ಒಂದು ಪುಟ್ಟ ಚಿತ್ರ

ಒಂದು ಪುಟ್ಟ ಚಿತ್ರ

-೧-
೮-೪-೧೯೨೪

ರಘು,

ಇಲ್ಲಿಂದ ಹೊರಟು ಹೋದ ಮೇಲೆ ಕಾಗದಗಳನ್ನೇ ಬರೆಯುತ್ತಿಲ್ಲವೇಕೆ? ನೀನು ಹೋದಂದಿನಿಂದ ನಿನ್ನ ಕಾಗದಗಳಾದರು ನೋಡುತ್ತಿರುವುದೇ ನನಗೆ ಕೆಲಸವಾಗಿದೆ. ನೀನು ಇಲ್ಲಿದ್ದಾಗ ನನ್ನೊಡನೆ ಹೇಳಿದ ಮಾತುಗಳನ್ನೆಲ್ಲಾ ಮರೆತಂತಿದೆ. ರಘು, ಯಾವ ದಿನ ನಿನೊಡನೆ ಅಡ್ಡ ಹಾದಿಯಲ್ಲಿ ಕಾಲಿಟ್ಟ ಆ ದಿನದಿಂದ ನನ್ನ ಮನಸ್ಸಿಗೆ ಶಾಂತಿಯಿಲ್ಲ. ಭಗವಂತನಿದಿರಿನಲ್ಲಿ ನಾನು ನಿನ್ನವಳೆ ಆದರೂ ಜನರಿಗೆ ತಿಳಿದರೆ ಅವರು ನನ್ನನ್ನು ತಿರಸ್ಕರಿಸದಿರಲಾರರು. ಇವರು ಕಣ್ಣಿನಲ್ಲೇ ನನ್ನನ್ನು ನಿನ್ನವಳನ್ನಾಗಿ ಮಾಡಿಕೊಳ್ಳುವೆಯೆಂದು ಹಿಂದೆ ನೀನು ಹೇಳಿದ್ದೆ. ನೀನು ಹೋಗಿ ಎರಡು ತಿಂಗಳುಗಳಾದರೂ ನಿನ್ನ ಸಮಾಚಾರವೇ ಇಲ್ಲ. ಅದೇಕೆ? ನಾನಿನ್ನು ನಿನಗೆ ಬೇಡವೇ? ನಾನು ಏನೂ ತಿಳಿಯದವಳಾಗಿದ್ದೇನೆ, ನೀನೇ ನನ್ನನ್ನು ಕೊಚ್ಚೆಗೆ ನೂಕಿದೆ; ನೀನು ಅಲ್ಲಿಂದ ನನ್ನನ್ನು ಎತ್ತದಿದ್ದರೆ ಇನ್ನಾರು ತಾನೆ ಎತ್ತುವರು? ದಮ್ಮಯ್ಯ, ನನ್ನ ಕೈ ಬಿಡಬೇಡ, ರಘು.

ನಿನ್ನೆ ಕೆಲವು ವರ್ಷಗಳ ಹಿಂದೆ ಒಬ್ಬನೊಡನೆ ಹೊರಟು ಹೋಗಿದ್ದ ನಮ್ಮ ಮನೆಯ ಕೆಲಸದವಳ ಮಗಳು ಬಂದಳು. ಇಲ್ಲಿಂದ ಹೋಗುವಾಗ ಅವಳು ಹದಿನೇಳು ವರುಷದ ಹುಡುಗಿಯಾಗಿದ್ದಳಂತೆ ನೋಡುವುದಕ್ಕೂ ಲಕ್ಷಣವಾಗಿದ್ದಿರಬಹುದೆಂದು ಈಗವಳನ್ನು ನೋಡುವಾಗ ತೋರುತ್ತೆ. ಅವಳನ್ನು ಕರೆದುಕೊಂಡು ಹೋದಾತನೀಗ ಅವಳನ್ನು ಬಿಟ್ಟು ಹೊರಟು ಹೋದನಂತೆ. ಅತ್ತಿಗೆ ಅವಳನ್ನು ನೋಡಿ ಏನೆಂದಳು ಗೊತ್ತೆ? ‘ಸರಿಯಾದ ಶಿಕ್ಷೆ’ ಎಂದು. ಆಗಿನಿಂದಲೂ ನನ್ನ ಮನಸ್ಸು ಹೇಳುತ್ತದೆ; ಶಿಕ್ಷೆಗೆ ತಯಾರಾಗೆಂದು.

ರಘು, ಅವಳನ್ನು ಕೆಡಿಸಿದವನಿಗೆ ಶಿಕ್ಷೆಯೇ ಇಲ್ಲವೇ? ಇರಲಾರದು; ಏಕೆಂದರೆ ಅವನು ಗಂಡಸು, ಅಪರಾಧವು ಹೆಂಗಸರದೇ. ಅವಳನ್ನು ಕೆಟ್ಟ ದಾರಿಯಲ್ಲಿ ಕರೆದುಕೊಂಡು ಹೋದಾತನಿಗೆ ಇನ್ನೊಬ್ಬಳನ್ನು ಅದೇ ಹಾದಿಯಲ್ಲಿ ಕರೆದೊಯ್ಯಲು ಯತ್ನಿಸುತ್ತಿರಬಹುದು, ಆದರೆ ಗಂಡಸಾದುದರಿಂದ ಆತನಿಗೆ ಶಿಕ್ಷೆಯಿಲ್ಲ, ಆಚಾರದ ಅಧಿಕಾರ ಅಬಲೆಯರ ಮೇಲೆಯೇ.

ರಘು, ಹೀಗೆಲ್ಲಾ ಬರೆದೆನೆಂದು ಕೋಪಿಸಿಕೊಳ್ಳಬೇಡ. ಅವಳನ್ನು ನೆನೆದುಕೊಂಡರೆ ಮನಸ್ಸಿನಲ್ಲಿ ಏನೇನೋ ಆಗುತ್ತೆ.

ನೀನು ಮಾತ್ರ ನನ್ನನ್ನು ಅವಳ ಸ್ಥಿತಿಗೆ ಗುರಿಮಾಡಬೇಡವೆಂದು ಬೇಡಿಕೊಳ್ಳುತ್ತೇನೆ. ಅಂದಿನಂತೆ ನನ್ನನ್ನು ಪ್ರೀತಿಸಲು ಸಾಧ್ಯವಿಲ್ಲದಿದ್ದರೂ ನಿನ್ನ ಹೃದಯದ ಒಂದು ಮೂಲೆಯಲ್ಲಾದರೂ ಒಂದಿಷ್ಟು ಸ್ಥಳ ಕೊಡು, ನಿರಾಕರಿಸಬೇಡ

ನಿನ್ನ
ಶಾಂತ

-೨-

೧೦-೪-೧೯೨೪

ಶಾಂತೆ,

ನಿನ್ನ ಕಾಗದ ಸಿಕ್ಕಿತು. ಓದಿ ಆಶ್ಚರ್ಯವಾಯಿತು. ನಾನೇ ನಿನ್ನನ್ನು ಕೊಚ್ಚೆಗೆ ನೂಕಿದೆ ಎಂದು ಬರೆದಿರುವೆ. ನೀನು ಬೀಳಲು ಆತುರದಿಂದಿದ್ದುದರಿಂದಲೇ ನಾನು ನೂಕಿದ್ದು? ಅಂತಹ ಸಾಧ್ವಿಯಾಗಿದ್ದರೆ ಹಿಂದೆಯೇ ನಿನಗೆ ಬುದ್ದಿಯಿರಬೇಕಿತ್ತು. ಈಗ ನನ್ನನ್ನು ದೂರಿ ಏನು ಪ್ರಯೋಜನ? “All is fair in love and War.”

ನಿನ್ನನ್ನು ಇನ್ನಾರಾದರೂ ಮದುವೆಯಾಗುವವರಿದ್ದರೆ ಮದುವೆಯಾಗು ನನ್ನಡ್ಡಿಯೇನೂ ಇಲ್ಲ.

ರಘು

-೩-
೫-೫-೧೯೨೪

ರಾಜ,
ನನ್ನ ಹಿಂದಿನ ಕಾಗದಗಳೊಂದಕ್ಕೂ ಪ್ರತ್ಯುತ್ತರವೇ ಇಲ್ಲ. ಏಕೆ? ನೀನೇನಾದರೂ ತೊಂದರೆಯಲ್ಲಿರುವೆಯಾ? – ನಿನ್ನ ಚಿಂತೆ ಏನೆಂದು ನನಗೂ ಹೇಳಬಾರದೆ? ನನ್ನಿಂದೇನಾದರೂ ಆಗಬೇಕಾಗಿದ್ದರೆ ಸಂಕೋಚವಿಲ್ಲದೆ ಹೇಳು; ಕೈಲಾದಮಟ್ಟಿಗೆ ಸಹಾಯ ಮಾಡುತ್ತೇನೆ.

ಈ ಕಾಗದಕ್ಕಾದರೂ ಜವಾಬು ಬರಬಹುದೆಂದು ನಿರೀಕ್ಷಿಸುವ, –

ನಿನ್ನ ,
ನಾನ

-೪-

೭-೫-೧೯೨೪

ನಾನ,

ನಿನ್ನ ಕಾಗದಗಳೆಲ್ಲವೂ ಸಿಕ್ಕಿದರೂ ಪ್ರತ್ಯುತ್ತರ ಬರೆಯದಿದ್ದುದಕ್ಕೆ ಕ್ಷಮಿಸು. ಹಲವು ಸಾರಿ ನಿನಗೆ ಬರೆಯಲು ಕುಳಿತ ಎಷ್ಟೋ ಕಾಗದಗಳನ್ನು ಬರೆದೆ, ಆದರೆ ಒಂದನ್ನೂ ಟಪಾಲಿಗೆ ಹಾಕಲು ಧೈರ್ಯ ಬರಲಿಲ್ಲ. ನಾನಂತೂ ಅತಿ ಕಷ್ಟದಲ್ಲಿದ್ದೇನೆ. ನಿನ್ನನ್ನೂ ನನ್ನ ಕಷ್ಟದಲ್ಲಿ ಭಾಗಿಯಾಗುವಂತೇಕೆ ಮಾಡಬೇಕು? ನನ್ನ ವಿಷಯದಲ್ಲಿ ನಿನಗೇನು ಮಾಡಲು ಸಾಧ್ಯವಿಲ್ಲ. ಸುಮ್ಮನೆ ನನ್ನ ಕಷ್ಟ ಹೇಳಿ ನಿನ್ನನ್ನು ವ್ಯಸನಕ್ಕೆ ಗುರಿಮಾಡಲೆ? ಬರೆಯಲಿಲ್ಲವೆಂದು ಕೋಪಿಸಬೇಡ; ಕ್ಷಮಿಸು.

ನಿನ್ನ,
ರಾಜ

-೫-

೧೨-೫-೧೯೨೪

ರಾಜ,

ನನ್ನೊಡನೆಯೂ ಸಂಕೋಚವೇ? ನಿನ್ನ ಸುಖದಲ್ಲಿ ನಾನು ಪಾಲುಗಾರನಾಗುತ್ತಿದೆ. ನಿನ್ನ ವ್ಯಸನದ ದಿನಗಳಲ್ಲಿ ನನ್ನನ್ನೇಕೆ ವಂಚಿಸುತ್ತಿರುವೆ? ನಿನ್ನ ಸ್ನೇಹವೆಲ್ಲಾ ಏನಾಯ್ತು? ಏನಿದ್ದರೂ ನನ್ನೊಡನೆ ಹೇಳುತ್ತಿದ್ದ ನೀನು ಈಗೇನನ್ನು ಬಚ್ಚಿಡಲು ಪ್ರಯತ್ನಿಸುತ್ತಿರುವೆ? ನಿನ್ನ ವಿಷಯದಲ್ಲಿ ನನ್ನಿಂದೇನೂ ಮಾಡಲು ಸಾಧ್ಯವಿಲ್ಲದಿದ್ದರೂ ನಿನ್ನ ಕಷ್ಟದಲ್ಲಾದರೂ ಭಾಗಿಯಾಗುತ್ತೇನೆ. ನೀನು ನಿಜವಾಗಿಯೂ ನನ್ನನ್ನು ಸ್ನೇಹಿತ ಎಂದೆಣಿಸುತ್ತಿದ್ದರೆ ನಿನ್ನ ಕಷ್ಟಕ್ಕೆ ಕಾರಣವನ್ನು ಬರೆ. ನಿನ್ನ ಸುಖದಲ್ಲಿ ಪಾಲುಗಾರನಾಗಿದ್ದಂತೆಯೇ ಕಷ್ಟಕಾಲದಲ್ಲೂ ಇರುವೆನೆಂಬುದನ್ನು ನೆನಪಿನಲ್ಲಿಡು.

ಯಾವಾಗಲೂ ನಿನ್ನ,
ನಾನ

-೬-

ನಾನ,

ನೋಡನೆ ಹೇಳಬಾರದ ವಿಷಯಗಳೇನೂ ಇಲ್ಲ. ನಾನು ಹೇಳದಿದ್ದರೂ ತಾನಾಗಿಯೇ ತಿಳಿಯುವ ವಿಷಯವದು. ಬಚ್ಚಿಟ್ಟು ಉಪಯೋಗವೇನು?

ನನ್ನ ತಂಗಿ ಶಾಂತೆಯನ್ನು ನೀನು ನೋಡಿರುವಿಯಷ್ಟೆ. ನೀನು ನೋಡಿದಾಗ ಅವಳು ಹತ್ತು ವರುಷದ ಹುಡುಗಿ. ಆಗಲೇ ಅವಳು ವಿಧವೆಯಾಗಿದ್ದಳು; ನಿನಗದು ಗೊತ್ತಿದೆ. ಅಮ್ಮ ಸಾಯುವಾಗ ‘ರಾಜ’ ಶಾಂತೆ ಏನೂ ತಿಳಿಯದ ಮಗು; ಅವಳನ್ನು ಪ್ರೀತಿಯಿಂದ ಕಾಪಾಡು ಎಂದಿದ್ದಳು. ನಾನು ಅಮ್ಮನ ಕಡೆಯ ಮಾತನ್ನು ನಾನು ನೆರವೇರಿಸಲಿಲ್ಲ. ನನ್ನ ಪಾಪಿ ಜನ್ಮಕ್ಕೆ ಧಿಕ್ಕಾರ!

ನನ್ನ ಹೆಂಡತಿ ಶಾಂತೆಯನ್ನು ಚೆನ್ನಾಗಿ ನಡೆಸಿಕೊಳ್ಳುತ್ತಿರಲಿಲ್ಲ. ಮೊದಲು ನನಗದು ತಿಳಿಯಲಿಲ್ಲ. ಈಗ ತಿಳಿಯಿತು, ಅಯೋ-

ಆರು ತಿಂಗಳ ಹಿಂದೆ ನನ್ನ ಹೆಂಡತಿಯ ಅಣ್ಣ ಬಂದಿದ್ದ. ಅವನು ದುಷ್ಟನೆಂದು ನನಗೆ ಗೊತ್ತಿದ್ದರೂ ನನಗವನಿಂದ ಕೆಡುಕಾಗಲಾರದೆಂದೆಣಿಸಿದ್ದೆ. ನಾನಾಗಲೀ ನನ್ನ ಹೆಂಡತಿಯಾಗಲೀ ಶಾಂತೆಗೆ ಸ್ವಲ್ಪ ದಯೆಯನ್ನು ತೋರಿಸಿದ್ದರೆ ಅವಳಿಂದು ಬೀದಿಯ ಭಿಕಾರಿಯಾಗುತ್ತಿರಲಿಲ್ಲ. ರಘು (ನನ್ನ ಹೆಂಡತಿಯ ಅಣ್ಣ) ಅವಳನ್ನು ನರಕದ ದಾರಿಯಲ್ಲಿ ಕರೆದೊಯ್ಯುವುದನ್ನು ನೋಡಿದರೂ ನನ್ನ ಹೆಂಡತಿ ಸುಮ್ಮನಿದ್ದಳು. ಅರಿಯದ ಶಾಂತೆಯನ್ನು ತಿಳಿಯದ ನಾನೂ ತಿಳಿದ ನನ್ನ ಹೆಂಡತಿಯೂ ಕೂಡಿ ನರಕಕ್ಕೆ ನೂಕಿಬಿಟ್ಟೆವು. ಅಷ್ಟು ಹೊತ್ತಿಗೆ ಸರಿಯಾಗಿ ಅವಳನ್ನು ಕೈಹಿಡಿದು ವಂಚನೆಯ ಮಾತುಗಳಿಂದ ಮರುಳು ಮಾಡಿ ಕರೆದುಕೊಂಡು ಹೋಗಲು ರಘು ಬಂದಿದ್ದ. ಬ್ರಹ್ಮ ಸಮಾಜಕ್ಕೆ ಸೇರಿ ಅವಳನ್ನು ಮದುವೆಯಾಗುತ್ತೇನೆಂದು ಮಾತು ಕೊಟ್ಟಿದ್ದನಂತೆ. ಶಾಂತೆಯನ್ನು ಬಿಟ್ಟುಹೋದ ಮೇಲೆ ಅವನ ಮನಸ್ಸಿನಿಂದ ಆ ಮಾತುಗಳೂ ಮಾಯವಾದಂತೆ ತೋರುತ್ತದೆ. ಅವನು ಹೊರಟುಹೋಗಿ ಸುಮಾರು ಎರಡು ತಿಂಗಳುಗಳಾದ ಮೇಲೆ ಒಂದು ದಿನ ಬೆಳಗಿನ ಹೊತ್ತಿನಲ್ಲಿ ನೋಡುವಾಗ ಶಾಂತೆ ಇರಲಿಲ್ಲ. ಒಂದು ಕಾಗದವನ್ನು ನನ್ನ ಮೇಜಿನ ಮೇಲಿಟ್ಟು ಆವಳು ಹೊರಟುಹೋಗಿದ್ದಳು. ಅವಳ ಕಾಗದದಲ್ಲಿ ಹೀಗಿತ್ತು: “ಅಣ್ಣ ಕೆಟ್ಟ ಹೆಸರನ್ನು ಪಡೆಯದ ನಮ್ಮ ಮನೆತನಕ್ಕೆ ನಾನು ಕಲಂಕ ತಂದಿದ್ದೇನೆ. ಆದರದು ಇತರರಿಗೆ ತಿಳಿಯುವ ಮೊದಲೇ ನಾನದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೇನೆ. ನಿನಗಾಗಲೀ ಅತ್ತಿಗೆಗಾಗಲೀ ನನ್ನ ಸ್ಥಿತಿಯನ್ನು ಹೇಳುವ ಧೈರ್ಯ ನನಗಿಲ್ಲ. ನಿನ್ನ ವ್ಯಸನವನ್ನೂ ಅತ್ತಿಗೆಯ ತಿರಸ್ಕಾರವನ್ನೂ ಸಹಿಸುವ ಶಕ್ತಿ ನನಗಿಲ್ಲ. ಹೇಳದೆ ಹೊರಟುಹೋಗುವುದಕ್ಕಾಗಿ ಕ್ಷಮಿಸು – ಶಾಂತೆ.”

ನಾನ, ನಾನವಳನ್ನು ಪ್ರೀತಿಯಿಂದ ನೋಡಿಕೊಂಡಿದ್ದರೆ ಅವಳು ಪರದೇಶಿಯಾಗುತ್ತಿರಲಿಲ್ಲ. ಅಂತೆಯನ್ನು ನಮ್ಮ ಮನೆಯಿಂದ ನೂಕಿದೆ. ಇನ್ನು ಹೃದಯದ ಶಾಂತಿ ದೊರೆಯುವುದು ತಾನೇ ಹೇಗೆ? ನನ್ನ ಬಾಳು ….. ಕ್ಷಮಿಸು- ನನ್ನ ಕಷ್ಟವನ್ನು ಹೇಳಿ ನಿನ್ನನ್ನು ನೋಯಿಸುವುದಕ್ಕೆ.

ರಾಜ

-೭-

೨೭-೫-೧೯೨೪

ರಾಜ,

ಈಗ ತಾನೇ ನಿನ್ನ ಕಾಗದ ಸಿಕ್ಕಿತು, ಓದಿ ಮನಸ್ಸು ಕೊರೆಯುತ್ತಿದೆ. ಹಿಂದಿನ ದಿನಗಳಲ್ಲಿ ನಮ್ಮೊಡನೆ ಆಡುತ್ತಿದ್ದ ನಗುಮುಖದ ಶಾಂತೆ ಈಗ…. ಆಯ್ಯೋ ನಾವಿದ್ದು ಪ್ರಯೋಜನವೇನು?

ರಾಜ, ಅವಳನ್ನು ಹುಡುಕುವುದು ನಮ್ಮ ಕರ್ತವ್ಯ. ಅವಳನ್ನು ಪತ್ತೆಮಾಡಿ, ಅವಳ ಮುಂದಿನ ಜೀವನವನ್ನು ಸುಖಮಯವಾಗಿ ಮಾಡುವುದು ನಮ್ಮ ಕೈಯಲ್ಲಿದೆ. ಬೇಸರದಿಂದ ಸುಮ್ಮನೆ ಕೂರದೆ ಅವಳನ್ನು ಹುಡುಕುವುದಕ್ಕೆ ಹೊರಡು. ನಾನೂ ಅದರ ಸಲುವಾಗಿ ಈ ರೈಲಿಗೇ ಹೊರಡುತ್ತೇನೆ. ನಮ್ಮ ಕರ್ತವ್ಯವಿದೆಂದು ನನಗೆ ತೋರುತ್ತದೆ.

ನಿನ್ನ,
ನಾನ

-೮-

೨೧-೫-೧೯೨೪
೧೨-೩೦ ಹಗಲು

ನಾನ,

ನಿನ್ನ ಕಾಗದ ಸಿಕ್ಕಿತು ಅದರೊಡನೆಯೇ ನಿನ್ನಿನ ವರ್ತಮಾನ ಪತ್ರಿಕೆಯೂ ಬಂತು. ಗಂಡಸರು ಹೆಂಗಸರಿಗಿಂತ ಧೈರ್ಯವಂತರಂತೆ; ಸಹನ ಶಕ್ತಿ ಇರುವವರಂತೆ; ನಿಜವೆಂದು ನಾನೂ ನಂಬಿದ್ದೆ. ಆದರೆ ಆ ಪತ್ರಿಕೆಯನ್ನು ಓದಿದ ಮೇಲೆ ಮಾತ್ರ ತಡೆಯಲಾರದೆ ಹೋದೆ…. ಹಾಗೆಯೇ ಮೇಜಿನ ಮೇಲೆ ಮಲಗಿದೆ. ಮಧ್ಯಾಹ್ನದ ಊಟಕ್ಕೆ ನನ್ನ ಹೆಂಡತಿಯು ಕರೆಯುತ್ತಿದ್ದಾಳೆ. ಊಟವೆ! ಶಾಂತೆಯನ್ನು ಕೊಂದ ನನಗೆ ಊಟವೇ!…

ನಾನ, ಹಿಂದಿನ ದಿನಗಳ ಸ್ಮರಣೆಯನ್ನೇಕೆ ಮಾಡುವೆ? ಆಗಿನ ಆಟ, ಆಗಿನ ಸುಖ, ಆಗಿನ ಸಂತೋಷ, ಆಗಿನ ಒಂದೂ ಈಗಿಲ್ಲ. ಬಾಲ್ಯವಲ್ಲವೇ ಮನುಷ್ಯನ ಸುಖದ ಕಾಲ. ಅದರಲ್ಲೂ ನನ್ನ ಮತ್ತು ಶಾಂತೆಯ ಬಾಲ್ಯ…

ಪೇಪರಿನಲ್ಲಿ ಏನಿತ್ತೆಂದು ನೀನು ಯೋಚಿಸಬಹುದು. ‘ಇಂದು ಇಲ್ಲಿಗೆ ನಾಲ್ಕು ಮೈಲು ದೂರದಲ್ಲಿರುವ ಕೆರೆಯಲ್ಲಿ ಒಂದು ಹೆಂಗಸಿನ ಶವವು ಸಿಕ್ಕಿತು, ಅವಳು ಗರ್ಭಿಣಿ. ಜನರಲ್ ಆಸ್ಪತ್ರೆಯಲ್ಲಿ ಅವಳ ಶವವನ್ನಿಟ್ಟಿದ್ದಾರೆ, ಅವಳು ಯಾರೆಂದು ಗೊತ್ತಿಲ್ಲ, ಯಾರಿಗಾದರೂ ಅವಳ ವಿಷಯ ತಿಳಿದಿದ್ದರೆ ದಯಮಾಡಿ ತಿಳಿಸಬೇಕೆಂದು ಕೋರುತ್ತೇವೆ.’

ಜನರಲ್ ಆಸ್ಪತ್ರೆಗೆ ಹೋದೆ. ನಾನ ಶವವನ್ನು ನೋಡಿದೆ… ಶಾಂತೆ!…

ಬೆಳ್ಳಗಾದ ಮುಖ, ಬಿಳೀ ಹಣೆಯಲ್ಲಿ ದಯಾಮಯಿಯಾದ ನರ್ಸ್ ಒಬ್ಬಳು ಇಟ್ಟ ಕೆಂಪು- ಕುಂಕುಮ ಬೊಟ್ಟು… ಇನ್ನು ಬರೆಯಲಾರೆ-

ರಾಜ
*****
ಅಕ್ಟೋಬರ್ ೧೯೩೩

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರೈಲು
Next post ಅಂತರಾಳ

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…