ಪಚ್ಚಡ ಪೊಣ್ಣು

ಪಚ್ಚಡ ಪೊಣ್ಣು

ಚಿತ್ರ: ಆಂಟೊನಿ ಟೌಬಿನ್
ಚಿತ್ರ: ಆಂಟೊನಿ ಟೌಬಿನ್

ದಕ್ಷಿಣ ಕೊಡಗಿನ ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿ ಜನಿಸುವ ಲಕ್ಷ್ಮಣತೀರ್ಥ ಒಂದು ಮೋಹಕವಾದ ನದಿ. ಅದರ ಬಲ ತಟದಲ್ಲೊಂದು ಪುಟ್ಟ ಗುಡಿಸಲಿತ್ತು. ಅದರಲ್ಲಿ ಅಪ್ಪ ಮಗಳು ವಾಸಿಸುತ್ತಿದ್ದರು. ರಾಮಪಣಿಕ್ಕರ್‌ ಮತ್ತು ಇಚ್ಚಿರೆ ಮೋಳು. ಅದು ಬಿಟ್ಟರೆ ಒಂದು ನಾಯಿ ಮಾತ್ರ.

ರಾಮಪಣಿಕ್ಕರ್‌ ಭೂತ ಕಟ್ಟಿ ಜೀವಿಸುತ್ತಿದ್ದ. ಮಗಳು ಭೂತದ ಸಂಧಿ ಹೇಳುತ್ತಾ ತೆಂಬರೆ ಬಡಿಯುತ್ತಿದ್ದಳು. ಗಂಡಸರಿಗೆ ಭೂತವನ್ನು ನೋಡುವುದಕ್ಕಿಂತ ಮಗಳನ್ನು ನೋಡುವುದು ಹೆಚ್ಚು ಇಷ್ಟದ ವಿಷಯವಾಗಿತ್ತು. ತೆಂಬರೆಯ ನಾದದೊಡನೆ ಮಲೆಯಾಳ ಮಣಿಪ್ರವಾಳ ಭಾಷೆಯ ಭೂತದ ಸಂಧಿಗಳು ಅವಳ ದಾಳಿಂಬೆ ಹಲ್ಲುಗಳನ್ನು ದಾಟಿ ಗುಲಾಬಿ ತುಟಿಗಳಿಂದ ಹೊರ ಬರುವಾಗ ಮಾಧುರ್ಯದೊಡನೊಂದು ಸ್ವರ್ಗೀಯ ದಿವ್ಯತೆಯ ಅನುಭೂತಿ ಸೃಷ್ಟಿಯಾಗುತ್ತಿತ್ತು. ಕಂದು ಶರೀರ, ಕರಿನಾಗರ ನೀಳಜಡೆ, ತುಂಬಿದ ಸ್ತನ, ಘನ ಜಘನ, ಹರಿಣ ನೇತ್ರದ ಗಜಗಮನೆ ಇಚ್ಚಿರೆ ಮೋಳ ಕೋಕಿಲ ವಾಣಿ ಎಂಥವರನ್ನೂ ಸೆಳೆದು ನಿಲ್ಲಿಸುವ ಶಕ್ತಿಯನ್ನು ಹೊಂದಿತ್ತು.

ರಾಮಪಣಿಕ್ಕರ್‌ ಒಂದಷ್ಟು ಭೂಮಿಗೆ ಬೇಲಿ ಹಾಕಿಕೊಂಡು ತನ್ನದನ್ನಾಗಿ ಮಾಡಿ ಕೊಂಡಿದ್ದ. ಎರಡು ಹಸುಗಳನ್ನು ಸಾಕಿದ್ದ. ಒಂದು ಬಾರಿ ಮಗಳೊಡನೆ ಬೈತಕೋಲಪ್ಪನ ನೇಮಕ್ಕೆ ಹೋಗಿ ಬರುವಾಗ ಆ ಹಸುಗಳು ಕಾಣೆಯಾಗಿದ್ದವು. ಜಾಡು ಹಿಡಿದು ಹೋದವನಿಗೆ ಹುಲಿಗಳು ಬಿಟ್ಟು ಹೋದ ಅವಶೇಷಗಳು ಕಾಣಸಿಕ್ಕವು. ಹಸು ಸಾಕುವುದು ತನ್ನ ಪ್ರಾಣಕ್ಕೇ ಗಂಡಾಂತರವೆಂದು ಆ ಸಾಹಸವನ್ನು ನಿಲ್ಲಿಸಿಬಿಟ್ಟ.

ಯಾರಿಂದಲೋ ಎತ್ತುಗಳನ್ನು ಎರವಲು ತಂದು ಭೂಮಿ ಉತ್ತು ಬಿತ್ತಿದ ಭತ್ತ, ಹಕ್ಕಿಗಳು ಮತ್ತು ಕಾಡಕೋಳಿಗಳ ಹೊಟ್ಟೆ ಸೇರಿತು. ಬೆಳೆದ ತರಕಾರಿ ಮತ್ತು ಬಾಳೆ ಮಂಗಗಳ ಪಾಲಾಯಿತು. ಭೂತ ಕಟ್ಟುವುದೊಂದರಿಂದ ಹೊಟ್ಟೆ ತುಂಬಿಸುವುದು ಅನಿವಾರ್ಯವಾಯಿತು.

ಅವನಿಂದ ಭೂತಸೇವೆ ಮಾಡಿಸಿಕೊಳ್ಳುವ ಕೊಡಗರಲ್ಲಿ ಕೆಲವರು ಅವನಿಗೆ ಹೇಳುತ್ತಿದ್ದರು. ನೀನು ಭೂತ ಒಂದರಿಂದಲೇ ಬದುಕು ಸಾಗಿಸಬಹುದೆಂದು ಭಾವಿಸಿದ್ದಿ. ಹುಚ್ಚು ನಿನಗೆ. ಮಗಳನ್ನೂ ಕರಕೊಂಡು ಬಾ. ನಮ್ಮ ಗದ್ದೆಗಳಲ್ಲಿ ಕೆಲಸ ಇದ್ದೇ ಇರುತ್ತದೆ. ಹೊಟ್ಟೆ ತುಂಬಿದ ಮೇಲೂ ಒಂದಷ್ಟು ಉಳಿಯುತ್ತದೆ.
ರಾಮಪಣಿಕ್ಕರ್‌ ಭೂತ ಇಲ್ಲದ ದಿನಗಳಲ್ಲಿ ಗದ್ದೆ ಕೆಲಸಕ್ಕೆ ಹೋಗುತ್ತಿದ್ದ. ಮಗಳನ್ನು ಎಂದೂ ಕೆಲಸಕ್ಕೆ ಕರಕೊಂಡು ಹೋದವನಲ್ಲ. ದೊಡ್ಡವರ ಗದ್ದೆಗಳಲ್ಲಿ, ತೋಟಗಳಲ್ಲಿ, ಮನೆಗಳಲ್ಲಿ ಕೆಲಸ ಮಾಡುವ ಹೆಣ್ಣಾಳುಗಳ ಅನೇಕ ಕತೆಗಳನ್ನು ಅವನು ಕೇಳಿದ್ದ. ಕೆಲವನ್ನು ಕಣ್ಣಾರೆ ಕಂಡಿದ್ದ. ದೊಡ್ಡವರು ಏನು ಮಾಡಿದರೂ ನಡೆಯುತ್ತದೆ.

ಆಮೇಲೆ ಅವನು ಪದೇಪದೆ ಮಗಳಿಗೆ ಒಂದು ಮಾತು ಹೇಳುತ್ತಿದ್ದ.
ದೊಡ್ಡವರಿಂದ ಯಾವಾಗಲೂ ದೂರವಿರು
ಮರ್ಯಾದೆ ಕಳಕೊಳ್ಳುವುದು ಸುಲಭ ಮಗಳೇ,
ಮರ್ಯಾದೆ ಉಳಿಸಿಕೊಳ್ಳುವುದು ಬಹಳ ಕಷ್ಟ.
ನೀನು ಹುಡುಕಬೇಕಾದದ್ದು ಮರ್ಯಾದೆ ಉಳಿಸುವವರನ್ನು.

ಮೊದಮೊದಲು ಅಪ್ಪ ಏನನ್ನು ಹೇಳುತ್ತಿದ್ದಾನೆಂದು ಅವಳಿಗೆ ಅರ್ಥವಾಗುತ್ತಿರಲಿಲ್ಲ. ಅಪ್ಪನ ಭೂತಕ್ಕೆ ತಾನು ತೆಂಬರೆ ಬಡಿಯುವಾಗ ಸುತ್ತಮುತ್ತಲಿನ ಗಂಡಸರು ತನ್ನನ್ನು ನೋಡುತ್ತಿದ್ದ ರೀತಿ, ಅವರ ಕಣ್ಣಿನ ಭಾಷೆ, ಕೆಲವೊಮ್ಮೆ ಕೈಸನ್ನೆ ಅರ್ಥವಾಗತೊಡಗಿದ ಮೇಲೆ ಅಪ್ಪನ ಎಚ್ಚರಿಕೆಯ ಹಿಂದಿದ್ದ ಧ್ವನಿಯ ಅರಿವಾಯಿತು. ಗಂಡಸರ ನಡುವೆ ತಾನು ಹೇಗಿರಬೇಕೆಂಬುದನ್ನು ಮೊದಲೇ ನಿಶ್ಚಯಿಸಿಕೊಳ್ಳಲು ಸಾಧ್ಯವಾಯಿತು. ಆಸ್ತಿಕ ಭಕ್ತಾಭಿಮಾನಿಗಳು ಭೂತವನ್ನು ಒಲಿಸಿಕೊಂಡರು. ಮಗಳನ್ನು ಒಲಿಸಿಕೊಳ್ಳಲು ಅವರಿಂದ ಆಗಲಿಲ್ಲ. ಭೂತದ ಸೇವೆ ಮಾಡಿಸುವ ದೊಡ್ಡ ಮನುಷ್ಯರು, ಅಲ್ಲಿ ಸೇರುವ ಭಕ್ತಾದಿಗಳು ಅನ್ನತೊಡಗಿದರು.

ಇಚ್ಚಿರೆ ಮೋಳು ಅನಾಘ್ರಾತ ಸುಂದರ ಪುಷ್ಪ. ಅವಳು ಯಾರಿಗೂ ಒಲಿಯುವವಳಲ್ಲ.

ಏರು ಯವ್ವನದ ಅವಳು ಕನಸು ಕಾಣುತ್ತಿದ್ದಳು. ತಾನು ದೂರದ ಮಡಿಕೇರಿಯಲ್ಲಿರುವ ಕೊಡಗ ಅರಸನ ಒಬ್ಬ ಬಲಿಷ್ಠ ಕಾರ್ಯಕಾರನನ್ನು ಮದುವೆಯಾದಂತೆ. ಅವನ ಹಿಂದೆ ಕುದುರೆಯಲ್ಲಿ ಕೂತು ಎರಡೂ ಕೈಗಳಿಂದ ಅವನನ್ನು ತಬ್ಬಿ ಹಿಡಕೊಂಡು ಸುತ್ತಲಿನ ರುದ್ರ ರಮಣೀಯ ದೃಶ್ಯಗಳನ್ನು ನೋಡುತ್ತಾ ಮಡಿಕೇರಿಯಿಂದ ಅವಳ ಮನೆಗೆ ಬರುವಂತೆ. ಮನೆದೇವರು ಪನ್ನಂಗಾಲತಮ್ಮೆ ಹೆಮ್ಮೆ ಪಡುವ ಸಂತಾನವೊಂದರ ತಾಯಿಯಾದಂತೆ.

ಅವಳಿಗೆ ಭಾವನೆಗಳನ್ನು ಹಂಚಿಕೊಳ್ಳಲು ಒಂದು ಹೃದಯ ಸಿಕ್ಕಿರಲಿಲ್ಲ. ಕಾಡಿನ ಬುಡವೆಂಬ ಅಂಜಿಕೆಯಿಂದ ಅಕ್ಕಪಕ್ಕದಲ್ಲಿ ಮನೆಕಟ್ಟಿಕೊಂಡು ವಾಸಿಸುವವರು ಯಾರೂ ಇರಲಿಲ್ಲ. ಹೆತ್ತ ತಾಯಿ ಕೆಲವು ವರ್ಷಗಳ ಹಿಂದೆ ಭಯಾನಕ ಚಳಿಜ್ವರದ ಏಟಿಗೆ ಸತ್ತು ಹೋಗಿದ್ದಳು. ಇಚ್ಚಿರೆ ಮೋಳಿಗೆ ಅಣ್ಣನಿಲ್ಲ, ತಮ್ಮನಿಲ್ಲ, ಅಕ್ಕನಿಲ್ಲ, ತಂಗಿಯಿಲ್ಲ. ಮಲೆಯಾಳ ದೇಶದಲ್ಲಿ ಇರುವ ಬಂಧುಗಳು ಅಷ್ಟು ದೂರದಲ್ಲಿರುವ ಅವಳ ಮನೆಗೆ ಬರುವುದಿಲ್ಲ. ಇರುವುದೆಂದರೆ ಒಂದು ನಾಯಿ ಮಾತ್ರ. ಅದನ್ನು ರಾತ್ರಿ ಕಿರುಬಗಳಿಂದ ರಕ್ಷಿಸಿಕೊಳ್ಳುವುದು ಸುಲಭದ ಮಾತಾಗಿರಲಿಲ್ಲ. ಅದನ್ನು ಕಾಲ ಬುಡದಲ್ಲೇ ಮಲಗಿಸಿ ಕೊಳ್ಳಬೇಕಿತ್ತು. ಮನೆಯೊಳಗಿದ್ದಾಗ ಅದರೊಡನೆ, ಹೊರಗೆ ಬಂದಾಗ ನದಿ ಲಕ್ಷ್ಮಣ ತೀರ್ಥದೊಡನೆ ಅವಳು ಮಾತಾಡುತ್ತಿದ್ದಳು.

ಬೇಸಿಗೆಯಲ್ಲಿ ಜುಳುಜುಳು ನಿನಾದದೊಡನೆ ಹರಿಯುವ ಲಕ್ಷ್ಮಣ ತೀರ್ಥದಲ್ಲಿ ಮುಳುಗೇಳುವುದೆಂದರೆ ಅವಳಿಗೆ ತುಂಬಾ ಇಷ್ಟ. ಅವಳ ನಾಯಿಯೂ ಅವಳೊಡನೆ ಆಗ ಜತೆಯಾಗುತ್ತಿತ್ತು. ಮಧ್ಯದ ಬಂಡೆಕಲ್ಲಲ್ಲಿ ಕೂತು ಅವಳು ನದಿಯನ್ನೂ, ಸುತ್ತಲಿನ ಕಾಡು, ಬೆಟ್ಟ ಗುಡ್ಡಗಳನ್ನೂ ನೋಡುತ್ತಿದ್ದಳು. ಅಪ್ಪ ಬೇಸಿಗೆಯಲ್ಲಿ ನೀರಿಗಿಳಿದು ಉಟ್ಟ ಪಂಚೆ ಬಿಚ್ಚಿ ಅದನ್ನೇ ಬಲೆಯಾಗಿಸಿ ಮೀನು ಹಿಡಿಯುತ್ತಿದ್ದ. ಮಳೆಗಾಲದಲ್ಲಿ ನದಿ ಅಲೌಕಿಕ ಶಕ್ತಿಯನ್ನು ಆವಿರ್ಭವಿಸಿಕೊಂಡು ಸಿಕ್ಕಿದ್ದೆಲ್ಲವನ್ನೂ ಕೊಚ್ಚಿಕೊಂಡು ಭೋರ್ಗರೆಯುತ್ತದೆ. ಒಮ್ಮೊಮ್ಮೆ ಅಂಗಳದವರೆಗೂ ಉಕ್ಕೇರುತ್ತದೆ. ಆಗ ಅಪ್ಪ ಬಾಳುಕತ್ತಿಯಿಂದ ಮೀನುಗಳ ತಲೆಗೆ ಬಡಿದು ಪಾತ್ರೆಯಲ್ಲಿ ತುಂಬಿಸಿಕೊಳ್ಳುತ್ತಿದ್ದ. ನೀರಿಳಿದ ದಿನಗಳಲ್ಲಿ ಬಿಡುವಾದಾಗ ನದಿ ದಡದಲ್ಲಿ ಕುಕ್ಕುರುಗಾಲಲ್ಲಿ ಕೂತು ಮೀನು ಹಿಡಿಯುತ್ತಿದ್ದ.

ಚಳಿಗಾಲದಲ್ಲಿ ನದಿಯಲ್ಲಿ ಕಾಲಿಟ್ಟರೆ ಸಾಕು ಪಾದದಿಂದ ನೆತ್ತಿಯವರೆಗೆ ಚಳುಕೊಂದು ಹಾದು ಹೋಗಿ ಸ್ವಲ್ಪ ಹೊತ್ತಿನಲ್ಲಿ ಗಡಗಡ ನಡುಗಿಸುತ್ತದೆ. ಆದರೆ ಬಿರು ಬೇಸಿಗೆಯಲ್ಲಿ ಅದು ಪ್ರೇಮಕಾವ್ಯ ಹಾಡುವ ಸಂಗಾತಿಯಾಗುತ್ತದೆ. ಗಂಡಿನ ಸ್ಪರ್ಶ ಸುಖದರಿವಿಲ್ಲದ ಸುಕೋಮಲ ತನುವಿನಲ್ಲಿ ಪ್ರೇಮ ತರಂಗಗಳನ್ನು ಮೂಡಿಸುತ್ತದೆ.

ಮೂರು ಕಂಬಳಿ ಹೊದ್ದು ಮಲಗಿದರೂ ಓಡಿ ಹೋಗದ ಚಳಿಗಾಲದ ಜಡದಿನಗಳಲ್ಲಿ ಅವಳ ದೇಹ ಮರಕಟ್ಟಿದಂತಾಗುತ್ತಿತ್ತು. ಅಂತಹ ದಿನಗಳಲ್ಲಿ ದೇಹವನ್ನು ಲಟಲಟ ಮುರಿದು ಹೊಸ ಜೀವ ತುಂಬಬಲ್ಲ ಬಲಿಷ್ಠ ಬಾಹುಗಳಿಗಾಗಿ ಅವಳು ಹಂಬಲಿಸುತ್ತಿದ್ದಳು.

ಅಂದು ಅವಳು ವಿಪರೀತ ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಪುಷ್ಪವತಿಯಾಗಿ ಏಳೆಂಟು ದಿನ ನಿಲ್ಲದ ಯಾತನೆಯನ್ನು ಅಮ್ಮನಿರುತ್ತಿದ್ದರೆ ಹೇಳಿಕೊಳ್ಳಬಹುದಿತ್ತು. ಅಪ್ಪ ಯಾರದೋ ಗದ್ದೆಯ ಕೆಲಸಕ್ಕೆ ಹೋಗಿದ್ದಾನೆ. ಮನೆಯಲ್ಲಿದ್ದರೂ ಅವನಲ್ಲಿ ಇದನ್ನು ಹೇಳಿಕೊಳ್ಳುವಂತಿಲ್ಲ. ಏನು ಮಾಡಿದರೂ ಸಮಯ ಬೇಗನೆ ಸರಿಯುತ್ತಿಲ್ಲ. ನಾಯಿಯೊಡನೆ ಎಷ್ಟು ಹೊತ್ತು ಮಾತಾಡುವುದು? ಅವು ಮಳೆಗಾಲದ ಕೊನೆಯ ದಿನಗಳು. ಬೇಸಿಗೆ ಕಾಲವಾಗಿದ್ದರೆ ನದಿಯೊಡನೆ ಮಾತಾಡಬಹುದಿತ್ತು. ಒಂಟಿತನದ ದುಗುಡ ನಿವಾರಣೆಗೆ ದಾರಿ ಕಾಣದೆ ಅವಳು ಸಿಡಿಯುತ್ತಿರುವ ತಲೆಯನ್ನು ಎರಡೂ ಕೈಗಳಿಂದ ಹಿಡಿದುಕೊಂಡು ಎದ್ದು ನಿಂತಳು.

ಆಗ ಕೇಳಿಸಿತು ನಿಶ್ಚಲ ನೀರವತೆಯಲ್ಲಿ ಭಯಾನಕ ಗುಂಡಿನ ಮೊರೆತ.
ಅದರೊಂದಿಗೆ ರಕ್ತ ಹೆಪ್ಪುಗಟ್ಟಿಸುವ ಭೀಕರ ಆರ್ತನಾದ.
ಅಯ್ಯೋ ದೇವರೇ, ಇಗ್ಗುತ್ತಪ್ಪಾ.

ಅಪರಿಚಿತ ಸ್ವರಕ್ಕೆ ಇಚ್ಚಿರೆ ಮೋಳ ನಾಯಿ ಬೊಗಳತೊಡಗಿತು. ಅವಳು ಉದ್ದನೆಯ ಬಾಳುಗತ್ತಿ ಹಿಡಿದುಕೊಂಡು ಆರ್ತನಾದ ಕೇಳಿದತ್ತ ಓಡಿದಳು.
ಹೆಗಲಲ್ಲಿ ಕೋವಿ ತೂಗು ಹಾಕಿಕೊಂಡ ಸದೃಢ ಯುವಕನೊಬ್ಬ ಬಲತೋಳನ್ನು ಹಿಡಿದುಕೊಂಡು ಬರುತ್ತಿದ್ದ. ಬಲ ತೋಳಿನಿಂದ ಧಾರಾಕಾರವಾಗಿ ರಕ್ತ ಸುರಿಯುತ್ತಿತ್ತು. ಅವನ ಉಡುಪು ರಕ್ತದಿಂದ ತೊಯ್ದು ಹೋಗಿತ್ತು. ಅವನು ಹಲ್ಲು ಕಚ್ಚಿ ನೋವನ್ನು ಸಹಿಸಲು ಇನ್ನಿಲ್ಲದಂತೆ ಯತ್ನಿಸುತ್ತಿದ್ದ.

ಅವನನ್ನು ನೋಡಿ ಬೊಗಳಿಕೆಯನ್ನು ಹೆಚ್ಚಿಸಿದ ನಾಯಿಯನ್ನು ಗದರಿಸಿ ಸುಮ್ಮನಾಗಿಸಿದಳು. ಅವನನ್ನು ಬಳಸಿ ಹಿಡಿದುಕೊಂಡು ಗುಡಿಸಲಿಗೆ ಕರೆತಂದಳು. ಹೊರಸೂಸುತ್ತಿದ್ದ ರಕ್ತದ ಪ್ರವಾಹ ನಿಲ್ಲಲು ಗಾಯದಿಂದ ಮೇಲ್ಬದಿಯನ್ನು ಬಟ್ಟೆಯಿಂದ ಗಟ್ಟಿಯಾಗಿ ಕಟ್ಟಿದಳು. ಹಸಿರು ಸೊಪ್ಪು ತಂದು ಬಲವಾಗಿ ಹಿಂಡಿ ಗಾಯಕ್ಕೆ ರಸ ಸವರಿದಳು. ಆ ಸೊಪ್ಪುಗಳನ್ನು ಗಾಯದ ಮೇಲಿರಿಸಿ ಹಳೆಯ ಬಟ್ಟೆಯಿಂದ ಕಟ್ಟಿ ಮೇಲ್ಬದಿಯ ಕಟ್ಟವನ್ನು ಬಿಚ್ಚಿದಳು. ಸ್ವಲ್ಪ ಹೊತ್ತಲ್ಲಿ ರಕ್ತದ ಪ್ರವಾಹ ನಿಂತಿತು.

ಅವನು ಅವಳ ಚಟುವಟಿಕೆಗಳನ್ನು ಮೌನದಿಂದ ಗಮನಿಸುತ್ತಿದ್ದ. ಇಂತಹ ಕಾಡು ಪ್ರದೇಶದಲ್ಲಿ ಒಂದು ಮನೆಯಿರಬಹುದೆಂಬ ಕಲ್ಪನೆಯೇ ಅವನಿಗಿರಲಿಲ್ಲ. ಅದಕ್ಕಿಂತಲೂ ಅವನಿಗೆ ಆಶ್ಚರ್ಯವಾದದ್ದು ಅಲ್ಲಿ ಅಂತಹ ಚೆಂದುಳ್ಳಿ ಚೆಲುವೆಯೊಬ್ಬಳನ್ನು ಕಂಡಾಗ. ಆ ಬಳಿಕ ಅವನಿಗೆ ಕೈಯ್ಯ ನೋವು ಮರೆತು ಹೋಗಿತ್ತು. ಚಿಗರಿ ಕಂಗಳ ಚೆಲುವೆ ತನ್ನ ತೋಳಿನ ಗಾಯಕ್ಕೆ ಮದ್ದು ಹಾಕಿ ರಕ್ತಪ್ರವಾಹವನ್ನು ನಿಲ್ಲಿಸಿದ್ದನ್ನು ಅವನು ವಿಸ್ಮಿತನಾಗಿ ನೋಡುತ್ತಿದ್ದ. ಅವಳು ಕೆಲಸ ಮುಗಿಸಿ ಹೆದರಬೇಡಿ. ಇನ್ನೇನೂ ಭಯವಿಲ್ಲ. ನೀರು ಬೇಕಿದ್ದರೆ ಕೊಡುತ್ತೇನೆ. ಆಗಬಹುದು ಎಂದಾದರೆ ನನ್ನ ಊಟದಲ್ಲಿ ಒಂದು ಭಾಗ ನಿಮಗೂ ಸಿಗುತ್ತದೆ ಎಂದಳು.

ಅವಳ ಸ್ವರದಲ್ಲಿ ಕೋಕಿಲೆಯ ಉಲಿತದ ಲಾಲಿತ್ಯವನ್ನು ಗಮನಿಸಿ ಅವನ ವಿಸ್ಮಯ ಹೆಚ್ಚಾಯಿತು. ಕೃತಜ್ಞತೆಯಿಂದ ಅವಳನ್ನು ನೋಡಿ ಹೇಳಿದ.
ಏನೂ ಬೇಡಿ. ನಾನು ಜಮಾದಾರ ಮಾಚಯ್ಯ. ಮಡಿಕೇರಿಯಲ್ಲಿ ಲಿಂಗರಾಜರ ದಂಡಿನಲ್ಲಿ ಸಿಪಾಯಿ ಆಗಿದ್ದೇನೆ. ಬಿಡುವಿನಲ್ಲಿ ಮನೆಗೆ ಬಂದಿದ್ದವನಿಗೆ ಇಂದು ಬೇಟೆಯಾಡುವ ಮನಸ್ಸಾಯಿತು. ಪೊದೆಯ ಮರೆಯಲ್ಲಿ ಮೃಗಗಳ ಬರವಿಗಾಗಿ ಅಡಗಿ ಕೂತಿದ್ದೆ. ಅಲ್ಲಾಡುವ ಪೊದೆಯನ್ನು ದೂರದಿಂದ ಕಂಡು ಯಾರೋ ಬೇಟೆಗಾರರು ನನ್ನನ್ನು ಮೃಗವೆಂದುಕೊಂಡು ಕೋವಿ ಉಡಾಯಿಸಿಬಿಟ್ಟರು. ಸ್ವಾಮಿ ಇಗ್ಗುತ್ತಪ್ಪನ ದಯೆ. ಗುಂಡಿಗೆಗೆ ನುಗ್ಗಬೇಕಾದ ಗುಂಡು ಬಲತೋಳನ್ನು ಸವರಿಕೊಂಡು ಹೋಯಿತು. ಎದೆಗೋ ತಲೆಗೋ ತಗಲುತ್ತಿದ್ದರೆ ನೀವು ಒಂದು ಹೆಣವನ್ನು ಎಳಕೊಂಡು ಬಂದು ಲಕ್ಷ್ಮಣ ತೀರ್ಥಕ್ಕೆ ಹಾಕಬೇಕಿತ್ತು. ಗುಂಡು ಎದೆಗೆ ತಾಗದಿದ್ದರೂ ಈ ತೋಳಿನ ರಕ್ತಪ್ರವಾಹದಿಂದ ನಾನು ಸತ್ತು ಹೋಗುತ್ತಿದ್ದೆ. ನೀವು ನನ್ನನ್ನು ಬದುಕಿಸಿದ್ದೀರಿ. ನಿಮ್ಮ ಹೆಸರೇನೊ?

ಅವಳು ಮಾಧುರ್ಯಭರಿತ ಧ್ವನಿಯಲ್ಲಿ ಉಲಿದಳು.
ನಾನು ರಾಮಪಣಿಕ್ಕರರ ಮಗಳು. ಹೆಸರು ಇಚ್ಚಿರೆ ಮೋಳು.

ಆ ಅಪಾರ ರೂಪರಾಶಿಯ ಅನುಪಮ ಸೌಂದರ್ಯವನ್ನು ಕಣ್ಣುಗಳಲ್ಲೇ ಹೀರುತ್ತಿದ್ದ ಜಮಾದಾರ ಮಾಚಯ್ಯನ ಮುಖ ಬಾಡಿತು. ಅವನು ಕೊಡಗರ ಹುಡುಗ. ಅವನ ಜಾತಿಯ ಹೆಣ್ಣುಗಳಿಗೆ ಲಿಂಗಕಟ್ಟಿ ಕೊಡಗಿನ ಅರಸರು ಮದುವೆಯಾಗುತ್ತಿದ್ದರು. ಭೂತಕಟ್ಟುವ ಪಣಿಕ್ಕರ್‌ರೊಡನೆ ಕೊಡಗರು ವಿವಾಹ ಸಂಬಂಧ ಬೆಳೆಸುವುದಿಲ್ಲ. ಕೆಲವು ಮನೆಯೊಳಗೆ ಪಣಿಕ್ಕರ್‌ರನ್ನು ಬರಗೊಡುವುದಿಲ್ಲ. ಇಚ್ಚಿರೆ ಮೋಳು ಪಣಿಕ್ಕರ್‌ ಹೆಣ್ಣು. ಛೆ.

ಕೆಲವು ದಿನಗಳ ಹಿಂದೆ ಲಿಂಗರಾಜ ಹುಕುಂನಾಮೆ ಹೊರಡಿಸಿದ್ದ.

ಕೊಡಗಿನ ಜನರು ತಮ್ಮ ಕುಲಾಚಾರ ಪದ್ಧತಿ ಉಳಿಸಿಕೊಂಡು ಬರಬೇಕು. ಆಯಾ ಜಾತಿಗಳವರು ಸ್ವಕೀಯರನ್ನೇ ಮದುವೆಯಾಗಬೇಕು. ಜಾತಿ ಕಟ್ಟಳೆ ಮುರಿದು ಮದುವೆ ಯಾದವರಿಗೆ ಉಗ್ರಶಿಕ್ಷೆ ಕೊಡಲಾಗುತ್ತದೆ. ಜಮಾದಾರ ಮಾಚಯ್ಯ ಮನದಲ್ಲೇ ಹಳ ಹಳಿಸಿದ. ಓ ದೇವರೇ, ಈ ಅನಾಘ್ರಾತ ವನಪುಷ್ಪ ಕೊಡಗರ ಮನೆಯಲ್ಲಿ ಹುಟ್ಟಬಾರದಿತ್ತೆ?

ಅವನಿಗೆ ಇನ್ನೇನೂ ಮಾತಾಡಲು ಹೊಳೆಯಲಿಲ್ಲ.
ಅವಳಿಗೆ ಮತ್ತೊಮ್ಮೆ ಕೃತಜ್ಞತೆ ಸಲ್ಲಿಸಿ ಹೊರಟುಹೋದ. ಅಲ್ಲಿಗೆ ಇಚ್ಚಿರೆ ಮೋಳು ಅವನನ್ನು ಮರೆತುಬಿಟ್ಟಳು.
ಆದರೆ ಜಮಾದಾರ ಮಾಚಯ್ಯ ಮರುದಿನ ಬಂದ.
ಎರಡು ದಿನವಲ್ಲ, ಮೂರು ದಿನವಲ್ಲ. ಅಖಂಡ ಎರಡು ವಾರ.
ಇಚ್ಚಿರೆ ಮೋಳ ನಾಯಿ ಈಗ ಅವನಿಗೆ ಬೊಗಳುತ್ತಿರಲಿಲ್ಲ. ಪುಷ್ಪವತಿಯಾಗಿದ್ದ ಇಚ್ಚಿರೆಮೋಳು ಫಲವತಿಯಾದಳು. ವಿಷಯ ಅಪ್ಪ ರಾಮಪಣಿಕ್ಕರ್‌ಗೆ ಗೊತ್ತಾಯಿತು. ಎರಡು ತಿಂಗಳು ಕಳೆದು ಮಾಚಯ್ಯ ಬರುವಾಗ ಪಣಿಕ್ಕರ್‌ ಮನೆಯಲ್ಲೇ ಇದ್ದ.
ಮಾಚಯ್ಯನನ್ನು ಕಂಡು ಭೂತದ ಸುರಿಯವನ್ನು ಕೈಗೆತ್ತಿಕೊಂಡ.
ತಲೆ ತಪ್ಪಿಸಿಕೊಂಡು ಓಡಿ ಹೋಗಿದ್ದರೆ, ಲಿಂಗರಾಜನಲ್ಲಿಗೆ ಹೋಗಿ ದೂರು ಕೊಡಬೇಕಿತ್ತು. ನೀನಾಗಿಯೇ ಬಂದದ್ದು ಒಳ್ಳೆಯದಾಯಿತು. ನೋಡಿಲ್ಲಿ, ನೀನು ಇವಳ ಹೊಟ್ಟೆಯಲ್ಲಿ ಬೆಳೆಯುತ್ತಿದ್ದೀಯಾ. ಮರ್ಯಾದೆಯಂದ ಇವಳನ್ನು ಮದುವೆಯಾಗು. ಇಲ್ಲದಿದ್ದರೆ ಈ ಕತ್ತಿಯಿಂದ ನಿನ್ನ ಎದೆಗುಂಡಿಗೆ ಸೀಳಿ ಲಕ್ಷ್ಮಣ ತೀರ್ಥಕ್ಕೆ ಎಸೆದು ಬಿಡುತ್ತೇನೆ.
ಜಮಾದಾರ ಮಾಚಯ್ಯ ಅವಳನ್ನು ಅಪಾರವಾಗಿ ಪ್ರೀತಿಸುತ್ತಿದ್ದವ, ರಾಮ ಪಣಿಕ್ಕರ್‌ನ ಮಾತಿನಿಂದ ಕಂಗೆಡಲಿಲ್ಲ.
ನೀವು ಹಿರಿಯರು. ಮಾತಿನಲ್ಲಿ ಸ್ವಲ್ಪ ತಾಳ್ಮೆ ಇರಲಿ. ನಾನು ಇಚ್ಚಿರೆ ಮೋಳನ್ನು ತುಂಬಾ ಪ್ರೀತಿಸುತ್ತಿದ್ದೇನೆ.
ಅಂದ ಮೇಲೆ ನಿನ್ನ ಹಿರಿಯರನ್ನು ಕರೆಸು. ನಾಲ್ಕು ಜನ ಮರ್ಯಾದಸ್ಥರ ಮುಂದೆ ತಾಳಿಕಟ್ಟಿ ಮದುವೆಯಾಗಿ ಇವಳನ್ನು ನಿನ್ನ ಹೆಂಡತಿಯನ್ನಾಗಿ ಸ್ವೀಕರಿಸು.
ನನ್ನ ಮನಸ್ಸಿನಲ್ಲಿರುವುದೇ ಅದು. ಆದರೆ ಮಹಾಪ್ರಭುಗಳು ಲಿಂಗರಾಜರು ಜಾತಿ ಬಿಟ್ಟು ಮದುವೆಯಾಗಬಾರದೆಂದು ಹುಕುಂನಾಮೆ ಹೊರಡಿಸಿದ್ದಾರೆ. ನಾನೆಲ್ಲಾದರೂ ಇವಳನ್ನು ಮದುವೆಯಾದರೆ ನಮ್ಮಿಬ್ಬರ ತಲೆಗಳನ್ನು ಕಡಿಸಿ ನರಿನಾಯಿಗಳಿಗೆ ಹಾಕಿಬಿಡುತ್ತಾರೆ. ಹಾಗಾಗುವುದು ನಿಮಗೆ ಇಷ್ಟವಿರಲಾರದು ಅಂದುಕೊಂಡಿದ್ದೇನೆ.

ಇದನ್ನೆಲ್ಲಾ ನೀನು ಇಚ್ಚಿರಮೋಳ ಮೈಯನ್ನು ಮುಟ್ಟುವ ಮೊದಲು ಯೋಚಿಸ ಬೇಕಿತ್ತು. ಈಗ ನಿನಗೆ ಹುಕುಂನಾಮೆ ನೆನಪಾಯಿತಾ? ಹಾಗಾದರೆ ನನ್ನ ಮಗಳು ಏನು ಮಾಡಬೇಕು? ಲಕ್ಷ್ಮಣ ತೀರ್ಥಕ್ಕೆ ಹಾರಿ ಪ್ರಾಣ ಕಳಕೋಬೇಕು ಅಂತಿಯಾ?
ಛೇಛೇ. ಎಲ್ಲಾದರೂ ಉಂಟೆ? ಏನು ಮಾತೂಂತ ಆಡುತ್ತಿದ್ದೀರಿ? ಎಂಥಾ ಪರಿಸ್ಥತಿ ಎದುರಾದರೂ ನಾನಿವಳ ಕೈ ಬಿಡುವುದಿಲ್ಲ.
ಏನು ಮಾಡುತ್ತಿ? ಇವಳನ್ನು ಕಟ್ಟಿಕೊಂಡು ಮಲೆಯಾಳಕ್ಕೆ ಓಡಿ ಹೋಗುತ್ತೀಯಾ?
ಇಲ್ಲ. ಪಲಾಯನದ ಮಾತಿಲ್ಲ. ಇವಳಿಗೆ ಚಿನ್ನದ ಮಾಲೆ ಹಾಕಿ, ರೇಶಿಮೆ ಸೀರೆಕುಬಸ ಕೊಟ್ಟು ನನ್ನ ಪಚ್ಚಡ ಪೊಣ್ಣನ್ನಾಗಿ ಮಾಡಿ ಇಟ್ಟುಕೊಳ್ಳುತ್ತೇನೆ.
ನನ್ನ ಮಗಳನ್ನು ಪಚ್ಚಡ ಪೊಣ್ಣಾಗಿ ಇಟ್ಟುಕೊಳ್ಳುತ್ತಿ. ನೀನು ಕೊಡವತಿ ಮೂಡಿಯನ್ನು ಮದುವೆಯಾಗಿ ಜಾತಿ ಉಳಿಸಿಕೊಳ್ಳುತ್ತಿ ಅಲ್ವಾ?
ನೀವೇ ಹೇಳಿ. ನಾನು ಇನ್ನೇನು ಮಾಡಲಿ? ಬೇರೆ ಯಾವ ದಾರಿಯೂ ಉಳಿದಿಲ್ಲ.
ಅದನ್ನು ಮಹಾರಾಜರು ನಿರ್ಧರಿಸಲಿ.
ಲಿಂಗರಾಜ ಕರುಣಾಪೂರಿತ ನೇತ್ರಗಳಿಂದ ಇಚ್ಚಿರೆಮೋಳನ್ನು ನೋಡಿದ. ಅವಳು ನಾಚಿಕೆ ಅಪಮಾನಗಳಿಂದ ರಾಜನೆದುರು ತಲೆತಗ್ಗಿಸಿ ನಿಂತಿದ್ದಳು.
ಲಿಂಗರಾಜ ಮಹಾರಸಿಕನಾಗಿದ್ದ. ಕೊಡಗಿನ ಅಂಥಾ ಮೂಲೆಯಲ್ಲಿ ಇಂಥಾ ಹೆಣ್ಣೆ?
ರಾಜನ ಅಂತಃಪುರದಲ್ಲಿರಬೇಕಾದವಳು ಜಮಾದಾರ ಮಾಚಯ್ಯನಂತಹ ಅಲ್ಪನ ಬಲೆಗೆ ಬಿದ್ದಳು. ಅವಳ ದುರ್ದೈವ.
ರಾಜ ಎಲ್ಲವನ್ನೂ ಸಾವಧಾನದಿಂದ ಆಲಿಸಿದ.
ಏನೋ ಮಾಚಯ್ಯ ಅದು, ಪಚ್ಚಡ ಪೊಣ್ಣು ಅಂದರೆ?
ನಮಗೆ ಇಷ್ಟವಾದ ಹೆಣ್ಣಿಗೆ ಒಂದು ಸೀರೆ ಕೊಟ್ಟು ನಮ್ಮವಳನ್ನಾಗಿ ಇಟ್ಟುಕೊಳ್ಳುವುದು ಪ್ರಭೂ.
ಇದು ಎಲ್ಲಾ ಜಾತಿಯ ಹೆಣ್ಣುಗಳಿಗೆ ಅನ್ವಯಿಸುತ್ತದೇನೋ ಮಾಚಯ್ಯ?
ಇಲ್ಲ ಮಹಾಪ್ರಭೂ, ಕೆಳಜಾತಿಯ ಹೆಣ್ಣುಗಳಿಗೆ ಮಾತ್ರ.
ಮೇಲ್ಜಾತಿಯವರು ಸೃಷ್ಟಿಸಿದ ಈ ಸೂಳೆಗಾರಿಕೆ ಪದ್ಧತಿಯನ್ನು ನೀನು ಸಂಪ್ರದಾಯ ಅಂತೀಯಲ್ಲೊ?
ಲಿಂಗರಾಜನ ಕರ್ಕಶ ಸ್ವರಕ್ಕೆ ಬಲಾಢ್ಯ ಸಿಪಾಯಿಯೂ ನಡುಗಿಬಿಟ್ಟ.
ಹೇಳು ಮಾಚಯ್ಯ. ಈ ರಾಮಪಣಿಕ್ಕರ್‌ಗೆ ಹೆಂಡತಿ ಇಲ್ಲ. ನಿನ್ನ ಕುಟುಂಬದ ಒಬ್ಬಳು ಅವಿವಾಹಿತ ಹೆಣ್ಣನ್ನು ಇವನಿಗೆ ಪಚ್ಚಡೆ ಪೊಣ್ಣಾಗಿ ಇಟ್ಟುಕೊಳ್ಳಲು ಕೊಡುತ್ತೀಯಾ?
ಮಾಚಯ್ಯ ನಿರುತ್ತರನಾಗಿ ನಿಂತುಬಿಟ್ಟ.
ಲಿಂಗರಾಜ ಇಚ್ಚಿರೆ ಮೋಳ ಮೇಲೆ ಕಣ್ಣು ಹಾಯಿಸಿದ.
ನೀನು, ಏನು ನಿನ್ನ ಹೆಸರು? ಇಚ್ಚಿರೆ ಮೋಳು. ಏನು ಹೇಳುತ್ತಿ ಈ ನೀಚನ ಮಾತಿಗೆ?
ಇಚ್ಚಿರೆ ಮೋಳು ನಡುಗುವ ಸ್ವರದಲ್ಲೆಂದಳು.
ನಾನು ಇವನನ್ನು ತುಂಬಾ ಪ್ರೀತಿಸ್ತೀನಿ ದೊರೆ. ಕಟ್ಟಳೆ ಮಾಡಿದ ಮಹಾಪ್ರಭುಗಳು ಅದನ್ನು ಸಡಿಲಿಸಿದರೆ ನಾವು ಗಂಡ ಹೆಂಡಿರಾಗಿ ದೊರೆಗಳ ಚರಣ ಸೇವೆ ಮಾಡಿಕೊಂಡಿರತೀವಿ.
ಇಚ್ಚಿರೆ ಮೋಳು ಸುಂದರಿ ಮಾತ್ರವಲ್ಲ, ಬುದ್ಧಿವಂತೆಯೂ ಕೂಡಾ ಎನ್ನುವುದನ್ನು ಲಿಂಗರಾಜನಿಗೆ ಅವಳ ಮಾತುಗಳು ಮನವರಿಕೆ ಮಾಡಿಕೊಟ್ಟವು. ಅವನು ಮನಸ್ಸಿನಲ್ಲೇ ಅಂದುಕೊಂಡ. ಕೊಡಗರು ಜಾತಿ ಬಿಟ್ಟು ಮದುವೆಯಾಗಬಾರದೆಂದು ತಾನು ಹೊರಡಿಸಿರುವ ಹುಕುಂನಾಮೆ ಅರ್ಥಹೀನವಾದದ್ದು ಎಂದು ಇವಳು ಹೇಳುತ್ತಿದ್ದಾಳೆ. ದೇವರು ಮನುಷ್ಯರನ್ನು ಸೃಷ್ಟಿಸಿ ಅವರಲ್ಲಿ ಭಾವನೆಗಳನ್ನು ತುಂಬಿದ. ಬುದ್ಧಿಗೇಡಿ ಮನುಷ್ಯ ಜಾತಿಗಳನ್ನು ಸೃಷ್ಟಿಸಿ ಭಾವನೆಗಳಿಗೆ ಬೆಂಕಿ ಇಟ್ಟ. ಮದುವೆಯಾಗುವುದು ಸುಖಕ್ಕಾಗಿ, ಭದ್ರತೆಗಾಗಿ ಮತ್ತು ಸಂತಾನಕ್ಕಾಗಿ. ಯಾರು ಯಾರನ್ನು ಮದುವೆಯಾದರೂ ಆಗುವುದು ಮಕ್ಕಳೇ. ಅಂದಮೇಲೆ ಮದುವೆಗೆ ಗಂಡು ಹೆಣ್ಣಿನ ಮನಸ್ಸು ಒಂದಾಗುವುದು ಮುಖ್ಯ. ಅರ್ಥಹೀನ ಜಾತಿ ಮತಗಳು ಮತ್ತು ಕಟ್ಟಳೆಗಳು ಮದುವೆಯಲ್ಲಿ ಮಹತ್ವ ಪಡಕೊಳ್ಳ ಕೂಡದು.
ಲಿಂಗರಾಜನಿಗೆ ಹಾಲೇರಿಯ ಸಂಸ್ಥಾಪಕ ವೀರ ರಾಜನ ನೆನಪಾಯಿತು. ಅವನು ತನ್ನ ಇಷ್ಟದ ಹೆಣ್ಣನ್ನು ಲಿಂಗಧಾರಣೆ ಮೂಲಕ ಶಿವಾಚಾರದವಳನ್ನಾಗಿ ಮಾಡಿ ಮದುವೆಯಾಗಿದ್ದ. ಆ ಬಳಿಕಿನ ರಾಜರುಗಳು ಅದೇ ಮೇಲ್ಪಂಕ್ತಿಯನ್ನು ಅನುಸರಿಸಿದ್ದರು. ಅದರಿಂದ ಯಾರಿಗೂ ತೊಂದರೆಯಾಗಿರಲಿಲ್ಲ. ಜನರ ನಡುವೆ ಪಚ್ಚಡ ಪೊಣ್ಣುವಿನಂತಹ ಅನಿಷ್ಟಗಳು ಯಾಕೆ ಬೆಳೆಯುತ್ತವೆ? ಯಾಕೆ ಉಳಕೊಳ್ಳುತ್ತವೆ? ಜಾತಿ ವ್ಯವಸ್ಥೆಯಿಂದಾಗಿ. ಜಾತಿಯ ಕಟ್ಟುಕಟ್ಟಳೆಗಳು ಬಿಗಿಯಾದರೆ ಕೆಳಜಾತಿಯ ಹೆಣ್ಣುಗಳ ಶೋಷಣೆ ಹೆಚ್ಚಾಗುತ್ತದೆ. ಪಚ್ಚಡ ಪೊಣ್ಣುನಂತಹ ಅನಿಷ್ಟಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಸೂಳೆಗಾರಿಕೆಗೂ ಸಂಪ್ರದಾಯದ ಲೇಪನವಾಗುತ್ತದೆ.
ಲಿಂಗರಾಜ ತನ್ನ ದಿವಾನನ್ನು ಕೈಸನ್ನೆಯಿಂದ ಕರೆದ.
ದಿವಾನ ಬೋಪಣ್ಣ, ಜಾತಿ ಕಟ್ಟಳೆಗೆ ಸಂಬಂಧಿಸಿದಂತೆ ನಾನು ಹೊರಡಿಸಿದ ಹುಕುಂನಾಮೆಗೆ ತಿದ್ದುಪಡಿಯೊಂದನ್ನು ಸೇರಿಸಿಕೊಳ್ಳಿ. ಕೊಡಗಿನಲ್ಲಿ ಪಚ್ಚಡಪೊಣ್ಣು ಎಂಬ ಕೆಟ್ಟ ಸಂಪ್ರದಾಯವನ್ನು ಯಾರೂ ಅನುಷ್ಠಾನಕ್ಕೆ ತರತಕ್ಕದಲ್ಲ. ಅದು ಈಗಿಂದೀಗಲೇ ರದ್ದುಗೊಂಡಿದೆ. ಯಾರಾದರೂ ಈ ಅನಿಷ್ಟ ಪದ್ಧತಿಯನ್ನು ಅನುಷ್ಠಾನಕ್ಕೆ ತಂದರೆ ಅವರ ತಲೆ ಕಡಿದು ಕೋಟೆಯ ಬಾಗಿಲ ಮುಂದೆ ನೇತಾಡಿಸಲಾಗುತ್ತದೆ.
ದಿವಾನ ಅಪ್ಪಾರಂಡ ಬೋಪಣ್ಣ ತಲೆದೂಗಿದ.
ಗಮನವಿಟ್ಟು ಕೇಳಿ. ಇವಳನ್ನು ಯಾರಾದರೂ ಶೀಲಗೆಟ್ಟವಳು ಎಂದರೆ ಅವರ ತಲೆಯನ್ನು ತೆಗೆಯುತ್ತೇನೆ.

ಶೀಲ ಶೀಲ ಎಂದು ಗರ್ವಿಸಿ ನುಡಿವುತಿಪ್ಪಿರಿ
ಶೀಲವಾವುದೆಂದರಿಯಿರಿ ಕೇಳಿರಣ್ಣ
ಇದ್ದುದ ವಂಚನೆಯ ಮಾಡದಿಪ್ಪುದೆ ಶೀಲ
ಇಲ್ಲದುದಕೆ ಕದನ ಮಾಡದಿಪ್ಪುದೆ ಶೀಲ
ಪರಧನ ಪರಸ್ತ್ರೀಯರ ಮುಟ್ಟದಿಪ್ಪುದೆ ಶೀಲ
ಪರದೈವ ಪರಸಮಯಕ್ಕೆ ಅಳುಪದಿಪ್ಪುದೆ ಶೀಲ
ಗುರುನಿಂದೆ ಹರನಿಂದೆ ಮಾಡದಿಪ್ಪುದೆ ಶಿಲ
ಎಂದು ಚೆನ್ನಬಸವಣ್ಣ ಹೇಳಿದುದನ್ನು ಮರೆಯಕೂಡದು.

ಆಸ್ಥಾನಿಕರು ಹೌದೆನ್ನುವಂತೆ ತಲೆದೂಗಿದರು.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ತೀರ್ಮಾನವನ್ನು ಪ್ರಕಟಿಸುತ್ತಿದ್ದೇನೆ. ಕೊಡಗರ ಹೈದ ಮಾಚಣ್ಣ, ಪಣಿಕ್ಕರ ಗೂಡೆ ಇಚ್ಚಿರೆ ಮೋಳನ್ನು ಗರ್ಭವತಿಯನ್ನಾಗಿ ಮಾಡಿದ್ದಾನೆ. ಮದುವೆಗೆ ಮುನ್ನ ಹೀಗಾಗುವುದು ಅನೈತಿಕವೆನಿಸುತ್ತದೆ. ಲಿಂಗರಾಜರ ದಂಡಿನ ಜಮಾದಾರನಾಗಿ ನೈತಿಕತೆಯನ್ನು ಕಾಪಾಡಬೇಕಾದವನಿಂದ ತಪ್ಪು ಘಟಿಸಿ ಹೋಗಿದೆ. ಇವನ ತಪ್ಪಿಗೆ ಮರಣ ದಂಡನೆಯೇ ಸರಿಯಾದ ಶಿಕ್ಷೆ. ಇಚ್ಚಿರೆ ಮೋಳು ಒಪ್ಪಿದರೆ ತಕ್ಷಣ ಈ ಶಿಕ್ಷ ಜಾರಿಯಾಗುತ್ತದೆ.

ಜಮಾದಾರ ಮಾಚಯ್ಯ ಭಯದಿಂದ ಬೆವತು ಹೋದ.
ಇಚ್ಚಿರೆ ಮೋಳ ಕಣ್ಣುಗಳಿಂದ ಎರಡು ಹನಿಗಳು ಉರುಳಿದವು.
ನನ್ನದೂ ತಪ್ಪಿದೆ ಪ್ರಭೂ. ಇಬ್ಬರಿಗೂ ಶಿಕ್ಷಯಾಗಲಿ.
ಆ ಕ್ಷಣಕ್ಕೆ ಮಾಚಯ್ಯನ ಬಗ್ಗೆ ರಾಜನಿಗೆ ಅಸೂಯೆ ಮೂಡಿತು. ಪ್ರೀತಿಯೆಂದರೆ ಇದು!
ಕೇಳಿದ್ರಾ ಈ ಹುಡುಗಿಯ ಮಾತನ್ನು? ಪ್ರೀತಿಯ ಮುಂದೆ ಜೀವ ದೊಡ್ಡದಲ್ಲ ಅನ್ನುತ್ತಿದ್ದಾಳೆ ಈ ಪಣಿಕ್ಕರ ಹುಡುಗಿ. ಇವಳು ಗುರುಮಠಕ್ಕೆ ಹೋದವಳಲ್ಲ. ಮಾಚಯ್ಯನ ಗಾಯಕ್ಕೆ ಮದ್ದು ಕಟ್ಟುವಾಗ ಜಾತಿ ಯಾವುದೆಂದು ಕೇಳಲಿಲ್ಲ. ಇಂತಹ ಹೆಣ್ಣುಗಳಿಗೆ ನಿಮ್ಮ ಸಮಾಜದ ಕೊಡುಗೆಯೇನು? ಪಚ್ಚಡ ಪೊಣ್ಣುನಂತಹ ಅನಿಷ್ಟಪದ್ಧತಿ. ಬೆಂಕಿ ಹಾಕಲಿ ನಿಮ್ಮ ಜಾತಿ ಸಂಪ್ರದಾಯಗಳಿಗೆ, ನಾವು ಲಿಂಗ ಕಟ್ಟಿ ಯಾರನ್ನೂ ಮದುವೆಯಾಗಬಲ್ಲೆವು. ನಿಮ್ಮಲ್ಲೇಕೆ ಆ ಒಳ್ಳೆ ಬುದ್ಧಿ ಇಲ್ಲ?

ಯಾರೂ ಸೊಲ್ಲೆತ್ತಲಿಲ್ಲ.
ನಾವೀಗ ಇಬ್ಬರಿಗೂ ಶಿಕ್ಷ ಕೊಡಬಹುದು. ಆಗ ಮೂರನೆಯ ಜೀವವೊಂದು ಬೆಳಕು ಕಾಣುವ ಮೊದಲೇ ಕಣ್ಣು ಮುಚ್ಚುತ್ತದೆ. ಈ ಇಚ್ಚಿರೆ ಮೋಳ ಗರ್ಭದಲ್ಲಿರುವ ನಿಷ್ಪಾಪಿ ಭ್ರೂಣ. ಅದು ಯಾವ ತಪ್ಪನ್ನು ಮಾಡಿದೆ? ಅದಕ್ಕೆ ಶಿಕ್ಷಯಾದರೆ ಆ ಮಹಾದೇವ ನಮ್ಮನ್ನು ಕ್ಷಮಿಸುವುದಿಲ್ಲ. ಅದು ಉಳಿಯಬೇಕಾದರೆ ಇವರಿಬ್ಬರು ಮದುವೆಯಾಗಬೇಕು. ಹೇಳಿ ಬೋಪಣ್ಣ, ಕೊಡಗರ ಮಾಚಯ್ಯ ಪಣಿಕ್ಕರ ಇಚ್ಚಿರೆ ಮೋಳನ್ನು ಮದುವೆಯಾಗುವುದನ್ನು ನಿಮ್ಮ ಸಮುದಾಯ ಒಪ್ಪುತ್ತದಾ?
ಬೋಪು ದಿವಾನ ನಕಾರಾತ್ಮಕವಾಗಿ ತಲೆಯಾಡಿಸಿದ.
ಹಾಗಾದರೆ ಜಮಾದಾರ ಮಾಚಯ್ಯ ಇಚ್ಚಿರೆ ಮೋಳನ್ನು ಗರ್ಭವತಿಯನ್ನಾಗಿಸಿದ್ದು ಸರಿ ಎನ್ನುತ್ತೀರಾ?
ಬೋಪು ದಿವಾನ ತಲೆ ತಗ್ಗಿಸಿದ.

ಬಸವಣ್ಣನವರು ಜಾತಿಗಳು ನಾಶವಾಗಬೇಕೆಂದು ಬಯಸಿದ್ದರು. ಅದಕ್ಕಾಗಿ ಅಸ್ಪೃಶ್ಯರ ಮತ್ತು ಬ್ರಾಹ್ಮಣರ ನಡುವೆ ಮದುವೆ ಏರ್ಪಡಿಸಿದ್ದರು. ಯಾವಾಗ? ಸುಮಾರು ಏಳುನೂರು ವರ್ಷಗಳ ಹಿಂದೆ! ನಾವು ಈಗಲೂ ಜಾತಿಗಳು ಉಳಿಯಬೇಕೆಂದು ಬಯಸುತ್ತಿದ್ದೇವೆ. ನಮ್ಮ ಬಯಕೆಗೆ ತರ್ಕವೂ ಇಲ್ಲ, ಅರ್ಥವೂ ಇಲ್ಲ. ಹೇಳಿ. ನಿಮಗೆ ಯಾರಿಗಾದರೂ ಈ ಸಮಸ್ಯೆಗೆ ಪರಿಹಾರ ಹೊಳೆಯುತ್ತದಾ? ಹೊಳೆದರೆ ನಿರ್ಭೀತಿಯಿಂದ ಸೂಚಿಸಬಹುದು.
ಲಿಂಗರಾಜ ಸ್ವಲ್ಪ ಹೊತ್ತು ಮೌನವಾದ. ಯಾರದೇ ಪ್ರತಿಕ್ರಿಯೆ ಇಲ್ಲ.

ಆಸ್ಥಾನದಲ್ಲಿ ಸ್ಮಶಾನ ಮೌನ.

ಸರಿ ಹಾಗಾದರೆ. ನಾನೇ ಪರಿಹಾರ ಸೂಚಿಸುತ್ತೇನೆ. ನಮ್ಮ ನಂಬಿಕೆಯ ಪ್ರಕಾರ ಲಿಂಗಧಾರಣೆ ಮಾಡಿಸಿಕೊಂಡು ಯಾರು ಬೇಕಾದರೂ ಬಸವಧರ್ಮವನ್ನು ಸೇರಿಕೊಳ್ಳಬಹುದು. ಅದು ವಿಶ್ವಮಾನವ ಧರ್ಮ. ಕೊಡಗಿನ ಕುಲಾಚಾರ ಪದ್ಧತಿಯ ಪ್ರಕಾರ ಇವರು ಗಂಡ ಹೆಂಡಿರಾಗುವಂತಿಲ್ಲ. ಬಸವಧರ್ಮದ ಪ್ರಕಾರ ಆಗಬಹುದು. ಪ್ರಾಮಾಣಿಕವಾಗಿ ಪ್ರೀತಿಸುವ ಗಂಡು ಹೆಣ್ಣುಗಳಿಗೆ ಜಾತಿಗಣಿಸದೆ ಮದುವೆಯಾಗಲು ಅವಕಾಶವಾಗುವಂತೆ ಎಲ್ಲರ ಕುಲಾಚಾರ ಪದ್ಧತಿಗಳನ್ನು ಮಾನವೀಯಗೊಳಿಸಿ ನಿಮ್ಮೆಲ್ಲರ ಸಮ್ಮುಖದಲ್ಲಿ ನಾನು ಇವರಿಬ್ಬರಿಗೆ ಲಿಂಗಧಾರಣೆ ಮಾಡಿಸುತ್ತಿದ್ದೇನೆ. ಇನ್ನು ಮುಂದೆ ಇವರು ಶಿವಾಚಾರ ದವರಾಗಿರುತ್ತಾರೆ. ಸತಿ ಪತಿಯರೊಂದಾಗಿ ಶಿವನಿಗೆ ಹಿತಮಪ್ಪಂತೆ ನಡಕೊಳ್ಳುತ್ತಾರೆ.
ಆಸ್ಥಾನಿಕರು ಚಪ್ಪಾಳೆ ತಟ್ಟಿದರು.

ಸರಿ ಇವರೇನೋ ಮನುಷ್ಯರಾದರು. ನೀವು? ನಿಮ್ಮನ್ನು ಜಾತಿಗಳೆಂದು ತಿಳಿದು ಕೊಂಡಿದ್ದೀರಿ. ಅದು ತಪ್ಪು. ಇನ್ನಾದರೂ ಮನುಷ್ಯರಾಗಿ. ಪ್ರಾಮಾಣಿಕವಾಗಿ ಪ್ರೀತಿಸುವ ಗಂಡು ಹೆಣ್ಣುಗಳು ಜಾತಿ, ಕುಲ ನೋಡದೆ ಮದುವೆಯಾಗಲು ಅವಕಾಶ ಕಲ್ಪಿಸಿಕೊಡಿ. ಇಲ್ಲದಿದ್ದರೆ ನಿಮ್ಮನ್ನು ಯಾವ ದೇವರೂ ಕ್ಷಮಿಸುವುದಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಾರಿ
Next post ಅನಂತನ ಅವಾಂತರ ಕೊಮಾರನಿಗೆ ಗಂಡಾಂತರ

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…