ಪಲ್ಲವಿ
ಕೋಪವೇತಕೆ ಮಾನಿನಿ?
ಹುಸಿಮುನಿಸ ನನ್ನಲಿ ನೀಗು ನೀ!
೧
ಜೀವನವೆಂಬುದು ಜೀವನ ಕೈಲಿಲ್ಲ;
ನಶ್ವರವಾಗಿದೆ ವಿಶ್ವದಲಿ
ಇ೦ದೋ ನಾಳೆಯೋ ಎಂಬುದು ತಿಳಿದಿಲ್ಲ
ಬಾಳ್‌ಗುಳ್ಳೆ ಸಿಡಿವುದು ದಿಟವಿಲ್ಲಿ
೨
ಹೀಗಿರಲೇಕಾಗಿ ನಮ್ಮಿಬ್ಬರೆದೆಯಿದು
ಏಕತೆಯನು ಬಿಟ್ಟು ದೂರ-ದೂರ?
ಸಿಟ್ಟಿನ ಸಾಗರ ಹಟದ ಸಮೀರನ
ತೀಟದಿ ಚಿಮ್ಮುತಲಿದೆ ಬೇಸರ
೩
ಹಿಂದಿಲ್ಲ-ಮುಂದಿಲ್ಲ; ನಡುವಿನ ಜೀವನ
ಶೂನ್ಯಾಕಾರದ ತಾರೆಯಿದೆ
ಮೋಡವು ಮುಸುಕಿ ಮುಗಿವುದಕಿ೦ತ ಮುನ್ನವೆ
ಸೂರೆಗೊಳ್ಳುವ ನಾವು ಸುಖದ ಸುಧೆ
೪
ಜವ್ವನವೆಂಬುದು ಹೆಚ್ಚಿಲ್ಲ; ಬಾನಿನ
ಕಾಮನ ಬಿಲ್ಲಿನ ಹೋಲುವೆಯು
ಹರೆಯ ಬಣ್ಣಗಳೆಂದು ವೈವರ್ಣ್ಯವಪ್ಪುವೊ
ಸಾಕೀ ಸಿಟ್ಟಿನ ವಿರಸತೆಯು
೫
ಹಲ್ಲುಗಳಿದ್ದಾಗ ಹುರಿಗಡಲೆಯು ನಿಜ
ಮತ್ತೆಲ್ಲಿ ಸಂತೋಷ ಮುದಿತನದಿ?
ಇ೦ದಿನ ಹಾಲನ್ನವನು ನಾವು ಬಿಟ್ಟರೆ,
ನೈರಾಶ್ಯವಡಸದೆ ಜೀವನದಿ?
೬
ಇನ್ನೇಕೆ ಹುಬ್ಬಿನ ಬಳ್ಳಿಯೊಳಾ ಕೊ೦ಕು?
ಕಣ್ಣಿನ ಕಡೆಯಲಿ ಕಡುಗೆಂಪು?
ತುಟಿಯದುರುವುದೇಕೆ? ಮೂಗರಳುವುದೇಕೆ?
ಮೂಡಿ ಬರಲಿ ಬಿಳಿ ನಗೆಯಿ೦ಪು!
೭
ಇ೦ದಿನ ದಿನ ನಮ್ಮದಾಗಿರೆ, ನಾಳೆಯ
ಯೋಚನೆಯೇತಕೆ? ಬರಿಕನಸು
ಬಾಳಿನ ಬಳ್ಳಿಯ ಬಿಳಿ ಹೂವೆ! ಬಾ ಬಾಲೆ!
ಜೀವನವಾಗಲಿ ದಿಟ ನನಸು
*****
೧೯೪೫








