ಸಂಸ್ಕೃತ ವಿಶ್ವವಿದ್ಯಾಲಯ : ಹೊಸ ವರ್ಣಾಶ್ರಮ ವಲಯ

ಸಂಸ್ಕೃತ ವಿಶ್ವವಿದ್ಯಾಲಯ : ಹೊಸ ವರ್ಣಾಶ್ರಮ ವಲಯ

ಸಂಸ್ಕೃತ ವಿಶ್ವವಿದ್ಯಾಲಯದ ಸ್ಥಾಪನೆಯಾಗಬೇಕೆಂದು ರಾಜ್ಯದ ಬಿ.ಜೆ.ಪಿ. ಸರ್ಕಾರ ಸಂಕಲ್ಪ ಮಾಡಿದೆ. ಆದರೆ ಈ ‘ಸಂಕಲ್ಪ’ ಸರ್ಕಾರ ಮತ್ತು ಸರ್ಕಾರದ ಸಮಾನ ಮನಸ್ಕರದಾಗಿದೆಯೇ ಹೊರತು ಸಮಸ್ತ ಸಾಂಸ್ಕೃತಿಕ ಲೋಕದ್ದಾಗಿಲ್ಲ; ಸಮಸ್ತ ಶಿಕ್ಷಣ ಕ್ಷೇತ್ರದ್ದೂ ಆಗಿಲ್ಲ. ವಿಶ್ವವಿದ್ಯಾಲಯಗಳ ಸ್ಥಾಪನೆಯ ವಿಷಯ ಬಂದಾಗ ಇಲ್ಲಿವರೆಗೆ ಎದ್ದಿರುವ ವಿವಾದಗಳು ಹೆಸರಿಗೆ, ಭೌಗೋಳಿಕ ವ್ಯಾಪ್ತಿಗೆ ಸಂಬಂಧಿಸಿರುವುದೇ ಹೆಚ್ಚು. ಇಂತಹ ವಿವಾದಗಳಿಗೆ ಭಿನ್ನಾಭಿಪ್ರಾಯ ಕಾರಣವಾಗಿರುತ್ತದೆಯೇ ಹೊರತು ಭಿನ್ನ ಸೈದ್ಧಾಂತಿಕ ನೆಲೆ ಕಾರಣವಾಗಿರುವುದಿಲ್ಲ. ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಯ ಸುತ್ತ ಎದ್ದಿರುವ ವಿವಾದವು ಕೇವಲ ಭಿನ್ನಾಭಿಪ್ರಾಯದ್ದಲ್ಲ. ಅಭಿಪ್ರಾಯದ ಸೀಮಿತ ವಲಯವನ್ನು ಮೀರಿದ ಸೈದ್ದಾಂತಿಕ ಸ್ವರೂಪದ್ದು. ಸಂಸ್ಕೃತ ವಿಶ್ವವಿದ್ಯಾಲಯ ಬೇಕು ಎನ್ನುವವರ ಸಾಮಾಜಿಕ-ಸಾಂಸ್ಕೃತಿಕ ನೆಲೆಗಳಿಗೂ ಬೇಡ ಎನ್ನುವವರ ಸಾಮಾಜಿಕ-ಸಾಂಸ್ಕೃತಿಕ ನೆಲೆಗಳಿಗೂ ಇರುವ ಅಂತರವನ್ನು ಗಮನಿಸಬೇಕು. ಈ ಅಂತರವು ಅನುಸಂಧಾನಕ್ಕೆ ತೆರೆದುಕೊಂಡಿಲ್ಲ; ಮುಖಾಮುಖಿಗೆ ಮುಂದಾಗಿದೆ. ಕೇವಲ ಭಿನ್ನಾಭಿಪ್ರಾಯಗಳಾದರೆ ಕೊಟ್ಟು ತೆಗೆದುಕೊಳ್ಳುವ ಅನುಸಂಧಾನ ಸಾಧ್ಯ. ಮುಖಾಮುಖಿಯೆನ್ನುವುದು ಎದುರುಬದರಾಗುವ ಸೈದ್ದಾಂತಿಕತೆ, ಮುಖಾ ಮುಖಿಯಲ್ಲೂ ಅನುಸಂಧಾನದ ಆಶಯವನ್ನು ಉಳಿಸಿಕೊಂಡಿದ್ದರೆ ಅಥವಾ ಏಕಕಾಲಕ್ಕೆ ಮುಖಾ ಮುಖಿ ಮತ್ತು ಅನುಸಂಧಾನಗಳ ಅರಿವು ಸಾಧ್ಯವಾಗುವ ಆಯಾಮವಿದ್ದರೆ ಎರಡೂ ಕಡೆ ಸಣ್ಣಪುಟ್ಟ ಬದಲಾವಣೆ ಸಾಧ್ಯವಾದೀತು. ಸಾಧ್ಯವಾಗಲೇಬೇಕೆಂಬ ಒತ್ತಾಸೆ ಎಲ್ಲ ಸಂದರ್ಭದಲ್ಲೂ ಇರುವುದಿಲ್ಲ. ಹೀಗಾಗಿ, ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಯ ಸುತ್ತ ಹಬ್ಬಿರುವ ಹುತ್ತ, ಸೈದ್ದಾಂತಿಕ ಗ್ರಹಿಕೆಗಳ ಮುಖಾಮುಖಿಗೆ ಆಹ್ವಾನ ನೀಡಿದೆ; ಪುಂಗಿನಾದದ ಪಾತ್ರ ಕಡಿಮೆಯಾಗಿದೆ.

ಸಂಸ್ಕೃತವು ಒಂದು ಭಾಷೆ ಮಾತ್ರವಾಗಿ ಉಳಿದಿಲ್ಲ. ಹಾಗೆ ನೋಡಿದರೆ ಯಾವುದೇ ಭಾಷೆಯು ‘ಬಳಕೆದಾರರ’ ಅಪೇಕ್ಷೆಗಳಿಗನುಗುಣವಾಗಿ ‘ಅಂತಃಸತ್ವ’ವನ್ನು ಒಳಗೊಳ್ಳುತ್ತ ವಿಕಾಸ ಹೊಂದುತ್ತದೆ. ಭಾಷೆಯು ಬದುಕಿನ ಭಾಗವಾಗುವುದಕ್ಕೂ ಬಳಕೆದಾರರ ಸಾಧನವಾಗುವುದಕ್ಕೂ ಸೂಕ್ಷ್ಮ ವ್ಯತ್ಯಾಸವಿದೆ. ಸಂಸ್ಕೃತ ಭಾಷೆಯನ್ನು ಬದುಕಿನ ಭಾಗವಾಗುವುದಕ್ಕೆ ಬಿಡದ ಬಳಕೆದಾರರು ಅದರ ‘ಅಂತಃಸತ್ವ’ಕ್ಕೆ ಬೇರೆಯದೇ ಆಯಾಮ ಒದಗಿಸಿದರು; ಸಹಜ ಸತ್ವದ ಅನಾವರಣಕ್ಕೆ ತಡೆಗೋಡೆಯಾದರು; ಅಂತಃಸತ್ವವನ್ನು ಸಾವಿನತ್ತ ಕೊಂಡೊಯ್ದರು; ಕೇವಲ ವೈದಿಕಪ್ರಿಯ ಭಾಷೆಯಾಗುವಂತೆ ಮಾಡಿದರು. ಇದು ನಮ್ಮ ಸಾಮಾಜಿಕ-ಸಾಂಸ್ಕೃತಿಕ ಇತಿಹಾಸದ ಭಾಗ. ಹೀಗೆ ಯಾವ ಪೂರ್ವಾಗ್ರಹವೂ ಇಲ್ಲದೆ ಇತಿಹಾಸದ ನಡೆಯನ್ನು ಗುರುತಿಸಿದರೆ ಅಪಾರ್ಥ ಮಾಡುವವರೂ ಇರುತ್ತಾರೆ. ಇದು ಬ್ರಾಹ್ಮಣ ವಿರೋಧಕ್ಕಾಗಿ ಹೆಣೆದ ಸಿದ್ದಾಂತ ಎನ್ನುತ್ತಾರೆ. ಅಷ್ಟೇಕೆ ಪ್ರಸಿದ್ಧ ಲೇಖಕರಾದ ಎಸ್.ಎಲ್. ಭೈರಪ್ಪನವರು ಹಾಗೆಂದು ಭಾವಿಸುತ್ತಾರೆ; ಸಂಸ್ಕೃತ ವಿಶ್ವವಿದ್ಯಾಲಯದ ಸ್ಥಾಪನೆ ಕುರಿತ ವಿವಾದದ ಬಗ್ಗೆ ಬರೆಯುತ್ತ ಅವರು ಹೇಳುತ್ತಾರೆ : “….. ಸಂಸ್ಕೃತವು ಬ್ರಾಹ್ಮಣರ ಭಾಷೆ; ಆದ್ದರಿಂದ ಅದಕ್ಕೆ ಕೊಡುವ ಪ್ರೋತ್ಸಾಹವು ಬ್ರಾಹ್ಮಣಿಕೆಯನ್ನು ಎತ್ತಿ ಹಿಡಿದಂತಾಗುತ್ತದೆ ಎಂಬ ಕಾರಣವನ್ನೊಡ್ಡಿ ಸಂಸ್ಕೃತ ವಿಶ್ವವಿದ್ಯಾಲಯವನ್ನು ವಿರೋಧಿಸುತ್ತಿದ್ದಾರೆ. (ವಿಜಯ ಕರ್ನಾಟಕ – ದಿನಾಂಕ : ೧೦-೮-೨೦೦೯).

ಸಂಸ್ಕೃತವು ಬಹುಹಿಂದೆ ಬ್ರಾಹ್ಮಣರಲ್ಲಿ ಮಾತ್ರ – ಅದರಲ್ಲೂ ಕೆಲವು ಬ್ರಾಹ್ಮಣರಲ್ಲಿ ಮಾತ್ರ – ಉಳಿಯುವಂತೆ ಮಾಡಿದವರು ಬ್ರಾಹ್ಮಣೇತರರಲ್ಲ. ನಾನಂತೂ ಬ್ರಾಹ್ಮಣರನ್ನೂ ಒಳಗೊಂಡಂತೆ ಯಾವೊಂದು ಜಾತಿಯನ್ನೂ ಜಾತಿಯ ಕಾರಣಕ್ಕಾಗಿ ಖಂಡಿತ ವಿರೋಧಿಸುವುದಿಲ್ಲ. ಜಾತಿವಾದ ಮತ್ತು ಕೋಮುವಾದ – ಎರಡನ್ನೂ ಏಕಕಾಲದಲ್ಲಿ ವಿರೋಧಿಸುತ್ತ ಬಂದಿರುವ ನಾನು ‘ಸಂಸ್ಕೃತ ವಿಶ್ವವಿದ್ಯಾಲಯ ಬೇಡ’ ಎಂದು ಪ್ರತಿಪಾದಿಸಿದರೆ ಅದಕ್ಕೆ ಬ್ರಾಹ್ಮಣ ವಿರೋಧ ಕಾರಣವಲ್ಲ. ಸಂಸ್ಕೃತವು ಬ್ರಾಹ್ಮಣೇತರರಲ್ಲೂ ಇದೆ ಎಂಬುದನ್ನು ಸಾಬೀತು ಪಡಿಸಲು ಮಾನ್ಯ ಭೈರಪ್ಪನವರು ಬ್ರಾಹ್ಮಣೇತರ ಮಠಗಳಲ್ಲಿ ಸಂಸ್ಕೃತ ಕಲಿಕೆ ನಡೆಯುತ್ತಿರುವುದನ್ನೂ ವಚನ ಸಾಹಿತ್ಯದಲ್ಲಿ ಸಂಸ್ಕೃತ ಉದ್ದರಣೆಗಳು ಇರುವುದನ್ನೂ ಉದಾಹರಿಸುತ್ತಾರೆ (ಅದೇ ಲೇಖನದಲ್ಲಿ. ಉದ್ದರಣೆಗಳನ್ನು ಯಾವ ಭಾಷೆಯಿಂದಲಾದರೂ ಸಾದರ ಪಡಿಸಬಹುದು. ತಂತಮ್ಮ ವಿಷಯ – ಸಂದರ್ಭಗಳಿಗೆ ಉಚಿತವಾಗಿ ಉಲ್ಲೇಖಿಸಬಹುದು. ಹೀಗೆ ಉಲ್ಲೇಖಿಸಿದ ಕಾರಣದಿಂದಲೇ ಯಾವ ಭಾಷೆಯೂ ಶ್ರೇಷ್ಟವಾಗುವುದಿಲ್ಲ. ಇನ್ನು ಬ್ರಾಹ್ಮಣೇತರ ಮಠಗಳಲ್ಲಿ ಸಂಸ್ಕೃತ ಕಲಿಕೆ ಇರುವುದು ಯಾಕೆಂದು ಯೋಚಿಸೋಣ. ಸಂಸ್ಕೃತವು ಈಗ ಕೇವಲ ಬ್ರಾಹ್ಮಣರ (ಬ್ರಾಹ್ಮಣ ಮಠಗಳ) ಭಾಷೆಯಾಗಿ ಉಳಿಯದೆ ಬ್ರಾಹ್ಮಣೇತರ ಮಠಗಳಿಗೂ ವಿಸ್ತಾರಗೊಂಡಿದೆ. ಇದಕ್ಕೆ ಕಾರಣ ‘ಮಠ’ವೇ ಹೊರತು ಬ್ರಾಹ್ಮಣೇತರ ಸಮುದಾಯದ ಸಂಸ್ಕೃತ ಪ್ರೀತಿಯೂ ಅಲ್ಲ; ಅನಿವಾರ್ಯತೆಯೂ ಅಲ್ಲ. ಸಂಸ್ಕೃತವು ಬ್ರಾಹ್ಮಣರನ್ನೂ ಒಳಗೊಂಡಂತೆ ಬ್ರಾಹ್ಮಣೇತರ ಮಠಗಳಲ್ಲಿ ಸ್ಥಾನ ಪಡೆಯುತ್ತಿರುವುದರ ಗ್ರಹಿಕೆಯೆಂದರೆ – ಸಂಸ್ಕೃತ ಬರೀ ಬ್ರಾಹ್ಮಣರ ಭಾಷೆಯಲ್ಲ, ಅದೊಂದು ಮಠಭಾಷೆ; ಮಠೀಯತೆಯ ಭಾಷೆ, ಮಠೀಯತೆಯು ಮತೀಯತೆಯಾಗುವ ಸಾಧ್ಯತೆಗಳೇ ಹೆಚ್ಚಾಗಿರುವುದರಿಂದ ಅದು ಮತೀಯತೆಯ ಭಾಷೆಯೂ ಆಗಬಹುದು. ಇದಕ್ಕೆ ಭಾಷೆ ಕಾರಣವಲ್ಲ; ಭಾಷೆಯ ಬಳಕೆದಾರರು ಕಾರಣ. ‘ಮಠಭಾಷೆ’ಯು ತನಗೆ ತಾನೇ ಪುರೋಹಿತಶಾಹಿ ಆಶಯಗಳಿಗೆ ಆದ್ಯತೆ ನೀಡುವುದರಿಂದ ಸಂಸ್ಕೃತ ವಿಶ್ವವಿದ್ಯಾಲಯದ ಸ್ಥಾಪನೆಯ ಬಗ್ಗೆ ಸಹಜ ಅನುಮಾನಗಳು ಹುಟ್ಟುತ್ತವೆ.  ಪುರೋಹಿತಶಾಹಿ ಎನ್ನುವುದು ಒಂದು ಜಾತಿಗೆ ಸಂಬಂಧಿಸಿದ್ದಲ್ಲ, ಎಲ್ಲ ಜಾತಿಗಳಿಗೂ ವ್ಯಾಪಿಸಿ ಕೊಳ್ಳುವ ಪ್ರತಿಗಾಮಿ ಸೈದ್ಧಾಂತಿಕ ನೆಲೆಯನ್ನು ಪುರೋಹಿತಶಾಹಿಯು ಪಡೆದಿದ್ದು, ಅದೊಂದು ಮನೋಧರ್ಮವಾಗಿಯೂ ಬೆಳೆಯುತ್ತಿದೆ; ತನ್ನದೇ ಆದ ಮೌಲ್ಯಗಳನ್ನೂ ರೂಪಿಸುತ್ತಿದೆ. ಬಿ.ಜೆ.ಪಿ. ಯಂತಹ ರಾಜಕೀಯ ಪಕ್ಷವು ಮತೀಯತೆಯಿಂದ ಮುಕ್ತವಾಗಿಲ್ಲದಿರುವಾಗ, ಸಂಸ್ಕೃತ ವಿಶ್ವವಿದ್ಯಾಲಯದ ಸ್ಥಾಪನೆಗೆ ಮುಂದಾದರೆ, ಅಲ್ಲಿ ಹೊಸ ವರ್ಣಾಶ್ರಮದ ವಾಸನೆ ಹೊಡೆದರೆ ಆಶ್ಚರ್ಯವೇನೂ ಇಲ್ಲ. ಹೊಸ ವರ್ಣಾಶ್ರಮದಲ್ಲಿರುವ ಪುರೋಹಿತಶಾಹಿ ಶಕ್ತಿಗಳು ಸಂಸ್ಕೃತ ವನ್ನು ಸಾಧನ ಮಾಡಿಕೊಂಡಿರುವಾಗ ಅವರಿಗಾಗಿ ಒಂದು ವಿಶ್ವವಿದ್ಯಾಲಯ ಯಾಕೆ ಬೇಕು ಎನ್ನುವುದು ಒಂದು ಸೈದ್ಧಾಂತಿಕ ಪ್ರಶ್ನೆ.

ಇಲ್ಲಿ ಇನ್ನೊಂದು ಅಂಶವನ್ನೂ ಹೇಳಬೇಕು. ಎಸ್.ಎಲ್. ಭೈರಪ್ಪನವರ ದೃಷ್ಟಿಯಲ್ಲಿ ‘ಬ್ರಾಹ್ಮಣೇತರರ ನಾಯಕರು, ಮಾರ್ಗದರ್ಶಕರು ಯಾರು?’ ಎಂದರೆ ‘ಮಠಗಳು ಈ ಜನಾಂಗ ಗಳಿಗೆ ನಾಯಕರು’. ಆದ್ದರಿಂದ ಸಂಸ್ಕೃತ ವಿಶ್ವವಿದ್ಯಾಲಯ ವಿರೋಧಿಗಳಾದ ಬ್ರಾಹ್ಮಣೇತರ ‘ಬುದ್ದಿಜೀವಿಗಳು ತಮ್ಮ ಮಠಗಳಿಗಿಂತ ಹೆಚ್ಚು ದೂರದೃಷ್ಟಿಯಿಂದ ಸಮಾಜದ ಹಿತಚಿಂತನೆ ಮಾಡುತ್ತಾರೆಯೆ ?’ – ಎಂದು ಪ್ರಶ್ನಿಸುತ್ತಾರೆ ಭೈರಪ್ಪನವರು! ಇದು ಭೈರಪ್ಪನವರ ಮಾತು ಮಾತ್ರವಲ್ಲ; ಎಲ್ಲ ಜಾತಿಗಳ ಮಠನಿಷ್ಠ ಮನೋಧರ್ಮದವರ ಮಾತು. ಆದರೆ ಸಾಕಷ್ಟು ಪ್ರಸಿದ್ದಿಯ ಜೊತೆಗೆ ಗಂಭೀರ ಪರಿಗಣನೆಯಿಂದ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಸ್ಥಾನ ಪಡೆದಿರುವ ಭೈರಪ್ಪನವರು ಮಠಗಳೇ ಮಾರ್ಗದರ್ಶಕರು ಮತ್ತು ಬುದ್ಧಿಜೀವಿಗಳು ಮಠಗಳಿಗಿಂತ ಉತ್ತಮ ಹಿತಚಿಂತಕರಲ್ಲ – ಎಂಬ ತೆಳು ತಿಳುವಳಿಕೆಯನ್ನು ತಾಳಿರುವುದು ಶೋಚನೀಯ. ಇಷ್ಟಕ್ಕೂ ಪುರೋಹಿತಶಾಹಿಯನ್ನು ಒಪ್ಪದ ಯಾವ ವ್ಯಕ್ತಿಯೂ ಮಠಗಳನ್ನು ನಾಯಕ ಸ್ಥಾನದಲ್ಲಿ ನೋಡುವುದಿಲ್ಲ.

ಭೈರಪ್ಪನವರ ತೆಳು ತಿಳುವಳಿಕೆ ಇಲ್ಲಿಗೇ ನಿಲ್ಲುವುದಿಲ್ಲ. ಬ್ರಾಹ್ಮಣೇತರ ಮಠಗಳಲ್ಲಿ ನಡೆಸುವ ಸಂಸ್ಕೃತ ತರಗತಿಗಳ ಬಗ್ಗೆ ‘ಸಂಸ್ಕೃತ ವಿಶ್ವವಿದ್ಯಾಲಯವನ್ನು ವಿರೋಧಿಸುವವರು ಈ ವಿಷಯದಲ್ಲಿ ಜಾಣ ಮೌನ ವಹಿಸಿದ್ದಾರೆ’ ಎಂದು ದೂರುತ್ತಾರೆ. ಖಾಸಗಿ ಮಠಗಳು ನಡೆಸುವ ಸಂಸ್ಕೃತ ಕಲಿಕಾ ತರಗತಿಗಳ ವಿಷಯ ಮತ್ತು ಸರ್ಕಾರವು ಸ್ಥಾಪಿಸಬಯಸುವ ಸಂಸ್ಕೃತ ವಿಶ್ವವಿದ್ಯಾಲಯದ ವಿಷಯಗಳು ತನಗೆ ತಾನೆ ಪ್ರತ್ಯೇಕ ನೆಲೆಗಳನ್ನು ಪಡೆದಿವೆಯೆಂಬುದು ಸಾಮಾನ್ಯ ಜ್ಞಾನಕ್ಕೆ ನಿಲುಕುವ ಸಂಗತಿ. ಒಂದು ಖಾಸಗಿ ಸಂಸ್ಥೆ; ಇನ್ನೊಂದು ಸರ್ಕಾರವೆಂಬ ಸಂವಿಧಾನಾತ್ಮಕ ಸಂಸ್ಥೆ. ಒಂದು ಸಂಸ್ಕೃತ ಕಲಿಕಾ ತರಗತಿ; ಇನ್ನೊಂದು ವಿಶ್ವವಿದ್ಯಾಲಯ ಸ್ಥಾಪನೆ. ಎರಡೂ ಬೇರೆ ಬೇರೆಯಲ್ಲವೆ? ಇಷ್ಟಕ್ಕೂ ಸಂಸ್ಕೃತ ವಿಶ್ವವಿದ್ಯಾಲಯ ಬೇಡ ಎನ್ನುವವರು ಸಂಸ್ಕೃತ ಕಲಿಕೆ ಬೇಡ ಎನ್ನುವುದಿಲ್ಲ. ಆದರೆ ಸರ್ಕಾರವೇ ಸಂಸ್ಕೃತ ಕಲಿಕೆಗೆ ಮುಂದಾದಾಗ ಪಠ್ಯಕ್ರಮದ ಯಾವ ಸ್ಥಾನದಲ್ಲಿ ಕಲಿಯಬೇಕೆಂಬ ಅಂಶ ಮುಖ್ಯವಾಗುತ್ತದೆ. ಭೈರಪ್ಪನವರ ತೆಳು ತಿಳುವಳಿಕೆ ಎಷ್ಟೊಂದು ಬೃಹತ್ತಾಗಿದೆಯೆಂದರೆ, ಸಂಸ್ಕೃತ ಕಲಿಕೆಗೆ ಯಾರೂ ಮುಂದಾಗದಂತೆ ಕೆಲವರು’ ಹುನ್ನಾರ ನಡೆಸಿದ್ದಾರೆಂದು ಆರೋಪಿಸುತ್ತಾರೆ. ’ಹೈಸ್ಕೂಲಿನಲ್ಲಿ ಸಂಸ್ಕೃತವನ್ನು ಬತ್ತಿಸಿ, ಕಾಲೇಜಿನಲ್ಲಿ ಬೆಳೆಯಗೊಡದೆ, ವಿಶ್ವವಿದ್ಯಾಲಯಗಳ ವಿಭಾಗಕ್ಕೆ ವಿದ್ಯಾರ್ಥಿಗಳೇ ಬರದಂತೆ ಮಾಡಿ ಇರುವುದಕ್ಕೆ ವಿದ್ಯಾರ್ಥಿಗಳಿಲ್ಲವೆಂಬ ಕೂಗು ಹಾಕುವ ಹುನ್ನಾರಕ್ಕೆ ಏನೆನ್ನಬೇಕು?’ – ಇದು ಭೈರಪ್ಪನವರ ಪ್ರಶ್ನಾರ್ಥಕ ಆರೋಪ. ಹೈಸ್ಕೂಲಿನಲ್ಲಿ ಪ್ರಥಮ ಭಾಷೆಯ ಸ್ಥಾನದಲ್ಲಿ ಯಾರ ಮಾತೃಭಾಷೆಯೂ ಅಲ್ಲದ ಆಡುಭಾಷೆಯೂ ಅಲ್ಲದ ಸಂಸ್ಕೃತ ಇರಬಾರದೆಂಬ ಒತ್ತಾಯದಿಂದ ‘ಗೋಕಾಕ್ ಸಮಿತಿ’ ನೇಮಕವಾಯಿತು. ಕನ್ನಡವೊಂದನ್ನೇ ಪ್ರಥಮ ಭಾಷೆಯಾಗಿ ಕಲಿಯಬೇಕೆಂಬ ವರದಿಕೊಟ್ಟಿತು. ಆದರೆ ಪ್ರಥಮ ಭಾಷೆಯ ಪಟ್ಟಿಯಲ್ಲಿ ಆಯಾ ರಾಜ್ಯದಲ್ಲಿ ವಾಸಿಸುವ ಭಾಷಿಕ-ಧಾರ್ಮಿಕ ಅಲ್ಪಸಂಖ್ಯಾತರ ಭಾಷೆಗಳಿಗೂ ಅವಕಾಶ ವಿರಬೇಕಾದ್ದು ಸಂವಿಧಾನಾತ್ಮಕವೆಂದು ಹೈಕೋರ್ಟು ತೀರ್ಪು ನೀಡಿತು. ಹೀಗಾಗಿ ಇತರೆ ಮಾತೃಭಾಷೆಗಳೂ ಪ್ರಥಮ ಭಾಷೆಯ ಪಟ್ಟಿಯಲ್ಲಿ ಅವಕಾಶ ಪಡೆದವು. ಸಂಸ್ಕೃತವನ್ನು ಮೂರನೇ ಭಾಷೆಯಾಗಿ ಕಲಿಸಬೇಕೆಂದು ದೇವರಾಜ ಅರಸು ಸರ್ಕಾರ ನಿರ್ಧರಿಸಿದ್ದನ್ನು ಬದಲಾಯಿಸಿ ಗುಂಡೂರಾವ್ ಸರ್ಕಾರವು ಸಂಸ್ಕೃತವನ್ನು ಮತ್ತೆ ಪ್ರಥಮ ಭಾಷೆಯ ಪಟ್ಟಿಗೆ ತಂದದ್ದು ಸಮಸ್ಯೆಗೆ ಮೂಲಕಾರಣವಾಗಿತ್ತು. ಈ ಕ್ರಮವನ್ನು ಆಗ ಪ್ರಬಲವಾಗಿ ವಿರೋಧಿಸಿದ್ದು ಬಂಡಾಯ ಸಾಹಿತ್ಯ ಸಂಘಟನೆ, ದಲಿತ ಸಂಘರ್ಷ ಸಮಿತಿ, ಸಮುದಾಯ, ಚಿತ್ರಾ ಬೀದಿ ನಾಟಕ ಸಂಸ್ಥೆ ಮತ್ತು ಕನ್ನಡ ಉಳಿಸಿ ಕ್ರಿಯಾ ಸಮಿತಿ ಜೊತೆಗೂಡಿದವು. ಪ್ರಬಲಗೊಂಡ ಒತ್ತಾಯ ಮತ್ತು ಹೋರಾಟಗಳ ಕಾರಣದಿಂದ ‘ಗೋಕಾಕ್ ಸಮಿತಿ’ಯನ್ನು ಗುಂಡೂರಾವ್ ರಚಿಸಿದ್ದರು. ಈ ಸಂಸ್ಕೃತವು ಪ್ರಥಮ ಭಾಷೆಯ ಸ್ಥಾನದಲ್ಲಿದ್ದು ತೀರಾ ಸುಲಭ ಪಠ್ಯವನ್ನು ಹೊಂದಿದ್ದು ಸಂಸ್ಕೃತದಲ್ಲಿ ಉತ್ತರ ಬರೆಯದೆಯೂ – ಅಂದರೆ – ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಬರೆದರೂ – ಹೆಚ್ಚು ಅಂಕ ಗಳಿಸಲು ಕಾರಣವಾಗುತ್ತ ಪ್ರಥಮ ಭಾಷೆಯ ಪಟ್ಟಿಯಲ್ಲಿದ್ದ ಕನ್ನಡಕ್ಕೆ ಧಕ್ಕೆಯಾಗುತ್ತಿದ್ದುದನ್ನು ಮುಖ್ಯವಾಗಿ ಗಮನಿಸಿ ದೇವರಾಜ ಅರಸು ಸರ್ಕಾರದ ನಿರ್ಧಾರ ವನ್ನು ಎತ್ತಿಹಿಡಿಯಬಹುದಿತ್ತು. ಹಾಗೆ ಮಾಡದೆ, ಸಂಸ್ಕೃತದ ಜೊತೆಗೆ – ಕನ್ನಡೇತರ ಮಾತೃ ಭಾಷೆಗಳನ್ನೆಲ್ಲ ಪ್ರಥಮ ಭಾಷೆಯ ಪಟ್ಟಿಯಿಂದ ತೆಗೆದು ಹಾಕಲು ಶಿಫಾರಸು ಮಾಡಿತು. ಈ ಅಂಶವು ನ್ಯಾಯಾಲಯದಲ್ಲಿ ನಿಲ್ಲಲಿಲ್ಲ. ಆದರೆ ಡಾ. ರಾಜಕುಮಾರ್ ಅವರ ಪ್ರವೇಶದೊಂದಿಗೆ ‘ಗೋಕಾಕ್ ಚಳವಳಿ’ಯು ಕನ್ನಡಪರ ಪರಿಸರ ನಿರ್ಮಾಣಕ್ಕೆ ಕಾರಣವಾಯಿತು. ಈಗಿನ ವಾಸ್ತವಾಂಶವೆಂದರೆ ಸಂಸ್ಕೃತವನ್ನು ಮತ್ತೆ ಪ್ರಥಮ ಭಾಷೆಯ ಪಟ್ಟಿಗೆ ತರಲಾಗಿದೆ. ಇಷ್ಟೆಲ್ಲ ‘ಇತಿಹಾಸ’ವಿರುವ ವಿಷಯವನ್ನು ಬದಿಗೊತ್ತಿ – ವಿರೋಧಿಗಳು ‘ಹೈಸ್ಕೂಲಿನಲ್ಲಿ ಸಂಸ್ಕೃತವನ್ನು ಬತ್ತಿಸಿ’ದರೆಂದು ಭೈರಪ್ಪನವರು ಆರೋಪಿಸಿದರೆ ಏನೆನ್ನಬೇಕು ? ತಿಳುವಳಿಕೆಯುಳ್ಳವರೇ ತೀರ್ಮಾನಿಸಬೇಕು.

ಭೈರಪ್ಪನವರ ಪ್ರಕಾರ ಇದೇ ವಿರೋಧಿಗಳು ಸಂಸ್ಕೃತವನ್ನು ಕಾಲೇಜಿನಲ್ಲಿ ಬೆಳೆಯ ಗೊಡದೆ, ವಿಶ್ವವಿದ್ಯಾಲಯಗಳ ವಿಭಾಗಕ್ಕೆ ವಿದ್ಯಾರ್ಥಿಗಳೇ ಬರದಂತೆ ಮಾಡಿ’ ಹುನ್ನಾರ ಮಾಡಿದರು. ಇದೆಂಥ ಆರೋಪ? ಈಗಲೂ ಕಾಲೇಜುಗಳಲ್ಲಿ ಸಂಸ್ಕೃತ ವಿಭಾಗಗಳಿವೆ; ವಿಶ್ವವಿದ್ಯಾಲಯಗಳಲ್ಲೂ ಇವೆ. ಈ ತರಗತಿಗಳಿಗೆ ಸೇರಬೇಡಿ ಎಂದು ಯಾರು ಯಾರನ್ನು ತಡೆದರು ? ಯಾರು ಮುಷ್ಕರ ಹೂಡಿದರು ? ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ ಕಲಿಕೆಗೆ ಯಾರು ಅಡ್ಡ ಬಂದರು ? ಯಾರೂ ಇಲ್ಲ. ಸಂಸ್ಕೃತ ಕಲಿಕೆಗೆ ನಿರಾಸಕ್ತಿಯಿರುವುದಕ್ಕೆ ಭೈರಪ್ಪನವರ ಕಲ್ಪಿತ ವಿರೋಧಿಗಳು ಕಾರಣವಲ್ಲ. ನಮ್ಮ ಕಟುವಾಸ್ತವಗಳು ಕಾರಣ. ಕಲಿಯ ಬೇಕಾದವರ ಸ್ವಯಂ ನಿರ್ಣಯಗಳು ಕಾರಣ. ಸಮಾಜದ ಸಂದರ್ಭದಲ್ಲಿ ಇರುವ ಕಾರಣಗಳನ್ನು ಬದಿಗೊತ್ತಿ ವಿರೋಧಿಗಳ ಹುನ್ನಾರವೇ ಸಂಸ್ಕೃತ ಕಲಿಕೆಗೆ ವಿದ್ಯಾರ್ಥಿಗಳು ಬಾರದಿರುವುದಕ್ಕೆ ಕಾರಣವೆಂದು ಸಂಶೋಧಿಸಿದ ಭೈರಪ್ಪನವರಿಗೆ ಏನಾಗಿದೆ.

ಭೈರಪ್ಪನವರ ಮಾತಿರಲಿ, ಡಾ. ಚಿದಾನಂದಮೂರ್ತಿಯವರಿಗೆ ಏನಾಗಿದೆ? ಪ್ರೌಢಶಾಲೆ ಹಂತದಲ್ಲಿ ಸಂಸ್ಕೃತವು ಪ್ರಥಮ ಭಾಷೆಯ ಪಟ್ಟಿಯಲ್ಲಿರುವುದನ್ನು ವಿರೋಧಿಸಿ ಹೋರಾಟಕ್ಕಿಳಿದಿದ್ದ ಅವರೀಗ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು ಎಂದು ಪ್ರತಿಪಾದಿಸುತ್ತಾರೆ. (ವಿಜಯ ಕರ್ನಾಟಕ : ದಿ. ೧೮-೮-೨೦೦೯) ಕನ್ನಡ ವಿದ್ವಾಂಸರು ಹಿಂದೂ ವಿದ್ವಾಂಸರಾಗಿ ರೂಪಾಂತರ ಗೊಂಡದ್ದು ಇದಕ್ಕೆ ಕಾರಣವಿರಬಹುದು. ಆದರೆ ಅವರು ತಮ್ಮ ವಾದಕ್ಕೆ ಉರಲಿಂಗ ಪೆದ್ದಿ, ಕಾಳವ್ವಯಂತಹ ದಲಿತ ವಚನಕಾರರು ಸಂಸ್ಕೃತ ಉಕ್ತಿಗಳನ್ನು ಬಳಸಿಕೊಂಡಿದ್ದಾರೆಂದು ಪ್ರಸ್ತಾಪಿಸುತ್ತ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಪೂರಕ ಸಾಮಗ್ರಿ ಒದಗಿಸುವುದು ಆಶ್ಚರ್ಯಕರ ವಾಗಿದೆ. ಭೈರಪ್ಪನವರು ಬಸವಣ್ಣ, ಚೆನ್ನಬಸವಣ್ಣ, ಸಿದ್ದರಾಮರನ್ನು ಬಳಸಿಕೊಂಡರೆ, ಚಿದಾನಂದ ಮೂರ್ತಿಯವರು ದಲಿತ ವಚನಕಾರರನ್ನು ಬಳಸಿಕೊಳ್ಳುತ್ತಾರೆ. ಈ ಬಳಸಿಕೊಳ್ಳುವ ಬೆಡಗು ಅಚ್ಚರಿಯದಲ್ಲ. ಒಂದು ಸಮಾಧಾನದ ಸಂಗತಿಯೆಂದರೆ ಚಿದಾನಂದಮೂರ್ತಿಯವರ ಪ್ರಕಾರ – ಸಂಸ್ಕೃತ ವಿಶ್ವವಿದ್ಯಾಲಯವು ‘ಕನ್ನಡವನ್ನು ಬೆಳೆಸುವ, ರೂಪಿಸುವ ಕಡೆ ಅದು ಹೆಚ್ಚು ಗಮನ ಕೊಡಬೇಕು. ಅದು ವಿಶ್ವವಿದ್ಯಾಲಯದ ಮುಖ್ಯ ಧೈಯಗಳಲ್ಲಿ ಒಂದಾಗಬೇಕು’. ಈ ಆಶಯ ಒಂದು ಉತ್ತಮ ಆದರ್ಶವೇ ಸರಿ. ಆದರೆ ಸಂಸ್ಕೃತ ವಿಶ್ವವಿದ್ಯಾಲಯವು ‘ಕನ್ನಡವನ್ನು ಬೆಳೆಸುವ ರೂಪಿಸುವ ಕಡೆ ಹೆಚ್ಚು ಗಮನ ಕೊಡುತ್ತದೆಯೆ ? ಅದು ಸಾಧ್ಯವೆ? ಈ ಕೆಲಸಕ್ಕೆ ಕನ್ನಡ ವಿಶ್ವವಿದ್ಯಾಲಯವಿದೆಯೆಂದು ಹೇಳುವುದಿಲ್ಲವೆ? ಇಷ್ಟಕ್ಕೂ ಕನ್ನಡದ ಬೆಳವಣಿಗೆಯನ್ನು ಒಂದು ಮುಖ್ಯ ಧೈಯವಾಗಿಟ್ಟುಕೊಳ್ಳಲು ಸಂಸ್ಕೃತ ವಿಶ್ವವಿದ್ಯಾಲಯ ಯಾಕೆ ಬೇಕು? ಭೈರಪ್ಪ ನವರು ಮತ್ತು ಎಚ್.ಎಸ್. ವೆಂಕಟೇಶ ಮೂರ್ತಿಯವರು ಸಹ (ಸಂಡೆ ಇಂಡಿಯನ್ – ಕನ್ನಡ ಪಾಕ್ಷಿಕದಲ್ಲಿ) ಸಂಸ್ಕೃತ ವಿಶ್ವವಿದ್ಯಾಲಯದ ಸ್ಥಾಪನೆಯು ಕನ್ನಡದ ಅಭಿವೃದ್ಧಿಗೆ ಪೂರಕ ಎನ್ನುತ್ತಾರೆ. ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಯ ಸಮರ್ಥನೆಗೆ ಹಿಂದುಳಿದ, ದಲಿತ ವಚನ ಕಾರರ ಜೊತೆಗೆ ಕನ್ನಡವನ್ನೂ ಬಳಸಿಕೊಳ್ಳುವುದು ಹುರುಳಿಲ್ಲದ ವಾದಕ್ಕೊಂದು ಉದಾಹರಣೆ ಯಾಗುತ್ತದೆ ಅಷ್ಟೆ.

ನಾನು ಸಂಸ್ಕೃತ ಕಲಿಕೆಯ ವಿರೋಧಿಯಲ್ಲ. ಆಸಕ್ತರು ಸಂಸ್ಕೃತವನ್ನು ಕಲಿಯಲು ಮತ್ತು ಸಂಶೋಧನೆ ನಡೆಸಲು ಅವಕಾಶವಿರಬೇಕು. ಶ್ರೀ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರವು ಒಂದೇ ವರ್ಷದಲ್ಲಿ ಸಂಸ್ಕೃತಕ್ಕಾಗಿ ಒಂದು ನೂರು ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದನ್ನು ಸಹ ಇಲ್ಲಿ ಗಮನಿಸಬೇಕು. ಅಂದರೆ ಸಂಸ್ಕೃತ ಸಂಶೋಧನೆ ಮತ್ತು ಕಲಿಕೆಗೆ ಕಾಲಕಾಲಕ್ಕೆ ಪ್ರೋತ್ಸಾಹ ದೊರೆಯುತ್ತಲೇ ಇದೆ. ಇದಕ್ಕೆ ಪೂರಕವಾಗಿ ಕ್ರಮಬದ್ಧ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಬಹುದು. ಇದು ಕೇವಲ ಶೈಕ್ಷಣಿಕವಾಗಿರಬೇಕು; ಸಂಶೋಧನೆಯ ಆಧುನಿಕ ಆಶಯಗಳಿಗೆ ಬದ್ಧವಾಗಿರಬೇಕು. ಇದರ ಬದಲು ವಿಶ್ವವಿದ್ಯಾಲಯವನ್ನೇ ಸ್ಥಾಪಿಸುತ್ತೇವೆನ್ನುವ ಮನೋಧರ್ಮ ಮತ್ತು ಮೌಲ್ಯ ಪ್ರೇರಣೆಗಳು ಪ್ರಶ್ನಾರ್ಹವಾಗಿವೆ. ಸಂಶೋಧನಾ ಕೇಂದ್ರದ ಸ್ವರೂಪ ಮತ್ತು ವಿಶ್ವವಿದ್ಯಾಲಯದ ವ್ಯಾಪ್ತಿಗೆ ವ್ಯತ್ಯಾಸವಿರುವುದನ್ನು ಇಲ್ಲಿ ಗಮನಿಸಬೇಕು.

ಸಂಸ್ಕೃತ ವಿಶ್ವವಿದ್ಯಾಲಯವನ್ನು ವಿರೋಧಿಸುವವರು ಸಂಗೀತ ವಿಶ್ವವಿದ್ಯಾಲಯವನ್ನು ವಿರೋಧಿಸುತ್ತಿಲ್ಲವೆಂದು ಭೈರಪ್ಪನವರು ಬೇಸರಪಟ್ಟುಕೊಂಡಿದ್ದಾರೆ. ನಾನು ಸಂಗೀತ ವಿಶ್ವವಿದ್ಯಾಲಯದ ಪರವಾಗಿಲ್ಲ ಎಂದು ಹೇಳಿದರೆ ಅವರ ಬೇಸರ ಸ್ವಲ್ಪ ಕಡಿಮೆಯಾದೀತೇನೋ. ಆದರೆ ಸಂಸ್ಕೃತ ವಿಶ್ವವಿದ್ಯಾಲಯದ ವಿರೋಧಕ್ಕಿರುವ ಸೈದ್ದಾಂತಿಕ ಕಾರಣಗಳು ಸಂಗೀತ ವಿಶ್ವವಿದ್ಯಾಲಯದ ವಿರೋಧಕ್ಕೆ ಪೂರ್ಣಪ್ರಮಾಣದಲ್ಲಿ ಇಲ್ಲದೆ ಇರಬಹುದು. ಪ್ರಾಯೋಗಿಕವಾಗಿ ಯೋಚಿಸಿದರೆ, ಪ್ರತಿ ವಿಷಯಕ್ಕೊಂದು ವಿಶ್ವವಿದ್ಯಾಲಯ ಮಾಡುತ್ತ ಹೊರಡುವುದು ಸರಿಯಲ್ಲ ಎನ್ನುವುದು ನನ್ನ ಅಭಿಪ್ರಾಯ. ಅಸಂಖ್ಯಾತ ಜನಸಮುದಾಯ ಮತ್ತು ಸಂಸ್ಕೃತಿಗಳನ್ನು ಒಳ ಗೊಳ್ಳುವ ‘ಜಾನಪದ’ ವಿಷಯವು ವಿಶ್ವವಿದ್ಯಾಲಯದ ವ್ಯಾಪ್ತಿ ಪಡೆಯುವ ಬಗ್ಗೆ ಚಿಂತಿಸಬಹುದು. ಉಳಿದ ಯಾವುದೇ ವಿಷಯಗಳಿಗೆ ವಿಶ್ವವಿದ್ಯಾಲಯದ ವ್ಯಾಪ್ತಿಯ ಅನಿವಾರ್ಯತೆ ಕಾಣುವುದಿಲ್ಲ.

ಕಡೆಗೆ ನಾನು ಹೇಳುವುದಿಷ್ಟು : ಸಂಸ್ಕೃತ ವಿಶ್ವವಿದ್ಯಾಲಯದ ಸ್ಥಾಪನೆಯನ್ನು ನಾನು ವಿರೋಧಿಸುವುದು ನನ್ನ ನಂಬಿಕೆಯ ಸೈದ್ಧಾಂತಿಕ ಕಾರಣಗಳಿಗಾಗಿ, ವಿಶ್ವವಿದ್ಯಾಲಯ ಸ್ಥಾಪನೆಯ ಹಿಂದೆ ಕೆಲಸ ಮಾಡುತ್ತಿರುವ ಪ್ರತಿಗಾಮಿ ಹಾಗೂ ಸ್ಥಗಿತ ಸಂಸ್ಕೃತಿಯ ಕಾರಣಕ್ಕಾಗಿ. ಒಟ್ಟಿನಲ್ಲಿ, ಸಂಸ್ಕೃತ ವಿಶ್ವವಿದ್ಯಾಲಯದ ಸ್ಥಾಪನೆಯು ಪುರೋಹಿತಶಾಹಿಯ ಪುನರುಜ್ಜಿವನಕ್ಕೆ ಪೂರಕ ವಾಗುತ್ತದೆ; (ಎಲ್ಲ ಜಾತಿ-ವರ್ಗಗಳನ್ನು ಒಳಗೊಳ್ಳುವ) ‘ಹೊಸ ವರ್ಣಾಶ್ರಮ ವಲಯ’ವೊಂದು ನೆಲೆಯೂರುತ್ತದೆ. ಹಳೆಯ ವರ್ಣಾಶ್ರಮ ನಿಯಂತ್ರಿಸಬಯಸುತ್ತದೆ. ಆದ್ದರಿಂದ ಹೊಸದೂ ಹಳೆಯದೇ ಆಗಬಹುದು; ಎರಡೂ ಒಂದಾಗಬಹುದು.

(ಕರ್ನಾಟಕದ ಬಿ.ಜೆ.ಪಿ. ಸರ್ಕಾರವು ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾದ್ದನ್ನು ಸಮರ್ಥಿಸಿ ಡಾ. ಎಸ್.ಎಲ್. ಭೈರಪ್ಪನವರು ಬರೆದ ದೀರ್ಘ ಲೇಖನದ ಹಿನ್ನೆಲೆಯಲ್ಲಿ ಬರೆದ ಬರಹ – ಆಗಸ್ಟ್ ೨೦೦೯ – ವಿಜಯಕರ್ನಾಟಕ)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೬
Next post ಶಿಸ್ತು

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…