ಕಪಿಲಳ್ಳಿಯಲ್ಲಿ ಎಲ್ಲರೂ ಅವರನ್ನು ಕರೆಯುವುದು ಶಿಕಾರಿ ಭಟ್ಟರೆಂದು. ಅವರ ನಿಜ ಹೆಸರು ಅವರಿಗೇ ನೆನಪಿದೆಯೋ ಇಲ್ಲವೊ? ಸುಮಾರು ಐದೂ ಕಾಲಡಿ ಎತ್ತರದ ಸಣಕಲು ಆಳು. ಯಾವಾಗಲೂ ಬಾಯಿಯಲ್ಲಿ ತಾಂಬೂಲ. ಮಾತು ಮಾತಿಗೆ ಶ್ಲೋಕಗಳನ್ನು ಉದುರಿಸುತ್ತಾ, ಸಂದರ್ಭ ಸಿಕ್ಕಾಗಲೆಲ್ಲಾ ರಸಿಕತೆಯ ಮಾತುಗಳನ್ನು ಆಡುವವರು. ಅಪ್ರತಿಮ ಬೇಟೆಗಾರ ಭಟ್ಟರ ಬಗ್ಗೆ ಕಪಿಲಳ್ಳಿಯ ಜನರಿಗೆ ಸಂಮಿಶ್ರ ಭಾವದ ಗೌರವ. ಮಕ್ಕಳಿಗೆ ಅವರೊಂದು ಕೌತುಕ.
ಹಗಲು ಅವರು ಮನೆ ಬಿಟ್ಟು ಬರುವುದು ತೀರಾ ಅಪರೂಪ. ಎಲ್ಲೋ ಬಂದರೂ ಇಸ್ಮಾಲಿಚ್ಚನ ಜೀನಸು ಅಂಗಡಿಗೆ ಮಾತ್ರ. ಅಲ್ಲೇ ಹತ್ತಿರದಲ್ಲಿ ತನಿಯಪ್ಪ ನಾಯ್ಕನ ಚಾದ ಹೋಟೇಲು ಇದೆ. ಕಪಿಲಳ್ಳಿಯ ವಿಪ್ರರು ತನಿಯಪ್ಪ ನಾಯ್ಕನ ಹೋಟೆಲಲ್ಲಿ ಚಾ ಕುಡಿಯುವುದಿಲ್ಲ. ಶಿಕಾರಿ ಭಟ್ಟರು ಕುಡಿಯುತ್ತಾರೆ. ತನಿಯಪ್ಪ ನಾಯ್ಕನ ಚಾ ಹೋಟೇಲಿನ ಕಲ್ತಪ್ಪ ಮತ್ತು ಬಲ್ಯಾರು ಗಸಿಗೆ ಬಹಳ ಹೆಸರಿದೆ. ಶಿಕಾರಿ ಭಟ್ಟರು ಬಲ್ಯಾರು ಗಸಿಯಲ್ಲಿ ಕಲ್ತಪ್ಪ ಅದ್ದಿ ತಿನ್ನುತ್ತಾರೆ. ಕಪಿಲಳ್ಳಿಯ ವರ್ಣವ್ಯವಸ್ಥೆಯನ್ನು ಅವರ ಹಾಗೆ ರಾಜಾರೋಷವಾಗಿ ಮುರಿದವರಿಲ್ಲ. ಅದಕ್ಕೆಂದೇ ಓದು ಬರಹ ಬಲ್ಲ ಶೂದ್ರರು ಶಿಕಾರಿ ಭಟ್ಟರ ಬಗ್ಗೆ ಗುಪ್ತವಾದ ಒಲವೊಂದನ್ನು ಬೆಳೆಸಿಕೊಂಡಿದ್ದಾರೆ.
ಕಪಿಲಳ್ಳಿಯ ಪಂಚಾಯತಿಗೆ ಶಿಕಾರಿ ಭಟ್ಟರು ಒಂದು ಬಾರಿ ಸ್ಪರ್ಧಿಸಿದ್ದರು. ಅವರನ್ನು ಸೋಲಿಸಲೆಂದೇ ವಿಪ್ರರು ಮತ್ತು ಅತಿವಿಪ್ರರು ಕಪಿಲೇಶ್ವರನ ಅರ್ಚಕ ಪುರೋಹಿತ ವೇದಮೂರ್ತಿ ಗಣಪತಿ ಸುಬ್ರಾಯ ಜೋಯಿಸರನ್ನು ಅವರೆದುರು ಸ್ಪರ್ಧಿಯಾಗಿ ನಿಲ್ಲಿಸಿದ್ದರು. ಅರ್ಚಕರಾದ ವೇದಮೂರ್ತಿ ಗಣಪತಿ ಸುಬ್ರಾಯ ಜೋಯಿಸರೆಂದರೆ ಊರವರೆಲ್ಲರೂ ಗೌರವಿಸುವ ವ್ಯಕ್ತಿ. ವಿಪ್ರರ ಮತ್ತು ಅತಿವಿಪ್ರರ ಓಟುಗಳು ಸಾರಾಸಗಟಾಗಿ ಗಣಪತಿ ಸುಬ್ರಾಯ ಜೋಯಿಸರಿಗೆ ಬೀಳುವುದರಲ್ಲಿ ವಿಪ್ರವೃಂದಕ್ಕೆ ಅನುಮಾನವೇ ಇರಲಿಲ್ಲ. ಶೂದ್ರ ಮತ್ತು ಅತಿಶೂದ್ರ ವೃಂದದ ಓಟು ಒಡೆದು ಹೋಗಿ ಶಿಕಾರಿ ಭಟ್ಟರು ಸೋಲಬೇಕೆಂದು ವಿಪ್ರವೃಂದ ಗುತ್ತಿನ ಮನೆ ಸೋಮಪ್ಪ ಶೆಟ್ಟರನ್ನು ಹುರಿದುಂಬಿಸಿ ಓಟಿಗೆ ನಿಲ್ಲಿಸಿತು. ಶಿಕಾರಿ ಭಟ್ಟರು ದೊಡ್ಡ ಮಾರ್ಜಿನಿನ್ನಿಂದ ಗೆದ್ದು ದಾಖಲೆ ನಿರ್ಮಿಸಿದರು. ಕಪಿಲಳ್ಳಿಯ ಸಮಸ್ತ ಶೂದ್ರ ಮತ್ತು ಅತಿ ಶೂದ್ರ ವರ್ಗ ಶಿಕಾರಿ ಭಟ್ಟರಿಗೆ ಸಾರಾಸಗಟಾಗಿ ಓಟು ಹಾಕಿತ್ತು. ಶಿಕಾರಿ ಭಟ್ಟರು ಮೆಂಬರಾದದ್ದು ಮಾತ್ರವಲ್ಲ, ಪಂಚಾಯತಿ ಅಧ್ಯಕ್ಷರೂ ಆದರು. ಸೇಡಿನ ರಾಜಕೀಯ ಮಾಡಲಿಲ್ಲ. “ರಾಜಕೀಯ ನನಗಾಗುವುದಿಲ್ಲ” ಎಂದು ಅವಧಿ ಮುಗಿದ ಕೂಡಲೇ ನಿವೃತ್ತಿ ಘೋಷಿಸಿ ಅಧಿಕಾರ ಹಸ್ತಾಂತರ ಮಾಡಿ ಮರ್ಯಾದೆ ಉಳಿಸಿಕೊಂಡರು. ಪಂಚಾಯತಿನ ಹಣ ನುಂಗದ ಚೇರುಮನ್ನು ಎಂದು ಕಪಿಲಳ್ಳಿಯ ಇತಿಹಾಸದಲ್ಲಿ ದಾಖಲಾದರು.
ಕಪಿಲಳ್ಳಿಯಲ್ಲಿ ಏಕೋಪಾಧ್ಯಾಯ ಶಾಲೆಯೊಂದಿದೆ. ಅದಕ್ಕೊಬ್ಬ ಮುಖ್ಯೋಪಾಧ್ಯಾಯರಿದ್ದಾರೆ. ಶಾಲಾ ಸಂಬಂಧೀ ಕೆಲಸವೆಂದು ಅವರು ವಾರಕ್ಕೆ ಮೂರು ದಿನ ಹೊರಗಿರಬೇಕಾಗುತ್ತದೆ. ಮಕ್ಕಳು ಶಾಲೆಗೆ ಬಂದು ಮೈದಾನದಲ್ಲಿ ಆಡುತ್ತಿರುತ್ತಾರೆ. ಅಲ್ಲಿ ಹಾವುಗಳು ಓಡಾಡುತ್ತಿರುತ್ತವೆ. ಒಂದು ಸಲ ಮುಖ್ಯೋಪಾಧ್ಯಾಯರು ಶಾಲೆಯಲ್ಲೇ ಇರುವಾಗ ಮೈದಾನದಲ್ಲಿ ಆಡುತ್ತಿದ್ದ ಮಕ್ಕಳು ಗಾಬರಿಯಿಂದ ಹಾವು ಸರ್ ಹಾವು ಸರ್ ಎಂದು ಓಡಿಕೊಂಡು ಬಂದರು. ಮುಖ್ಯೋಪಾಧ್ಯಾಯರು ಮೈದಾನಕ್ಕಿಳಿದರು. ಎರಡು ಸರೀಸೃಪಗಳು ಒದ್ದಾಡುತ್ತಿವೆ. ಬೃಹತ್ತಾದ ಹೆಬ್ಬಾವೊಂದರ ತಲೆಯನ್ನು ಅದಕ್ಕಿಂತ ಸಣ್ಣಗಾತ್ರದ ಕಾಳಿಂಗ ಸರ್ಪವೊಂದು ಕಚ್ಚಿ ನುಂಗಲೆತ್ನಿಸುತ್ತಿದೆ. ಹೆಬ್ಬಾವು ನೋವಿನಿಂದ ಚಡಪಡಿಸುತ್ತಿದೆ. ಕಾಳಿಂಗ ತನ್ನ ಪಟ್ಟನ್ನು ಬಿಗಿಗೊಳಿಸುತ್ತಿದೆ.
ಮುಖ್ಯೋಪಾಧ್ಯಾಯರಿಗೆ ಏನು ಮಾಡಬೇಕೆಂದು ಹೊಳೆಯಲಿಲ್ಲ. ಅವರು ಈವರೆಗೆ ಸೊಳ್ಳೆ, ತಿಗಣೆ ಮತ್ತು ಜಿಗಣೆ ಬಿಟ್ಟರೆ ಬೇರೇನ್ನೂ ಕೊಂದವರಲ್ಲ. “ಜೀವ ವಿಕಾಸದ ಕೊನೆಯಲ್ಲಿ ಭೂಮಿಗೆ ಬಂದವನು ಮನುಷ್ಯ. ಉಳಿದೆಲ್ಲಾ ಚರಾಚರ ಜೀವಿಗಳು, ಖಗ ಮೃಗ, ಸಸ್ತನಿ, ಸರೀಸೃಪಗಳು, ಭೂಚರ, ಜಲಚರ ಉಭಯ ವಾಸಿ, ಕಶೇರುಕ, ಅಕಶೇರುಕಗಳು ಮಾನವನಿಗಿಂತ ಮೊದಲೇ ಭೂಮಿಗೆ ಬಂದವುಗಳು. ಅವುಗಳನ್ನು ಕೊಲ್ಲುವ ಹಕ್ಕು ಮತ್ತು ಅಧಿಕಾರ ಮನುಷ್ಯನಿಗಿಲ್ಲ” ಎಂದು ಅವರು ಕ್ಲಾಸಲ್ಲಿ ಹೇಳುತ್ತಿದ್ದರು. ಕಪಿಲೇಶ್ವರನ ರಥೋತ್ಸವದ ದಿನದಂದು ನಡೆಯುವ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲೂ ಅದನ್ನೇ ಉಲ್ಲೇಖಿಸುತ್ತಿದ್ದರು. ಅದಕ್ಕೆ ಊರಜನ ಅವರನ್ನು ಗೌತಮ ಬುದ್ಧ ಎಂದು ಕರೆಯುತಿದ್ದರು. ಅವರೀಗ ಪೇಚಿನಲ್ಲಿ ಸಿಲುಕಿಕೊಂಡರು. ಹೀಗೆ ಬಿಟ್ಟರೆ ಹೆಬ್ಬಾವು ಸಾಯುತ್ತದೆ. ಅತ್ಯಂತ ವಿಷಕಾರೀ ಕಾಳಿಂಗ ಸರ್ಪ ಮಕ್ಕಳಿಗೆ ಕಚ್ಚುತ್ತದೆ.
ಮುಖ್ಯೋಪಾಧ್ಯಾಯರು ಶಾಲಾ ನಾಯಕ ಐದನೆ ಈಯತ್ತೆಯ ಬಿ.ಕೆ. ಬಾಬು ಗೌಡನನ್ನು ಶಿಕಾರಿ ಭಟ್ಟರಲ್ಲಿಗೆ ಓಡಿಸಿದರು. ಅವನೊಟ್ಟಿಗೆ ಐದಾರು ಜನ ಬಸ್ಸು ಬಿಡುತ್ತಾ ಓಡಿ ಓಡಿ ಶಿಕಾರಿ ಭಟ್ಟರಲ್ಲಿಗೆ ತಲುಪಿ ತೇಕುತ್ತಾ ಏದುಸಿರಲ್ಲಿ ಏನೇನೋ ಹೇಳಿದರು. ಹಾವು ಎಂದಾಗ ಶಿಕಾರಿ ಭಟ್ಟರು ತಮ್ಮ ಡಬ್ಬಲ್ಲು ಬ್ಯಾರಲ್ಲುಗನ್ನು ತೆಗೆದುಕೊಂಡು ಶಾಲಾ ಮಕ್ಕಳ ಜತೆ ಓಡಿ ಕೊಂಡೇ ಬಂದರು. ಶಾಲಾ ನಾಯಕ ಐದನೆ ಈಯತ್ತೆಯ ಬಿ.ಕೆ. ಬಾಬುಗೌಡನು ಎಲ್ಲರಿಗಿಂತ ಮುಂಚೆ ಓಡಿ ಬಂದು ಮುಖ್ಯೋಪಾಧ್ಯಾಯರಿಗೆ ಶಿಕಾರಿ ಭಟ್ಟರ ಆಗಮನದ ವರದಿ ಮುಟ್ಟಿಸಿ ಅಲ್ಲಿ ನೆರೆದಿದ್ದ ಶಾಲಾ ಮಕ್ಕಳತ್ತ, ಸುದ್ದಿ ತಿಳಿದು ಓಡಿ ಬಂದು ಅಲ್ಲಿ ಜಮಾಯಿಸಿದ್ದ ಮಕ್ಕಳ ಹೆತ್ತವರತ್ತ ಮತ್ತು ಬೇಗ ಮದುವೆಯಾಗಿ ಆದಷ್ಟು ಮಕ್ಕಳನ್ನು ಹೆರಬೇಕೆಂದಿರುವವರತ್ತ ಹೆಮ್ಮೆಯ ನೋಟವನ್ನು ಬೀರಿದನು.
ಶಿಕಾರಿ ಭಟ್ಟರು ಗುಂಪನ್ನು ಚದರಿಸುತ್ತಾ ಮುಂದೆ ಬಂದರು. ಗಟ್ಟಿ ಸ್ವರದಲ್ಲಿ ‘ಎಲ್ಲರೂ ದೂರ ಹೋಗಿ’ ಎಂದರು. ಗುರಿ ನೋಡಿ ಕಾಳಿಂಗನ ತಲೆಗೆ ಒಂದು ಗುಂಡು ಹೊಡೆದರು. ಕಾಳಿಂಗನು ವಿಲವಿಲ ಒದ್ದಾಡ ತೊಡಗಿದನು. ಸ್ವಲ್ಪ ಹೊತ್ತಿನಲ್ಲಿ ಅವನ ಬಾಯಿಯಿಂದ ಹೆಬ್ಬಾವಿನ ತಲೆ ಹೊರಬಿತ್ತು. ಅದು ಆಗಲೇ ಪ್ರಾಣ ಕಳಕೊಂಡಿತ್ತು. ಒದ್ದಾಡಿ ಒದ್ದಾಡಿ ನಿಧಾನವಾಗಿ ಕಾಳಿಂಗನೂ ತಣ್ಣಗಾದನು. ಹಾವುಗಳೆಂದರೆ ಕಪಿಲಳ್ಳಿಯ ಜನರಿಗೆ ಎಲ್ಲಿಲ್ಲದ ಭಯ ಭಕ್ತಿ. ಅಲ್ಲೇ ಮೈದಾನದ ಬಲಭಾಗದಲ್ಲಿ ಗುಂಡಿ ತೋಡಿ ಹೆಬ್ಬಾವನ್ನು ಮತ್ತು ಕಾಳಿಂಗನನ್ನು ಸಾಮೂಹಿಕ ದಫನ್ನು ಮಾಡಿದರು. ಶಿಕಾರಿ ಭಟ್ಟರು ಅಲ್ಲಿ ಲ್ಯಾಟರೈಟು ಕಲ್ಲಿನ ಉದ್ದನೆಯ ಕಟ್ಟೆ ಕಟ್ಟಿಸಿ ಗಾರೆ ಹಾಕಿಸಿ ಹತ್ತು ಜನ ಕುಳಿತು ಕೊಳ್ಳಲು ಅನುವು ಮಾಡಿಕೊಟ್ಟು ಅದಕ್ಕೆ ಕಾಳಿಂಗನ ಕಟ್ಟೆ ಎಂದು ಹೆಸರಿಟ್ಟರು. ಶಾಲಾ ಮಕ್ಕಳ ಬಾಯಲ್ಲಿ ಕಾಳಿಂಗನ ಕಟ್ಟೆಯು ಶಿಕಾರಿ ಭಟ್ಟರ ಸಮಾಧಿಯಾಯಿತು. ಅದೇ ಹೆಸರು ಆಚಂದ್ರಾರ್ಕವಾಗಿ ಉಳಿದುಕೊಂಡಿತು.
ಭಟ್ಟರ ಹೆಸರಿನ ಹಿಂದೆ ಶಿಕಾರಿ ಸೇರಿಕೊಂಡದ್ದು ಅವರ ಮೃಗ ಬೇಟೆಯ ಪರಿಣತಿಗಾಗಿ. ಮಾಂಸ ತಿನ್ನಬೇಕೆಂದು ಅನ್ನಿಸಿದಾಗಲೆಲ್ಲಾ ಅವರು ರಾತ್ರಿ ಬೇಟೆಗೆ ಹೊರಡುತ್ತಿದ್ದರು. ಮೊಲ, ಕಾಡುಕುರಿ, ಕೆಂಚಳಿಲು, ಜಿಂಕೆ – ಎಂದರೆ ಅವರಿಗೆ ಪ್ರಾಣ. ರಾತ್ರಿ ಒಂಬತ್ತು ಗಂಟೆಗೆ ತಲೆಗೆ ಐದು ಶೆಲ್ಲುಗಳ ಉದ್ದನೆಯ ಶಿಕಾರಿ ಲೈಟನ್ನು ಕಟ್ಟಿ ಡಬ್ಬಲು ಬ್ಯಾರಲ್ಲು ಗನ್ನನ್ನು ಹೆಗಲಿಗೆ ನೇತಾಡಿಸಿಕೊಂಡು ಅವರು ಮನೆಯಿಂದ ಹೊರಟರೆಂದರೆ ಮತ್ತೆ ನಿಲ್ಲುವುದು ಅವರ ಒಕ್ಕಲಿನವ ಮಂಚ ಮಲೆಕುಡಿಯನ ಮನೆಯ ಅಂಗಳದಲ್ಲಿ. ಅವನು ಉದ್ದನೆಯ ತಲವಾರನ್ನು ಸೊಂಟಕ್ಕೆ ಇಳಿಬಿಟ್ಟು, ಹೆಗಲಿಗೆ ಟಾರ್ಚು, ತಾಂಬೂಲ, ಚಾಕು, ಬೀಡಾ-ಬೀಡಿ ಚೀಲ ಸಿಕ್ಕಿಸಿ, ದಪ್ಪನೆಯ ಬಡಿಗೆಯೊಂದನ್ನು ಸಿದ್ಧಪಡಿಸಿ ಇಟ್ಟುಕೊಂಡಿರುತ್ತಾನೆ. ಐದು ಶೆಲ್ಲುಗಳ ಟಾರ್ಚಿನ ಪ್ರಖರ ಬೆಳಕಿಗೆ ಕಣ್ಣು ಕೊಡುವ ಜಿಂಕೆಯೊ, ಬರಿಂಕವೋ, ಶಿಕಾರಿಭಟ್ಟರ ಡಬ್ಬಲ್ಲು ಬ್ಯಾರಲ್ಲು ಗನ್ನು ಉಗುಳುವ ಬೆಂಕಿಗೆ ಬಲಿಯಾಗಿ ಬಿದ್ದು ಒದ್ದಾಡುವಾಗ ಮಂಚ ಮಲೆಕುಡಿಯ ಧಾವಿಸಿ ದಪ್ಪನೆಯ ಬಡಿಗೆಯಿಂದ ಅವುಗಳ ತಲೆಗೆ ಬಲವಾಗಿ ಬಡಿದು ದಯಾ ಮರಣ ಕರುಣಿಸುತ್ತಾನೆ. ಅವುಗಳನ್ನು ಹಾಗೇ ಎತ್ತಿಕೊಂಡು ಬಂದು ಮನೆಯೊಳಗೆ ಕೊಡುತ್ತಾನೆ. ಅವನ ಮಕ್ಕಳು ಅವುಗಳನ್ನು ಕ್ಷಣ ಮಾತ್ರದಲ್ಲಿ ನಗ್ನಗೊಳಿಸಿ, ಬೇಕಾದ ಆಕಾರಕ್ಕೆ ಕಟ್ಟ್ ಮಾಡುವಾಗ ಮನೆಯಾಕೆ ಹದವಾದ ಮಸಾಲೆ ಸಿದ್ಧಪಡಿಸುತ್ತಾಳೆ. ಅಡುಗೆ ಸಿದ್ಧವಾಗುವವರೆಗೆ ಶಿಕಾರಿ ಭಟ್ಟರಿಗೆ ಅಂಗಳದಲ್ಲಿ ಮಂಚ ಮಲೆಕುಡಿಯ ತನ್ನ ಮನೆಯ ಏಕೈಕ ಈಸಿಚೇರನ್ನು ತಂದಿರಿಸುತ್ತಾನೆ. ಭಟ್ಟರೆದುರು ಚಾಪೆ ಹಾಕಿ ಕೂತು ಆ ಮಾತು ಈ ಮಾತು ಆಡುತ್ತಾ ಊಟದ ಕರೆಯನ್ನು ನಿರೀಕ್ಷಿಸುತ್ತಾನೆ. ಭರ್ಜರಿ ಭೋಜನವಾದ ಮೇಲೆ ವೀಳ್ಯಮೆದ್ದು ಭಟ್ಟರು ಮನೆ ಸೇರುವಾಗ ರಾತ್ರೆ ಹನ್ನೆರಡು ದಾಟುತ್ತದೆ.
ಶಿಕಾರಿ ಭಟ್ಟರಿಗೆ ಮಳೆಗಾಲದಲ್ಲಿ ತುಂಬಿದ ತಪಸ್ವಿನಿಯನ್ನು ದೋಣಿಯಲ್ಲಿ ದಾಟಿ ಕಪಿಲೇಶ್ವರನ ದೇವಾಲಯಕ್ಕೆ ಹೋಗುವುದೆಂದರೆ ತುಂಬಾ ಇಷ್ಟ. ದೋಣಿ ದಾಟಿಸುವ ಓಡತ್ತ ತ್ಯಾಂಪಣ್ಣನನ್ನು, ‘ಅಂಬಿಗಾ’ ಎಂದು ಕರೆದು ’ಅಂಬಿಗಾ, ನಾ ನಿನ್ನ ನಂಬಿದೇ’ ಎಂದು ಹಾಡುತ್ತಿದ್ದರು. ಶಿಕಾರಿ ಭಟ್ಟರು ತನ್ನ ವೃತ್ತಿಯ ಗೌರವ ಹೆಚ್ಚಿಸಿದ್ದಾರೆಂದು ಓಡತ್ತ ತ್ಯಾಂಪಣ್ಣನು ಅವರು ಹಣಕೊಡುವಾಗ ಬೇಡ ವೆನ್ನುತ್ತಿದ್ದ. ಶಿಕಾರಿ ಭಟ್ಟರು “ಋಣವೆಂಬ ಪಾತಕವು ಬಹು ಬಾಧೆಪಡಿಸುತಿದೆ; ಗುಣನಿಧಿಯೆ ನೀನೆನ್ನ ಋಣವ ಪರಿಹರಿಸೋ” ಎಂದು ಹಾಡಿ ಅವನ ಕೈಯಲ್ಲಿ ಹಣ ಇರಿಸಿ ದೋಣಿಯಿಂದ ಕೆಳಗಿಳಿಯುತ್ತಿದ್ದರು.
ಮಳೆಗಾಲದಲ್ಲಿ ಸೊಕ್ಕಿದ ತಪಸ್ವಿನಿಯನ್ನು ದಾಟಿಸುವಾಗ ಒಂದು ಸಲ ಓಡತ್ತ ತ್ಯಾಂಪಣ್ಣನು ಹೊಳೆಯ ತಾಜಾ ಮೀನು ತುಂಬಾ ರುಚಿಯಾಗಿರುತ್ತದೆಂದೂ, ಶಿಕಾರಿ ಭಟ್ಟರು ಒಂದು ಸಲ ಟ್ರೈ ಮಾಡಿ ನೋಡಬೇಕೆಂದೂ ಸೂಪರ್ ಸುಪ್ರೀಮು ಐಡಿಯಾ ಒಂದನ್ನು ನೀಡಿದ. “ಅಂಬಿಗಾ, ತನಿಯಪ್ಪ ನಾಯ್ಕನ ಹೋಟೆಲಲ್ಲಿ ಬಲ್ಯಾರು ಗಸಿಯಲ್ಲಿ ಕಲ್ತಪ್ಪ ತಿನ್ನುವವನು ನಾನು. ಆದರೆ ಹೊಳೆ ಮೀನು ತಿನ್ನಲು ಮನಸ್ಸು ಬರುವುದಿಲ್ಲ. ನಿನಗೆ ಧೈರ್ಯವಿದ್ದರೆ ನನ್ನೊಟ್ಟಿಗೆ ಶಿಕಾರಿಗೆ ಬಾ. ಬಲೆ ಹಾಕಿ ಮೀನು ಹಿಡಿಯುವುದರಲ್ಲಿ ಯಾವ ಗಂಡುತನವಿದೆ?” ಎಂದು ಶಿಕಾರಿ ಭಟ್ಟರು ಕೇಳಿದಾಗ ಏನುತ್ತರಿಸಬೇಕೋ ಹೊಳೆಯದೆ ಓಡತ್ತ ತ್ಯಾಂಪಣ್ಣನು ತಲೆಯಲ್ಲಾಡಿಸಿ ಸುಮ್ಮನಾದನು.
ಶಿಕಾರಿ ಭಟ್ಟರ ಬೇಟೆ ಹುಚ್ಚನ್ನು ಬಿಡಿಸಬೇಕೆಂದು ಕಪಿಲಳ್ಳಿಯ ವಿಪ್ರ ವೃಂದ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರನ್ನು ಆ ಕೆಲಸಕ್ಕೆ ನಿಯೋಜಿಸಿತು. ಅವರು ಆ ಮಾತು ಈ ಮಾತು ಆಡುತ್ತಾ ತಗ್ಗಿದ ಸ್ವರದಲ್ಲಿ “ನಾವೆಲ್ಲಾ ಉತ್ತಮ ವರ್ಣದವರು. ವಿಪ್ರಕುಲದಲ್ಲಿ ಹುಟ್ಟಲು ಜನ್ಮ ಜನ್ಮಗಳ ಸಂಚಿತ ಪುಣ್ಯ ಫಲ ಬೇಕು. ಅಂಥಾದ್ದರಲ್ಲಿ ನೀವು ಬೇಟೆಯಾಡಿ ಮಾಂಸ ತಿಂದರೆ ವಿಪ್ರಕುಲಕ್ಕೆ ಕಳಂಕ ಅಲ್ವಾ?” ಎಂದದ್ದಕ್ಕೆ ಶಿಕಾರಿ ಭಟ್ಟರು ಗಹಗಹಿಸಿದರು. “ಮೇಸ್ಟ್ರೇ ನೀವು ಓದಿ ತಿಳಿದುಕೊಂಡವರು. ಯಾವ ಶಾಸ್ತ್ರದಲ್ಲಿ ವಿಪ್ರರು ಮಾಂಸ ತಿನ್ನಬಾರದು ಎಂದಿದೆ ತಿಳಿಸಿ. ಮನುಸ್ಮೃತಿಯನ್ನು ಓದಿ ನೋಡಿ. ‘ಪ್ರಾಣಾಸ್ಯನ್ನ ಮಿದಂ ಸರ್ವಂ, ಪ್ರಜಾಪಿತರ ಕಲ್ಪಯೇತ್, ಸ್ಥಾವರಂ ಜಂಗಮಂ ಚೈವ, ಸರ್ವಂ ಪ್ರಾಣಸ್ಯ ಭೋಜನಂ’ ಎಂದು ಸಾಕ್ಷಾತ್ ಮನುವೇ ಅಪ್ಪಣೆ ಕೊಡಿಸಿದ್ದಾನೆ. ಈ ಜಗತ್ತಿನ ಸರ್ವ ಜೀವ ಜಾಲವನ್ನು ಭಗವಂತ ಸೃಷ್ಟಿಸಿದ್ದೇ ಮಾನವ ಅನುಭವಿಸಲೆಂದು. ಆ ಜಗನ್ನಿಯಾಮಕನ ಇಚ್ಛೆಗೆ ವಿರುದ್ಧವಾಗಿ ಹೋಗುವುದು ಸರಿಯೇ?”
ಶಿಕಾರಿ ಭಟ್ಟರ ಪ್ರಶ್ನೆಗೆ ಮುಖ್ಯೋಪಾಧ್ಯಾಯರು ಬಾಯಿ ಬಿಚ್ಚಲಿಲ್ಲ. ತಲೆ ತಗ್ಗಿಸಿ ಹಿಂದಕ್ಕೆ ಬಂದವರು ವಿಪ್ರವೃಂದಕ್ಕೆ ತನ್ನ ರಾಯಭಾರ ವಿಫಲವಾದುದನ್ನು ತಿಳಿಸಿದರು. ವಿಪ್ರವೃಂದ ಕಪಿಲೇಶ್ವರನ ಅರ್ಚಕ ಪುರೋಹಿತ ವೇದಮೂರ್ತಿ ಗಣಪತಿ ಸುಬ್ರಾಯ ಜೋಯಿಸರನ್ನು ಕಂಡು ಮನು ಸ್ಮೃತಿಯನ್ನು ತೆರೆಯಿಸಿ ನೋಡಿ ಮನು ಹಾಗೆ ಹೇಳಿದ್ದು ಹೌದೆಂದು ಖಚಿತಪಡಿಸಿಕೊಂಡ ಮೇಲೆ “ಎಲ್ಲಾ ಆ ಕಪಿಲೇಶ್ವರನ ಲೀಲೆ. ನಮ್ಮ ಕೈಲೇನಿದೆ?” ಎಂದು ಸುಮ್ಮನಾದರು.
ಮದುವೆಯಾದ ಆರಂಭದಲ್ಲಿ ಶಿಕಾರಿ ಭಟ್ಟರ ಹೆಂಡತಿ ಲೀಲಾವತಿ ಅಮ್ಮನವರು ಗಂಡನ ಶಿಕಾರಿ ಹುಚ್ಚಿಗೆ ಹೌಹಾರಿದ್ದರು. “ನೀವು ಕಾಡಿನ ಪ್ರಾಣಿಗಳನ್ನು ಕೊಂದು ಮಂಚ ಮಲೆ ಕುಡಿಯನ ಮನೆಯಲ್ಲಿ ಬೇಯಿಸಿ ತಿಂದು ಬರುವವರು ಎಂದು ಗೊತ್ತಿರುತ್ತಿದ್ದರೆ ನಿಮ್ಮನ್ನು ಮದುವೆಯಾಗುತ್ತಿರಲಿಲ್ಲ.”
ಲೀಲಾವತಿ ಅಮ್ಮನವರ ಮಾತಿಗೆ ಶಿಕಾರಿ ಭಟ್ಟರು ಸಿಟ್ಟುಗೊಳ್ಳಲಿಲ್ಲ. “ನಾನೇನು ಬೇಟೆಯಾಡಿದ್ದನ್ನು ಇಲ್ಲಿಗೆ ತಂದು ಬೇಯಿಸಿಕೊಡು ಅಂತ ಹೇಳಿದ್ದೀನಾ? ಮಾಂಸ ತಿನ್ನಬಾರದೆಂದು ಶಾಸ್ತ್ರ ಪುರಾಣಗಳಲ್ಲಿ ಇಲ್ಲ. ಒಗ್ಗದಿದ್ದರೆ ನೀನು ತಿನ್ನಬೇಡ. ನಿನ್ನನ್ನು ಮದುವೆಯಾಗಿದ್ದೇನೆಂದು ನನ್ನ ಅಭ್ಯಾಸ ಬಿಟ್ಟು ಬಿಡಲು ನನ್ನಿಂದ ಸಾಧ್ಯವಿಲ್ಲ. ನಿನ್ನ ಇಷ್ಟಗಳಿಗೆ ನಾನು ಅಡ್ಡಿ ಬರುವುದಿಲ್ಲ.”
ಲೀಲಾವತಿ ಅಮ್ಮನವರು ಸುಮ್ಮನಾದರು. ಸದ್ಯಕ್ಕೆ ಮನೆಗೇ ತಂದು ಮಾಡಿಕೊಡೆಂದು ಬೆದರಿಸುತ್ತಿದ್ದರೆ ಹೆಣ್ಣು ಹೆಂಗಸಾದ ತಾನೇನು ಮಾಡಲು ಸಾಧ್ಯವಿತ್ತು? ಗಂಡಸರೆಂದ ಮೇಲೆ ಯಾವುದಾದರೊಂದು ಚಟ ಇದ್ದೇ ಇರುತ್ತದೆ. ಒಮ್ಮೆ ಮದುವೆಯಾದ ಮೇಲೆ ಉದಾರತೆಯಿಂದ ಹೊಂದಿಕೊಂಡು ಹೋಗಬೇಕೆಂದು ತನ್ನ ಅಮ್ಮ ಹೇಳಿಕೊಟ್ಟದ್ದು ನೆನಪಾಗಿ ಸಮಾಧಾನ ತಂದುಕೊಂಡರು. ಪತಿರಾಯರು ಬೇಟೆಯಾಡಿ ತಡವಾಗಿ ಮನೆ ಸೇರಿದಂದು ಗಂಡನಿಂದ ಮಾರು ದೂರ ಮಲಗುತ್ತಿದ್ದರು.
ಶಿಕಾರಿ ಭಟ್ಟರಿಗೆ ಒಬ್ಬಳು ಮಗಳು ಹುಟ್ಟಿದಳು. ಅವಳಿಗೆ ಅನಸೂಯಾ ಎಂದು ಅವರು ಹೆಸರು ಇಟ್ಟರು. ಅಸೂಯೆ ಇಲ್ಲದೆ ನಾವು ಬದುಕಬೇಕು. ನಾವು ತೋರುವ ದ್ವೇಷಾಸೂಯೆ ಚಕ್ರಬಡ್ಡಿ ಸಮೇತ ನಮಗೆ ಹಿಂದಿರುಗಿ ಬರುತ್ತದೆ ಎಂದು ಅವರು ಅದಕ್ಕೆ ಕಾರಣ ನೀಡಿದ್ದರು. ಮಗಳನ್ನು ದಿನಾ ಬೆಳಿಗ್ಗೆ ಬೇಗ ಎಬ್ಬಿಸಿ “ಕರಾಗ್ರವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತಿ, ಕರಮೂಲೇ ಸ್ಥಿತೇ ಗೌರಿ. ನಿನ್ನ ಐಶ್ವರ್ಯ, ವಿದ್ಯೆ, ಭವಿಷ್ಯ ಎಲ್ಲವೂ ನಿನ್ನ ಕೈಗಳಲ್ಲೇ ಇವೆ. ಯಾವ ಅದೃಷ್ಟವನ್ನೂ ನಂಬದೇ ಕೈ ನೋಡಿಕೊಂಡು ಕೆಲಸ ಆರಂಭಿಸು” ಎನ್ನುತ್ತಿದ್ದರು. ತಮಗೆ ಗೊತ್ತಿರುವ ಯಕ್ಷಗಾನ ಹಾಡುಗಳನ್ನು ಅವಳಿಗೆ ಕಲಿಸಿಕೊಡುತ್ತಿದ್ದರು.
ಅನಸೂಯಾ ಹನ್ನೆರಡಕ್ಕೆ ಕಾಲಿಟ್ಟಂದು ಮಗಳನ್ನು ಕರೆದು ಮಿಂದು ಬರಲು ಹೇಳಿದರು. ಲೀಲಾವತಿ ಅಮ್ಮನಿಗೂ ಮೀಯಲು ತಿಳಿಸಿ, ತಾನು ತೋಟದ ಕೆರೆಯಲ್ಲಿ ಮೂರು ಮುಳುಗು ಹಾಕಿ ಎದ್ದು ಬಂದರು. ದೇವರ ಕೋಣೆಯಲ್ಲಿ ತುಪ್ಪದ ಕಾಲ್ದೀಪ ಉರಿಸಿ ಹೆಂಡತಿಯನ್ನು, ಮಗಳನ್ನು ಕರೆದರು. ತಾನು ಚಕ್ಕಳ ಬಕ್ಕಳ ಹಾಕಿ ಮಗಳನ್ನು ತನ್ನೆದುರು ಕೂರಿಸಿಕೊಂಡರು: “ಆ ಕಪಿಲೇಶ್ವರ ನನಗೆ ಗಂಡು ಮತ್ತು ಹೆಣ್ಣು ಅಂತ ಕೊಟ್ಟಿರೋದು ನಿನ್ನನ್ನು ಮಾತ್ರ. ಹೆಣ್ಣುಗಳಿಗೆ ಯಜ್ಞೋಪವೀತ ಧಾರಣ ಮಾಡಿಸುವ ರೂಢಿಯಿಲ್ಲ. ನಾನದನ್ನು ಮೀರಬಲ್ಲೆ. ಆದರೆ ಹೆಣ್ಣುಗಳು ಯಜ್ಞೋಪವೀತ ಹಾಕಿಕೊಂಡರೆ ಚೆಂದ ಕಾಣುವುದಿಲ್ಲ. ನಿನಗೆ ಎಂಥಾ ಗಂಡ ಸಿಗ್ತಾನೋ? ನಿನಗೊಂದು ಗಂಡು ಮಗುವಾಗಿ ಅದಕ್ಕೊಂದು ಉಪನಯನವಾಗುವವರೆಗೆ ನಾನು ಬದುಕಿರುತ್ತೀನೋ ಇಲ್ಲವೋ? ಅದಕ್ಕೆ ನಿನಗೇ ಗಾಯತ್ರಿ ಹೇಳಿಕೊಡುತ್ತಿದ್ದೇನೆ. ಕಲಿತುಕೋ. ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ, ಭರ್ಗೋದೇವಸ್ಯ ಧೀಮಹಿ, ಧಿಯೋ ಯೋನಃ ಪ್ರಚೋದಯಾತ್. ಬುದ್ಧಿಯ ವಿಕಸನಕ್ಕಾಗಿ ಈ ಪ್ರಾರ್ಥನೆ. ಇದನ್ನು ಹೆಂಗಸರು ಹೇಳಬಾರದು ಅಂತಾರೆ. ಎಂತಹ ಮೂರ್ಖತನ ನೋಡು. ದೇವ್ರು ಗಂಡಸ್ರಿಗೊಂದು, ಹೆಂಗಸ್ರಿಗಿನ್ನೊಂದು ಅಂತ ರೂಲ್ಸು ಮಾಡ್ತಾನಾ? ಕಲ್ತುಕೋ ಕೂಸೇ. ನಿನ್ನ ಮಗನಿಗೆ ಹೇಳಿ ಕೊಡುವೆಯಂತೆ.”
ಶಿಕಾರಿ ಭಟ್ಟರ ಹೆಂಡತಿ ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದರು. ಏನನ್ನು ಹೇಳಿದರೂ ಪ್ರಯೋಜನವಿಲ್ಲವೆಂದು ಅವರಿಗೆ ಗೊತ್ತಿತ್ತು. ಅಂದು ಸ್ವಲ್ಪ ಹೆಚ್ಚು ತುಪ್ಪ ಸುರಿದು ಹೆಚ್ಚು ಹೊತ್ತು ದೇವರೆದುರು ದೀಪ ಉರಿಯುವಂತೆ ನೋಡಿಕೊಂಡರು.
ಅನಸೂಯಳಿಗೆ ಶಿಕಾರಿ ಭಟ್ಟರು ಸಂಧ್ಯಾವಂದನೆಯ ವಿಧಿಗಳನ್ನು, ಮನೆಯ ದೇವರಿಗೆ ಪೂಜೆ ಮಾಡುವುದನ್ನು ಕಲಿಸಿಕೊಟ್ಟರು. “ನನ್ನ ಅಪ್ಪ ಹೇಳಿಕೊಟ್ಟದ್ದು ಇದು. ಇದನ್ನು ನನ್ನ ಮಗಳಿಗೆ ಕಲಿಸಿಕೊಟ್ಟಲ್ಲಿಗೆ ಪಿತೃಋಣ ತೀರಿತು. ವಿದ್ಯೆ ಮತ್ತು ಸಂಪತ್ತು ಅನ್ಯರಿಗೆ ಕೊಡಬೇಕು. ನಾನು ಈಗ ಹೇಳಿಕೊಟ್ಟದ್ದನ್ನು ನೀನು ನಿನ್ನ ಮಗನಿಗೆ ಹೇಳಿ ಕೊಡುವೆಯಂತೆ.”
ಶಿಕಾರಿ ಭಟ್ಟರ ಹೆಂಡತಿ ಅನಸೂಯ ಅಮ್ಮನವರು ಅಂದಿನಿಂದ ತುಲಸಿಕಟ್ಟೆಗೆ ಒಂದು ಸುತ್ತು ಹೆಚ್ಚು ಪ್ರದಕಿಣೆ ಹಾಕತೊಡಗಿದರು.
ಬೆಳೆದ ಮಗಳು ಒಂದು ದಿನ ಕೇಳಿದಳು. “ಅಪ್ಪಾ, ನೀನು ಕೋವಿಯಿಂದ ಪಾಪದ ಕಾಡು ಪ್ರಾಣಿಗಳನ್ನು ಕೊಲ್ಲುತ್ತಿ. ಅವುಗಳನ್ನು ತಿಂದು ಮನೆಗೆ ಬರುತ್ತಿ. ನಮ್ಮ ಚಪಲಕ್ಕಾಗಿ ಹಸಿ ಜೀವಗಳನ್ನು ಕೊಲ್ಲುವುದು ಸರಿಯಾ? ಅಮ್ಮ ಮಾಂಸ ತಿನ್ನುತ್ತಾಳಾ? ನಾನು ತಿನ್ನುತ್ತೀನಾ? ನಿನಗೆ ಮಾತ್ರ ಆಸೆ ಯಾಕೆ?”
“ಆಸೆ ಅಂತಲ್ಲ. ನಮಗೆಲ್ಲರಿಗೂ ಇರೋದು ಒಂದೇ ಜನ್ಮ. ಅಬ್ಬಬ್ಬಾ ಅಂದ್ರೆ ಅರುವತ್ತುಎಪ್ಪತ್ತು ವರ್ಷ. ಅಷ್ಟರೊಳಗೆ ಬೇಕೆನ್ನಿಸಿದ್ದನ್ನು ಅನುಭವಿಸಬೇಕು. ನನ್ನ ಸುತ್ತಮುತ್ತ ಇರೋರೆಲ್ಲಾ ಮಾಂಸ ತಿನ್ನೋರೇ. ಅದರಲ್ಲಿ ಅಂಥಾದ್ದೇನಿದೆ ಎಂದು ನೋಡೋ ಕುತೂಹಲವಾಯಿತು. ಯಾರನ್ನೋ ಕಾಡೋದು, ಬೇಡೋದು ಯಾಕೆಂದು ಕೋವಿಯನ್ನು ಕೊಂಡೆ. ಬೇಟೆ ಅಭ್ಯಾಸವಾದ ಮೇಲೆ ಕೊಂದ ಪಾಪವನ್ನು ತಿಂದು ಪರಿಹರಿಸಿ ಕೊಂಡೆ. ನಿಜ ಹೇಳ್ತಿದ್ದೀನಿ ಮಗಳೇ. ಮಾಂಸಕ್ಕಿರೋ ರುಚಿ ತರಕಾರಿಗಿಲ್ಲ. ಹಸಿ ಜೀವಾನ ಕೊಂದು ತಿನ್ನೋದು ಸರಿ ಅಂತ ನಾನು ವಾದಿಸಲ್ಲ. ಹಾಗೆ ನೋಡಿದ್ರೆ ನಾವು ತಿನ್ನೋ ಹಣ್ಣುತರಕಾರಿ, ಬೇಳೆ, ಕಾಳು, ಧಾನ್ಯ, ಸೊಪ್ಪುಗಳಿಗೂ ಜೀವ ಇತ್ತಲ್ಲಾ? ಏನನ್ನೂ ತಿನ್ನದೆ ಮನುಷ್ಯ ಬದುಕಲು ಸಾಧ್ಯವಿಲ್ಲವಲ್ಲಾ?”
ಮಗಳು ಪ್ರತಿಯಾಡಲಿಲ್ಲ. ಶಿಕಾರಿ ಭಟ್ಟರು ಅನಸೂಯಳ ತಲೆ ನೇವರಿಸಿದರು: “ಒಂದಾನೊಂದು ಕಾಲದಲ್ಲಿ ಈ ವಿಶ್ವದ ಸಮಸ್ತರೂ ಮಾಂಸ ತಿನ್ನುತ್ತಿದ್ದರು. ಯಾವುದೋ ಒಂದು ಕಾಲ ಘಟ್ಟದಲ್ಲಿ ಕೆಲವರು ಮಾಂಸ ವರ್ಜಿಸಿದರು. ಮಾಂಸ ತಿನ್ನದಿರುವವರು ಶ್ರೇಷ್ಠರು ಎಂದು ಕೆಲವರು ಭಾವಿಸಿದರು. ನೀನು ಏನು ತಿನ್ನುತ್ತಿ, ಏನು ಬಿಡುತ್ತಿ ಎನ್ನುವುದು ಮುಖ್ಯವಲ್ಲ ಮಗಳೇ. ಎಲ್ಲರನ್ನೂ ಹೇಗೆ ಕಾಣುತ್ತಿ ಎನ್ನುವುದು ಮುಖ್ಯ. ಉದಾರ ಚರಿತಾನಾಂತು ವಸುಧೈವ ಕುಟುಂಬಕಂ. ನನ್ನನ್ನು ನೋಡು, ನಾನು ಒಂದೇ ಒಂದು ಬಾರಿ ಯಾದರೂ ಜಾತಿ ಭೇದ ಮಾಡಿದ್ದುಂಟಾ? ಬೇರೆಯವರು ಏನಂತಾರೋ ಅಂತ ಬದುಕಿದ್ದುಂಟಾ? ನನ್ನ ಅಂತರಾತ್ಮ ಮಾಂಸ ತಿನ್ನಬೇಡ ಅಂತ ಹೇಳಿದಂದು ನಿಲ್ಲಿಸಿಬಿಡುತ್ತೇನೆ.”
ಮಗಳು ಮಾತಾಡಲಿಲ್ಲ. ಶಿಕಾರಿ ಭಟ್ಟರು ಬೇಟೆಗೆ ಹೋಗುವುದನ್ನು ನಿಲ್ಲಿಸಲಿಲ್ಲ.
ಮಗಳ ಮದುವೆ ನಿಶ್ಚಯವಾಯಿತು. ಎರಡು ದಿನ ಶಿಕಾರಿ ಭಟ್ಟರು ನಿದ್ದೆಯಿಲ್ಲದೆ ತೊಳಲಿದರು. ಮಗಳಿಗದು ಅರ್ಥವಾಯಿತು. “ಅವ್ರನ್ನು ಇಲ್ಲೇ ನಿಲ್ಲಿಸಲು ಒಪ್ಪಿಸಬಹುದು ಅಪ್ಪಾ. ಆದರೆ ನಿಮ್ಮ ಶಿಕಾರಿ ಹುಚ್ಚು ನೋಡಿದರೆ ಯಾವ ಬ್ರಾಹ್ಮಣ ನಿನ್ನ ಮನೆ ಅಳಿಯನಾಗಿ ನಿಂತಾನು? ಇನ್ನು ಮುಂದೆ ನೀವು ಕೋವಿ ಹಿಡಿಯುವುದಿಲ್ಲ, ಮಾಂಸ ತಿನ್ನುವುದಿಲ್ಲ ಎಂದು ಮಾತು ಕೊಟ್ರೆ ಅಳಿಯನನ್ನು ನಿಮ್ಮ ಮಗನನ್ನಾಗಿ ಮಾಡುತ್ತೇನೆ. ನನಗೂ ಇಲ್ಲಿರೋದೇ ಇಷ್ಟ.”
ಶಿಕಾರಿ ಭಟ್ಟರು ಸುದೀರ್ಘವಾಗಿ ಯೋಚಿಸಿ ಮಗಳ ಕೈ ಅದುಮಿದರು. ತಮ್ಮ ಡಬ್ಬಲ್ ಬ್ಯಾರಲ್ಲು ಗನ್ನನ್ನು ಮಹಡಿಯ ಗೋಡೆಗೆ ಮೂರಿಂಚಿನ ಮೂರು ಮೊಳೆ ಜಡಿದು ನೇತು ಹಾಕಿಬಿಟ್ಟರು.
ಮಗಳ ಗಂಡ ಮನೆಯಳಿಯನಾಗಿ ಉಳಿದ. ಒಂದು ದಿನ ಶಿಕಾರಿ ಭಟ್ಟರು ಹಜಾರದಲ್ಲಿ ವೀಳ್ಯ ಮೆಲ್ಲುತ್ತಾ ಕೂತಿರುವಾಗ ಅಳಿಯ ಮಹಡಿಯಿಂದ ಕೆಳಗಿಳಿದು ಬಂದ. ಕೈಯಲ್ಲಿ ಶಿಕಾರಿ ಭಟ್ಟರ ಡಬ್ಬಲ್ಲು ಬ್ಯಾರಲ್ಲು ಗನ್ನಿತ್ತು. “ಮಾವಾ, ನಿಮ್ಮ ಶಿಕಾರಿ ಬಗ್ಗೆ ಮಂಚ ಮಲೆ ಕುಡಿಯ ಎಲ್ಲವನ್ನೂ ಹೇಳಿದ. ನನಗೂ ನಿಮ್ಮದೇ ಅಭ್ಯಾಸ. ನನ್ನ ಹಾಗೆ ನಿಮಗೂ ನಾಲಿಗೆ ಜಡ್ಡುಗಟ್ಟಿರಬೇಕು. ಹೊರಡಿ ಮಾವಾ, ಯಾರ ಗುರಿ ಹೇಗಿದೆ ಎಂದು ಪರೀಕ್ಷಿಸಿಯೇ ಬಿಡೋಣ.”
*****