ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿಗೆ ಗುರು ಪಾಠ ಗಿಣಿ ಪಾಠವಾಗಿ ವೇದಾಂತಡಿಂಡಿಮರೆಂಬ ಬಿರುದು ಬರುವ ಹೊತ್ತಿಗೆ ಭೋಜನ ಭೀಮಾಚಾರ್‍ಯರ ಉಳಿದ ಮಕ್ಕಳೆಲ್ಲರೂ ತರಹವಾರಿಯ ಉದರಜಾಡ್ಯದಿಂದ ವರಗಿ ಹೋದರೇ ವಿನಾ ತಂದೆಗಳಾದ ಭೀಮಾಚಾರ್‍ಯರ ಬಿರುದಿನ ಪದವೀಧರರಾಗಲು ಯೋಗ್ಯರಾಗಿ ಯಾರು ನಿಲ್ಲಲಾರದೆ ಒಂದೆರಡು ಮೂರನೆಯ ಮೆಟ್ಟಲಲ್ಲಿಯೇ ಕಾಲುಸೋತು ಬಿದ್ದರು.
ಹೋಗಲಿ ಅಂತು ರಾಜಾಚಾರ್‍ಯರು ಬಿರುದು ಪಡೆಯುವ ದಿನವಂತು ಬಹು ಸಂಭ್ರಮ. ಊರಲ್ಲಿ ಎಲ್ಲರೂ ಬಂದು ನೆರೆದಿದ್ದರು. ಬರದವರೇ ಪಾಪಿಗಳು. ತೋರಣ, ತೊಂಗಟೆ, ಸಿಂಧು, ಸೀಗುರಿ, ಚಾಮರ, ಚಮತ್ಕಾರಗಳೊ ಕೇಳಬೇಕೆ! ಶೀಕರ್ಣ್ಯೆಂಗಾರ್‍ಯರ ಪಟ್ಟಿವಾಳಿ ಧೋತ್ರವನ್ನೇ ತಂದು ಗುರುಗಳು ಕೂರುವ ಕಡೆ ಹಾಸಿದ್ದರು.
ಶ್ರೀ ಚಾಮರಾಜೇಂದ್ರ ಒಡೆಯರವರ ಮದುವೆಯಲ್ಲಿ ಭೀಮಾಚಾರ್‍ಯರಿಗೆ ಕೊಟ್ಟಿದ್ದ ಬಿರುದಾವಳಿಯ ಜರತಾರಿ ಶಾಲು, ಜೋಡಿಯನ್ನೇ ರಾಜಾಚಾರ್‍ಯರು ಹೊದ್ದಿದ್ದರು. ರಾಜಾಚಾರ್‍ಯರು ಅದನ್ನು ಹೊದಿಯುವಾಗ ಬಲು ಚರ್‍ಚೆ ಮಾಡಿ ಸ್ವಯಂ ಪ್ರಭ, ಸ್ವಯಂಪ್ರತಾಪ ಮೊದಲಾದ ವೇದಾಂತ ಟೀಕೆಗಳಿಂದ ಶ್ಲೋಕಗಳನ್ನುದ್ದರಿಸಿ ಹೇಳಿ ತಂದೆಯವರ ಮನಸ್ಸನ್ನು ತಲೆಕೆಳಗು ಮಾಡಿಬಿಟ್ಟು, ತಾವು ಶಾಲು ಹೊದೆಯಬೇಕಾದರೆ ಸ್ವಯಂ ಶ್ರೀ ಚಾಮರಾಜರೆ ಹರಿಸಿ ಕೊಡಬೇಕೆಂದೂ ತಾವಾಮೇಲೆ ಹೊದಿಯಬೇಕೆಂದು ಶ್ಲೋಕರೂಪವಾಗಿ ನಾದಾನುವಾದ ಮಾಡುತ್ತ ಹೇಳಿದರು. ಅಯ್ಯೋ! ಈ ಸರಸ್ವತಿಯ ಜಿಹ್ವೆಯನ್ನು ಕೇಳಲು ರಾಜರಿಲ್ಲವೆ ಎಂದು ಭೋಜನ ಭೀಮಾಚಾರ್‍ಯರು ಕೈ ಕೈ ಮುರಿದುಕೊಂಡರು.
ಎಲ್ಲರೂ ನೆರದ್ದಿದ್ದರು. ಇನ್ನೇನು ಬಿರುದುಕೊಡುವ ಸಮಯ ಆಗ ರಾಜಾಚಾರ್‍ಯರು, ಇಲ್ಲವೇ ಇಲ್ಲ ಆಳುಗಳು ಅಡ್ಡಾಡಿದರು ಹುಡುಕಿ ಗುಸು ಗುಸು ಗುಟ್ಟಿದರು. ಹೊರಗಡೆ ವಾದ್ಯ ಮೇಳ ಕೇಳಹತ್ತಿತು. ಕಡೆಗೆ ರಾಜಾಚಾರ್‍ಯರು ಬಲಗಾಲನ್ನು ಮೊದಲೊಳಗಿಟ್ಟು ಎಲ್ಲಿಂದಲೋ ಹೊಸ್ತಿಲ ದಾಟಿ ಬಂದರು. ಪಲ್ಲಕ್ಕಿಯೊಂದನ್ನು ಬಹು ಸಂಭ್ರಮದಿಂದ ಶಿಷ್ಯರೆಲ್ಲರೂ ಸೇರಿ ಹೊತ್ತು ತಂದು ಜನಗಳ ಮಧ್ಯದಲ್ಲಿಟ್ಟರು. ಗುರುಗಳು ಶಿಷ್ಯನ ವಿರಹಕ್ಕಾಗಿ ಬಹಳವಾಗಿ ಕಣ್ಣೀರು ಸುರಿಸಹತ್ತಿದರು. ಸಂಗಮೇಶ್ವರ ಭಟ್ಟರು ಭರ ಭರ ಬಂದು ಕಿವಿಯಲ್ಲಿ ಕೇಳಿದರು. “ಬೇರೆ ಬಟ್ಟೆ ತಂದು ಕೊಡಲೇನು ? ಇದರಾಗೆ ಕಣ್ಣೀರು ವರಸಬೇಡಿರಿ. ಈ ಶಾಲು ನಂದಲ್ಲ. ಇನ್ನೊಂದು ದಿನ ಸಿಗದೇ ಹೋದೀತು. ಏನ್ರ್‍ಇ ಆಚಾರ್ರೆ”- ಎಂದು ಕೇಳಿದ್ದಾಗ್ಗೆ ಗುರುಗಳು ಸುಮ್ಮನಾಗಿ ಆಚಾರ್‍ಯರನ್ನು ಕರೆದು ಅಚ್ಚಗನ್ನಡದಲ್ಲಿ ಹೀಗೆ ಹೇಳಿದರು-“ಶಿಶ್ಯಾ ನಿನ್ನ ವಾಕ್ಚಾತುರತೆಯನ್ನು ಶ್ರವಣಮಾಡಲಿಕ್ಕೆ ಉತ್ಸುಕರಾಗಿ ಚಾತಕ ಪಕ್ಷಿಗಳಂತೆ ಆಸೀನರಾಗಿರುವ ಈ ಮಾನವ ಸಭಾ ಸದರನ್ನು ಸಾನಂದಿತರನ್ನಾಗಿ ಮಾಡಯ್ಯ! ಅವರೇ ನಿನಗೆ ಈ ಬಿರುದನ್ನು ಕೊಡಲಿ! ಆಗ ರಾಜಾಚಾರ್‍ಯರು ಪಲ್ಲಕ್ಕಿಯಲ್ಲಿದ್ದ ಗುರು ದಂಡಕ್ಕೆ ಕೈ ಮುಗಿದು ಹೇಳಿದರು-ಸುಖಾಸೀನರಾದ ಸಭಾಸದರೇ ನಾನು ಹೇಳ ತಕ್ಕದ್ದೇನಿದೆ. ಗುರು ವಿರಹದುಃಖದಲ್ಲಿ ನಾನು ಮುಳಿಗೇ ಹೋದೆ! ಆದರೂ ಒಂದು ಶ್ಲೋಕವನ್ನು ಕಲ್ಪಿನಮಾಡಿ ಹೇಳಿ ನನ್ನ ಗುರೂಪದೇಶಿತ ವಿದ್ಯೆಯಲ್ಲಿ ಕಿಂಚತ್ತನ್ನು ತೋರಿಸುವೆನು ಎಂದು ಗಂಟಲು ಸರಿಮಾಡಿಕೊಂಡು ತಾರಕ, ಮಧ್ಯಮ, ಮಂದರ ಕೃತಿಗಳನ್ನು ಆಗಾಗ್ಗೆ ಬದಲಾಯಿಸಿ ಕೊಳ್ಳುತ್ತ ಹೇಳತೊಡಗಿದರು :-
ಎದುರಲ್ಲಿ ನೆರೆದಿರುವ |
ಸದಯ ಹೃದಯಸಭ್ಯರೇ |
ಉದಹೃತವುದ್ಧರಿಸುವೆ ಶ್ರವಣಿಸಿರಿ |
ಉದಧಿ ಈ ಗುರು ಮಹಾಜ್ಞಾನ ಜಲಕೆ |
ಒಧಿರ ಬ್ರಹ್ಮನು ಮೂಕಳಾಸತನಸತಿಯು |
ಇದು ಸತ್ಯ ಇದು ಸತ್ಯ ವಿವರಗ್ರದಲ್ಲಿ……..
ಮತ್ತೋ-
ಬಿದಿರರದು ಪಲ್ಲಕ್ಕಿ ಮಂಡಿತ |
ಚದುರೆ ಶ್ರೀಯಗಜಕುಂಭವಂ |
ಕೆದರಿ ಹಿಡಿದೆಳೆತರುವ ಕರಪಲ್ಲವ |
ವಿದನಾಚರಿಸಿಹುದು ಹೋ ಶ್ರವಣಿಸಿರಿ |
ಬಿದಿರೆನ್ನ ಬಿರುದಿಗಲ್ತೆ ಮೂಲಾಧಾರಾ……..!!
ಎಲ್ಲರು ಕರತಾಡನವಾಡಿ ಸೈ, ಸೈ ಎಂದು ಕೂಗಿ ಗದ್ದಲವಾಡಿದರು. ಇಷ್ಟರಲ್ಲಿ ಗುರುಗಳೂ ಕೂಡ ಎದ್ದು ಭಾಷಣಮಾಡಿ ಮುಗಿಸಿಬಿಟ್ಟರು. ಅಕ್ಕ ಪಕ್ಕದಲ್ಲಿದ್ದ ಶಿಷ್ಯ ಮಂಡಲಿಯವರೆಲ್ಲರೂ ಮುಂದೆ ಬಂದು, ಗುರುಗಳ ಆಜ್ಞೆಯಂತೆ “ವೇದಾಂತ ಡಿಂಡಿಮ”, “ವೇದಾಂತ ಡಿಂಡಿಮ”ವೆಂದು ಏಳು ಸಾರಿ, ಕೈಯೆತ್ತಿ ಕೂಗಿದಹಾಗೂ, ಏಳು ಸಾರಿಯೂ ಗೋಪಾಲ ಕೃಷ್ಣರ ದೇವರ ನಗಾರಿಯ ಡಂಢಮ, ಡಂಢಮವೆಂದು ದಿಕ್ಕು ದೆಶೆಯೆಲ್ಲ ಗುಡುಗಾಡಿಸಿ ಧನಿಗೊಟ್ಟಿತು.
ಇಂಥಾ ರಾಜಾಚಾರ್‍ಯರು ಪಾಠ, ಪ್ರವಚನ, ಹರಿಕಥಾ, ಕಾಲ ಕ್ಷೇಪ ಮತ್ತು ಪುಸ್ತಕ ಪ್ರಕಟನಗಳಿಂದ ಬೇಕು, ಬೇಡವೆನ್ನುವಷ್ಟು, ಧನ ಕನಕವಸ್ತುಗಳನ್ನು ಶೇಖರಿಸಿಟ್ಟರು. ಇವರಿಗೊಬ್ಬ ಪಂಡಿತ ಪುತ್ರನುದಯಿಸಿದನು. ವೇದಾಂತ ಡಿಂಡಿಮರು ತಮ್ಮ ಮಗನಿಗೆ ಬಾಯಿತುಂಬ ಬರುವ ಹೆಸರಿಡಬೇಕೆಂದು “ಶ್ರೀಕರ”, “ಶಾಕಲ”, “ಚಂದ್ರಕಾಂತಿ”, “ಜೋತಿರ್‍ಲತೆ”- ಇವುಗಳನ್ನೆಲ್ಲಾ ಹುಡುಕಿ ವಿಫಲರಾಗಿ ತಾವು ಯೌವನದಲ್ಲಿ ಬರೆದ “ಶೃಂಗಾರ ವನ ವೈಭವ”ದಲ್ಲಿಯೂ ಕಾಣದೆ, “ವ್ಯಾಖ್ಯಾನಜಿತ ವ್ಯಾಖ್ಯಾನ”ವೆಂಬ ತಮ್ಮ ಹೊಸ ಪುಸ್ತಕದ ಎಂಟನೇ ಖಂಡದಲ್ಲಿನ, ಏಳನೇ ಶಿಖಿಯಲ್ಲಿ ಪದಬಿಟ್ಟು ಪದವಾರಿಸಿ ಬಿಂಧು ಮಾಧವನೆಂಬ ಹೆಸರನ್ನು ಕಲ್ಪನೆ ಮಾಡಿ ಮಗನಿಗೆ ನಾಮಕರಣ ಮಾಡಿದರು.
ಪಂಡಿತ ಪುತ್ರ ಬಿಂದು ಮಾಧವನು ಪ್ರಾಪ್ತವಯಸ್ಕರನಾಗುವಲ್ಲಿಗೆ ತಂದೆಗೂ ಮಗನಿಗೂ ಎರಡು ಮೂರಂತಸ್ತು ಅಂತರವಿದ್ದಂತೆ ಕಂಡುಬಂತು. ರಾಜಾಚಾರ್‍ಯರ ಮಂಡಿಯ ಮೇಲಣ ಪಂಚೆ ಬಿಂದು ಮಾಧವನ ಮಂಡಿಯನ್ನೆಲ್ಲ ತರೆದುಹಾಕಿತು. ಮೊಣಕಾಲು ಮುಚ್ಚುವ ಮೇಲುಕೋಟೆ ಪಂಚೆಯನ್ನುಟ್ಟವನು ಬಿಲ್ವ ಪತ್ರೆಯ ಬುರುಡೆಯೊಳಗಿಂದ ನಶೆ ಏರಿಸಿ ಒರಸಿ ಕೊಳ್ಳಲಾದೀತೆ! ಇಲ್ಲ ಬರಿನಾರಿಕೇಳದ ಶಿಖೆಯನ್ನಿಟ್ಟರಾದೀತೋ! ಕಮಾನುಜುಟ್ಟು, ಬೆಳ್ಳಿಯ ನಶ್ಯದ ಡಬ್ಬಿ, ಮೇಲುಕೋಟೆ ಪಂಚೆ, ಮತ್ತೆ ಬಾಯಿತುಂಬ ಹೇಳಕೊಳ್ಳಲಿಕ್ಕೆ ಒಂದೆರಡು ಶೃಂಗಾರಶತಕದ ಶೋಕಗಳು ಬೇಕಷ್ಟೆ! ಅಂತು ಬಿಂದು ಮಾಧವನು ನಾಗರಿಕನಾದನು.
ನಾಗರಿಕರ ಗುಂಪಿಗೆ ಸೇರಿದ ಬಿಂದು ಮಾಧವನು ಪಟ್ಟಕ್ಕೆಂದು ಬರುವನೋ ಎಂದು ಅವನ ನೆಚ್ಚಿನ ಗೆಳೆಯರು ಕಾದಿದ್ದರು.
ವೇದಾಂತ ಡಿಂಡಿಮ ರಾಜಾಚಾರ್‍ಯರು ಕೂಡ ಒಂದು ದಿನ ಸೊಸೆಯ ಕೈಲಿ ಬೀಗದಕೈ ಎಸಳನ್ನು ಕೊಟ್ಟು, ಹಿತವಚನಗಳನ್ನು ಹೇಳಿ ಮಗನು ಓದಿದ ವಿಷ್ಣು ಪುರಾಣದ ಐದು ಶ್ಲೋಕಗಳನ್ನು ಕೇಳಿ ಕಣ್ಣು ಮುಚ್ಚಿದದೂ ಆಯಿತು.
ಸೊಂಕೂಬಾಯಿಗೆ ಟಪಾಲಾಫೀಸಿನ ಕಬ್ಬಿಣ ಪಟ್ಟಿಗೆಯ ವಿಚಾರವೆಲ್ಲ ಹೇಳಿ, ಅಸಲಿನ ಮೇಲಣ ಬಡ್ಡಿಯ ಆಸೆಯನ್ನು ತೋರಿಸಿ ಅಚ್ಚು ಮೆಚ್ಚಾಗುವಂತೆ ಮಾತಾಡಿ, ರಾಜಾಚಾರ್‍ಯರಿಟ್ಟಿದ್ದ ಐದು ಸಾವಿರ ನಗದು ರೂಪಾಯಿಗಳನ್ನು ಬಿಂದು ಮಾಧವನು ಪೆಠಾರಿಯಿಂದ ತೆಗೆದುಕೊಂಡು ಕೂಗಿಯೂ ಆಯಿತು……..
ಶಂಕರಶುಂಠಿಯೆಂಬ ಆಪ್ತ ಮಿತ್ರನು ಬಿಂದು ಮಾಧವನಿಗೆ ಕಿವಿತುಂಬ ಸಿಹಿಮಾತಾಡಿ ಸಲಹಕೊಟ್ಟನು-ಸುಮ್ಮನೆ ಟಪಾಲುಖಾನೆಯಲ್ಲಿ ಐದು ಸಾವಿರ ರೂಪಾಯಿಗಳನ್ನು ಇಟ್ಟರೇನು ಬಂತು ! ಗಳಿಸಿದ ಹಣವನ್ನು ಕೊಳೆಯಿಸಬಾರದಲ್ಲವೆ! ವ್ಯಾಪಾರ ಸಾಪಾರದಲ್ಲಿ ಉಪಯೋಗಿಸಿದರೆ ಒಂದಕ್ಕೆ ಹತ್ತು ಕೊಡುತ್ತದೆ.
ಶಂಕರಶುಂಠಿಯು ಪಂಚಾಂಗದಲ್ಲಿ ನೋಡಿಟ್ಟಿದ್ದನು. ಮಾಘ ಶುದ್ಧ ಪೌರ್‍ಣಮಿ ದಿನ ಜಡೇಶಂಕರನ ರಥೋತ್ಸವ ಮೇಗರಪೇಟೇಲಿ! ಅಲ್ಲಿಗೇಕೆ ಹೋಗಬಾರದು? ಒಂದು ರಾಟಿವಾಳೆ! ಒಂದೇ ರಾಟೆವಾಳೆಯಾದರೆ ಆಯಿತು! ಕುದುರೆ ಇರುತ್ತೆ; ಆನೆ ಇರುತ್ತೆ ; ಕುರ್ಚಿ ಇರುತ್ತೆ. ಅಂತು ರಾಟವಾಳ ಮಾಡಿಸಿದರೆ ಆಯಿತು ! ಏನು ಒಂದು ಮುನ್ನೂರು ರೂಪಾಯಿ ಸಾಕು, ಗಾಡಿ ಬಾಡಿಗ್ಗೆ ನಲವತ್ತು ರೂಪಾಯಿ. ಆಳಿಗೆ ಇಪ್ಪತ್ತು ರೂಪಾಯಿ ಸಾಕು. ಹತ್ತು ಕುದುರೆ ಹೊರಸುತ್ತು; ಮೂರಾನೆ, ಎರಡು ಹುಲಿ ಒಳಸುತ್ತು; ನಡುವಿಗೆ ಏಳು ಕುರ್ಚಿ ಒಟ್ಟು ಇಪ್ಪತ್ತೆರಡು ಜನ ಕೂರಬಹುದು. ಒಬ್ಬೊಬ್ಬರಿಗೆ ಆರಾರು ಕಾಸು; ಆರಾರು ಸುತ್ತು ತಿರುಗಿಸಿ ಇಳಿಸಿದರಾಯಿತು. ಗಂಟೆಗೆ ಇಂಥಾ ತಿರುಗಾಣಿಯು ಹನ್ನೆರಡೂ ಆಗದೆ? ಹಾಗೆಂದರೆ ಒಂದು ಗಂಟೆಗೆ ಹನ್ನೆರಡು ಹನ್ನೊಂದಾಣೆಯು ಒಂದು ದಿನಕ್ಕೆ ಹನ್ನೊಂದೂ ಆಗದೆ? ಮತ್ತೆ ಹಾಗಾದರೆ-ಇಂಥಾ ಹನ್ನೆರಡು ಹನ್ನೊಂದು ಆಣೆಯ ಹನ್ನೊಂದು ಗಂಟೆಗಳು ದಿನಕ್ಕೆ ಎಂದರೆ ಯೋಗ ಶಾಂತಿಯ ದಿನವೂ ಸೇರಿ ಎಷ್ಟೊಂದಾದವು! ಅಂದ ಮೇಲೆ ಒಟ್ಟು ಉತ್ಪತಿ! ಬಿಂದು ಮಾಧವನಿಗೆ ಬಾಯಲ್ಲಿ ನೀರೂರಿತು. ಮುನ್ನೂರು ರೂಪಾಯಿ ಖರ್ಚು ಮಾಡಿದರೆ ಒಂದು ಸಾವಿರಕ್ಕೆ ಕಡಮೆಯಿಲ್ಲದೆ ಸಂಪಾದನೆ ಮಾಡಬಹುದಲ್ಲವೆ. ಜಾತ್ರೆಯ ಆರು ದಿನವೂ ಕೂಡ ರಾತ್ರಿ ಹಗಲು ತಿರಿಗಿಸಿದಾಯಿತು. ಕಡೆಗೆ ತೆಪ್ಪೋತ್ಸವದ ದಿನವೂ ಕೂಡ ಕೊಳದ ಬಳಿಯೇ ರಾಟೆವಾಳೆಯನ್ನು ನೆಟ್ಟರಾಯಿತು. ಹೀಗೂ ಹಾಗೂ ಯೋಚನೆಮಾಡಿ ಬಿಂದುಮಾಧವಾಚಾರ್‍ಯರು ಬಡಗಿಯನ್ನು ಹಿಡಿತರಿಸಿ ಸೊಂಕೂಬಾಯಿಗೆ ಗೊತ್ತಿಲ್ಲದಂತೆ ಏಕಾದಶಿಯ ಒಳಗೇ ರಾಟೆವಾಳೆಯನ್ನು ಮಾಡಿಸಿ ತ್ರಯೋ ದಶಿಯ ದಿನ ಜಾತ್ರೆಗೆ ಹೊರಟರು. ಸೊಂಕೂಬಾಯಿಯು ಮನೆಯಲ್ಲೇ ನಿಂತಳು. ಗಲಾಟೆ ನೂಕನುಗ್ಗಲಲ್ಲಿ ಗಂಡಸರ ಶೆರಗುಹಿಡಿದು ಹೋಗಲಾದೀತೆ, ಪ್ರಸಾದವು ಹೇಗಿದ್ದರೂ ಮನೆಗೆ ಬಂದೇಬರಬೇಕಷ್ಟೆ ? ಅಷ್ಟು ಸಾಕು ದೇವರಲ್ಲಿರುವ ಭಕ್ತಿಗೆ!
ಮೇಗರಪೇಟೆಗೆ ಹೋದರು. ಶಂಕರಶುಂಠಿ ಜೋಯಿಸರು ಪರವಾನಗಿ ತರುವುದಕ್ಕೆ ಖಾವಂದರ ಗುಡಾರಕ್ಕೆ ಹೊರಟರು. ಇತ್ತಲಾಗಿ ರಾಟವಾಳೆಯನ್ನೆಲ್ಲ ಅಡ್ಡಾದಿಡ್ಡಿಯಾಗಿ ಸೇರಿಸುತ್ತಲಿದ್ದ ಜವಾನನ ಸಂಗಡ ಬಿಂದು ಮಾಧವನು ಹಾರಾಡಿ ಹೋರಾಡಿ ಹುಲಿ ಕುದುರೆಗಳನ್ನು ಅಲ್ಲಸಲ್ಲದ ಕೀಲುಗಳಿಗೆ ಸೇರಿಸಿ ತಿರು ತಿರುಗಿಸುವುದಕ್ಕೆ ಹೋಗಿ ಮೈ ಕೈ ಕೀಲೆಣ್ಣೆ ಮಾಡಿಕೊಂಡು ಬೆರಳುಗಳನ್ನೆಲ್ಲ ಗಾಯಮಾಡಿಕೊಂಡನು. ಇಷ್ಟರಲ್ಲಿ ಹುಡುಗರು, ಮುದುಕರು, ಪೋಕರಿ ಪುಂಡರು ಬಂದು ನೆರದೆನೆರದರು. ಬಿಂದು ಮಾಧವನಿಗೆ ಆನಂದ! ರಾಟವಾಳೆಯ ಚೌಕಟ್ಟಿನಲ್ಲಿ ಬೇಡವಾದ್ದೆಂದು ತನಗೆ ತೋರಿದ್ದೊಂದು ಅಂಗೈಯ್ಯಗಲದ ಮತ್ತು ಮೊಳದುದ್ದದ ಹಲಗೆಯನ್ನು ತೆಗೆದು ಅದರ ಮೇಲೆ ಬೆಳ್ಳಿಯ ನಶೈಡಬ್ಬಿಯೊಳಗಿನ ಸುಣ್ಣವನ್ನು ಬೆರಳಿಗೆ ಹಚ್ಚಿಕೊಂಡು ದೊಡ್ಡ ಅಕ್ಷರದಲ್ಲಿ “ಬಿಂದುಮಾಧವ ರಾಟವಾಳೆ” ಯೆಂದೂ ಸಣ್ಣ ಅಕ್ಷರದಲ್ಲಿ-ಆರೇಕಾಸು-ಆರು ಸುತ್ತು……… ಬನ್ನಿ ಬನ್ನಿಯೆಂದೂ ಬರೆದು, ಒಂದು ಗಳುವಿನ ತುದಿಗೆ ಮೊಳೆಗಳನ್ನು ಹೊಡೆದು ಗಳುವನ್ನು ತನ್ನ ಡೇರೆಯ ಮುಂದೆ ನೆಟ್ಟನು.
ಆಷ್ಟರಲ್ಲಿಯೇ ಡವಾಲಿ ಜವಾನನು ಬಂದು- “ಲೇಸನ್ ಲೇಸನ್” ಎಂದು ಕೂಗಿದನು. ರಾಟವಾಳೆಯ ಜವಾನನೆಂದ “ಲೇಸನ್ ತರಕ್ಕಾ ದೋಸಿಗಪ್ಪ ಹೂಗಾರೆ”- ಡವಾಲಿ ಢಲಾಯಿತನಿಗೆ ಸಿಟ್ಟು ಬಂದು ರಾಟೆಯ ನಡುಗಂಬವನ್ನಲ್ಲಾಡಿಸಿದನು. ಅಲ್ಲೊಂದು ಕುದುರೆ, ಇಲ್ಲೊಂದು ಆನೆ, ಹೀಗೆಲ್ಲ ಮಾಧವನ ಜೋಡಾಣಿಕೆಯ ಪ್ರಾಣಿಗಳೆಲ್ಲ ಉರುಳಿ ಬಿದ್ದುವು. ಸುತ್ತಲಿದ್ದವರು ಹೇಳಿದರು- “ಆಚಾರ್ರೇ – ಢಲಾಯಿತಗೇನಾದರೂ ಕೈಗಿಡಿರಿ” ಮಾಧವನು ನಾಲ್ಕಾಣೆಯನ್ನಿಡಹೋದನು. ಢಲಾಲಿಯು ಅದನ್ನವನ ಮೊಗದ ಮೇಲೆಸೆದು ಸಿಟ್ಟಾದನು. ನಾನೇನು ಬಿಕ್ಷಕ್ಕೆ ಬಂದೇಂತಲೋ ಏನರೀ ಲೇಸನ್ ತೋರಿ!” “ಇಲ್ಲವೋ ಅಪ್ಪ, ಪರವಾನಗಿ ತರತಾನೋ ಶಂಕರಶುಂಠಿ, ಇಕ್ಕೊಳೊ ಒಂದು ರೂಪಾಯಿ!”
ಇನ್ನಾರೋ ಹೇಳಿದರು- “ಏನ್ರಿ ತಿಳಿದೋರು ನೀವು! ಅಷ್ಟಿಷ್ಟೆಲ್ಲ ಖರಚಾಗುತ್ತೆ ಸಾಮಾನಿಗೆ ನಾಕಾಣೆಯಂತೆ ಕೊಟ್ಟರೇನರಿ ನಿಮಗೆ ಹೋಗೋದು. ಹುದ್ದೆದಾರ ಬಂದ್ರೆ ಒಂದಕ್ಕೆ ಹತ್ತು ಕೊಟ್ಟು ಬಿಡುತ್ತೀರಿ!”
ಮಾಧವಾಚಾರ್‍ಯರು ಶಂಕರಶುಂಠಿಯನ್ನು ಶಾಪಿಸಿ ಡಲಾಲೀಗೆ ದುಡ್ಡು ಕೊಟ್ಟು ಕಳುಹಿಸಿದರು. ಆ ಲಂಚಕೋರ ಮೂಲೆತಿರುಗುವುದದಲ್ಲೇ ಜಡೆಶಂಕರನಾಟಕಾಣೋ! ಗುಮಾಸ್ತಗೆ ಹತ್ತತಂತೆ, ಹುದ್ದೆದಾರ್ರಿಗೆ ಇಪ್ಪತಂತೆ, ಇಲ್ಲದಿದ್ದರೆ ಲೇಸನ್ ಇಲ್ಲ, ಪರವಾನಗಿ ಇಲ್ಲ.” ಹೀಗೆಂದು ಕೂಗಿಕೊಂಡು ಶಂಕರಶುಂಠಿ ಬಂದನು ಮತ್ತೆ ಕಿವಿಯಲ್ಲಿ- “ಮಾಧು-ಹುದ್ದೆದಾರ್ರೆ ಬರತಾರೆ ಕಣೋ. ಬಂದಾಗ್ಗೆ ಚಲ್ಲಿ ಹೋದರೆ ಹೋಗಲಿ ಒಂದು ರೂಪಾಯಿ, ಮಲ್ಲಿಗೇ, ಗುಲಾಬಿ, ಜಾಲಾರಿ ಹೂಗಳ ಸರಗಳನ್ನು ಹಾಕಿ ಅವರನ್ನು ಕೂರಿಸಿ, ತಿಳೀತೋ! ಗರ ಗರ ಗರ ತಿರುಗಿಸಿ ಬಿಡೋಣ. ಆಮೇಲೆ ಖುಸಿ, ಆದರೆ ಸರಕಾರಿ ಗುಮಾಸ್ತರೆಲ್ಲ ಒಂದೊಂದಾಣೆ ಕೊಡುತ್ತಾರಂತೋ ಕಾಣೋ? ಎಲ್ಲ ಊಟಾದ ಮೇಲೆ ಬರುತ್ತಾರೆ, ಖುಸಿ ಕಾಣೋ. ಎಲ್ಲಿ ದುಡ್ಡುತಾ. ನೀವೆಲ್ಲ ರಾಟೆ ಹೂಡಿ, ಹಚ್ಚಿ ಹೊಡೀರಿ, ಎಲ್ಲೋ ಕಾಪಾಲೀ, ಮುದ್ದೇ ತಿಂದು ಬಾರೋ, ತಿರುಗಣೆ ನಿಲ್ಲಲೇ ಬಾರದು. ಆಕಾಶ ಭೂಮಿಯೆಲ್ಲ ತಿರುಗಿ ತಿರುಗೀ ತಿರಗಬೇಕು. ಈ ಜಾತ್ರೆಗೆ ಬಂದೋರನ್ನೆಲ್ಲ ಕೂರಿಸಿ ಗಿರಿಗಿರಿಗಿರಗಟ್ಟಿ ಮಾಡಿಬಿಡು. ಸೂರ್ಯ ಮಂಡಲ! ಎನ್ನಿಸಿಬಿಡು!” ಎಂದು ಹೇಳಿ ಶುಂಠಿ ಜೋಯಿಸನು ದುಡ್ಡಿನ ಚೀಲವನ್ನು ತೆಗೆದುಕೊಂಡು ಹುದ್ದೆದಾರಖಾವಂದರ ಗುಡಾರಕ್ಕೋಡಿದನು.
ಬಂದರು, ಬಂದರು ಬಲುಜನ ಬಂದರು. ಡಿಂಡಿಮ ರಾಜಾಚಾರ್‍ಯರನ್ನು ನೋಡದೆ ಇದ್ದವರಾರು! ಮೇಗರಪೇಟೆಗೆ ಆರೇ ಮೈಲಿಯಲ್ಲಿತಾನೆ. ಆಚೆ ಪಾದಹಳ್ಳಿ! ಅಲ್ಲೇ ಅಲ್ಲವೆ ಮಾಧೂಗೆ ಹೆಣ್ಣು ತಂದದ್ದು. ಬಂದೇ ಬಂದರು.-ನೆಂಟರು, ತುಂಟರು, ಕಂಡೋರು, ಕೇಳಿದೋರು, ಎಲ್ಲಾ ಬಂದು ಅಲೇ ಅಡಿಕೆ ಜಿಗೀತ “ತಿರುಗಿಸೈಯ್ಯ ನಾವೆಲ್ಲ ನಿಮ್ಮೋರು, ರಾಜಾಚಾರ್‍ಯರೇನು ನಮಗೆ ದೂರದವರಲ್ಲ ಏನಯ್ಯ ಚಿರಂಜೀವಿ, ಮಾಧು ಬರುಕೊಳ್ಳಯ್ಯ ನಂದು ಹನ್ನೆರಡು ಸುತ್ತು! ಆಚಾರ್ರೆ ನಂದು ಮುವತ್ತಾರು! ಬಿಂದುಮಾಧವಾಚಾರ್ರೇ ನಮಗೂ ಕಾಸೋ ಏನ್ರಿ, ಈ ಹೊತ್ತು ಪರವಾನಗಿ ಸಿಕ್ಕದೇ ನೇತುಹೊಡೀತಿರುವಾಗ್ಗೆ, ಆ ಭಂಡಾಟ ತಪ್ಪಿಸಿದೋನು ನಾನಲ್ಲವೇ ? ನನಗೂ ಕಾಸೋ ? ಇಷ್ಟರ ಮೇಲೆ ಬರಕೊಳ್ಳಿ, ಹೂ ನೇಪಾಳ ತಿರುಗಿಸೋ ಹಚ್ಚಿ ಹೊಡೀ’! ಹಾ-ಆ-ಬೇಶ್.”
ರಾಟವಾಳೆಗೆ ಪುರುಸತ್ತೇ ಇಲ್ಲ. ತೆಪೋತ್ಸವದ ದಿನವೂ ಅದು ತಿರುಗಿತು. ಕೊಳದ ಬಳಿ ಗಿರಾಕಿ ಹೆಚ್ಚು, ಮಾಧವಾಚಾರ್ರೇ ಶುಂಠಿಯ ಬುದ್ದಿಯಮೇರೆಗೆ ಜನರನ್ನು ಮರುಳು ಮಾಡಲಿಕ್ಕಾಗಿ ನಿಂತರು. ಕುಳಿತವರೆಲ್ಲರ ಕರವಸ್ತ್ರಗಳಿಗೆ ಗಂಧದೆಣ್ಣೆಯ ತಟುಕನ್ನು ಹಚ್ಚುವುದಕ್ಕೆ ಆರಂಭಿಸಿದರು. ರಾಟೆಯು ತಿರುಗಿ ತಿರುಗಿತು, ತಿರುಗಿಸಿದವರ ರೆಟ್ಟೆ ಮುರಿಯಿತು. ಜಾತ್ರೆಯೆಲ್ಲ ಕಳೆಯಿತು ಮತ್ತು ನಾಲ್ಕು ದಸ್ತಿನ ಮೂರು ಲೆಕ್ಕದ ಪುಸ್ತಕಗಳು ತುಂಬಿದವು. ಅಷ್ಟೂ ಅಷ್ಟು ಗಿರಾಕಿಗಳ ದೇಣೇಲೆಕ್ಕ. ಎಲ್ಲರೂ ಗುರುತಿನವರೆ, ಎಲ್ಲರೂ ರಾಜಾಚಾರ್‍ಯರನ್ನು ಕಂಡು ಕೇಳಿದವರೇ, ಅಂತು ಎಲ್ಲ ಬರುವ ದುಡ್ಡೇ ಸರಿ. ಎಲ್ಲಾ ಖಾತ್ರಿ ಕುಳಗಳು. ಅಂತು ಹಣವೆಲ್ಲ ಇತ್ತು…….. ಲೆಕ್ಕದಲ್ಲಿ! ಕೈಲಿ ತಂದಿದ್ದ ಐನೂರು ರೂಪಾಯಿಗಳೂ ವಿನಿಯೋಗವಾದವು. ಶಂಕರಶುಂಠಿ ಜೋಯಿಸ ಹೇಳಿದ- ಮಾಧು ನಿನೇಕೋ ಪೆಚ್ಚಾದೆಯಲ್ಲ. ನೀನೋದಿದ್ದೆಲ್ಲ ಏನಾಯಿತು ಹೇಳು. ಒಂದು ಸಾರಿ ಬರದಿದ್ದರೆ ಇನ್ನೊಂದು ಸಾರಿ ಬರುತ್ತೆ. ಅದೇನೋ ಪುಸ್ತಕದಲ್ಲಿಲ್ಲದೆ -ಚಕ್ರನೇಮಿ ಕ್ರಮೇಣ-ಅಂತ, ಹಾಗೆ ಒಂದು ಸಾರಿ ಮೇಲೆ, ಇನ್ನೊಂದು ಸಾರಿ ಕೆಳೆಗೇ-ಅಂತೂ ಸಾವಿರ ಸಾರಿ ಹೇಳು. ಈಗ ಸೋತದ್ದೇ ಒಳ್ಳೇದು ನೋಡು. ಮೊದಲು ಕಹಿ, ಆಮೇಲೆ ಸಿಹಿ! ಅವರೆಲ್ಲರೂ ಕೊಡದೇ ಎಲ್ಲಿ ಹೋದಾರು ನನ್ನ ಜತೆಗೊಂದಾಳು ಒಂದು ಬಂಡಿ ಕೊಡು. ಎಲ್ಲ ಹಳ್ಳಿ, ಹಳ್ಳಿ ಸುತ್ತಿ, ತಿರುಗಣೆಯ ಬಾಕಿಯನ್ನೆಲ್ಲಾ ತಿರುತಿರುಗಿ ವಸೂಲು ಮಾಡಿ ತಂದೇ ತರುತ್ತೇನೆ!
ಅಂತು ಆ ರಾಟವಾಳೆಯನ್ನು ಮಾಡಿಸಹತ್ತಿದ್ದು ಒಳ್ಳೆಯ ಮುಹೂರ್ತವಲ್ಲವೆಂದು ಅದನ್ನು ಒಬ್ಬ ಮುಸಲ್ಮಾನ ಸಾಹೇಬನಿಗೆ, ಇಪ್ಪತ್ತೈದು ರೂಪಾಯಿಗೆ ಕೊಟ್ಟು ಬಿಟ್ಟು ಆಳಿನ ಸಂಬಳವನ್ನೂ ಗಾಡಿಯ ಬಾಡಿಗೆಯನ್ನೂ ತೆತ್ತು ಬಿಂದುಮಾಧವನು ಜಡೇಶಂಕರನ ಪ್ರಸಾದವನ್ನು ತೆಗೆದು ಕೊಂಡುಬಂದು ಸೊಂಕೂಬಾಯಿಗೆ ಕೊಟ್ಟುಬಿಟ್ಟನು. ಜಾತ್ರೆಗೆ ಹೋಗಿದ್ದ ರಾಟವಾಳೆಯ ವಿಚಾರದ ಕಂಪಂತೂ ಸೊಂಕು ಬಳಿ ಸುಳಿಯಲೇ ಇಲ್ಲ… ….ಚೈತ್ರ ಮಾಸದಲ್ಲಿ ನರಸಿಂಹ ದೇವಸ್ಥಾನಕ್ಕೆ ಶಂಕರಶುಂಠಿಜೋಯಿಸನು ಬಂದು ಸುಳಿದಾಡುತ್ತಿದ್ದು, ಬಿಂದುಮಾಧವನನ್ನು ಕೈಹಿಡಿದು ಕರೆದೊಯ್ದು ಏನೇನೋ ಊದಿದನು. ಮಾಧೂ ನಕ್ಕನು-“ಚಕ್ರನೇಮಿ ಕ್ರಮೇಣ ಅಷ್ಟೇ ಧೈರ್ಯವಿದ್ದರೆ ಭಾಗ್ಯ ಅಷ್ಟೆ.” ಎಂದಿಷ್ಟೇ ಗಟ್ಟಿಯಾಗಿ ಹೇಳಿದನು.
ವೈಶಾಖ ಶುದ್ಧ ಸಪ್ತಮಿಯ ದಿನ ಕಿರುಕುವಾಳೆಯಲ್ಲಿ ಭಾರಿ ಪರಿಸೆ, ಏನು ಜಾತ್ರೆ, ಎಷ್ಟೊಂದು ಜನ! ಅಷ್ಟಾದರೂ ಕೂಡ ನೀರು ನೆರಳಿಲ್ಲದೆ ತಿಂಡಿತೀರ್ಥವಿಲ್ಲದೇ ಜನ ಅಲೆದಾಡಿ ಬಡಿದಾಡುತ್ತಿದ್ದರು. ಅಲ್ಲಿಗೆ ಹೋಗಿ ಆ ದೇವರ ಸನ್ನಿಧಿಯಲ್ಲಿ ಬೇರೆಯವರ ಅವರಟ್ಟಿಗೆಗೆ ಆಪ್ಪಣೆ ಕೊಡದಹಾಗೂ, ಸಂತರ್ಪಣೆಗೆ ಸೌದೆ ಸಿಗದ ಹಾಗೂ ಮಾಡಿ, ಆ ಬಟ್ಟಬಯಲಲ್ಲಿ ಒಂದು ಹೋಟಲಿಟ್ಟರೆ ದುಡ್ಡು ಸುರಿದು ಹೋಗುತ್ತೆ. ಒಂದು ಲೋಟ ಬರೀ ನೀರಿಗೇ ಮೂರು ಕಾಸು! ಉಳಿದುದಕ್ಕೆ ಕೇಳಬೇಕೇ, ಕಾಸಿನ ಸೂರೆಯಾಗುತ್ತೆ, ಮತ್ತೆ ದುಡ್ಡಿನ ಮಳೆಯೇ ಸುರಿದುಹೋಗುತ್ತೆ. ಚಪ್ಪರವನ್ನು ಮಾತ್ರ ಎಲ್ಲರೂ ಸೇರುವ ಕಡೆಯೇ ಹಾಕಬೇಕು. ಈ ಸಾರಿ ಮಾತ್ರ ಹೋದ ಸಾರಿಯ ಮಾಡಿದಹಾಗೆ ಮಾಡದೆ, ಒಳ್ಳೆಯ ಮುಹೂರ್ತವನ್ನು ನೋಡಿ ಕಂಬವನ್ನು ನಡೆಸಬೇಕು. ಅಂತೂ ಬಿಂದುಮಾಧವನೂ ಶಂಕರ ಶುಂಠಿ ಜೋಯಿಸನೂ ಕುಳಿತು ಮಸಲತ್ತು ಮಾಡಿದರು. ಇನ್ನೇನು ಎಲ್ಲಾ ಗುಟ್ಟಾಗಿರಬೇಕು, ಹೋದಸಾರೆಯ ಹಾಗೆ ಗುಟ್ಟು ರಟ್ಟಾಗ ಬಾರದು. ಜಾತ್ರೆಗೆ ಬಂದವರಿಗೆ ಮಾತ್ರ ಆಶ್ಚರ್ಯವಾಗಬೇಕು-ಅಡಿಗೆ ಯಾಳು ನಾಲ್ಕು, ಎತ್ತಿನ ಗಾಡಿ ಮೂರು ಆಗಬೇಕು. ಎಲ್ಲ ಸ್ವಂತವೇ ಆಗಬೇಕು. ಸಾಮಾನೆಲ್ಲಾ ಪಾಗಡೀಪುರದಿಂದಲೇ ಹೋಗಬೇಕು. ಸಾಮಾನೆಲ್ಲಾ ಇಲ್ಲೇ ಅಗ್ಗ.
ಚೌತಿ ದಿನ ರಾತ್ರಿಯೆಲ್ಲಾ ಗಾಡಿಗಳನ್ನು ಕಟ್ಟಿಸಿ ಹೊರಟರು. ಎರಡು ಗಾಡಿಗಳ ತುಂಬ ಸಾಮಾನು ಮುಂದೆ ಹೋಗಿತ್ತು. ಸಾಮಾನಿನ ಜತೆಗೆ ಇಬ್ಬರು ಅಡಿಗೆಯವರು, ನಾಲ್ಕು ಆಳುಗಳು ಹೋಗಿದ್ದರು. ಚೌತೀ ದಿನ ಬಿಂದುಮಾಧವನು ಸೊಂಕೂಬಾಯಿಗೆ ಹೇಳಿದನು. ಎಲೇ ಇದ್ದಿಯೇನೇ ಅಲ್ಲಿ? ಕೇಳಿದ್ದೀಯ ಶೇಕದಾರ್ರ ಕಿರುಕುಳ, ನಮ್ಮೆಜಮಾನರು ನಮ್ಮನ್ನ ದೊಡ್ಡವರನ್ನಾಗಿ ಮಾಡಿಟ್ಟು ಹೋಗಿದ್ದಾರೆ. ಆದ್ದರಿಂದ ತಿಳಿತೇ, ಹೋಗಬೇಕು ಶೇಕದಾರ್ರ ಸಂಗಡ! ಕಿರುಕುವಾಳದ ಜಾತ್ರೆಗೆ ಹೋಗಿ ಬರುತ್ತೇನೆ, ಮನೆಕಡೆ ಜೋಕೆ, ಬರೋದು ಎರಡು ದಿನ ತಡವಾದರೂ, ನೆರಮನೆ ಬೆನಕಣ್ಣಯ್ಯನ ಮಗ ಜಾನಕಪ್ಪ ಇದ್ದಾನಲ್ಲ-ಸಾಮಾನು ಗೀಮಾನು ಅವನಿಂದ ತರಿಸಿಕೋ. ಎನೇ ತಿಳೀತೋ, ಹೊರಡಲೋ” …….. ಹೀಗೆ ಸೊಂಕೂಗೆ ಮಂಕುಬೂದಿ ಹಾಕಿ ಹೊರಟನು. ಬಿಂದುವಿನ ಆಸೆಯೆಂದರೆ ಹೀಗೂ ಹಾಗೂ ಮಾಡಿ ಐದು ಸಾವಿರ ರೂಪಾಯಿಯನ್ನು ಒಳ್ಳೆ ಫಲವತ್ತಾದ ಕಡೆ ಬಿತ್ತಿ, ಕಡೆಗೆ ಒಂದು ಐವತ್ತು ಸಾವಿರವನ್ನಾದರೂ ಮಾಡಿ ಸೊಂಕೂಬಾಯಿಯ ಮುಂದೆ ತಗೆದೊಯ್ದು ಸುರಿಯಬೇಕೆಂಬುದು.
ಹೆಂಗಸರಿಗೆ ಟಪಾಲಖಾನೆಯೆಂದರೆ ಎಷ್ಟೋ, ಖರ್ಚು ಖಾನೆಯೆಂದರೂ ಪೋಲೀಸು ಠಾಣೆಯೆಂದರೂ ಅರ್ಥವಾಗುವುದು. ಕಡೆಗೆ ಒಂದೇ ಬಾರಿಗೆ ತಿಳಿಸಿದರಾಯಿತು. ಅಂತೂ ಕಿರಕುವಾಳದಲ್ಲಿ ಸಂಪಾದನೆ ಯಾಗಬೇಕು, ಆಗದೆ ಏನು? ಬಟ್ಟಬಯಲು, ನೀರು ನೆರಳಿಲ್ಲದ್ದ ಜಾಗ. ಸ್ವಂತ ಗಾಡಿಗಳಿಂದ ನೀರು ಸಾಗಿಸುವವರಿಗೆ ಎಷ್ಟು ದೂರವಾದರೇನು? ಹೋಟಲಿಟ್ಟವರಿಗೆ ಕಷ್ಟವಿಲ್ಲ. ಸುತರಾಂ ಸುಲಭ, ತಿಂಡಿಯ ಆಶೆಗೆಂದರೇ ಎಷ್ಟೋ ಜನ ಬಂದು ಕೆಲಸಮಾಡಿ ಹೋದಾರು. ಅಂತೂ ಪಾಗಡೀಪುರದಿಂದ ಹೊರಟವರು ಚಪ್ಪೇನಹಳ್ಳಿಲಿ ಉಳಿದು ಊಟ ತೀರಿಸಿಕೊಂಡು ಹೊರಟರೆ ನೆಟ್ಟಗೆ ಕಿರುಕುವಾಳವೇ ಸರಿ……..
ಶಂಕರಶುಂಠಿಯು ಇಸ್ಪೀಟಿನ ಎಲೆಗಳನ್ನು ಕಲಿಸಿ ಹಾಕಿದನು. ಆಟ ಸಾಗುತ್ತಿತ್ತು ನಡುವೆ ಬಿಂದು ಹೇಳಿದ “ನೋಡು ನೋಡು ಆಠೀನ್ ಜಾಕೀನ ಹಾಗೆ ಕತ್ತರಿಸುತ್ತಾರೋ!” ಆಗ ಶಂಕರ ಹೇಳಿದ ಹಾಗಾದರೆ ನೀನು ಸೋಲುವ ಕಾಲ ಬಂದರೆ, ನಿನಗೆ ಇಲ್ಲದ ಸಿಟ್ಟು, ಹೋಗಲಪ್ಪ ಬಿಸಾಡು ಎಲೇನ …….. ಇನ್ನೊಂದಾಲೋಚನೆ ಬಂತು ಈಗ. ಕಿರಕುವಾಳ ಗ್ರಾಮಕ್ಕೆ ಹೋದೆವೆಂತಲೇ ತಿಳಿ, ಅಂಗಡಿ ಹೂಡೋಕ್ಕೆ ಏನಿದೆ. ಇಲ್ಲೇ ಒಂದಿಷ್ಟು ಬೂಂದಿ, ಪಕೋಡ ಮಾಡಿಸಿ ಗೂಡೇಲಿ ತುಂಬಿಸಿ ತೆಗೆದುಕೊಂಡು ಹೋಗ ಬಾರದೇ! ಅಲ್ಲಿ ಪತಗಳಿದ್ದೇವೆ. ತುಂಬಿದಾ ಇಟ್ಟ! ಬಿಂದೂ! ಲೇ ಮಾಧೂ! ಒಂದು ಬೋರ್ಡೇ ಇಲ್ಲಲ್ಲೊ! ಆಸಾರಿ ನೀನು ನನ್ನ ಹೆಸರೇ ಬಿಟ್ಟಿದ್ದೆ. ಈ ಸಾರಿ ನೋಡು ನಾವಿಬ್ಬರೂ ಒಂದೇ ಬೆಟ್ಟದ ಮೇಲಿಂದ ಉರುಡಿಬರುವ ಕಲ್ಲು ಗುಂಡುಗಳಾಗಿದ್ದೇವೆ ಅಲ್ಲವೇ! ಈ ಸಾರಿ ಬೋರ್ಡಿನಲ್ಲಿ ಮಾತ್ರ- “ಜಿಹ್ವಾನಂದ ಹೋಟಲ್-ಶಂಕರಬಿಂದೂ ಕಂಪನಿ”-ಎಂತ ಬರದಿಡಬೇಕು ತಿಳೀತೋ-ಸರೀ, ಮಾಧೂ, ತಕ್ಕಡಿ ತಂದಿದ್ದೀಯ, ಅಂತು ನಿನ್ನ ಕೆಲಸವೆಲ್ಲ ಹೀಗೇ, ಏರುಪೇರು ಎಲ್ಲ! ಲೋ ಪಾಪಯ್ಯ, ಓಡೋಡಿಹೋಗಿ ಪಾಗಡಿಪುರದಲ್ಲಿ ಬಂಕಪ್ಪ ಶೆಟ್ಟರಿದ್ದಾರಲ್ಲ, ನಾನು ಲೆಕ್ಕಬರೀತಿನಲ್ಲೊ ಅಲ್ಲಿ, ಒಂದು ತಕಡಿ, ಒಂದು ಸೇರುಗಲ್ಲು, ಎರಡು ಅಚ್ಚೇರುಗಲ್ಲು, ಮೂರು ಅರಪಾವುಗಲ್ಲು ಇಸುಗೊಂಡು, ಮಚ್ಚರ್ ಖಾನ್ ಸಾಬೀ ಅಂಗಡೀಲಿ, ಈ ಚೀಟಿ ಕೊಟ್ಟು, ಒಂದು ಬೋರ್ಡು ಬರೆಸಿ ಕೊಂಡು ಓಡಿಬರಬೇಕು- ರಾತ್ರಿ ಹೊರಡುವುದರೊಳಗೇ ಬರಬೇಕು, ತಿಳೀತೋ-ನಡುವೆ ಎಲೆಗಿಲೆ ಜಗೀತ ನಿಂತುಗಿಂತೀಯೋ!”……..
ಶಂಕರಶುಂಠಿಯಂಥಾ ಅಚ್ಚುಮೆಚ್ಚಿನ ಗೆಳೆಯರಿರುವಾಗ ಮಾಧೂಗೇನು ಕಡಿಮೆ, ಆತನಾನಂದಕ್ಕೆ ಪಾರವೇ ಇಲ್ಲ. ಅಂತು ಶುಂಠಿಯು ಕುರುಡನಂತೆ ಕೋಲು ಕುಟ್ಟಿ ನಡಿಯುವನೇ ಹೊರತು, ತಾನು ಕಣ್ಣು ಬಿಟ್ಟು ನಡೆಯಲಾರ. ಯಾಕೆಂದರೆ, ತಾನೇ ಏನಾದರೂ ಸಲಹೆ ಹೇಳಿದರೆ, ಪ್ರಿಯಗೆಳೆಯನ ಕಣ್ಣನ್ನು ನಂಬಿದಂತಾಗಲಿಲ್ಲ. ಆದ್ದರಿಂದ ಶಂಕರ ಹೇಳಿ ದಂತೆ ಮಾಧು ಕುಣಿಯುತ್ತ ಬಂದನು.
ಸರಕಾರಿ ಅರವಟ್ಟಿಗೆ ಈಸಾರಿ ಇಲ್ಲವೇ ಇಲ್ಲ. ಛತ್ರದಲ್ಲಿ ಅಡುಗೆಗಾಗಿ ಬಂದಿದ್ದ ಉಡುಪಿ ಬ್ರಾಹ್ಮಣರೆಲ್ಲರೂ, ಶಂಕರ ಬಿಂದೂ ಕಂಪನೀಲಿ, ಬೂಂದೀ ಕರಿಯಲು ನಿಂತರು. ಅಂತು ಯಾರಿಗೆ ನೀರೂ, ನೆರಳು, ತಿಂಡಿ, ತೀರ್ಥ ಬೇಕಾದರೂ, ಶಂಕರಬಿಂದೂ ಕುಂಫಿಣೀಗೇ ಬರಬೇಕಾಯಿತು.
ರಥವನ್ನು ಹಿಂದಿನಿಂದ ನೂಕುವುದಕ್ಕೆಂದು ಎರಡು ಆನೆಗಳನ್ನು ತರಿಸಿದ್ದರು, ಹುದ್ದೆದಾರರು ಖುದ್ದಾಗಿ ಮಾಧವಾಚಾರ್‍ಯರನ್ನೇ ಭೇಟಿ ಮಾಡಿ-ಆನೆಗೆ ನೀರು ದೊರಕುವಂತೆ ಮಾಡಿ, ರಾಯರೇ-ಎಂದು ಕೇಳಿಕೊಂಡಿದ್ದರು. ದೇವರ ಸೇವೆಗೆ ಬಂದ ಆನೆಗಳಿಗೆ ನೀರೂ ಕೂಡದಿದ್ದರೆ ಹೇಗೆ ? ಕೊಡಬೇಕು ಪಾಪ! ಅಂತು ಆನೀರು ದಿನಕ್ಕೆ ನಾಲ್ಕು ಬಾರಿ ಬೇಕಾಯಿತು. ಎಂಟೆಂಟು ಬಂಡಿಗಳ ನೀರೇ ಬೇಕಾಯಿತು. ಬಿಂಧವಾಚಾರ್ರು ಮಾತಾಡಿದರುಂಟೆ. ಹುದ್ದೇದಾರ್ರು ಶಂಕರ ಬಿಂದೂ ಕಂಪನಿಯವರ ಅನುಕೂಲಕ್ಕಾಗಿ, ಈಸಾರಿ ಅವಟ್ಟಿಗೆ ಮತ್ತೂ ಭೋಜನ ಕೂಟಗಳ ಮಾತೇ ಇಲ್ಲದ ಹಾಗೆ ಮಾಡಿಬಿಟ್ಟಿದ್ದಾರೆ. ಆದುದರಿಂದ ಹುದ್ದೆದಾರರಿಗೆ ಬೇಕುಬೇಕಾದ್ದೆಲ್ಲ ಜಿಹ್ವಾನಂದದಿಂದಲೇ ಸಾಗಬೇಕು. ಅಂಗಡಿ ಭಾರಿ -ಆದ್ದರಿಂದ-ಗುಳೋಪು, ಗುಂಡಾರು, ಕನಡಿ, ಕಾಂಗಡಿ ಚುಂಗಡಿ, ಸಿಂಗಡಿಗಳ ಸಿಂಗಾರವೇನು ಕೇಳಬೇಕೆ! ತಿಂಡಿಗಳೂ-ತರಹೇ ವಾರಿ-ಸಿಂಗಾಳ, ಸುತ್ತುಂಡೆ, ಸಿಂಧೂರ ಮೊದಲುಗೊಂಡು-ರಸಗೊಳ್ಳ, ಬಿಡಿನಿಂಬೆ, ಸುತ್ತುಂಡೆ, ಸೀಕಂಡ, ನಿಕುರುಂಬ ಮಧ್ಯವಾಗಿ, ಥರಥರದ ಮರುಬ್ಬ, ಚಿರೋಟಿ, ಫೇಣಿಗಳು! ಇವೆಲ್ಲ ಪರಾತಗಳಲ್ಲಿ ತುಂಬಿ ತುಂಬಿ ಚಪ್ಪರದ ಮೇಲು ಕಟ್ಟನ್ನೇ ಚುಂಬಿಸುತ್ತ ನಿಂತಿದ್ದವು. ತಕಡಿಗೂ ತೂಕದ ಕಲ್ಲುಗಳಿಗೂ ವಿರಾಮವೆಲ್ಲಿ? ವ್ಯಾಪಾರಕ್ಕೆ ಕುಳಿತಿದ್ದವನೊಬ್ಬ ಅನುಭವಸ್ಥ. ಅವನೆಲ್ಲಿಂದಲೋ ಬಂದವನು-ಬಿಂದುಮಾಧವನ ಭಾಗ್ಯದ ನಕ್ಷತ್ರವಾಗಿ, ಅಂಗಡಿಯ ಮೇಲೆ ಕುಳಿತಿದ್ದನು. ಕೆಲಸಗಾರರಿಗೂ ಕೂಲಿಗಾರರಿಗೂ, ಆಳುಕಾಳುಗಳಿಗೂ, ದುಡ್ಡು ಕೊಟ್ಟು ಪೂರೈಸುವುದು ಸಾಧ್ಯವಿಲ್ಲವೆಂದು ಶಂಕರಶುಂಠಿಯು, ಅವರಿಗೆಲ್ಲ ತಿನ್ನುವಷ್ಟು ತಿಂಡಿಯನ್ನೂ ಏರ್ಪಾಡು ಮಾಡಿದ್ದನು.
ಅಂಗಡಿಯಲ್ಲಿ ಕೆಲಸಗಾರರಿಂದ ತುಂಬಿ ಗಿಜಗಿಜವೆನ್ನುತ್ತಲಿತ್ತು. ಗದ್ದಲ, ಗಸ್ತುವಾರಿ, ಉಸ್ತುವಾರಿಗಾಗಿ, ಬಿಂದುಮಾಧವಾಚಾರ್ರು, ಹುದ್ದೆದಾರರ ಕಡೆಯ ಹಿರಿಯಾಳುಗಳನ್ನೇ ನೇಮಿಸಿದ್ದರು. ಇನ್ನೇನು ಕೇಳಬೇಕೆನ್ನುವ ಹಲಗೆಗಳ ಮೇಲೆ ಕುಳಿತಿದ್ದುದೆಲ್ಲ-ಶಿಂಬೆ ರುಮಾಲೇ, ಜರತಾರಿ ಶಾಲೇ! ಯಾವುದಕ್ಕೂ ಕಡಿಮೆ ಇರಲಿಲ್ಲ ಶಂಕರಬಿಂದು ಕಂಪನಿಯ ಕೀರ್ತಿಯೆಲ್ಲೆಲ್ಲ ಹರಡಿ, ಎರಡು ಮೂರನೆ ದಿನಗಳಲ್ಲಂತು, ಬರಲಾರದೆ ಇದ್ದವರೆಲ್ಲ ಬಂದು ಹಾಜರಿ ಕೊಟ್ಟರು. ಹುದ್ದೆದಾರರ ಹೇಳಿಕೆ ಮೇರೆಗೆ ಬಂದವರೆಲ್ಲ, ತಿಂದವರೆಲ್ಲ ತಮ್ಮ ತಮ್ಮ ಅಭಿಪ್ರಾಯಗಳನ್ನೆಲ್ಲ ಬರೆದಿಡಲಾಗಿ, ಒಂದು ಪುಸ್ತಕವನ್ನೂ ಒಂದು ಲೇಖಣಿಯನ್ನೂ, ಒಂಡು ದೊಡ್ಡ ದೌತಿಯನ್ನೂ, ಒಂದಿಷ್ಟು ಹಸೀಕಾಗದವನ್ನೂ ಒಂದು ಕಡೆ, ಮೇಜಿನ ಮೇಲೆ ಇಟ್ಟೂ ಆಯಿತು.
ಆ ಪುಸ್ತಕದಲ್ಲಿ ಬರೆದವರೆಷ್ಟು ಜನ! ಅಂಥಾದ್ದು ದಿನಕ್ಕೆ ಎರಡು ಪುಸ್ತಕಗಳೂ ಸಾಲದೆ ಬಂದವು. ಲೆಕ್ಕದ ಪುಸ್ತಕಗಳಾದರೂ ಅಷ್ಟೊಂದಾಗಿ ತುಂಬಲಿಲ್ಲ. ಸೈ ಸೈ ಸೈ ಸೈ, ಎಂದು ಎಲ್ಲರೂ ಬಂದು ಬಿಂದುಮಾಧವನ ಭುಜತಟ್ಟಿ ಹೋಗುವವರೇ ಹೆಚ್ಚು ಆತುರಪಟ್ಟು ಬಂದು ಬೀಳುವ ಗಿರಾಕಿ ಪತಂಗಗಳನ್ನು ನೋಡಿ, ಶಂಕರನು ಹಿಗ್ಗಿ ಹೀರೇಕಾಯಾಗಿ, ಬಿಂದುವಿಗೆ ಕೈಸನ್ನೆ ಮಾಡಿ ಹೆಸರಿನ ಬೋರ್ಡನ್ನು ತೋರಿಸುವನು- “ಹಿ ಹಿ ಹೀ ! ಈಸಾರಿ ಬರೀ ಬಿಂದುವಲ್ಲ, ಶಂಕರಬಿಂದೂ!”
ಅಂತು ಎಲ್ಲ ಮುಗಿಯಿತು. ಖರ್ಚುಪಟ್ಟಿಯ ತುದಿಗೆ, ಒಂಭೈನೂರೊಂಭತ್ತು ರುಪಾಯಿ, ಒಂಭತ್ತು ಆಣೆ, ಒಂಭತ್ತು ಕಾಸು, ಬಿತ್ತು. ಆದಾಯವೆಲ್ಲ ಸರಸ್ವತಿ ಪ್ರಸನ್ನ ನಿತ್ಯ ತಿಂಡಿ ತಿಂದವರಲ್ಲಿ-ಅರ್ಧಪಾಲು ಜನ, ಕೆಲಸಗಾರರು, ನೀರು ತುಂಬಿದವರು, ತಂದವರು, ಮತ್ತು ಇಳಿಸಿದವರು, ಅಳೆಮಕೊಟ್ಟವರು, ನಿಗಾ ನೋಡಿದವರು, ಬಂಡಿ ಹೊಡೆದವರು, ದಾರಿ ಬಿಡಿಸಿದವರು, ಚಕ್ರಗಳ ಕಡಾಣಿಗಳನ್ನು ಯಾರೂ ತೆಗೆಯದಹಾಗೆ ನೋಡುತ್ತ ದಾರಿಯುದ್ದಕ್ಕೂ, ಗಾಡಿಗಳೊಂದಿಗೆ ಹೋಗಿ ಬಂದವರು, ಹೀಗೆ ನೀರಿನ ಸಿಬ್ಬಂದಿಯವರೇ ಮೂವತ್ತು ಜನ. ಇನ್ನು ಅಂಗಡಿಗೆ ಗಿರಾಕಿಗಳನ್ನೊದಗಿಸುತ್ತ, ಬೀದಿಯಲ್ಲಿ ನಿಂತವರು, ತೂಗಿದ ತಿಂಡಿಯನ್ನು ಹಾಕಿಕೊಡಲು ಪೊಟ್ಟಣ ಸರಬರಾಜುಮಾಡುತ್ತ ನಿಂತವರು, ಹುಶಾರಿ ನೋಡುವವರೇ ಮೊದಲಾಗಿ ಅಂಗಡಿಗೆ ಇಪ್ಪತ್ತಾರುಜನ, ಇನ್ನೂ, ಕರಿಯಾವಾಗ ಒಲೆದೂಡುವವರು, ಸೌದೆ ತರುವವರು, ಲೆಖ್ಖ ಬರೆವವರೂ-ಇವರೆಲ್ಲ ಬೇಡವೆಂದರೆ ಹೇಗೆ ! ಅಂತು ಎಲ್ಲರೂ ಬೇಕಾದ ಸಿಬ್ಬಂದಿಯೇ. ಹೀಗೆ ಸಿಬ್ಬಂದಿಗಳೆಲ್ಲ ಸೇರಿ, ನಿತ್ಯ ತಿಂಡಿ ತಿನ್ನುವವರು, ಸುಮಾರು ಇನ್ನೂರು ಮಂದಿ, ಕಡೆಯದಿನ ಇವರಿಗೆಲ್ಲ ಇನಾಮನ್ನಾದರೂ ಹಂಚಬೇಕೆಂದು ಬಿಂದುವು ಯೋಚಿಸಿಯೂ ಇದ್ದನು. ಕಡೆಗೆ ಲೆಖ್ಖವೆಲ್ಲ ಸರಸ್ವತೀ ಪ್ರಸನ್ನವಾಯಿತು. ಬಂದ ಹಣ ಕಡಿಮೆ ಮತ್ತು ಬರುವ ಹಣ ಬಹಳ-ಗಿರಾಕಿಗಳ ಪೈಕಿ, ತಿಳಿಯದವರಿಗಿಂತ, ತಿಳಿದವರೇ ಬಹಳಜನ ಸರ್ಕಾರಿಯ ಛತ್ರವೂ, ಅರವಟ್ಟಿಗೆಯೂ, ಇದ್ದೆ ಇರುವುವೆಂದು, ಬಂದಿದ್ದಾರಾದ್ದರಿಂದ, ಯಾರೂ ಕೈಲಿ ದುಡ್ಡು ತಂದಿರಲಿಲ್ಲ. ಶಂಕರಬಿಂದೂ ಕಂಪನಿಯ ಮೊಕಮಲ್ಲಿನ ಚೀಲವು ಭರ್ತಿಯಾಗದಿದ್ದರೂ, ತೇಗದ ಪೆಟ್ಟಿಗೆಯು ಲೆಕ್ಕದ ಪುಸ್ತಕಗಳಿಂದ ಭರ್ತಿಯಾಯಿತು-ವಸೂಲಿಗೆ ಒಬ್ಬ ಮುಸಲ್ಮಾನ ಸಾಬಿಯನ್ನು ಗೊತ್ತು ಮಾಡಿದರಾಯಿತು, ಬಡಿದು ಬತ್ತಾ ತುಂಬಿದಂತೆ, ಬಾಯನ್ನೆಲ್ಲ ತುಂಬಿ ತರೋಣ! ಎಂದು ಅನುಭವಸ್ಥ ನಾದ ಶಂಕರ ಜೋಯಿಸನು ಹೇಳಿ, ಬಿಂದುಮಾಧವನನ್ನು ಸಮಾಧಾನ ಪಡಿಸಿದನು.
ಶ್ರೀ ಮರುಳುಶಂಕರ ದೇವರಿಗೆ ಕಡೇದಿನ, “ಶಂಕರಬಿಂದೂ ಜಿಹ್ವಾನಂದ ಹೋಟೆಲಿನ” ಸೇವೆಯೂ ನಡೆಯಿತು. ಚಪ್ಪರ ಕಿತ್ತು ಹೂರಟೂ ಆಯಿತು. ಸುಗಾಲಿ ಪಾಳ್ಯವನ್ನು, ದಾಟುವವೇಳೆಗೆ ಅರ್‍ಧರಾತ್ರಿ, ಗಂಗ ಡೋಲಿಯು, ಇನ್ನೇನು ಎರಡು ಕಲ್ಲೆಸೆಗೆ ಮತ್ತೊಂದು ಕೊಂಬಿನ ಕೂಗಿನಲ್ಲಿತ್ತು. ಎತ್ತುಗಳಿಗೆ ಮಧ್ಯಾಹ್ನದಿಂದ ಹುಲ್ಲಿಲ್ಲ ನೀರಿಲ್ಲ. ಗಾಡಿ ಹೊಡೆಯುವ ಶಂಭು ಕುಂಭ ಇಬ್ಬರೂ ಮೂಕಿಯಿಂದ ಕೆಳಗೆ ಹಾರಿ ಸೋತ ಎತ್ತುಗಳನ್ನು ಬಿಚ್ಚಿ-ಬಿಟ್ಟರು. ಬಿಂದೂಮಾಧವನು ಪ್ರೀತಿಯ ಗೆಳೆಯನನ್ನು ಕರೆದು- “ಲೆಕ್ಕದ ಪುಸ್ತುಗಳೆಲ್ಲ ಯಾತರಲ್ಲಿವೆ? ಪೆಟ್ಟಿಗೆಯಲ್ಲೇನು? ಈಗ ಅದು ಸರಿ! ಆದರೆ ಮತ್ತೊಂದು ವಿಚಾರ, ಎತ್ತುಗಳ ಲೆಕ್ಕಾಚಾರ ಹೇಗೆ. ಅವು ನಡೆಯಲಾರವು. ಅವಕ್ಕೆ ಹುಲ್ಲು ಇಲ್ಲ; ನೀರೂ ಇಲ್ಲ; ಕೈ ಕಾಲಲ್ಲಿ ತ್ರಾಣವಿಲ್ಲ. ಅದನ್ನೆಲ್ಲ ಎಲ್ಲಿಂದ ತರಿಸೋಣ! -ಎಂದು ನಿಟ್ಟುಸಿರು ಬಿಟ್ಟನು.
ಕಷ್ಟ ಕಾಲಕ್ಕೆ ಕೈ ಬಿಡದಲ್ಲವೆ, ಶುಂಠಿಯು ಬುದ್ದಿ- “ಏಕಣ್ಣ, ಯಾಕೆ, ಇಂಥಾ ಕೆಟ್ಟ ಮೂರೇಮಾಡೀಯೊ? ಎತ್ತುಗಳಿಗೆ ಕುಡಿಯುಕ್ಕೆ ನೀರಾಗಿರೋದು ಏನಾದರೂ ಬೇಕಲ್ಲವೆ? ತಿನ್ನುವುದಕ್ಕೆ ಮೆತ್ತಗಿರೋದು ಏನಾದರೂ ಬೇಕಲ್ಲವೆ?
-“ಹೌದಯ್ಯಾ, ಅದೆಲ್ಲ ಇರುವುದಾದರೂ ಎಲ್ಲಿ? ಕತ್ತಲೆ ಕರಗಿಸಿದರೇ ಇಲ್ಲಿ ನೀರು! ನಕ್ಷತ್ರಗಳನ್ನು ಬೇಯಿಸಿದರೇ ಮೆತ್ತಗಿರುವುದು ಏನಾದರೂ ಆದೀತು!”
“ಹಾಗಾದರೆ ನೀನೇ ನೋಡುತಾ ಇರು…” ಎಂದು ಶಂಕರ ಶುಂಠಿಯ, ಬಂಡಿಯ ಬುಡಕ್ಕೆ ಕಟ್ಟಿದ್ದ ತಪ್ಪಲೆಗಳನ್ನು ಬಿಚ್ಚಿಕೊಂಡು ಬಂದು ಎತ್ತುಗಳ ಮುಂದಿಟ್ಟು ಗಾಡಿಯ ಹತ್ತಿರ ಬಟ್ಟೆ ಬರಿ, ಪೆಟ್ಟಿಗೆ ಪೆಠಾರಿಯೆಲ್ಲ ಕಿತ್ತಾಡಿ ಗಾಡಿಯಲ್ಲಿದ್ದ ನಾಲ್ಕಾರು ಗುಂಡಾಲುಗಳನ್ನು ಹೊರಲಾರದೆ ಹೊತ್ತು ತಂದು ಅವುಗಳನ್ನು ಎತ್ತುಗಳ ಮುಂದಿಟ್ಟನು.
ಎತ್ತುಗಳಾದರೊ ಕುಡಿಯಲಾರದಷ್ಟು ಕುಡಿದು, ತಿನ್ನಲಾರದಷ್ಟು ತಿಂದವು. ಶುಂಭಕುಂಭರು ಗಾಡಿಕಟ್ಟಿ ಹೊಡೆದರು. ಇನ್ನೇನು ಶನಿವಾರ ಪೇಟೆ ಬಂತು. ಬೆಳಕು ಹರಿಯುತ್ತ ಬಂತು. ಶಂಕರನು ಬಿಂದುಮಾಧವನನ್ನು ಎಬ್ಬಿಸಿ-“ಈಗೆಲ್ಲಿದ್ದೇವೆ ಹೇಳು!-” ಎಂದು ಕೇಳಿ ಅತ್ತಿತ್ತ ನೋಡಿದನು.
“ಇನ್ನೆಲ್ಲಿ! ನಡು ಕಾಡಿನಲ್ಲಿ! ನೀನು ಕರೆತರುವುದೆಲ್ಲ ಇಂಥಾ ಕಡೆಯೇ, ದಿಕ್ಕು ದೆಶೆ, ನೆಲೆ ನೀರು ಕಾಣದಲ್ಲಿ! ಬೆಳಗಾಯಿತೇನು? ಅದೋ ಅಲ್ಲಿ ದಿಗಂತದ ಬಿಳಿಗೀರು ಕಾಣುತ್ತಾ ಇದೆ. ಆಮರಗಳ ಮೇಲೆ. ಯಾರನ್ನಾದರೂ ಹಳ್ಳಿಗೆ ಕಳಿಸೋಣವೇನು?” ಎಂದ. ಅತ್ತ ಇತ್ತ ಅಡ್ಡಾಡಿ ನೋಡಿದನು.
ಶಂಕರಶುಂಠಿಯು ಗಟ್ಟಿಯಾಗಿ ನಕ್ಕು- “ಅಲ್ಲ ನೀನೇ ಕುಂಭಕರ್‍ಣ ಕಾಣೋ! ಈಗ ಶನಿವಾರಪೇಟೆಯ ಬಳಿ ಇದ್ದೇವೆ. ಇಲ್ಲೀತಾನೆ ಎರಡು ಗಾಡಿಗಳನ್ನು ಮಾರಿ, ಪಾಗಡೀಪುರಕ್ಕೆ ಥೈಲಿತಕ್ಕೊಂಡು, ಏನೇನೂ ಅರಿಯದೇ ಇದ್ದೋರಹಾಗೆ ಹೋಗೋದು!”
“ಅಲ್ಲ, ಎತ್ತುಗಳಿಗೆ ಹೊಟ್ಟೆಗಿಲ್ಲದೆ, ಇಲ್ಲಿಯವರೆಗೆ ಹೊಡಕೊಂಡು ಬಂದು ಈಗ ಮಾರುಕ್ಹೋದರೆ ಏನು ಚಂದ!” ಎಂದು ದಿಗ್ಭ್ರಾಂತನಾದನು.
“ಅವಕೇನೋ, ಬಡಿದದ್ದೂ ಗೂಡೆ ಗೂಡೆ ಬೋಂಡ ತಿಂದು ತಪ್ಪಲೆ ಗಟ್ಟಲೆ ಖೀರು ಹೊಡೆದಿದಾವೆ!” ಎಂದು ಶಂಕರ ಶುಂಠಿಯು ಸಮಾಧಾನ ಹೇಳಿದನು.
ಶನಿವಾರ ಪೇಟೆಯ ಬಳಿಗೆ ಬಂದರು. ಕಿರುಬೆಳಕು ಹರಿಯಿತು. ಮೂಡಲಗಲ್ಲವು ಕೆಂಪಾಗುವ ಹೊತ್ತಿಗೆ, ನೊಗಗಳನ್ನು ಬಿಚ್ಚಿದರು.
ಶಂಕರಮಾಧವರು ತಿಂಡಿ ತಿಂದು, ತಿರುಗಾಡಿಕೊಂಡು, ಗಿರಾಕಿಗಳನ್ನು ಕರೆದುಕೊಂಡು ಬಂದರು.
ಇತ್ತ ಎತ್ತುಗಳು ನಾಲ್ಕೂ ಮಲಗಿದ್ದವು, ಏಳಲೇ ಇಲ್ಲ. ಅಲ್ಲೇ ಮಲಗಿ, ಕಾಲುಚಾಚಿಕೊಂಡು ಹೊಟ್ಟೆಯುಬ್ಬರಿಸಿಕೊಂಡು, ಕಡೆಯುಸಿರು ಬಿಡುತ್ತಾ, ಆಶ್ರಮ ತೆಗೆದುಕೊಳ್ಳುವುದರಲ್ಲಿದ್ದವು.
……..ಸೊಂಕೂಗೆ ಏನೇನೂ ತಿಳಿಯದು. ಯಜಮಾನರೇಕೋ ಮಂಕಾಗಿರುವರೆಂದು ಬಹುವಾಗಿ ಪ್ರಯಾಸಪಟ್ಟು ಉಪಚಾರಮಾಡಿದಳು: ಏನೇನೂ ಉಪಯೋಗವಾಗಲಿಲ್ಲ. ಸ್ನಾನಕ್ಕೆ ಹೋದರೆ ಸುಮ್ಮನೆ ನೀರು ಸುರಿದುಕೊಳ್ಳುತ್ತ ನಿಂತುಬಿಡುವರು, ಸಂಧ್ಯಾವಂದನೆಗೆ ಕುಳಿತರೆ, ಅರ್‍ಘ್ಯವನ್ನೂ ಬಿಡದೆಲೆ ಜಪಕ್ಕೆ ಕುಳಿತುಬಿಡುವರು; ಏಳರೇ ಏಳರು! ಯಾಕೆ? ಏನು ಮಾಡಲೆಂದು ಸೊಂಕುಬಾಯಿಯು ದುಗುಡಗೊಂಡು ನೋಡುವಳು, ನಿಲ್ಲುವಳು, ನಿಂತವಳು ಧೈರ್ಯಮಾಡಿ ಬಳಿಗೆ ಹೋಗುವಳು, ಮತ್ತೀಚೆಗೆ ಬರುವಳು. ಕಡೆಗೊಂದು ದಿನ ದೈರ್‍ಯಮಾಡಿ ಟಪಾಲಖಾನೆಯಲ್ಲಿಟ್ಟ ದುಡ್ಡೇನಾದರೂ ಹೋಯಿತೋ? ಟಪಾಲಖಾನೆಯಲ್ಲಿ ಕಳವಾಯಿತೆ? ನಿಮ್ಮ ದುಡ್ಡು ಹೋಯಿತೆ? ಏನಾಯಿತು? ಯಾಕೆ ಹೀಗಾದಿರಿ? ಪರ ಒಕ್ಕಲ ದೇವರಿಗೆ ಹೋಗಬಾರದೆಂದು ನಾನು ಹೇಳಿದರೆ ಕೇಳದೆ ಜಡೇ ಶಂಕರಿನಿಗೆ ಹೋಗಿದ್ದಿರಿ. ಮರುಳು ಶಂಕರನಿಗೆ ಹೋಗಿದ್ದಿರಿ. ಅಲ್ಲೆಲ್ಲ ಏನಾಯಿತು ಹೇಳಿ-ದಯವಿಟ್ಟು ಹೇಳಿರೆಂದು ಹತ್ತಿರ ಕುಳಿತು ಉತ್ತರೀಯ ಎರಡು ಶೆರಗುಗಳನ್ನೂ ಮೈಯ್ಯೆರಡು ಕಡೆಗೂ ಸೆಳೆದುಕೊಂಡು ನಡುವಿನ ಬಳಿ ಬಿಗಿದು ಒಂದೆರಡು ಗಂಟುಹಾಕುತ್ತಾ ಬಿಚ್ಚುತ್ತಾ ಕುಳಿತುಕೊಳ್ಳುವಳು. ಏನೇನು ಮಾಡಿದರೂ ಆಚಾರ್ರಿಗೆ ದುಮ್ಮಾನವು ಕಳೆಯದು……..
ಫಸಲೆಲ್ಲ ಮನೆಗೆ ಬರುವ ಸಮಯ. ಗದ್ದೆಗಳಲ್ಲಿನ ಪೈರೆಲ್ಲ ಬಂಗಾರದ ತೆನೆಗಳ ಭಾರಕ್ಕೆ ಮಲಗಿಹೋಗಿವೆ. ಬಿಂದುಮಾಧವನು ತನ್ನ ಗದ್ದೆಯ ಕೊಯಿಲಿಗೆ ಪ್ರಾರಂಭಿಸಲು, ಗಣಪತಿಯ ಪೂಜೆಮಾಡಿಸಲು ಹೋಗಿದ್ದಾನೆ. ಇತ್ತಲಾಗಿ ಬಿಂದುಮಾಧವನು ನೋಡುತ್ತಿರಲು-ಅಲ್ಲಾರೋ ತಲೆಗೆ ಲಪ್ಪಟ್ಟೆಸುತ್ತಿ – ಒಂದಿಷ್ಟು ಹೊಸತೆನೆಯನ್ನು ಕೈಲಿ ಹಿಡಿದು ಬಲಗೈಲಿನ ಕುಡುಗೋಲನ್ನು ಬೀಸುತ್ತ ಗದ್ದೆಯ ಬದುವಿನ ಮೇಲಿನ ಗಿಡಗಳ ತಲೆಗಳನ್ನು ಹಾರಿಸುತ್ತ, ಜಾಗುಹಾಕುತ್ತ ಬರುತ್ತಲಿದ್ದನು. ನಡಿಗೆಯನ್ನು ನೋಡಿಯೇ ತಿಳಿಯಿತು. ಶುಂಠಿ ಜೋಯಿಸ! ಇವನನ್ನು ತಪ್ಪಿಸಿಕೊಂಡು ಹೋಗಬೇಕು. ಇನ್ನುಳಿದೆರಡು ಸಾವಿರದ ಕುಯಿಲಿಗೆ ಏನಾದರೂ ಏರ್ಪಾಡು ಮಾಡಿಯಾನೆಂದು ಬಿಂದು ಮಾಧವನು ಗಟ್ಟಿಯಾಗಿ ಮಂತ್ರ ಹೇಳುತ್ತ, ತೆಂಗಿನಕಾಯಿ ಒಡೆದು, ಬಾಳೇಹಣ್ಣಿನ ಮೂತಿಯನ್ನು ಮುರಿದು ತೆನೆಗಳನ್ನು ಗಣಪತಿ ಮಂಡಲಾಕಾರವಾಗಿಡುತ್ತ ಕುಳಿತನು. ಶಂಕರ ಶುಂಠಿಯು ಹತ್ತಿರಬಂದು- “ಆಹಾ! ಎನುಚಂದ! ಪುರೋಹಿತರು ಬೇಡವೊ? ಸಾವಿರಸಾವಿರ ಬಾಳುವ ಸಾಹುಕಾರರೂ ಕೂಡ ಮುದ್ದೇ ಪೂಜಾರಿಗಳಂತೆ ತಮ್ಮ ಮಂತ್ರ ತಾವೇ ಹೇಳೇನೆಂದು ಕುಳಿತರೇನು ಚಂದವೊ! ಹೂ, ನೀರು ಚುಮುಕಿಸು, ಆಚಮ್ಯ…. ಅಪ ಉಪಸ್ಪೃಷ್ಯ, ಸಂಕಲ್ಪ, ಮೂಗು ಹಿಡೀ, ಓಂ ಓಂ, ಶುಭೇ ಶೋಭನೇ” ಎಂದು ದೌಡಾ ದೌಡಿಯಾಗಿ ಹೋಗುವದನ್ನು ಕಂಡು “ಬಾಯಿಮುಚ್ಚು, ಸಾಕು, ನಿನ್ನಿಂದ ಇಷ್ಟೆಲ್ಲ! ಎರಡು ಸಾವಿರದ ನೇವೇದ್ಯಕ್ಕೆ ಇನ್ನೇನು ದೇವರನ್ನು ಪ್ರತಿಷ್ಠ ಮಾಡಲಿಕ್ಕೆ ಬಂದೆ” ಎಂದು ಕೂಗಿ ಮೋರೆಯನ್ನು ಕೆಂಪು ಮಾಡಿದನು. ಶಂಕರನು ಅಂಗವಸ್ತ್ರದ ಶೆರಗೊಂದರ ಗಂಟು ಬಿಚ್ಚಿ “ಇಲ್ನೋಡು ಇದೇನು ಬರೀ ಸರಸ್ವತಿ, ಪ್ರಸನ್ನವೋ! ಹದಿನೈದು ದಿನದಿಂದ ಸುತ್ತಿ ಸುತ್ತಿ ಸುಣ್ಣವಾಗೀ ಈ ಇನ್ನೂರರ ಗಂಟನ್ನು ತಂದೆನು. ಆ ಸುತ್ತಲಿನ ಸಿಂಬಿಯು ಕೈಗೇ ಸಿಕ್ಕಲಿಲ್ಲ. ಈ ಹೊತ್ತು ಹೊಸ ಅಕ್ಕಿ ನಮ್ಮನೇಲಿ, ಇಲ್ಲದಿದ್ದರೆ, ಇನ್ನೂ ಇನ್ನೂರು ಮುನ್ನೂರಿಲ್ಲದೆ ಬರುತ್ತಿದ್ದೆನೇ “ರಾಜದ್ವಾರೇ ಸ್ಮಶಾನೇಚ” ಅಂತ ಹೇಳುವರಲ್ಲವೆ, ನಾನು ನಿನ್ನ ಗೆಳೆತನಕ್ಕಾಗಿ ಎಷ್ಟೊಂದು ನೊಂದೆ ಸೋತೆ, ಹಿಡಿ, ನಾನಿನ್ನು ಹೊರಟೆ.” ಎಂದು ನೋಟಗಳನ್ನು ಗಣಪತಿ ಮಂಡಲದ ಮೇಲೆಸೆದು, ಎರಡು ಹೆಜ್ಜೆ ಮುಂದಿಟ್ಟು, ಮತ್ತೆ ಹಿಂದಿರುಗಿ ನೋಡಿ ಮತ್ತೆ ಹೊರಟಿರಲು, ಮಾಧವಾಚಾರ್‍ಯನು ಓಡಿ ಬಂದುಯಾಕಪ್ಪ ಒಂದಿಷ್ಟು ಸಿಟ್ಟಿನ ಕಾವಿಗೇನೇ ಹಾಲು ಉಕ್ಕಿ ಹೋಗೋಣೇನಯ್ಯ, ನಿಂತರೆ ಹೇಳೇನು” ಶಂಕರಶುಂಠಿಯು ಹಿಂತಿರುಗದೆಲೆ- “ಇದೋ ಸಾಕು ಟಪಾಲಾಫೀಸಿನವರ ಸಂಗ, ಮಾಧು! ಇಷ್ಟೇನೇ ಸರಿಯೆ!”
ಬಿಂದುಮಾಧವನು ನಕ್ಕು “ರೈಲಿಲಾಖೆಯೋರನ್ನ ನಂಬಿದ್ದಕ್ಕೆ ಟಪಾಲಾಫೀಸಿನೋರಿಗಾಯಿತಲ್ಲ! ನಾವೂ ನೀವೂ ಎಲ್ಲ ಒಂದೆ, ಸುದ್ದೆಮುದ್ದೆ”
ಶಂಕರ “ನಾನೂ ಈ ಹೊತ್ತು ಎದ್ದಾಗಿನಿಂದ ಜಪಾ ಕೂಡ ಮಾಡದೆ ಯೋಚನೆ ಮಾಡಿದ್ದೇನಲ್ಲೋ. ಈ ಪೈರು ನೋಡು, ಈ ಸಾರಿ ಎಷ್ಟೊಂದು ಭತ್ತ, ಸುಮ್ಮನೆ ಮೈಸೂರು ಭತ್ತದ ಯಂತ್ರಕ್ಕೆ! ಭತ್ತವಲ್ಲ, ಹೊಟ್ಟಿಲ್ಲ ಪಟ್ಟಲ್ಲ, ಸವರನ್ನೇ ಸುರಿದು ಹೋಗುತ್ತೆ.
ನಾನೂ ಅಲ್ಲಿಗೆ ಭತ್ತ ಕಳಿಸಿ ಅಕ್ಕಿಮಾಡಿಸುತ್ತೇನೆ. ಶಂಕರನು ಹಲ್ಲು ತೆರಿದು ಅಣಕಿಸಿ “ನಾಚಿಕೆಯಿಲ್ಲ! ಯಾಕಪ್ಪ ನನ್ನ ಕೈಲಿ ಆ ಎರಡು ಸಾವಿರದಲ್ಲೊಂದು ಸಾವಿರವನ್ನು ಕೊಡು, ನಾನು ಮನೆ ಕಟ್ಟಿಸಿ ಮಿಶನ್ ತರಿಸಿ, ಮೀಸೆ ಮೇಲೆ ಕೈ ಹಾಕದಿದ್ದರೆ ಕೇಳು” ಮಾಧವಾಚಾರ್ರು ಸುಮ್ಮನೆ ಮಂಕಾಗಿ ಕುಳಿತುಬಿಟ್ಟರು. ಹಾಗೇನು! ಎಂದು ಹೇಳಿ ನಿಟ್ಟುಸಿರುಬಿಟ್ಟು, ಹತ್ತಿರವಿದ್ದ ಹೊಂಗೆಯ ಮರವನ್ನೊರಗಿ ನಿಂತುಬಿಟ್ಟರು, ಕೂಲಿ ಆಳುಗಳು ಕುಡಗೋಲ ಹಿಡಿದು ಕೊಯ್ಯುತ್ತ ಹೋದರು. ಗಾಳಿಯು ಶಂಕರ ಶುಂಠಿಯ ಸೆರಗನ್ನು ಬಿಂದುಮಾಧವನ ಮೋರೆಗಡ್ಡಲಾಗಿ ಎಸೆಯಿತು.
ಶಂಕರ ಹೇಳಿದ “ನಾನು ನೋಡಿಟ್ಟಿದ್ದೇನೆ. ಜೋಶೀ-ಫ-ರಾಟನ ನಿದ್ದಾನಲ್ಲ ಆ ಕಿರಸ್ತಾನರೋನು ಆತನ ಹತ್ತಿರ ಒಂದು ಮಿಶನ್ನಿದೆ. ಕೇರುಕ್ಕೆ ನಾಲ್ಕು ಹೆಣ್ಣಾಳು, ಇಂಜನ್ನಿಗೆ ಇಬ್ಬರು ಗಂಡಾಳು ಭತ್ತ ಸುರಿಯುಕ್ಕೇ ಒಬ್ಬ ಹುಡುಗ, ಚೀಲ ಹಿಡಿಯುಕ್ಕೆ ಮೂರು ಘಟ್ಟದಾಳು. ಲೆಕ್ಕ ಬರಿಯಕ್ಕೇ ಇನ್ನೇನು ನಾನಾದರೂ ಆಯಿತೆ! ಅಂತು ಸರಿಯಾಗಿ ನೋಡಿ ಕೊಂಡರೋ, ಮೈಸೂರಿಗೆ ಹೋಗೋ ಭತ್ತವೆ. ಇಲ್ಲಿಗೇ ಬರುತ್ತೆ. ಆಗ್ಗೆ ಮುಟ್ಟಿದ್ದಕ್ಕೆ ಮೂರೂ ಅಂತ ಈ ಸಾರಿ! ಆ ಎರಡುಸಾರಿ ಬಿತ್ತಿದ್ದೆಲ್ಲ ಫಲಕ್ಕೆ ಬರುತ್ತೆ. ಇನ್ನು ಮುಂದೆ ನಿನ್ನೊಂದಿಗೆ ನಾನು ಸೇರೋದೂ ಇಲ್ಲ ನಿನ್ನ ಆ ನಾಲ್ಕು ಸಾವಿರ ಬಂದ ಕೂಡಲೆ ನಾನು ದೇಶಾಂತರವಾದರೂ ಹೋದೇನು. ನಿಮ್ಮಾಕೆಯಿಂದ ನನ್ನಾಕೆಗೆ ಹೇಳಾಣೆಕೆಯಾಗಿದಂತೆ ಕಾಣುತ್ತೆ ನಾನಿನ್ನು ಬದುಕುವಹಾಗಿಲ್ಲ. ಇದೇ ಕಡೇ ಸೂಚನೆ. ನಾನು ಹೊರಟೆ” ಎಂದು ಹೇಳಿ ಶುಂಠಿ ಜೋಯಿಸನು ಎಷ್ಟು ಕರೆದರೂ ನಿಲ್ಲದೇಲೇ ಬೇಗ ಹೋದನು.
ಬಿಂದುಮಾಧವನು ಕುಯಿಲು ಪೂಜೆ ಮಾಡಿದಲ್ಲಿ, ಬಂದು ಹುಡುಕಾಡಿದನು. ಇನ್ನೂರು ರೂಪಾಯಿಗಳ ನೋಟು ಇರಲಿಲ್ಲ! ಸಿಗಲಿಲ್ಲ! ಮುಖದ ಮೇಲಿನ ಬೆವರಾರಿಸಿಕೊಳ್ಳುತ್ತ ನಿಂತಿದ್ದ ಒಬ್ಬ ಹೆಣ್ಣಾಳು ಹೇಳಿದಳು “ಆ ದೋಸಿಗರೇ, ನಡೀನಾಗೆ ಶೆಕ್ಕೊಂಡರಲ್ಲ ಒಡೇರೆ! “ಕುಡಗೋಲು ಮಸೆ ಯುತ್ತ ನಿಂತಿದ್ದ ಒಬ್ಬ ಮುದುಕನೂ ಹೇಳಿದನು” ಕೆಳಗೆ ಬಿಸಾಟು ಮತ್ತೆತಿಗೊಂಡರು ಬುದ್ದಿಯೋರೆ!……..
ದೊಡ್ಡ ಕುದುರೆಗೆ ಕಡಲೆ ಹುರುಳಿ, ಜೂಲು ನಾಯಿಗೆ ಹಾಲು ಅನ್ನ, ನೀಲಿಗಿರಿಯ ಬೆಕ್ಕಿಗೆ ಕೆನೆಮೊಸರು ತುಪ್ಪ; ತೊಟ್ಟಿಯೊಳಗಿನ ಹಸುಗೂಸಿಗೆ ಬಿಸಿಹಾಲು ಮತ್ತು ಹೊರಗಿನಾಳುಗಳಿಗೆ ಮುದ್ದೆ ಎಸರು. ಒಳಗಿನೋರಿಗೆಲ್ಲ ತೊಳದಕ್ಕಿ ಅನ್ನ ಇವೆಲ್ಲ ಅಷ್ಟೋಪಚಾರ ಷೋಡಶೋಪಚಾರಮಾಡಿ ಗೃಹ ದೇವತೆ, ಸಹದೇವತೆ ಪರಿವಾರದೇವತೆಗಳನ್ನು ತೃಪ್ತಿ ಪಡಿಸುತ್ತ ಒಬ್ಬೊಂಟಿಗಿತ್ತಿಯಾದ ಸೊಂಕೂಬಾಯಿಯು ವನದೇವತೆಯೇ ಆದಳೆಂದು ಹೇಳುವವರು ಹೇಳಿಕೊಂಡರು! ಮಗು ಮಧ್ವರಾಜಿಯು ಹೊಸ್ತಿಲದಾಟಿದ ದಿನದ ಆರತಕ್ಷಿತೆಗೆ ಬಂದ ಹೆಮ್ಮಕ್ಕಳೆಲ್ಲರೂ- “ಸೊಂಕೂಗಿನ್ನೇಕವ್ವಾ ಮನೆಯಾಯಿತು ಬಾಗಿಲಾಯಿತು, ಕೊಂಕುಳಿಗೆ ಕೂಸಾಯಿತು, ಮೇಲೆ ಮುತ್ತಿ ನಂಥ ಗಂಡಾ, ಬಾಗಿಲಲ್ಲಿ ಮಿಶನ್ನು! ನಮ್ಮನ್ನೇಕವ್ವಾ ಕರೆದಾಳು! ಮರೀ ಬೇಡೌವ್ವಾ ಸೊಂಕೂ ಎಂದೆಂದು ಹೇಳಿ ನಕ್ಕು ನಲಿದು ಬಾಗಿನಗಳನ್ನು ಶೆರಗದಲ್ಲಿ ಮರೆಮಾಡಿಕೊಂಡು ಹೋದರು.
ಆ ರಾಟನ ಸಾಹೇಬನು ತನ್ನ ಮನೆ ಮಠವನ್ನೆಲ್ಲ ಬಿಂದುಮಾಧವನಿಗೊಪ್ಪಿಸಿ ಸಾವಿರ ರೂಪಾಯಿಗಳ ಥೈಲಿ ತೆಗೆದುಕೊಂಡು ಮತ್ತೆ ಬರುವೆನೆಂದು ಹೇಳಿ ಹೊರಟನು. ಅವನ ಮೇಲಿನ ಪ್ರೀತಿಗೆ ಬಿಂದುಮಾಧವನು ತನ್ನ ಹೆಸರಿನೊಂದಿಗೆ ಅವನ ಹೆಸರನ್ನೂ ಸೇರಿಸಿ ಕಂಪನಿಯ ಹೊಸ ಹೆಸರನ್ನು ಮಾಡಿದನು. ಅಲ್ಲದೆ ತೀರ ಹೊಸ ಹೆಸರನ್ನೂ ಮಾಡಬಾರದು! ಗಿರಾಕಿಗಳು ಬಾರದೇ ಹೋದಾರು!
ರಾಟನ್ ಶಂಕರ ರೈಸ್ಮಿಲ್ಸ-ಕಂಪೆನಿಯ ಹಸರಿಗೆಷ್ಟೊಂದು ಕಾಗದಗಳು! ಒಂದೆರಡು ತಿಂಗಳೊಳಗೆ ಸಾವಿರ ಸಾವಿರ ಖಂಡುಗ ಭತ್ತವು ಬಂದು ಉಗ್ರಾಣದಲ್ಲಿ ಕೂಡಿತು, ಶುಭದಿನದಲ್ಲಿ ಯಂತ್ರ ವ್ರತವನ್ನು ಆಚಾರ್‍ಯರು ಗ್ರಹಣ ಮಾಡಿದರು. ಬಿಂದುಮಾಧವನು ಇಷ್ಟು ಹೊತ್ತಿಗೆ ಬಲು ಹೆಸರು ವಾಸಿಯಾಗಿ ಹೋದನು. ಊರವರೆಲ್ಲರೂ ಸೇರಿ ಇವನಿಗೊಂದು ಬಿರುದನ್ನು ಕೊಡಬೇಕೆಂದು ಚಳವಳಿ ಮಾಡಹತ್ತಿದರು. ಮಾಧವನ ಮನೆಯವರು ; ಅವರ ನೆಂಟರು ಮತ್ತವರ ಗುರುತು ತಿಳಿದವರು ಮತ್ತೆ ತಂದೆ ತಾಯಿಗಳ ಕಡೆಯವರು ಮೊದಲಾಗಿ ನೂರಾರು ಜನರು ವಾವೆವರಸೆ ಹುಡುಕಿಕೊಂಡು ಖಂಡುಗಗಟ್ಲೆ ಭತ್ತವನ್ನು ಭಂಡಿಗಳ ಮೇಲೆ ಹೇರಿಕೊಂಡು ಬಂದು :-ಮನಯಲ್ಲಿ ಉಳಿದು, ಮಧ್ವರಾಜಿಯನ್ನು ಮುದ್ದಾಡಿ ಭತ್ತವನ್ನೆಲ್ಲ ಅಕ್ಕಿ ಮಾಡಿಸಿಕೊಂಡು ಹೋಗಹತ್ತಿದರು. ಶಂಕರ ಹೇಳಿದ, ಮೊದಲನೆಯ ವರುಷ, ಹಾಗೇ ಸರಿ. ನಾವು ಬಿಗಿಯಾಗಿರಬಾರದು. ಆ ರಾಟನ್ ಸಾಬಿಗೆ ಅದಕ್ಕೆ “ಹಾಗಾದುದು, ನೋಡು ಈಗಷ್ಟೊಂದು ಜನ ಬಂದು ಮುತ್ತುವರು! ಇರುವೆ ಸಾಲಿಟ್ಟಂತೆ ಗಾಡಿಗಳು ಬರುತ್ತಲಿವೆ. ಎಲ್ಲಿ ಭತ್ತದ ಗಾಡಿಯನ್ನು ಕೇಳಿದರೂ ರಾಟನ್ ಶಂಕರ ಮಿಲ್ಲಿಗೇನೆ! ಇನ್ನೇನಯ್ಯ ನನ್ನನ್ನಿಷ್ಟು ಬಿಟ್ಟು ಬಿಡು” ಎಂದು ಶುಂಠಿ ಜೋಯಿಸನು ಬಿಡಿಸಿಕೊಳ್ಳಲು ಪ್ರಯತ್ನ ಮಾಡಹತ್ತಿದನು. ಬಿಂದುಮಾಧವನು ಒಪ್ಪಲೋಲ್ಲ. ಒಂದೆರಡು ತಿಂಗಳು ಕಳೆಯಿತು. ಕೂಲಿಯವರಿಗೂ, ಇಂಜನ್ನ ನಡಿಸುವವನಿಗೂ, ಎಣ್ಣೆ ಖರ್ಚಿಗೂ ಕೂಡ ಬಿಂದುಮಾಧವನು ಟಪಾಲ ಖಾನೆಯಿಂದ ಹಣತರಿಸಬೇಕಾಗಿ ಬಂದಿತು. ಎಷ್ಟಾದರೂ ಧೈರ್ಯಗೆಡಲಿಲ್ಲ. ಇಷ್ಟಾಗಿ ಬಿಂದುಮಾಧವನಿಗೆ ತಂಟೆ ತಗಾದೆ, ಕೆಲಸದ ಕಿರುಕಳವಿಲ್ಲ. ಒಳಗೆ ಸಂಸಾರವನ್ನೆಲ್ಲ ಸೊಂಕುವು, ಗೃಹದೇವಿಯಾಗಿ ನಡೆಸುತಲಿರುವಳು. ಹರಿಗೋಲು ಅಲ್ಲಾಡಿದ್ದು ಕೂಡ ಮಾಧವನಿಗೆ ಕಾಣದ ಹಾಗೆ ಸಂಸಾರದ ನೌಕಾಯಾತ್ರೆ ನಡೆಯುತಲಿದೆ. ಇತ್ತಲಾಗಿ ಹೊರಗಿನ ಕೆಲಸಕ್ಕೆ ಶಂಕರನಿರುವನು. ಗಿರಾಕಿಗಳನ್ನು ಹೊಂದಿಸಿ ಭತ್ತವನ್ನು ತರುವುದು, ಅಕ್ಕಿಯನ್ನು ಸಾಗಿಸುವದು-ಈ ಕಷ್ಟದ ಕೆಲಸವನ್ನೆಲ್ಲ ಶುಂಠಿ ಜೋಯಿಸನೇ ನೋಡುತ್ತಲಿರುವನು. ಇನ್ನೇನು ಇಷ್ಟರ ಮೇಲೆ ಯಂತ್ರದೆಣ್ಣೆ, ಆಳುಗಳ ಸಂಬಳ. ಇವುಗಳಿಗೆ ದುಡ್ಡು ತಾನೆ-ಒಂದೆರಡು ತಿಂಗಳು ಜನಗಳು ನಂಬಿಕೆ ಬೀಳುವವರೆವಿಗೂ ಟಪಾಲಾಫೀಸಿನಿಂದ ತರಿಸಿದರಾಯಿತು. ಆ ಮೇಲೆ ಹೇಗಿದ್ದರೂ ಒಂದಕ್ಕೆ ನೂರಾಗಿ ಅಲ್ಲಿಗೇ ಹೋಗಿ ಸೇರಬೇಕಷ್ಟೆ………
ರಾಟನ್‌ಸಾಹೇಬನ ಅಚ್ಚು ಮೆಚ್ಚಿನಾಳು ಒಬ್ಬ ನಿದ್ದನು ಅವನ ಹೆಸರು ಪಾಯಸ! ಪಾಯಸ ಬಂದು “ಸಾರ್! ಜೋಯಿಸಪ್ಪ ಬಂತು.” ಎಂದು ಹೇಳಿ ಕೈತೋರಿಸಿದನು.
ಶಂಕರ ಜೋಯಿಸನು ಕುದುರೆಯನ್ನಿಳಿದು ಬಂದು ಕುರ್ಚಿಯ ಮೇಲೆ ಉಸ್ಸೆಂದು ಕುಳಿತು “ಸಾಕಪ್ಪ! ದಾಸಪ್ಪನ ಸೇರುವೆ!” ಎಂದು ಜೇಬಿನಿಂದೊಂದು ಅಚ್ಚಿನ ಕಾಗದದ ಚೂರನ್ನು ತೆಗೆದುಕೊಟ್ಟನು. ಬಿಂಧುಮಾಧವನು ನೋಡಿ ಯಾವಾಗಿನದು ಇದನ್ನು ಯಾವ ಪತ್ರಿಕೆಯಿಂದ ಕತ್ತರಿಸಿದೆ ಏನಿದು ಹೇಳು. ನಾನಾದರೂ ಹೊರಗೆ ಹೋಗಿ ತಿರುಗಾಡಿ ಬರುತಲಿದ್ದೆ, ಯಾವಾಗಲೂ ನೀನೇ ಹಟಮಾಡಿ ಹೋಗಿ ಇಲ್ಲಿ ಬಂದು ಸಂಕಟಪಡುವ ನಿನ್ನಾಯಾಸವನ್ನು ನೋಡಿದರೋ ನನಗೇನೂ ಬೇಡವಾಗುತ್ತೆ” ಎಂದು ಕುರ್ಚಿಯನ್ನು ಹತ್ತಿರಕ್ಕೆಳೆದುಕೊಂಡು ಕುಳಿತನು. ಕಾಲಡಿಯಲ್ಲಿದ್ದ ಮೊಖಮಲ್ಲಿನ ಕಾಲುದಿಂಬು ಉರುಡಿ ಹೋಯಿತು. ಮೇಜಿನ ಮೇಲಿನ ಚಿನ್ನದ ಲೇಖನಿ ಉರುಡಿ ಬಿತ್ತು. ಶಂಕರನು ಗೆಜಟ್ಟ ಪತ್ರಿಕೆಯ ಚೂರನ್ನು ತೆಗೆದುಕೊಂಡು ಓದಿದನು “ಇದರಿಂದ ಸಮಸ್ತರಿಗೂ ತಿಳಿಸುವದೇನಂದರೆ – ಹೆಗ್ಗಡದೇವನ ಕೋಟೆಯ ಬಳಿ ಬಂದಿದ್ದ ಒಂದು ಹಿಂಡು ಆನೆಯನ್ನು ಸರಕಾರದವರು ಹಿಡಿಸಿ ಪಳಗಿಸುವರು. ಹಿಂಡಿನಲ್ಲಿದ್ದ ಎಂಟಾನೆಗಳ ಪೈಕಿ-ಹಾಲಿ ಉಳಿದಿರುವ ನಾಲ್ಕಾನೆಗಳು ಹರಾಜಿಗೆ ನಿಂತಿವೆ. ಮಾರ್ಚಿ ಇಪ್ಪತ್ತೊಂದನೆಯ ತಾರೀಖು ಸೋಮವಾರದ ದಿನ, ಅಪರಾಹ್ನ ಎರಡುಗಂಟೆಗೆ ಹರಾಜು ಪ್ರಾರಂಭವಾಗುವುದು. ಇಷ್ಟವುಳ್ಳವರು ಫೆಬ್ರವರಿ ಆಖೈರೊಳಗೇ ಐನೂರು ರೂಪಾಯಿ ಫೀಜಿನೊಡನೆ ಅರ್ಜಿ ಬರಕೊಳ್ಳಬಹುದು……..
ಹರಾಜೆಗೆ ನಿಲ್ಲುವ ಆನೆಗಳ ತಪಶೀಲು ಪಟ್ಟಿ
೧. ಐದಡಿಯ ಸಣ್ಣಾನೆ-ಒಂದು ಕಿವಿಯು ಹರಿದುಹೋಗಿದೆ. ಇದರ ಕ್ರಯ ರೂಪಾಯಿ ಎಂಟನೂರು ಮಾತ್ರ.
೨. ಎಂಟರಿ ಎರಡಂಗುಲದ ಹೆಣ್ಣಾನೆ-ನಾಲ್ಕು ತಿಂಗಳ ಮರಿಯ ಜೊತೆಗೆ ಕ್ರಯ, ಸಾವಿರ ರೂಪಾಯಿ ಮಾತ್ರ.
೩. ಹತ್ತಡಿಯ ಗಂಡಾನೆ-ಒಳ್ಳೇ ಉದ್ದನಾದೊಂದು ದಂತವಿದೆ. ಎಡಗಡೆದಂತ ಮುರಿದಿದೆ. ಕ್ರಯ-ಸಾವಿರದೈನೂರು ಮಾತ್ರ.
೪. ಹತ್ತುವರೆ ಅಡಿಯ ಗಂಡಾನೆ-ಒಂದುಕಾಲು ಕುಂಟು, ಚೆನ್ನಾಗಿ ಪಳಗಿದೆ. ಎರಡು ದಂತಗಳ ಉದ್ದ. (ದವಡೆಯಿಂದ) ಮೂವತ್ತಾರು ಅಂಗುಲಗಳು, ಕ್ರಯ ಸಾವಿರದ ನಾನೂರು ಮಾತ್ರ.
ಇಲ್ಲಿ ಕಾಣಿಸಿರುವ ಕ್ರಯದಪಟ್ಟಿಗೆ ಒಂದೆರಡುನೂರು ಹೆಚ್ಚು ಕಡಿಮೆಯಾದರೂ ಲೆಕ್ಕಿಸದೆ ಸರಕಾರದವರು ಜನಗಳಿಗೆ ಕೊಡಬೇಕೆಂದಿರುವುದರಿಂದ ಪ್ರಜೆಗಳ ಕಡೆಯಿಂದ ಯಾರಾದರೂ ಮುಂದಾಗಿಬಂದು ಬಹು ಉಪಯೋಗಕರವಾದ ಈ ಪಳಗಿದಾನೆಗಳನ್ನು, ಹರಾಜಿನಲ್ಲಿ ಪಡೆಯುವರೆಂದು ನಂಬಿದ್ದೇವೆ. ಎಂದು ಮುಂತಾಗಿ ಬರೆದಿತ್ತು. ಶುಂಠಿಯು ಕಾಗದವನ್ನು ಮಡಿಚಿ ತನ್ನ ರೇಶ್ಮಿಯ ಚೀಲದೊಳಗಿಟ್ಟು ನೋಡಯ್ಯ ಈಗ ಈ ಗಾಡಿಗಳನ್ನು ಹುಡುಕುವ ಭಂಡಾಟವನ್ನು ತಪ್ಪಿಸಿದರೆ, ನೀನೇ ಬಿಂದುಮಾಧವ ನಮ್ಮ ಸಧ್ಯದ ದೇವರು” ಎಂದೆದ್ದು ಬಿಂದುಮಾಧವನ ಭುಜವನ್ನು ತಟ್ಟಿದನು. ಇಬ್ಬರೂ ಎದ್ದು ಮನೆಗೆ ಹೋದರು.
ರಾಟನ್ ಸಾಹೇಬನು ರೈಸುಮಿಲ್ಲನ್ನು ದೀಡುಮಾಡಿ ಹಣ ತೆಗೆದು ಕೊಂಡು ಹೋದುದು ಯಾರಿಗೂ ಗೊತ್ತಿರಲಿಲ್ಲ. ಬಿಂದುಮಾಧವನಿಗಂತೂ ತಿಳಿಯದು. ಈದಿನ ಬಂದ ಟಪಾಲಿನಲ್ಲಿ ರಾಟನ್ಶಂಕರ ರೈಸುಮಿಲ್ಲಿನ ಎಜಮಾನನಿಗೆ ನೋಟೀಸು ಬಂದಿದೆ.
* * *
ಸೆಂಕುವು ಅಳುತ್ತಾ ಗಂಡನ ತಲೆಯಕಡೆ ಕುಳಿತಿದ್ದಳು, ಬಿಂಧುಮಾಧವನು ತಲೆದಿಂಬನ್ನು ತೆಗೆದೆಸೆದು ತಣ್ಣಗಿದ್ದ ಮಂಚದ ಕಟಕಟೆಯಮೇಲೆ ತಲೆಯನ್ನೊದಗಿಸಿ ಹೆಂಡತಿಯ ಮೊಗವನ್ನು ನೋಡುತಲಿದ್ದನು. ಮಧ್ಯ ರಾಜಿಯು ಚಿನ್ನದ ಬಟ್ಟಲಲ್ಲಿದ್ದ ಹಾಲನ್ನು ಕುಡಿಯದೆ ಸೊಂಕೂಬಾಯಿಯ ಜರತಾರಿಯ ಸೆರಗನ್ನು ಹಿಡಿದೆಳೆಯುತಲಿದ್ದನು.
ಮಾರನೆಯ ದಿನ ಫಾರೆಷ್ಟ ರೇಂಜರು ದೌಡಾದೌಡಿ ಕುದುರೆಯ ಮೇಲೆ ಬಂದು ರಾಟನ್ಶಂಕರ ಕುಂಫಿಣಿಯ ಬಳಿ ಕುದುರೆಯನ್ನಿಳಿದು- ಬಿಂದುಮಾಧವನನ್ನು ನೋಡಬೇಕೆಂದರು.
ಹುಡುಗಾಟವೆ, ಆಚಾರ್ರ ಮಗನಾದವನು, ಆನೆ ಕಟ್ಟೋಣವೆಂದರೇನು ? ಅಂಥ ಅರಮನೆ ಗುರುಮನೆಯವರಿಗೆ ಸಾಧ್ಯವಿಲ್ಲ! ಅಲ್ಲದೆ ಈ ಭತ್ತದ ಯಂತ್ರದ ಮೇಲೆ ಸುಮಾರು ಎಂಟು ಸಾವಿರ ರೂಪಾಯಿಗಳ ಸಾಲವಿದೆ, ಬಿಂದುಮಾಧವನು ಆ ಕೂಡಲೇ ಸರಕಾರಕ್ಕೆ ಆನೆಯ ಹರಾಜಿಗೆ ತಾನು ನಿಲ್ಲಲು ಇಷ್ಟವಿಲ್ಲವೆಂದು ಬರೆದುಕೊಂಡು ಆ ಊರು ಬಿಟ್ಟು ಹೊರಡಬೇಕು! (ಐನೂರು ಹೋದರೂ ಹೋಗಲಿ). ನಾಳೆ ನಾಡಿದ್ದರಲ್ಲೇ ರಾಟನ ಶಂಕರ ಕಂಪನಿಯು ಹರಾಜಾಗುವದಾಗಿದೆ. ಸಮನ್ನು ಆಗಲೇ ಹುಟ್ಟಿದೆ.
ಫಾರೆಷ್ಟರೇಂಜರು ಪಾಪ-ಆ ರಾಜಾರಾರ್ರನ್ನ ಬಲ್ಲವರು…….
“ಶಂಕರ! ಸುಮ್ಮನೇ ಆನೆಗೆ ಅರ್ಜಿಹಾಕಿಸಿದ್ದೆಯಲ್ಲ, ಅದಕ್ಕೆ ಸೊಪ್ಪಲ್ಲ ಒದಗಿಸುತ್ತಿದ್ದೆ? ಯಂತ್ರದಲ್ಲಿ ಕುಟ್ಟಿದ ಅಕ್ಕಿಯೆಲ್ಲ ಆದರೂ ಸಾಕಾಗುತ್ತಿತ್ತೇನೊ” ಎಂದು ಶಂಕರನ ಸ್ನೇಹಿತ ನಿನ್ನೊಬ್ಬನು ಆತನನ್ನು ನಿಲ್ಲಿಸಿ ಕೇಳಿದನು. ಶಂಕರನಿಗೆ ರೈಲಿಗೆ ಹೋಗುವ ಅವಸರ ರಾಟನ್ ಸಾಹೇಬನನ್ನು ನೋಡಲು ಹೋಗುತ್ತಲಿದ್ದನು-ಆದರೂ ನಿಂತು ತನ್ನ ಬುದ್ದಿ ಚಮತ್ಕಾರವನ್ನು ತೋರಿಸಲು ಹೀಗೆಂದನು! “ಅದೇನು ಮಹಾ ಕೆಲಸ-ರೈಸು ಮಿಲ್ಲಿಟ್ಟವರಿಗೆ ಆನೇ ಸಾಕೋದು ಅಗಾಧವೇನು? ಗುಡ್ಡದಷ್ಟು ಹೊಟ್ಟಿನ ರಾಶಿ ಬಿದ್ದೇ ಬೀಳುತ್ತೆ ನಿತ್ಯ!-ಎಂದು ಹೇಳುವಷ್ಟರಲ್ಲೇ ಜಟಕಾ ಗಾಡಿಯವನು ಚಾವಟಿಯನ್ನು ಬೀಸಿ ಚಟಾರೆನ್ನಿಸಿದನು………. ಪಾಗಡೀಪುರದಲ್ಲಿ ಬಿಂದುಮಾಧವನು ಇನ್ನೂ ಇನ್ನೂ ಇದ್ದಾನೆ. ಅವನಿಗೆ ವ್ಯಾಪಾರ ಸಾಪಾರದಿಂದ ಸಂಪಾದನೆಯಾಗುತ್ತೆಂಬ ಹುಚ್ಚಿನ್ನೂ ಹೋಗಿಲ್ಲ- ಮಧ್ವರಾಜಿಯ ಹೆಸರಲ್ಲೂ ಸೊಂಕುಬಾಯಿಯ ಹೆಸರಲ್ಲೂ ಇಟ್ಟಿದ್ದ ಐನೂರು ರೂಪಾಯಿಗಳ ಬಂಡವಾಳವನ್ನಿಟ್ಟುಕೊಂಡು ಈಗ ತನಗೆ ಪ್ರಿಯವಾದ ಚೂರ್ಣವನೂ.. ಬೆಂಕಿಪೆಟ್ಟಿಗೆ ಮೊದಲಾದನ್ನೂ ಮಾರುತ್ತ ಮೂರು ಹೊತ್ತೂ ಅಂಗಡಿಯ ಮೇಲೆ ಕುಳಿತಿರುವನು. ಶಂಕರಕುಂಠಿಯೇನಾದನೆಂಬುದೇ ಅವನಿಗಿನ್ನೂ ತಿಳಿಯದು. ತನ್ನ ಹಿಂದಿನ ಸಾಹಸ ಕೃತ್ಯಗಳನ್ನು ನೆನೆನೆನೆಸಿಕೊಂಡು ಆನಂದಪಡುತ್ತ, ಆಶ್ಚರ್ಯಪಡುತ್ತ ಕಾಲಕಳೆಯುತ್ತಲಿರುವನು.
ಪಾಗಡೀಪುರದಲ್ಲಿ ತಟಸ್ಥೇಶ್ವರನ ಏಳು ಶಿಖರದ ದೇವಸ್ಥಾನವುಂಟಷ್ಟೇ! ಅದಕ್ಕೆ ದಕ್ಷಿಣಭಾಗದ, ರಥದ ಬೀದಿಯಿದೆಯಲ್ಲ, ಅಲ್ಲೇ ಬಿಂದುಮಾಧವನ ಅಂಗಡಿ. ರಥೋತ್ಸವಕಾಲದಲ್ಲಿ ಬಿಂದುಮಾಧವನ ಚೂರ್ಣಕ್ಕೆ ಗಿರಾಕಿಗಳು ಬಲುಜನ…….
*****









