ಒಂದು ದಿನ ಪದ್ಮ ನಮ್ಮನೆಗೆ ಬಂದಿದ್ದಳು. “ಏನೋ ಮೋಹನ ಹೇಗಿದ್ದೀಯ” ಎಂದಳು.
ಅವಳ ಧ್ವನಿಯಲ್ಲಿ ಮೊದಲಿನ ಲವಲವಿಕೆ ಇರಲಿಲ್ಲ. ನನ್ನ ಜೀವ ಚುರು ಗುಟ್ಟಿತು. ಅವಳು ಮುಂಚಿನ ಪದ್ಮಳಾಗಿರಲಿಲ್ಲ. ಕೃಶಳಾಗಿದ್ದಳು. ಕಾಂತಿಹೀನ ಕಣ್ಣುಗಳಿಂದ ಕೂಡಿದ್ದಳು. ಆಕೆಯ ತುಂಬಿದ ಚೆಲುವು ಇಂದು ಕಮರಿ ಹೋಗಿತ್ತು.
“ನೀನು ಹೇಗಿದ್ದೀಯ” ಎಂದೆ.
“ಧರ್ಮದ ಅಂಧ ಶ್ರದ್ಧೆಯ ಸಮಾಧಿಯಲ್ಲಿ ಜೀವಂತ ಶವವಾಗಿದ್ದೇನೆ ಕಣೋ” ಎಂದಾಗ ಅವಳ ಧ್ವನಿ ಗದ್ಗತದಿಂದ ಕೂಡಿತ್ತು. ನನಗಂತೂ ತಡೆಯಲಾಗಲಿಲ್ಲ. ನನ್ನ ಕಣ್ಣಿನಿಂದ ನೀರಿನ ಹನಿ ಉದುರಿದವು.
“ನೀನು ಗಂಡು ಹುಡುಗ, ಯಾವ ತಾಯಿಯ ಮಗಳಾದರೇನು? ನೀನು ಕೈ ಹಿಡಿಯುವ ಹೆಣ್ಣಿಗೆ ಹೀಗೆ ತೊಂದರೆ ಕೊಡಬೇಡ್ವೋ….”
“ಇಲ್ಲಪ್ಪ, ನಾನು ಯಾವತ್ತೂ ತೊಂದರೆ ಕೋಡೋದಿಲ್ಲ….”
“ಅದಕ್ಕೆ ಆ ಹುಡುಗನಿಗಿಂತ ನೀನೇ ಎಷ್ಟೋ ವಾಸಿ ಕಣೋ” ಎಂದಳು. ಈ ಪದ್ಮ ನನಗಿಂತಲೂ ಎರಡು ವರ್ಷ ದೊಡ್ಡವಳು. ಒಂದೇ ಕಾಲೇಜಿನಲ್ಲಿ ಓದುತಿದ್ವಿ, ಇವಳು ನನ್ನ ಒಳ್ಳೆಯ ಸ್ನೇಹಿತಳಾಗಿದ್ದಳು. ಇಷ್ಟೇ ಅಲ್ಲ ನಮ್ಮ ಪರಿಚಯ, ನಮ್ಮ ಮನೆ ಹತ್ತಿರ ಇವರ ಮನೆ. ಇವಳ ತಂದೆ ಇಂಜಿನಿಯರ್ ಲಕ್ಷ್ಮಣರಾಯರು. ನಮ್ಮ ತಂದೆ ಸ್ನೇಹಿತರು. ನಾನು ಅವಳನ್ನು ಸಲುಗೆಯಿಂದ “ಪದ್ದೀ ಏಯ್ ಪದ್ದೀ ಎಂದು ಕರೆಯುತ್ತಿದ್ದೆ. ನಿನ್ನನ್ನು ಮದುವೆ ಆಗೋನು ಪುಣ್ಯವಂತ ಕಣೇ”
“ಏನೋ ಹಾಗಂತೀಯ”
“ಅಷ್ಟೊಂದು ಸುಂದರವಾಗಿದ್ದೀಯ ಕಣೇ ನೀನು” ಎಂದು ಛೇಡಿಸುತ್ತಿದ್ದೆ. ಅದಕ್ಕವಳು “ನಾನಷ್ಟೊಂದು ಸುಂದರಿ ಏನೋ” ಎಂದು ಕೇಳುತ್ತಿದ್ದಳು. ಪದ್ಮ ಲಕ್ಷಣವಾದ ಅತಿ ಚೆಲುವೆ, ನೀಳವಾದ ಮೂಗು, ಗುಂಗುರು ಕೂದಲು ನೀಳವಾದ ಜಡೆ, ತೆಳ್ಳಗೆ, ಬೆಳ್ಳಗೆ, ಬಳುಕುವ ಆರೋಗ್ಯ ಪೂರ್ಣವಾದ ದೇಹ, ತಿದ್ದಿದ ಗೊಂಬೆಯಂತಿದ್ದಾಳೆ. ವಿದ್ಯಾವಂತೆ. ಜೊತೆಗೆ ಬುದ್ದಿವಂತೆ. ಯಾರು ತಾನೆ ಆಕೆಯನ್ನು ಬಿಟ್ಟಾರು.
ಒಂದು ದಿನ, ಆಕೆಯನ್ನು ನೋಡಲು ಸ್ಪುರದ್ರೂಪಿಯಾದ ಯುವಕ ಶ್ರೀನಿವಾಸ ಎಂ.ಎಸ್ಸಿ. ಮಾಡಿ ಕಾಲೇಜೊಂದರಲ್ಲಿ ಲೆಕ್ಟರ್ ಆಗಿದ್ದೋನು ಬಂದಿದ್ದ. ಆ ಹುಡುಗನನ್ನು ಎಲ್ರೂ ನೋಡಿ ಒಪ್ಪಿ ಸಂತೋಷಪಟ್ಟರು. ಒಳ್ಳೆಯ ನೌಕರಿ, ಕೈ ತುಂಬಾ ಸಂಬಳ, ಮೇಲಾಗಿ ನಾಲ್ಕಾರು ತಲೆಮಾರು ತಿಂದರೂ ಸವಿಲಾರದಷ್ಟು ಆಸ್ತಿ ಇದೆ. ಇಂತಹ ಹುಡುಗರು ಬಹಳ ವಿರಳ. ನಮ್ಮ ಹುಡುಗೀಗೂ ಒಪ್ಪಿಗೆ ಎಂದು, ಅವಳ ತಂದೆ ತಾಯಿ, ಹುಡುಗನಿಗೂ ಒಪ್ಪಿಗೆಯಾಯ್ತೆಂದು, ಅಪರೂಪದ ಜೋಡಿ ಎಂದು ಹಾಡಿ ಹೊಗಳಿದ್ದೇ ಹೊಗಳಿದ್ದು, ನಾನೂ ಕೂಡಾ ಛೇಡಿಸಿದ್ದೇ ಛೇಡಿಸಿದ್ದು. ಅಂದು ಅವರಿಬ್ಬರ ಮದ್ವೇನೇ ಆಗಿ ಹೋಯ್ತು ಎನ್ನುವಷ್ಟರ ಮಟ್ಟಿಗೆ ಅವರಲ್ಲಿ ಸಂಭ್ರಮ ಉಂಟಾಗಿತ್ತು. ವಿದ್ಯಾವಂತರ ಮನೆ, ತಿಳುವಳಿಕೆಯಸ್ತ ಜನ ಏನು ಮಾಡುವುದು, ಕೊನೆಗೆ ಆದದ್ದೇ ಬೇರೆ. ಒಪ್ಪಿ ಹೋದ ಅವರಿಂದ ಇಬ್ಬರ ಜಾತಕ ಸರಿ ಬರಲಿಲ್ಲ ಎಂದು ಪತ್ರ ಬಂದಿತು. ಇದರಿಂದ ಪದ್ಮಳಿಗೆ ಮಂಕು ಕವಿಯಿತು. ಒಂದು ರೀತಿ ವಿಚಿತ್ರವಾಗಿ ಮಾತನಾಡುವುದು, ಸಹಜವಾಗಿ ಮಾತನಾಡುವುದು ಕೂಡ ನಿಂತು ಹೋಯ್ತು. ಕೊನೆ ಕೊನೆಗೆ ಹುಚ್ಚು ಹಿಡಿದಂತಾದಳು. ಹೀಗಿರುವಾಗ ಯಾರು ತಾನೆ ಈ ಸುಂದರಿಯನ್ನು ಮದುವೆಯಾಗುತ್ತಾರೆ. ಉರಿನಲ್ಲಿಯೂ ಇರುವುದು ದುಸ್ತರವಾಯಿತು. ಅವರ ತಂದೆ ಯಾವುದೋ ಊರಿಗೆ ವರ್ಗಮಾಡಿಸಿ ಕೊಂಡ್ರು, ಈಗ ನನಗೆ ಆಕೆಯನ್ನು ಮರೆತಂತೆ ಆಗಿತ್ತು.
ನನಗೂ ಈಗಾಗಲೇ ಮದುವೆಯಾಗಿ ಎರಡು ಮಕ್ಕಳು. ಇದ್ದಕ್ಕಿದ್ದ ಹಾಗೆ ಪದ್ಮಳ ಆಗಮನ. ನಲ್ವತ್ತರ ಗಡಿಯಲ್ಲಿದ್ದರೂ ಇನ್ನೂ ಈ ಪದ್ಮ ಜಾತಕ ಪಕ್ಷಿಯಂತೆ ಮದುವೆ ಎಂಬ ಬಂಧನಕ್ಕೆ ಹಸಿದ ಕಣ್ಣುಗಳಿಂದ ಕಾದು ಕುಳಿತಿದ್ದಾಳೆ.
“ಧರ್ಮವೆಂಬ ಕ್ರೌರ್ಯದ ಸಮಾಧಿಯಲ್ಲಿ ಹೀಗೆ ಇನ್ನೂ ಎಷ್ಟೋ ಹೆಣ್ಣು ಮಕ್ಕಳಿದ್ದಾರೋ ಏನೋ ದೇವರಿಗೆ ಗೊತ್ತು. ಅಲ್ವೇನೋ ಮೋಹನ” ಎಂದಳು. ನಾನು ಸುಮ್ಮನಿದ್ದೆ.
“ಏಕೋ ಸುಮ್ಮನಾಗಿಬಿಟ್ಟೆ.. ನನ್ನತ್ರ ಮಾತಾಡಲ್ವೇನೋ, ನನ್ನನ್ನು ಛೇಡಿಸಲ್ವೇನೋ” ಎಂದು ಅಳುತ್ತಾ ನನ್ನನ್ನು ನೋಡುತ್ತಾ ನಿಂತಿದ್ದಳು. ಅಷ್ಟರಲ್ಲೇ
ನನ್ನ ಎರಡನೇ ಮಗ ಅಪ್ಪಾಜಿ, ಅಪ್ಪಾಜಿ ಎಂದು ತೊದಲುತ್ತಾ ನನ್ನ ಬಳಿ ಬಂದ ಅವನನ್ನ ಬಗ್ಗಿ ಎತ್ತಿಕೊಂಡು ನೋಡ್ತನೆ. ಪದ್ಮ ಎಲ್ಲಿ? ಹೊರಟು ಹೋಗಿದ್ದಳು. ಎಲ್ಲೂ ನೋಡಿದರೂ ಕಾಣಿಸಲಿಲ್ಲ.
ರಸ್ತೆಯಲ್ಲಿ ಅಳುತ್ತಾ ಒಂದೇ ಸಮನೆ ಓಡುತ್ತಿದ್ದಳು. ಏನಾದರೂ ಮಾಡಿಕೊಂಡಾಳೆಂದು ನಾನೂ ಬಿಡದೇ ಅವಳನ್ನು ಹಿಂಬಾಲಿಸಿ ಹಿಡಿದೆ. ಅವಳನ್ನು ಮನೆಗೆ ಎಳೆದು ತಂದೆ. ನನ್ನ ಹೆಂಡತಿಯೂ ಇದನ್ನು ಆಶ್ಚರ್ಯದಿಂದ ನೋಡುತ್ತಿದ್ದಳು, ನನ್ನಾಕೆಗೆ ಪದ್ಮಳ ವಿಚಾರವನ್ನು ವಿವರವಾಗಿ ತಿಳಿಸಿದೆ. ಪಾಪ ಎಂದೆನಿಸಿತು ಅವಳಿಗೆ.
ಅವಳು ತನ್ನ ಕಾಲೇಜು ಲೈಫನ್ನು ನೆನಪಿಸಿಕೊಂಡಳು. ಹೃದಯಕ್ಕೆ ನೋವಾದ ಸಂಗತಿ. ಇವಳ ತೀರ ಹತ್ತಿರದ ಸ್ನೇಹಿತ ಊರ್ವಶಿ ಸ್ಪುರದ್ರೂಪಿ ಯುವತಿ. ಮೊದಲನೇ ಬಿ.ಎಸ್.ಸಿ. ಓದುತ್ತಿದ್ದಳು. ಒಂದು ದಿನ ಅವಳನ್ನು ಪ್ರೀತಿಸುತ್ತಿದ್ದ ರಮೇಶ, “ಏ ಊರ್ವಶಿ, ಬಾರೆ ಇಲ್ಲಿ, ನಿಮ್ಮ ತಂದೆಗೆ ತಿಳಿಸಿದ್ಯಾ” “ಇಲ್ಲ ಕಣೋ ನಮ್ಮ ಮದುವೆ ವಿಚಾರ ಹೇಳೋದು ಅಂದ್ರೆ… ಒಂದು ರೀತಿ ಹೆದರಿಕೆ ಆಗುತ್ತೆ ಕಣೋ”
“ನೀನೇನೂ ಹೆದರಬೇಡ, ನನ್ನನ್ನು ನಿಮ್ಮನೆಗೆ ಕರ್‍ಕೊಂಡು ಹೋಗು. ನಿಮ್ಮ ತಂದೆಗೆ ಪರಿಚಯ ಮಾಡಿಸು. ನಾನೇ ಎಲ್ಲಾ ವಿಚಾರ ತಿಳಿಸ್ತೀನಿ.”
“ಅವರು ಒಂದು ವೇಳೆ ಒಪ್ಪಲಿಲ್ಲ ಅಂದ್ರೆ”
“ಅರೆ, ಅವರು ಒಪ್ಪಲಿ, ಬಿಡಲಿ, ನಿನ್ನನ್ನು ಮದುವೆಯಾಗೊದು ಗ್ಯಾರಂಟಿ. ಹಿರಿಯರು ಅಂತ ಒಂದ್ಮಾತು ತಿಳಿಸೋಣ ಅಷ್ಟೇ. ನೀಮಾತ್ರ ಧೈರ್ಯವಾಗಿರು.”
“ನೀವಿಲ್ದೇ ಇದ್ರೆ ನಾನು ಬದುಕಿರೋಲ್ಲ ಕಣ್ರ್‍ಈ.”
“ಅದಕ್ಕೋಸ್ಕರ ಅಲ್ವೇ ಇಷ್ಟೆಲ್ಲಾ ಪರದಾಡ್ತಿರೋದು. ಎಲ್ಲಾ ನಿನಗೋಸ್ಕರ ಕಣೇ” ಎಂದು ಅವಳಿಗೆ ಧೈರ್ಯ ತುಂಬಿ ಹೋಗಿದ್ದ.
ಸಂಜೆಯ ಹೊತ್ತಿನಲ್ಲಿ ಇವರಿಬ್ಬರೂ ಓಡಾಡುತ್ತಿದ್ದ ಸಂದರ್ಭ ನೋಡಿದ ಮಾರನೇ ದಿವ್ಸ ಊರ ಹೊರಗಿನ ಕಾಡಿನಲ್ಲಿ ರಮೇಶನ್ನ ಕೊಲೆ ಮಾಡಿ, ಅವಳ ದೇಹದ ಸುಖ ಉಂಡು ಪ್ರಜ್ಞೆ ತಪ್ಪಿದ ದೇಹವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು ದುಷ್ಕರ್ಮಿಗಳು. ಯಾರೋ ಏನೋ ಈಕೆಯ ದೇಹವನ್ನು ನೋಡಿ ಯಾರು ಈ ಮಹಿಳೆಯೆಂದು ಪತ್ತೆ ಮಾಡಿ ಆಸ್ಪತ್ರೆಗೆ ಸೇರಿಸಿದ್ದರು. ಆದರೇನು ಮಾಡುವುದು ವಿಧಿಯ ಲೀಲೆ ತಪ್ಪಿಸುವುದಕ್ಕೆ ಯಾರಿಂದ ಸಾಧ್ಯ. ರಮೇಶ ಕೊಲೆಯಾದ ಸುದ್ದಿ ತಿಳಿದು ಊರ್ವಶಿ ಹುಚ್ಚಿಯಂತಾದಳು. ಅವಳ ತಂದೆ ತಾಯಿಗಳು ಅಸಹಾಯಕರಾದರು. ಪ್ರತಿ ದಿನ ಊರ ಸರ್ಕಲ್ ಬಳಿ ನಿಂತು ಕೂಗುವುದು, ಅರಚುವುದು, ಅಳುವುದು, ಬೆತ್ತಲೆ ಓಡುವುದು ನಡೆಯುತ್ತಿತ್ತು. ಅವಳ ಮೈಮೇಲೆ ಬಟ್ಟೆ ಇದ್ದರಿತ್ತು. ಇಲ್ಲದಿದ್ದರಿಲ್ಲ.
ಒಂದು ದಿವಸ ಇದ್ದಕ್ಕಿದ್ದ ಹಾಗೆ ಸರ್ಕಲ್‌ನಲ್ಲಿ ಊರ್ವಸಿಯ ಭೇಟಿಯಾಯಿತು. “ಅಯ್ಯೋ ಊರ್ವಸಿ, ನಿನಗೆ ಇಂತಹ ಸ್ಥಿತಿ ಬರಬಾರದಿತ್ತು ಕಣೇ” ಎಂದು ಕಣ್ಣೀರಿಟ್ಟಿದ್ದಳು. ಇದು ಕಣ್ಮುಂದೆ ಕಟ್ಟಿದಂತಾಗಿ ತನ್ನ ಒದ್ದೆಯಾದ ಕಣ್ಣನ್ನು ಒರೆಸಿಕೊಳ್ಳುತ್ತಾ, “ಪದ್ಮ ನನ್ನ ತಂಗಿಯಾಗಿ ಈ ಮನೆಗೆ ಬರಲಿ” ಎಂದು ನನ್ನ ಹೆಂಡತಿ ಥಟ್ಟನೆ ಹೇಳಿದಾಗ, ನನ್ನ ಮೈ ರೋಮಾಂಚನಗೊಂಡಿತು. ಪದ್ಮ ಈ ಮಾತನ್ನು ಕೇಳಿ ದಿಗ್ಭ್ರಾಂತಳಾದಳು. “ನೋಡು ಸರಿಯಾಗಿ ಯೋಚನೆ ಮಾಡು” ಎಂದು ಗಂಡ ಹೇಳಿದ. ಅದಕ್ಕೆ “ನಾನು ಎಲ್ಲಾ ಯೋಚಿಸಿಯೇ ಈ ಮಾತನ್ನು ಹೇಳಿದ್ದೇನೆ ಕಣೋ” ಎಂದಳು. ಆಕೆಯಾಡುವ ಮಾತು ಸತ್ವಪೂರ್ಣವಾಗಿದ್ದವು. ಪದ್ಮ ಮೌನವಾಗಿಯೇ ಕುಳಿತಿದ್ದಳು.
ಊಟವಾದ ಬಳಿಕ ಪದ್ಮಳಿಗೆ ಒಂದು ರೂಮಿನಲ್ಲಿ ಮಲಗಲು ವ್ಯಸ್ಥೆಯಾಯಿತು. ಪದ್ಮ ಅಳುತ್ತಾ ಹೋಗಿ ಬಾಗಿಲು ಹಾಕಿಕೊಂಡಳು. ಎಷ್ಟೇ ಪ್ರಯತ್ನಿಸಿದರೂ ರಾತ್ರಿ ನಿದ್ರೆಯೇ ಬರಲಿಲ್ಲ. ರಾತ್ರಿ ಹನ್ನೆರಡು ಆದರೂ ಪದ್ಮ ಬಿಕ್ಕಳಿಸುತ್ತಾ ಇರುವುದು ಕೇಳಿಸುತ್ತಿತ್ತು.
ನನ್ನ ಹೆಂಡತಿಗೆ ಸಮಾಧಾನವಾಗಲಿಲ್ಲ. ನನ್ನ ಎಬ್ಬಿಸಿ, “ರೀ ಅವಳನ್ನು ಸಂತೈಸಿ ಬರೋಣ” ಎಂದಳು. ಇಬ್ಬರೂ ರೂಮಿಗೆ ಹೋಗಿ ಅವಳ ರೂಮಿನ ಬಾಗಿಲು ತಟ್ಟಿದೆವು. ಬಾಗಿಲು ತೆರೆಯಿತು. ಅವಳನ್ನು ನೋಡಿದಾಗ ಅತ್ತು ಅತ್ತು ಮುಖ ಊದಿ ಹೋಗಿತ್ತು. ನನ್ನನ್ನು ಒಳದೂಡಿ,
“ಅವಳನ್ನು ಸಮಾಧಾನ ಮಾಡಿ” ಎಂದು ನನ್ನ ಹೆಂಡತಿ ಬಾಗಿಲು ಎಳೆದುಕೊಂಡಳು. ಪದ್ಮ ಅವನ ಕೈ ಹಿಡಿದು ಅಳಲಾರಂಭಿಸಿದಳು.
“ಪದ್ಮ ನೀನು ಸಾಕಾಗುವಷ್ಟು ಅತ್ತುಬಿಡು.”
“ಮುಂದೆ ನಾನು ಬದುಕಿರುವವರೆಗೂ ನೀನು ಅಳಕೂಡದು ಗೊತ್ತಾಯ್ತ.”
ಪದ್ಮ ಕಣ್ಮರೆಸಿಕೊಳ್ಳುತ್ತಾ ನಾಚಿಕೆಯಿಂದ
“ನೀವಿಬ್ಬರೂ ನನ್ನ ಪಾಲಿನ ದೇವರು.”
“ನೀನೇನೂ ಯೋಚಿಸಬೇಡ. ನಿನ್ನ ಅಕ್ಕ ನನ್ನನ್ನು ನಿನಗೋಸ್ಕರ ಬಿಟ್ಟು ಕೊಟ್ಟಿದ್ದಾಳೆ.” ಅವನ ಮಾತು ಕೇಳಿ ಅಳುವುದನ್ನು ನಿಲ್ಲಿಸಿ, “ಅಕ್ಕ ಎಂಥ ತ್ಯಾಗಮಯಿ” ಎಂದು ನಕ್ಕಳು.
ಮೋಹನ ದೀಪವಾರಿಸಿ ಅವಳ ಕೈ ಅದುಮಿದ.
“ನನ್ನ ಮೈ ಜುಂ ಅಂತಾ ಇದೆ. ನನಗೆ ಹೆದರಿಕೆಯಾಗಿದೆ” ಎಂದು ಅದುರುವ ಧ್ವನಿಯಲ್ಲಿ ಅವನ ಕಿವಿಯಲ್ಲಿ ಪಿಸುಗುಟ್ಟಿದಳು.
“ನಾನು ಜೀವಂತವಿರುವವರೆಗೂ ನಿನಗೆ ಯಾವುದೇ ಭಯವಿಲ್ಲ. ನೀನು ಯಾರಿಗೂ ಹೆದರಬೇಕಾಗಿಲ್ಲ. ಹೆದರದೆ ಹತ್ತಿರ ಬಾ.”
“ಇನ್ನು ನಾನು ಯಾರಿಗೂ ಹೆದರುವುದಿಲ್ಲ. ಯಾವ ಸಂಕೋಚವಿಲ್ಲದೆ ನನ್ನ ಸರ್ವಸ್ವವನ್ನೂ ನಿನಗೊಪ್ಪಿಸ್ತೇನೆ.” ಪದ್ಮ ಪ್ರೀತಿಯಿಂದ ಅವನ ತುಟಿಗಳನ್ನು ಬಲವಾಗಿ ಕಚ್ಚಿದಳು.
“ನೀನು ಅಪರೂಪದ ಹೆಣ್ಣು. ಹಸಿದ ಹೆಣ್ಣು ಹುಲಿ” ಎಂದು ಅವಳ ದೇಹವನ್ನು ಎಳೆದುಕೊಂಡು ಬಿಗಿಯಾಗಿ ತಬ್ಬಿದ.
“ನನಗೆ ನಿಮ್ಮನ್ನು ನುಂಗುವ ಆಸೆಯಾಗಿದೆ” ಎಂದಳು ಉದ್ವೇಗದಿಂದ. “ನಿಮ್ಮನ್ನು” ಎಂದೊಡನೆ ಅವನು ಮನದಲ್ಲಿಯೇ ಸಂತೋಷಗೊಂಡ. ಅವನು ತನ್ನ ಹಿಡಿತವನ್ನು ಇನ್ನಷ್ಟು ಬಿಗಿಮಾಡಿದ.
ಹೊರಗಡೆ ಧಾರಾಕಾರವಾದ ಮಳೆ, ರೂಮಿನಲ್ಲಿ ಕತ್ತಲು, ನದಿ ಸಾಗರ ಸೇರಿದಂತೆ ಪ್ರಕೃತಿ ಪುರುಷನೊಂದಿಗೆ ಕೂಡಿ ಜನ್ಮ ಸಾರ್ಥಕ ಪಡೆದಂತೆ ಹೆಣ್ಣು ಪುರುಷನಿಂದ ಮುಕ್ತಿ ಪಡೆಯುವಂತಾಯ್ತು.
*****