(ಹೆಂಡತಿಯ ಮಾತು)
“ನಿಮ್ಮ ಕೈಯನ್ನು ಹಿಡಿದು, ಮೂರು ಸುಗ್ಗಿಯು ಮಾಗಿ,
ನಾಲ್ಕನೆಯದಿದು ತಲೆಯ ಹೊರ ಹಾಕಿತಲ್ಲಾ?
ಚಕ್ರ ನೇಮಿ ಕ್ರಮದಿ ಹಗಲಿರುಳು ತಿರುತಿರುಗಿ
ಮಾಸ-ವರ್ಷಗಳಲ್ಲಿ ಪರಿಣಮಿಪುದಲ್ಲಾ?
ಆಚೆ ಮನೆ ಕಸ್ತೂರಿ, ನೆರೆಮನೆಯ ಸಿಂಗಾರಿ,
ಓಣಿ ಮನೆಯಾ ಶಾರಿ, ಬೀದಿ ಮನೆ ಗೌರಿ
ಈಚೆ ಮನೆಯಾ ಗ೦ಗೆ, ಮಗ್ಗುಲಲ್ಲಿ ತುಂಗೆ,
ದೊಡ್ಡ ಮನೆ ಕಾವೇರಿ, ಗುಡ್ಡೆ ಮನೆ ನಾರಿ,-
ಇವರೆಲ್ಲ ತ೦ತಮ್ಮ ಗ೦ಡ೦ದಿರೊಡನೊರೆದು,
ಹೂಸೀರೆ- ಜರಿ ಸೀರೆ- ರವಕೆಗಳನು
ಉಟ್ಟಿಹರು; ತೊಟ್ಟಿಹರು ಕೈಗಳಲಿ ಕತ್ತಿನಲಿ
ಬಗೆ ಬಗೆಯ ಬಂಗಾರ ತೊಡವುಗಳನು
ಕಪ್ಪು ಸೀರೆಯನುಡುವುದೇ ನನ್ನ ಹಣೆಬರಹ
ಬೇರೆ ಬಣ್ಣದ ಸೀರೆ ತ೦ದರೇನು?
ತೆಳುವಾದ ಬಿಳಿ ಸೀರೆ, ಚಿತ್ರದಂಚಿನ ಸೀರೆ
ಕನಸಿನಲ್ಲುಡುವುದೇ ನನ್ನ ವಿಧಿಯೇನು?
ತಂದೆ ಮಾಡಿಸಿ ಕೊಟ್ಟ ಚಿನ್ನದಾಭರಣಗಳು
ಒ೦ದೆರಡೆ ಅ೦ದಿನಿ೦ದಿ೦ದುವರೆಗೆ
ನನಗಾಗಿ ತೂಕವೊ೦ದಾದರೂ ಚಿನ್ನವನು
ಕರಗಿಸಲದೇಂ ಮನವು ಬಂತೆ ನಿಮಗೆ?
‘ಯುದ್ಧ ದುರ್ದಿನದಿಂದ ಪವನಿಗೇರಿತು ಬೆಲೆಯು
ಕಡಿಮೆಯಾಗಲಿ ಮಾಡಿಸುವೆ; ಚಿಂತೆಯೇಕೆ?
ಹೊನ್ನ ತಗಡನು ಮಾಡಿ ನಿನ್ನ ಮುಚ್ಚಿಪೆ’ ನೆಂದು
ಲಲ್ಲೆ ಯಾಡುತಲಿರುವುದಿಷ್ಟೇನು ಸಾಕೇ?
ತಲೆಗೆ ಪರಿಮಳದೆಣ್ಣೆ, ಕೇಶವರ್ಧಿನಿ ತೈಲ,
ಮೊಗಕೆ ಸೌಸವೀಯುತಿಹ ಬಿಳಿಯ ಹುಡಿಯು,
ತಲೆ ಕೂದಲೋರಣದಿ ನಿಲ್ಲುವಂತಿಹ ‘ಕ್ಲಿಪ್ಪು’,
ಹೆಣೆಜಡೆಯ ತುದಿನೆಯ್ಯಲಿಹ ರೇಷ್ಮೆ ಕುಡಿಯು-
ಬಣ್ಣ ನೂಲಿನ ಚಿತ್ರ ಬಿಡಿಸಿರುವ ಕರವಸ್ತ್ರ,
ಕೈಗಳಿಗೆ ಹೊಸ ಬಗೆಯ ಗಾಜು ಬಳೆಯು,
ಈ ವಿಲಾಸದ ವಸ್ತುಗಳ ತನ್ನಿರೆಂದೆನಲು,
ನಿಮ್ಮ ಮುಖ ಮುದ್ರೆಯಲ್ಲಿ ಮೌನ ಕಳೆಯು!
ಯಾವಾಗ ನೋಡಿದರು ಪುಸ್ತಕಗಳೊಡನಾಟ;
ಓದುವುದು, ಬರೆಯುವುದು- ಆಯಾಸವಿಲ್ಲ
ಹಗಲಿಡೀ ನಿಮಗಾಯ್ತು ಪಾಠಶಾಲೆಯ ಕೂಟ
ನನ್ನೊಡನೆ ಸಲ್ಲಾಪ-ಸರಸೋಕ್ತಿಯಿಲ್ಲ
ಸಾಕು ನಿಮ್ಮಯ ಪ್ರೀತಿ; ಬರಿಯ ಬಾಯುಪಚಾರ
ತನ್ನ ಕಾರ್ಯಕೆ ಮಾತ್ರ ನನ್ನನಾಶಿಪುಹೇ?
ನಿಮ್ಮಿ೦ದಲೊಂದಿಷ್ಟು ಸುಖ ಹೊಂದಲೆನಗಿಲ್ಲ
ಬರಿ ಗುಲ್ಲು ಕಡು ನಿದ್ದೆಗೇಡೆಂಬ ಗಾದೆ!”
*****
೧೯೪೫








