ದೇವರು, ಧರ್ಮವೆಂದರೆ ಸಾಕು
ಶಾಕಿನಿ, ಢಾಕಿನಿ ಪಿಶಾಚಿಗಳಾಗುವರು
ಮನುಷ್ಯರನ್ನು ಹೆಣ್ಣು, ಗಂಡನ್ನದೆ, ಶಿಶುಗಳನ್ನೂ ಬಿಡದೆ
ಜೀವದಲ್ಲಿದ್ದಂತೆಯೇ
ಹಸಿ ಹಸಿ ಮಾಂಸ, ಖಂಡಗಳನ್ನು ಹರಿಹರಿದು ಜಗಿಯುತ್ತ
ಬಿಸಿ, ಬಿಸಿ ರಕ್ತವನ್ನು ಗಟ ಗಟ ಕುಡಿಯುತ್ತ
ಮೂಳೆಗಳನ್ನು ಕಟ ಕಟ ಕಡಿಯುತ್ತ
ಭಯಂಕರ ಉನ್ಮಾದದ ನಗೆ ನಗುತ್ತ
ಹೃದಯ ವಿಜ್ರಾವಕವಾಗಿ ಕಿರಿಚುತ್ತ
ಪ್ರಳಯದ ಕುಣಿತದಲ್ಲಿ ತೊಡಗುವರು.
ನಾನಾ ಕಾರಣಗಳಿಗಾಗಿ
ಇವರ ಸುಲಭ ತುತ್ತಾಗುವರು
ಪ್ರೀತಿ ಪಾತ್ರರಾಗುವವರೆಂದರೆ ಹೆಂಗಸರು, ಮಕ್ಕಳು.
ಮಕ್ಕಳ ಒಂದೊಂದೇ ಎಳೆಯ ಭಾಗವನ್ನು
ಕತ್ತರಿಸಿ, ಕತ್ತರಿಸಿ,
ವಿಕೃತ ಭಕ್ತಿಯಲ್ಲಿ,
ಬಹು ಅಕ್ಕರೆಯಿಂದ,
ನಿಧಾನವಾಗಿ, ವಿಧಿಪೂರ್ವಕವಾಗಿ ನೈವೇದ್ಯ ಮಾಡುವರು
ಪ್ರಸಾದವೆಂದು ಕಣ್ಣಿಗೊತ್ತಿಕೊಂಡು
ಚಿಗುರೆಲೆಯಂತೆ ಮೆಲ್ಲುವರು
ಕೆಟ್ಟ ಪ್ರೀತಿ ಹೊಂದುವರು.
ಹೆಂಗಸನ್ನು, ಅದರಲ್ಲೂ ಗಂಡ ಸತ್ತವಳನ್ನು
ಅವಳದೆಲ್ಲವನ್ನೂ ಕಾಲಕಸ ಮಾಡಿ
ಕೊರಡುಮಾಡಿ,
ಸ್ವರ್ಗಾರೋಹಣ ಮಾಡಿಸುವೆನೆಂದು
ಸತ್ತವನ ಜೊತೆಗೆ ಸಿದಿಗೆ ಬದಿಗೆಗೆ ಕಟ್ಟಿ
ಸಕಲ ಭಾಜಾ ಭಜಂತ್ರಿಯಲ್ಲಿ
ಅಮಾನುಷ ಮಂತ್ರ, ಘೋಷಣೆಗಳ ಒದರುತ್ತ
ದುರ್ವ್ಯಕ್ತಿಗಳು ಮೆರವಣಿಗೆಯಲ್ಲಿ ಹೊತ್ತು ತಂದು
ವಾಸನೆ ಬರದಿರಲೆಂದು
ಸುವಾಸನಾ ಕಟ್ಟಿಗೆಗಳಿಂದ ನಿರ್ಮಿಸಿದ ಚಿತೆಯ ಮೇಲಿಟ್ಟು
ಕೆಂಪು ಕಣಿಗಲೆ ಹೂವುಗಳಲ್ಲಿ ಅರ್ಚಿಸಿ,
ಸತ್ತವರ ಅಪೂರ್ವ ಮೌನ ಗೋಷ್ಠಿಯಲ್ಲಿ
ಯಮ ಕಿಂಕರರ ಕಾವಲಿನಲ್ಲಿ
ಪೆಟ್ರೋಲ್ ಸುರಿದು ಧಗ್ಗನೆ ಉರಿ ಹೊತ್ತಿಸಿ
ಚಿಟಿಲ್, ಚಿಟಿಲ್ ಅಂತ ಉರಿ ಧಗ, ಧಗ ಉರಿಯುತ್ತಿದ್ದರೆ
ಇವರಿಗೆ ಎಲ್ಲಿಲ್ಲದ ಹುರುಪು
ಆ ಪಾಪದ ಹೆಣ್ಣು ಮಗಳು ಉರಿ, ಸಂಕಟ ತಾಳಲಾರದೆ
ಕಿರಿಚಾಡುವುದನ್ನು, ಒದರಾಡುವುದನ್ನು
ಸುಮ್ಮನೆ ಕಣ್ಣು ಬಿಟ್ಟು ಕೊಂಡು ನೋಡುತ್ತ
ಜೈ, ಜೈ ಕಾರ ಹಾಕುತ್ತಿರುತ್ತಾರೆ.
ಅವಳು ಪೂರ್ಣವಾಗಿ ಸುಟ್ಟು ಬೂದಿಯಾಗಿ
ಅದು ತಣ್ಣಗಾಗಿ ಆರುವವರೆವಿಗೆ
ಆ ಕಾಲಿನ ಭಾರ ಈ ಕಾಲಿಗೆ ವರ್ಗಾಯಿಸದಂತೆ
ಕಾದಿರುತ್ತಾರೆ.
ನಂತರ, ಪ್ರೇತ ಗೀತೆ ಹಾಡುತ್ತ, ಹೆಜ್ಜೆ ಹಾಕುತ್ತ
ಪ್ರದಕ್ಷಿಣೆ ಬಂದು
ಅಮಾನವೀಯ ಧನ್ಯತೆಯ ಕುರುಹಾಗಿ
ಆ ಚಿತಾ ಭಸ್ಮವನ್ನು ಮಸ್ತಕಗಳಲ್ಲಿ ಧರಿಸುವವರು ಯಾರೋ!
ಉಡಿಗಳಲ್ಲಿ ತುಂಬಿ ಕೊಳ್ಳುವವರು ಯಾರೋ!
ಭವಿಷ್ಯ ವಿರದವರ ಕೆಟ್ಟ ಸಡಗರವ
ನೋಡ ಬಾರದು!!
ಈ ಮನುಷ್ಯರು ಒಳ್ಳೆಯದಕ್ಕೆಂದರೆ ತಲೆ ಹೊಯ್ದರೂ
ಮುಂದೆ ಬರುವುದಿಲ್ಲ.
ಇಂತಹುದಕ್ಕಾದರೆ ನೀನ ಕರಿ ಬೇಡ ಹಿಂಡು, ಹಿಂಡು ಬರುತ್ತಾರಲ್ಲಾ
ಏನಿದು!
ಥೂ!! ಇಂತಾ ಜನ್ಮ ಏಳೇಳು ಜನ್ಮಕ್ಕೂ… ಕೊಟ್ಟರೂ…
ನನಗೆ ಬೇಡ
*****