Home / ಕಥೆ / ಸಣ್ಣ ಕಥೆ / ಒಲವೊ? ಕುಲವೊ?

ಒಲವೊ? ಕುಲವೊ?

ಶಠಗೋಪ ಹದಿನಾರಾಣೆ ಶ್ರೀವೈಷ್ಣವ.

ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲಿಯೂ ಸಿಗದಂಥ ಚೆಲುವೆಯಲ್ಲ. ಸುಮಾರು ಎತ್ತರದ ಎಣ್ಣೆಗೆಂಪಿನ ಹೆಣ್ಣು, ಧೂಳು ಹತ್ತಿದ ಸೀರೆ … ಕಟಿಯಲ್ಲಿ ಎಲೆಯ ಹೆಡಿಗೆ… ಕೈಗೆ ಬೆಳ್ಳಿಯ ಕಡಗ… ಕತ್ತಿನಲ್ಲಿ ಕರಿಮಣಿ, ಹವಳ… ಕಿವಿಯಲ್ಲಿ ಬೆಂಡೋಲೆ… ತೈಲ ಹಚ್ಚಿದ ತಲೆಗೂದಲು… ತುರುಬಿನ ತುಂಬ ಹೂವು… ನಗುಮುಖದಲ್ಲಿ ಮೂರು ಕಾಸಿನಷ್ಟಗಲ ಕುಂಕುಮದ ಬಟ್ಟು… ಸಂಜೆಗೆಂಪನ್ನು ಎರಚುವ ತಂಬುಲದ ತುಟಿ… ಹದಿನೇಳರ ಪ್ರಾಯವಿರಬಹುದು… ಎಲ್ಲಕ್ಕೂ ಮೇಲಾಗಿ ಮುಖದ ತುಂಬ ಎರಡು ಕಣ್ಣು… ಕಣರುಚಿಯ ಕಿಡಿಯೆರಡು ಚಿರರುಚಿಗಳಾದಂಥ ಕಣ್ಣು… ಹೃದಯದ ಆಳವನ್ನು ತಿಳಿಯಲು ನೆರವಾಗುವ ಕಣ್ಣು…

ವೀಳೆಯದೆಲೆಯವಳು-ಅವಳ ಹೆಸರು ರತ್ನಿ-ಎಲೆಯಿಡುತ್ತಾ ತಲೆಯೆತ್ತಿದಳು. ಎದುರಿನಲ್ಲಿ ಕಡೆದ ಕೃಷ್ಣ ಕಾಯದ ಶಠಗೋಪ! ನೀರು ಕಾರುವ ಊಟೆಯಂತೆ ತೇಜಸ್ಸು ಕಾರುವ ಗುಂಡುಮುಖದಲ್ಲಿ ಎತ್ತಿ ಕಾಣುವ ಬಿಳಿಯ ತಿರುಮಣ್ಣು, ಹಳದಿ ಶ್ರೀಚರಣ… ಗರಿ ಹಿಡಿದು ಲುಂಗಿಸುತ್ತಿದ ಬೆಳ್ಳನೆಯ ಅಂಗಲದಂಚಿನ ಪಂಚೆ… ಎದೆ ಮೇಲೆ ಮಲಗಿರುವ ಮೂರೆಳೆಯ ಜನಿವಾರ… ತಲೆಯ ತುದಿಯಲ್ಲಿ ಕುಳಿತ ಸಣ್ಣ ಕುಡಿಮಿ… ಎಲ್ಲಕ್ಕು ಮೇಲಾಗಿ, ಇರುಳ ನೆರಳಿನ ಕೆಳಗೆ ಹೊಳೆಯುವ ಎರಡು ಶುಕ್ರಗ್ರಹಗಳೆಂಬ ಭ್ರಾಂತಿಯನ್ನುಂಟು ಮಾಡುವ ಕಣ್ಣುಗಳು… ಎದೆಯೊಲವಿನ ಹೊನಲುಕ್ಕಿ ಕೋಡಿ ಹರಿದು ಹೊರಬರುವ ತೂಬುಗಳು…

ಒಬ್ಬರನ್ನೊಬ್ಬರು ನೋಡಿದರು. ಒಬ್ಬರಿಗೊಬ್ಬರು ಮನತೆತ್ತರು. ‘ಶ್ರೀನಿವಾಸ’ರು ಒಂದು ಕಡೆ ಹಾಡಿರುವರು :

“ಆಗಸದ ವಾಯುಮಂಡಲದ ರಾಜರ ತೆರದೆ
ಗೃಧ್ರಗಳು ಗರಿಹರಡಿ ಹಾರುತಿರುವುದು ನೀವು
ನೋಡಿರುವಿರೋ? ಹೆಣ್ಣು ಗಂಡು ಗರಿಯನು ಹರಡಿ
ಮೇಲು ಮೇಲಕೆ ಇನ್ನು ಮೇಲ್ಗಡೆಗೆ ಹಾರುವುವು;
ಒಂದರೊಡನೊಂದು ಮಾತಾಡುವುವೆ? ಸನ್ನೆಯಲಿ
ಆಸೆಯನ್ನು ತೋರುವುವೆ? ಒಮ್ಮೊಮೆ ಒಂದೊಂದು
ನೀಳವಾಗಿಹ ತಮ್ಮ ಸೀಳುದನಿಯಲಿ ಕೂಗಿ
ಏರಿದೆವು ಎಂದು ಜಯ ಘೋಷವನ್ನು ಹಾಕುವುವು;
ಇದ ನೀವು ನೋಡುವಿರಿ ಕೇಳುವಿರಿ; ಆ ಮಧ್ಯೆ
ಗಂಡು ಹೆಣ್ಣಿಗೆ ಮೋಡದಿಂದ ಮೋಡಕೆ ಹರಿವ
ತೆಳುಮಿಂಚ ಕಿಡಿಯಂತೆ ಮನದಾಸೆ ಹರಿಯುವುದ
ನೋಡಿರುವಿರಾ? ಮಧ್ಯೆ, ಹಾರುವುದ ನಿಲ್ಲಿಸುತೆ
ಅವು ಎರಡು ಒಂದು ಪ್ರೇರ್ಮರನ ತಲೆಮೇಲಿಳಿದು
ಕಳೆಯ ಬೆಳೆಸುವುವು; ಇದು ದೇವದೇವನ ಮಾಯೆ”

ಶಠಗೋಪ ರತಿನಿಯರು ಒಬ್ಬರಿಗೊಬ್ಬರು ಮನಸೋತುದೂ ದೇವ ದೇವನ ಮಾಯೆ.

ತಿಂಗಳಾಗುವುದರೊಳಗೆ ಕೊಂಚ ಕೊಂಚವಾಗಿ ರತಿನಿಯ ಪೂರ್‍ವೋತ್ತರವೆಲ್ಲವನ್ನೂ ಶಠಗೋಪನು ತಿಳಿದನು. ಹೊಲೆಯರ ಹೆಣ್ಣು ಮಗಳವಳು. ತಂದೆತಾಯಿಗಳನ್ನು ಚಿಕ್ಕಂದಿನಲ್ಲಿಯೇ ಕಳೆದುಕೊಂಡಿದ್ದಳು. ಆಗಿನಿಂದ ಊರ ಹೊರಗಿನ ತೋಟದಿಂದ ಎಲೆತಂದು ಮಾರಿ, ಅದರಿಂದ ಜೀವನ ಜರುಗಿಸುತ್ತಿದ್ದಳು. ಪ್ರಪಂಚದಲ್ಲಿ ಅವಳವರು ಯಾರೂ ಇರಲಿಲ್ಲ. ಶಠಗೊಪನು ತನ್ನ ವಿಷಯಕವಾದುದನ್ನು ಅವಳಿಗೆ ಹೇಳಿದನು. ಶಠಗೋಪನೂ ಚಿಕ್ಕಂದಿನಲ್ಲಿಯೇ ತಂದೆತಾಯಿಗಳನ್ನು ಕಳೆದುಕೊಂಡಿದ್ದನು. ಈಗ ಅವನ ಅಣ್ಣ ರಾಮಾನುಜನೇ ತಂದೆ, ಅವನ ಅತ್ತಿಗೆಯೇ ತಾಯಿ. ಶಠಗೋಪನು ಸಂಸ್ಕೃತ ಅಭ್ಯಾಸಮಾಡಿ, ಮೇಲೆ ಪೌರೋಹಿತ್ಯಕ್ಕೆ ಬೇಕಾದುದನ್ನು ಕಲಿಯುತ್ತಿದ್ದ. ಒಬ್ಬರನ್ನೊಬ್ಬರು ಅರಿತು ಎರಡು ಮನಸ್ಸು ಒಂದಾಗಿತ್ತು.
* * *

ಎರಡು ತಿಂಗಳು ತಳ್ಳಿತು.

ಒಂದು ದಿನ ರಾಮಾನುಜನು ತನ್ನ ತಮ್ಮನಿಗೆ ಬುದ್ದಿ ವಾದ ಹೇಳಲು ಮೊದಲುಮಾಡಿ ಮೂರುಗಂಟೆಯಾಗಿತ್ತು. ಶಠಗೋಪ ರತಿನಿಯರು ಒಟ್ಟಿಗೆ ಮಾತನಾಡುತ್ತಿದ್ದ ಸುದ್ದಿ ಊರಲ್ಲೆಲ್ಲ ಹಬ್ಬಿತ್ತು. ಶಠಗೋಪನ ಮೇಲೆ ಕಲಂಕದ ಹೊರೆ ಹೇರಿತ್ತು.

“ಶಠಗೋಪ! ನಮ್ಮ ವಂಶದ ಹೆಸರನ್ನು ಹೀಗೆ ಕೆಡಿಸಬಹುದೆ? ಘನಪಾಟಿ ಶ್ರೀ ರಂಗಾಚಾರ್ಯರ ಮಗನಾಗಿ ಹೀಗೆ ಮಾಡ ಬಹುದೆ? ನೀನು ಉತ್ತಮಕುಲದವನು-ಅವಳು ಹೊಲೆಯರವಳು. ಅವಳಿಗೂ ನಿನಗೂ ಎಂತಹ ಪ್ರೀತಿ ? ಈಗ ಇಪ್ಪತ್ತು ವರುಷಗಳ ಕೆಳಗೆ ತೀರ್ಥರೂಪರವರೂ ತಾಯಿಯವರೂ ತೀರಿಹೋದಾಗ ನೀನಿನ್ನೂ ಅರಿಯದವನು. ಚಿಕ್ಕವನಾಗಿದ್ದ ನಿನ್ನನ್ನು ಇಷ್ಟು ದಿನ ಸಾಕಿ ದೊಡ್ಡವನನ್ನಾಗಿ ಮಾಡಿದುದಕ್ಕೆ ಇದೆಯೆ ನೀನು ಮಾಡುವ ಕೆಲಸ? ಊರಿನವರೆದುರಿನಲ್ಲಿ ನಾನು ತಲೆತಗ್ಗಿಸಬೇಕಾಗಿದೆಯಲ್ಲ, ಶಠಗೋಪ! ನೀನಿನ್ನೂ ಚಿಕ್ಕವನು-ನಿನಗೆ ಯಾರೋ ಈ ಕೆಟ್ಟ ಕಾರ್ಯಕ್ಕೆ ಹೋಗುವಂತೆ ಹೇಳಿಕೊಟ್ಟಿರಬೇಕು…”

ಶಠಗೋಪನು ಅಣ್ಣನ ಬಾಯಿಂದ ಅಂಥ ನೊಂದನುಡಿಗಳನ್ನು ಎಂದೂ ಕೇಳಿರಲಿಲ್ಲ. ಅಂದು ಕೇಳಿ ಅವನ ಕಣ್ಣಿನಲ್ಲಿ ನೀರುತುಂಬಿತು.

“ಅಣ್ಣ! ನಿಮಗೆ ದುಃಖಕೊಡಬೇಕೆಂದು ನನಗೆ ಮನಸ್ಸಿಲ್ಲ. ನನಗೆ ಇದನ್ನು ಯಾರೂ ಹೇಳಿಕೊಟ್ಟಿಲ್ಲ. ಆದರೆ ಆ ಹುಡುಗಿಯನ್ನು ಕಂಡ ಕ್ಷಣದಿಂದ-ಆದೇಕೆ ಎಂಬುದು ನನಗೆ ಗೊತ್ತಿಲ್ಲ. ನನ್ನ ಮನಸ್ಸು ಆಯಸ್ಕಾಂತದ ಬಳಿಯ ಕಬ್ಬಿಣದಂತೆ ಅವಳ ಕಡೆಗೇ ವಾಲುತ್ತಿದೆ…”

“ನಿನಗೆ ಹಾಗೆ ಮದುವೆಮಾಡಿಕೊಳ್ಳಬೇಕೆಂಬ ಆಸೆಯಿದ್ದರೆ, ಹುಡುಕಿ ಹುಡುಕಿ ಹೊಲೆಯಳನ್ನೇ ಸೇರಬೇಕೆ? ಏಕೆ, ನಮ್ಮಾಳ್ವಾರರ ಮಗಳಿಲ್ಲವೇ? ವೇದಾಂತದೇಶಿಕನ ನಾದಿನಿಯಿಲ್ಲವೇ? ಶ್ರೀವೈಷ್ಣವನು ಹೊಲೆಯಳನ್ನು ಮದುವೆಯಾಗಲು ಎಲ್ಲಿಯಾದರೂ ಸಾಧ್ಯವೆ?…”

“ಅಣ್ಣ! ನಿವು ಬೇರೆ ಭಾವಿಸಬೇಡಿ. ಆ ಹುಡುಗಿಯನ್ನು ಮದುವೆನಿಲ್ಲ ಬೇಕೆಂದಾಗಲಿ, ಅವಳಲ್ಲಿ ನೆರೆಯಬೇಕೆಂದಾಗಲಿ ನನಗೆ ಆಸೆಯಿಲ್ಲ. ನನಗೆ ಮದುವೆಯೇ ಬೇಡ. ಆದರೆ ಅವಳನ್ನು ನೋಡುಯ್ತಿರಬೇಕು, ಅವಳ ಮಾತುಗಳನ್ನು ಕೇಳುತ್ತಿರಬೇಕು, ಅಷ್ಟೆ…. ಅವಳಿಗೂ ಅದೇ ಆಸೆ. ಇಷ್ಟಲ್ಲದೆ ಹೆಚ್ಚಿನ ಬಯಕೆ ಇಲ್ಲ. ಒಬ್ಬರ ಕೂಡ ಒಬ್ಬರು ಮಾತನಾಡಿ, ಒಬ್ಬರನ್ನು ಒಬ್ಬರು ನೋಡಿದರೆ ದೋಷವೇನುಂಟು?”

“ಆದರೂ ಜನರ ಬಾಯಿಗೆ ಹೆದರಬೇಕಪ್ಪ.”

“ಬಾಯಿಗೆ ಬಂದ ಹಾಗೆ ಮಾತನಾಡುವ ಜನಗಳು ನಮ್ಮ ಸುಖ ದುಃಖಗಳಲ್ಲಿ ನೆರವಾಗುವರೇನೊ!”

ರಾಮಾನುಜನಿಗೆ ಸಿಟ್ಟು ಬಂತು.

“ಜನರ ಮಾತು ಬೇಡ. ನಾನು ನಿನಗೆ ತಂದೆಯ ಹಾಗೆ. ನಾನು ಹೇಳುತ್ತೇನೆ. ಆ ಹೊಲತಿಯನ್ನು ನೀನಿನ್ನು ಮಾತನಾಡಿಸಕೂಡದು, ನೋಡಕೂಡದು. ಮೊನ್ನೆಯಿಂದ ಅವಳ ವರ್ತನೆಯನ್ನು ತಪ್ಪಿಸಿದೇನೆ.”

ಶಠಗೋಪನ ಮನಸ್ಸು ನೊಂದಿತು-ತನ್ನಿಂದ ಅವಳ ವರ್ತನೆ ತಪ್ಪಿತಲ್ಲಾ ಎಂದು.

“ಅಣ್ಣಾ! ಅವಳನ್ನು ಹಿಂದಕ್ಕೆ…”

“ಸಾಕು, ನನಗಿನ್ನು ಹೆಚ್ಚು ಮಾತು ಬೇಡ. ಶ್ರೀವೈಷ್ಣವನಿಗೂ ಹೊಲೆಯಳಿಗೂ… ನೀನೇನು ಹಾಳು ಇಂಗ್ಲಿಷ್ ಕಲಿತವನೆ? ಸಂಸ್ಕೃತ ಅಭ್ಯಾಸಮಾಡಿ ಸಾರ್ಥಕವಾಯಿತು! ಶ್ರೀವೈಷ್ಣವನು… ಹೊಲೆ ಯಳನ್ನು… ಪ್ರೀತಿಯಂತೆ!… ಪ್ರೀತಿ!… ”

“ಪ್ರೀತಿಗೆ ಜಾತಿ ಬೇರೆಯೆ!” ಎಂದ ಶಠಗೋಪ. ಸಂಕಟದ ಮಾತು.

“ನೋಡು ನನಗೆ ರೇಗಿಸಬೇಡ …”

ಅಷ್ಟು ಹೊತ್ತಿಗೆ ಕಣ್ಣೀರು ಸುರಿಸುತ್ತ ಶಠಗೋಪನ ಅತ್ತಿಗೆ ಬಂದು “ಏನು ಶಠಗೋಪಾ! ಹೀಗೆ ಮಾಡಬಹುದೆ? ಊರಿನವರೆಲ್ಲ ನಮ್ಮನ್ನು ಹೀಯಾಳಿಸುವಂತಾಯಿತೆ!” ಎಂದಳು,

ಶಠಗೋಪನು ಆವರೆಗು ತನಗಾದ ಸಂಕಟವನ್ನು ಹೊಟ್ಟೆಯೊಳಗೆ ಅದುಮಿ ಹಿಡಿದಿದ್ದ. ಆಗ, ತಾಯಿಯೆಂದು ಗಣಿಸಿದ್ದವಳ ಕಣ್ಣಲ್ಲಿಯ ನೀರು ಕಂಡು ಸಂಕಟವುಕ್ಕಿತು. ಮುಂದು ನೋಡದೆ, ಮಗುವಿನಂತೆ ಅಳುತ್ತ, ತನ್ನ ಅಣ್ಣ ಅತ್ತಿಗೆಯವರ ಮುಂದೆ ಬಂದು ಬಿದ್ದು ಮಾಡಿದುದು ತಪ್ಪಾಯಿತು! ತಪ್ಪಾಯಿತು!” ಎಂದು ಗೋಗರೆದುಕೊಂಡನು.

ರಾಮಾನುಜನಿಗೆ ತಮ್ಮನನ್ನು ನೋಡಿ ಅಳುವೂ ಸಂತೋಷವೂ ಒಟ್ಟಾಗಿ ಉಂಟಾಯಿತು. ತಮ್ಮನನ್ನು ಮೇಲೆಬ್ಬಿಸಿ, ಅವನ ಕಣ್ಣೀರೊರಸಿ “ಕಂದ, ಶಠಗೋಪ! ನೀನು ಸ್ವಬುದ್ದಿಯಿಂದ ಹೀಗೆ ಮಾಡಲಿಲ್ಲವೆಂದು ನನಗೆ ಮೊದಲಿಂದ ಗೊತ್ತು. ಹೋಗಲಿ, ಹಿಂದಿನದೆಲ್ಲ ಮರೆತುಬಿಡು. ನಡೆ, ಸ್ನಾನಮಾಡಿ ದೇವರಿಗೆ ಪೂಜೆಮಾಡಿ ಬಾ… ತಿರುನಾರಾಯಣನ ಮನೆಗೆ ಊಟಕ್ಕೆ ಹೋಗಬೇಕು” ಎಂದು ಸಂತೈಸಿ ಕಳುಹಿ, ತಮ್ಮನು ದಾರಿಗೆ ಬಂದನೆಂದು ಹಿಗ್ಗಿದನು.

ಶಠಗೋಪನಿಗೆ ಎಷ್ಟೆಷ್ಟೇ ತಡೆದರೂ ರತಿನಿಯ ನೆನಪನ್ನು ಅಳಿಸಲು ಸಾಧ್ಯವಾಗಲಿಲ್ಲ. ಒಮ್ಮೆಯೇ ಸಾಧ್ಯವಾಗುವುದೆ? ಸ್ನಾನಮಾಡುತ್ತಿರುವಾಗ ರತಿನಿಯ ಕಣ್ಣೀರಿನಲ್ಲಿ ತಾನು ಮಿಂದಂತೆ ಚಿತ್ರ… ನಾಮವಿಟ್ಟುಕೊಳ್ಳುವಾಗ ರತಿನಿಯ ಜೋತುಬಿದ್ದ ಮುಖ ಕನ್ನಡಿಯಲ್ಲಿ ಕಾಣುವುದು… ಸಂಧ್ಯಾವಂದನೆಯಲ್ಲಿ ರತಿನಿಯ ಹೆಸರಿನ ಗಾಯತ್ರಿ… ದೇವರಿಗೆ ಪುಷ್ಪ ಸಮರ್‍ಪಿಸುವಾಗ ಹೂಗಳನ್ನು ರತಿನಿಯ ತುರುಬಿಗೇರಿಸಿದಂತೆ ಭಾವನೆ…
* * *

ತಿರುನಾರಾಯಣನ ಮನೆಗೆ ಹೊರಟಾಗ ಮಧ್ಯಾಹ್ನ ಹನ್ನೆರಡು ಗಂಟೆ. ಅಣ್ಣ ತಮ್ಮಂದಿರಿಬ್ಬರೂ ನಿತ್ಯಕರ್ಮಗಳನ್ನು ಮುಗಿಸಿ ಹೊರಟಿದ್ದರು.

ಅವರ ಪಕ್ಕದ ಮನೆಯ ಹುಡುಗ ಕಾಲೇಜಿನ ವಿದ್ಯಾರ್ಥಿ. ಅವರು ಹೊರಡುವ ವೇಳೆಗೆ ಪಂಪಭಾರತ ಓದುತ್ತಿದ್ದ. ಓದುತ್ತ ಓದುತ್ತ ಅವನಿಗೆ ಆವೇಶ ಹತ್ತಿತ್ತು. ಸನ್ನಿವೇಶ ಅಂಥದು. ಕೌರವನು ಭೀಷ್ಮನಿಗೆ ವೀರಪಟ್ಟ ಕಟ್ಟಿದ್ದಾನೆ … ಕರ್ಣನಿಗೆ ಕಿನಿಸು ಕೆರಳಿದೆ… “ನಮ್ಮಂಥ ಯುವಕರಿರುವಾಗ ಈ ಮುದಕನಿಗೇಕೆ ಪಟ್ಟ?” ಎಂದಿದ್ದಾನೆ… ಕೇಳಿದ ದ್ರೋಣನಿಗೆ ಕೋಪ ಕುದುರಿದೆ… ಬಾಯಿ ಮುಚ್ಚೋ ಬೆಸ್ತ!’ ಎಂದಿದ್ದಾನೆ… ಕರ್ಣನಿಗೆ ರಕ್ತ ಕುದಿಯುತ್ತ ಇದೆ … ಕರ್ಣ ಹೇಳುತ್ತಾನೆ-ಓದುವವನಿಗೂ ರಕ್ತ ಕುದಿಯುತ್ತಿದೆ ಕರ್ಣನ ಮಾತನ್ನು ಒಂದು ಅಠಾಣಾ ರಾಗದಲ್ಲಿ ಹೇಳುತ್ತಾನೆ ಹೇಳುತ್ತಾನೆ-ಕೇಳಿದ ಕಲ್ಲು ಕೂಡ ಕಿಡಿಕಿಡಿಯಾಗುವ ಹಾಗೆ ಹೇಳುತ್ತಾನೆ:

ಕುಲಮನೆ ಮುನ್ನ ಮಗ್ಗಡಿಪಿರೇಂ ಗಳ ನಿಮ್ಮ ಕುಲಂಗಳಾಂತು ಮಾ |
ರ್‍ಮಲೆವನನಟ್ಟಿ ತಿಂಬುವೆ ಕುಲಂ ಕುಲಮಲ್ತು ಚಲಂ ಕುಲಂ ಗುಣಂ ||
ಕುಲಮಭಿಮಾನಮೊಂದೆ ಕುಲಮಣ್ಮು ಕುಲಂ ಬಗೆವಾಗಳೀಗಳೀ |
ಕಲಹದೊಳಣ್ಣ ನಿಮ್ಮ ಕುಲವಾಕುಲಮಂ ನಿಮಗುಂಟುಮಡುಗುಂ ||

ಅಣ್ಣ ತಮ್ಮಂದಿರು ಒಬ್ಬರ ಮುಖವನ್ನು ಒಬ್ಬರು ನೋಡಿದರು. ರಾಮಾನುಜನು ಮುಖ ತಗ್ಗಿಸಿದ. ಇಬ್ಬರೂ ಮಾತನಾಡದೆ ಮುಂದಕ್ಕೆ ನಡೆದರು.
* * *

“ಕಟ್ಟು ಮೂರಾಣೆ?”

“ಇಲ್ಲ ಸಾಮಿ! ಕಟ್ಟು ಪಾವಲಿ.”

ದನಿ ಕೇಳಿ, ಅಣ್ಣನೊಡನೆ ತಲೆ ಬಗ್ಗಿಸಿಕೊಂಡು ಹೋಗುತ್ತಿದ್ದ ಶಠಗೋಪನು ಸರಕ್ಕನೆ ತಿರುಗಿದನು. ದೂರ, ಒಂದು ಅಂಗಡಿಯ ಮುಂದೆ ರತ್ನಿಯು ಎಲೆ ಮಾರುತ್ತ ನಿಂತಿದ್ದಳು. ಆರಾಧ್ಯ ದೇವತೆಯ ಎದುರಿನಲ್ಲಿ ಶಠಗೋಪನು ಎಲ್ಲವನ್ನೂ ಮರೆತು “ರತ್ನಿ!” ಎಂದ. ರತಿನಿ ತಿರುಗಿ ಶಠಗೊಪನನ್ನು ಕಂಡಳು. ಅವಳ ಕಣ್ಣುಗಳ ಶೂನ್ಯದಲ್ಲಿ ಎಂದೂ ಕಾಣದ ಬೆಳಕಿನ ಲಹರಿ ಹರಿಯಿತು, ಎಲೆ ಹೆಡಿಗೆಯನ್ನು ಇದ್ದಲ್ಲಿಯೆ ಬಿಟ್ಟು ‘ಐನೋರಾ’ ಎಂದು ಹೆಜ್ಜೆ ಮುಂದಿಟ್ಟಳು. ಶಠಗೊಪನು ತಾನು ಮಾಡುವುದನ್ನು ತಿಳಿಯುವುದಕ್ಕೆ ಮುಂಚೆಯೇ ಅವಳ ಬಳಿ ಸೇರಿದ್ದ. ರಾಮಾನುಜನು ಸ್ತಂಭಿತನಾಗಿಬಿಟ್ಟ.

“ರತ್ನಿ! ಮೂರು ದಿನದಿಂದ ಏಕೆ ಬರಲಿಲ್ಲ?”

ರತ್ನಿಯ ಕಣ್ಣುಗಳು ಶಠಗೋಪನನ್ನು ಒಳಕ್ಕೆ ಸೆಳೆದುಕೊಳ್ಳುತಿದ್ದುವು.

ಮಾತು ಕಳೆದುಕೊಂಡಿದ್ದ ರಾಮಾನುಜನು ದೂರದಿಂದಲೇ ದೈನ್ಯದಿಂದ ‘ಶಠಗೋಪ! ಶಠಗೋಪ!” ಎಂದನು. ರತಿನಿಯಲ್ಲಿ ಲೀನನಾಗಿದ್ದ ಶಠಗೋಪನಿಗೆ ಅಣ್ಣನ ಕೂಗು ಮುಟ್ಟಲಿಲ್ಲ. ರಾಮಾನುಜನು ಹೊಲತಿಯ ಹತ್ತಿರ ಹೋಗಲು ಹೆದರಿ ದೂರದಿಂದಲೇ ಮತ್ತೆ ಕೂಗಿದನು. ತಮ್ಮನು ಅಲುಗಲಿಲ್ಲ. ರಾಮಾನುಜನು ಕೊಂಚ ಪರುಷವಾಗಿ “ಶಠಗೋಪ’ ಎಂದ. ಶಠಗೋಪನು ಕದಲಲಿಲ್ಲ. ಶಠಗೋಪ ರತಿನಿಯರ ಮೇಲೆ ನೂರಾರು ಕಣ್ಣುಗಳು ಇಳಿದುವು.

ರಾಮಾನುಜನಿಗೆ ತಮ್ಮನನ್ನು ತಿರುಗಿಸಲು ಸಾಧ್ಯವಾಗಲಿಲ್ಲ. ಕೊನೆಗೆ ರೋಸಿಹೋಗಿ “ಇಂದಿನಿಂದ ನೀನು ನನ್ನ ತಮ್ಮನಲ್ಲ” ಎಂದು ಒದರುತ ಹೊರಟುಹೋದನು. ಸುತ್ತ ನೆರೆದಿದ್ದ ಜನರು ಗೇಲಿ ಮಾಡಿದರು, ಮನಸ್ಸಿಗೆ ಬಂದಹಾಗೆಲ್ಲ ಮಾತನಾಡಿದರು…

ಒಲವಿನ ಹೊನಲಿಗೆ ಈ ಹುಲು ಅಣೆಗಳೆ! ಶಠಗೋಪನು ತನ್ನ ಒಲವಿನ ಅಧಿದೇವತೆಯಾದ ರತ್ನಿಯ ಕಾಲಬಳಿ ಮಂಡಿಯೂರಿ, ಅವಳ ಧೂಳುಮುಚ್ಚಿದ ಸೆರಗಿನಲ್ಲಿ ಮುಖವಿಟ್ಟು “ಕರಲ ಭೂಮಿಯಲ್ಲಿ ಕರೆದ ವೃಷ್ಟಿಯ ತೆರನಂತೆ ಅವರೆತ್ತ ಬಲ್ಲ ರೆನ್ನ ಸುಖದುಃಖವ” ಎಂದು ಮೆಲ್ಲನುಸುರಿದನು.

ರತ್ನಿಯ ಮುಖಕ್ಕೆ ಒಂದು ಅಪೂರ್ವ ಕಳೆಯೇರಿತ್ತು. ಅವಳ ತುಟಿಗಳು ಅಲುಗುತ್ತಿದ್ದುವು. ಅವಳ ನಡುಗುವ ಬೆರಳುಗಳು ಅವನ ತಲೆಯನ್ನು ನೇವರಿಸುತ್ತಿದ್ದುವು. ಮುತ್ತಿನ ಸೇಸೆಗಳಂತ ರತಿನಿಯ ಕಣ್ಣೀರಿನ ಕಣಗಳು ಶಠಗೋಪನ ತಲೆಯಮೇಲೆ ಚೆಲ್ಲಿದುವು.
* * *

“ಆಗಿಹೊಯಿತೆ ಕತೆ?” ಎಂದ ಕಂಠಿ.
“ಆಗಿ ಹೋಗದೆ ಮತ್ತೆ?” ಎಂದೆ.
“ಏನು ಕತೆಯಯ್ಯಾ? ಶುದ್ದ ಅಸಂಭವ!… ಹೀಗೆ ಎಲ್ಲಾದರೂ ನಡೆಯೋದುಂಟೆ?…. ”
“ಅಲ್ಲವೊ ಪೆಂಗೆ! ನೀನೂ ರಾಮಾನುಜನ ಹಾಗೇ ಹೇಳ್ತಿಯಲ್ಲ ಯಾಕೋ !… ಎಲ್ಲಾದರೂ ನಡದದ್ದುಂಟೆ?’ ಎಂದರೆ ‘ಇಲ್ಲ – ನನಗೆ ಗೊತ್ತಿಲ್ಲ’ ಎನ್ನುತ್ತೇನೆ. ‘ನಡೆಯೋದುಂಟೆ?” ಎಂದರೆ ಭೇಷಕ್ ಸಾಧ್ಯ!…”

“ಏನೊಪ್ಪ! ಆದರೂ…”

“ಅಲ್ಲವೊ, ನೇಮಿಚಂದ್ರ ಅನ್ನೊ ಕವಿ ಹೇಳಿರೋದು ಕೇಳಿದೀಯೇನೊ?

ಕಟ್ಟುಗೆ ಕಟ್ಟದಿರ್‍ಕ ಕಡಲಂ ಕಪಿಸಂತತಿ ವಾಮನಕ್ರಮಂ |
ಮುಟ್ಟುಗೆ ಮುಟ್ಟದಿರ್‍ಕ ಮುಗಿಲಂ ಹರನಂ ನರನಿಕ್ಕಿ ಗಂಟಲಂ ||
ಮೆಟ್ಟುಗೆ ಮೆಟ್ಟದಿರ್‍ಕೆ ಕವಿಗಳ ಕೃತಿಬಂಧದೊಳಲ್ತೆ ಕಟ್ಟಿದರ್ |
ಮುಟ್ಟಿದರಕ್ಕಿ ಮೆಟ್ಟಿದರಿದೇನಳವಗ್ಗಳಮೋ ಕವೀ೦ದ್ರರಾ ||”

ಕಂಠಿ ಪೆಚ್ಚಾದ!
*****

Tagged:

Leave a Reply

Your email address will not be published. Required fields are marked *

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...