ಮೂಲ: ವಿ ಎಸ್ ಖಾಂಡೇಕರ
ಎದುರದಡದಿ ನಿಂದು ಬಿದಿರಕೊಳಲ ತನ್ನ|
ಅಧರದಿ ನುಡಿಸುವ ಚದುರ ರಂಗನ ಕಂಡೆ||
ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ಹೊದ್ದುಕೊಂಡು ಮಲಗಿದ್ದ ಅಜ್ಜಿಗೆ ಮಾತ್ರ ಆ ರಾಗದ ಪೆಟ್ಟಿಗೆಯಿಂದ ತಲೆ ಬೇಸರವಾಯಿತು. ಅವರು ಮನಸ್ಸಿನಲ್ಲಿಯೇ ಅಂದುಕೊಂಡರು. “ಶಾಲೆ ಬಿಟ್ಟು ಬಂದ ಕೂಡಲೆ, ಈ ಪೋರಿ, ಸುರುವು ಮಾಡುವಳು. ಆ ರಾಗದ ಪೆಟ್ಟಿಗೆಯನ್ನ. ಸುಮ್ಮನೆ, ಪುರಾಣಕ್ಕೆ ಹೋಗಿ ಬಿಟ್ಟರೆ ಒಳ್ಳೆಯದು!” ಅಷ್ಟರಲ್ಲಿಯೇ ಚಿಕ್ಕ ರಾಮನು ಕೈಯಲ್ಲಿ ಬಣ್ಣದ ಜಾಹಿರಾತೊಂದನ್ನು ತೆಗೆದುಕೊಂಡು ಕುಣಿಯುತ್ತ ಬಂದ. “ಅಜ್ಜ, ಅಜ್ಜಿ, ಇದು ನೋಡು, ಸಿನೇಮಾ ಎಷ್ಟು ಚಂದ ಅದ ಇವತ್ತ” ಓಡುತ್ತೋಡುತ್ತ ಹೋಗಿ ಅವ ಅಜ್ಜಿಯ ಕಾಲುಗಳಿಗೆ ಅಟ್ಟಿಮುಟ್ಟಿಯಾಗಿ ಬಿಗಿದುಕೊಳ್ಳುವವನೇ! ಆದರೆ ಅಜ್ಜಿಯ ಮುಖಚರ್ಯೆಯನ್ನು ನೋಡಿದ ಕೂಡಲೆ ಆತನ ಎಳೆಮನಸ್ಸಿನಲ್ಲಿ ಭೀತಿಯುಂಟಾಗಿ, ಅವನು ‘ಅಕ್ಕಾ, ಅಕ್ಕಾ’ ಎನ್ನುತ್ತ, ಕುಸುಮೆಯ ಕಡೆಗೆ ಧಾವಿಸಿದ.
ಅಜ್ಜಿಯವರು ಒಳಮನೆಯಲ್ಲಿ ಹೋಗಿ ಒಂದು ಪಾತ್ರೆಯಲ್ಲಿ ಅಕ್ಕಿಯನ್ನು ಸುರುವಿಕೊಂಡು “ನಾನೀಗ ದೇವರಿಗೆ ಹೋಗಿ ಬರುವೆ” ಎಂದು ಸೊಸೆಗೆ ಹೇಳಲಿಕ್ಕೆಂದು ತಿರುಗುವಷ್ಟರಲ್ಲಿ ಅವರ ಕಿವಿಗೆ ಶಬ್ದ ಕೇಳ ಬಂದವು- “ಒಂದಿಷ್ಟು ಕೂಸು ತೆಗೆದುಕೊಳ್ಳಬಾರದೆ? ಒಂದೇ ಸವನೆ ಕಿರಿಕಿರಿ ಮಾಡಹತ್ತಿದೆ. ಇಂದು ಅಡಿಗೆಯಾದರೂ ಒಂದಿಷ್ಟು ಬೇಗನೆಯೇ ಆಗಬೇಕಾಗಿದೆ. ಸಿನೇಮಾಕ್ಕೆ-”
ಅತ್ತೆಯ ಮುಖಚರ್‍ಯೆಯನ್ನು ನೋಡಿದ ಕೂಡಲೆ ಸೊಸೆಯು ಸುಮ್ಮನಾದಳು. ಅತ್ತೆಗೆ ಅನಿಸಹತ್ತಿತು- “ನನಗೆ ಪುರಾಣವಿಲ್ಲದಾಗುವದೆಂಬುದರ ವಿಚಾರ ಯಾರಿಗೂ ಇಲ್ಲ.” ಕೂಸು ಗಟ್ಟಿಯಾಗಿ ಅಳುತ್ತಿರುವಾಗಲೇ ಅವರು ಮನೆಯಿಂದ ಹೊರಬಿದ್ದರು. ಹಿಂದಿನ ದಿನವೇ ಕೀರ್ತನದಲ್ಲಿ ಕೇಳಿದ್ದ “ನಂಬದಿರು ಈ ದೇಹ ನಿತ್ಯವಲ್ಲ” ಎಂಬುದನ್ನು ಮನಸ್ಸಿನಲ್ಲಿಯೇ ಗುಣಗುಟ್ಟುತ್ತ, ಕುಸುಮೆಯ ರಾಗದ ಪೆಟ್ಟಿಗೆಯ ಸ್ವರವು ದೂರಿನಿಂದಲೇ ಕೇಳಬರುವ, ಮಸುಕಾಗಿ ಕಾಣುತ್ತಿರುವ ಮನೆಯ ಕಡೆಗೆ ತಿರುಗಿ ನೋಡಿದರು. ಮಂದ ದೃಷ್ಟಿಯಿಂದ ಮನೆಯನ್ನು ನೋಡುತಿರುವಾಗ ಅವರಿಗನಿಸಿತು. ತಾವು ಒಂದು ತೀರದ ಮೇಲಾದರೆ, ಮನೆ ಯೊಳಗಿನ ಉಳಿದ ಜನರೆಲ್ಲರೂ ಎರಡನೇ ತೀರದ ಮೇಲೆ. ನಡುವೆ ಯಾವದೋ ಒಂದು ನದಿಯ ಕರ್ರಗಿನ ನೀರು ಹರಿಯುತ್ತಿದೆ. ತಾವು ಮತ್ತೆ ಆ ನದಿಯನ್ನು ದಾಟಿ ಆಚೆಯ ದಡಕ್ಕೆ ತಿರುಗಿ ಹೋಗುವದೆಂತು? ಎಲ್ಲ ನದಿಗಳ ಮೇಲೂ ಸೇತುವೆಗಳಿರುವದುಂಟು. ಆದರೆ ಆಯುಷ್ಯದ ನದಿಯ ಮೇಲೆ ಪರಮೇಶ್ವರನಿಗೂ ಸೇತುವೆ ಕಟ್ಟಲಿಕ್ಕಾಗುವದಿಲ್ಲ.
ಅಜ್ಜಿಯವರು ಸುಮಾರು ಎಪ್ಪತ್ತು ಮಳೆಗಾಲನ್ನು ಕಳೆದಿದ್ದರು. ಪೂರ ಬಂದಾಗೆಲ್ಲ ಹರಿದು ಬಂದ ಕೊಳಚಿ ಎಲ್ಲವೂ ಒಂದೆಡೆಗೆ ಒಟ್ಟು ಗೂಡುವಂತೆ ಇಡೀ ಆಯುಷ್ಯದಲ್ಲಿಯ ದುಃಖಗಳೆಲ್ಲವೂ ಅವರ ಶೂನ್ಯವಾದ ಮನೋಭೂಮಿಯ ಮೇಲೆ ಈಗ ನರ್ತನಮಾಡುತ್ತಿದ್ದವು. ಶರೀರವು ಶಕ್ತಿಹೀನವಾಯಿತು. ಮನೆ ಕೆಲಸವೆಲ್ಲವೂ ಬಿಟ್ಟಿತು. ಆದರೆ ಅದರೊಡನೆ ಮನವೆಲ್ಲವೂ ಉದಾಸವಾಗಿ ಹೋಯಿತು, ದಿವಸವು ಅದೆಷ್ಟೋ ದೊಡ್ಡದಾಗಿದ್ದಂತೆ ಅನಿಸಹತ್ತಿತು. ರಾತ್ರಿಯಲ್ಲಿ ಒಮ್ಮೆ ನಿದ್ರೆಯಾಗಿ ಎಚ್ಚರಾಯಿತೆಂದರೆ ಮತ್ತೆ ಹತ್ತುತ್ತಿರಲಿಲ್ಲ. ಮತ್ತು ಏನೂ ಮಾಡಿದರೂ ರಾತ್ರಿ ಬೇಗ ಮುಗಿಯುವಂತೆ ಅನಿಸುತ್ತಿರಲಿಲ್ಲ. ತಮ್ಮ ಮಗ, ಸೊಸೆ, ಮೊಮ್ಮಕ್ಕಳು, ಇವರೆಲ್ಲರೂ ತಮ್ಮಿಂದ ಸರ್‍ವಸ್ವಿಯಾಗಿ ಬೇರೆಯಾಗಿರುವರೆಂದು ಅವರಿಗೆ ಇತ್ತೀಚೆಗೆ ಅನಿಸತೊಡಗಿತ್ತು. ಅಜ್ಜಿಯವರು ಹಾಸಿಗೆಯಲ್ಲಿ ಕಣ್ಣು ತೆರೆದುಕೊಂಡು ಕತ್ತಲೆಯನ್ನು ನೋಡುತ್ತ ಬಿದ್ದು ಕೊಂಡಾಗ್ಗೆ ಉಳಿದವರೆಲ್ಲರೂ ಸುಖಸ್ವಪ್ನಗಳನ್ನು ಕಾಣುತ್ತಿರಬಹುದು. ಊಟ ಉಡಿಗೆ, ಅರಿವೆ-ಅಂಚಡಿ, ಮಾತುಕಥೆ, ಇವೆಲ್ಲವುಗಳ ವಿಷಯದಲ್ಲಿಯೂ ಅವರಿಗೆ ಮನೆಯಲ್ಲಿ ವಿಲಕ್ಷಣ ಬದಲಾವಣೆಯಾಗಿದ್ದಂತೆ ಅನಿಸುತ್ತಿತ್ತು.
ಅವರು ಪುರಾಣಕ್ಕೆ ಹೋಗಿ ಕುಳಿತುಕೊಂಡರು. ಆಚಾರ್‍ಯರ ಚರ್‍ಪಟಪಂಜರಿಯು ಸಾಗಹತ್ತಿತು. “ಈ ಜಗತ್ತಿನಲ್ಲಿ ಯಾರದೂ ಯಾರಿಗೂ ಸಂಬಂಧವಿಲ್ಲ. ಆ ಮೂಲಕವೇ ಜನ್ಮದಾರಭ್ಯ ಸರ್ವಕಾಲವೂ ಈಶ್ವರ ಚಿಂತನವನ್ನು ಮಾಡುವದು ಪ್ರತಿಯೊಬ್ಬನ ಕರ್‍ತವ್ಯವಾಗಿದೆ. ನಾನು ಮಹಿಮೆಯು ಅಗಾಧವಾಗಿದೆ” ಮನೆಯಲ್ಲಿ ಯಾರಿಗೋ ಸ್ವಲ್ಪ ಬೇನೆಯಾಗಿದ್ದರಿಂದ ಆಚಾರ್ಯರು ಆ ದಿವಸ ಪುರಾಣವನ್ನು ತುಸು ಬೇಗನೆಯೇ ಮುಗಿಸಿದರು.
ಅಜ್ಜಿಯವರು ಭಾವಿಕತೆಯಿಂದ ಎಲ್ಲವನ್ನೂ ಕೇಳಿ ಎದುರಿನ ಗರ್ಭ ಗುಡಿಯಲ್ಲಿಯ ಶಂಕರನ ಪಿಂಡಿಕೆಯು ಕಾಣದಿದ್ದರೂ, ನಡುವೆಯೇ ಅತ್ತ ಕಡೆಗೆ ಮುಖತಿರುವಿ ನಮಸ್ಕಾರ ಮಾಡಿದರು. ಇನ್ನು ಮೇಲೆ ಈಶ್ವರನು ಭೆಟ್ಟಿಯಾದರೆ ಮಾತ್ರ ಮನದೊಳಗಿನ ತಳಮಳವು ಶಾಂತವಾಗುವದೆಂದು ಅವರಿಗೆ ಅನಿಸಿತು. ಆದರೆ ಈಶ್ವರನು ಭೆಟ್ಟಿಯಾಗುವದು ಸ್ವರ್ಗದಲ್ಲಿ! ಸ್ವರ್ಗವನ್ನು ಸೇರುವದೆಂದರೆ-ಮರಣದ ಕಲ್ಪನೆಯು ಮನಸ್ಸಿನಲ್ಲಿ ಬಂದ ಕೂಡಲೆ ಅವರ ಮೈ ಮೇಲೆ ನವಿರೆದ್ದವು. ಮಗ ಚಿಕ್ಕವನಿರುವಾಗ್ಗೆ ಬೇನೆಯಿಂದ ಬಳಲುತ್ತಿರುವಾಗ, ಮಗನನ್ನು ಬದುಕಿಸಿ ತನ್ನನ್ನು ಕರೆದು ಕೊಂಡು ಹೋಗಬೇಕೆಂದು ಅವರು ದೇವರಿಗೆ ಪ್ರಾರ್ಥಿಸಿಕೊಂಡಿದ್ದರು. ಆದರೆ ಈಗ ಆ ಮಾತಿಗೆ ಎಷ್ಟೋ ವರ್‍ಷಗಳಾಗಿ ಹೋಗಿದ್ದರೂ ಕೂಡ, ಅವರಿಗೆ ಮರಣದ ಕಲ್ಪನೆಯು ಮೊದಲಿನಕ್ಕಿಂತಲೂ ಹೆಚ್ಚಾಗಿ ದುಃಸಹವಾಗಿ ಅನಿಸತೊಡಗಿತ್ತು. ಅವರ ಮನಸ್ಸು ಹೇಳುತ್ತಿತ್ತು ನಿನಗೆ ಮರಣ ಬೇಡ. ಬದುಕಿದ್ದಾರೂ ಏನು ಮಾಡತಕ್ಕವಳು ನೀನು? ನಿನ್ನದೇನು ಕೆಲಸವಿದೆ ಈ ಜಗತ್ತಿನಲ್ಲಿ?
ಪುರಾಣ ನಡೆದಿರುವಾಗಲೇ, ಅವರು ಉದಾಸೀನತೆಯಿಂದ ಹೊರಗಡೆಗೆ ನೋಡಿದರು. ಸಂಧ್ಯಾಕಾಲದ ಕೃಷ್ಣ ಛಾಯೆಗಳು ಇಡೀ ಜಗವನ್ನೇ ಮಸುಕುಮಸಕಾಗಿ ಮಾಡತೊಡಗಿದ್ದವು. ಹಣ್ಣೆಲೆಗಳು ಗಿಡಗಳ ಮೇಲಿಂದ ಕರ್‍ಣ ಕಟುವಾದ ಸಪ್ಪಳದೊಂದಿಗೆ ಕೆಳಗೆ ಬೀಳುತ್ತಿದ್ದವು. ಗೂಡುಗಳ ಕಡೆಗೆ ತಿರುಗಿ ಹಾರಿ ಹೋಗುತ್ತಿರುವ ಕಾಗೆಗಳ ಕರ್‍ಕಶ ಸ್ವರವು ಒಂದೇ ಸವನೆ ಕೇಳಬರುತ್ತಿತ್ತು. ಒಂದು ವಿಚಿತ್ರ ಕಲ್ಪನೆಯು ಅಜ್ಜಿಯವರ ಮನಸ್ಸಿನಲ್ಲಿ ಹಾಯ್ದು ಹೋಯಿತು. ಉಳಿದ ಹಕ್ಕಿಪಕ್ಕಿ ಗಳೆಲ್ಲವೂ ಹೀಗೆ ನಿಧಾನವಾಗಿ ತಮ್ಮ ತಮ್ಮ ಗೂಡುಗಳನ್ನು ಸೇರುವವು. ಆದರೆ ಈ ಕಾಗೆ ಮಾತ್ರ-
ಪುರಾಣವು ಮುಗಿಯುವ ಮೊದಲೇ ಕತ್ತಲೆ ಮುಸಕಿತ್ತು! ಅಜ್ಜಿಯವರು ಸಾವಕಾಶವಾಗಿ ಎದ್ದರು. ಬೀದಿಯಿಂದ ಹೋಗುವಾಗ್ಗೆ ಸ್ಪಷ್ಟವಾಗಿ ಅವರಿಗೆ ಏನೂ ಕಾಣುತ್ತಿರಲಿಲ್ಲ. ಆದರೆ ಮನಸ್ಸಿನಲ್ಲಿಯ ಔದಾಸ್ಯದ ಮೂಲಕ ಆ ಕತ್ತಲೆಯಲ್ಲಿಯೂ ಕೂಡ ಅವರಿಗೆ ಒಂದು ತೆರದ ಸಮಾಧಾನವೆನಿಸುತ್ತಿತ್ತು.
ಬಾಗಿಲಲ್ಲಿಯೇ ಅವರ ಚಿರಂಜೀವ ನಿಂತುಕೊಂಡಿದ್ದ. ಅವನಂದ- “ಎಷ್ಟು ತಡವಾಯಿತು, ಅವ್ವ! ಅದರಲ್ಲಿ ಕತ್ತಲೆಯ ರಾತ್ರಿ ಬೇರೆ-”
ಅಜ್ಜಿಯವರು ಏನೂ ಮಾತಾಡದೆ ಒಳಗೆ ಹೋಗಿ ಬಿಟ್ಟರು. ದೇವರಗುಡಿಯ ಕಡೆಗೆ ಕಂದೀಲು ತೆಗೆದುಕೊಂಡು ಬಂದಿದ್ದರೆ ಈ ಪ್ರೇಮವೇನೋ ನಿಜವೆಂದು ತಮಗೆ ಅನಿಸಬಹುದಾಗಿತ್ತೆಂದು ಅವರ ಮನವು ಹೇಳಹತ್ತಿತು. ಒಳಗೆ ಹೋಗಿ ನೋಡುವಷ್ಟರಲ್ಲಿ ಎಲೆ ಬಡಿಸಿ ಎಲ್ಲವೂ ಸಿದ್ಧವಾಗಿತ್ತು. ಕುಸುಮೆಯೂ ರಾಮನೂ ಸಿನೇಮಾಕ್ಕೆ ಹೋಗುವ ಆನಂದಾತಿರೇಕದಲ್ಲಿದ್ದರು. ಮಕ್ಕಳೆಲ್ಲವೂ ತಮಗೂ “ಸಿನೇಮಾಕ್ಕೆ ನಡೆಯರಿ” ಅನ್ನಬೇಕೆಂದು ಅವರ ಆಶೆ. ಅಲ್ಲಿಂದ ತಾವು “ನನಗೇನೂ ಚನ್ನಾಗಿ ಕಾಣುವದಿಲ್ಲ. ಸುಮ್ಮನೆ ಯಾತಕ್ಕೆ ರೊಕ್ಕ ಹಾಳು? ನಾನು ಸುಮ್ಮನೇ ಮನೆಯಲ್ಲಿದ್ದು ಕೊಂಡು ಕೂಸು ಎತ್ತಿಕೊಂಡಿರುವೆ. ನೀವೆಲ್ಲರೂ ನೋಡಿದರೆ ಆಗಿಹೋಯಿತು!” ಎಂದು ಅನ್ನ ಬೇಕೆಂದು ಭಾವಿಸಿಕೊಂಡಿದ್ದರು.
ಆದರೆ ಅದೇ ಕಾರ್‍ಯಕ್ರ್‍ಅಮವನ್ನು ಸೊಸೆಯು ಹೇಳಿಕೊಟ್ಟ ಕೂಡಲೆ ಅತ್ತೆಯವರಿಗೆ ವಿಲಕ್ಷಣವಾಗಿ ಸಿಟ್ಟು ಬಂದಿತು! ಸಣ್ಣ ಕೂಸನ್ನು ಮನೆಯಲ್ಲಿ ಬಿಟ್ಟು ಸಿನೇಮಾಕ್ಕೆ ಹೊರಟಿರುವ ಸೊಸೆಯ ಒಳ್ಳೇ ಸಮಾಚಾರವನ್ನು ತೆಗೆದುಕೊಳ್ಳಬೇಕೆಂದೆನಿಸಿತು ಕ್ಷಣಮಾತ್ರ ಅವರಿಗೆ, ಆದರೆ ಸಂಜೆಯ ಮುಂದಿನ ಆ ವಿಚಿತ್ರ ಕಲ್ಪನೆಯು ಅವರಿಗೆ ಒಮ್ಮಲೆ ನೆನಪಾಯಿತು. ತಾವಿರುವದು ನದಿಯ ಆಚೆಯ ದಡದಲ್ಲಿ. ಇವರೆಲ್ಲರೂ ಇತ್ತ ಕಡೆಯ ದಂಡೆಯ ಮೇಲೆ! ಇನ್ನು ಮೇಲೆ ಇವರದೂ ತಮ್ಮದೂ ಏನು ಸಂಬಂಧ? ಏನಾದರೂ ಮಾಡಿಕೊಳ್ಳಲೊಲ್ಲರೇಕೆ!
ಅವರು ದೇವರ ಮನೆಯಲ್ಲಿ ಹೋಗಿ ಕುಳಿತುಕೊಂಡರು. ನಂದಾ ದೀಪಕ್ಕೆ ಕುಡಿಯು ಬಂದು ದೀಪವು ಶಾಂತವಾಗಿ ಉರಿಯುತ್ತಿರದಿದ್ದರೂ ಅದನ್ನೇನು ಮಗುಚದೆ ಹಾಗೆಯೇ ಸ್ವಚ್ಛವಾಗಿ ಎಷ್ಟೋ ವೇಳೆ ಕುಳಿತರು. ಕಡೆಗೆ ಅವರು ದೇವರ ಮುಂದೆ ತಲೆಬಾಗಿಸಿ ಸಗದ್ಗದವಾಗಿ “ನಾರಾಯಣಾ, ಬಿಡಿಸಬಾರದೇ ಒಮ್ಮೆ ಇದರೊಳಗಿಂದ!” ಎಂದು ಬೇಡಿ ಕೊಂಡರು. ಅವರ ಮುಖದೊಳಗಿಂದ ಈ ಶಬ್ದಗಳು ಹೊರಬಿದ್ದವೇನೋ ನಿಜ. ಆದರೆ ಜೀವನ ಜಂಜಾಟದೊಳಗಿಂದ ಮುಕ್ತವಾಗಬೇಕಾದರೆ ಮರಣದ ಹೊರ್‍ತಾಗಿ ಎರಡನೇ ಮಾರ್ಗವಿಲ್ಲವೆಂದು ಅವರ ಲಕ್ಷದಲ್ಲಿ ಬಂದ ಕೂಡಲೇ ಅವರಿಗೆ ಹೇಗೋ ಅನಿಸಿತು. ಆದರೆ ತಿರುಗಿ ಎರಡನೇ ದಂಡೆಗೆ ಹೋಗುವದು ಹೇಗೆ? ನಡುವಿನ ನೀರು ಎಷ್ಟು ಆಳವಾಗಿರಬಹುದು!
ಫಲಾಹಾರದ ಸಲುವಾಗಿ ಅವರು ದೇವರ ಮನೆಯನ್ನು ಬಿಟ್ಟು ಹೊರಗೆ ಬಂದ ಕೂಡಲೆ, ಅವರಿಗೆ ತಮ್ಮ ಮನೆಯಲ್ಲಿಯ ಎರಡನೇ ಜಗತ್ತಿನ ಅರಿವು ಮತ್ತಿಷ್ಟು ಸ್ಪಷ್ಟವಾಯಿತು. ಈಗ ಎಷ್ಟೋ ವರ್ಷಗಳಲ್ಲಿ ಬಿಳಿಯ ಪತ್ತಲದ ಹೊರತಾಗಿ ಎರಡನೇ ಯಾವ ವಸ್ತ್ರದ ಸ್ಪರ್ಶವೂ ಅವರಿಗೆ ಆಗಿರಲಿಲ್ಲ. ಸಿನೇಮಾಕ್ಕೆ ಹೋಗಲಿಕ್ಕೆ ಸಿದ್ಧಳಾದ ಕುಸುಮೆಯನ್ನು ಅವರು ನೋಡಿದರು. ಛೇ! ಹೊಸ ಗುಲಾಬಿ ಪತ್ತಲ, ಅದೇ ಬಣ್ಣದ ಬ್ಲೌಜ, ಹೆಳಲಿನ ಚಕ್ರ, ಎಡಗೈಯಲ್ಲಿ ಕಟ್ಟಿದ ಗಡಿಯಾರ ಇಷ್ಟಾದರೂ ಒಳ್ಳೆಯದು. ಮುಖಕ್ಕೆ ಹಚ್ಚಿಕೊಂಡ ಪಾವಡರು ಅವರಿಗೆ ಕಾಣಿಸುವದು ಶಕ್ಯವಿರಲಿಲ್ಲ. ಆದರೂ ನೀರು ಕುಡಿಯಲಿಕ್ಕೆಂದು ಕುಸುಮೆಯು ಅವರ ಹತ್ತರ ಹಾಯ್ದು ಹೋದ ಕೂಡಲೆ, ಯಾವದೋ ಒಂದು ಅತ್ತರಿನ ಸುವಾಸವು ಅವರಿಗೆ ಬಂದು ತಲುಪಿದಾಗ ಅವರೇನೂ ಮೂಗು ಮುರಿಯದೆ ಇರಲಿಲ್ಲ.
ಸ್ವಲ್ಪ ಕಾಲದಲ್ಲಿ ಕುಸುಮೆಯ ತಾಯಿಯ ಸಿದ್ಧತೆಯೂ ಆಯಿತು. ಮೂರು ಮಕ್ಕಳ ತಾಯಿಯಾಗಿ ಕನ್ನಡಿಯನ್ನು ಮುಂದಿಟ್ಟು ಕೊಂಡು ಕೇಶ ರಚನೆಯನ್ನು ಮಾಡಿಕೊಳ್ಳುತ್ತಿರುವದನ್ನು ಕಂಡು ಅಜ್ಜಿಯವರಿಗೆ ವಿಚಿತ್ರವೆನಿಸಿತು. ಇಂಥ ಜಗತ್ತಿನಿಂದ ತಾವೂ ದೂರದೂರಾಗಿ ಹೋಗುತ್ತಿರುವದು ಒಂದು ದೃಷ್ಟಿಯಿಂದ ಒಳ್ಳೆಯದೇ ಎಂದು ಕ್ಷಣಮಾತ್ರ ಅವರಿಗನಿಸಿತು. ಆದರೆ ಆ ವಿಚಾರವು ಕೂಸನ್ನು ತೊಟ್ಟಿಲಲ್ಲಿ ಮಲಗಿಸಿ ಎಲ್ಲರೂ ಮನೆಯ ಹೊರೆಗೆ ಬೀಳುವವರೆಗೆ ಮಾತ್ರ ಉಳಿಯಿತು. ಅವರು ಕೆಲವು ಕಾಲ ದೇವರ ಮನೆಯಲ್ಲಿ ಕುಳಿತುಕೊಂಡರೂ, ಮನೆಯಲ್ಲಿಯ ಭಯಾನಕವಾದ ಶಾಂತತೆಯಿಂದ ಅವರ ಮನಸ್ಸಿನಲ್ಲಿ ಅತಿಶಯವಾಗಿ ಅಸ್ವಸ್ಥತೆಯಾಯಿತು. ಅವರಿಗೆ ಒಂದು ಕ್ಷಣ ಅನಿಸಿತು- ಈ ಜಗವನ್ನು ತಾವು ಎಂದಿಗೋ ಬಿಟ್ಟು ಹೋದವರು, ಯಾತರ ಮೇಲಾದರೂ ಆಶೆ ಉಳಿದಿದ್ದರ ಮೂಲಕ ತಮಗೆ ಈಗ ಭೂತಯೋನಿಯಲ್ಲಿರಬೇಕಾದದ್ದು. ಆ ಮೇಲೆ ಆ ಕ್ಷಣದಲ್ಲಿ ದೇವರ ಮುಂದೆ ಕುಳಿತವರು ಸ್ವತಃ ತಾವೇ ಆಗಿರದೆ, ತಮ್ಮ ಭೂತವೇ ಆಗಿದ್ದರೆ?
ಈ ವಿಚಿತ್ರ ವಿಚಾದಿಂದ ಅವರ ಹೃದಯವು ನಡುಗಿತು. ದೇವರ ಮನೆಯೊಳಗಿಂದ ಹೊರಗೆ ಬಂದು, ಇಲ್ಲಿ ಅಲ್ಲಿ ದೀಪ ಹಚ್ಚುತ್ತ, ಸುಮ್ಮ ಸುಮ್ಮನೆ ಮನೆ ತುಂಬ ತಿರುಗಾಡಹತ್ತಿದರು. ಅತ್ತಿತ್ತ ನೋಡುವಷ್ಟರಲ್ಲಿ ಅಡಿಗೆಯ ಮನೆಯ ಒಂದು ಮೂಲೆಯಲ್ಲಿ ನಾಲ್ಕೆದು ಕಬ್ಬಿನ ತುಣುಕುಗಳನ್ನು ನೋಡಿ, ಅವುಗಳನ್ನು ಸುಲಿದುಕೊಂಡು ತಿನ್ನಬೇಕೆಂದೆನಿಸಿತು. ಆದರೆ ಮರುಕ್ಷಣವೇ ಅವರಿಗೆ ಎಚ್ಚರಬಂದಂತಾಗಿ, ಬಾಯಿಯಲ್ಲಿ ಒಂದು ಕೂಡ ಹಲ್ಲಿಲ್ಲದಾಗ ತಾನು ಕಬ್ಬು ತಿನ್ನುವದಾದರೂ ಹೇಗೆ? ತಿನ್ನುವದೆಂಬ ಪ್ರಶ್ನೆಯು ಅವರಿಗೆ ಮನದಲ್ಲಿಯೇ ಎಷ್ಟೋ ಅಪಮಾನವನ್ನುಂಟು ಮಾಡಿತು. ಸೊಸೆಯ ಕೋಣೆಯಲ್ಲಿ ಹೋದ ಮೇಲಂತೂ ಅವರ ಮನಸ್ಸಿನ ಅಸ್ವಾಸ್ಥ್ಯವು ಹೆಚ್ಚಾಯಿತು. ಅಲ್ಲಿಯ ಪಲ್ಲಂಗದ ಮೇಲಿನ ಸೊಳ್ಳೆ ತೆರೆ, ಮೇಜಿನ ಮೇಲಿನ ಒಳ್ಳೆ ಬೆಲೆಬಾಳುವ ಫೋನೋ, ಗೋಡೆಯ ಮೇಲಿನ ತರತರದ ಸುಂದರ ಚಿತ್ರಗಳು,- ಎತ್ತ ನೋಡಿದತ್ತ ಅವರ ಕಣ್ಣುಗಳಿಗೆ ದುಂದುಗಾರಿಕೆಯೇ ಕಂಡು ಬಂದಿತು. ನಡುವೆಯೇ ನೆಲದ ಮೇಲೆ ಬಿದ್ದಿದ್ದ ರೇಶಿಮೆಯ ಕರವಸ್ತ್ರವನ್ನು ನೋಡಿದಾಗಂತೂ, ಅದನ್ನು ತೆಗೆದು ಕೊಂಡು ಚರ ಚರನೆ ಹರಿದು ಬಿಡಬೇಕೆನ್ನುವಷ್ಟು ಸಿಟ್ಟು ಬಂದಿತು. ಹುಡುಗರ ಕೋಣೆಯಲ್ಲಿ ಹೋದ ಮೇಲಂತೂ ಅವರ ಕೋಪಾಗ್ನಿಯಲ್ಲಿ ಮತ್ತಿಷ್ಟು ಎಣ್ಣೆ ಬಿದ್ದಂತಾಯಿತು. ಕುಸುಮೆಯ ಮೇಜಿನ ಮೇಲಂತೂ ಕೇಶ ರಚನೆಯ ಸಾಮಗ್ರಿಗಳ ಸಮ್ಮಿಲನವೇ ಕೂಡಿತ್ತು. ಸಮೀಪದಲ್ಲಿಯೇ ಬಿದ್ದುಕೊಂಡಿದ್ದ ಒಂದು ಪುಸ್ತಕವನ್ನು ನೋಡಿ ಅಜ್ಜಿಯವರು ಪಿಟಪಿಟನೆ ಅಂದುಕೊಂಡರು ಏನೂ ಅರ್ಥವಿಲ್ಲ. ಈಗಿನ ಈ ಹೆಣ್ಣು ಹುಡಿಗೆಯರೆಲ್ಲ ಏನು ಬೇಕಾದದ್ದನ್ನು ಓದುವರು!” ಅದೊಂದು ಕಾದಂಬರಿ ಇತ್ತು. ಸಾಲದ್ದಕ್ಕೆ ಅದರ ಮುಖಪೃಷ್ಟದ ಮೇಲೆ ನಾಯಿಕೆಯನ್ನು ಚುಂಬಿಸುತ್ತಿರುವ ನಾಯಕನ ಚಿತ್ರವೊಂದಿತ್ತು! ಗೂಟದ ಮೇಲೆ ತೂಗಾಡುವ ರಾಮನ ‘ಸಾಹೇಬನ ಟೊಪ್ಪಿಗೆ’ಯನ್ನು ಅವರು ನೋಡಿಯೂ ನೋಡದಂತೆ, ಸಮೀಪದಲ್ಲಿ ಬಿದ್ದು ಕೊಂಡಿದ್ದ ಪಾಟಿಯ ಮೇಲಿನ ಪುಸ್ತಕವನ್ನೆತ್ತಿ ತೆರೆದು ನೋಡಿದರು ಕಷ್ಟದಿಂದ ಅವರಿಗೆ ಇಷ್ಟೇ ಓದಲು ಸಾಧ್ಯವಾಯಿತು.-
ಅಜ್ಜನ ಬೆಳ್ಳನ ಚಂಡಿಕೆ ಗಾಳಿಗೆ
ಬುರು ಬುರು ಬುರು ಬುರು ಹಾರುವದು
ನಮಗೆಲ್ಲಾ ನಗೆ ಬೀರುವದು.
ಬೇಜಾರಿನಿಂದ ಆ ಪುಸ್ತಕವನ್ನು ಅಲ್ಲಿಯೇ ಬೀಸಾಟಿ, ಅವರು ಪಡಸಾಲೆಗೆ ಬಂದರು. ಅಲ್ಲಿಯೂ ಗಾಢವಾಗಿ ಕತ್ತಲೆಯು ಹಬ್ಬಿಕೊಂಡಿತ್ತು. ಅಂಗಣದಲ್ಲಿ ಒಂದು ಹಳೆಯ ಹಂದರದ ಮೇಲೆ ಬೆಳೆದ ಮಲ್ಲಿಗೆಯ ಬಳ್ಳಿಯು ಎಲ್ಲ ಕಡೆಯಲ್ಲಿಯೂ ಸುವಾಸವನ್ನು ಬೀರುತ್ತಿತ್ತು. ಆದರೆ ಅಜ್ಜಿಯವರಿಗೆ ಅದರ ಅರಿವೂ ಇರಲಿಲ್ಲ.
ಅವರು ಮತ್ತೆ ದೇವರಮನೆಯಲ್ಲಿ ಹೋಗಿ, ಅಲ್ಲಿಯೇ ನೆಲದ ಮೇಲೆ ಅಡ್ಡಾದರು. ಮನವೆಲ್ಲವೂ ಕುರುಡತನದಿಂದ ಧಡಪಡಿಸುತ್ತಿತ್ತು. ತಾವು ಬದುಕಿರುವದಾದರೂ ಯಾತರ ಸಲುವಾಗಿ ಎಂಬುದು ಅವರಿಗೆ ತಿಳಿಯದಾಗಿ ಹೋಯಿತು. ಮಲಗಿಕೊಂಡು ಕಣ್ಣು ಮುಚ್ಚಿದ ಕೂಡಲೆ, ಅವರ ಕಣ್ಣುಗಳ ಮುಂದೆ ಇಡೀ ಆಯುಷ್ಯವು ಒಂದು ಪಾತರಗಿತ್ತಿಯಂತೆ ಹಾಯ್ದು ಹೋಯಿತು. ತಾವು ಇಷ್ಟು ದಿವಸ ಬದುಕಿರುವದು ಯಾರ ಸಲುವಾಗಿ? ಇನ್ನು ಮುಂದೆ ಬದುಕಿರುವದು ಯಾಕೆ? ಮತ್ತು ಯಾರ ಸಲುವಾಗಿ? ಹೀಗೆ ಅನೇಕ ವಿಚಾರಗಳಿಂದ ಅವರ ಮನಸ್ಸು ತಲ್ಲಣ ಗೊಂಡು, ಅವರು ಅಲ್ಲಿಯೇ ನಿದ್ರೆ ಹೋದರು.
ಆದರೆ ಸ್ವಲ್ಪ ವೇಳೆಯಲ್ಲಿಯೇ ಯಾರೋ ಬಾಗಿಲ ಬಾರಿಸಿದರು. ನಿದ್ರೆ ಮುರಿದದ್ದರಿಂದ ತುಸು ಸಿಟ್ಟಿನಲ್ಲಿಯೇ ಅಜ್ಜಿಯವರು ಕಣ್ಣು ತೆರೆದರು ನಂದಾದೀಪವು ಶಾಂತವಾಗಿ ಹೋಗಿತ್ತು. ಹಾಗೆಯೇ ಕತ್ತಲೆಯಲ್ಲಿ ಧಡಪಡಿಸುತ್ತ ಬಾಗಿಲ ಕಡೆಗೆ ಬಂದರು. ಮನೆಯವರೆಲ್ಲರೂ ಸಿನೇಮಾದಿಂದ ತಿರುಗಿ ಬಂದಿದ್ದರು.
“ಕೂಸು ಎಚ್ಚರಾಗಿತ್ತೇನು?” ಸೊಸೆ ಪ್ರಶ್ನೆ ಮಾಡಿದಳು. ಅತ್ತೆಯವರು ಏನೂ ಉತ್ತರ ಕೊಡಲಿಲ್ಲ. ತೊಟ್ಟಿಲಲ್ಲಿ ಕೈಯಾಡಿಸುತ್ತಲೇ ಸೊಸೆಯು ಉದ್ಗಾರ ತೆಗೆದಳು “ಅವ್ವಯ್ಯ ತೊಯ್ದು ತಪ್ಪಂಡಿಯಾಗಿದೆಯಲ್ಲ ಹಾಸಿದ್ದು! ಇದರಲ್ಲಿಯೇ ಬಿದ್ದುಕೊಂಡಿದೆಯಲ್ಲ ಮಗು” ಎನ್ನುತ್ತ ಅವಳು ಕೂಸು ತೆಗೆದುಕೊಂಡು ಹೋದಳು. ಇದನ್ನು ನೋಡಿ ಮಾತ್ರ ಅಜ್ಜಿಯವರಿಗೆ ತಾವು ಆಗಲೇ ಮನೆಯಲ್ಲಿ ಯಾರೂ ಇಲ್ಲದ ಮೂಲಕ ವೇಳೆಸಾಗದೆ ಮನೆತುಂಬ ಅಡ್ಡಾಡಿದ್ದರೂ ಕೂಸು ಮಲಗಿದ್ದ ಕಡೆಗೆ ಮಾತ್ರ ತಾವು ಬಂದಿರಲಿಲ್ಲವೆಂಬುದು ನೆನಪಾಯಿತು. ಮನೆಯಲ್ಲಿಯೇ ಉಳಿದ ಎಲ್ಲ ಜನರ ಜಗವೆಲ್ಲವೂ ತಮ್ಮಿಂದ ಬೇರೆಯಾಗಿದ್ದರೂ ಆ ಮುದ್ದು ಕೂಸಿನ ಜಗವೇನು ತಮ್ಮಿಂದ ಬೇರೆಯಾಗಿದೆಯೆ? ಎಂದೆನಿಸಿ, ಅವರು ಮಗುವನ್ನು ಕರೆದುಕೊಳ್ಳಬೇಕೆಂದು ಮುಂದಕ್ಕೆ ಬರುವಷ್ಟರಲ್ಲಿ ಸೊಸೆಯು ತನ್ನ ಕೋಣೆಯನ್ನು ಸೇರಿಬಿಟ್ಟಿದ್ದಳು.
ಕತ್ತಲೆಯಾಗಿದ್ದ ದೇವರಮನೆಯಲ್ಲಿ ಅಜ್ಜಿಯವರು ಕಣ್ಣೊರಿಸಿಕೊಂಡರು. ಆ ಮುದ್ದು ಮಗುವಿನ ವಿಶ್ವದಲ್ಲಿ ತಾವು ಇನ್ನೂ ರಮಿಸಬಹುದು. ಆದರೆ ಅವರ ಮೇಲೆ ತಮ್ಮದೇನು ಹಕ್ಕು? ತಾಯಿಯ ಮಗ್ಗುಲಿನಲ್ಲಿ ಮಗುವು ಈಗಲೇ ನಕ್ಕು ನಲೆಯುತ್ತ ಮಲಗಿರಬೇಕು. ಆದರೆ ತಾವು – ಬೆಳಗಾಗುವವರೆಗೂ ಕಣ್ಣಿಗೆ ಕಣ್ಣು ಹತ್ತುವದೂ ಶಕ್ಯವಿಲ್ಲ. ಒಂಟಿಗತನ – ಎಂದಿಗೂ ಇಲ್ಲವಾಗಲಾರದ ಒಂಟಿಗತನ – ಇನ್ನು ಮುಂದೆ ತಮ್ಮ ಆಯುಷ್ಯದಲ್ಲಿ ಸಿಗಬೇಕಾದ ಆನಂದವಾದರೂ ಯಾವದು? ನಂದಾದೀಪವನ್ನು ಹಚ್ಚಬೇಕೆಂದು ಎಷ್ಟೋ ಸಾರೆ ವಿಚಾರ ಮನಸ್ಸಿನಲ್ಲಿ ಬಂದರೂ ಕುಳಿತಲ್ಲಿಂದ ಏಳುವ ಮನಸ್ಸಾಗಲೊಲ್ಲದು. ಕೂಡ್ರಲೊಲ್ಲನೇಕೆ ದೇವರು ಹಾಗೆಯೆ ಕತ್ತಲೆಯಲ್ಲಿ “ಎಂಬ ಅವರ ಶ್ರದ್ಧೆಗೆ ವಿಸಂಗತವಾದ ವಿಚಾರಗಳಾದರೂ ಕ್ಷಣಮಾತ್ರ ಅವರ ಮನಸ್ಸಿನಲ್ಲಿ ಬಂದು ಹೋದವು. ಇಷ್ಟರಲ್ಲಿ ಕೂಸು ಬಹಳವಾಗಿ ಅಳುತ್ತಿರುವದು ಕೇಳಬಂದಿತು. ಅಜ್ಜಿಯವರೆನೂ ಕೂತವರು ಮಿಸುಕಲಿಲ್ಲ. “ದೇವರ ಮನೆಯಲ್ಲಿ ಇರಬಹುದು ಆವರು” ಎಂದೆನ್ನುವ ಸೊಸೆಯ ಮಾತು ಕೇಳಿದ ಕೂಡಲೇ, ಅವರು ಎದ್ದು ಲಗುಬಗೆಯಿಂದ ದೇವರ ಮುಂದಿನ ದೀಪಹಚ್ಚಿದರು. ಕೂಸನು ತೆಗೆದುಕೊಂಡು ಒಳಗೆ ಬಂದಕೂಡಲೆ, ಮಗುವು ಅಜ್ಜಿಯ ಕಡೆಗೆ ಧಾವಿಸುವಂತೆ ಕೈ ಮುಂದಕ್ಕೆ ಮಾಡಿ ಹೋಗಲೆಳಿಸಿತು. ಸೊಸೆಯು ಹೇಳಿದಳು, “ಎಚ್ಚರಾದ ಕೂಡಲೆ” “ಅ….ಜೀ…ಅ….ಜ್ಜೀ ಅನ್ನ ಲಿಕ್ಕೆ ಸುರು ಮಾಡಿದ್ದು ಏನು ಮಾಡಿದರೂ ಸುಮ್ಮನಾಗಲೊಲ್ಲದು. ಎಷ್ಟು ಚಪ್ಪರಿಸಿದೆ…. ಆಡಿಸಿದೆ. ಒಂದೇ ಸವನೆ “ಆ….ಜೀ…. ಅಜ್ಜಿ” ನಡೆದುಬಿಟ್ಟಿದೆ. “ನಿಮಗೆ ಸುಮ್ಮನೆ ತ್ರಾಸಾಗಬಾರದೆಂದು- ”
“ಕೂಸಿನದೆಂಥ ತಾಸು? ಹಾಗೇನೂ ಮಾತಾಡಬಾರದು ತಾಯಿ?” ಅಜ್ಜಿಯವರು ನಸುನಗುತ್ತ ಹೇಳಿದರು.
ಕೂಸಿನ ತಾಯಿಯು ಹೋಗಿ ಮಲಗಿಕೊಂಡ ನಂತರ ಅಜ್ಜಿಯವರು ಮಗುವನ್ನು ಆಡಿಸುವದಕ್ಕಾಗಿ ಹೊರಗೆ ಪಡಸಾಲೆಯಲ್ಲಿ ಬಂದು ಆಕಾಶದಲ್ಲಿಯ ಚಿಕ್ಕೆಗಳನ್ನು ತೋರಿಸಹತ್ತಿದರು. ಈಗ ಮಾತ್ರ ಅವರಿಗೆ ಕಲ್ಪನೆಯಾಯಿತು. ಮೊದಲಿನಂತೆ ಕತ್ತೆಲೆಯು ಗಾಢವಾಗಿ ಹಬ್ಬಿತ್ತು ಆದರೆ ಮೇಲೆ ತಾರೆಗಳು ಚಕ ಚಕನೆ ಹೊಳೆಯುತ್ತಿದ್ದವು. ಗಾಳಿಯ ಲಹರಿಯಗುಂಟ ಮಲ್ಲಿಗೆಯಸುವಾಸವಾದರೂ ಬಂದಿತು. ಆ ಮಲ್ಲಿಗೆಯ ಮಧುರ ಸುವಾಸಕ್ಕಾಗಿಯೇ ಆ ಬಿದಿರುಹಂದರಕ್ಕೆ ಹಾಗೆ ಒಂದೇ ಸ್ಥಳದಲ್ಲಿ ಹುದುಗಿಕೊಂಡು ನಿಲ್ಲಬೇಕಾಗಿದೆ ಎಂಬ ವಿಚಾರ ಬಂದಕೂಡಲೆ ಅಜ್ಜಿಯವರ ಮನಸ್ಸಿನಲ್ಲಿ ಎಷ್ಟೋ ಶಾಂತತೆಯುಂಟಾಯಿತು.
ಅವರ ಪ್ರಸನ್ನವಾದ ಮನಸ್ಸು ಕೇಳುತ್ತಿತ್ತು. “ಅದೇ ದೇವರ ಮನೆಯಿಂದ ಬಂದಿರುವ ಮತ್ತು ಈಗಲೇ ದೇವರ ಮನೆಗೆ ಹೋಗುವವರ ನಡುವೆ ನಿಕಟಪ್ರೇಮ ಉಂಟಾಗಲಿಕ್ಕೆ ಏನು ಅಡ್ಡಿ?”
ತಾಯಿಯು ಹೇಳಿದಂತೆ ಕೂಸನ್ನು ಕರೆದುಕೊಂಡು ಹೋಗಲಿಕ್ಕೆ ಬಂದ ಕುಸುಮೆಯು ಗುಣಗುಟ್ಟುತ್ತಿದ್ದಳು-
ಅಂದು ಗೋಪಾಲನೆದ್ದು
ಕಂಡನು ಪುಷ್ಟ ರಾಶಿ
ಎದುರದಡದಿ ನಿಂದು
ಬಿದಿರಕೊಳಲ ತನ್ನ
ಅಧರದಿ ನುಡಿಸುವ
ಚದುರ ರಂಗನ ಕಂಡೆ
ಆ ಗುಣುಗುಣು ಗಾನವನ್ನು ಕೇಳಿ ಕೂಸಿನಂತೆ ಅಜ್ಜಿಯವರಿಗಾದರೂ ವಿಲಕ್ಷಣವಾದ ಆನಂದವಾಯಿತು.
*****









