ದಿವ್ಯ ಕರುಣೆಯ ಹೂವು ‘ಪರಿಮಳೆ’!
ಘಮಘಮಿಸುತೆಯ್ತಂದೆ ಮಂಗಳೆ ಮುದ್ದು ಮಗಳೇ!
ಹೂವುಹೂವಿನ ಕಂಪುಗಾಣದೆ
ಕ೦ದಿದೀ ಮನೆಯಂಗಳದಿ ನೀ ತುಂಬಿ ತುಳ್ಕಿದೆ. ೧
ನೆನೆಯ ಬಾರದ ಘೋರದುಃಖದಿ
ಭಯವು ಬಲಿತಿರೆ ಆಶೆಯೆಲ್ಲವು ಕುಸಿದು ಕಂದರದಿ
ಬಾಳಹಂದರ ಬಾಡಲಿಹುದೆನೆ
ಕೊರಗೆ ಜೀವವು ಬಂದ ಬರವೇನದುವೆ ನನೆಕೊನೆ. ೨
ನಿನ್ನ ಬರವಿನ ಕಂಪು ಕಡಲೊಳು
ಮುಳುಗಿಯೆದ್ದಿತು ಜೀವವರಳಿತು ನಲಿದು ತನ್ನೊಳು
ಹಳೆಯ ನೋವುಗಳೆಲ್ಲ ತಿಳಿಯದೆ
ಮುಳುಗಿ ಹೋದೊಲು ಮನೆಯು ಪರಿಮಳಮಯವೆ ಆಗಿದೆ. ೩
ಬಾಳ ಹೊಸ ದರುಶನವೆ ಇಳಿದೊಲು
ಕಾಳಕತ್ತಲೆಯಲ್ಲಿ ಝಗ್ಗನೆ ಜೋತಿ ಸುಳಿದೊಲು
ಬಂದೆ ನೀ ಭಯವೆಲ್ಲವೋಡಿಸಿ
ಪ್ರೀತಿ ವಿಶ್ವಾಸಗಳ ಸುತ್ತಲು ಗಾಳಿಯಾಡಿಸಿ. ೪
ನಿನ್ನ ಬೆಳಿಗೆಯ ಆಟಪಾಟವು
ಕಣ್ಣನೋಟವು ಮೊದಲ ತೊದಲಿಕೆ ಮೈಯ ಮಾಟವು
ಎಲ್ಲವೂ ಹಿರಿಸುಖದ ಸುಗ್ಗಿಯು
ಊಡಿದಂತೆಯೆ ನಿಚ್ಚ ಹೊಸತಾದಮೃತದೂಟವು. ೫
ನಿನ್ನ ತುಟಿಯಲಿ ಮಿನುಗುವಾ ನಗೆ
ನಮ್ಮ ಬಗೆಗತ್ತಲೆಯನೊಮ್ಮೆಲೆ ಚೆದರಿಸುವೊಸಗೆ
ನಮ್ಮ ಕಂಡೊಡ ನೀನು ಸಾಗರ-
ಬೀಳುತೈತರೆ ತೆರೆವುದೆದೆಯಲಿ ಪ್ರೀತಿಸಾಗರ. ೬
ಬೆಳೆವ ನಿನ್ನಯ ಅಳುವ ದನಿಯೂ
ಅಮರಲೋಕದ ಗಾನವೈಸಿರಿಗಿಂತ ಸವಿಯೂ
ನೀನು ನೆಲದಲಿ ಹೊಟ್ಟೆ ಸರಿಯುತ
ಹೊಸೆದರೇಕದೊ ಹರುಷ ನೆಗೆವುದು ಮುಗಿಲಸಾರುತ. ೭
ನಿನ್ನ ಸಲುವಾಗೆಮ್ಮ ಸೇವೆಯು
ನಿತ್ಯ ಮೀಸಲು ಯಾವ ತ್ಯಾಗಕು ಸಿದ್ಧ ಜೀವವು
ಪಡುವ ಭವಣಿಯೆ ನಮ್ಮ ಭಕುತಿಯ
ನಿನ್ನಯಪುಗೆಯೊಂದೆ ಸಾಲದೆ ಅದಕೆ ಮುಕುತಿಯು. ೮
ನಿನ್ನ ಸಂನಿಧಿಸುಖವನುಣ್ಣುತ
ದುಕ್ಕಸವಿಯನು ನಾವು ಸವಿದೆವು ಇಂದು ಹಣ್ಣುತ
ದೈವ ನೀಡಿದ ಮುನ್ನ ಕೊರಗಿಗೆ
ಹೇಗೊ ಈಗಳೆ ರುಚಿಯು ದೊರೆಯಿತು ಶುಚಿಯ ಬರವಿಗೆ. ೯
ನಮ್ಮ ಬಾಳಿನ ಕಲ್ಪಲತೆಯೇ!
ಒಳಗು ಹೊರಗನು ತುಂಬಿ ಸೂಸುವ ಕಂಪಿನೊರತೆಯೆ!
ಬಾಳು ತುಂಬಿತು ತಿಳಿವು ಮಾಗಿತು
ಬಂದುದೆಲ್ಲವು ಕರುಣೆ ಕಾಣಿಕೆಯೆಂದು ಕೂಗಿತು-
ಜೀವ ಸಾಗಿತು. ೧೦
*****








