Home / ಕಥೆ / ಸಣ್ಣ ಕಥೆ / ಮೈಮೇಲೆ ಬಂದ ದೇವಿ

ಮೈಮೇಲೆ ಬಂದ ದೇವಿ

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರವಾರ ಆರತಿ, ಸೋಮವಾರ ಮೆರವಣಿಗೆ ಹೀಗೆಲ್ಲಾ ಉತ್ಸವಗಳು ವಿಜೃಂಭಣೆಯಿಂದ ಆಗುತ್ತಲೇ ಇರುತ್ತವೆ.

ಒಂದು ದಿನ ನಾನೂ, ನನ್ನ ಸ್ನೇಹಿತರೂ ದೇವಿಯ ದರ್ಶನಕ್ಕಾಗಿ ಹೊರಟೆವು. ಪುಣ್ಯಾತ್ಮರೊಬ್ಬರು ಸೊಗಸಾದ ಕುದುರೆಗಾಡಿ ನಮ್ಮ ವಶಕ್ಕೆ ಕೊಟ್ಟಿದ್ದರು. ನಾವು ನಾಲ್ಕು ತೆಂಗಿನಕಾಯಿ, ಎರಡು ಮೂರು ಕುಚ್ಚು ಹೂವು, ಕರ್ಪೂರ ಮೊದಲಾದುವನ್ನು ತೆಗೆದುಕೊಂಡೇ ಹೊರಟಿದ್ದೆವು. ಅಂದು ನನ್ನ ಅದೃಷ್ಟಕ್ಕೆ ಸರಿಯಾಗಿ ಅಲ್ಲಿ ಸಂಗೀತ ಕಛೇರಿ. ನಾವೂ ಸಂಗೀತದಲ್ಲಿ ಮಗ್ನರಾದೆವು. ಸುಮಾರು ಒಂದು ಗಂಟೆ ಬಹು ಹರ್ಷವಾಗಿ ಸಾಗಿಹೋಯಿತು. ಒಂದು ಚಿಕ್ಕಮಗು ಬಹು ಇಂಪಾಗಿ ಹಾಡುತ್ತಿತ್ತು. ಆ ಮಗು ಹಾಡುತ್ತಿದ್ದರೆ ನಮಗೆಲ್ಲಾ ನಾಚಿಕೆಯಾಗುತ್ತಿತ್ತು.

ಸಂಗೀತದ ಸವಿಯನ್ನು ಉಣಬಯಸುವ ಹಲವು ಭಕ್ತಾದಿಗಳು ಅಲ್ಲಿಯೇ ಇದ್ದು ಬಿಡುವಂತೆ ಕಂಡಿತು. ನಾವು ಎಚ್ಚರಗೊಂಡೆವು. ಅಡಿಗೆ ಸಡಗರ ಸ್ವಲ್ಪ ಸ್ವಲ್ಪ ನಮ್ಮ ದೃಷ್ಟಿಗೂ ಬಿತ್ತು. ದೇವಾಲಯದ ಪೂಜಾರಿಯನ್ನು ಕುರಿತು, “ದಯವಿಟ್ಟು ಮಂಗಳಾರತಿ ಮಾಡಿ, ನಮಗೆ ದೇವಿ ಪ್ರಸಾದ ಕೊಟ್ಟರೆ ನಾವು ಹೋಗುತ್ತೇವೆ” ಎಂದೆವು. ಆತನು “ಸ್ವಲ್ಪ ನಿಲ್ಲಿ, ಇನ್ನು ಹತ್ತೇ ನಿಮಿಷ” ಎಂದನು.

ಇನ್ನೇನು ಸಂಗೀತ ಕಛೇರಿ ಮುಗಿಯಿತು ಎನ್ನುವಷ್ಟರಲ್ಲಿ ದೇವಾಲಯದ ಸ್ವರೂಪವೇ ಬದಲಾಯಿಸಿತು. ಇದ್ದಕ್ಕಿದ್ದ ಹಾಗೇ ಹೆಂಗಸರು ದೇವಸ್ಥಾನವನ್ನು ಬಿಟ್ಟು ಹೊರಕ್ಕೆ ಹೊರಟರು. ಹುಡುಗರು ಅಳಲು ಆರಂಭಿಸಿದರು. ನನಗೂ ಭಯವು ಆವರಿಸಿತು. ಸಂಗೀತ ಸದ್ದಿಲ್ಲದೆ ನಿಂತಿತು. ಹೊರಗಡೆ ನಿಂತಿದ್ದ ಜನರೆಲ್ಲ ಓಡಿದರು. ನಾನು ಇದೇನು ಎನ್ನುತ್ತಾ ಗುಂಪಿನ ನಡುವೆ ತೂರಿ, ದೇವರ ಕಡೆಗೆ ನೋಡಿದೆ. ದೇವಿಯ ಪಕ್ಕದಲ್ಲಿ ಒಂದು ವಿಚಿತ್ರ ವ್ಯಕ್ತಿ. ಅದರ ಬಾಯಲ್ಲಿ ರಕ್ತ, ನಾಲಗೆ ಜೋಲು ಬಿದ್ದಿದೆ. ನಾಲಗೆಯ ಮೇಲೆ ಕರ್ಪೂರ ಹತ್ತಿಸಿದರೂ ಆ ವ್ಯಕ್ತಿ ಚಲಿಸಲೇ ಇಲ್ಲ. ನಾನು ಅದನ್ನೇ ನೋಡುತ್ತಿರುವಲ್ಲಿ ಹಿಂದೆ ಒಂದು ಘರ್ಜನೆ ಕೇಳಿಸಿತು. ಎದೆಯೊಡೆದುಹೋಯಿತು. ಮಿಲಿಟೆರಿಯಲ್ಲಿನ ಸಿಪಾಯಿಯು ನಾಯಕನ ಆಜ್ಞೆ ಕೇಳುತ್ತಲೇ ಥಟ್ಟನೆ ಹಿಂದಕ್ಕೆ ತಿರುಗುವಂತೆ ನಾನೂ ತಿರುಗಿದೆ. ಮತ್ತೊಂದು ವ್ಯಕ್ತಿ: ಹಾಗೆಯೇ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ. ದೇವಸ್ಥಾನದ ಪೂಜಾರಿಯೇ ‘ಹ್ರಾಂ, ಹ್ರೀಂ’ ಎಂದು ಮುಂತಾಗಿ ಆರ್ಭಟ ಧ್ವನಿಗಳು ಗುಡುಗಿದುವು. ಇಂತಹ ಅವಾಂತರದಲ್ಲಿ ಯಾವ ಹೆಂಗಸು ತಾನೆ ಇದ್ದಾಳು ?

ರಾತ್ರಿ ಏರಿತು : ಗಂಟೆ ಏಳಾಯಿತು, ಎಂಟಾಯಿತು. ಎರಡು ವ್ಯಕ್ತಿಗಳೂ ಅತ್ತಿತ್ತ ಓಡಾಡುತ್ತ, ಆರ್ಭಟಿಸುತ್ತ, ನಾಟ್ಯವಾಡುತ್ತಲಿವೆ. ಇವುಗಳನ್ನಡಗಿಸಲು ಯಾರಿಗೂ ಧೈರ್ಯವಿರಲಿಲ್ಲ. ಈ ಎರಡು ವ್ಯಕ್ತಿಗಳ ಮಧ್ಯೆ ಇದ್ದಕ್ಕಿದ್ದ ಹಾಗೆ ಒಂದು ವ್ಯಕ್ತಿ ಎದ್ದಿತು. ಈಕೆ ಯಾರು? ಎಂದು ಎಲ್ಲರೂ ಕುತೂಹಲದಿಂದ ತವಕಪಟ್ಟರು. ಆಕೆ ಯಾರೋ ಹೊಸಬಳೆಂದೂ, ಆದೇವಾಲಯಕ್ಕೆ ಆ ದಿನವೇ ಬಂದಿದ್ದಳೆಂದೂ ತಿಳಿಯಿತು. ಆ ಎರಡು ಪುರುಷವ್ಯಕ್ತಿಗಳು ಸಿಂಹದಂತೆ ಆರ್ಭಟಿಸುತ್ತಿದ್ದರೆ, ಈ ಸ್ತ್ರೀವ್ಯಕ್ತಿ ಬಾಯಿ ಬಿಡದೆ ಕಣ್ಣಿನಲ್ಲೇ ಸಂಜ್ಞೆ ಮಾಡುತ್ತಿತ್ತು.

ಈ ಸ್ತ್ರೀವ್ಯಕ್ತಿ ಬಹುಶಃ ಸೊಗಸಾದ ನಟಿಯಿರಬೇಕು. ಇವಳ ನಾಟ್ಯವು ಬಹು ರಮ್ಯವಾಗಿತ್ತು. ಚೆಲ್ಲಾಪಿಲ್ಲಿಯಾಗಿ ನೆರೆದಿದ್ದ ಸಭಿಕ ವೃಂದವು ಇವಳ ನಾಟ್ಯಕ್ಕೆ ಬೆರಗಾಯಿತು. ನಿಜವಾಗಿಯೂ ಸಮಸ್ತರನ್ನೂ ಸೂರೆಗೊಂಡಳು ದೇವಿ. ಆದರೆ ? ಒಂದೆರಡು ನಿಮಿಷಗಳಲ್ಲಿ ಪುರುಷವ್ಯಕ್ತಿಗಳಲ್ಲಿ ಕಲಹ ಹುಟ್ಟಿತು. ಒಂದು ಹೇಳಿತು “ನಾನು ಯಾರು ಬಲ್ಲೆಯೋ ? ನಾನೇ ಆ ವೀರ ನರಸಿಂಹ!”

ಇನ್ನೊಂದು “ವೀರನರಸಿಂಹನನ್ನು ಸದೆಬಡಿಯುವ ಹನುಮಂತ ಯಾರು ಗೊತ್ತೇ? ನಾನೇ ; ತಿಳಿಯಿತೊ ? ”

‘ಛೇ, ಛೆ, ಮುಚ್ಚುಬಾಯಿ, ನಾನು ಚಿಕ್ಕಂದಿನಿಂದಲೂ ನರಸಿಂಹನ ಸೇವೆಮಾಡಿ ಅವನನ್ನು ಒಲಿಸಿಕೊಂಡು, ಬೇಕಾದವರಿಗೆ ಬೇಕಾದ ವರವನ್ನು ಕೊಟ್ಟಿದ್ದೇನೆ. ನೀನು ತಪ್ಪನ್ನು ಒಪ್ಪಿಕೊಂಡು ಬೇಕಾದ್ದನ್ನು ಕೇಳು, ಕೊಡುತ್ತೇನೆ.”

“ವರವನ್ನು ಕೇಳಲು ನಾನೇನು ಮೂರ್ಖನಲ್ಲ. ಬಿಡು ನಿನ್ನ ಈ ಮಾತನ್ನು, ನನ್ನ ಮಾತಿನಂತೆ ನೀನು ಬಂದರೆ ಸಮ, ಇಲ್ಲವಾದರೆ ಲಂಕೆಯನ್ನು ಸುಟ್ಟಂತೆ ನಿನ್ನನ್ನು ಸುಟ್ಟು ಭಸ್ಮಮಾಡಿಬಿಟ್ಟೇನು!”

“ಇರಲಿ, ನಾನು ಕಂಡಿದ್ದೇನೆ. ನೀನು ಆಂಜನೇಯನಾದರೆ ಬ್ರಹ್ಮ ಚಾರಿಯಾಗಿದ್ದೀಯೇನು?”

“ಹೌದು, ನಾನು ಚಿಕ್ಕಂದಿನಿಂದಲೂ ಬ್ರಹ್ಮಚಾರಿಯೇ !”

“ಅದಕ್ಕೇ ನಿನಗೆ ಎರಡು ಮಕ್ಕಳು. ಮದುವೆಯಾದ ಹೆಂಡತಿಯನ್ನು ಓಡಿಸಿ, ಪರಸ್ತ್ರೀಯಲ್ಲಿ ಬಿದ್ದು, ಇಲ್ಲಿಗೆ ಬಂದು, ಈ ದೇವಸ್ಥಾನದ ಕೀರ್ತಿಗೆ ಧಕ್ಕೆ ತರುತ್ತಿರುವೆ. ಇಂದಿಗಾಯಿತು. ಇನ್ನು ಮುಂದೆ ಇಲ್ಲಿಗೆ ಬರಬೇಡ, ತಿಳಿಯಿತೆ ?”

“ಓಹೋ! ನೀನು ನರಸಿಂಹನೋ, ನಿನ್ನ ಕೇಸರವೆಲ್ಲಿ? ಅಲ್ಲದೆ ಈ ಶಂಕರಿದೇವಿಯ ಬಳಿ ನಿನಗೇನು ಕೆಲಸ? ದೇವಿಯ ಆಲಯಕ್ಕೆ ಕಾಲಿಟ್ಟಿದ್ದೇ ನಿನ್ನ ಅಪರಾಧ. ನಾನು ದೇವಿಯ ಭಂಟ, ನೀನು ಇಲ್ಲಿಗೆ ಬರಲು ಕಾರಣವಿಲ್ಲ. ಮೊದಲು ತೊಲಗು. ಇಲ್ಲವಾದರೆ ಭಸ್ಮಮಾಡಿ ಬಿಡುತ್ತೇನೆ.”

“ಹಾಂ, ಹೀಂ, ಇದೋ ತಿಂದುಬಿಟ್ಟೆ” ಎನ್ನುತ್ತಾ ನರಸಿಂಹನು ಹನುಮಂತನ ಮೇಲೆ ಬಿದ್ದ. ಇಬ್ಬರೂ ಉರುಳಿದರು.

ಆಂಜನೇಯನ ಮೈಯೆಲ್ಲಾ ಗಾಯವಾಗಿ ರಕ್ತ ಹರಿಯತೊಡಗಿತು. ವೀರನರಸಿಂಹ ಮೇಲೆದ್ದು, ಒಂದು ತೆಂಗಿನಕಾಯಿ ತೆಗೆದುಕೊಂಡು, ತನ್ನ ತಲೆಯ ಮೇಲೆ ಇಟ್ಟು ಒಡೆದು, ಎರಡು ಒಪ್ಪುಮಾಡಿದ. ಎಲ್ಲರೂ ಅಚ್ಚರಿಗೊಂಡರು. ಆಂಜನೇಯ ಸೊರಗುತ್ತಾ ಮೇಲೆದ್ದು ಪರಾರಿಯಾದ. ನರಸಿಂಹ ಸುಮ್ಮನಿರದೆ “ಅವನು ಕ್ಷಮಾಪಣೆ ಬೇಡಬೇಕು” ಎಂದು ಅರಚಿದ. ಜನರೆಲ್ಲಾ ಸಮಾಧಾನಪಡಿಸಿದರು. ನರಸಿಂಹನ ಸೊಕ್ಕು ಇಳಿಯಿತು.

ಆದರೆ ದೇವಿ ಸುಮ್ಮನಾಗಲಿಲ್ಲ. ಆ ಸ್ತ್ರೀ ವ್ಯಕ್ತಿ ಶಂಕರೀದೇವಿಯ ಮುಂದೆ ಅಭಿನಯಿಸುತ್ತಿತ್ತು. ಹೂ, ಗಂಧ, ವೀಳೆಯದೆಲೆ ಇವುಗಳನ್ನು ತೆಗೆದುಕೊಳ್ಳಲು ಕಣ್ಣಿಂದಲೇ ಸಂಜ್ಞೆ ಮಾಡಿ, ಅವುಗಳನ್ನು ಪಡೆದು, ನೆಗೆಯುತ್ತ ಹೋಗಿ, ದೇವಿಯ ಪೀಠದಲ್ಲಿ ಅರ್ಪಿಸಿದ್ದಾಯಿತು. ಎಲ್ಲರೂ ಈ ದೃಶ್ಯವನ್ನೇ ನೋಡುತ್ತಿದ್ದರು. ಕೆಲವರು “ಈಕೆ ನಿಜವಾಗಿಯೂ ಭಕ್ತಳು. ಇವಳು ಇಂದು ಬಾರದೇ ಇದ್ದಿದ್ದರೆ, ಈ ಇಬ್ಬರೂ ಹೊಡೆದಾಡಿ ಸತ್ತೇ ಹೋಗುತ್ತಿದ್ದರು. ನೋಡಿದಿರಾ ! ಇವಳ ಭಕ್ತಿ! ಇವಳ ಮೇಲೆ ನಿಜವಾಗಿಯೂ ದೇವಿ ಬಂದಿದ್ದಾಳೆ. ಏನಾದರೂ ಪ್ರಶ್ನೆ ಕೇಳಬೇಕು” ಎಂದು ಮಾತನಾಡುತ್ತಿದ್ದರು. ಇನ್ನು ಕೆಲವರು ಇವಳೆಲ್ಲೋ ಹುಚ್ಚು, ತಲೆ ಕೆಟ್ಟು ಹೋಗಿದೆ. ಸಿಕ್ಕಾಪಟ್ಟೆ ಕುಣಿಯುತ್ತಾಳೆ” ಎಂದು ಹೇಳುತ್ತಿದ್ದರು. ಅಷ್ಟರಲ್ಲಿ ಒಬ್ಬ ಮುದುಕಿ ಬಂದಳು. ಬಂದವಳೇ “ಅಪ್ಪಾ ಯಾರಾದರೂ ದೇವಿಗೆ ಕೈ ಮುಗಿದು ಬೇಡಿಕೊಳ್ಳಿರಪ್ಪಾ, ದೇವಿ ಬಂದು ಬಹಳ ಹೊತ್ತಾಯಿತು. ಯಾರಾದರೂ ಪ್ರಶ್ನೆ ಹಾಕಿ ಸರಿಯಾದ ಉತ್ತರ ಹೇಳ್ತಾಳೆ. ಮಕ್ಕಳಾಗುವ ವಿಚಾರ, ಕೋರ್ಟಿನಲ್ಲಿ ಗೆಲವು ಆಗುವ ವಿಚಾರ ಎಲ್ಲವನ್ನೂ ಹೇಳ್ತಾಳೆ” ಎಂದಳು.

ಅವರಿವರು ದೇವಿಯ ಸುತ್ತಾ ಸೇರಿದರು. “ಅಮ್ಮಾ, ದೇವಿ! ಏಕಮ್ಮಾ ಹೀಗೆ ಮಾಡುತ್ತಿ ? ಏನು ಅಪಚಾರ ನಡೆಯಿತು ಇಲ್ಲಿ ? ಹೇಳಮ್ಮಾ ನಮ್ಮ ಅಪರಾಧ ಏನಿದ್ದರೂ ಕ್ಷಮಿಸು ತಾಯಿ, ನಿನಗೆ ಕಾಯಿ, ಹಣ್ಣು, ಹೂ ಎಲ್ಲಾ ಅರ್ಪಿಸುತ್ತೇವೆ. ಶಾಂತಳಾಗು ದೇವಿ, ಪ್ರಸನ್ನಳಾಗು” ಎಂದು ಮುಂತಾಗಿ ನುಡಿದರು. ದೇವಿಯು ಉತ್ತರಕೊಟ್ಟಿತು. “ನನ್ನನ್ನು ಈ ಮಹಾಶಂಕರಿ ಕರೆದಳು. ಅದಕ್ಕಾಗಿ ಇಲ್ಲಿ ಬಂದೆ. ನಾನೇ ಅವಳು. ಈ ದೇವಸ್ಥಾನದ ಯಜಮಾನರಿಗೆ ಈ ಸಲ ರಾಜಮರ್ಯಾದೆ ಸಿಗುತ್ತೆ. ಅಲ್ಲದೆ ಅವರಿಗೆ ಒಂದು ಗಂಡು ಮಗುವೂ ಆಗುತ್ತೆ. ಈ ದೇವಸ್ಥಾನಕ್ಕೆ ಯಾರೋ ವ್ಯಭಿಚಾರಿ ಬಂದುಬಿಟ್ಟಿದ್ದಾಳೆ. ಅವಳಿಂದ ಬಹುಮಂದಿ ಕೆಡುತ್ತಿದ್ದಾರೆ. ದೇವಾಲಯಕ್ಕೆ ಬರಬೇಕಾದರೆ ಭಕ್ತಿಯಿರಬೇಕು ಅಲ್ಲವೆ?”.

ಆ ಮುದುಕಿ ಅಮ್ಮಾ ಇನ್ನೇನಿದ್ದರೂ ಹೇಳಿಬಿಡು” ಎಂದಳು.

ದೇವಿ ನುಡಿಯಿತು “ಈ ಗ್ರಾಮದ ಶ್ಯಾನುಭೋಗ ಓಟು ಕೇಳಲು ಹೋಗ್ತಾನೆ. ಆದರೆ ಈಸಲ ಚುನಾವಣೆಯಲ್ಲಿ ಖಂಡಿತಾ ಜಯವಾಗೋದಿಲ್ಲ. ಅವನು ಸ್ತ್ರೀ ಧನ ಅಪಹರಿಸಿದ್ದಾನೆ.”

ಮತ್ತೊಬ್ಬಳು ಬಂದು ಕೈ ಮುಗಿದು ಬೇಡಿಕೊಂಡಳು. ದೇವಿ ಪ್ರಸನ್ನಳಾಗಿ “ನೀನು ಯೋಚನೆ ಮಾಡುತ್ತಿರುವುದು ನಿನ್ನ ಗಂಡನಿಗಾಗಿ, ನಿನ್ನ ಗಂಡ ಹಿಂದಿರುಗುವುದು ಕಷ್ಟ. ಆದರೆ ಏನೂ ಅನಿಷ್ಟ ಸಂಭವಿಸುವುದಿಲ್ಲ” ಎಂದು ನುಡಿಯಿತು.

ನನಗೂ ಕುತೂಹಲ ಹೆಚ್ಚಿತು. ನನ್ನ ಸ್ನೇಹಿತರನ್ನು ಮುಂದೆ ಬಿಟ್ಟೆ. ಅವರು ಮುಂದೆ ಬಂದು “ದೇವಿ, ನಮಗೆ ಈ ಸಲ ಪರೀಕ್ಷೆಯಲ್ಲಿ ಪಾಸ್ ಆಗುತ್ತದೆಯೆ?” ಎಂದು ಕೇಳಿಕೊಂಡರು.

ದೇವಿಯು ಕಣ್ಣುಗಳನ್ನು ತಿರುಗಿಸುತ್ತಾ “ಒಬ್ಬರಿಗೆ ಆಗುತ್ತದೆ. ಇನ್ನೊಬ್ಬರಿಗಿಲ್ಲ” ಎಂದಿತು. ನಾನು ಅವರೊಡನೆ ನೋಡಿದಿರೋ ! ನಾವು ಒಳ್ಳೆಯ ದಿನವೇ ಬಂದ ಹಾಗಾಯ್ತು !! ವಿಗ್ರಹದ ದೇವಿಗೆ ಕಾಯೊಡೆದು ಹೋಗುವ ಬದಲು, ಜೀವದಿಂದಿರುವ ದೇವಿಯನ್ನು ಕಂಡಂತಾಯಿತು” ಎಂದೆ. ಅವರು “ಹೌದು ನಮ್ಮ ಭಾಗ್ಯ” ಎಂದರು.

ಹಲವು ವರ್ತಕರು, ಕೆಲವು ಅಧಿಕಾರಿಗಳು, ಎಲ್ಲರೂ ತಂತಮ್ಮ ಕಷ್ಟ ಸುಖಗಳನ್ನು ಹೇಳಿಕೊಂಡರು. ಆ ಮುದುಕಿ ಮಾತ್ರ ಪ್ರತಿಯೊಬ್ಬ ರಿಂದಲೂ ಐದು, ಹತ್ತು ರೂಪಾಯಿಗಳನ್ನು ವಸೂಲು ಮಾಡುತ್ತಿದ್ದಳು. ನಾವೂ ಸಹ ಐದು ರೂಪಾಯಿ ಕೊಟ್ಟೆವು. ಅದರಲ್ಲಿ ನಾನಂತೂ ಒಟ್ಟು ಎಷ್ಟಾಯಿತೆಂದೇ ಲೆಖ್ಖ ಹಾಕುತ್ತಿದ್ದೆ. ಸುಮಾರು ಮೂವತ್ತು ಮಂದಿ ಪ್ರಶ್ನೆ ಹಾಕಿದರು. ಸರಾಸರಿ ೫ ರೂ. ಆದರೂ ೧೫೦ ರೂ. ಆಯಿತು. ಲಾಭವೇ ಎಂದುಕೊಂಡೆ. ಅಷ್ಟರಲ್ಲಿ ಒಂದು ವಿಚಿತ್ರ ನಡೆಯಿತು.

ಒಬ್ಬ ಮಧ್ಯಪ್ರಾಯದ ಗಂಡಸು ಬಂದು, ದೇವಿಯ ಮುಂದೆ ಕುಳಿತು “ನಾನು ಯಾರು ಹೇಳು” ಅಂದ. ದೇವಿಯು “ ನೀನೊಬ್ಬ ಗಂಡಸು” ಎಂದಿತು. “ನೀನು ಯಾವಾಗ ಬಂದೆ ?” ಎಂದು ಪ್ರಶ್ನಿಸಿದ. “ದೇವಿಯ ಆಜ್ಞೆ ಯಾಯಿತು, ಬಂದೆ ” ಎಂದು ಉತ್ತರ ಕೊಟ್ಟಳು ಮೈಮೇಲೆ ಬಂದ ದೇವಿ.

“ಸರಿ ಸರಿ, ಚೆನ್ನಾಗಿದೆ ಮನೆ ಕೆಲಸ ಎಲ್ಲಾ ಬಿಟ್ಟು ಇದೇನೋ ಮಾಡೋದು ? ನಡೀ ಮನೆ ಕಡೆ.”

“ದೇವಿಯ ಆಜ್ಞೆ-ಅದಕ್ಕಾಗಿ ಬಂದೆ.”

“ಯಾರು ದೇವಿ! ನೀನೋ ದೇವಿ! ಮುಚ್ಚು ಬಾಯಿ” ಎಂದ. ಅಷ್ಟರಲ್ಲಿ ಮುದುಕಿ ಬಂದು “ಅಪ್ಪಾ ರಾಮಸ್ವಾಮಿ, ನೀನು ಮನೆಗೆ ಹೋಗು. ಹಿಂದೆಲೇ ಬರುತ್ತೇವೆ. ಅವಳ ಮೈ ಮೇಲೆ ದೇವಿ ಬಂದಿದ್ದಾಳೆ. ಅದು ಹೋಗಲಿ. ನಾವು ಬಂದುಬಿಡ್ತೇವೆ” ಎಂದಳು. ಆತ “ಇವೆಲ್ಲಾ ಆಗೋದಿಲ್ಲ” ಎಂದು ತಕ್ಷಣ ಓಡಿಹೋಗಿ ಪೋಲೀಸರಿಗೆ ಕಂಪ್ಲೇಂಟು ಕೊಟ್ಟ : “ಯಾರೋ ನನ್ನ ಹೆಂಡತಿಗೆ ಹುಚ್ಚು ಹಿಡಿಸಿದ್ದಾರೆ. ನಿನ್ನೆಯಿಂದ ಮನೆಯಲ್ಲೇ ಇಲ್ಲ” ಎಂದ. ಕೂಡಲೇ ಪೋಲೀಸರು ಬಂದರು. ದೇವಿಗೆ ಬುದ್ದಿ ಕೆರಳಿತು. ನರ್ತನ ಅಸಾಧ್ಯವಾಯಿತು. ಕಣ್ಣುಗಳು ಕೆಂಪೇರಿದುವು. ತೆಂಗಿನಕಾಯನ್ನು ಒಂದೇ ಏಟಿಗೆ ತುಳಿದು ಚೂರುಚೂರು ಮಾಡಿದಳು. ಹಲ್ಲು ಕಿರಿದಳು. ನಾಲಗೆ ನೀಡಿದಳು. ‘ಬಾಯಲ್ಲಿ ರಕ್ತ ಸುರಿಸಿದಳು. ಮೈಯೆಲ್ಲಾ ನವಿರೇಳುವಂತೆ ಆರ್ಭಟಿಸಿದಳು. ಇಷ್ಟು ಹೊತ್ತಿಗೆ ಮುದುಕಿ ಪರಾರಿಯಾದಳು. ಸುಮಾರು ಹನ್ನೆರಡು ಗಂಟೆ ಆಗಿರಬಹುದು. ಪೋಲೀಸರು, ನಾವು, ದೇವಿ ಇಷ್ಟೇ ಮಂದಿ. ಉಳಿದವರೆಲ್ಲಾ ಹೊರಟು ಬಿಟ್ಟಿದ್ದರು.

ದೇವಸ್ಥಾನದ ಅಕ್ಕಪಕ್ಕದ ಸಂಸಾರದವರು ಮಾತ್ರ ಇದ್ದರು. ದೇವಿಯು ಕರಾಳವೇಷವನ್ನು ಧರಿಸಿದಳು. ಪೋಲೀಸರಿಗೆ ಗುಂಡಿಗೆ ಒಡೆಯಿತು. ಹತ್ತಿರ ಹೋಗಲು ಸಾಮರ್ಥ್ಯ ಸಾಲದಾಯಿತು. ಹಾಗೂ ಹೀಗೂ ಮಾಡಿ ದಫೇದಾರರು ಒಳಕ್ಕೆ ನುಗ್ಗಿದರು. ದೇವಿಯು “ಕಪ್ಪು ಬಟ್ಟೆ, ಕಾಲಿನಲ್ಲಿ ಜೋಡು, ಎಚ್ಚರಿಕೆ” ಎಂದಳು. ಪೋಲೀಸ್ ದಫೇದಾರರಿಗೆ ಭಯವಾಯಿತು. ಕೋಟು ಬಿಚ್ಚಿದರು, ಜೋಡುಗಳನ್ನು ಕಳಚಿದರು. ಧೈರ್ಯವಾಗಿ ಒಳಕ್ಕೆ ನುಗ್ಗಿದರು. ಹಿಂದೆಯೇ ಕಾನ್‌ಸ್ಟೇಬಲ್ಲುಗಳು ಒಬ್ಬೊಬ್ಬರಾಗಿ ಹಿಂಬಾಲಿಸಿದರು. ದಫೇದಾರರು “ನೀವು ರಾಮಸ್ವಾಮಿ ಯವರ ಹೆಂಡತಿ ತಾನೆ ?” ಎಂದು ಕೇಳಿದರು. ಅದಕ್ಕೆ ದೇವಿ “ನಾನು ಮಹಾಶಂಕರಿ, ನಿಮಗಿಲ್ಲಿ ಕೆಲಸವಿಲ್ಲ, ತೊಲಗಿರಿ” ಎಂದು ಘರ್ಜಿಸಿದಳು. ಅಷ್ಟರಲ್ಲಿ ರಾಮಸ್ವಾಮಿ “ಇವಳಿಂದ ನನ್ನ ಮಾನವೆಲ್ಲಾ ಹೋಯಿತು. ಮನೆ ಬಾಗಿಲು ಬಿಟ್ಟು ಹೀಗೆಲ್ಲಾ ಬರೋದು, ಕುಣಿಯೋದು. ಆ ಮುದುಕಿ ಇದ್ದಾಳಲ್ಲಾ ಅವಳದ್ದೇ ಇವೆಲ್ಲಾ. ಅವಳನ್ನು ಮೊದಲು ಹಿಡಿಯ ಬೇಕು” ಎಂದ.

ಎಲ್ಲಿಯೋ ಅವಿತುಕೊಂಡಿದ್ದ ಮುದುಕಿ ಓಡಿಬಂದು ದಫೇದಾರರ ಕಿವಿಯಲ್ಲಿ “ನಿಮಗೈವತ್ತು” ಎಂದಳು. ಕೂಡಲೇ ದಫೇದಾರರು “ಅಬ್ಬಬ್ಬಾ! ದೇವಿಗೆ ಕೋಪ ಬಂದುಬಿಟ್ಟಿದೆ. ವಿರಾಮವಾಗಿ ನೋಡಬೇಕು ರಾಮ ಸ್ವಾಮಿಯವರೇ, ನಾಳೆ ನೋಡೋಣ” ಎನ್ನುತ್ತಾ ಆ ಮುದುಕಿಯೊಡನೆ ಹೊರಕ್ಕೆ ಹೊರಟುಹೋದರು.

ದೇವಿಯು, ಪೋಲೀಸಿನವರು ಬಹುದೂರ ಹೋದಮೇಲೆ, ರಾಮ ಸ್ವಾಮಿ ಸಂಗಡ ದೇವಾಲಯದಿಂದ ಹೊರಕ್ಕೆ ಬಂದು ‘ಕ್ಷಮಿಸಿ’ ಎಂದಳಂತೆ.
*****

Tagged:

Leave a Reply

Your email address will not be published. Required fields are marked *

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...