ಕುತೂಹಲ ಎಷ್ಟೊಂದು – ನಮಗೆ
ಕುತೂಹಲ ಎಷ್ಟೊಂದು ||ಪ||
ನಮ್ಮ ತಟ್ಟೆಯಲಿ ಹೆಗ್ಗಣವಿದ್ದರೂ
ಪರರ ತಟ್ಟೆಯಲಿ ನೊಣವನು ಕಾಣುವ . . . . ||ಅ.ಪ.||
ಅನ್ಯರ ಮನೆಯ ದೋಸೆ ತೂತು . . . .
ನಮ್ಮಯ ಮನೆಯ ಹೆಂಚೇ ತೂತು . . . .
ಆದರೂ ಮಾತು; ಇಲ್ಲ ವಿರಾಮ
ಯಾವುದು ಇದಕೆ ಅಂತಿಮ ಸರಿಗಮ!
ತೋರು ಬೆರಳಿಹುದು ನಿಮ್ಮತ್ತ . . . .
ಉಳಿದ ಬೆರಳುಗಳು ನನ್ನತ್ತ . . . .
ಆದರೂ ಯಾಕೊ ಕದನ ಕುತೂಹಲ
ತಿಥಿಯೂಟಕೆ ಹಾತೊರೆಯುವ ಹಂಬಲ!
ನೆರೆಯ ಮನೆಯಲಿ ರಾಮಾಯಣವು . . . .
ನಮ್ಮ ಮನೆಯಲಿ ಮಹಾಭಾರತ . . . .
ಆದರೂ ದೃಷ್ಟಿ ಚಾಚುವುದೇಕೆ?
ಗೋಡೆಯನೆ ಕಿವಿ ಮಾಡುವುದೇಕೆ?
*****