ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ತಡ-ಓಡಿ ಬರುತ್ತಾರೆ” ಎಂದು ಅವನ ಭಾವನೆ. ಏನೊ, ಅವನಿಗೆ ಹಾಗೆಯೆ ನಡೆಯುತ್ತಿತ್ತು. ಏಕೆಂದರೆ ಅವನಿಗೆ ಸಿಗುತ್ತಿದ್ದವರು ಅಂತಹವರು. ಆದರೆ ವರ್ಷಕ್ಕೆ ಹನ್ನೆರಡು ತಿಂಗಳೂ ಬಿಸಿಲಿರುತ್ತದೆಯೆ ? ಮಧ್ಯೆ ಮಧ್ಯೆ ಮಳೆ ಬೀಳುವುದುಂಟು, ಮಿಂಚಿ ಸಿಡಿಲೆರಗುವುದೂ ಉಂಟು.
ನಿರಂಜನನು ಸಿರಿಪುರದ ಮೃಗಾಲಯದ ಮುಖ್ಯಾಧಿಕಾರಿ; ಎಂದರೆ, ತನ್ನ ಮಾತನ್ನು ಚಲಾಯಿಸುವ ಶಕ್ತಿ ಅಲ್ಲಿ ತೋರಿಸುತ್ತಿದ್ದ. ಕೆಲಸಕ್ಕೆ ಸೇರಿ ಎರಡು ವರ್ಷವಾಗಿರುವಾಗ, ಮೃಗಾಲಯಕ್ಕೆ ಹೊಸ ಆನೆಯೊಂದನ್ನು ಸೋಲಿಗರಿಬ್ಬರು ಕೊಂಡುಬಂದರು. ಅವರಿಬ್ಬರೂ ಗಂಡಹೆಂಡಿರು. ಅವರು ತಂದುದು ಬಹು ದೊಡ್ಡ ಆನೆ, ಆನೆಯನ್ನು ಇರಿಸಿಕೊಳ್ಳುವುದಕ್ಕೆ ಕೊಂಚ ಮಾತು ಕತೆ ನಡೆಯಿತು.
ಅಧಿಕಾರಿಗಳು ಆನೆಯ ಮೈ ಪರೀಕ್ಷಿಸುತ್ತಿದ್ದರು. ಮುಖ್ಯಾಧಿಕಾರಿ ನಿರಂಜನ ಮಾತ್ರ ಆನೆಯೊಡಗೂಡಿ ಬಂದಿದ್ದ ಹೆಂಗುಸನ್ನು ಪರೀಕ್ಷಿಸುತ್ತಿದ್ದ. ಸೋಲಿಗರ ಹೆಣ್ಣು ಮಗಳವಳು, ಕೆಸರಿನಲ್ಲಿ ಹುಟ್ಟಿದ ಕಮಲ ದಂತಿದ್ದಳು. ಸ್ವಲ್ಪ ಶ್ಯಾಮವರ್ಣವಾದರೂ ಹಗಲಿನಂತೆ ಮನೋಹರವಾಗಿದ್ದಳು. ಅವಳ ಮೋಹನವಾದ ನಗು ಮನಸ್ಸನ್ನು ಕುಲುಕುತ್ತಿತ್ತು. ಸಹಜ ಲಾವಣ್ಯದಿಂದೆಸೆವ ಕಾಡು ಕುಸುಮದಂತೆ ಬಳೆದ ಪ್ರಕೃತಿಯ ನೈಜಪುತ್ರಿಯವಳೆಂಬುದು ಅವಳ ಮುಖದಲ್ಲಿ ಕಾಣುತ್ತಿತ್ತು. ಅವಳ ಆಕೃತಿಯಲ್ಲಿ ನವಯೌವನವು ಸಮತೂಕವಾಗಿ ಹೊಂದಿಕೊಂಡು ಹೊರಗಾಗುತ್ತಿತ್ತು. ಅವಳ ಪ್ರಕೃತಿಯಲ್ಲಿ ಚೇತನವೂ ಸತ್ವೋದ್ರೇಕವೂ ತುಂಬಿ ತುಳುಕಾಡಿ, ಆ ಸೂಕ್ಷ ಕಟಿದೇಶದಲ್ಲಿ ಸಂಕುಚಿತವಾಗಿ ನಿಂದು, ಅಲ್ಲಿಗೆ ಮೇಖಲೆಯಂತೊಪ್ಪಿತ್ತು. ಅವಳ ಅಂಗಸೌಷ್ಟವವೂ ಬಿಗಿ ಯಾದ ಮೈ ಕಟ್ಟೂ, ತುಂಬಿದ ಕೆನ್ನೆಗಳೂ ನೋಡುವವರಿಗೆ ಜುಮ್ಮೆಬ್ಬಿಸುತ್ತಿದ್ದುವು. ಹೆಚ್ಚೇನು? ಅಧಿಕಾರಿಗಳು ಆನೆಯನ್ನೊಪ್ಪಿದರು. ನಿರಂಜನನೂ ಸಮ್ಮತಿಸಿದ.
ಆದರೆ ಭೈರವನು-ಆ ಆನೆಯ ಹೆಸರು-ತನ್ನ ಒಡತಿಯ ಮಾತನಲ್ಲದೆ ಇತರರಾಡಿದುದನ್ನು ಕೇಳುತ್ತಿರಲಿಲ್ಲವಾದ ಕಾರಣ, ಅದರ ಒಡತಿಯನ್ನೂ ಅಲ್ಲೆ ಚಾಕರಿಗೆ ಇಟ್ಟು ಕೊಳ್ಳಬೇಕಾಯಿತು. ಅದರ ಮೇಲೆ ಅವಳದೊಂದು ಹಠ-ತನ್ನೆರೆಯನಿಗೂ ಕೆಲಸ ಕೊಟ್ಟು ಸಂಬಳ ಕೊಡದಿದ್ದರೆ ತಾನಿರುವುದಿಲ್ಲೆಂದು. ಅದುಸಲುವು ಅವನನ್ನೂ ನಿಯೋಗಿಸಿ ಕೊಳ್ಳಬೇಕಾಯಿತು. ಅವನಿದ್ದರೆ ಅವಳು ಅವಳಿದ್ದರೆ ಆನೆ- ಆನೆಯಿದ್ದರೆ ಜನರ ಬರವು ಜನರು ಬಂದರೆ ಇಲಾಖೆಗೆ ಹಣ ಸರಿ!… ಹಾಗೂ ಅವನಿದ್ದರೆ ಅವಳು ಅವಳಿದ್ದರೆ… ನಿರಂಜನನಿಗೆ… ಅಂತು ಗಂಡಹೆಂಡಿರಿಗೆ ಬೇರೇನು ಕೆಲಸವಿಲ್ಲ. ಅವನು ಆನೆಯ ಮೈ ತೊಳೆಯುವುದಕ್ಕೆ; ಅವಳು ಅದಕ್ಕೆ ಉಣಿಸುವುದಕ್ಕೆ.
* * *
ಆನೆ ಬಂದು ವಾರವಾಯಿತು. ಬಂದು ಹೋದವರ ಕಣ್ಣು ಆನೆಯ ಮೇಲೆ, ನಿರಂಜನನಿಗೆ ಮಾತ್ರ ಅದರ ಒಡತಿಯ ಮೇಲೆ ಕಣ್ಣು. ಒಂದು ದಿನ ನಿರಂಜನನು ಅವಳನ್ನು
“ನಿನ್ನ ಹೆಸರೇನು?” ಎಂದು ಕೇಳಿದ.
“ಸ್ವಾಲಿಗರ ಚೆನ್ನಿ ಮಾಸಾಮಿ” ಎಂದಳು
“ಸೋಲಿಗರ ಚೆನ್ನಿ!… ಉಹ್ಞು!… ಬೇಡ; ಇನ್ನು ಮೇಲೆ ನಿನ್ನ ಹೆಸರು ಬರಿಯ … ‘ಚೆನ್ನಿ’ … ಗೊತ್ತಾಯಿತೆ ? …”
ಚನ್ನಿ ಬೆಚ್ಚಿದಳು; ಕ್ಷಣಕಾಲ ಮಾತ್ರ. ಪುನಃ ನಗುನಗುತ್ತ ಎಂದಿನ ಮನವ ಕುಲಕುವ ನಗು-
“ಮಾಸಾಮಿ!…” ಎಂದಳು
“ಆ! … ನಿನ್ನ ಹೆಸರೇನು?”
ಚೆನ್ನಿ ನಗುತ್ತ “ಚೆನ್ನಿ ಮಾಸಾಮಿ!” ಎಂದಳು. ನಿರಂಜನನೂ ನಗುತ್ತ-ಹೆಂಗಸಿನ ನಗು-ತಲೆದೂಗಿ “ಚೆನ್ನಿ!… ಚೆನ್ನಿ!… ಚೆ…ನ್ನಿ! … ಚೆನ್ನಾಗಿದೆ!” ಎಂದ.
* * *
ಆನೆ ಬಂದು ಪಕ್ಷವಾಯಿತು. ಎಲ್ಲರಿಗೂ ಆನೆಯ ಮೇಲೆ ಕಣ್ಣು. ಬಂದವರು ಆನೆಯ ಹತ್ತಿರ ಸಲಾಂಮಾಡಿಸಿ, ಚೆನ್ನಿಗೆ ಕಾಸುಕೊಡುವರು. ಅವಳ ಮುಖ ಅರಳುವುದು, ನಿರಂಜನನು ಅವಳಿಗೆ ರೂಪಾಯಿ ಕೊಡುವನು. ಅವಳು ತಾನೇ ಕೈ ಮುಗಿಯುವಳು, ಕೊಡುವಾಗ ಅವನ ಕೈ ಅವಳ ಕೈಸೋಕುವುದು. ಅವಳ ಮುಖಭಾವವು ಮುಹೂರ್ತ ತಗ್ಗಿ, ಕುಂದುಕಾಣುವ ಮುನ್ನ, ಅರಳಿ ಹಿಗ್ಗುವುದು. ನಿರಂಜನನೂ ಹಿಗ್ಗುವನು.
ಇದು ಹೀಗಿರಲು ಚೆನ್ನಿಯ ಗಂಡ ಕಣ್ಣು ಮುಚ್ಚಿ ಕುಳಿತಿರಲಿಲ್ಲ. ಇದೆಲ್ಲ ಅವನ ಕಂಗಳಿಗೆ ಕಾಣುತ್ತಿದ್ದುವು. ಮಲೆಯಲ್ಲಿ ಗೊಂಡಾರಣ್ಯದಲ್ಲಿ, ಆನೆಗಳ ಜತೆಗೆ ಆನೆಯಾಗಿ ಬಳೆದವನವನು. ಎಲ್ಲವನ್ನೂ ಸಾವಧಾನವಾಗಿ ನೋಡುತ್ತಿದ್ದವನು, ಒಂದು ದಿನ
“ಏನೇ! ಆ ಹುಡುಗ ವಿಪರೀತ ಹೆಚ್ಚಿರುವ ಹಾಗೆ ಕಾಣುತ್ತೆ” ಎಂದು ಚೆನ್ನಿ ಯನ್ನು ಕೇಳಿದ.
“ಹೌದು. ಅವನೇನೊ ಉತ್ತಮ ಜಾತಿ…”
“ಉ… ತ್ತ… ಜಾತಿ! ಕಿಳು ನಡತೆ!…”
“ಏನು ಮಾಡಬೇಕು ಅಂತೀರಿ, ಹಾಗಾದರೆ?”
“ಬೇರೆ ಎಲ್ಲಿಯಾದರೂ ಹೋಗೋಣವೆ?”
“ಏನು? ಅವನಿಗೆ ಅಂಜಿಕೊಂಡು?”
“ಮತ್ತೆ?”
“ನನ್ನಲ್ಲಿ ನಂಬಿಕೆಯುಂಟೆ ನಿಮಗೆ?”
ಗಂಡಹೆಂಡಿರು ಪರಸ್ಪರ ಮುಖ ನೋಡಿದರು. ತುಟಿ ನಾಲ್ಕು ಒಂದಾದವು.
* * *
ತಿಂಗಳಾಯಿತು… ಆದಿತ್ಯವಾರ … ಹೊರಗಿನವರಾರೂ ಮೃಗಾಲಯವನ್ನು ನೋಡುವುದಕ್ಕೆ ಬರುವಂತಿಲ್ಲ. ಅಂದು ನಿರಂಜನನು ಸೀರೆಯೊಂದನ್ನು ಕೊಂಡುಬಂದು, ಚೆನ್ನಿಗೆ ಉಟ್ಟು ಕೊಳ್ಳೆಂದು ಕೊಟ್ಟನು. ಅವಳು ಅವನ ಮುಖ ನೋಡಿದಳು. ನಿರಂಜನನು ಇತರರ ಭಾವಗಳನ್ನು ಗ್ರಹಿಸದಿದ್ದರೂ, ತನ್ನ ಭಾವಗಳನ್ನು ಮರೆಮಾಚುವುದರಲ್ಲಿ ಅದ್ವಿತೀಯ. ಚೆನ್ನಿಯು “ಆಗಲಿ! ಉಟ್ಟು ಕೊಂಡರೇನಂತೆ?” ಎಂಬಂತೆ ಕತ್ತು ಕುಣಿಸಿ, ಸೀರೆಯನ್ನು ತೆಗೆದುಕೊಂಡು ಪಕ್ಕದ ಗುಡಿಸಿಲಿಗೆ ಹೋದಳು. ಅವಳ ಗುಡಿಸಿಲು ಆನೆಯನ್ನು ಕಟ್ಟಿದ ಬಳಿಗೆ ತುಸು ದೂರದಲ್ಲಿಯೆ.
ಮರೆಯಾಗುವವರಿವಿಗೂ ಚೆನ್ನಿಯ ಹಿಂದಿದ್ದ ನಿರಂಜನನ ದೃಷ್ಟಿಯು ಸುತ್ತ ತಿರುಗುತ್ತಿತ್ತು. ತೋಟದ ಮಧ್ಯದಲ್ಲಿತ್ತು ಒಂದು ಕೃತಕ ಕಾಸಾರ. ಅದರ ನಡುವೆ ಒಂದು ಬಿಳಿ ಶಿಲೆಯ ಪ್ರಸ್ರವಣ. ಅದರಲ್ಲಿ ಚಿಮ್ಮಿದ ನೀರು ಸೂರ್‍ಯರಷ್ಮಿಗಳೊಡನಾಡಿ, ನಲಿದಾಡಿ ಹೊರ ಪಡಿಸುತ್ತಿದ್ದ ಗುಳು ಗುಳು ಧ್ವನಿಯು, ಆ ಧಾರಾಯಂತ್ರದ ಅಕ್ಷಯ ಜೀವಸತ್ವವು ನುಡಿಯುತ್ತಿದ್ದ ನಿರಂತರ ಗೀತದಂತಿತ್ತು. ಸುತ್ತಿನ ಬಳ್ಳಿಗಳು ಮನಬಂದಂತೆ ಸುಳಿದಾಡುತ್ತಿದ್ದುವು. ಅವುಗಳಲ್ಲೊಂದು ನೀರಿನ ಮೇಲೆ ಹಾವಿನಂತೆ ಹರಿದಾಡಿ, ಆ ಚಿಲುಮೆಯನ್ನು ಆಚ್ಛಾದಿಸಿ, ಅಲ್ಲಿಂದ ಲಾಲಿಲಾಲಿಯಾಗಿ ತೂಗಾಡುತ್ತಿತ್ತು. ಅದರಲ್ಲಿಯ ಧೂಮ್ರ ಕುಸುಮ ಸಂಚಯದಲ್ಲಿ ಪ್ರತಿಯೊಂದೂ ಮಣಿಯಂತೆ ಹಿಗ್ಗಿ ಹೊಳೆಯುತಿತ್ತು. ಆ ಧೂಮ್ರವರ್ಣದ ಪುಷ್ಪಗುಚ್ಛಗಳು ಗಾಳಿಯಲ್ಲಿ ನಲಿದು, ಬೆಳಕಿನಲ್ಲಿ ಹೊಳೆದು, ತಿಳಿಗೊಳದಂತರಾಳದಲ್ಲಿ ಪ್ರತಿಬಿಂಬಿಸಲು, ಪುಷ್ಪಗಳ ಕಾಂತಿಯೂ, ಅದರ ಪ್ರತಿಬಿಂಬದ ರಾಗಾಧಿಕ್ಯವೂ ಸಂಯೋಗಿಸಿ ಮನ ಮೋಹಕವಾಗಿತ್ತು. ಅಲ್ಲಿಯ ಪ್ರತಿ ಎಲೆಯೂ ಪ್ರತಿ ಸುಮವೂ ಒಂದು ಅಪೂರ್‍ವ ಶೋಭೆಯನ್ನೊಂದಿದ್ದುವು. ಆ ಎಲೆ ಹೂಗಳ ಮೇಲೆ ನಿಂತಿದ್ದ ಜಲಕಣಗಳು ಸೂರ್ಯಕಿರಣಗಳಿಂದ ಮುತ್ತಿಕ್ಕಿಸಿಕೊಂಡು, ನಾಚಿ ನಗುತ್ತಿದ್ದುವು. ಹೀಗಿರಲು ಗುಡಿಸಿಲಿನಿಂದ, ಹೊಸ ಸೀರೆಯುಟ್ಟು ಕಮನೀಯ ಸೌರಭಗಳಿಂದ ಜೀವಿಸುವ ಚೇತನದಂತೆ, ಸುತ್ತುಮುತ್ತಿರುವ ಲತಾವಿತಾನಗಳ ಸೋದರಿಯಂತೆ, ಬಾಗು ಬಳುಕುತ್ತ ಚೆನ್ನಿಯು ಬರುತ್ತಿದ್ದಳು. ಅವಳ ಆಗಿನ ಸೌಂದರ್ಯವು ಹಿಂದಿನದಕ್ಕಿಂತ ಮಿಗಿಲಾಗಿತ್ತು. ಪ್ರದೀಪ್ತವಾಗಿ ಪರಿಸ್ಫುಟವಾದ ಲಾವಣ್ಯದಿಂದ್ ಹಗಲಿನಲ್ಲಿ ಪ್ರಕಾಶಿಸುತ್ತ ಬಂದಳು ಚೆನ್ನಿ. ಅವಳ ಮುಖದ ಸರಳತೆಯನ್ನು, ಮುಗ್ಧತೆಯನ್ನು, ಮಾಧುರ್ಯವನ್ನು ಹೊಸಬಗೆಯಾಗಿ ಕಂಡು ನಿರಂಜನನು ಚಕಿತನಾದ. ಹಾಗೆಯೇ ಅರಲಿಸಿದ ಕಣ್ಣುಗಳಿಂದವಳನ್ನು ನೋಡುತ್ತ,
“ನಿನ್ನ ಹೆಸರೇನು?” ಎಂದು ಪುನಃ ಕೇಳಿದ.
“ಸ್ವಾಲಿಗ… ಅಲ್ಲ… ಚೆನ್ನಿ, ಮಾಸಾಮಿ!”
ನಿರಂಜನನು ನಕ್ಕನು. “ಚೆನ್ನಿ! ಇನ್ನು ಮೇಲೆ ‘ಮಾಸಾಮಿ’ ಎನ್ನ ಬೇಡ … ತಿಳಿಯಿತೆ.”
“ಅದು ಯಾಕೆ, ಮಾಸಾಮಿ?”
“ಅದಿರಲಿ … ನಿನ್ನ ಹೆಸರೇನು, ಹೇಳು>”
“ಚೆನ್ನಿ!”
“ಚೆ… ನ್ನಿ!… ಚೆ… ನ್ನಿ!… ಎಲ್ಲಿ ಹೀಗೆ ತಿರುಗು… ಹೀಗೆ … ಹೀಗೆ … ” ಎಂದವಳನ್ನು ಹಾಗೆ ಹೀಗೆ ತಿರು ಗಿಸುತ್ತ, ನಿರಂಜನನು ಅವಳ ಹಿಂಭಾವ ಮುಂಭಾವಗಳನ್ನು ನೋಡಿ ನೋಡಿ ತಣಿಯದೆ ನೋಡುತ್ತಿದ್ದ.
ಅಷ್ಟರಲ್ಲಿ ಚೆನ್ನಿಯ ಗಂಡ ಅಲ್ಲಿಗೆ ಬಂದ. ನಿರಂಜನನು ಅವನನ್ನು ಕಾಲಿನಿಂದ ತಲೆಯವರೆಗೂ ನೋಡಿದ. ಅವನು ನಿರಂಜನನ ಕಡೆ ನೋಡದೆ ತಲೆ ತಗ್ಗಿಸಿಕೊಂಡ. ನಿರಂಜನನು ಚೆನ್ನಿಯ ಕಡೆ ತೊರಿಸಿ “ಈ ಹೆಂಗಸು ಯಾರು?” ಎಂದು ಕೇಳಿದ.
“ನನ್ನ ಹೆಂಡತಿ, ಮಾಸಾಮಿ..!”
“ಹ್ಞು! ನಿನ್ನ ಹೆಂಡತಿಯೊ!” ಎನ್ನುತ್ತ ನಿರಂಜನನು ಅವನ ಕಡೆಗೆರಡು ರೂಪಾಯಿ ಎಸೆದು, ಅವನ ಮುಖವನ್ನೇ ನೋಡುತ್ತ ಅಪಹಾಸ ಸೂಚಕವಾಗಿ ಕೆಳದುಟಿಯನ್ನು ತಿರುವಿ, ದರ್ಪಹೆಮ್ಮೆಗಳನ್ನು ಮುಖದಲ್ಲಿ ತಾಂಡವವಾಡಿಸುತ್ತ, ಠೀಕಿನ ಮೇಲೆ ನಡೆದು ಬಂದು, ಚೆನ್ನಿಯ ಬಳಿ ಸಾರಿ, ಕಣ್ಣಿನೊಳಕ್ಕವಳನ್ನು ಎಳೆದುಕೊಳ್ಳುವಂತೆ ನೋಡುತ್ತ ಅವಳ ಹೆಗಲಮೇಲೆ ಕೈ ಹಾಕಿ,
“ಈಗ ಹೇಳು! ಇವಳು ಯಾರು?” ಎಂದ.
ಚೆನ್ನಿಯು ನಿರಂಜನನ ಕೈ ತೆಗೆಯಲಿಲ್ಲ. ಕ್ಷಣಕಾಲ ಅವಳ ಮುಖದ ಭಂಗಿ, ಬಣ್ಣ ಬೇರೆಯಾಯಿತು. ಆದರೂ ಪುನಃ ಹುಸಿನಗೆ ಬೀರುತ್ತಿದಳು. ಗಂಡನ ಕಡೆ ನೋಡಿದಳು. ಅವನಿಗೆ ನಿರಂಜನನ ಚರ್ಯೆ ಕಂಡು ಕಣ್ಣರಳಿತು, ತುಟಿ ಅದುರಿತು. ಒಂದಡಿ ಮುಂದಿಟ್ಟ. ಅಷ್ಟರಲ್ಲಿ ಹೆಂಡತಿಯ ಮುಖಭಾವ ನೋಡಿ ಸುಮ್ಮನಾಗಿಬಿಟ್ಟ. ಪ್ರೀತಿಯೊಂದು ಪ್ರವಹಿಸುವಾಗ, ಪತಿಪತ್ನಿಯರ ಅನ್ಯೂನ್ಯ ಭಾವಗಳು ಅವರವರಿಗೆ ಗೋಚರಿಸದಿರುವುವೆ?
ಆದರೆ ಕಾಮುಕತೆಯಿಂದ ಕಣ್ಣು ಕಳೆದುಕೊಂಡಿದ್ದ ನಿರಂಜನನಿಗೆ ಅದು ಯಾವುದೂ ಗೊತ್ತಾಗಲಿಲ್ಲ. “ಯಾರಿವಳು?” ಎಂದು ಪುನಃ ಕೇಳಿದ.
ಚೆನ್ನಿಯ ಗಂಡ ಕೈಮುಗಿದು “ನನ್ನ ತಾಯಿ, ಮಾಸಾಮಿ” ಎಂದ.
“ಹಾಗನ್ನು! ಬೇಕೂಫ್! ಅವಳು ನಿನ್ನ ತಾ … ಯಿ, ನಾನು ಯಾರು?”
“ಮಾಸಾಮಿಗಳು … ನನ್ನ ಧಣಿ … ನನ್ನ ತಂದೆಗಳು …?
ಗಂಡಹೆಂಡಿರು ಒಬ್ಬರ ಮುಖವನ್ನೊಬ್ಬರು ನೋಡಿದರು. ಇಬ್ಬರ ಮುಖದಲ್ಲಿಯೂ ಒಂದೇ ಬಗೆಯ ವಿಕಾರಗಳು ಕಾಣುತ್ತಿದ್ದುವು. ಮುಖವು ಮನಸ್ಸನ್ನು ಸೂಚಿಸುವುದಿಲ್ಲವೆ?
ನಿರಂಜನನು ಅವಳ ಗಂಡನ ಕಡೆಗೆ ಇನ್ನೆರಡು ರೂಪಾಯಿ ಎಸೆದು ಚೆನ್ನಿಯ ಕೈಯಲ್ಲಿ ಮುರುಮುರುಗುಟ್ಟುವ ಕಾಗದವನ್ನಿಟ್ಟು “ಚೆನ್ನಿ! … ಭಾನುವಾರ … ಯಾರೂ ಬರುವ ಹಾಗಿಲ್ಲ … ರಾತ್ರೆ ತುಂಬಿದ ಬೆಳುದಿಂಗಳು … ಶೃಂಗಾರವಾದ ತೋಟ … ನಾವಿಬ್ಬರು ಮಾತ್ರ …” ಎಂದು ಅವಳ ಕಡೆ ನೋಡಿದ.
ಚೆನ್ನಿ ಮೆಲ್ಲನೆ ನಕ್ಕು “ಆಗಲಿ ಮಾಸಾಮಿ. ನಮಗೇನು ಸಾಮಿ? ಮಾನವಾ? … ಮರ್‍ಯಾದೆಯಾ? … ಹಣ ಕೊಟ್ಟರೆ ಸಾಕು …” ಎಂದಳು.
“ಹಣಕ್ಕೇನು? ಇನ್ನೂ ಎಷ್ಟಾದರೂ ಕೊಡುತ್ತೇನೆ … ಹಾಗಾದರೆ … ರಾತ್ರೆ … ಎಂಟು … ಎಂಟೂವರೆಗೆ … ”
“ಆಗಲಿ, ಬನ್ನಿ ಮಾಸಾಮಿ”
“ಹ್ಞಾ! … ಇದೇ ಸೀರೆಯಿರಲಿ, ಬೇರೆ ಬೇಡ.”
“ಆಗಲಿ, ಸಾಮಿ.”
ಅವಳ ಹೆಗಲಮೇಲಿಟ್ಟಿದ್ದ ಕೈ ತೆಗೆದು, ನಿರಂಜನನು ಚೆನ್ನಿಯ ಗಂಡನ ಕಡೆ ತಿರುಗಿ,
“ಏ! ಯಾರಿಗಾದರೂ ಒದರಿಯೇ! ಜೋಕೆ! ಬಾಯಿಬಿಟ್ಟರೆ ನಿನ್ನ ಬಾಯಿಗೆ ಮಣ್ಣು ಬಿದ್ದಿತು!” ಎಂದು ಹೆದರಿಸಿದನು.
“ಏನು ಮಾಸಾಮಿ, ಹೇಳುವ ಮಾತು! ನಿಮ್ಮ ಉಪ್ಪು ತಿಂದು, ನಿಮಗೇ ಎರಡು ಬಗೆಯುವುದಾ ಮಾಸಾಮಿ? ಧರ್ಮವಾ ಮಾಸಾಮಿ ಅದು? ನಮಗೇನೈತೆ ಸಾಮಿ? ನನ್ಹೆಂಡತಿ … ಅಲ್ಲ, ಅವಳು ಹೇಳಿದ ಹಾಗೆಯೇ ನಮಗೇನೈತೆ ? ಮಾನವಾ ? ಮರ್ಯಾದೆಯಾ ? ಏನೈತೆ ? ದುಡ್ಡು ಒಂದು ಕೊಟ್ಟು ಬಿಟ್ಟರೆ ನಾವು ಯಾವುದಕ್ಕೂ ಸಿದ್ಧ. ನಿಮ್ಮ ಸುಖ … ನಿಮ್ಮ ಸಂತೋಷಕ್ಕೆ ನಾವು ಕಲ್ಲು ಹಾಕುವುದಾ ಬುದ್ದೀ! …”
ನಿರಂಜನನು ಹೊರಟುಹೋದನು. ಅವರಿಬ್ಬರು ಅವನು ಮರೆ ಯಾಗುವವರೆವಿಗೂ ಅವನನ್ನೆ ನೋಡುತ್ತಿದ್ದರು. ಚೆನ್ನಿಯ ಗಂಡನು ನಿರಂಜನನೆಸೆದ ರೂಪಾಯಿಗಳನ್ನು ಎತ್ತಿ ರೊಯ್ಯನೆ ಬಿಸಾಡಲು, ಅವು ಗಾಳಿಯನ್ನು ಸೀಳಿಕೊಂಡು ಹೋದುವು, ಮಸೆದ ಕತ್ತಿಯು ಅರಿಶಿರವನ್ನು ಕೊಚ್ಚುವಂತೆ. ಚೆನ್ನಿಯು ತನ್ನ ಕೈಯಲ್ಲಿದ್ದ ಮುರುಮುರುಗುಟ್ಟುವ ಕಾಗದವನ್ನು ಹರಿದು ಚೆಲ್ಲಿ, ಅದರ ಮೇಲೆ ಉಗಿದು, ನೆಟಿಕೆ ಮುರಿದಳು. ಮರಿಯನ್ನು ಕಳೆದುಕೊಂಡು ತರುಣದಲ್ಲಿ ಕೆಣಕಲ್ಪಟ್ಟ ಕೇಸರಿಯ ಕಂಗಳಂತಿತ್ತು ಅವಳ ಕಣ್ಣು. ಇಬ್ಬರೂ ಬಹಳ ಹೊತ್ತು ಏನೇನೊ ಮಾತನಾಡಿದರು. ಕೊನೆಗೆ ಇಬ್ಬರ ಮುಖವೂ ಪ್ರಫುಲ್ಲವಾಯಿತು.
* * *
ರಾತ್ರಿ … ಎಂಟು ಎಂಟೂವರೆ ಗಂಟೆ … ಮೃಗಾಲಯದಲ್ಲಿ ನಿಶ್ಯಬ್ದತೆ ನೆಲಸಿತ್ತು … ಹಗಲಿನಂತೆಯೆ ಈಗಲೂ ಚಿಲುಮೆಯ ನೀರಿನ ಗುಳುಗುಳು ಧ್ಯಾನ … ಅಲ್ಲಿನ ಗಿಡಬಳ್ಳಿಗಳು ಹಗಲು ಬಿಸಿಲು ಕಾಯಿಸಿಕೊಂಡಂತೆ, ಆಗ ಜೊನ್ನದಲ್ಲಿ ಅಕ್ಕ ಪಕ್ಕದ ಸೋದರ ಸೋದರಿಯರೊಡನೆ ತಲೆದೂಗಿ ನಲಿದು ಮಾತನಾಡುತ್ತ, ಗಾಳಿಹಾಡುವ ಜೋಗುಳವಾಲಿಸಿ ತೂಕಡಿಸುತ್ತಿದ್ದುವು. ನೀಲದಾಕಾಶ. ನಡುವೆ ಸುಂದರ ಚಂದ್ರ, ಚುಕ್ಕಿಗಳು ಸುತ್ತ, ಗಂಭೀರವಾಗಿ, ತನ್ನದೇ ತನ್ನದಾದ ಒಂದು ಗತ್ತಿನಿಂದ ನೀಲದೊಂಡೆಯಿಂದ ಇನ್ನೊಂದೆಡೆಗೆ ತೇಲಿ, ಪ್ರತಿಯೊಂದು ನಕ್ಷತ್ರವನ್ನೂ, ಚಂದ್ರನನ್ನೂ ಅಡಿಗಡಿಗೆ ವಿಚಾರಿಸಿಕೊಳ್ಳುತ್ತಿರುವ ಬಿಳಿಮುಗಿಲ ಮೊತ್ತ…
ಚೆನ್ನಿ ಅದೇ ಸೀರೆ ಉಟ್ಟಿದ್ದಳು. ಕಾಲಕ್ಕೆ ಸರಿಯಾಗಿ ನಿರಂಜನನೂ ಬಂದ. ಬರುವುದು ತಡ, ಚೆನ್ನಿಯು ಅವನನ್ನು ಎದುರು ಗೊಂಡಳು. ಚೆನ್ನಿಯ ಗಂಡನು ಇಂಗಿತಜ್ಞನಂತ ರಂಗದಿಂದ ಜಾರಿದನು.
ನಿರಂಜನನು “ಅವಳೊಡನೆ ಚೆಲ್ಲಾಟವಾಡುತ್ತಿದ್ದ. ಇದ್ದಂತೆಯೆ, ಚೆನ್ನಿಯು ಸರಕ್ಕನೆ ಅವನ ಕೈಯಿಂದ ತಪ್ಪಿಸಿಕೊಂಡು, ನಗುತ್ತ ಓಡ ತೊಡಗಿದಳು. ಚೆಲುವಾದ ಬೆಳುದಿಂಗಳು … ತೋಟದ ಹೂಗಿಡಗಳ ಕಡೆಯಿಂದ ಬೀಸುವ ಕಂಪಿನ ತಂಪಾದ ಗಾಳಿ … ಪುಷವಾದ ಅಂಗ ಗಳಿಂದ ಕೂಡಿದ ಹುಡುಗಿ … ಓಡುತ್ತಿದ್ದರೆ ಮೇಲುಸೆರಗು ಜಾರಿದೆ … ನಿರಿಯು ಮೊಣಕಾಲಿನವರೆಗೂ ಎದ್ದು ಹೋಗಿದೆ … ನಿರಂಜನನು ಅವಳನ್ನು ಹಿಡಿಯಬೇಕೆಂದು ಅವಳ ಹಿಂದೆಯೇ ಓಡಿದನು. ಚೆನ್ನಿಯು ನಿಲ್ಲುತ್ತ, ನಗುತ್ತ, ಅಲ್ಲಿ ಇಲ್ಲಿ ಓಡಿ, ಅವನ ಕೈಗೆ ಸಿಕ್ಕುವಂತೆ ನಟಿಸಿ, ಸಿಕ್ಕಿಯೂ ಸಿಕ್ಕದಂತೆ ತಪ್ಪಿಸಿಕೊಳ್ಳುತ್ತಿದ್ದಳು. ಹಾಗೆಯೇ ಓಡುತ್ತ ಓಡುತ್ತ, ಕೊನೆಗೆ ಆನೆಯನ್ನು ಕಟ್ಟಿ ಹಾಕಿದ್ದ ಬಳಿಗೆ ಬಂದು ಅದರ ಕಾಲ ನಡುವೆ ತೂರಿಹೋದಳು. ದೀಪವೊಂದನ್ನೇ ಕುರಿತೆರಗುವ ದೀಪದ ಹುಳುವಿನಂತೆ, ಚೆನ್ನಿಯನ್ನೆ ನೋಡಿ ಬರುವ ರಭಸದಲ್ಲಿ ಸಂಭ್ರಮದಲ್ಲಿ, ನಿರಂಜನನು ತಾನೂ ಅಲ್ಲಿಗೆ ಬಂದು ಆನೆಯ ಕಾಲ ಬಳಿ ಮುಗ್ಗರಿಸಿ ಬಿದ್ದನು.
ಚೆನ್ನಿಯು “ಬೈರವ! ಬೈರವ!” ಎಂದು ಆನೆಯ ಹೆಸರು ಹಿಡಿದು ಏನೇನೋ ಮಾತುಗಳನ್ನು ಅವಸರದಿಂದ ಹೇಳಿದಳು. ಅವಳ ಗಂಡನೂ ಅಲ್ಲಿಗೆ ಬಂದು ಅವಳನ್ನು ಕೂಡಿದ.
ನಿರಂಜನನಿಗೆ ಆನೆಯ ಸುಂಡಿಲು ತಾಕಿತು …. ಹಾ! … ಮನುಷ್ಯನ ಆರ್ತನಾದ! … ನಿರಂಜನನದೇ! … ಏನೋ ನೆಲಕ್ಕೆ ಅಪ್ಪಳಿಸಿದ ಸದ್ದು! ಆನೆಯ ಘೀಂಕಾರ … ಒಂದು ಸಾರಿ, ಎರಡು ಸಾರಿ … ನೆಲದಲ್ಲಿ ಏನನ್ನೋ ಹೊಸಗಿದಂತಾಯ್ತು! … ನಿಶ್ಯಬ್ದ … ವಿಕಾರವಾಗಿ ಅಟ್ಟಹಾಸದಿಂದ ನಕ್ಕಂತೆ ಧ್ವನಿಯಾಯ್ತು! …
* * *
ಮಾರನೆಯ ದಿನ “ಸಿರಿಪುರದ ವಾರ್‍ತಾತರಂಗ” ದಲ್ಲಿ ಈ ರೀತಿಯಿತ್ತು :
“ಶ್ರೀಯುತ ನಿರಂಜನರು ನಮ್ಮ ಸಿರಿಪುರದ ಮೃಗಾಲಯದ ಮುಖ್ಯಾಧಿಕಾರಿಗಳು. ಅವರು ಗುಣಯುತರು. ಉದಾರಿಗಳು. ಇಂತಹ ದೊಡ್ಡ ಗೃಹಸ್ಥರು, ನಿನ್ನೆ ರಾತ್ರೆ ಮೇಲೆ ಹೇಳಿದ ಮೃಗಾಲಯದ ಭೈರವನೆಂಬ ಆನೆಯ ಕಾಲಕೆಳಗೆ ಸಿಕ್ಕಿ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ನಿನ್ನೆ ರಾತ್ರೆ ಆ ಆನೆಯನ್ನು ನೋಡಿಕೊಳ್ಳುವ ಸೋಲಿಗರು ಪಕ್ಕದ ಗುಡಿಸಿಲಿನಲ್ಲಿ ನಿದ್ರೆ ಮಾಡುತ್ತಿದ್ದರೆಂದೂ, ಕೆಲ ದಿನಗಳಿಂದ ಆನೆಗೆ ಏನೊ ದೇಹಾಲಸ್ಯವಿದ್ದುದರಿಂದ ಶ್ರೀಯುತರು ಅದಕ್ಕೆ ಚಿಕಿತ್ಸೆ ಮಾಡಲೆಳಿಸಿ ಅಲ್ಲಿಗೆ ಹೋಗಿ, ನಿದ್ರಿಸುವ ಕಾವಲಿನವರನ್ನು ಎಚ್ಚರಗೊಳಿಸಲು ಮನಸ್ಸಿಡದೆ, ಅನ್ಯಾಯವಾಗಿ ಅಕಾಲಮೃತ್ಯುವಿಗೆ ತುತ್ತಾದರೆಂದೂ ತಿಳಿದು ಬಂದಿದೆ. ಇದರಿಂದಲೇ ದುಷ್ಟರಿಗೆ ಉಪಕಾರ ಮಾಡುವುದು ಎಷ್ಟು ಅಪಾಯಕರವೆಂಬುದು ವ್ಯಕ್ತವಾಗುತ್ತದೆ. ಇನ್ನು ಮೇಲೆ ಇಂತಹ ಅಸಂದರ್ಭಗಳು ಒದಗದಂತೆ ಮೃಗಾಲಯದವರು ಜಾಗರೂಕರಾಗಿರುವರೆಂದು ನಂಬುತ್ತೇವೆ. ದೇವರು ನಿರಂಜನರ ಆತ್ಮಕ್ಕೆ ಶಾಂತಿಯನ್ನಿತ್ತು, ಅವರ ಕುಟುಂಬದ ದುಃಖಶಮನ ಮಾಡಲೆಂದು ಹಾರೈಸುತೇವೆ.”
ಇದನ್ನು ಓದಿದವರೊಬ್ಬರು, ನಿರಂಜನರನ್ನು ಕರತಲಾಮಲಕವಾಗಿ ಬಲ್ಲವರು, ಮಾನಿಸರ ನಡವಳಿಕೆಯಲ್ಲಿ ನಂಬಿಕೆ ತಪ್ಪಿದವರು, ಆ ದಿನ ಸಂಜೆ, “ಆದರಿಂತಹುದೆಷ್ಟೊ ಆಗಲೆಬೇಕಲ್ಲ” ಅಂತ ಲಾವಣಿ ಮಟ್ಟು ಎಳೀತಾ ಇದ್ದರು.
*****









