ನನ್ನ ಬಾಲ್ಯ ಕಳೆದಿದ್ದು ಮಲೆನಾಡಿನ ಮೂಲೆಯಲ್ಲಿ, ಮಲೆನಾಡ ಎಂದರೆ ಊರಿಗೊಂದು ಮನೆ. ನಮ್ಮ ಗ್ರಾಮವು ದಂಡಕಾರಣ್ಯ ಮಧ್ಯದಲ್ಲಿತ್ತು. ಮಳೆಗಾಲ ಬಂತೆಂದರೆ ನಮ್ಮೂರು ಪೂರ್ಣ ದ್ವೀಪವೇ ಆಗಿಬಿಡುತ್ತಿತ್ತು. ಇದ್ದಕ್ಕಾಗಿ ಏನೋ ನಮ್ಮೂರಿಗೆ ‘ಹಾಳೂರು’ ಅಂತ ಹೆಸರು ಬಂದಿದ್ದು. ನಮ್ಮಜ್ಜ ಹೇಳುವ ಪ್ರಕಾರ ನಮ್ಮೂರಿನ ತುಂಬಾ ಮೊದಲು ಹಸು ಎಮ್ಮೆಗಳು ಜಾಸ್ತಿ ಇದ್ದಂತೆ. ಹಾಲಿನ ಹೊಳೆಯೇ ಹರಿಯುತ್ತಿತ್ತಂತೆ. ಈ ಕಾರಣದಿಂದಾಗಿ ನಮ್ಮೂರಿಗೆ ‘ಹಾಲೂರು’ ಎಂಬಂತೆ ಹೆಸರು ಬಂದಿತಂತೆ, ಬರು ಬರುತ್ತಾ ಅದು ಜನರ ಬಾಯಲ್ಲಿ ‘ಹಾಳೂರು’ ಆಗಿ ಹೋಯಿತು.
ನನ್ನ ಬಾಲ್ಯದ ವಿದ್ಯಾಭ್ಯಾಸವನ್ನು ನಮ್ಮ ಹಾಳೂರಿನಲೇ ಇದ್ದ ‘ಶಾಲೆ’ ಅಂತ ಕರೆಯಬಹುದಾಗ ದೊಡ್ಡಿಯಲ್ಲಿ ಮುಗಿಯಿತು. ಮುಂದೆ ಹಾಗೂ ಹೀಗೂ ಮಾಡಿಕೊಂಡು ಹತ್ತನೇ ಇಯತ್ತನ್ನು ಮುಗಿಸಿದೆ. ಕಾಲೇಜು ಸೇರುವ ತವಕ ನನ್ನಲ್ಲಿ ಹುಚ್ಚು ಕನಸನ್ನು ಮೂಡಿಸಿತು. ನನ್ನ ಅಪ್ಪ ನಮ್ಮೂರ ಗ್ರಾಮ ಪಂಚಾಯತಿ ಅಧ್ಯಕ್ಷನಾಗಿದ್ದ. ಅವನಿಗೆ ನನ್ನ ವಿದ್ಯಾಭ್ಯಾಸ ನನ್ನ ಭವಿಷ್ಯ ಕ್ಕಿಂತ ಅವನ ಪ್ರತಿಷ್ಠೆ ಮುಖ್ಯವಾಗಿತ್ತು. ನಾನು ಎಸ್.ಎಸ್.ಎಲ್.ಸಿ ಪಾಸು ಮಾಡಿದ್ದು ಅವರ ಪ್ರತಿಷ್ಠೆಯನ್ನು ಮತ್ತುಷ್ಟು ಹೆಚ್ಚಿಸಿತ್ತು. ಮನೆಯಲ್ಲಿ ನಮ್ಮಿಬ್ಬರ ನಡುವೆ ಮಾತುಕತೆ ನಡೆಯುತ್ತಿದಿದ್ದೆ ಕಡಿಮೆ ಇತ್ತು. ಅವನ ಪ್ರೀತಿ, ಅಮ್ಮನ ವಾತ್ಸಲ್ಯ ಕಾಣದ ನಾನು ಅಪ್ಪ ಅಮ್ಮ ಇದ್ದೂ ನಿಜಕ್ಕೂ ತಬ್ಬಲಿಯಾಗಿದ್ದೆ. ನನ್ನ ಕಾಲೇಜು ಜೀವನ ನನ್ನ ಪಾಲಿಗೆ ಅಮೃತಕ್ಷಣವಾಗಿತ್ತು. ಊರಿನಲ್ಲಿ ತನ್ನ ಪ್ರತಿಷ್ಠೆ ಹೆಚ್ಚಿಸಿಕೊಳ್ಳುವ ಸಲುವಾಗಿ ಅಪ್ಪ ದೂರದ ತಿಮ್ಮಾಪುರದ ಸರ್ಕಾರ ಪದವಿ ಪೂರ್ವ ಕಾಲೇಜಿಗೆ ನನ್ನನ್ನು ಸೇರಿಸಿದ. ಇಲ್ಲೇ ಒಂದು ರೂಮ್ ಮಾಡಿಕೊಂಡು ನಾನು ಇರತೊಡಗಿದೆ. ಕಾಲೇಜು ಸೇರಿದಾಗ ನನ್ನ ಒಬ್ಬಂಟಿತನಕ್ಕೇ ನನಗೆ ಯಾರೂ ಗೆಳೆಯರೇ ಸಿಗಲಿಲ್ಲ. ಅವರೆಲ್ಲ ದೃಷ್ಟಿಯಲ್ಲಿ ನಾನೊಬ್ಬ ಹಳ್ಳಿಗಮಾರನಾಗಿ ಕಂಡೆ ಹಾಗೆ ಪೆದ್ದ ದಡ್ಡನಾಗಿ ಕಂಡು ಬಂದೆ.
ಕಾಲೇಜು ವಿದ್ಯಾಭ್ಯಾಸದ ನಡುವೆ ನಾನು ಆಂಗ್ಲಭಾಷೆಯ ಬೆರಳಚ್ಚು ಕಲಿಯಲು ಸೇರುವ ನಿರ್ಧಾರವನ್ನು ಮಾಡಿದೆ. ನಮ್ಮ ರೂಮಿನ ಪಕ್ಕದಲ್ಲೇ ಇದ್ದ ‘ಗಣೇಶ ಟೈಪ್ ಇನ್ಸ್‌ಟ್ಯೂಟಿಗೆ’ ಸೇರುವ ನಿರ್ಧಾರ ಮಾಡಿದೆ. ಕಾಲೇಜಿನ ಸಮಯ ಬೆಳಿಗ್ಗೆ ಇದ್ದ ಕಾರಣ ಸಂಜೆ ಸಮಯಕ್ಕೆ ಟೈಪಿಗೆ ಸೇರಿದೆ. ನನ್ನ ಅದೃಷ್ಟವೋ ಏನೋ ನಾನು ಟೈಪ್‌ಗೆ ಬರುವ ಸಮಯಕ್ಕೆ ನನ್ನದೇ ಬ್ಯಾಚಿಗೆ ಹೊಸ ಹುಡುಗಿಯೊಬ್ಬಳು ಸೇರಿದಳು. ಅಬ್ಬಾ ಅವಳ ಸೌಂದರ್ಯ ವರ್ಣಿಸಲು ನನ್ನ ಬಳಿ ಪದಗಳೇ ಇಲ್ಲ ಎನ್ನಬಹುದೇನೋ. ದೇವಲೋಕದ ಅಪ್ಸರೇ ಭೂಲೋಕಕ್ಕೆ ಬಂದಿದ್ದಾಳೋ ಎನ್ನುವಂತಿತ್ತು ಆಕೆಯ ಸೌಂದರ್ಯ, ಕಮಲದಂತಹ ಕಣ್ಣು, ಸಂಪಿಗೆ ಯಂತಹ ಮೂಗು, ಆ ಮುಂಗುರುಳು, ಕೆನ್ನೆಯಲಿ ನಕ್ಕಾಗ ಬೀಳುವ ಆ ಗುಳಿ ನನ್ನನ್ನು ಮಂತ್ರ ಮುಗ್ಧನನಾಗಿಸಿದೆ. ಆಕೆಯ ಆ ಸೌಂದರ್ಯ ನನ್ನನ್ನು ಹುಚ್ಚನನ್ನಾಗಿಸಿತ್ತು ಎಂದರೆ ತಪ್ಪಾಗಲಾರದು. ಊರಲ್ಲಿ ಗೆಳೆಯರ ಬಳಿ ಪೆದ್ದ, ದಡ್ಡ ಇತ್ಯಾದಿ ಪದಗಳಿಂದ ಹೊಗಳಿಸಿಕೊಂಡರೂ ನನ್ನನ್ನು ಆ ಹುಡುಗಿ ನೋಡುತ್ತಾಳೆ ಎನ್ನುವ ಅಳಕು ನನ್ನನ್ನು ಕಾಡುತ್ತಿತ್ತು.
ಪ್ರತಿದಿನ ಕಾಲೇಜಿಗೆ ಹೋಗದಿದ್ದರೂ ಟೈಪಿಗೆ ಮಾತ್ರ ತಪ್ಪದೇ ಹೋಗುತ್ತಿದ್ದೆ. ಅದಕ್ಕೆ ಕಾರಣ ನನ್ನ ಆ ಸೌಂದರ್ಯ ದೇವತೆ, ಆಕೆಯ ಹೆಸರು ‘ಶೀಲಾ’ ನೋಡಲು ಶಿಲಾಬಾಲಿಕೆಯ ಪ್ರತಿರೂಪದಂತಿದ್ದಳು. ನನ್ನ ಪಕ್ಕದಲ್ಲಿ ಕೂರುವ ಆಕೆ ಆಗಾಗ ನನ್ನ ಕಡೆ ಕಳ್ಳ ನೋಟ ಬೀರಿ ನಗುವುದು ನನ್ನಲ್ಲಿ ಮಿಂಚಿನ ಸಂಚಾರ ತರುತಿತ್ತು. ಆಕೆ ನಕ್ಕಾಗ ನಾನಂತು ಅಕ್ಷರಶಃ ಹುಚ್ಚನೇ ಆಗಿ ಬಿಡುತ್ತಿದ್ದೆ.
ಒಂದು ದಿನ ಆಕೆ ನನ್ನ ಬಳಿ ಬಂದು – ‘ಮಂಜು, ಈ ಪ್ರಶ್ನಾರ್ಥಕ ಚಿಹ್ನೆ ಹೇಗೆ ಹೊಡೆಯುವುದು?’ ಅಂತ ನನ್ನನ್ನು ಪ್ರಶ್ನೆ ಮಾಡಿದಾಗ ನಾನಂತೂ ಸ್ವರ್ಗವೇ ನನ್ನ ಕೈಗೆ ಸಿಕ್ಕಿಬಿಟ್ಟಿತೇನೋ ಎನ್ನುವ ಖುಷಿಯಲ್ಲಿ ತೇಲಾಡಿದೆ. ಆಕೆಗೆ ‘ಪ್ರಶ್ನಾರ್ಥಕ ಚಿಹ್ನೆ’ ಹೊಡೆಯುವುದನ್ನು ತೋರಿಸಬೇಕೆಂದು ಹೊರಟಾಗಲೇ ವಕ್ಕರಿಸಬೇಕೇ ನಮ್ಮ ಟೈಪ್ ಟೀಚರ್. ಬಂದವನೇ ಶೀಲಾಳ ಬಳಿಬಂದು “ಏನ್ ಮೇಡಂ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ನಮ್ಮನ್ನು ಕೇಳಿ ನಾವು ಇರುವುದಾದರೂ ಯಾಕೆ ಹೇಳಿ. ಅದು ನಿಮ್ಮ ಅನುಮಾನವನ್ನು ಇವರ ಬಳಿ ಕೇಳಿದ್ದೀರಾ?” ಅಂತ ನನ್ನನ್ನು ಅಪಹಾಸ್ಯದಿಂದ ನೋಡಿ ನಕ್ಕಾಗಿ ನಾನಂತೂ ತೀರಾ ಕುಸಿದು ಹೋಗಿದ್ದೆ. ಆದರೆ ನನ್ನ ಇಡೀ ಜೀವನದಲ್ಲಿ ಇಂತಹ ಹತ್ತಾರು ಅನುಭವಗಳಾಗಿದ್ದರೂ ಆಗ ನನಗೇನೂ ಆಗಿರಲಿಲ್ಲ. ಈಗ ನನ್ನ ಹುಡುಗಿ ಎದುರು ನನ್ನ ಮರ್‍ಯದೆ ಕಳದಿದ್ದು ನನಗಂತೂ ತಡೆಯದಾದ ಕೋಪ ತರಿಸಿತ್ತು. ಆದರೂ ನಾನು ಏನು ಮಾಡ ಸ್ಥಿತಿಯಲ್ಲಿಲ್ಲದಿದ್ದಾಗ ಶೀಲಾಳೆ ನನ್ನನ್ನು ಸಂತೈಸಿದಳು. – “ಮಂಜು ನೀವು ಯಾಕೆ ಬೇಸರ ಮಾಡಿಕೊಳ್ತಿರಾ? ಅವರಿಗೇನು ಗೊತ್ತು ನಿಮ್ಮ ಬೆಲೆ?” ಅಂತ ಮೆಲ್ಲನುಸಿರಿಸಿದಾಗ ಮರುಳುಗಾಡಿನಲ್ಲೂ ನೀರು ಸಿಕ್ಕ ಅನುಭವ ನನ್ನದಾಗಿತ್ತು. ಈ ಪ್ರಕರಣವು ನಡೆದ ಬಳಿಕ ನಾನು ಶೀಲಾ ಮತ್ತಷ್ಟು ಹತ್ತಿರದವರಾದೆವು. ಕಡೂರಿನ ಗಿಡಮರ ಮನೆಮನೆಗಳು ನನ್ನ ಪ್ರೇಮ ಕರೆ ಹೇಳುವಷ್ಟರ ಮಟ್ಟಿಗೆ ನಾನಕೆಗೆ ಹತ್ತಿರದವನಾದೆ. ಮನೆಯಿಂದ ಬರುತ್ತಿದ್ದ ಹಣ ಆಕೆಗಾಗಿ ನಾನು ವ್ಯಯಿಸತೊಡಗಿದೆ. ನನ್ನ ಹೃದಯ ‘ಡಬ್ ಡಬ್’ ಅಂತ ಶಬ್ದ ಮಾಡುವ ಬದಲು ‘ಶೀಲಾ ಶೀಲಾ’ ಅಂತ ಶಬ್ದ ಮಾಡುವ ಸ್ಥಿತಿ ತಲುಪಿತು. ಶೀಲಾ ಸಿಕ್ಕ ನಂತರ ನನಗೆ ದಿನ ಕಳೆದಿದ್ದೆ ತಿಳಿಯಲಿಲ್ಲ. ದಿನಕ್ಕೆ ಇಪ್ಪತ್ನಾಲ್ಕು ತಾಸು ಇದ್ದರೆ ಅದು ಕಳೆಯುವುದು ತಿಳಿಯುತ್ತಿರಲಿಲ್ಲ.
ಟೈಪಿನ ಪರೀಕ್ಷೆಯು ಸಮೀಪಕ್ಕೆ ಬಂತು. ನಾನು ಆ ದಿವಸ ಖುಷಿಯಿಂದ ಟೈಪುಪರೀಕ್ಷೆಯ ಪ್ರವೇಶಪತ್ರ ತರುವ ಸಲುವಾಗಿ ಟೈಪ್ ಇನ್ಸ್ಟಿಟ್ಯೂಟ್ ಕಡೆ ಹೊರಟೆ. ಕೆಲವು ನಿಮಿಷದ ನಂತರ ಟೈಪ್ ಇನ್ಸ್ಟಿಟ್ಯೂಟ್ ತಲುಪಿದಾಗ ಅಲ್ಲಿ ಯಾರೂ ಕಾಣಲಿಲ್ಲ. ಪ್ರವೇಶ ಪತ್ರ ಪಡೆಯಲು ಪ್ರಿನ್ಸಿಪಾಲರು ರೂಮಿನ ಬಳಿ ಹೋದೆ. ಪ್ರಾಂಶುಪಾಲರ ಕೊಠಡಿಯ ಬಳಿ ನಿಂತಾಗ ಪ್ರಿನ್ಸಿಪಾಲರು ಬಳಿ ಹುಡುಗಿಯೊಬ್ಬಳ ಮಾತುಕತೆ ಕೇಳಿ ಹೊರಗೆ ನಿಂತು ಅವರಾಡುವ ಮಾತುಗಳನ್ನು ಕೇಳಿಸಿಕೊಳ್ಳಲಾರಂಭಿಸಿದೆ. ಆ ಧ್ವನಿ ನಾನು ಕೇಳಿದ ಧ್ವನಿಯಾಗಿತ್ತು.
“ಏನಮ್ಮ ನೀನು ಹೋಗಿ ಹೋಗಿ ಆ ಪೆದ್ದನ ಹಿಂದೆ ತಿರುಗುತ್ತಿರುವೆಯಲ್ಲಾ ಅವನಿಗೆಲ್ಲಿದೆ ಪ್ರಪಂಚದ ಜ್ಞಾನ. ನಾನು ನೀನೆಲ್ಲೊ ಅವನ ಜೊತೆಗೆ ಓಡಿ ಹೋಗುವೆಯೇ ಅಂತ ಅಂದುಕೊಂಡಿದ್ದೆ” ಅಂದಿತು ಗಂಡು ಧ್ವನಿ. ಅದಕ್ಕೆ ಹೆಣ್ಣು ದನಿ – “ಸಾರ್ ನಿಮ್ಮಂತಹ ರಸಿಕರನ್ನು ಬಿಟ್ಟು ಆ ಪೆದ್ದನ ಹಿಂದೆ ಓಡಿಹೋಗುವಷ್ಟು ಅರಸಿಕರಳಲ್ಲ ನಾನು. ನಾನು ಅವನನ್ನು ಇಷ್ಟು ದಿನ ಉಪಯೋಗಿಸಿಕೊಂಡಿದ್ದು ಕೇವಲ ನನ್ನ ಖರ್ಚು ನಿರ್ವಹಣೆ ಮತ್ತು ನನ್ನ ಸೆಕ್ಯುರಿಟಿಗಾಗಿ ಮದುವೆ ಏನಿದ್ದರೂ ನಿಮ್ಮಂತಹ ರಸಿಕರೊಂದಿಗೆ ಮಾತ್ರ”
ಆಕೆ ಇನ್ನೂ ಏನು ಹೇಳಿದಳೋ ಕೇಳುವ ತಾಳ್ಮೆ ನನಗುಳಿದಿರಲಿಲ್ಲ. ಆ ಹುಡುಗಿ ಬೇರಾರು ಆಗಿರಲಿಲ್ಲ ನನ್ನ ಪ್ರಾಣಕ್ಕೆ ಪ್ರಾಣವೆಂದು ನಾನೇ ತಿಳಿದಿದ್ದ ಶೀಲಾ. ಬೇರೆ ಯಾರು ನನ್ನನ್ನು ಪೆದ್ದ, ದಡ್ಡ, ಅಂತ ಕರೆದಿದ್ದರೆ ನನಗೇನೂ ಬೇಸರವಾಗುತ್ತಿರಲಿಲ್ಲ. ಆದರೆ ನನ್ನ ಹುಡುಗಿಯೇ ಹೀಗೆ ಹೇಳಿದ್ದು ನನ್ನ ಹೃದಯವನ್ನು ಘಾಸಿಗೊಳಿಸಿತ್ತು. ನನ್ನ ಹೃದಯ ದರಿಸಿ ಶೀಲಾಳೇ ನನ್ನನ್ನು ‘ಪೆದ್ದ’ ಎನ್ನುವ ಪದ ಪ್ರಯೋಗ ಮಾಡಿ ಮಾತಾಡಿದಾಗ ನನ್ನ ಬಗ್ಗೆ ನನಗೆ ವಿಷಾದ ಭಾವ ಮೂಡಿ ಮಯವಾಯಿತು.
*****