ಸೂರ್ಯ ಮುಳುಗುವ ಹೊತ್ತು ಶಾಸಕ ಸೂರಪ್ಪ ಹತ್ತುಕೋಟಿಗೆ ಮಾರಾಟವಾದ ಬಿಸಿ ಬಿಸಿ ಸುದ್ದಿಯೊಂದು ಕಿವಿಯಿಂದ ಕಿವಿಗೆ ತೂರಿ, ಮನಸ್ಸಿಗೂ ಜಾರಿ ಭರತಪುರದಲ್ಲಿ ತಲ್ಲಣ ಸೃಷ್ಟಿಸಿತು. ಜನ ಸೇರಿ ಗುಂಪಾದಲ್ಲಿ ಈ ಸುದ್ದಿ ವಿಚಿತ್ರ ತಿರುವು ಪಡೆದುಕೊಳ್ಳುತ್ತ ಕುತೂಹಲದ ಮೊಟ್ಟೆಯಾಗಿ ರೂಪಾಂತರ ತಾಳಿತು. ‘ಅದು ನಿಜ ಸಂಗತಿ’, ‘ಅಲ್ಲಾ ಅದು ಬರಿ ವದಂತಿ’, ‘ಸೂರಪ್ಪ ಅಂಥ ಮನುಷ್ಯ ಅಲ್ಲ, ಇದು ನೀಲಿಗೆಟ್ಟ ಸುದ್ದಿ’ ಎಂಬಂಥ ಮಾತು ಪುಂಖಾನುಪುಂಖಾಗಿ ಜನರಿಂದ ಕೇಳಿ ಬರತೊಡಗಿದವು. ‘ಯಾವ ಹುತ್ತಿನಲ್ಲಿ ಯಾವ ಹಾವೋ!’ ಎಂದು ಮೊಗಮ್ಮಾಗಿ ಮಾತಾಡಿ ಸುದ್ದಿಯನ್ನು ಜೀವಂತವಾಗಿಟ್ಟರು.
ಮೋನಪ್ಪ ದೇಸಾಯರ ಕಿವಿಗೂ ಈ ಸುದ್ದಿ ತಾಕಿತಾದರೂ ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಅವರ ಮನಸ್ಸು ಇರಲಿಲ್ಲ. ಸೂರಪ್ಪ ಅಂತ ಕ್ಷುದ್ರ ಮನುಷ್ಯನಾಗಲು ಸಾಧ್ಯವಿಲ್ಲವೆಂದು ಅವರ ಆತ್ಮ ಹೇಳತೊಡಗಿತ್ತು. ಇವತ್ತಿನ ರಾಜಕೀಯ ಮತ್ತು ರಾಜಕಾರಣಿಗಳ ತಂತ್ರಗಳ ಸೂಕ್ಷ್ಮ ಅವರ ಪ್ರಜ್ಞೆಗೆ ನಿಲುಕಿದ್ದೇ ಆಗಿತ್ತು. ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತಾಡುವ ರಾಜಕಾರಣಿಗಳು ಒಡಲಾಳದಲ್ಲಿ ವೈರತ್ವವನ್ನು ಬೆಚ್ಚಗಿಟ್ಟುಕೊಂಡವರು, ಪರಸ್ಪರರನ್ನು ತುಳಿಯುವ ಸಂಚಿನ ಬಲೆಯನ್ನು ನೆಯ್ಯುವರು. ಈ ಸುದ್ದಿ ಕೂಡಾ ಅದರ ಒಂದು ಎಳೆಯೇ ಆಗಿರಬಹುದೆಂದು ಅವರು ಅಂದುಕೊಂಡಿದ್ದರು.
ಮೋನಪ್ಪ ಹಾಗಂದುಕೊಳ್ಳುವುದಕ್ಕೂ ಕಾರಣವಿತ್ತು. ಸೂರಪ್ಪ ಅವರ ಮಾನಸ ಪುತ್ರನಾಗಿದ್ದ. ಹುಡುಗನಾಗಿದ್ದಾಗಿಂದ ಅವನು ಅವರ ಪ್ರಭಾವಕ್ಕೆ ಒಳಗಾಗಿ ಬೆಳೆದವನು. ಭರತಪುರದ ಸಾರ್ವಜನಿಕ ಜೀವನದಲ್ಲಿ ಮೋನಪ್ಪ ಪರಿಶುದ್ಧ ವ್ಯಕ್ತಿತ್ವದಿಂದ ಕಂಗೊಳಿಸಿದವರು. ಅವರದು ದೇಸಾಯಿ ಮನೆತನ, ಅವರ ತಂದೆ ದಯಾನಂದ ದೇಸಾಯಿ ಐದಾರುನೂರು ಕೂರಿಗೆ ನೆಲದೊಡೆಯರಾಗಿದ್ದರು. ಹತ್ತಾರು ಹಳ್ಳಿಗಳ ಪ್ರಭುತ್ವ ಹೊಂದಿದ್ದರು. ಗಾಂಧೀಜಿ ಸ್ವಾತಂತ್ರ್ಯ ಹೋರಾಟಕ್ಕಾಗಿ ದೇಶ ಸುತ್ತಾಡುವ ಸಂದರ್ಭ – ದಯಾನಂದ ದೇಸಾಯಿ ಅವರ ಪ್ರಭಾವಕ್ಕೂಳಗಾಗಿದ್ದರು. ಭರತಪುರಕ್ಕೆ ಬಾಪೂಜಿಯವರನ್ನು ಕರಯಿಸಿಕೊಂಡು ತಮ್ಮ ತಾಯಿ ಹೆಂಡತಿಯ ಮೈಮೇಲಿನ ಬಂಗಾರದ ದಾಗೀನುಗಳನ್ನು ನೀಡಿದ್ದರು. ಅವರ ಸಮಕ್ಷಮವೇ ಭೂಮಿಗಳನ್ನು ಉಳುವವರ ಒಡೆತನಕ್ಕೊಪ್ಪಿಸಿ ಔದಾರ್ಯ ಮೆರೆದಿದ್ದರು.
ಗಾಂಧೀಜಿ ಅವರಂತೆ ಸರಳ ಬದುಕನ್ನು ಇಚ್ಛಿಸಿದ ಅವರು, ವಿಲಾಸಿ ಬಟ್ಟೆಗಳನ್ನು ಸುಟ್ಟು ಹಾಕಿ ಮೈಮೇಲೆ ಖಾದಿ ಧರಿಸಿದ್ದರು. ತಲೆಯ ಮೇಲೆ ಶುಭ್ರ ಗಾಂಧೀ ಟೊಪ್ಪಿಗೆ! ಅದನ್ನು ಸ್ವತಃ ಗಾಂಧೀಯವರೇ ದಯಾನಂದರ ತಲೆಗೆ ತೊಡಿಸಿದ್ದರೆಂಬ ಪ್ರತೀತಿ. ಉದಾತ್ತ ಧ್ಯೇಯ ಉದ್ದೇಶಗಳ ಸಾಕ್ಷಿಪ್ರಜ್ಞೆಯಾದ ಗಾಂಧೀ ಟೊಪ್ಪಿಗೆಯ ಖದರ್ ಎಂದರೆ ಖದರ್. ದಯಾನಂದರು ಅದನ್ನು ಯಾವಾಗಲೂ ನೀಟಾಗಿ ಧರಿಸುತ್ತಿದ್ದರು. ಅದು ಸತ್ಯ, ದೇಶಪ್ರೇಮದ ಸಂಕೇತವೆಂದು ಅವರಿಗೆ ಅಪರಿಮಿತ ಗೌರವ. ಸ್ವಾತಂತ್ರ್ಯ ಆಂದೋಲನದಲ್ಲಿ ಪಾಲ್ಗೊಳ್ಳುವ ಉತ್ಕಟ ಹಂಬಲವನ್ನು ಅವರ ಎದೆನೋವು ತಡೆದು ನಿಲ್ಲಿಸಿತ್ತು. ಆದರೆ ಇಂಗ್ಲೇಂಡಿನಲ್ಲಿ ಓದುತ್ತಿದ್ದ ಮಗ ಮೋಹನಬಾಬು ಅವರನ್ನು ಹಿಂದಕ್ಕೆ ಕರಯಿಸಿಕೊಂಡು, ಅವರ ತಲೆಗೆ ಗಾಂಧೀ ಟೊಪ್ಪಿಗೆ ಇರಿಸಿ ಚಳುವಳಿಯಲ್ಲಿ ಧುಮುಕಿಸಿದ್ದರು.
ದೇಶ ಸ್ವಾತಂತ್ರ್ಯದ ಸಂಭ್ರಮ ಅನುಭವಿಸುವಾಗ ದಯಾನಂದರು ಇರಲಿಲ್ಲ. ನಂತರದಲ್ಲಿ ಗಾಂಧೀಜಿ ಕೂಡಾ ಹತ್ಯಗೊಳಗಾದರು. ತಂದೆ ಮತ್ತು ಗಾಂಧಿ ನೆನಪು ಮೋನಪ್ಪ ದೇಸಾಯಿಯವರ ಆಂತರ್ಯದಲ್ಲಿ ಗಾಢಗೊಂಡು, ಅದು ಅವರನ್ನು ಗಾಂಧೀವಾದಿಯನ್ನಾಗಿ ರೂಪಿಸಿತ್ತು. ಜನರು ಅವರನ್ನು ಮೋನಪ್ಪ ಎಂದು ಪ್ರೀತಿಯಿಂದ ಕರೆದು ಗೌರವಿಸುತ್ತಿದ್ದರು. ಮೋನಪ್ಪರೊಂದಿಗೆ ಮಹಾತ್ಮಗಾಂಧೀ ಕೂಡಾ ಜೀವಂತವಾಗಿದ್ದರು.
ಸೂರಪ್ಪ ಗಾಂಧೀಜಿಯನ್ನು ನೋಡಿದವನಲ್ಲ. ಆದರೆ ಗಾಂಧೀ ಎಂದರೆ ಅದೇನೋ ಮೋಹ, ಅಗಾಧ ಪ್ರೀತಿ, ಅಭಿಮಾನ. ಮೋನಪ್ಪ ದೇಸಾಯಿಯವರ ಸಂಪರ್ಕದಲ್ಲಿ ಬರದಿದ್ದರೆ ಸೂರಪ್ಪನಿಗೆ ಗಾಂಧಿ ಅರ್ಥವಾಗುತ್ತಿರಲಿಲ್ಲ. ಅವನು ಮಿಠಾಯಿ ವ್ಯಾಪಾರಿಯಾದ ಕುಬೇರಪ್ಪನ ಮಗ. ಆಂಧ್ರದ ಆದವಾನಿ ಕಡೆಯ ಕುಬೇರಪ್ಪ ಭರತಪುರಕ್ಕೆ ವಲಸೆ ಬಂದಿದ್ದ. ಹೊಟೇಲ್ ಕೆಲಸವು ಸ್ವಂತದ ಮಿಠಾಯಿ ದಂಧೆಯೆಂದು ಶ್ರಮಪಟ್ಟು ಬದುಕಿನ ನೆಲೆ ಹುಡುಕಿಕೊಂಡಿದ್ದ. ಮನಸ್ಸಿನಿಂದ ಒಳ್ಳಯವನೆ. ರಸಿಕನಾದ ಅವನಿಗೆ ಇಬ್ಬರು ಹೆಂಡತಿಯರು. ಬಣ್ಣ ಮತ್ತು ಚೆಲುವಿನಲ್ಲಿ ಅವನನ್ನು ನಿವಾಳಿಸಿ ಒಗೆಯುವಂತಿದ್ದರು. ಅವರು ಅವನ ಹಾಲಿ ಹೆಂಡತಿಯರೆಂದು ಜನ ಕರೆಯುತ್ತಿದ್ದರು. ಸೌಂದರ್ಯದ ಅಥವಾ ವಯಸ್ಸಿನ ಕಾರಣದಿಂದ ಕುಬೇರಪ್ಪ ಇಬ್ಬರು ಹೆಂಡತಿಯರಿಗೆ ಡ್ಯೆವರ್ಸ್ ಕೊಟ್ಟು ಓಡಿಸಿದ್ದನೆಂದು ಆ ಹೆಂಡತಿಯರಲ್ಲೊಬ್ಬಳ ಮಗನೇ ಸೂರಪ್ಪ ಯಾನೆ ಸೂರ್ಯಪ್ರಕಾಶನೆಂದು ಜನ ರೋಚಕವಾಗಿ ಆಡಿಕೊಳ್ಳುತ್ತಿದ್ದರು. ರಾಜಕೀಯದ ತೆವಲಿದ್ದ ಕುಬೇರಪ್ಪ ಒಮ್ಮೆ ಪುರಸಭೆಯ ಸದಸ್ಯನೂ ಆಗಿದ್ದ. ಮೋನಪ್ಪ ದೇಸಾಯಿಯವರ ಬಗ್ಗೆ ಅವನಿಗೆ ತುಂಬಾ ಆದರ ಗೌರವಗಳಿದ್ದವು.
ತಂದೆಯ ವರ್ಚಸ್ಸು ಮತ್ತು ಮಿಠಾಯಿ ಬಿಜಿನೆಸ್ಸಿನ ಆಡುಂಬೊಲದಲ್ಲಿ ಸೂರಪ್ಪ ಹೈಸ್ಕೂಲ್ ಮೆಟ್ಟಲೇರಿ, ಆರನೆಯ ಛಾನ್ಸಿಗೆ ಪಾಸಾಗಿ, ಪಿಯುಸಿಗೆ ಮಣ್ಣು ಹೊತ್ತಿರಬೇಕಾದರೆ, ಕುಬೇರಪ್ಪ ಮಗನ ಮೇಲೆ ಎಗರಾಡಿ, ಆಂಧ್ರದ ಕಡೆಗೆ ಓಡಿಸುವ ಧಾವಂತದಲ್ಲಿದ್ದಾಗ ಭರತಪುರವನ್ನು ಬಿಡಲೊಪ್ಪದ ಸೂರಪ್ಪ ವಾಡೆಗೆ ಬಂದು ಮೋನಪ್ಪ ದೇಸಾಯಿಯವರ ಕಾಲು ಹಿಡಿದು ಅಳುತ್ತ ಕುಳಿತಿದ್ದ.
ಅವನ ಬಗ್ಗೆ ಅನುಕಂಪ ಹುಟ್ಟಿಸಿಕೊಂಡ ಮೋನಪ್ಪ, ವಾಡೆಗೆ ಕುಬೇರಪ್ಪನನ್ನು ಕರಯಿಸಿಕೊಂಡು, ಮಗನ ಬಗೆಗಿದ್ದ ಅವನ ಅಸಮಾಧಾನವನ್ನು ಕರಗಿಸಿದ್ದರು. ಕೆಲವು ದಿನಗಳ ಮಟ್ಟಿಗೆ ಸೂರಪ್ಪನನ್ನು ತಮ್ಮ ಬಳಿ ಇರಿಸಿಕೊಂಡು ಬದುಕಿನ ಪಾಠ ಹೇಳಿ ಕೊಟ್ಟಿದ್ದರು. ಸೂರಪ್ಪನೊಳಗೆ ಗಾಂಧೀಜಿ ತುಂಬಿಕೊಂಡದ್ದು ಆಗಲೇ. ಮೋನಪ್ಪ ದಿನಕ್ಕೆ ನೂರಾರು ಸಲವಾದರೂ ಗಾಂಧೀಜಿಯವರನ್ನು ಸ್ಮರಿಸಿಕೊಳ್ಳುವರು. ವಾಡೆಗೆ ಬರುವ ಜನರೆದುರು ಗಾಂಧೀ ಸತ್ಯಾಗ್ರಹ, ಅಹಿಂಸಾತ್ಮಕ ಹೋರಾಟ, ಅವರೊಂದಿಗೆ ಕಳೆದ ಕ್ಷಣಗಳನ್ನು ಸಂಭ್ರಮವೋ ಸಂಭ್ರಮ ಎಂಬಂತೆ ಹೇಳಿಕೊಳ್ಳುವರು. ‘ಗಾಂಧೀ ಇಲ್ಲದ ಈ ದೇಶವನ್ನು ನೋಡುವುದು ನನ್ನ ದೌರ್ಭಾಗ್ಯ’ ಎಂದು ತಹತಹಿಸುವರು.
ಸೂರಪ್ಪನಿಗೆ ದೇಸಾಯಿಯವರ ಸಾಮೀಪ್ಯದ ಕ್ಷಣಗಳು ತೀರ ಆಪ್ಯಾಯಮಾನ ಅನಿಸಿದ್ದವು. ಎಂಬತ್ತರ ಪ್ರಾಯದ ಅವರ ಪಾದರಸದ ಲವಲವಿಕೆ, ಕಲ್ಲನ್ನು ಕೂಡಾ ಹೂವಾಗಿ ಅರಳಿಸುವ, ಮಾನವೀಯತೆ ಅವರ ಮಾತು, ಸಲಹೆ ಸೂಚನೆಗಳು ದೇಶದ ಹಿತ ಮತ್ತು ಬಡವರ ಸೌಖ್ಯದ ಪರವಾಗಿದ್ದು ರಾಜಕಾರಣಿಗಳಿಗೆ ದಿಕ್ಸೂಚಿಯಾಗಿದ್ದವು. ರಾಷ್ಟ್ರ ಮತ್ತು ರಾಜ್ಯ ರಾಜಕೀಯದಲ್ಲಿ ಮೋನಪ್ಪ ದೇಸಾಯಿ ಸಕ್ರಿಯರಾಗಿರಬೇಕೆಂಬ ಒಲವು ಬಹಳಷ್ಟು ಮಂದಿಯದಾಗಿತ್ತು. ಅವರ ಒತ್ತಾಸೆಗೆ ಸೋಲದೆ ಮೋನಪ್ಪ ದೇಸಾಯಿ ಅಪ್ಪಟ ಗಾಂಧೀವಾದಿಗಳಾಗಿ ಉಳಿದುಕೊಂಡಿದ್ದರು. ಅದಕ್ಕಾಗಿ ಅವರು ಎಲ್ಲರೆದರೂ ವಿಜೃಂಭಿಸಿದ್ದರು.
ಅವರಲ್ಲಿಗೆ ಬರುತ್ತಿದ್ದ ರಾಜಕಾರಣಿಗಳನ್ನು ಸೂರಪ್ಪ ಬೆರಗುಗಣ್ಣುಗಳಿಂದ ನೋಡುತ್ತಿದ್ದ. ಅವರ ರಾಜಕೀಯ ವರಸೆಗಳಿಂದ ಥ್ರಿಲ್ ಅನುಭವಿಸುತ್ತಿದ್ದ. ದೇಸಾಯಿ ಅವನನ್ನು ರಾಜಕಾರಣಿಗಳಿಗೆ ಪರಿಚಯಿಸುತ್ತಿದ್ದರು. ಆದರೆ ಒಂದಿನ ಅಪ್ಪನ ವ್ಯವಹಾರ ನೋಡಿಕೊಂಡಿರು ಎಂದು ಅವನನ್ನು ಕಳಿಸಿಕೊಟ್ಟಿದ್ದರು.
ಗಾಡಿ ತಳ್ಳಿಕೊಂಡು ಮಿಠಾಯಿ ವ್ಯವಹಾರ ಪ್ರಾರಂಭಿಸಿದ ಸೂರಪ್ಪ ನೋಡುತ್ತಿರುವ ಹಾಗೆ ಬೆಳೆದುಬಿಟ್ಟ. ವಿನಯದ ಮಾತು, ಪ್ರಾಮಾಣಿಕ ಮತ್ತು ಧಾರಾಳತನದ ವ್ಯವಹಾರ, ಜನಗಳೊಂದಿಗಿನ ಮಧುರ ಸಂಬಂಧಗಳು ಅವನ ವ್ಯಕ್ತಿತ್ವಕ್ಕೆ ಬೆರಗಿನ ಗರಿ ಮೂಡಿಸಿದ್ದವು. ಕುಬೇರಪ್ಪನಿಗೆ ಆರು ಜನ ಗಂಡು ಮಕ್ಕಳು, ಅವರೆಲ್ಲರೂ ವ್ಯವಹಾರ ಚತುರರಾಗಿದ್ದರು. ಸೂರಪ್ಪ ಅವರಿಗೆ ಕಳಶಪ್ರಾಯನಾಗಿ ಕುಬೇರಪ್ಪನಿಗೆ ಖುಷಿ ತಂದಿದ್ದ.
ಸೂರಪ್ಪ ಊರಿನಲ್ಲಿ ಜನಪ್ರಿಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಕ್ಕೆ ದೇಸಾಯಿಯವರು ಸಂತಸ ಪಟ್ಟಿದ್ದರು.
ಆ ದಿನ ಏಕಾಏಕಿ ವಾಡೆಗೆ ಬಂದ ಸೂರಪ್ಪ ‘ನಾನು ರಾಜಕೀಯ ಸೇರ್ತೀನಿ ಪುರಸಭಾ ಇಲೆಕ್ಷನ್ನಿಗೆ ನಿಲ್ತೀನಿ. ಆಶೀರ್ವಾದ ಮಾಡ್ರಿ’ ಅಂದು ಕಾಲು ಹಿಡಿದು ಕುಳಿತಿದ್ದ. ಬೇಸರ ಮಾಡಿಕೊಂಡ ದೇಸಾಯಿ ‘ಈಗ ನೀನು ಒಬ್ಬ ಮನುಷ್ಯಾ ಆಗಿ, ಮತ್ಯಾಕೋ ಹಾಳಾಗೋ ವಿಚಾರ. ರಾಜಕಾರಣ ಅಂದ್ರ ಹುಡುಗಾಟಲ್ಲ. ಹೋಗು ಮನೆ ಹಿಡಿದು ಬಾಳುವೆ ಮಾಡ್ಕೊಂಡಿರು’ ಎಂದು ನಿಷ್ಠುರವಾಗಿ ಹೇಳಿ ಕಳಿಸಿದ್ದರು.
ಮರುದಿನ ತನ್ನ ವಾರಿಗೆಯ ಹತ್ತೆಂಟು ಹುಡುಗರೊಂದಿಗೆ ಬಂದ ಸೂರಪ್ಪ ತನ್ನ ಇಚ್ಛಾಶಕ್ತಿಯನ್ನು ವ್ಯಕ್ತಪಡಿಸಿದ್ದ. ಆಗಲೂ ಮೋನಪ್ಪ ‘ರಾಜಕೀಯ ದೊಂಬರಾಟ ಎಲ್ಲರಿಗೂ ಒಗ್ಗುವುದಿಲ್ಲ ತಂತಿ ಮ್ಯಾಲಿನ ಸೂಕ್ಷ್ಮದಂಗ ಅದರ ನಡಿಗಿ’ ಅಂದಿದ್ದರು. ಎಂಟು ದಿನದ ಮೇಲೆ ಸೂರಪ್ಪ ತನ್ನ ವಾರ್ಡಿನ ಗಂಡಸರು ಹೆಂಗಸರನ್ನು ದೇಸಾಯರ ಬಳಿಗೆ ಕಳಿಸಿದ್ದ. ಬಂದವರು ‘ನಮ್ಮ ವಾರ್ಡಿನ ಮೆಂಬರ್ ಆಗಲಿಕ್ಕೆ ಸೂರಪ್ಪ ಸಮರ್ಥ ಅದಾನ್ರಿ ಧಣೇರ. ನಾವೆಲ್ಲ ಅವನಿಗ ಓಟು ಕೊಟ್ಟು ಗೆಲ್ಲಸ್ತೀವಿ. ನಿಮ್ಮ ಆಶೀರ್ವಾದ ಇಲ್ಲಂದ್ರ ಸೂರಪ್ಪ ಇಲೆಕ್ಷನಕ್ಕೆ ನಿಲ್ಲುವುದಿಲ್ಲ’ ಎಂದು ಒಕ್ಕೂರಲಿದ್ದರು.
ಮಗ ರಾಜಕೀಯ ಸೇರಲು ಕುಬೇರಪ್ಪನೂ ಇಚ್ಛಿಸಿದ. ಕೊನೆಗೂ ಮೋನಪ್ಪ ದೇಸಾಯಿ ಚುನಾವಣೆಗೆ ನಿಲ್ಲಲು ಸೂರಪ್ಪನಿಗೆ ಹಸಿರು ನಿಶಾನೆ ತೋರಿಸಿದ್ದರು.
ಸೂರಪ್ಪ ಅಧಿಕ ಮತಗಳಿಂದ ಗೆದ್ದು ಬಂದಾಗ ಮೋನಪ್ಪ ಸಂಭ್ರಮಿಸಿದ್ದರು. ‘ನಿನ್ನಂಥ ಹುಡುಗರು ನಮ್ಮ ದೇಶದ ಭರವಸೆ! ಹುಚ್ಚಿಗೆ ರಾಜಕಾರಣ ಮಾಡಬ್ಯಾಡ. ಜನರ ವಿಶ್ವಾಸಕ್ಕೆ ದ್ರೋಹ ಬಗಿಬ್ಯಾಡ’ ಎಂದು ಹೇಳಿ ಗಾಂಧೀ ಟೊಪ್ಪಿಗೆಯನ್ನು ಅವನ ತಲೆಗೆ ತೊಡಿಸಿದ್ದರು ದೇಸಾಯಿ.
ಗಾಂಧಿ ಟೊಪ್ಪಿಗೆಯ ಪ್ರಭಾವವೋ ಏನೋ… ತನ್ನೊಳಗೆ ಗಾಂಧೀಜಿ ಅವಿರ್ಭವಿಸಿದ ಅನುಭವವಾಗಿ ಒಮ್ಮೆಲೆ ಸೂರಪ್ಪ ‘ಬಾಪೂಜಿಗೆ ಜಯವಾಗಲಿ…! ದೇಸಾಯಿ ಅಪ್ಪಾಜಿಗೆ ಜಯವಾಗಲಿ! ಎಂದು ಉತ್ಸಾಹದಿಂದ ಉಲಿದಿದ್ದ.
ದೇಸಾಯಿಯವರು ನಕ್ಕಿದ್ದರು. ತಕ್ಷಣವೇ ‘ಬಾಪೂಜಿಗೆ ಜಯವಾಗಲಿ ಅಂತ ಸಾವಿರ ಸಲ ಹೇಳು. ನನಗ ಜಯಕಾರ ಹಾಕಬ್ಯಾಡ ನಾನು ಅವರ ಕಾಲಿನ ಧೂಳಿಗೂ ಸಮ ಅಲ್ಲ’ ಎಂದಿದರು. ‘ಅಪ್ಪಾಜಿ, ನೀವು ನನಗ ಹೊಸ ಬದುಕು ಕೊಟ್ಟವರು. ನನ್ನ ಎದಿಯಾಗ ತುಂಕೊಂಡವರು. ನಿಮ್ಮ ಎದಿಯಾಗ ಮಹಾತ್ವರು ತುಂಬಿಕೊಂಡಾರ. ನನಗ ಇಬ್ಬರೂ ಸಮಾ’ ಅಭಿಮಾನದಿಂದ ಹೇಳಿದ್ದ ಸೂರಪ್ಪ.
ಅವನು ತಮ್ಮನ್ನು ಅಪ್ಪಾಜಿ ಎಂದು ಕರೆದದ್ದು ಕೇಳಿ, ಮೋನಪ್ಪ ವಾತ್ಸಲ್ಯದಿಂದ ಸೂರಪ್ಪನ ಕೈ ಹಿಡಿದು ‘ಹುಡುಗ, ನಿನ್ನ ಮ್ಯಾಲೆ ನನ್ನ ಪೂರ್ಣ ನಂಬಿಕೆ ಐತಿ. ನೀನು ಭರವಸೆಯ ನಾಯಕನಾಗ್ತಿ. ಈ ಗಾಂಧೀ ಟೊಪ್ಪಿಗೆ ನಿನ್ನ ತಲಿಗೆ ಬಹಳ ಚಂದ ಕಾಣಸ್ತೈತಿ. ಅದರ ಶುಬ್ರತೆ ನಿನ್ನ ಮನಸ್ಸು ತುಂಬಿಕೊಂಡ್ರ ನೀನು ರಾಜಕೀಯದೊಳಗ ಹೆಸರು ಮಾಡ್ತಿ’ ಎಂದು ಹೃದಯ ತುಂಬಿ ಹಾರೈಸಿದ್ದರು.
* * *
ದೇಸಾಯಿಯವರ ಮನೋಭಿಲಾಷೆಯಂತೆ ಸೂರಪ್ಪ ವ್ಯವಹಾರ ಮತ್ತು ರಾಜಕೀಯ ಕಾರ್ಯಭಾರವನ್ನು ಅರ್ಥಪೂರ್ಣವಾಗಿಯೇ ನಿಭಾಯಿಸಿದ್ದ ಒಂದು ಅವಧಿಗೆ ಪುರಸಭಾ ಅಧ್ಯಕ್ಷನಾಗಿ ಅವನು ಮಾಡಿದ ಜನಪರ ಕೆಲಸಗಳು ಜನರಿಗೆ ಹಿಡಿಸಿದ್ದವು. ಊರಿನ ಅಭಿವೃದ್ಧಿ ಸಲುವಾಗಿ ಅವನು ಅನೇಕ ಸಲ ಬೆಂಗಳೂರಿಗೆ ಹೋಗಿ ಬಂದ. ರಾಜಕಾರಣಿ ಗೆಳೆಯರೊಂದಿಗೆ ದೆಹಲಿ ಕಂಡು ಬಂದ. ಬೆಂಗಳೂರಿನ ವಿಧಾನಸೌಧ, ದೆಹಲಿಯ ಪಾರ್ಲಿಮೆಂಟ್ ನೋಟ ಅವನಲ್ಲಿ ಮಹತ್ವಾಕಾಂಕ್ಷೆ ಸೃಜಿಸಿತು.
ವಿಧಾನಸಭೆಯ ಚುನಾವಣೆಗೆ ಅಧಿಸೂಚನೆ ಹೊರ ಬೀಳುತ್ತಿರುವಂತೆ ಅವನು ವಾಡೆಗೆ ಬಂದು ದೇಸಾಯಿಯವರ ಎದುರು ಶಾಸಕನಾಗುವ ಆಸೆ ವ್ಯಕ್ತಪಡಿಸಿದ್ದ ದಿಙ್ಮೂಢರಾದ ದೇಸಾಯಿ ‘ನೀನಿನ್ನು ರಾಜಕೀಯದಲ್ಲಿ ಕೂಸು. ಶಾಸಕನಾಗಲು ಇನ್ನೂ ದಿನಾ ಅದಾವು. ನಿನ್ನ ಪರಿಧಿಯೊಳಗೆ ಒಳ್ಳೆಯ ಕೆಲಸ ನೋಡಿಕೊಂಡಿರು’ ಎಂದು ಸಾಫ್ ಸಾಫ್ ಹೇಳಿದ್ದರು.
ರಾಜ್ಯ ರಾಜಕೀಯ ಅಂದರೆ ಸುಮ್ಮನೇ ಅಲ್ಲ. ಜಾತಿ ದುಡ್ಡು ಲಾಬಿ ಇಲ್ಲದೆ ಟಿಕೀಟು ಸಿಗುವುದಿಲ್ಲ ಎಂಬ ಹಿನ್ನೆಲೆಯಲ್ಲಿ ದೇಸಾಯಿ ಈ ಮಾತು ಆಡಿದ್ದರು. ಸೂರಪ್ಪ ಸುಮ್ಮನೆ ಎದ್ದು ಹೋಗಿದ್ದ.
ಚುನಾವಣೆಯ ಪ್ರಕ್ರಿಯೆಗಳು ಶುರುವಿಟ್ಟು ಕೊಂಡಿದ್ದವು. ಆ ದಿನ ವಾಡೆದಲ್ಲಿ ಪ್ರತ್ಯಕ್ಷನಾದ ಸೂರಪ್ಪ ‘ಅಪ್ಪಾಜಿ ನನ್ನ ತಿಕೀಟು ಸಿಕ್ತು. ನಿಮ್ಮ ಆಶೀರ್ವಾದ ಬೇಕು’ ಎಂದು ಕಾಲಿಗೆ ಬಿದ್ದದ್ದ. ನಂಬಲಸಾಧ್ಯನಾದ ಸಂಗತಿಯಿಂದ ಅವನನ್ನು ಅಚ್ಚಿರಿಯಿಂದ ನೋಡಿದ್ದರು ಮೋನಪ್ಪ. ರಾಜಕಾರಣದ ಚಕ್ರವ್ಯೂಹದೊಳಗೆ ನುಗ್ಗುವ ಅವನ ಆತುರಕ್ಕೆ ಭಯವೆನಿಸಿದರೂ, ಅವನ ವಿಶ್ವಾಸದ ಮುಖ ಕಂಡು ಒಂದೂ ಮಾತಾಡದೇ ಕುಳಿತಿದ್ದರು.
ಚುನಾವಣಾ ಕಣದಲ್ಲಿ ಸೂರಪ್ಪನ ಹೋರಾಟ ಮೇಲುನೋಟಕ್ಕೆನ್ನುವಂತಿತ್ತು. ಎದುರಾಳಿಗಳು ಪ್ರಬಲರಾಗಿದ್ದರು. ಆದರವನು ಭರವಸೆ ಇಟ್ಟಿದ್ದು ಮೋನಪ್ಪ ದೇಸಾಯರ ಮೇಲೆ. ರಾಜಕಾರಣ ಹೊಲಸು ರಾಡಿಯಾಗಿದ್ದರೂ ಭರತಪುರದ ಜನ ಮಾತ್ರ ಆ ರಾಡಿಯನ್ನು ಮೈಮನಸುಗಳಿಗೆ ಸೊಂಕಿಸಿ ಕೊಳ್ಳದಂತೆ ಪವಿತ್ರರಾಗಿ ಉಳಿದಿದ್ದರು. ದೇಸಾಯರ ತೋರು ಬೆರಳಿಗೆ ತಕ್ಕಂತೆ ಜನರ ಆತ್ಯಸಾಕ್ಷ ತುಡಿಯುತ್ತಿತ್ತು. ಮತಕ್ಷೇತ್ರದ ಹಳ್ಳಿಗಳೂ ಅದಕ್ಕೆ ಹೊರತಾಗಿರಲಿಲ್ಲ. ಇದೆಲ್ಲ ಸೂರಪ್ಪ ಗೆಲ್ಲಲಿಕ್ಕೆ ಸುಲಭದ ಮಾರ್ಗವೆನಿಸಿತು.
ಸೂರಪ್ಪನ ಆಯ್ಕೆಯಿಂದ ಭರತಪುರಕ್ಕೆ ಹೊಸ ಕಳೆ ಪ್ರಾಪ್ತವಾಗಿತ್ತು. ಅಲ್ಲಿ ಬೆಳಗಿದ ಸೂರ್ಯ ಹೊಸಬನಂತೆ ಕಣಿಸಿದ್ದ. ಹಕ್ಕಿಗಳು ಸೊಗದ ಕಲರವ ಕೇಳಿಸಿದ್ದವು. ಊರಿನ ಒಳಗೆ ಹೊಸ ನೀರು ಬಂದ ಸಂಭ್ರಮದಲ್ಲಿ ಜನರು ಸೂರಪ್ಪನನ್ನು ಹೆಗಲ ಮೇಲೆ ಹೊತ್ತು ಮೆರಸಿದ್ದರು.
ವಾಡೆಗೆ ಬಂದು, ತಮಗೆ ಸಾಷ್ಟಾಂಗ ಎರಗಿದ ಸೂರಪ್ಪನನ್ನು ಮನದುಂಬಿ ಹಾರೈಸಿದ್ದರು ದೇಸಾಯಿ. ‘ಅಪ್ಪಾಜಿ, ನೀವು ನನ್ನ ಗೆಲುವಿನ ರೂವಾರಿಗಳು. ಸಾಯೋ ತನಕ ನಾನು ನಿಮ್ಮ ಋಣದಾಗ ಇರ್ತೀನಿ!’ ಎಂದು ಕಣ್ಣು ಒದ್ದೆ ಮಾಡಿಕೊಂಡಿದ್ದ.
ಅವನ ಬೆನ್ನು ನೇವರಿಸಿ ‘ರಾಜಕಾರಣ ಸಾರ್ವಜನಿಕ ಕ್ಷೇತ್ರ. ಈ ಕ್ಷೇತ್ರದಾಗ ಸೇವಾ ಮಾಡೋರು ಉದಾತ್ತ ನೀತಿಯವರಾಗಿರಬೇಕು. ಚಾರಿತ್ರಾನ ಶಾತ್ವತ ಇಟ್ಟುಕೊಂಡಿರಬೇಕು. ಬೆಳ್ಳಂಬೆಳಕಾಗಿರಬೇಕು. ರಾಜಕೀಯ ಅಂದ್ರ ಮುಚ್ಚುಮರೆ, ಕುಟೀಲ ತಂತ್ರ ಇರಬಾರ್ದು. ಇವು ನನ್ನ ಮಾತಲ್ಲ; ಮಹಾತ್ಮರು ಹೇಳಿದ್ದು. ನಿನ್ನ ಮನಸ್ಸಿನ್ಯಾಗ ಇಟ್ಕೊಂಡಿರಬೇಕು. ಛಲದ ಹುಡುಗ ನೀನು. ಜನರ ಉತ್ತಮ ಸೇವಕ ಆಗಬೇಕು’ ಎಂದು ದೇಸಾಯಿಯವರು ಅಂತಃಸತ್ವದ
ಮಾತು ಹೇಳಿದ್ದರು.
‘ನಿಮಗ ಗೌರವ ತರುವ ರಾಜಕಾರಣ ಮಾಡ್ತೀನಿ ಅಪ್ಪಾಜಿ’ ಉಸುರಿದ ಸೂರಪ್ಪ.
ರಾಜ್ಯದಲ್ಲಿ ಚುನಾವಣಾ ಫಲಿತಾಂಶ ಪ್ರಕಟವಾಗಿ ಯಾವ ಪಕ್ಷಕ್ಕೂ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣಗೊಂಡಿತ್ತು. ಹೆಚ್ಚು ಸದಸ್ಯರ ಬಲ ಹೊಂದಿದ್ದ ಪಕ್ಷ ಸರಕಾರ ರಚಿಸುವ ಆತುರದಲ್ಲಿತ್ತು. ರಾಜ್ಯಪಾಲರು ಸಂವಿಧಾನ ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದರು. ಪಕ್ಷೇತರ ಸದಸ್ಯರತ್ತ ಎಲ್ಲರ ಚಿತ್ತ!
ಈ ವೇಳೆಯಲ್ಲಿ ಸೂರಪ್ಪ ಕ್ಷೇತ್ರದಲ್ಲಿ ತಿರುಗಾಡಿಕೊಂಡಿದ್ದ. ಸತ್ಕಾರ ಸಮಾರಂಭಗಳು ಪುರುಸೊತ್ತಿಲ್ಲದಂತೆ ಜರುಗತೊಡಗಿದ್ದವು. ಇದರ ನಡುವೆ ಪಕ್ಷೇತರರ ಬೆಂಬಲದಿಂದ ಸರಳ ಬಹುಮತದ ಸರಕಾರ ಅಸ್ತಿತ್ವಕ್ಕೆ ಬಂದಿತ್ತು.
* * *
ಸುದ್ದಿ ಎಲ್ಲಿಂದ, ಯಾರಿಂದ ಹುಟ್ಟಿಕೊಂಡಿತೋ? ದೇಸಾಯಿಯವರ ಮನಸ್ಸು ಉತ್ತರಕ್ಕಾಗಿ ತಡಕಾಡತೊಡಗಿತ್ತು. ಸೂರಪ್ಪ ಗಂಗೆಯಷ್ಟು ನಿರ್ಮಲ! ಅದು ಕಲಕಿದರೂ ರಾಡಿಯಾಗದು ಎಂದುಕೊಂಡರು. ಬೆಂಕಿ ಇಲ್ಲದ ಹೊಗೆಯಾಡುವುದೆ? ಸಣ್ಣದೊಂದು ಅನುಮಾನ ಅವರ ಒಳಗನ್ನು ಕೆಣಕಿತು. ತಳಮಳಕ್ಕೊಳಗಾದ ದೇಸಾಯಿ ಅತ್ತಿತ್ತ ನಡೆದಾಡಿದರು. ಸತ್ಯ ತಿಳಿದುಕೊಳ್ಳಲು ಸೂರಪ್ಪನಿಗೆ ಫೋನಾಯಿಸಿದರು. ಸ್ವಿಚ್ ಆಫ್ ದ್ವನಿ ಕೇಳಿಸಿತು. ಸೂರಪ್ಪ ಅಂಥದೊಂದು ಕೃತ್ಯಕ್ಕೆ ಒಳಗಾಗಿ ಬಿಟ್ಟರೆ ಅವನು ಮಹಾತ್ಮರನ್ನು ಕೊಂದಂತೆ, ಜನರನ್ನು ಕೊಂದಂತೆ ಅಂದುಕೊಂಡರು.
ನಿಜವಾಯಿತು ಸುದ್ದಿ ಸೂರಪ್ಪ ತನಗೆ ಟಿಕೀಟು ನೀಡಿದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ, ಆಡಳಿತ ಪಕ್ಷಕ್ಕೆ ಸೇರಿ ಮಂತ್ರಿಯೂ ಆದ. ತನ್ನ ಕ್ಷೇತ್ರದ ಜನರ ಅಭಿಪ್ರಾಯದಂತೆ ತಾನು ಈ ನಿರ್ಧಾರಕ್ಕೆ ಬಂದಿರುವುದಾಗಿ ಅವನು ಹೇಳಿಕೆ ಕೊಟ್ಟಿದ್ದ. ಎಂಥ ಸುಳ್ಳು, ಎಂಥ ವಿಶ್ವಾಸಘಾತ! ದಿಗ್ಭ್ರಾಂತರಾದ ಜನ ಈಗ ಸೂರಪ್ಪ ಮೋಸಗಾರನೆಂದು ಬಹಿರಂಗವಾಗಿಯೇ ಮಾತಾಡಲಾರಭಿಸಿದರು.
ಅವನು ಬಣ್ಣ ಬದಲಿಸುವ ಊಸರವಳ್ಳಿಯುಗುತ್ತಾನೆಂದು ಕನಸು ಮನಸಿನಲ್ಲಿ ಯೋಚಿಸಿರದ ಮೋನಪ್ಪ ತೀವ್ರ ಆಘಾತಕ್ಕೊಳಗಾದರು. ಸೂರಪ್ಪ ಮಹಾತ್ಮರ ಮತ್ತು ತಮ್ಮ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಪ್ರಸಂಗದಿಂದ ಅವರು ಮತ್ತಷ್ಟು ಭೂಮಿಗೆ ಇಳಿದು ಹೋದಂತೆ ಮಿಡುಕಾಡತೊಡಗಿದರು.
ಸೂರಪ್ಪನ ದಗಾಕೋರತನ ಜನರ ಲಾವಾ ಕುದಿಸಿತು. ಆಕ್ರೋಶಕ್ಕೊಳಗಾದ ಅವರು ಅವನ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ನಡುಬೀದಿಯಲ್ಲಿ ದಹಿಸಿದರು. ಅಸಹನೆಯಿಂದ ಧಿಕ್ಕಾರ ಕೂಗಿದರು. ತಮ್ಮ ಮತವನ್ನು ಅಪಮೌಲ್ಯಗೊಳಿಸಿದ ಕಿರಾತಕ, ದುಡ್ಡಿಗೆ, ಅಧಿಕಾರಕ್ಕೆ ಜೊಲ್ಲು ಸುರಿಸಿದ ಹುಚ್ಚುನಾಯಿ… ಎಂದಲ್ಲ ಬೈದಾಡಿಕೊಂಡರು. ಸೂರಪ್ಪ ಅವರ ಪ್ರತಿಕ್ರಿಯೆಗಳಿಗೆ ಕ್ಯಾರೆ ಅನ್ನಲಿಲ್ಲ. ಅವರೆಲ್ಲ ನಿಕೃಷ್ಟ ಹುಳುಗಳೆಂದು ಕರೆದು ನಕ್ಕು, ಕೆಂಪು ಗೂಟದ ಕಾರಿನಲ್ಲಿ ಜಂ ಅಂತ ತಿರುಗಾಡತೊಡಗಿದ. ಜನರ ಪ್ರತಿಭಟನೆಯ ಕಾವು ತಣ್ಣಗಾಯಿತು. ದೇಸಾಯಿಯವರನ್ನು ಕಾಣಲು ಸೂರಪ್ಪ ಕಾತರಿಸಿದ.
ಅವರ ಮುಖ ನೋಡುವುದಕ್ಕೆ ಅವನು ಲಾಯಕ್ ಇರಲಿಲ್ಲ. ಆದರೆ ಅವನು ನಿರ್ಲಜ್ಜನಾಗಿದ್ದ. ಆ ದಿನ ಸೂರ್ಯ ಹುಟ್ಟಿದ ಒಂದು ತಾಸಿಗೆ ಭರತಪುರಕ್ಕೆ ಆಗಮಿಸಿದವನು, ಆಯ್.ಬಿ. ಬಳಿ ಕಾರು ನಿಲ್ಲಿಸಿ ವಾಡೆಗೆ ನಡೆದುಕೊಂಡು ಬಂದ. ಹಿಂದೆ ಮುಂದೆ ಪೋಲಿಸರು.
ವಾಡೇದ ಅಂಗಳದಲ್ಲಿ ನಿಂತಿದ್ದ ದೇಸಾಯಿಯವರ ಎದುರು ನಿಂತು ‘ಅಪ್ಪಾಜಿ, ನನ್ನ ಕ್ಷಮಿಸಿರಿ’ ಅಂದ. ಅವನ ಸಫಾರಿ ದಿರಿಸು, ತಲೆಯ ಮೇಲಿನ ಕುರಿ ತುಪ್ಪಳದ ಟೋಪಿ ದೇಸಾಯಿಯವರ ಕಣ್ಣು ಕುಕ್ಕಿದವು. ಅವರು ಹುಲ್ಲು ಹಾಸಿನ ಮೇಲೆ ಕುಳಿತುಕೊಳ್ಳಲು ಸನ್ನೆ ಮಾಡಿ.
‘ಅಂತೂ ಗಾಂಧೀ ಟೊಪ್ಪಿಗೆ ತೆಗೆದು ಬಿಟ್ಟಿ ನೀನು!’ ಎಂದು ನಿಧಾನ ಉಸುರಿದರು ಮೋನಪ್ಪ.
‘ಅದು… ಅದು… ಜೀಬಿನಲ್ಲಿ ಇಟ್ಟಿದ್ದೇನಿ ಅಪ್ಪಾಜಿ’ ಟೊಪ್ಪಿಗೆ ತೆಗೆದು ತೋರಿಸಿದ ಸೂರಪ್ಪ.
‘ಮಂತ್ರಿಗಳಿಗೆ ಗಾಂಧಿ ಟೊಪ್ಪಿಗಿ ಶೋಬಿಸುವುದಿಲ್ಲ ಬಿಡು!’ ನಕ್ಕರು ದೇಸಾಯಿ.
ಅದರ ವ್ಯಂಗ್ಯ ಗುರುತಿಸಿಕೊಂಡ ಸೂರಪ್ಪ ‘ನಿಮ್ಮ ಆಶೀರ್ವಾದ ನನ್ನ ಮ್ಯಾಲೆ ಐತಿ ಅಪ್ಪಾಜಿ. ಗಾಂಧೀ ಟೊಪ್ಪಿಗಿ ಇರದಿದ್ದರ ಏನಾತು?’ ಎಂದು ಪ್ರತಿಯಾಗಿ ನಕ್ಕ.
‘ನಿನ್ನನ್ನ ಏನೋ ಅಂದ್ಕೊಂಡಿದ್ದೆ. ಬಹಳ ಲಗೂನ ಪ್ರಬುದ್ಧ ಅನಿಸಿದಿ. ಇವತ್ತಿನ ರಾಜಕಾರಣಕ್ಕ ಹೇಳಿ ಮಾಡಿಸಿದ ಮಾದರಿ ನೀನು!’ ಮಾತಲ್ಲಿತಿವಿದರು ಮೋನಪ್ಪ.
‘ಅಪ್ಪಾಜಿ ನನ್ನ ಕ್ಷೇತ್ರದ ಅಭಿವೃದ್ಧಿ ಸಲುವಾಗಿ ನಾನು ಸರಕಾರದಲ್ಲಿ ಮಂತ್ರಿಯಾಗಿದ್ದೀನಿ ವೈಯಕ್ತಿಕ ಹಿತಾಸಕ್ತಿಗಲ್ಲ’ ತನ್ನನ್ನು ಸಮರ್ಥಿಸಿಕೊಂಡ ಸೂರಪ್ಪ.
‘ಜನರ ಸೇವಾ ಮಾಡಲು ಮಂತ್ರೀನ ಆಗಬೇಕೇನು?’
‘ಅಧಿಕಾರ ಇಲ್ದಿದ್ರ ಇವತ್ತು ಏನೂ ಆಗುವುದಿಲ್ಲ ಅಪ್ಪಾಜಿ.’
‘ನಿನ್ನನ್ನು ಇಲೆಕ್ಷನ್ದಾಗ ಗೆಲ್ಲಿಸಿದ್ದು ಅಧಿಕಾರಲ್ಲ, ಜನರ ಪ್ರೀತಿ, ವಿಶ್ವಾಸ. ಅದಕ್ಕ ನೀನು ದ್ರೋಹಾ ಮಾಡ್ದಿ, ಪಕ್ಷಕ್ಕೂ ದ್ರೋಹಾ ಮಾಡ್ದಿ.’
‘ಜನಗಳ ಉದ್ಧಾರಕ್ಕಂತ ನಾನು ಈ ತೀರ್ಮಾನ ತಗೊಂಡೆ ಅಪ್ಪಾಜಿ.’
‘ಜನಾ ಇದನ್ನ ನಂಬುದಿಲ್ಲ. ನಿಂದು ಸ್ವಾರ್ತ. ಅದಕ್ಕ ಹತ್ತು ಕೋಟಿಗೆ ತನ್ನ ಮಾರ್ಕೊಂಡ ಅಂತಾರ.’
‘ನನಗಾಗದವರು ಹೇಳೋ ಮಾತದು. ರಾಜಕಾರಣದಾಗ ಇದೆಲ್ಲ ಮಾಮೂಲು. ನನ್ನ ಮನಸ್ಸು ಕೈಗಳು ಸ್ವಚ್ಛ ಅದಾವು ಅಪ್ಪಾಜಿ.’
‘ಹುಸಿ ಮತ್ತು ಮಾನಗೇಡಿ ಪ್ರಜ್ಞೆಯಿಂದ ಗಾಂಧೀ ಮೌಲ್ಯಗಳನ್ನು ನೀನು ಗಾಳಿಗೆ ತೂರ್ದಿ’ ಅಸಹನೆ ವ್ಯಕ್ತಪಡಿಸಿದರು ದೇಸಾಯಿ.
‘ನಾನು ದೇವರಲ್ಲ, ಮನುಷ್ಯ. ನಿಮ್ಗ ನನ್ನ ತೀರ್ಮಾನ ಕೆಟ್ಟ ಅನಿಸಿರಬಹುದು. ಆದ್ರ ಗಾಂಧೀಜಿ ಬಗ್ಗೆ ನನ್ಗ ಬಹಳ ಗೌರವ ಐತಿ ಅಪ್ಪಾಜಿ.’
‘ಅವರ ತತ್ವ, ಸಿದ್ಧಾಂತಗಳಿಗೆ ತಿಲಾಂಜಲಿ ಕೊಟ್ಟು, ಬರೆ ಹೆಸರು ಹೇಳ್ಕೊಂಡಿರೋದು ಗೌರವ ಅನಿಸೋದಿಲ್ಲ’ ಚುಚ್ಚಿದರು ದೇಸಾಯಿ.
‘ನಿಮ್ಗ ಗೊತ್ತಿಲ್ಲ ಅಪ್ಪಾಜಿ, ಇವತ್ತು ಜಗತ್ತು ಬಹಳ ಬದಲಾಗೇತಿ. ಹಾಂಗ ರಾಜಕೀನೂ ಕೂಡಾ.’
‘ಮೌಲ್ಯಗಳಿಲ್ಲದ ರಾಜಕೀಯದಿಂದ ದೇಶಕ್ಕೇನು ಲಾಭ? ಜನಕ್ಕೇನು ಸುಖ?’
ದೇಸಾಯಿಯವರ ಮಾತು ಖಾರವಾಗಿತ್ತು.
‘ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ನಾನು ಅಸಮರ್ಥ ಅಪ್ಪಾಜಿ ಆದ್ರ ಇಷ್ಟು ಮಾತ್ರ ಹೇಳ್ತೀನಿ ಹೊಸ ಕಾಲಕ್ಕೆ ಹೊಂದ್ಕೊಂಡು ಹೋಗದಿದ್ರ ನಮ್ಮ ಉಳಿಗಾಲ ಇಲ್ಲ. ನನ್ನ ಕ್ಷೇತ್ರದ ಉದ್ಧಾರನೂ ಆಗುದಿಲ್ಲ. ನನ್ನ ಕ್ಷಮಿಸಿರಿ’ ತಟ್ಟನೇ ಎದ್ದು ಹೊರಟ ಸೂರಪ್ಪ.
ಅವನ ಮಾತಿನಿಂದ ಕಸಿವಿಸಿಗೊಂಡ ದೇಸಾಯಿ ಹುಬ್ಬೇರಿಸಿ ಕೇಳಿದರು. ‘ನಿನ್ನ ಮತಕೊಟ್ಟು ಗೆಲ್ಲಿಸಿದ ಜನ ಹೊರಗ ನಿಂತಾರ. ಅವರಿಗೇನು ಹೇಳ್ತಿ ನೀನು?’
‘ಆ ಕುರಿಗಳ ಬಾಯಿ ಹ್ಯಾಂಗ ಮುಚ್ಚಿಸಬೇಕಂತ ನನ್ನ ಗೊತ್ತು’ ಎನ್ನುತ್ತಲೇ ಹೋದ ಸೂರಪ್ಪ.
* * *
ವಾಡೆದೊಳಗ ನುಗ್ಗಲು ಯತ್ನಿಸುತ್ತಿದ್ದ ಜನರನ್ನು ಪೋಲೀಸರು ಹತ್ತಿಕ್ಕತೊಡಗಿದ್ದರು, ಸೂರಪ್ಪನನ್ನು ನೋಡುತ್ತಲೇ ‘ಮತದಾರರಿಗೆ ದ್ರೋಹ ಬಗೆದ ಗುಳ್ಳೇನರಿ ಸೂರಪ್ನಿಗೆ ಧಿಕ್ಕಾರ… ಧಿಕ್ಕಾರ. ಹತ್ತು ಕೋಟಿಗೆ ಮಾರಿಕೊಂಡ ಶಾಸಕನಿಗೆ ಧಿಕ್ಕಾರ… ಧಿಕ್ಕಾರ…’ ಕೂಗತೊಡಗಿದರು ಜನ.
ಅವರತ್ತ ಹೊರಳಿ ನೋಡಲಿಲ್ಲ ಸೂರಪ್ಪ. ಅವನ ಉಪೇಕ್ಷೆಯ ಮನೋಭಾವ ಜನರನ್ನು ಕೆರಳಿಸಿತು. ಅವರು ಅವನ ಹತ್ತಿರ ನುಗ್ಗಿ ಬಂದರು. ಪೋಲೀಸರು ನಿರ್ದಾಕ್ಷಿಣ್ಯವಾಗಿ ಅವರ ಮೇಲೆ ಲಾಠಿ ಬೀಸತೊಡಗಿದರು. ಯಮಯಾತನೆಯ ಪೆಟ್ಟುಗಳು! ಆಕ್ರಂದಿಸತೊಡಗಿದರು ಜನ ಆ ದೃಶ್ಯ ದೇಸಾಯಿಯರನ್ನು ಹಿಂಸಿಸಿತು.
ಜನರ ನಡುವ ಬಂದ ಅವರನ್ನು ಪೋಲೀಸರು ತಳ್ಳಾಡಿದರು. ಕೊತ ಕೊತನೆ ರಕ್ತ ಕುದಿಸಿಕೊಂಡ ಜನ ‘ಬೋಳಿಮಗನೇ, ನೀನೀಗ ಮಂತ್ರಿ ಆಗಿಯಲ್ಲ, ಇಲೆಕ್ಷನ್ನಿಗೆ ನಿಲ್ಲು, ನಿನ್ನ ನೆಲಸಮಾ ಮಾಡ್ತೀವಿ’ ಎಂದು ಸವಾಲೆಸೆದರು. ಸೂರಪ್ಪ ಅದಕ್ಕೆ ಪ್ರತಿ ಸವಾಲು ಎನ್ನುವಂತೆ ‘ನಾನು ವಿಧಾನಸಭಾ ಹ್ಯಾಂಗ ಪ್ರವೇಶಿಸಬೇಕಂತ ಚೆನ್ನಾಗಿ ತಿಳಕೊಂಡೀನಿ’ ಎಂದ.
‘ನೀನು ಮಂತ್ರಿ ಸ್ಥಾನಕ್ಕ ರಾಜೀನಾಮೆ ಕೊಡು’ ಸೆಟೆದು ಕೇಳಿದರು ಜನ.
‘ನಿಮ್ಮ ಮತದ ಹಂಗಿನಿಂದ ನಾನು ಮಂತ್ರಿಯಾಗಿಲ್ಲ’ ಕಠೋರನಾಗಿಯೇ ಹೇಳಿದ ಸೂರಪ್ಪ.
ಪ್ರಜಾಪ್ರಭುತ್ವದ ಕಿಲುಬು ನೀನು. ನಮ್ಮೂರ ಸ್ವಾಭಿಮಾನ, ಮನಸಾಕ್ಷಿಗೆ ಮಸಿ ಹಚ್ಚಿದಿ. ನಿನ್ನಿಂದ ನಾವು ತಲಿ ತಗ್ಗಿಸುವಂತಾತು’ ವಿಷಾದ ವ್ಯಕ್ತಪಡಿಸಿದರು ಜನ.
‘ನಾನು ಮಂತ್ರಿಯಾಗಿದ್ದಕ್ಕ ಹೊಟ್ಟೆಕಿಚ್ಚು ನಿಮಗ ಈ ಜನ್ಮದಾಗ ಉದ್ಧಾರಾಗುದಿಲ್ಲ ನೀವು!’ ಸೂರಪ್ಪ ಜನರನ್ನು ಮೂದಲಿಸಿದ.
ಅವನ ಮಾತು ಉದ್ಧಟತನವೆನಿಸಿ ಮೋನಪ್ಪ ‘ನಿನ್ನ ಮಂತ್ರಿ ಸೌಭಾಗ್ಯ ನಿನ್ಗೋ ಸೂರಪ್ಪ! ಜನರನ್ನು ನೀನು ಸ್ವರ್ಗದಾಗ ತೇಲಾಡಿಸುದಿಲ್ಲ. ಸ್ಥಾರ್ಥದ ಜೇಡರ ಬಲ್ಯಾಗ ಸಿಕ್ಹಾಕ್ಕೋಂಡಿ ನೀನು. ನಿನ್ನ ರಾಜಕೀಯ ಹತ್ಯಾ ಮಾಡ್ಕೋಬ್ಯಾಡ. ಜನರ ಮಾತಿಗೆ ಬೆಲೆ ಕೊಡು’ ಎಂದರು.
‘ಅಪ್ಪಾಜಿ ನಾನು ಬಹಳ ವಿಚಾರ ಮಾಡಿಯೇ ಮಂತ್ರಿಯಾಗೀನಿ ನನ್ನ ತತ್ವ-ಸಿದ್ಧಾಂತಗಳನ್ನು ಜನರ ಅಪೇಕ್ಷೆಗೆ ಬಲಿ ಕೊಡುದಿಲ್ಲ’ ದೃಢವಾಗಿ ಹೇಳಿದ ಸೂರಪ್ಪ.
‘ನನ್ನ ಮ್ಯಾಲೆ ನಿನಗ ಅಭಿಮಾನ ಇದ್ರ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಡು; ಇಲ್ದಿದ್ರ ನನ್ನ ದಾಟಿಕೊಂಡು ಹೋಗು’ ಮೋನಪ್ಪ ಅವನ ಮುಂದೆ ಮಲಗಿಕೊಂಡರು. ಅವರಿಂದ ಪ್ರೇರಿತಗೊಂಡ ಜನರೂ ಉದ್ದಕ್ಕೆ ಮಲಗಿದರು. ಸಂದಿಗ್ಧತೆಗೊಳಗಾದ ಸೂರಪ್ಪ ಡಿವೈಎಸ್ಪಿಯವರನ್ನು ದಿಟ್ಟಿಸಿದ. ಪೋಲೀಸರು ಸಾಹೇಬರ ಆದೇಶದಂತೆ ಮಲಗಿದ್ದ ಜನರ ಮೇಲೆ ಲಾಠಿ ಪ್ರಯೋಗಿಸಿ ಎಳೆದೆಳೆದು ಹಾಕತೊಡಗಿದರು. ‘ನಿಮ್ಮ ದೌರ್ಜನ್ಯ ನಿಲ್ಲಿಸಿರಿ…’ ಎಂದು ಮೋನಪ್ಪ ಮಲಗಿದಲ್ಲಿಂದಲೇ ಕೂಗಿಕೊಂಡರು. ಅವರ ಹತ್ತಿರ ಬಂದ ಡಿವೈಎಸ್ಪಿ ‘ದೇಸಾಯರೆ, ನೀವು ಗಾಂಧೀವಾದಿಗಳು. ನಿಮ್ಮ ಬಗ್ಗೆ ನಮಗೆ ಗೌರವವಿದೆ. ಹಟ ಮಾಡದಿರಿ. ಜನರಿಗೆ ಬುದ್ಧಿ ಹೇಳಿರಿ. ಇಲ್ಲದಿದ್ದರೆ ಪರಿಸ್ಥಿತಿ ಕೈಮೀರಿ ಹೋಗುವುದು’ ಎಂದು ಎಚ್ಚರಿಸಿದರು.
‘ಸೂರಪ್ಪನಿಗೆ ಮತ ಕೊಟ್ಟ ಜನ ಅವರು. ಮಂತ್ರಿಗಳು ಅವರ ಬೇಡಿಕೆಯನ್ನು ಈಡೇರಿಸಲಿ’ ಹಠದ ಮಾತು ಆಡಿದರು ಮೋನಪ್ಪ.
‘ಸೂರಪ್ಪ ರಾಜೀನಾಮೆ ಕೊಡುತನಕ ನಾವಿಲ್ಲಿಂದ ಏಳೂದಿಲ್ಲ’ ಸ್ಪಷ್ಟ ಪಡಿಸಿದರು ಜನ.
ವಾಡೇದ ಮುಂದಿನ ಬಯಲು, ಅದರ ಆಜು-ಬಾಜಿನ ರಸ್ತಗಳಲ್ಲಿ ಪ್ರವಾಹ ಉಕ್ಕೇರಿ ಬಂದಂತೆ ಜನ ಕಂಡರು. ಮುದುಕರು, ತರುಣರು ನೆಲದ ಮೇಲೆ ಉರುಳಿಕೊಂಡರೆ, ಹೆಂಗಸರು ಸೂರಪ್ಪನಿಗೆ ಛೀಮಾರಿ ಹಾಕಿ ಅವನ ನಿರ್ಧಾರವನ್ನು ಖಂಡಿಸತೊಡಗಿದರು. ಹಿಡಿಯಷ್ಟು ಪೋಲೀಸರು ಅಸಹಾಯಕರಾದರು. ಅವರ ಲಾಠಿಗಳು ಡಿವೈಎಸ್ಪಿ ಜನರನ್ನು ಚದುರಿಸಲು ಮುಗಿಲತ್ತ ಗುಂಡು ಹಾರಿಸಿದರು. ಗಲಿಬಿಲಿಗೊಳಗಾದ ಜನ ‘ನಮ್ಮ ಹೆಣದ ಮ್ಯಾಲೆ ನಡ್ಕೊಂಡು ಹೋಗೂ ಕಂತ್ರಿ ನನ್ನ ಮಗನೇ’ ಎಂದು ಸೂರಪನನ್ನು ಲೇವಡಿ ಮಾಡಿದರು.
ಸೂರಪ್ಪ ನಿರಾವರಣ ಭಾವದಿಂದ ಮೋನಪ್ಪ ದೇಸಾಯರನ್ನು ದಾಟಿಕೊಂಡು ಹೋದ. ಅತಿ ನಿರ್ಲಜ್ಜವಾದ ಅವನ ಈ ಕೃತ್ಯಕ್ಕೆ ಹೇಸಿಕೊಂಡ ಜನರು ಅವನ ಮೇಲೆ ಮುಗಿಬಿದ್ದರು. ಪೋಲೀಸರು ಸೂರಪ್ಪನ ರಕ್ಷಣೆಗೆ ಧಾವಿಸಿದರು. ಅವರಿಗೂ ಏಟು ಬಿದ್ದವು. ಸೂರಪ್ಪನ ತಲೆ ಅಲಂಕರಿಸಿದ್ದ ಕುರಿ ತುಪ್ಪಟದ ಟೊಪ್ಪಿಗೆ ಆಕಾಶಕ್ಕೆ ಹಾರಿತು.
‘ಯಾರೂ ಹಿಂಸೆಗೆ ಇಳೀಬಾರದು. ಗಾಂಧೀಜಿ ಮ್ಯಾಲೆ ಆಣೆ. ಯಾರೂ ದುಡುಕ ಬ್ಯಾಡ್ರಿ’ ಮೋನಪ್ಪ ಜನರನ್ನು ತಡೆಯತೊಡಗಿದರು.
‘ಉಂಡ ಮನೆಗೆ ಎರಡು ಬಗೆವ ಇಂಥಾ ಲುಚ್ಚಾಗ ಬರೋಬರಿ ಶಾಸನಾ ಮಾಡ್ತೀವಿ ಧಣೇರ. ನೀವು ಏನೂ ಹೇಳಾಕ ಬರಬ್ಯಾಡ್ರಿ ಗಟ್ಟಿಯಾಗಿ ಹೇಳಿದರು ಜನ.
‘ಹಿಂಸೆಯಿಂದ ಮನುಷ್ಯರು ರಾಕ್ಷಸ ಆಗ್ತಾರ’ ಹಿಂದೊಮ್ಮೆ ಹೇಳಿದ್ದ ಮೋನಪ್ಪ ದೇಸಾಯರ ಮಾತು ದಿಢೀರನೇ ನೆನಪಾಗಿ ಒಳಗೇ ಕಂಪಿಸಿದ್ದ ಸೂರಪ್ಪ. ಓರೆನೋಟದಿಂದ ಜನರನ್ನು ನೋಡಿದ. ಅವರ ಕಣ್ಣುಗಳು ಶಿವನ ಉರಿಗಣ್ಣಾಗಿ ತನ್ನನ್ನು ಕ್ಷಣಾರ್ಧದಲ್ಲಿ ಸುಟ್ಟು ಬೂದಿ ಮಾಡಿಬಿಡುವ ತವಕದ ರೀತಿಗೆ ಜಂಘಾಬಲವೇ ಉಡುಗಿತು. ಮೈಯೆಲ್ಲಾ ಬೆವರು ಬಸಿಯತೊಡಗಿ ‘ನಾನು ಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಡ್ತೀನಿ ನನಗೆ ಏನೂ ಮಾಡಬ್ಯಾಡ್ರಿ’ ಎಂದವನೇ ನೆಲಕ್ಕೆ ಕುಸಿದ ಸೂರಪ್ಪ. ಜನ ಕಸಿವಿಸಿಗೂಳಗಾಗಿ ದೂರಕ್ಕೆ ಸರಿದರು. ಮೋನಪ್ಪ ಅವನ ಹತ್ತಿರ ಬಂದು ಕುಳಿತರು. ಪೋಲೀಸರು ಕೂಡಲೇ ಸೂರಪ್ಪನನ್ನು ಜೀಪಿನಲ್ಲಿ ಆಸ್ಪತ್ರಗೆ ಕರದೊಯ್ದರು. ಜನ ಅಲ್ಲಿಂದ ಮೆಲ್ಲಗೆ ಚದುರಿದರು. ನೆಲದ ಮೇಲೆ ಬಿದ್ದ ಗಾಂಧೀ ಟೊಪ್ಪಿಗೆ ಮೋನಪ್ಪನವರಿಗೆ ಕಂಡಿತು. ಅದು ಸೂರಪ್ಪನ ಟೊಪ್ಪಿಗೆ. ಕೂಡಲೇ ಅತ್ತ ಧಾವಿಸಿ ಟೊಪ್ಪಿಗೆಯನ್ನೆತ್ತಿಕೊಂಡರು ದೇಸಾಯಿ. ಅದಕ್ಕೆ ಧೂಳು ಅಂಟಿಕೊಂಡಿತ್ತು. ನಾಜೂಕಾಗಿ ಥೂಳು ಕೊಡವಿದ ಮೋನಪ್ಪ ಟೊಪ್ಪಿಗೆಯನ್ನು ಕಣ್ಣಿಗೊತ್ತಿಕೊಂಡರು.
ಮಾರನೇ ದಿನದ ಪತ್ರಿಕೆಗಳಲ್ಲಿ ಸೂರಪ್ಪನ ರಾಜೀನಾಮೆ ಅಂಗೀಕಾರವಾದ ಸುದ್ದಿಯೇ ವಿಜೃಂಭಿಸಿತ್ತು. ಅದು ಪ್ರಜಾಪ್ರಭುತ್ವದ ಗೆಲುವು ಎಂದು ಭರತಪುರದ ಜನ ಬೀಗಿಕೊಂಡರು. ಅವರ ಅರಳಿದ ಕಣ್ಣುಗಳ ತುಂಬ ಗಾಂಧೀಜಿ ಬಿಂಬ ಅಪೂರ್ವವಾಗಿ ಕಂಗೊಳಿಸಿತ್ತು.
*****