ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದು ಗಂಟೆ ಮೊದಲೇ ಹೊರಟುಬಿಡುತ್ತಿದ್ದೆ. ನಾವಿಬ್ಬರು ಅಪರೂಪಕ್ಕೆಂಬಂತೆ ಮಾತಾಡಿಕೊಳ್ಳುತ್ತಿದ್ದೆವು. ನಾನು ನನ್ನ ಪಾಡಿಗೆ ಬೆಳಿಗ್ಗೆ ಬೇಗ ಎದ್ದು ಓದಿ ಕೊಳ್ಳುತ್ತಿದ್ದೆ. ಅವನು ತಡವಾಗಿ ಎದ್ದು ಸಿಗರೇಟು ಸುದುತ್ತಾ ವಿವಿಧ ಭಾರತಿ ಕೇಳುತ್ತಿದ್ದ.
ಅವು ನನ್ನ ವೃತ್ತಿ ಜೀವನದ ಆರಂಭದ ದಿನಗಳು. ಹುಡುಗಿಯರ ಕಾಲೇಜಲ್ಲಿ ಉಪನ್ಯಾಸಕ. ಅಪರಿಚಿತ ಊರಲ್ಲಿ ಕಲೀಗು ಒಬ್ಬರಲ್ಲಿ ಪೇಯಿಂಗು ಗೆಸ್ಟಾಗಿ ಉಳಿದಿದ್ದೆ. ಗಂಡ ಹೆಂಡಿರ ಮಧ್ಯೆ ಮೂರನೆಯವನಿರುವುದು ನನಗೆ ಇಷ್ಟವಾಗುತ್ತಿರಲಿಲ್ಲ. ಅಲ್ಲಿಗೆ ಇವನು ಬಂದಿದ್ದವನು ತಾನಾಗಿಯೇ ನನ್ನ ಪರಿಚಯ ಮಾಡಿಕೊಂಡ.
“ನನ್ನದೇ ದೊಡ್ಡ ರೂಮಿದೆ. ರಾತ್ರಿ ಮಲಗಲು ಒಂದಿಷ್ಟು ಜಾಗ ಕೊಟ್ಟು ಬಿಡಿ. ರೆಂಟು, ವಾಟರು ಮತ್ತು ಲೈಟು ಬಿಲ್ಲು ಹೇಗೂ ನಾನೇ ಕೊಡ್ತಿದ್ದೀನಿ. ಅದೇ ಸಿಸ್ಟಮ್ಮು ಮುಂದುವರಿಯುತ್ತೆ. ನಂಗೆ ಒಂಟಿತನ ಬೋರಾಗಿದೆ ಎಂದ.
ನಾನು ಹೆಚ್ಚು ಮಾತಾಡದೆ ಅಂದೇ ರೂಮಿಗೆ ಶಿಫ್ಟಾಗಿದ್ದೆ.
ಮಹಡಿ ಮೇಲಿನ ಸಾಲು ರೂಮುಗಳಲ್ಲಿ ಅವನದ್ದೂ ಒಂದು. ಕಾಮನ್ನು ಬಾತುರೂಮು ಮತ್ತು ಟಾಯಿಲೆಟ್ಟು ಅನ್ನೋದನ್ನು ಬಿಟ್ಟರೆ ಕಿರಿಕಿರಿ ಏನಿರಲಿಲ್ಲ. ಎರಡು ಕಾಟಿನ ದೊಡ್ಡ ರೂಮು. ಎರಡು ಮೇಜು ಮತ್ತು ಕುರ್‍ಚಿ. ಸಿಟಿಯಿಂದ ಸ್ವಲ್ಪ ದೂರದಲ್ಲಿದ್ದುದರಿಂದ ಕಾಮ್ ನೆಸ್ಸಿತ್ತು. ವಿವಿಧ ಭಾರತಿ ಬಿಟ್ಟರೆ ಅಕ್ಕಪಕ್ಕದ ರೂಮುಗಳಿಂದ ಬೇರೇನೂ ಗದ್ದಲಗಳು ಕೇಳುತ್ತಿರಲಿಲ್ಲ. ಬೆಳಿಗ್ಗೆ ಐದು ಗಂಟೆಗೆ ಏಳುವ ಅಭ್ಯಾಸ ನನ್ನನ್ನು ಬಿಟ್ಟರೆ ಬೇರಾರಿಗೂ ಇರಲಿಲ್ಲ.
ತಿಂಗಳ ಸಂಬಳ ಸಿಕ್ಕಾಗ ನೂರು ರೂಪಾಯಿ ಅವನ ಕೈಲಿರಿಸಿ “ನನ್ನದು ಟೆಂಪರರಿ ಕೆಲ್ಸ. ಐನೂರು ಕೊಡ್ತಿದ್ದಾರೆ” ಎಂದೆ.
ಅವನು ದೊಡ್ಡದಾಗಿ ನಕ್ಕ: “ಪೂರ್‍ಣೇಶ್, ರೂಮು ರೆಂಟು ಯಾಕೆ ಕೊಡ್ತೀರಿ?
ಒಬ್ನೇ ಇದ್ದಾಗ ನಾನೇ ಫುಲ್ಲು ಕೊಡ್ತಿರ್‌ಲಿಲ್ವೆ? ಏನೋ
ಎರಡು ದಿನ ಒಟ್ಟಿಗಿರ್‍ತಿವಿ. ಮುಂದೆ ಹೇಗೊ? ಹಣಕ್ಕಿಂತ ವಿಶ್ವಾಸ ಮುಖ್ಯ.”
“ಬರೀ ವಿಶ್ವಾಸದಿಂದ ಬದುಕೋಕಾಗಲ್ಲ. ಇಷ್ಟಕ್ಕೂ ನಂಗೂ ಸ್ಯಾಲರಿ ಇದ್ಯಲ್ಲಾ? ಹಣ ಇಸ್ಕಳ್ಳಿ. ನಿಮ್ಮ ಋಣದಲ್ಲಿರಲು ಮನಸ್ಸು ಬರುತ್ತಿಲ್ಲ.”
ಆತ ಇನ್ನೊಮ್ಮೆ ನಕ್ಕ: “ಆಗಾಗ ಕೇಳ್ತಿದ್ದೀನಿ ಋಣ ಅನ್ನೋ ಮಾತನ್ನ. ಈ ಋಣ ಅನ್ನೋದನ್ನ ನೀವೂ ನಂಬ್ತೀರಾ? ಸರಿ. ನೋ ಆಗ್ರ್ಯೂಮೆಂಟ್ಸ್. ಹಣ ಕೊಟ್ಬಿಡಿ.”
ಅವನು ಬ್ಯಾಂಕೊಂದರಲ್ಲಿ ದುಡಿಯುತ್ತಿದ್ದ. ಬೆಳಿಗ್ಗೆ ಎದ್ದ ಕೂಡಲೇ ಸಿಗರೇಟು ಹಚ್ಚಿ ಹೊಗೆ ಬಿಡುತ್ತಾ “ತೊಂದರೆಯಾಗ್ತದಾ?” ಎಂದು ಕೇಳುತ್ತಿದ್ದ. ನಾನು ಇಲ್ಲವೆಂದರೂ ಹೊರಗಡೆ ಹೋಗಿ ಸೇದಿ ಬರುತ್ತಿದ್ದ. ರಾತ್ರೆ ಹೋಟೆಲ್ಲು ಊಟವಾದ ಮೇಲೆ ಅಲ್ಲೇ
ಒಂದು ಕ್ವಾರ್‍ಟರ್ ಏರಿಸುತ್ತಿದ್ದ. ರೂಮಿಗೆ ಬಂದು ತಾನು ಏರಿಸಿದ್ದು ಯಾವುದೆಂದು ಹೇಳುತ್ತಿದ್ದ. “ಮೊದ್ಲು ರೂಮಿಗೇ ತಂದು ಬಿಡುತ್ತಿದ್ದೆ. ಈಗ ಇಷ್ಟವಾಗಲ್ಲ. ನಿಮ್ಗೆ ಸಿಗ್ರೇಟು, ಕ್ವಾಟರು ಬೇಕು ಎಂದಾದಾಗ ನನ್ನ ಜತೆ ಬನ್ನಿ. ಮನುಷ್ಯ ಆಸೆಗಳನ್ನು ಅದುಮಿಟ್ಟು ಬದುಕಬಾರ್‍ದು. ಇರುವುದು ಒಂದೇ ಜನ್ಮ.”
ಒಂದು ಬೆಳಿಗ್ಗೆ ಎಂಟಕ್ಕೆ ಎದ್ದವನು ಎಂದಿನಂತೆ ಸಿಗರೇಟು ಹಚ್ಚಿ ಹೊಗೆ ಬಿಟ್ಟ. ಇದ್ಯಾಕೆ ದಿನಾ ಬೆಳಿಗ್ಗೇ ಸೇದ್ತೀರಾ? ಬಿಟ್ಟು ಬಿಟ್ರೆ ಹಣಾ, ಆರೋಗ್ಯ ಎರಡೂ ಉಳಿಯುತ್ತಲ್ಲಾ? ಎಂದು ಕೇಳಿದೆ. ಅವನು ದೊಡ್ಡದಾಗಿ ನಕ್ಕ : “ಗಳಿಸೋದು ಅನುಭವಿಸೋದಿಕ್ಕೆ. ಉಳಿಸೋದಿಕ್ಕಲ್ಲ ಪೂರ್‍ಣೇಶ್” ಎಂದ.
ನಿಮ್ಗೆ ಅಣ್ಣ-ಅಕ್ಕ, ತಮ್ಮ-ತಂಗಿ ಯಾರೂ ಇಲ್ವೆ? ಅವನು ಮತ್ತೊಮ್ಮೆ ನಕ್ಕ. “ನಮ್ಮಪ್ಪನ ತ್ಯಾಗ ಮತ್ತು ಬಲಿದಾನ ಬಹಳ ದೊಡ್ಡದು ಪೂರ್‍ಣೇಶ್. ಈ ದೇಶಕ್ಕೆ ಭರ್‍ತಿ ಒಂದು ಡಜನ್ನು ಕಾಣಿಕೆ ನೀಡಿದ್ದಾನೆ! ಅಪ್ಪನ ಸಂಬ್ಳಾಗಿಂಬ್ಳಾ ಧಾರಾಳ ಸಾಕಾಗುತ್ತೆ. ಮನೇಲಿ ತೊಂದ್ರೆ ಇದ್ರೂ ನಾನ್ಯಾಕೆ ಹಚ್ಕೋಬೇಕು? ದುಡಿತೀನಿ, ಮಜಾ ಮಾಡ್ತೀನಿ. ಈಗಲ್ದೆ ಇನ್ಯಾವಾಗ ಜೀವನ ಅನುಭವಿಸೋದು?”
ನಾನು ನಿಟ್ಟುಸಿರು ಬಿಟ್ಟೆ. ಮನೆಯಲ್ಲಿ ನನ್ನನ್ನೇ ನಂಬಿ ಕೂತಿರುವ ಅಪ್ಪ-ಅಮ್ಮ, ಹೈಸ್ಕೂಲು ಓದುತ್ತಿರುವ ತಮ್ಮ, ಡಿಗ್ರಿ ಮುಗಿಸಿ ಮನೆಯಲ್ಲಿರುವ ತಂಗಿ, ನನ್ನ ಎಜುಕೇಶನ್ನು ಲೋನು ಎಂದು ತಿಂಗಳ ಸಂಬಳ ಯಾವ ಮೂಲೆಗೂ ಸಾಲುತ್ತಿರಲಿಲ್ಲ.
ಅದನ್ನು ಕೇಳಿ ಅವನು ವಿಚಿತ್ರ ನಗೆ ನಕ್ಕ: “ನಮ್ಮ ಸಂತೋಷ ಅನ್ನೋದು ನಮ್ಮ ಕೈಯಲ್ಲೇ ಇರುತ್ತೆ. ಕಾಮನ್‌ಸೆನ್ಸು ಬಳಸಿ ನೋಡಿ. ನಿಮ್ಮೆ ಕೆಲ್ಸ ಸಿಗದಿರ್‍ತಿದ್ರೆ ಮನೆಯೋರು ಏನು ಮಾಡ್ತಿದ್ರು? ನಿಮ್ಮನ್ನು ನಂಬಿ ನಿಮ್ಮಪ್ಪ ಮತ್ತಿಬ್ರನ್ನು ಹುಟ್ಟಿಸಿ ಹಾಕಿದ್ದಾ?”
ಅವನ ಪ್ರಶ್ನೆ ಅಸಹ್ಯವಾಗಿತ್ತು: “ಆದ್ರೂ ನಾನು ಹಿರೀಮಗ. ನನ್ನ ಕರ್‍ತವ್ಯ ಅನ್ನೋದು ಒಂದಿದೆಯಲ್ಲಾ?”
ಅವನು ಅದೇ ವಿಕಟ ನಗೆ ನಕ್ಕ.
“ಈ ಕರ್‍ತವ್ಯ, ಋಣ ಅನ್ನೋದು ನಮ್ಮ ವೀಕುನೆಸ್ಸಿನ ಹೆಸರುಗಳು. ನೀವು ಓದ್ತಿರೋವಾಗ ನಿಂ ಮನೆಯೋರು ಹೇಗೆ ಬದುಕ್ತಿದ್ರು? ಈವಾಗ್ಲೂ ಹಾಗೇನೇ ಅಂದ್ಕೂಳ್ಳಿ. ಎಷ್ಟೋ ಜನರನ್ನು ನಾನು ಕಂಡವನು. ಯಾರೂ ಯಾರನ್ನೂ ನಂಬಿ ಬದುಕೋಕಾಗಲ್ಲ. ನೀವು ನಿಮ್ಮನ್ನೇ ನಂಬಿ ಅವ್ರು ಜೀವನ ಸಾಗಿಸ್ತಿದ್ದಾರೆ ಎಂದು ತಿಳಕೊಂಡ್ರೆ ಅದು foolishness”
ಅಂದು ನಾರ್‍ಮಲ್ಲಾಗಿರಲು ನನ್ನಿಂದಾಗಲಿಲ್ಲ. ನಾನು ಹಣ ಕಳಿಸದಿದ್ರೆ ಮೈ ತುಂಬಾ ಕಾಯಿಲೆಗಳಿರುವ ಅಮ್ಮ ಔಷಧಿಗೆ ಹಣ ಇಲ್ಲದೆ ಸತ್ತೇ ಹೋಗ್ತಾಳೆ. ತಮ್ಮನ ಓದು ನಿಂತು ಹೋಗುತ್ತದೆ. ತಂಗಿ ಮೈ ಮಾರೋದಿಕ್ಕೆ ಹೋಗಬೇಕೇನೊ? ಇದನ್ನೆಲ್ಲಾ ನೋಡಿ ಅಪ್ಪನಿಗೆ ಹುಚ್ಚು ಹಿಡಿಯುತ್ತದೆ. ಓ ದೇವ್ರೇ, ಇದೆಂಥಾ ಯೋಚನೆ ನನ್ನದು?
ನನ್ನ ಚಡಪಡಿಕೆ ನೋಡಿ ಕಲೀಗ್ಸು ಕಾರಣ ಕೇಳಿದರು. ಅವನ ಬಗ್ಗೆ ಹೇಳಿದಾಗ “ಅರೆ ಅವ್ನಾ? ಒಳ್ಳೆ ಪಿಂಪ್ ತರಾ ಇದ್ದಾನೆ. ಅವನ ಮಾತನ್ನು ಯಾರಾದ್ರೂ ಸೀರಿಯಸ್ಸಾಗಿ ತಗೋತಾರೇನ್ರಿ?” ಎಂದು ನನ್ನನ್ನೇ ಪ್ರಶ್ನಿಸಿದರು.
ಅವನು ರಾತ್ರಿ ರೂಮಿಗೆ ಬಂದಾಗ ನಾನು ಸುಮ್ಮನೆ ಕಾಟ್ ಮೇಲೆ ಬಿದ್ದುಕೊಂಡಿದ್ದೆ. ಯಾಕೆ ಪೂರ್‍ಣೇಶ್ ನೀವಿಂದು ಓದ್ತಿಲ್ಲ?
ಓದೋಕಾಗ್ತಿಲ್ಲ. ನೀವು ಬೆಳಿಗ್ಗೆ ಹೇಳಿದ್ದು ಈಗ್ಲೂ ಕೊರೆಯುತ್ತಿದೆ.
ಅವನದು ಮತ್ತದೇ ವಿಕಟ ನಗು. “ಎಂಥಾ ಗುಗ್ಗೂರೀ ನೀವು? ಆಡಿದ್ ಮಾತನ್ನ ಅಲ್ಲಿಗೇ ಬಿಟ್ಟ್ ಬಿಡಬೇಕು. ಅನುಭವಿಸೋದಿಕ್ಕೆ ಇಡೀ ಪ್ರಪಂಚಾನೇ ಇರೋವಾಗ ಏನೇನೋ ಯೋಚಿಸ್ತಾ ಕೂರ್‍ತಾರೇನ್ರಿ? ಚಿಂತೆಯೇ ಮುಪ್ಪು.”
ನಾನು ಸುಮ್ಮನಾದೆ. ಅವನು ಹತ್ತಿರ ಬಂದು ನನ್ನ ಕಾಟಲ್ಲಿ ಕೂತ. “ಇಲ್ಲಿಗೆ ಬಂದು ಎಷ್ಟು ತಿಂಗಳಾಯ್ತು? ನಿಜಾ ಹೇಳಿ. ಒಂದು ಹಕ್ಕೀನೂ ಬಲೆಗೆ ಬೀಳ್‌ಲಿಲ್ವಾ.?”
ನಾನು ಧಿಗ್ಗನೆ ಎದ್ದು ಕೂತೆ. “ಎಂಥಾ ಮಾತಾಡ್ತೀರಿ? ನಾನು ಪಾಠ ಮಾಡೋನು. ಹಕ್ಕಿ ಹಿಡಿಯೋನಲ್ಲ.”
ಅವನು ಪೂರ್‍ತಿ ಒಂದು ನಿಮಿಷವಾದರೂ ನಕ್ಕಿರಬೇಕು. “ಹೋಗಲಿ ಪೂರ್‍ಣೇಶ್. ನಿಮ್ಗೆ ಯಾವ ಕ್ಲಾಸು ಇಷ್ಟ?”
“ಫೈನಲ್ಲು ಯಿಯರು.”
“ಯಾಕೆ?”
ಯಾಕೆಂದು ತಕ್ಷಣ ಉತ್ತರಿಸಲು ಸಾಧ್ಯವಾಗಲಿಲ್ಲ.
“ಹೇಳೋಕಾಗ್ತಿಲ್ಲ ಅಲ್ಲಾ? ನೀವು ಮುಚ್ಚಿಡ್ತಿದ್ದೀರಿ. ಆ ಕ್ಲಾಸಲ್ಲಿ ತುಂಬಾ ಬ್ಯೂಟಿಫುಲ್ಲು ಹಕ್ಕಿಗಳಿರ್‍ಬೇಕು. ಅವ್ರಲ್ಲಿ ನೀವ್ಯಾರನ್ನೋ ಪ್ರೀತಿಸ್ತಿರ್‍ಬೇಕು. ಬಹಳ ಸಿಂಪಲ್ಲು ಲಾಜಿಕ್ಕು.”
“ಅವ್ರಲ್ಲಿ ಕೆಲವ್ರು ಇಷ್ಟ ಆಗೋದು ನಿಜ. ಆದ್ರೆ ನಾನ್ಯಾರನ್ನೂ ಲವ್ವು ಮಾಡ್ತಿಲ್ಲ.”
“ಮೊದ್ಲಿಗೆ ಎಲ್ರೂ ಹಂಗೇನೇ ಅಂದ್ಕೂಳ್ಳೋದು. ಲೈಕ್‌ನೆಸ್ಸಿನಿಂದ ಆರಂಭ. ಅಟ್ಯಾಚುಮೆಂಟು ಮುಂದಿನ ಹೆಜ್ಜೆ. ಕೊನೆಗೆ ಲವ್ವು. ನಿಮ್ಗಮಿನ್ನೂ ಅರ್‍ಥ ಆಗದಿದ್ರೆ ನೀವು ಉದ್ಧಾರ ಆಗಲ್ಲರೀ.”
ಅವನು ಮಲಕ್ಕೊಂಡ. ಸ್ವಲ್ಪ ಹೊತ್ತಿಗೆ ಗೊರಕೆ ಹೊಡೆಯ ತೊಡಗಿದ. ನನಗೆ ಸರಿ ನಿದ್ದೆ ಬರಲಿಲ್ಲ.
ಮರುದಿನ ಫೈನಲ್ಲು ಯಿಯರಿನ ಕ್ಲಾಸು ತೆಗೆದುಕೊಳ್ಳುವಾಗ ಅವನ ಮಾತುಗಳು ನೆನಪಾದವು. ನೂರ ಮೂವತ್ತು ಹುಡುಗಿಯರ ದೊಡ್ಡ ಕ್ಲಾಸು. ಹೆಚ್ಚಿನವರು ನನಗಿಂತ ಎರಡು ಮೂರು ವರ್ಷಗಳಿಗೆ ಚಿಕ್ಕವರು. ಮದುವೆಯಾಗಿ ಆರಂಭದ ಸುಖ ಸಂತೃಪ್ತಿಗಳನ್ನು ಮುಗಿಸಿ ಬೇಸತ್ತು ಕಾಲೇಜಿಗೆ ಸೇರಿದವರು ಏಳೆಂಟು. ಅವರೆಲ್ಲಾ ನನಗಿಂತ ಹಿರಿಯರು. ಸಣ್ಣ ಕ್ಲಾಸನ್ನು ಒಂದೇ ಸಲಕ್ಕೆ ಹಾರಲಾಗದವರು ಸಾಕಷ್ಟಿದ್ದರು. ಇಡೀ ಕ್ಲಾಸು ನಾರ್ಮಲ್ಲಾಗಿ ಫ್ರೀಯಾಗಿತ್ತು. ನಾನು ಎಂದಿನಂತಿರಲಿಲ್ಲ. ವಿ ನೆಕ್ಕಿನಿಂದ ಇಣುಕುತ್ತಿದ್ದ ಕೆಲವರ ಯವ್ವನ ತಲೆ ಕೆಡಿಸಿತು. ಇವರಲ್ಲಿ ಯಾರನ್ನಾದರೂ ನಾನು ಪ್ರೀತಿಸ್ತಿದ್ದೀನಾ? ಲೈಕುನೆಸ್ಸು, ಅಟ್ಯಾಚು ಮೆಂಟುಗಳ ಕೊನೆ ಯಾವುದು? ಉತ್ತರ ಸಿಗಲಿಲ್ಲ. ಚೆನ್ನಾಗಿ ಪಾಠ ಮಾಡಲಿಕ್ಕೂ ಸಾಧ್ಯವಾಗಲಿಲ್ಲ. ಹೇಗೋ ಪೀರಿಯಡ್ಡು ಮುಗಿಸಿ ಹೊರಬಂದೆ.
ಸಂಡೇಯಂದು ಅವನು ರೂಮಿನಲ್ಲೇ ಇದ್ದ. ಒಟ್ಟಿಗೆ ‘ಹರ್ಷ’ದಲ್ಲಿ ತಿಂಡಿ ಮುಗಿಸಿದೆವು. ‘ಕೆರೆ ಕಡೆ ಹೋಗೋಣವಾ’ ಕೇಳಿದ. ಇಬ್ಬರೂ ಕೆರೆ ಏರಿ ಮೇಲೆ ಹೆಜ್ಜೆ ಹಾಕಿದೆವು. “ಜುಲೈ ತಿಂಗಳಲ್ಲಿ ಈ ಕೆರೆ ಕೋಡಿ ಬೀಳೋದು ಎಷ್ಟು ಚೆನ್ನಾಗಿರ್‍ತದೆ? ಸಿಟಿ ಇಲ್ಲಿವರೆಗೂ ಬೆಳೀತಿದೆ. ನಾಲ್ಕೈದು ವರ್ಷದಲ್ಲಿ ಕೆರೆಯನ್ನು ನುಂಗಿ ಬಿಡುತ್ತೇನೊ?” ಎಂದು ಆತಂಕ ವ್ಯಕ್ತಪಡಿಸಿದ. ಕೆರೆ ಏರಿಯ ಎಡಭಾಗದಲ್ಲಿ ರೈಲು ಹಳಿಗಳು. ಕಣ್ಣಿಗೆ ಕಾಣಿಸುವಷ್ಟು ದೂರದಲ್ಲಿ ರೈಲ್ವೇ ನಿಲ್ದಾಣ. ಹಳಿಗಳ ಗುಂಟ ಸಾಗುವಾಗ ಅವನು ಕೇಳಿದ. “ಈ ಲೈನು ಎಲ್ಲಿಗೆ ಹೋಗುತ್ತೆ ಗೊತ್ತಾ?”
“ಇಲ್ಲಿಂದ ಸ್ಟೇಶನ್ನಿಗೆ. ಆಚೆ ಹೋದರೆ ಅರಸೀಕೆರೆ-ಬೆಂಗಳೂರು. ಈಚೆ ಹೋದರೆ ಮೈಸೂರು.”
“ಅಲ್ಲಿಗೆ ನಿಂತುಬಿಡುತ್ತಾ? ಮತ್ತೆ ಮುಂದುವರಿಸಿ. ಆಚೆ ಮದರಾಸು, ಈಚೆ ಮುಂಬಯಿ. ಮುಂದುವರಿಸಿದರೆ ಎಲ್ಲಿಂದೆಲ್ಲಿಗೊ? ರೈಲು ಮಾರ್ಗಕ್ಕೊಂದು ಗುರಿಯಿಲ್ಲ. ರೈಲುಗಳಿಗೆ ಅವು ಆಧಾರ ಮಾತ್ರ. ನಮ್ಮ ಜೀವನಕ್ಕೂ ಗುರಿ ಎಂಬುದಿಲ್ಲ. ಬರುವುದನ್ನು ಅನುಭವಿಸೋದೇ ಜೀವನ.”
“ನನಗಿದೆ. ತಂಗಿಯ ಮದುವೆ, ತಮ್ಮನ ಓದು, ನನ್ನ ಮದುವೆ. ಇವೆಲ್ಲಾ ನನ್ನ ಗುರಿಗಳು.”
ಅವನ ವಿಚಿತ್ರ ನಗು ಮರುಕಳಿಸಿತು. “ಆಮೇಲೆ? ಮದ್ವೆಯಾಗೋದು ಜೀವನದ ಗುರೀನಾ? ಮದ್ವೆ, ಮಕ್ಳು ಆದಲ್ಲಿಗೆ ಜೀವನ ಮುಗೀತಾ?
ನಾನು ಅಂತಮುರ್‍ಖಿಯಾದೆ. ಮದುವೆ, ಮಕ್ಕಳು, ಅವರ ಓದು, ಅವರ ಮದುವೆ, ಅವರ ಮಕ್ಕಳು ಜೀವನ ಹೀಗೆ ಮುಂದುವರಿಯುತ್ತದೆ. ನನ್ನಜ್ಜ, ನನ್ನಪ್ಪ ಮಾಡಿರೋದು, ನಾನು ಮಾಡಬೇಕೆಂದಿರುವುದು ಇದೇ ಸಾಧನೆ. ಅ ನನ್ನ ಮಕ್ಕಳು ಮುಂದುವರಿಸಲಿಕ್ಕಿರುವುದೂ
ಇದನ್ನೇ. ಜೀವನಕ್ಕಿರೋ ಅರ್‍ಥ ಇಷ್ಟೇನಾ? ನಾಳೆ ನಾನು ಜೀವನ ಸಾರ್ಥಕತೆಯ ಒಂದೇ ಒಂದು ಭಾವವೂ ಇಲ್ಲದೆ ಸತ್ತು ಹೋಗುತ್ತೇನೆ.
ಅಲ್ಲೇ ಎಡಬದಿಯಲ್ಲಿ ಅರಳಿಕಟ್ಟೆಯೊಂದಿತ್ತು. ಅವನು ನನ್ನ ಕೈ ಹಿಡಿದುಕೊಂಡ.
“ಬನ್ನಿ ಸ್ವಲ್ಪ ಹೊತ್ತು ಕೂರಾಣ. ನಾನು ಕೇಳಿದ ಪ್ರಶ್ನೆಗೆ ನಿಮ್ಮಲ್ಲಿ ಉತ್ತರವಿಲ್ಲ. ನನ್ನಲ್ಲೂ ಇಲ್ಲ. ಅದ್ಕೇ ಜೀವನಾನ ಬಂದ ಹಾಗೆ ಅನುಭವಿಸೋದು. ಹೀಗೇನೇ ಅನುಭವಿಸ್ಬೇಕು ಎಂದ. ಬೌಂಡರಿ ಹಾಕಿಕೊಂಡ್ರೋ ಪ್ರಾಬ್ಲೆಮ್ಮು ಶುರುವಾಗುತ್ತೆ. ನಿಮ್ದು ಅದೇ ಪ್ರಾಬ್ಲೆಮ್ಮು ಎಂದ.
ಅರಳಿ ಕಟ್ಟೆಯಲ್ಲಿ ಕೂತೆವು. “ಪೂರ್‍ಣೇಶ್ ಮದ್ವೆಯಾಗ್ಬೇಕು ಅಂದ್ರಲ್ಲಾ? ಎಲ್ಲಾದ್ರೂ ಹೆಣ್ಣು ನೋಡಿಟ್ಟಿದ್ದೀರಾ?”
“ಇಲ್ಲ. ತಂಗಿ ಮದ್ವೆಯಾಗ್ದೆ ನಾನು ಆಗುವಂತಿಲ್ಲ. ಗಂಡು ಹುಡುಕ್ತಾ ಇದ್ದೀನಿ.”
“ಇನ್ನೂ ಸಿಕ್ಕಿಲ್ವಾ?”
“ನೋಡಿ ಒಪ್ಕೋತಾರೆ. ತುಂಬಾ ಡೌರೀನೂ ಕೇಳ್ತಾರೆ. ನಮ್ಮಿಂದ ಕೊಡೋಕಾಗ್ಲಿಲ್ಲ.”
“ಜಾತಿ ಬೌಂಡರಿಯೊಳಗಿದ್ರೆ ಡೌರಿ ಕಾಟ ತಪ್ಪಲ್ಲ. ಬೇರೆ ಜಾತಿಯೋನು ಡೌರಿ ಕೇಳಲ್ಲ ಎಂದಾದ್ರೆ ತಂಗೀನ ಕೊಡ್ತೀರಾ?”
“ಈ ವಿಚಾರ ನನ್ನ ತಲೆಯಲ್ಲಿ ಎಂದೂ ಸುಳಿದಿಲ್ಲ. ನಾನು ಒಪ್ಪಿದ್ರೂ ಅಪ್ಪ ಅಮ್ಮ ಖಂಡಿತಾ ಒಪ್ಪಲ್ಲ. ತಂಗಿ ಮನಸ್ಸು ಗೊತ್ತಿಲ್ಲ.”
“ಮದ್ವೆ ಆಗೋಳು ತಂಗಿ. ಅವಳೇ ಬೇಕಾದೋರ್‍ನಾ ಸೆಲೆಕ್ಟು ಮಾಡ್ಲಿ. ನೀವ್ಯಾಕೆ ತಲೆ ಕೆಡಿಸ್ಕೊಬೇಕು? ಹಾಗೆ ಮಾಡಿದ್ರೆ ನಿಮ್ಮ ವಂಶ ಗೌರವ ಹಾಳಾಗುತ್ತಲ್ಲಾ? ತಪ್ಪು ತಿಳೀಬೇಡಿ ಪೂರ್‍ಣೇಶ್. ಜಾತಿ, ಅರೇಂಜ್ಡು ಮದುವೆ ಅನ್ನೋದು ನಮ್ಮ ಮೂಲ ಸಂಸ್ಕೃತಿ ಅಲ್ಲ. ಮಾನವನ ಮೂಲ ಮಂಗ. ಅಂದ್ಮೇಲೆ ಜಾತಿಗಳಿಗೆ ಏನು ಅರ್ಥ? ತಮ್ಮಿಷ್ಟದಂತೆ ಮದುವೆಯಾಗೋಕಾಗ್ದೋರು ಯಾಕೆ ಬದುಕ್ಬೇಕು?”
ನಾನು ಸುಮ್ಮನಾದೆ. ಜಾತಿಗಳಿಲ್ಲದೆ ಮಾನವ ಲಕ್ಷಗಟ್ಟಲೆ ವರ್ಷ ಬದುಕಿದ್ದ. ಮುಂದೆಯೂ ಬದುಕಲು ಸಾಧ್ಯವಿದೆ. ಜಾತಿಯ ಬೌಂಡರಿಯೊಳಗೆ ಬದುಕಲು ಯತ್ನಿಸುತ್ತಿರುವುದೇ ದೊಡ್ಡ ಪ್ರಾಬ್ಲೆಮ್ಮು. ಮೀರಬೇಕು; ಎಲ್ಲವನ್ನೂ ದಾಟಬೇಕು. ಆಗ ಜೀವನ ಅನುಭವಿಸಲು ಸಾಧ್ಯವಾಗುತ್ತದೆ.
“ನಿಮ್ಮ ಮಾತನ್ನು ಒಪ್ಕಂಡೆ. ನೀವು ಯಾರನ್ನಾದ್ರೂ ಪ್ರೀತಿಸ್ತಿದ್ದೀರಾ” ಜಾತಿ ಬಿಟ್ಟು ಅವರನ್ನು ಮದ್ವೆಯಾಗ್ತೀರಾ?”
“ಪ್ರೀತಿಸಿದ್ದು ನಿಜ ಪೂರ್‍ಣೇಶ್. ಅವಳೊಂದು ಅದ್ಭುತ ಹೆಣ್ಣು ಅಂದ್ಕೊಂಡು ಪ್ರೀತಿಸ್ದೆ. ಅವ್ಳೂ ಹುಚ್ಚು ಹಿಡಿಯುವಷ್ಟು ಪ್ರೀತಿಸಿದ್ಲು. ಮನಸ್ಸನ್ನು ಕೊಟ್ಟೋಳು ಮೈಯನ್ನೂ ಕೊಟ್ಳು. ನಾವು ಮದ್ವೆಯ, ಮಕ್ಕಳ ಕನಸು ಕಾಣ್ತಿದ್ದೆವು. ಡಿಗ್ರಿ ಮುಗ್ಸಿ ಅವ್ಳ ಹಳ್ಳಿಗೆ ಹೋಗಿ ಕೂತೋಳು ಎಲ್ಲಾ ಮರ್ತು ಬಿಡಿ. ನಿಮ್ಮ ದಾರಿ ನೋಡ್ಕಳ್ಳಿ ಅಂತ ಪತ್ರ ಬರೆದ್ಲು. ನಾನು ಅಪ್‌ಸೆಟ್ಟಾದೆ. ಅಪ್ಪ ಬೆಂಗ್ಳೂರಿಗೆ ಕರ್‍ಕೊಂಡು ಹೋಗಿ ವಾಸಿ ಮಾಡಿಸಿದ್ರು. ಇನ್‌ಫ್ಲುಯೆನ್ಸು ಮಾಡಿ ಕೆಲ್ಸಾನೂ ಕೊಡಿಸಿದ್ರು.”
ಅವನು ತೀರಾ ಸಹಜವೆಂಬಂತೆ ಮಾತು ಮುಗಿಸಿದ. ಅವನ ಹಿಂದೆ ಅಂಥದ್ದೊಂದು ಕತೆಯಿರಬಹುದೆಂಬ ಕಲ್ಪನೆ ನನಗಿರಲಿಲ್ಲ. “ಓ ಸ್ಸಾರಿ. ಅವ್ಳು ಹಾಳಾಗಿ ಹೋಗ್ಲಿ. ಬೇರೆ ಯಾರನಾನದ್ರೂ ಈಗ ಪ್ರೀತಿಸ್ತಿದ್ದೀರಾ?”
ಅವನು ಅದೇ ವಿಕಟ ನಗೆ ನಕ್ಕ: “ಹಳ್ಳಕ್ಕೆ ಬಿದ್ಮೇಲೆ ಬುದ್ಧಿ ಬಂದಿದೆ. ನಂಗೀಗ ಪ್ರೀತಿ, ಪ್ರೇಮ ಅನ್ನೋದ್ರಲ್ಲಿ ನಂಬಿಕೇನೇ ಇಲ್ಲ. ಪ್ರೇಮಿಸ್ದ, ದೇಹಾನೂ ಕೊಟ್ಟ ಹೆಣ್ಣೇ ಕೈ ಕೊಡ್ತಾಳೆಂದ್ರೆ… ? ನಿಜಾ ಹೇಳ್ತಿದ್ದೀನಿ ಪೂರ್‍ಣೇಶ್. ಈ ಹುಡುಗೀರಿಗೆ ಪ್ರೇಮ ಬೇಕಾಗಿಲ್ಲ. ಬೇಕಾಗಿರೋದು ಜವಾಬ್ದಾರಿಯಿಲ್ಲದ ದೇಹ ಸುಖ ಮಾತ್ರ. ಬ್ಲಡೀ ಬಿಚಸ್ಸ್.” ಅವನು ಕ್ಯಾಕರಿಸಿ ಉಗಿದ.
ನನ್ನ ಮುಖವನ್ನೊಮ್ಮೆ ಸವರಿಕೊಂಡೆ. ಆತ ಜೇಬಿಂದ ಸಿಗರೇಟು ತೆಗೆದು ತುಟಿಗಿಟ್ಟು ಕಡ್ಡಿ ಗೀರಿ ಹೊಗೆಯುಗುಳುತ್ತಾ ಕೇಳಿದ. “ನೀವ್ಯಾಕೆ ಸಿಗರೇಟು ಸೇದಲ್ಲ?”
“ನಂಗೆ ಅದರ ವಾಸೆನಗೆ ವಾಂತಿ ಬರತ್ತೆ.”
ಅವನು ಮತ್ತೊಮ್ಮೆ ನಕ್ಕ. “ಬದ್ಕೋದಿಕ್ಕೆ ಇವೆಲ್ಲಾ ಬೇಕು. ಸಿಗರೇಟು, ವಿಸ್ಕಿ, ಹೆಣ್ಣು. ಯಾವುದನ್ನೊ ಬಿಡ್‌ಬಾರ್‍ದು.”
“ನಿಂ ಫಿಲಾಸಫಿ ನಂಗೆ ಒಪ್ಗೆಯಾಗಲ್ಲ. ಹೆಣ್ಣುಗಳನ್ನು ಅದೇ ದೃಷ್ಟಿಯಲ್ಲಿ ನೋಡಕ್ಕೆ ನನಿನಂದಾಗಲ್ಲ.”
“ಕಲ್ತುಕೋ ಬೇಕು ಪೂರ್‍ಣೇಶ್. ಲೈಫ್ ಅಂದ್ರೆ ಇದೇ. ನಿಮ್ಮ ಗೊಡ್ಡು ಫಿಲಾಸಫಿ ಯಾರಿಗ್ಬೇಕು? ನಿಮ್ಮಲ್ಲಿ ಹುಡುಗೀರು ಮಾತಾಡ್ತಾರೆ ಎಂದಾದ್ರೆ ಅದು ನಿಮ್ಮ ಫಿಸಿಕಲ್ಲು ಫಿಟ್‌ನೆಸ್ಸಿಗೆ ಅವ್ರು ನೀಡೋ ಸರ್ಟಿಫಿಕೇಟು. ತಿಳ್ಕಳ್ಳಿ.”
ನಾನು ಪ್ರತಿಯಾಡಲಿಲ್ಲ.
“ಹೋಗಲಿ ಬಿಡಿ ಪೂರ್‍ಣೇಶ್. ನೀವು ಲವ್ವು ಪೋಯಂಸು, ಲವ್ವು ಸ್ಟೋರೀಸು ಬರೀತಾ ಇರ್‍ತೀರಲ್ಲಾ? ಅದು ಹೇಗೆ ಸಾಧ್ಯವಾಗುತ್ತೆ?”
“ಅದೊಂದು ಹಾಬಿ. ಪ್ರೀತಿಯ ಭಾವನೆಗಳು ಮನಸ್ಸಲ್ಲಿ ಮೂಡಿದಾಗ ಅವುಗಳಿಗೆ ಶಬ್ದದ ರೂಪ ಕೊಡ್ತೀನಿ ಅಷ್ಟೆ.”
“ಪ್ರೀತಿಯ ಭಾವನೆ ಮೂಡೋದಂದ್ರೇನು? ಹಾಗೆ ಭಾವನೆ ಮೂಡ್ಬೇಕಾದ್ರೆ ಅದ್ರ ಹಿಂದೆ ಯಾರಾದ್ರೂ ವ್ಯಕ್ತಿಗಳು ಇರ್‍ಲೇಬೇಕಲ್ವಾ? ನಿಮ್ಮ ಕವಿಭಾಷೆಯಲ್ಲಿ ಅಂತಹ ವ್ಯಕ್ತಿಗಳನ್ನು ಸ್ಫೂರ್ತಿ ಎಂದು ಕರೆಯುತ್ತೀರಿ. ಯಾರನ್ನೋ ಲವ್ವು ಮಾಡ್ದೆ ಕತೆ, ಕವನ ಬರೆಯಕಾಗಲ್ಲ. ಲವ್ವ್ ಮಾಡ್ತಿದ್ದೀನಿ ಅನ್ನೋ ಎದೆಗಾರಿಕೆ ನಿಮ್ಗಿಲ್ಲ ಅಷ್ಟೇ. ನಾನು ಲವ್ವು ಮಾಡಿದ್ದು ಒಬ್ಳನ್ನು ಮಾತ್ರ. ನಿಮ್ಮಂತೋರು ಕತೆಗೊಬ್ಳನ್ನು, ಕವನಕ್ಕೆ ಇನ್ನೊಬ್ಳನ್ನು. ನಾನೇ ಬೆಟರ್ ಅಲ್ವಾ?”
ಅವನ ಮಾತಿಗೆ ನಕ್ಕೆ. “ಆಯ್ತು. ಒಬ್ಳನ್ನ ಲವ್ ಮಾಡಿ ಅವಳಿಂದ ಮೋಸ ಹೋದ್ರಿ. ಅದ್ಕೆ ಎಲ್ಲಾ ಹುಡುಗೀರನ ಮೋಸಗಾತಿಯರು ಅಂದ್ಕೂಳ್ಳೋದು ಎಷ್ಟು ಸರಿ?”
ಅವನೂ ನಕ್ಕ. “ಹೆಣ್ಣು ಬೇಕಿನಿಸಿದರೆ ಈಗ ನಾನೇಡ್ಮಾತೀನಿ ಗೊತ್ತಾ? ಫ್ರೆಂಡ್ ಬೈಕು ತಗೊಂಡು ನಿಂ ಕಾಲೇಜಿಗೆ ಬಂದ್ ಬಿಡ್ತೀನಿ. ನೇರವಾಗಿ ಕೇಳಿ ಬೈಕ್ ಹತ್ತಿಸ್ಕೋತೀನಿ. ಫ್ರೆಂಡ್ ಮನೆ ಕೀ ನನ್ ಕೈಯಲ್ಲೇ ಇರತ್ತೆ. ಅವರಪ್ಪ-ಅಮ್ಮ ಸ್ಟೇಟ್ಸಲ್ಲಿ. ಯಾವ ಪ್ರಾಬ್ಲೆಮ್ಮೂ ಇರಲ್ಲ. ನನಗೆ ಅಂಥಾ ಗರ್ಲುಫ್ರೆಂಡ್ಸು ಎಷ್ಟಿದ್ದಾರೆ ಗೊತ್ತಾ? ಒಬ್ರೂ ಇಲ್ಲೀವರ್ಗೆ ಮದ್ವೆ ಸುದ್ದಿ ಎತ್ತಿದೋರಲ್ಲ. ಲೈಫೆಂದರೆ ಇದೇ. ಅವ್ರಿಗೂ ಅಷ್ಟೇ. ಅವ್ರಿಗೆ ಜಾತಕ ನೋಡಿ ಆಗೋ ಜಾತಿ ಗಂಡೇ ಸಿಕ್ತಾನೆ. ನನ್ನಂತೋರು ಅನುಭವಿಸಿದ್ದನ್ನು ನಿಮ್ಮಂತೋರು ಕಲ್ಪಿಸಿಕೊಂಡು ಬರೀತೀರಿ. ಅನುಭವವಿಲ್ದೋರು ಓದಿ ಮಜಾ ತಗೋತಾರೆ ಅಷ್ಟೇ.”
ನಾನು ಮಾತು ಬೆಳೆಸಲಿಲ್ಲ. ಮತ್ತೆ ನಗರಕ್ಕೆ ಕಾಲನಡಿಗೆಯಲ್ಲೇ ಬಂದು ಹೋಟೆಲಲ್ಲಿ ಊಟ ಮುಗಿಸಿದೆವು. ನನ್ನ ಮನಸ್ಸು ಯೋಚನೆಯಲ್ಲಿ ಮುಳುಗಿತ್ತು. ಒಂದು ಕಹಿ ಘಟನೆ ಇವನ ಯೋಚನಾ ವಿಧಾನವನ್ನು ಬದಲಾಯಿಸಿದೆ. ಒಳ್ಳೆಯ ಹೆಣ್ಣು ಬಾಳ ಸಂಗಾತಿಯಾದರೆ ಇವನು ಬದಲಾಗುತ್ತಾನೆ. ಯಾಕೆ ಪ್ರಯತ್ನಿಸಬಾರದು?
ರೂಮಿನತ್ತ ಹೆಜ್ಜೆ ಹಾಕುವಾಗ ಅವನೆದುರು ನನ್ನ ಅಭಿಪ್ರಾಯ ಮಂಡಿಸಿದೆ. “ನಿಮ್ಮನ್ನು ಇಷ್ಟು ತಿಂಗಳಿಂದ ಗಮನಿಸ್ತಿದ್ದೀನಿ. ನೀವು ತೀರಾ ನೇರ ಮನುಷ್ಯ. ನಂಗೆ ನೀವು ಇಷ್ಟವಾದಿರಿ. ತಪ್ಪು ತಿಳೀಬಾರ್‍ದು. ನೀವ್ಯಾಕೆ ನನ್ ತಂಗೀನ ಮದ್ವೆ ಆಗ್ಬಾರ್‍ದು?”
ಅವನು ತಬ್ಬಿಬ್ಬಾದ. ನನ್ನ ಮುಖವನ್ನು ಸ್ವಲ್ಪ ಹೊತ್ತು ದಿಟ್ಟಿಸಿದ. “ಪೂರ್‍ಣೇಶ್, ಅದೊಂದು ಘಟನೆ ಬಳಿಕ ಮದ್ವೆ ಆಗಬಾರದೆಂದು ಯೋಚಿಸಿದ್ದೀನಿ. ನನ್ ಹಿಂದಿರೋ ಕತೆ ಗೊತ್ತಿದ್ದೂ ನಿಂತಂಗೀನ ಬಲಿಕೊಡುತ್ತಿದ್ದೀರಲ್ಲಾ?”
ಶಾಂತಸ್ವರದಲ್ಲಿ ನಾನೆಂದೆ: “ನಿಮ್ಗೆ ಕೈಕೊಟ್ಟ ಹುಡುಗಿ ಹಾಗೆ ಮಾಡ್ಬೇಕಾದ್ರೆ ಅವಳಿಂದ ನಿಭಾಯಿಸಲಾಗದ ಯಾವುದೋ ಪರಿಸ್ಥಿತಿಯಲ್ಲಿ ಅವಳು ಸಿಲುಕಿಕೊಂಡಿರಬೇಕಲ್ವಾ? ಅದನ್ನು ಹೇಳಿ ನಿಮ್ಮನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವುದು ಅವಳಿಗಿಷ್ಟವಿಲ್ಲದ್ದಕ್ಕೆ ಹಾಗೆ ನಿಮ್ಗೆ ಪತ್ರ ಬರೆದಿರಬೇಕು. ಅದನ್ನು ಅರ್ಥಮಾಡಿಕೊಳ್ಳದ ನೀವು ತಪ್ಪ ದಾರಿ ಹಿಡಿದಿದ್ದೀರಿ. ಈಗ ಎಷ್ಟು ಹುಡುಗೀರು ನಿಮ್ಮಿಂದಾಗಿ ದಾರಿ ತಪ್ಪಿದ್ದಾರೆ? ಇದಕ್ಕೊಂದು ಅಂತ್ಯ ಬೇಡ್ವಾ? ಒಬ್ಳು ಹುಡುಗಿಗೆ ಬಾಳು ಕೊಟ್ಟ ಹಾಗೂ ಆಯ್ತು. ನಿಮ್ಮ ಪಾಪಕ್ಕೆ ಪ್ರಾಯಶ್ಚಿತ್ತವೂ ಆದಂಗಾಯ್ತು.”
ಅವನು ತೀರಾ ಗಲಿಬಿಲಿಗೊಂಡಂತಿದ್ದ. ಇದೇ ಸರಿಯಾದ ಸಮಯವೆಂದು ನಾನು ಮುಂದುವರಿಸಿದೆ. “ದೇಹದ ಆಕರ್ಷಣೆಯಿಂದ ನಿಮ್ಮ ಮೊದಲ ಲವ್ವರು ಒಂದು ತಪ್ಪು ಮಾಡಿದ್ಲು. ಅದು ಕ್ಷಮಿಸಲಾಗದ ತಪ್ಪೆಂದು ನಂಗನಿನಸಲ್ಲ. ನೀವು ಇಲ್ಲಿ ಪದೇ ಪದೇ ತಪ್ಪು ಮಾಡ್ತಿದ್ದೀರಿ. ನಿಮ್ಮ ದೇಹಕ್ಕೆ ಸೋಲೋ ಕೆಲವು ಹೆಣ್ಣುಗಳ ಬಲಹೀನತೆಯನ್ನು ಇಡೀ ಸ್ತ್ರೀ ಸಂಕುಲಕ್ಕೆ ಅನ್ವಯಿಸುತ್ತಿದ್ದೀರಿ. ನಿಮ್ಮ ಹಾಗೆ ನಾನು ಬದುಕುತ್ತಿಲ್ಲ. ಅಂದ ಮೇಲೆ ಹೆಣ್ಣು ಜಾತಿಯನ್ನೇ ಬಿಚ್ಚಸ್ ಎನ್ನೋದು ಸರಿಯಾ? ನಿಮಗೆ ತಿದ್ದಿಕೊಳ್ಳಲು ಇದೊಂದು ಅವಕಾಶ. ಬಲಾತ್ಕಾರವಿಲ್ಲ. ನಿಮಗೆ ಒಪ್ಪಿಗೆ ಎಂದಾದರೆ ತಂಗಿಯನ್ನು ಕೇಳುತ್ತೇನೆ. ಅಲ್ಲೂ ಬಲಾತ್ಕಾರವಿಲ್ಲ.”
ಅವನು ಮೌನವಾಗಿ ಹೆಜ್ಜೆ ಹಾಕಿದ. ರೂಮು ಸೇರಿ ನಾನು ನೋಟ್ಸು ತಯಾರಿಯಲ್ಲಿ ನಿರತನಾದೆ. ಅವನು ಯಾವುದೋ ಟ್ರಾನ್ಸ್‌ನಲ್ಲಿದ್ದಂತೆ “ನಿಮ್ಮ ಮಾತಿನಲ್ಲಿ ನಿಜವಿದೆ ಪೂರ್‍ಣೇಶ್. ನಿಮ್ಮ ತಂಗಿಯ ಫೋಟೋ ಇದ್ದರೆ ನೋಡ್ತೀನಿ” ಎಂದ. ಟ್ರಂಕಿನ ಅಡಿಯಲ್ಲಿದ್ದ ಅವಳ ಫೋಟೋವನ್ನು ಅವನಿಗಿತ್ತು ನನ್ನ ಕೆಲಸ ಮುಂದುವರಿಸಿದೆ.
ಮರುದಿನ ಬೆಳಿಗ್ಗೆ ಅವನು “ತುರ್‍ತಾಗಿ ಮನೆಗೆ ಹೋಗಬೇಕಾಗಿದೆ. ಒಂದು ವಾರ ಬಿಟ್ಟು ಬರ್‍ತೀನಿ.” ಎಂದ. ರಾತ್ರಿ ಆತನಿಗೆ ನಿದ್ದೆ ಸರಿಯಾಗಿ ಬಂದಿಲ್ಲವೆನ್ನುವುದನ್ನು ಕಣ್ಣುಗಳು ತಿಳಿಸುತ್ತಿದ್ದವು. ಮನೆಯಲ್ಲಿ ಎಲ್ಲರನ್ನೂ ಮದ್ವೆಗೆ ಒಪ್ಪಿಸಲು ಯತ್ನಿಸುತ್ತಾನೇನೋ ಎಂದು ನಾನಂದುಕೊಂಡೆ.
ಏಳನೆಯ ಸಂಜೆ ನಾನು ರೂಮಿಗೆ ಬಂದಾಗ ಅವನ ಬೆಡ್ಡು, ಬಟ್ಟೆ ಬರೆ ಯಾವುದೂ ಇರಲಿಲ್ಲ. ಟೇಬಲಲ್ಲಿ ಒಂದು ಕಾಗದ ನನಗಾಗಿ ಕಾಯುತ್ತಿತ್ತು.
“ಪೂರ್‍ಣೇಶ್,
ಟ್ರಾನ್ಸ್‌ಫರ್ ತಗೊಂಡು ಹೋಗ್ತಿದ್ದೀನಿ. ಹೃದಯ ಗಟ್ಟಿ ಮಾಡಿಕೊಳ್ಳಿ. ನಿಮ್ಮ ತಂಗಿಯೇ ನನ್ನ ಮೊದಲ ಮತ್ತು ಕೊನೆಯ ಲವ್ವರು. ಮರ್‍ತುಬಿಡಿ ಎಂದು ಪತ್ರ ಬರೆದವಳ ಜತೆ ಹೊಸ ಅಧ್ಯಾಯ ಆರಂಭಿಸುವುದು ಸಾಧ್ಯವಿಲ್ಲದ ಮಾತು. ದಯವಿಟ್ಟು ಅವಳನ್ನು ಕಮಿಸಿ. ಸಾಧ್ಯವಾದರೆ ನನ್ನನ್ನೂ.”
*****
[೧೯೭೮]









