆಂದು ನಂಬಿಕೆ. ಅಲ್ಲಿ ದೇವರು ಇದ್ದಾನೆಂದು ಹೇಳುತ್ತಾರೆ, ಇಂಥ ವಿಷಯಗಳಲ್ಲಿ ಮತಕ್ಕಿಂತಲೂ, ಧರ್ಮಕ್ಕಿಂತಲೂ ವಿಶ್ವಾಸ ಮುಖ್ಯ, ಮತಕ್ಕಾಗಿ ವಿಶ್ವಾಸವಲ್ಲ, ವಿಶ್ವಾಸಕ್ಕಾಗಿ ಮತ, ದೇವಸ್ಥಾನಗಳಿಗಾಗಿ ದೇವರಲ್ಲ. ದೇವರಗಾಗಿ ದೇವಸ್ಥಾನವೂ ಅಲ್ಲ. ಜನರಿಗಾಗಿ, ನಿಮಗೆ ದೇವರಲ್ಲಿ ವಿಶ್ವಾಸವುಂಟೋ?”
“ನಾನು ಆ ಕುರಿತು ಇನ್ನೂ ನಿರ್ಧಾರಕ್ಕೆ ಬಂದಿಲ್ಲ.”
“ತಪ್ಪು ಕಾರಣ- ದೇವರ ಕುರಿತು, ಮರಣದ ಕುರಿತು, ಉದ್ದೇಶದ ಕುರಿತು, ಅರ್ಥದ ಕುರಿತು ಮನುಷ್ಯ ಕ್ಷಣಕ್ಷಣವೂ ಚಿಂತಿಸುತ್ತಾನೆ. ಕ್ಷಣಕ್ಷಣವೂ ನಿರ್ಧಾರಕ್ಕೆ ಬರುತ್ತಾನೆ. ಈ ನಿರ್ಧಾರಗಳು ಬದಲಾಗಬಹುದು. ಮನುಷ್ಯನೂ ಬದಲಾಗ ಬಹುದು. ಏನನ್ನುತ್ತೀರಿ?”
“ಆದರೆ ಪ್ರೊಫ಼ೆಸರ್ ಮಾಗಡಿಯವರ ಮನೆ….”
“ಯಾರು?”
“ಪ್ರೊಫ಼ೆಸರ್ ಮಾಗಡಿ ಗೊತ್ತೇನು ನಿಮಗೆ?”
“ಇಲ್ಲವಲ್ಲ”
ಈ ಬೀದಿಯಲ್ಲಿ ಒಂದು ಮಸೀದಿಯಿದೆಯೆಂತಲೂ ಅದರ ಹಿಂದಿನಿಂದ ಐದನೆ ಮನೆಯೆಂತಲೂ ಅವರು ಬರೆದಿದ್ದಾರೆ. ಆದರೆ ಇಲ್ಲಿ ಮೂರನೆ ಕ್ರಾಸು ಯಾವುದೆಂದೇ ನನಗೆ ಗೊತ್ತಾಗುವುದಿಲ್ಲ. ಇಲ್ಲಿ ಯಾವುದಾದರೂ ದೇವಾಲಯವೋ ಮಸೀದಿಯೋ ಇದೆಯೇನು?”
“ನನಗೆ ಗೊತ್ತಿಲ್ಲ. ಅಂಥ ಸ್ಥಳಗಳಿಗೆ ನಾನು ಹೋಗುವುದಿಲ್ಲ.” ಎಂದು ವ್ಯಕ್ತಿ ಕೋಲು ಮುರಿದಂತೆ ಹೇಳಿದ.
ಆಮೇಲೆ ನಾಯಕ ಕೆಳಗಿರಿಸಿದ್ದ ಸೂಟ್ ಕೇಸನ್ನು ಹೆಗಲಿಗೇರಿಸಿಕೊಂಡು ಮುನ್ನಡೆದ. ಬೀದಿ ಮುಂದುವರಿಯುತ್ತಿದ್ದಂತೆ ಅದು ಓಣಿಯ ರೂಪ ತಾಳಿತು, ಓಣಿ ಚಿಕ್ಕದಾಗುತ್ತ ಹೋಗುತ್ತಿದ್ದಂತೆ ಕತ್ತಲು ಹೆಚ್ಚಾಯಿತು. ಮನೆಗಳೂ ಕಡಿಮೆ ಯಾದವು. ಹೀಗಾದರೆ ಹೇಗೆ ಎಂದು ನಾಯಕನಿಗೆ ವಿಸ್ಮಯವಾಗದಿರಲಿಲ್ಲ. ಇದಕ್ಕಿಂತ ಒಳ್ಳೆಯದು ಒಂದು ಪ್ರಶಸ್ಥ ಸ್ಥಳದಲ್ಲಿ ಕುಳಿತು. ಸಾಗುವ ಮಂದಿಯೊಡನೆ ವಿಚಾರಿಸುವುದು ಎಂದು ತೋರಿತು. ಆದ್ದರಿಂದ ಅಂಥದೊಂದು ಸ್ಥಳ ಮುಟ್ಟುವ ತನಕ ನಡೆಯುವುದೆಂದು ತೀರ್ಮಾನಿಸಿದ. ಹೀಗೆ ನಡೆಯುತ್ತಿರುವಾಗ ಒಂದು ಕೆರೆ ಕಾಣ ಸಿಕ್ಕಿತು. ಜೀರ್ಣವಾದ ಕೆರೆಯಾಗಿರಬೇಕು. ಅದಕ್ಕೆ ಓಣಿಯ ಬದಿಯಲ್ಲಿ ಕಟ್ಟಿ ಇತ್ತು. ಈ ಕಟ್ಟೆಯ ಮೇಲೆ ಕುಳಿತುಕೊಂಡ. ಕುಳಿತು ಸಿಗರೇಟು ಹಚ್ಚಿ ಜನರನ್ನು ಕಾಯತೊಡಗಿದ. ಒಂದಿಬ್ಬರು ನಡೆದು ಹೋದರೂ ಅವರು ಇವನನ್ನು ಗಮನಿಸಲಿಲ್ಲ.
ಸ್ವಲ್ಪ ಹೊತ್ತಿನಲ್ಲಿ ಕೆರೆಯ ಹಿಂಬದಿಯಿಂದ ಹುಡುಗಿಯೊಬ್ಬಳು ಬಂದಳು, ಮುಂದೆ ಹೋಗಬೇಕೆಂದಿದ್ದವಳು ಏನೋ ಅನಿಸಿ, ತಡೆದು,
“ಯಾಕೆ ಇಲ್ಲಿ ಕೂತಿದ್ದೀರ?” ಎಂದು ಕೇಳಿದಳು.
“ನನಗೆ ಪ್ರೊಫ಼ೆಸರ್ ಮಾಗಡಿಯವರ ಮನೆಗೆ ಹೋಗಬೇಕಾಗಿದೆ,” ಎಂದ.
“ಇಲ್ಲಿ ಹೀಗೆ ಕೂತರೆ ಮನೆ ಸಿಗುತ್ತದೇನು?”
“ನಿನಗೆ ಗೊತ್ತೆ ಅವರ ಮನೆ?”
“ಇಲ್ಲ.”
“ಮತ್ತೆ?”
“ಆದರೆ ನಿಮಗೆ ಸಹಾಯ ಮಾಡಬಲ್ಲೆ.”
“ಇಲ್ಲೆಲ್ಲೊ ಒಂದು ಪ್ರಾರ್ಥನಾ ಮಂದಿರವಿದೆಯಂತೆ, ಅದರ ಹಿಂದೆ ಐದನೆ ಮನೆ.”
“ಆದರೆ ಇಲ್ಲಿ ಪ್ರಾರ್ಥನಾ ಮಂದಿರವೇನೋ ಇಲ್ಲವಲ್ಲ. ನೀವು ಈ ಗುಡಿಯ ಕುರಿತಾಗಿ ಹೇಳುತ್ತಿರಬಹುದು. ಆದರೆ ಇಲ್ಲಿ ಯಾರೂ ಈಗ ಪ್ರಾರ್ಥನೆ ಪೂಜೆಗಳಿಗೆ ಬರುತ್ತಿಲ್ಲ. ಇದರ ಹಿಂದಿನ ಮನೆಗಳನ್ನು ಬೇಕಾದರೆ ನಾನು ನಿಮಗೆ ತೋರಿಸ್ತೇನೆ. ನನ್ನೊಂದಿಗೆ ಬನ್ನಿ” ಎಂದಳು. ಕೈಯಲ್ಲಿದ್ದ ತಂಬಿಗೆಯನ್ನು ಕಲ್ಲಿನ ಬದಿಗೆ ಮರೆಯಾಗಿಟ್ಟು “ಬನ್ನಿ” ಎಂದು ಕೆರೆಯ ಹಿಂಬದಿಗೆ ನಡೆದಳು. ನಾಯಕ ಸೂಟ್ ಕೇಸಿ ನೊಂದಿಗೆ ಅವಳನ್ನು ಅನುಸರಿಸಿದ.
ಹುಲ್ಲು ಕೆಸವುಗಳು ದಟ್ಟವಾಗಿ ಬೆಳೆದ ಕಾಲುದಾರಿಯಲ್ಲಿ ಕತ್ತಲೆಗೆ ಅವರು ಸ್ವಲ್ಪ ದೂರ ಮುಂದರಿದ ಮೇಲೆ ನಾಲ್ಕೈದು ಮನೆ ಬೆಳಕುಗಳು ಕಾಣಿಸಿದವು.
“ನೋಡಿ ಇವೇ ಮನೆಗಳು.” ಎಂದಳು.
“ನಿನಗೆ ಪ್ರೊಫ಼ೆಸರ್ ಮಾಗಡಿಯವನು ಗೊತ್ತೇನು?”
“ನನಗೇನು ಗೊತ್ತು? ನನ್ನ ಮನೆ ಅರ್ಧ ಮೈಲಿ ದೂರ, ಹಾಲು ಕೊಂಡು ಹೋಗುವುದಕ್ಕಾಗಿ ಇಲ್ಲಿಗೆ ಬರುತ್ತೇನೆ ಅಷ್ಟೆ. ಇಂದು ಬರುವಾಗಲೆ ತಡವಾಯಿತು. ನನಗೆ ಬೇಗ ಹೋಗಬೇಕು. ಹೋಗಲೆ?” ನೀವೆ ಇಲ್ಲಿ ಯಾವುದಾದರೊಂದು ಮನೆ ಯಲ್ಲಿ ವಿಚಾರಿಸಿ ನೋಡಿ.” ಎಂದಳು.
“ಇಲ್ಲ, ನೀನು ಹೋದರೆ ನಾನು ಒಂಟಿಯಾಗುತ್ತೇನೆ ನೋಡು. ಪ್ರೊಫ಼ೆಸರರ ಮನೆ ವಿಚಾರಿಸಿದ ಮೇಲೆ ಹೋಗುವಿಯಂತೆ. ಈಗ ಮನೆ ಕಂಡು ಹುಡುಕುವುದಕ್ಕೊಂದು ಸೂತ್ರವಿದೆ. ಇಲ್ಲಿಂದ ಐದನೆ ಮನೆ ಯಾವುದೆಂದು ಹೇಳು.”
“ಐದನೆ ಮನೆ ಯಾವುದೆಂದು ಹೇಳಲಿ? ಈ ಮನೆಗಳು ಒಂದೇ ಸಾಲಿನಲ್ಲಿ ಇಲ್ಲವಲ್ಲ? ಇಲ್ಲಿಂದ ಐದನೆ ಮನೆ ಯಾಗಿರುವುದು ಇನ್ನೊಂದು ಕಡೆಯಿಂದ ಮೊದಲನೆ ಮನೆಯಾಗಿರುವುದು ಸಾಧ್ಯ. ಅಲ್ಲವೆ?”
“ಹಾಗದರೆ ನಿನಗೆ ಪರಿಚಯವಿದ್ದವರೊಂದಿಗೆ ವಿಚಾರಿಸೋಣ.”
“ನನಗೆ ತಡವಾಗುತ್ತಿದೆ. ಆದರೂ ವಿಚಾರಿಸೋಣ. ನೀವು ಇಲ್ಲೇ ಇರಿ. ನಾನು ಹೋಗಿ ಕೇಳಿ ಬರುತ್ತೇನೆ.”
“ಪ್ರೊಫ಼ೆಸರ್ ಮಾಗಡಿ.”
“ಹೂಂ. ಗೊತ್ತಾಯಿತು.” ಎಂದು ಹುಡುಗಿ ಯಾವುದೋ ಒಂದು ಮನೆಯ ಕಡೆ ಹೋದಳು.
ನಾಯಕ ಸುತ್ತ ದೃಷ್ಟಿಹರಿಸಿದ, ದಟ್ಟವಾದ ಹುಲ್ಲು ಪೊದೆಗಳಲ್ಲದೆ ಇನ್ನೇನೂ ಇಲ್ಲ. ದೂರ ದೂರ ಬೆಳಕುಗಳು ಕಾಣಿಸುತ್ತಿದ್ದವು. ಮಳೆ ಬಂದಿದ್ದರಿಂದಲೋ ಏನೋ ಹಲವಾರು ಕ್ರಿಮಿ ಕೀಟಗಳು ಸದ್ದು ಮಾಡುತ್ತಿದ್ದವು. ನಾಯಕನಿಗೆ ಕಾಲು ಕೈ ನೋಯತೊಡಗಿದವು.
ಸ್ವಲ್ಪ ಹೊತ್ತಿನಲ್ಲೆ ಹುಡುಗಿ ಮರಳಿ ಬಂದು. “ನಾವು ಬೇರೊಂದು ಮನೆ ಯಲ್ಲಿ ವಿಚಾರಿಸಬೇಕಾಗುತ್ತದೆ. ಅದೇ ಮಾಗಡಿಯವರ ಮನೆಯಾಗಿದ್ದೀತು. ನೋಡುವಾ, ಬನ್ನಿ. ” ಎಂದು ಕೆರೆಯ ಇನ್ನೊಂದು ಬದಿಗಾಗಿ ನಡೆದಳು. ನಾಯಕ ಕಷ್ಟದಿಂದ ಆ ಕಾಲುಹಾದಿಯಲ್ಲಿ ಅವಳನ್ನು ಅನುಸರಿಸಿದ.
ಅವರಿಬ್ಬರೂ ಹಳಿಯದಾದ ಒಂದು ಮನೆ ಮುಂದೆ ಬಂದು ನಿಂತರು, ಮನೆ ಬಾಗಿಲು ಹಾಕಿತ್ತು. ಆದರೆ ಒಳಗೆ ದೀಪ ಉರಿಯುತ್ತಿತ್ತು. ಹುಡುಗಿ ಹೋಗಿ ಬಾಗಿಲು ತಟ್ಟಿದಳು. ಐದಾರು ನಿಮಿಷಗಳಲ್ಲಿ ಬಾಗಿಲು ತೆರೆದು ಒಬ್ಬ ಇಳಿವಯಸ್ಸಿನ ಹೆಂಗಸು ಮುಖ ಹೊರಕ್ಕೆ ಹಾಕಿದಳು.
“ಇವರಿಗೆ ಯಾರನ್ನೋ ಕಾಣಬೇಕಂತೆ.” ಎಂದಳು ಹುಡುಗಿ.
“ಈಗ ಮನೆಯವರು ಇಲ್ಲ, ನಂಟರ ಕಡೆ ಹೋಗಿದ್ದಾರೆ.” ಎಂದು ಮುದುಕಿ ಉತ್ತರಿಸಿದಳು.
“ನನಗೆ ಪ್ರೊಫ಼ೆಸರ್ ಮಾಗಡಿಯವರನ್ನು ಕಾಣಬೇಕಾಗಿದೆ.” ಎಂದು ನಾಯಕ ನಮ್ರನಾಗಿ ಹೇಳಿದ.
“ಇಲ್ಲಿ ಅಂಥವರು ಯಾರೂ ಇಲ್ಲವಲ್ಲ.” ಎಂದಳು ಮುದುಕಿ.
“ಹಾಗಾದರೆ ಹೋಗುವಾ.” ಎಂದು ಹುಡುಗಿ ಹೊರಟಳು. ನಾಯಕ ಮೌನವಾಗಿ ಮತ್ತೆ ಅವಳನ್ನು ಹಿಂಬಾಲಿಸಿದ. ಬೀದಿ ತಲುಪಿದಾಗ, ಬಚ್ಚಿಟ್ಟಿದ್ದ ಹಾಲಿನ ಪಾತ್ರೆಯನ್ನು ತೆಗೆದುಕೊಂಡು, “ನಾನಿನ್ನು ಹೋಗುತ್ತೇನೆ.” ಎಂದು ಹೇಳಿ ಹುಡುಗಿ ಉತ್ತರಕ್ಕೂ ಕಾಯದೆ ಹೊರಟು ಹೋದಳು.
ನಾಯಕ ತಾನು ಬಂದ ಹಾದಿಯಲ್ಲಿ ಹಿಂದಿರುಗಿದ. ಮೊದಲಿನಂತೆ ಓಣಿ ಸ್ವಲ್ಪ ಸ್ವಲ್ಪವೇ ಅಗಲವಾಗುತ್ತ ಹೋಯಿತು. ಬದಿಯ ಹಲವು ಮನೆಗಳಲ್ಲಿ ಈಗಾಗಲೆ ಬಿಳಕು ಆರಿದಂತೆ ತೋರಿತು. ಎಲ್ಲ ಮೌನ, ದಾರಿಯಲ್ಲಿ ಜನಸಂಚಾರವೇ ನಿಂತು ಹೋದಂತೆ ನಾಯಕನಿಗೆ ಈಗ ಆಯಾಸ ಇಮ್ಮಡಿಯಾಗಿತ್ತು. ಕಾಲಿನ ಮಾಂಸಖಂಡ ಗಳಿಗೆ ತುಸುವೂ ಶಕ್ತಿಯಿರಲಿಲ್ಲ. ನರಗಳು ಸೆಳೆಯುತ್ತಿದ್ದ ಹಾಗೆ, ತಲೆ ಸುತ್ತಿತ್ತಿದ್ದ ಹಾಗೆ, ಸೊಟ್ ಕೇಸ್ ಹೊತ್ತು ಮೈ ಕೈ ನೋವು ಇದನ್ನೆಲ್ಲಾದರೂ ಎಸೆದು ಬಿಡಲೇ ಎಂಬ ವಿಚಾರ.
ಸಾಗಿದ ದೂರದ ಕುರಿತಾಗಿ ಏನೂ ಗೊತ್ತಿರಲಿಲ್ಲ. ಎಲ್ಲಿದ್ದೇನೆ ಎಂಬುದಂತೂ ಸಂಶಯದ ಮಾತು. ಎಂದ ಮೇಲೆ ಪುನಃ ಜನರೊಂದಿಗೆ ಅನ್ವೇಷಿಸಬೇಕಿತ್ತು. ಮುಖ್ಯವಾಗಿ ಸ್ಟೇಷನ್ ತಲುಪುವ ಅತಿ ಸಮೀಪಿದ ದಾರಿ ಮತ್ತದರ ದೂರ.
ಒಂದು ಕಾಂಪೌಂಡ್ ಗೇಟಿನ ಬಳಿ ಯಾರೋ ಕುಳಿತಿದ್ದ ಹಾಗೆ ತೋರಿ ನಾಯಕ ಅವನ ಬಳಿ ಹೋದ.
ಇಲ್ಲಿಂದ ರೈಲ್ವೆ ಸ್ಟೇಷನ್ನಿಗೆ ಅತಿ ಸಮೀಪದ ದಾರಿ ಯಾವುದು ಹೇಳ್ತೀರ?” ಎಂದು ಕೇಳಿದ, ಕೇಳಿದ ಧಾಟಿ ಸ್ವಲ್ಪ ಗಡಸಾಯಿತೇನೋ ಎಂದು ಸಂಶಯ ಬಂತು. ಗಂಟಲು ಒಣಗಿದ್ದರಿಂದಲೂ, ಒಟ್ಟಾರೆ ಆಯಾಸದಿಂದಲೂ, ಮೆಲ್ಲಗೆ ಮಾತಾಡಿದರೆ ಧ್ವನಿಯೇ ಹೊರಡಲಾರದೆಂದು ತುಸು ಜೋರಾಗಿಯೇ ಮಾತಾಡಬೇಕಾಯಿತು.
ಆದರೂ ಆ ಮನುಷ್ಯ ಮೌನವಾಗಿದ್ದರಿಂದ ನಾಯಕ ಇನ್ನೊಮ್ಮೆ, “ಇಲ್ಲಿಂದ ಸ್ಟೇಷನ್ನಿಗೆ ಎಷ್ಟು ದೂರ ಹೇಳಬಹುದೇ?” ಎಂದು ಕೇಳಿದ.
ಆತ ಅಗಾಧ ಮೌನದಲ್ಲಿ ಮೈಮರೆತಂತೆ ಕಂಡುಬಂತು. ಕಾಂಪೌಂಡ್ ಗೋಡೆಯ ಕಲ್ಲಿಗೆ ಕಲ್ಲಾಗಿ ಕುಳಿತಿದ್ದ. ನಾಯಕ ಆಸಕ್ತಿಯಿಂದ ಅವನ ಮುಖವನ್ನು ನೋಡಲು ಪ್ರಯತ್ನಿಸಿದ. ಈ ಮುದುಕನನ್ನು ಎಲ್ಲೋ ನೋಡಿದ ಹಾಗೆನಿಸಿತು. ಅವನು ಅಳುತ್ತಿರುವಂತೆ ಕಂಡಿತು. ತುಸುವೇ ಹೊತ್ತಿನಲ್ಲಿ ಅವನು ದೊಡ್ಡದಾಗಿ ಅಳುವುದಕ್ಕೆ ಶುರುಮಾಡಿದ. ಅಳು ಜೋರಾದಂತೆ ಈಗೇನು ಮಾಡುವುದೆಂದು ತಿಳಿಯದೆ ನಾಯಕ ಗಾಬರಿಯಾದ. ಈತನನ್ನು ಸಮಾಧಾನ ಪಡಿಸಬೇಕೆ, ಹೀಗೆಯೇ ಬಿಟ್ಟು ನಡೆಯಬೇಕೆ ಎಂದು ಯೋಚಿಸುತ್ತಿರುವಂತೆ ಮನೆಯೊಳಗಿನಿಂದ ಇಬ್ಬರು ಯುವಕರು ಬಂದರು. ಮುದುಕನ ರಟ್ಟೆ ಹಿಡಿದು ಮೇಲೆಳದು ಮನೆಯೊಳಗೆ ಸಾಗಿಸಿ ಬಾಗಿಲು ಮುಚ್ಚಿದರು. ಮುದುಕ ಅಳುತ್ತಲೇ ಇದ್ದ. ಅಷ್ಟು ದೂರದಿಂದ ಅಳು ಕೇಳಿಸುತ್ತಲೇ ಇತ್ತು.
ನಾಯಕ ಪುನಃ ಬೀದಿಗಿಳಿದು. ಯಾರಾದರೂ ಕಾಣಸಿಗುತ್ತಾರೋ ಎಂದು ನೋಡುತ್ತ, ನಡೆಯತೊಡಗಿದ.
*****