ಯು.ಆರ್. ಅನಂತಮೂರ್ತಿನಾ ಹೂ ಆರ್ ಅನಂತ ಮೂತ್ರಿ? ಎಂದು ಗುಡುಗಿದ ಕೊಮಾರ ರಾಮನ ಅಸಲಿರೂಪವೀಗ ಹೊರಬಿದೈತ್ರಿ. ಎಳೆ ವಯಸ್ಸಿನ ಸಿಎಂ ಭಾಳ ತಾಳ್ಮೆ ಸಹನಾ ಮೂತ್ರಿ ಅಂತೆಲ್ಲಾ ಮಾಧ್ಯಮಗಳಿಂದ ಹಾಡಿ ಹೊಗಳಿಸಿಕ್ಕಂಡಿದ್ದ ಈವಯ್ಯ, ಕಲಿತಬುದ್ಧಿ ಕ್ಕೆ ಬಿಡೋ ಕೊಮಾರ ಅಂದ್ರೆ ನಡುಂತ್ರ ಬಿಟ್ಟೇನ್ ಮಣ್ಣು ಹೊಯ್ಕಳ್ಳೋ ಅನ್ನಂಗೆ ಮಾಡವ್ನೆ. ಗೋಮುಖವ್ಯಾಘ್ರ ಅಂಬೋದು ಬಯಲಿಗೆ ಬಿದ್ದೇತ್ರಿ. ಜ್ಞಾನ ಪೀಠಿಯನ್ನೇ ಯಾರು ಅಂತ ಕೇಳೋದು ಅಜ್ಞಾನದ ಪರಮಾವಧಿ ಅಂಬೋದು ಕನ್ನಡನಾಡಿನ ಹಿರಿಕಿರಿ ಕಿರಿಕಿರಿ ಸಾಹಿತಿಗಳ ಒಕ್ಕೊರಲಿನ ದಿಸೆಶನ್ನು. ಕುಮಾರನೆಂಬ ಎಳಸುಲು ಸಿಎಂ ಹಳಸಲು ಮುಖಮಾಡಿ ತನ್ನ ಅನ್ನದ ತಾಟಿಗೇ ಕೈ ಹಚ್ಚಿದನಲ್ಲ ಈ ಹಾರವ ಸಾಹಿತಿ ಎಂದು ಉರಿದು ತೊಳೆದ ಕೆಂಡದಂತಾಗಿ ಹೋದ್ನೆ! ಕನ್ನಡ ಉದ್ದಾರ ಮಾದೋಕಂತ್ಲೇ ನಮ್ಮಪ್ಪ ನನ್ನ ಹುಟ್ಟಿಸಿದ್ದು. ಇಂಥ ಊಸರವಳ್ಳಿ ಸಾಹಿತಿಗಳಿಂದ ನಾನು ಲೆಸನ್ ಕಲಿಬೇಕಿಲ್ಲ. ಬಜೆಟ್ ಮಂಡಿಸಿ ಭೇಷ್ ಅನ್ನಿಸಿ ಕೊಂಡಂಗೆ ಕನ್ನಡವನ್ನು ಇಂಟರ್ನ್ಯಾಶನಲ್ ಲಾಂಗ್ವೇಜ್ ಮಾಡ್ಲಿಲ್ಲ ನಾನು ಗೋಡ್ರ ಗೋಡನ ಸನ್ನು ಕೊಮಾರ ರಾಮನೇ ಅಲ್ಲ ಅಂತ ನಿಗರಾಡಿದ್ದನ್ನು ಟಿವಿನೋರು ಸೆರಿಹಿಡಿದು ಇಡೀ ನಾಡಿಗೆ ಸಿಎಂನ ಒರಿಜಿನಲ್ ಫೇಸ್ ಕಟ್ ತೋರಿಸವರೆ. ಇದರ ಹಿನ್ನಲೆನಾಗೆ ಎಬಿಪಿಜೆಡಿ ಸಿದ್ದು ಅವನೆಂಬೋದು ಭಾಳ ಎಫೆಕ್ಟು ಮಾಡೇತ್ರಿ. ವಾಟಾಳನೆಂಬ ಅಸಲಿ ಓರಾಟಗಾರನ ಇದು ನಕಲಿ ಸಂಶೊಧನೆ. ಈ ಸಿದ್ದೂನ ಅಟೆಯಾ ಭಾಷೆಗಿಂತ ಹೆಚ್ಚು ಜಾತಿ ಪ್ರೇಮಿ. ಅನಂತು ಬರೆದ ಬುಕ್ಸ್ ಹೋದವನೋ ಇಲ್ಲೋ ಅನಂತನ್ನ ತನ್ನ ದಾಳ ಮಾಡ್ಕೊಂಡು ಕೊಮಾರನ ಮುಂದೆ ಉರುಳಿಸಿದ ತಲೆವಾನ. ಅನಂತಮೂರ್ತಿ ಎಂಬ ಕಿಲಾಡಿ ತಾನು ಗೆಲ್ಲಲು ಹಿಡಿದಿದ್ದು ಕನ್ನಡದ ಬಿಲ್ಲು ಬಾಣ…ತೊಟ್ಟಿದ್ದು ಬಬ್ರುವಾಹನನ ಫೋಜು.
ಈ ಅನಂತಮೂತ್ರೀದು ಎಂಥ ಪಿರಿಪಿರಿ ಮಾರಾಯ್ರೆ. ಜ್ಞಾನಪೀಠಿ ಪ್ರಭಾವನಾ ಕ್ಯಾಷ್ ಮಾಡೋದ್ರಲ್ಲೇ ಆಯಸನ್ನೆಲ್ಲಾ ಕಳೀತೆ. ಯಾರಾನ ಸಿಎಂ ಅಗ್ಲಿ ಅವರ ಬಳಿ ಫ್ರೆಂಡ್‍ಶಿಪ್ ಮಾಡ್ಕೊಂಡು ಎಂತೆಲ್ಲಾ ಪ್ರಾಫಿಟ್ ಈತ ಮಾಡಿಕೊಳ್ಳಲಿಕ್ಕುಂಟು. ಕೇರಳ ಕೊಟ್ಟಾಯಂ ಗಾಂಧಿ ವಿವಿಯ ಕುಲಪತಿ ಆಗಿದ್ದುಂಟಲ್ಲವೋ! ಪುಣೆ ಫೀಲಂ ಇನ್ ಸ್ಟಿಟ್ಯೂಟ್ ಚೇರ್ಮನ್ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರೆಸಿಡೆಂಟ್, ನ್ಯಾಶನಲ್ ಬುಕ್ ಟ್ರಸ್ಟ್‍ನ ಪ್ರೆಸಿಡೆಂಟ್, ಡಾಲರ್ ಕಾಲನಿ ಬಂಗ್ಲೆ ಹೊಡ್ಕಂಡು ಯಡವಟ್ ಮಾಡಿಕೊಂಡದ್ದುಂಟಲ್ಲವೋ, ಹೆಗಡೆ ಜೊತೆ ರೋಮಾನ್ಸು ಜೆ.ಎಚ್. ಪಟೇಲನ ಜೊತೆ ಡ್ರಿಂಕ್ಸ್ ವಿಗ್ ಕೃಷ್ಣನ ಸಂಗಡ ಬಾಲ್‍ಡ್ಯಾನ್ಸ್ ಮೊಯ್ಲಿ ರಾಮಾಯಣದ ಪಾರಾಯಣ ಮಾಡುತ್ತಾ ಎಲ್ಲರ ಡಾರ್ಲಿಂಗ್ ಅಗಿ ಬರೆದ್ದಕ್ಕಿಂತ ಸಮಾಜವಾದಿ ಹೆಸರಲ್ಲಿ ಮಜ ಮಾಡಿದ್ದುಂಟು ಹೌದಲ್ಲೋ? ಸದಾ ಇಸ್ಮೈಲ್ ಹೆಣ್ಣಿನ ಸ್ಟೈಲು ಪ್ರಶಾಂತವಾಗಿ ಭಾಷಣ ಬಿಗಿಯುತ್ತಾ ಹೋರಾಟಕ್ಕಿಳಿಯದೆ ಶಾಂತಿದೂತನಂತೆ ದೇಶ ವಿದೇಶಗಳನ್ನು ಸುತ್ತಿದ ಏಕೈಕ ವರಲ್ಡ್ ಫೇಮಸ್ ಸಾಹಿತಿಯಾದ ತನಗೆ ‘ನೋಬೆಲ್ ಪ್ರಶಸ್ತಿ’ ಬರೆದದ್ದಕ್ಕೆ ಪ್ರಶಸ್ತಿಗೆ ’ನೋ ಬೆಲೆ’ ಎಂದು ಸಾರಿದ್ದುಂಟು. ತುಂಗಾ ಮೂಲ ಉಳಿಸಿ, ಗಣಿಗಾರಿಕೆ ನಿಲ್ಲಿಸಿ ಅಂತ ಒಂದಿಷ್ಟು ಕಾಲ ಬಡಬಡಿಸಿದ್ದುಂಟು. ನಾನು ಸತ್ತ ತರುವಾಯ ನನ್ನ ಬುಕ್ಸ್ ಜೊತೆ ಓದಲಿಕ್ಕುಂಟು ಕೊಮಾರರಾಮ ಪಟ್ಟದಿಂದ ಇಳಿದನೆಂದರೆ ಮಂಜುನಾಥನಾಣೆ ನಮ್ಮಜನ ಮರಿಲಿಕ್ಕುಂಟು ಮಾರಾರ್ಯ್ರೆ ಎಂದು ಚಂಡೆಮದ್ದಳೆ ಬಾರಿಸುತ್ತಾ ಬ್ಯಾಗ್ ನೇತುಹಾಕ್ಕೊಂಡು ಶಾಸಕರ ಮನೆ ಬಾಗಿಲಿಗೆ ಬಿಸಿಲಲ್ಲಿ ಅಲೆದರೂ ಮಂಡೆ ಬಿಸಿಮಾಡಿಕೊಳ್ಳದ ಗಟ್ಟಿಕುಳ. ಪ್ರಗತಿಪರ ಸಾಹಿತಿಗಳ ಸಾರಾಸಗಟು ಸಪೋಲ್ಟ್ ಇದ್ದರೂ ಓಟೇ ಹೊತ್ತಂಗಿಲ್ವೆ. ಹರಕು ಬಾಯಿ ಚಂಪಾನಿಗೆ “ಚೇಳು” ಎಂಬ ಬಿರುದು ದಯಪಾಲಿಸಿದ ಮೂರ್ತಿ; ದೇಜಗೌ ಮಂಡೆ ಸರಿಯಿಲ್ಲವೆಂಬ ಡಯಾಗನೈಸ್ ಮಾಡಿದ್ದುಂಟು. ನನಗೆ ಶಾಸಕರು ಓಟು ಹಾಕಲು ಆಗದಿಲ್ಲೆ ಎಂದರೆ ಅದು ನನ್ನ ಸೋಲಲ್ಲ ಕನ್ನಡಮ್ಮನ ಸೋಲು ವೀರಕನ್ನಡಿಗರ ಸೋಲು ಎಂದೀಗಾಗಲೆ ಸೋಲಿನ ರಾಗ ಗ್ಯಾರಂಟಿ ಎಂದೇ ಹಾಡುತ್ತಿರುವ ಮೂರ್ತಿ ಐದುಸಾವಿರ ಬಂಡವಾಳ ಹಾಕಿದ್ದಾರಂತೆ. ಕೋಟಿಗಟ್ಟಲೆ ಗೋಣಿಚೀಲದಲ್ಲಿ ತುಂಬಿಕೂಂಡೇ ಬಂದಿರೋ ರಾಜೀವ ಚಂದ್ರಶೇಖರನೆಂಬ ಉದ್ಯಮಿಗೆ ಗೋಡ್ರು ಈಗಾಗ್ಲೆ ಆಶಿರ್ವಾದ ಮಾಡಿದ್ದರಿಂದ ಮೂರ್ತಿ ಗೋಡ್ರ ಬಾಗ್ಲಾಗೆ ವೆಯಿಟ್ ಮಾಡಿದ್ರೂ ಬ್ಲೆಸಿಂಗ್ ಮಿಸ್ಸಾತು. ಕೋಟಿಗಟ್ಟಲೆ ಎಸೆದು ಶಾಸಕರನ್ನು ಕೊಂಡುಕೊಳ್ಳುವ ಇತಿಹಾಸ
ಕನ್ನಡ ರಾಜಧಾನಿಗೈತೆ. ಹೆಗಡೆ ರಿಲೇಶನ್ನು ಜೇಠ್ಮಲಾನಿ, ವಿಗ್ ಕೃಷ್ಣನ ಮಲ್ಯ, ಗೋಡ್ರ ಸಪೋಲ್ಟ್ ಮ್ಯಾಗೆ ನಿಂತ ತಮಿಳಿನ ರೇಸ್ ಕುದ್ರೆ ರಾಮ್ಸಾಮಿ, ಬಿಜೆಪಿ ಪರಮಾಪ್ತ ತೆಲುಗಿನ ನಾಯ್ಡು ಇವರೆಲ್ಲಾ ರಾಜ್ಯ ಸಭೆಗೆ ನಿಂತಾಗ ಈ ಮೂತ್ರಿಗಿಲ್ಲದ ಕನ್ನಡಾಭಿಮಾನ ಈಗೆಂತಕ್ಕೆ ಮಾರಾಯ್ರೆ ದಿಢೀರಂತ ಉಕ್ಕಿದ್ದುಕೆ ಬುರುನಾಸು ತಂದು ಶಪಿಸ್ತಾ ಅವರೆ ಶಾಸಕ ಗಿರಾಕಿಗಳು. ಕಾಂಗ್ರೆಸ್ ಸಿದ್ದು ಗ್ಯಾಂಗ್ ಮಜಾ ತಗೋತಿವೆ. ತನ್ನ ಪರಮನೆಂಟ್ ಟೋಪಿ ಕರಿಕನ್ನಡದಲ್ಲಿ ಬಾಚಿ ಹಲ್ಲು ಕಿಸಿದ ವಾಟಾಳ್, ಕನ್ನಡಕ್ಕೆ ದ್ರೋಹ ಬಗೆದ ಶಾಸಕರ ಹೊಟ್ಟೆನಾ ಬಗೆದು ಇಂಟಸ್ಟೈನ್ನಾ ಕೊಳ್ಲಿಗೆ ಹಾಕ್ಕಂತೀನಿ ನರಸಿಂಹಾವತಾರ ತಾಳವನೆ. ಕಡೆಗೊ ಜೆಡಿಎಸ್ ಅಧ್ಯಕ್ಷ ಪಟ್ಟ ಗಿಟ್ಟಿಸಿದ ಹಾಲಿ ಸಾಹಿತಿ ಮಾಜಿ ಡಿಸಿಎಂ ಪ್ರಕಾಶುಗೆ ಗೋಡ್ರ ಮೇಲಾಸ್ ಅನಂತಮೂರ್ತಿ ಮೇಲೆ ಪ್ರೀತಿ. ಅನಂತೂಗೆ ಓಟು ಹಾಕಿದ್ರೆ ಗೋಡ್ರೆಲ್ಲಾರ ಸೆಟ್ಕಂಡ್ರೆ ಎಂಬ ಫೀಯರ್ರು. ಅಂಡ್ ದೆನ್ ಕೊಮಾರನ ಫೀಯರ್ರೂ ಉಂಟು. ಈ ಅನಂತಮೂತ್ರಿ ಕನ್ನಡದ ಹೆಸರ್ನಾಗೆ ಓಟು ಕೇಳಬಾರದೆಂಬ ಠರಾವು ಮಂಡಿಸುವ ಕೊಮಾರ ತನ್ನ ಜಾತಿ ಹೆಸರ್ನಾಗೇ ಅಲ್ವೆ ಓಟು ಕೇಳಿ ವಿನ್ ಆಗಿದ್ದು? ಇವರ ಅಪ್ಪಂಗೆ ರೈತರ ಹೆಸರೇ ದಿವ್ಯಮಂತ್ರ ಕಾಂಗ್ರೆಸ್ ನೋವ್ಕೆ ಅಲ್ಲಸಂಖ್ಯಾತರು ದಲಿತರದ್ದೇ ಸ್ತೋತ್ರ. ಬಿಜೆಪಿನೋರು ಗೆಲ್ಲೋಕೆ ಬೇಕೆಬೇಕು ಶ್ರೀರಾಮಮಂತ್ರ. ಹಿಂಗಿರೋವಾಗ ಕನ್ನಡ ಕಂಠೀರವನ ವೇಷ ಇದೀಗ ತೊಟ್ಟಿ ಅನಂತಮೂತ್ರಿಗೆ ಕನ್ನಡವೇ ಮಂತ್ರ ತಂತ್ರ ಯಾಕಾಗಬಾರದು? ಅಂತ ಕೂಚ್ಚನ್ ಮಾಡ್ತಾ ಬುದ್ಧಿಜೀವಿಗಳ ಹಿಂಡೇ ಬ್ಯಾಕ್‍ಡ್ರಾಸ್ನಾಗೆ ನಿಂತು ದಿನಾ ಕೂಗಾಡಿ ಸುದ್ಧಿಜೀವಿಗಳಾಗ್ಲಿಕತ್ತಾರ್ರಿ. ಮೂರ್ತಿಗೆ ಸ್ಪರ್ಧೆಯಿಂದಾಗುವ ಸೋಲು ಅಂಬೋ ಲಾಭ ಬಿಟ್ಟರೆ ಲಾಭ ಆಗೋದು ಆತ್ಮಸಾಕ್ಷಿಯೇ ಇಲ್ಲದ ಶಾಸಕರಿಗೆ. ಅವರಿಗೆ ಡಬ್ಬಲ್‍ರೇಟ್ ಸಿಗೋ ಹಂಗೆ ಮಾಡಿದ್ದಷ್ಟೇ ಅನಂತನ ಅವಾಂತರವಾಗೇತ್ ನೋಡ್ರಿ. ನಮ್ಮ ಕನ್ನಡ ಜನಗಳು ಹುಟ್ಟಿದಾಗಿಂದ್ಲೂ ನಿರಾಭಿಮಾನಿಗಳು ಸೋಲು ನಿರಾಶಗೆ ಒಗ್ಗಿ ಹೋಗವ್ರೆ. ಇರೋ ನೆಲ ಜಲನೆಲಾ ಪಕ್ಕದ ನಾಡಿನೋರು ಕಿತ್ಕೊಂಡರೂ ಅಷ್ಟೇನು ಮಂಡೆ ಬಿಸಿಮಾಡಿಕೊಳ್ಳದ ತಣ್ಣನೆಯ ಮಂದಿ. ಇಂಥವರನ್ನು ಬಡಿದೆಬ್ಬಿಸಿದ ವೈಟ್ ಕಾಲರ್ಸ್ ಕಂಟ್ರಿಕಲ್ಚರ್ಡ್ ಫಾರಿನ್ ರಿಟಂಡ್ ಟಾಲರ್ ಕಾಲೋನಿ ಡೈಮಂಡ್, ಲಿಟರರಿ ಬಿಗ್ ಬುಲ್ ಮಾರಲ್ ವ್ಯಾಲ್ಯೂಸ್‍ನಲ್ಲಿ ಸಿಂಪ್ಲಿ ಸ್ಮಾಲ್ ಎಂದೆಲ್ಲಾ ಕ್ರಿಟಿಕ್‍ಗೆ ಗುರಿಯಾದ ಮೂರ್ತಿ ಜ್ಞಾನಪೀಠಿಯಾದಷ್ಟು ಈಸಿಯಾಗಿ ರಾಜ್ಯಸಭಾ ಪೀಠಿ ಯಾಗ್ಲಿಕ್ಕಿಲ್ಲ ಅಂಬೋ ಮಾತಿನ್ಯಾಗಂತೂ ಯಾರಿಗೇನ್ ಡವುಟಿಲ್ಲ ಬಿಡ್ರಿ. ಅದೆಂಗಾರ ಇರ್ಲಿ, ಕನ್ನಡ ಮನಸ್ಸುಗಳನ್ನ ಬಡಿದೆಬ್ಬಿಸಿದ ಮೂರ್ತಿಯ ಸೋಲಿನಿಂದಾದರೂ ಕನ್ನಡಿಗರು ಪಾಠ ಕಲಿತಾರೆಯ ಅಂಬೋದೀಗ ಮಿಲಿಯನ್ ಡಾಲರ್ ಪ್ರಶ್ನೆಯಾಗೇತೆ ಯಾಕಂದ್ರೆ ನಮ್ಮೋರು ನವಂಬರ್ ಕನ್ನಡಿಗರು.
*****
ದಿ. ೦೩-೦೪-೨೦೦೬