ಸಾಗರದವರ ಮಂಗಳೂರಿನ ಬಸ್ಸು ಸಾಯನ್ ಚೌಕವನ್ನು ಬಿಟ್ಟು ಪೂನಾದ ದಾರಿಯನ್ನು ಹಿಡಿಯಿತು. ವಾಸಿಯನ್ನು ಜೋಡಿಸುವ ಬೃಹತ್ ಸೇತುವೆ ಈಚೆಗೆ ಕಂಭಗಳಲ್ಲಿ ಬಿರುಕುಬಿಟ್ಟುದರಿಂದ ರಪೇರಿ ಕೆಲಸ ಜಾರಿಯಲ್ಲಿತ್ತು. ಚೆಂಬೂರಿನಿಂದ ಗಸ್ತು ಹಾಕಿ ಬಸ್ ವಾಸಿಯ ಮಾರ್ಗವನ್ನು ಹಿಡಿದಾಗ ಪದ್ದಣ್ಣ ಕಾಲು ಚೆಲ್ಲಿ ಕುಳಿತುಕೊಳ್ಳತೊಡಗಿದ. ಅವನ ಜೊತೆಗೆ ಅವನ ಹತ್ತಿರದವರು ಯಾರೂ ಇರಲಿಲ್ಲವೆಂದು ಬೇಸರವಾಯಿತು. ಇಂಥಲ್ಲಿ ಅವನ ಗೆಳೆಯ ಮಾಯೆಕರ ಬಸ್ ಬಿಡುವ ಅರ್ಧಗಂಟೆ ಮೊದಲೆ ಬಂದು ಹೊರಡುವವರೆಗೂ ಜೊತೆಗಿದ್ದು ಅದು ಇದು ಮಾತಾಡಿ ಬೇಸರ ಕಳೆದಿದ್ದ.
“ಕೊನೆಗೂ ನೀನು ಮುಂಬಯಿ ಋಣಾ ತೀರಿಸಿ ಹೊರಟೆ’
’ಹೂಂ’
‘ಇಷ್ಟು ಕಾಲ ಇಲ್ಲಿ ಬದುಕು ಕಳೆದು ಇನ್ನು ಊರಿನಲ್ಲಿ ಹೇಗಿರುತ್ತೀಯಾ….’
‘ಇರಬೇಕಲ್ಲ ಹೇಗಾದರೂ, ಇಲ್ಲಿಯಾದರೂ ಇದ್ದು ಮಾಡುವುದೇನು ಪಾಂಡು’.
‘ಇನ್ನು ಮಾಡುವುದೇನು? ಹೇಗಾದರೂ ಸಹಿಸಿ, ನಿರ್ವಹಿಸಿಕೊಂಡಿರುವುದು. ನಿನ್ನ ಮಗಳ ಮನೆಗೆ, ಮಗನ ಮನೆಗೆ ಹೋಗಿ ಬರುತ್ತ….’
‘ಮಗಳ ಬಗ್ಗೆ ನಿನಗೆ ಗೊತ್ತಿದೆಯಲ್ಲ. ಅವಳ ಸುಖ ಜೀವನಕ್ಕೆ ಅಡ್ಡಿ ತರಲು ನನಗೆ ಮನಸ್ಸಿಲ್ಲ. ನಿವೃತ್ತಿಗೊಂಡ ಐದು ವರ್ಷಗಳಲ್ಲಿ ಎರಡು ವರ್ಷ ಅವಳ ಮನೆಯಲ್ಲಿದ್ದೆ. ಈ ಮುದುಕನನ್ನು ಸಾಕಷ್ಟು ಸಹಿಸಿಕೊಂಡಳು. ಮಗನಿಗೂ ಎರಡು-ಮೂರು ವರ್ಷ ತೊಂದರೆ ಕೊಟ್ಟೆ. ಅವನದೂ ಬಡ ಸಂಸಾರ, ಜೀವನದಲ್ಲಿ ಮುಂದೆ ಬರಲಿಲ್ಲ. ನಾನೇ ಹಿಂದೆ ಉಳಿದು ಬಿಟ್ಟೆನಲ್ಲ’ ಪದ್ದಣ್ಣನ ಕಣ್ಣಂಚು ಒದ್ದೆಯಾಗಿತ್ತು. ಮಾಯೆಕರ ಸಂತೈಸಿ ಹೇಳಿದ್ದ- ‘ಮನಸ್ಸಾದಾಗ ಮುಂಬಯಿಗೆ ಬಾ ಪದ್ದು, ನನ್ನಲ್ಲಿಗೆ ಬಾ. ನಾಲ್ಕು ದಿನ ಇದ್ದು ಬೇಸರ ಕಳೆದುಕೊಂಡು ಹೋದರೆ ನನ್ನದು ಗಂಟು ಹೋಗೋದಿಲ್ಲ.’ ಪದ್ದಣ್ಣನ ಹೊಟ್ಟೆ ತಣ್ಣಗಾಗಿತ್ತು, ಈ ಮರಾಠಿ ಮನುಷ್ಯ ಪರಕೀಯನಾದರೂ ಅಷ್ಟು ಕಳಕಳಿ ತೋರಿಸಿದ್ದ. ಅವನು ಮರಾಠಿಯಲ್ಲಿ ಹೇಳಿದ ಮಾತಿನಲ್ಲಿ ಹಲವಾರು ವರ್ಷಗಳ ಸಲಿಗೆ, ಸಹಜೀವನದ ಮಾನವೀಯ ಹಕ್ಕು ಇತ್ತು. ಮಾಯೆಕರ ಮತ್ತು ಅವನ ಮೈತ್ರಿ ಹಳೆಯದು. ಒಟ್ಟಿಗೆ ಒಂದೇ ಚಾಳಿನಲ್ಲಿ ಮನೆಮಾಡಿಕೊಂಡು ವಾಸಿಸುತ್ತಿದ್ದವರು. ಸಮಪ್ರಾಯ, ಸಮಾನಸ್ತರದ ಬದುಕಿನಲ್ಲಿ ಒಬ್ಬರನ್ನೊಬ್ಬರು ಹೆಚ್ಚು ಅರ್ಥಮಾಡಿಕೊಂಡವರು. ಸಂಪತ್ತುಗಳಿಸಿ ಸುಖ ಪಡೆಯಲು ಅವನಿಗೂ ಸಾಧ್ಯವಾಗಲಿಲ್ಲ. ಆದರೂ ಅವನು ತನ್ನ ಮುದುಕಿಯೊಡನೆ, ಮಗ, ಸೊಸೆ, ಮೊಮ್ಮಕ್ಕಳೊಡನೆ ಸುಖಿಯಾಗಿದ್ದಾನೆ.
ಕೊನೆಯ ಬಾರಿಗೆ ಅವನ ಕೈಹಿಡಿದು ಕುಲುಕಿದಾಗ ಪದ್ದಣ್ಣ ಅತ್ತಿದ್ದ. ಬಿಗಿಯಾದ ಅಪ್ಪುಗೆಯ ಹಿಂದೆ ‘ಇಷ್ಟು ಕಾಲವನ್ನು ಇಲ್ಲಿ ಕಳೆದು ಈ ಇಳಿವಯಸ್ಸಿನಲ್ಲಿ ಬಿಟ್ಟು ಹೋಗುತ್ತಿಯಾ. ಸಾಯಲಿಕ್ಕೆ….’ ಎಂಬ ಕನಿಕರ ಉಸಿರಾಗಿ ಹೊರಟ್ಟಿದ್ದನ್ನು ಪದ್ದಣ್ಣ ಗಮನಿಸಿದ್ದ. ಅರ್ಥಪೂರ್ಣ ಅನಿಸಿಕೆ, ಸುಮಾರು ೫೦ ವರ್ಷಗಳನ್ನು ಇಲ್ಲಿ ಕಳೆದು ಇಲ್ಲಿಯ ಎಲ್ಲವನ್ನೂ ಬಿಟ್ಟು ಊರಿಗೆ ಮರಳಿ ಹೊರಟದ್ದು ಸಾಯಲಿಕ್ಕಲ್ಲದೆ ಮತ್ತೇನು ಎನಿಸಿತು ಅವನಿಗೆ, ಹಾಗೆ ಅವನಿಲ್ಲಿ ಉಳಿಸಿಕೊಂಡದ್ದು, ಏನೂ ಇಲ್ಲ. ಈ ನಗರದ ಕುರಿತಾದ ಹಲವು ವರ್ಷಗಳ ಘನಿಷ್ಟತೆಯಿಂದ ಬೆಳೆದ ಮಾಯಾ ಮೋಹವಲ್ಲದೆ ಒಂದು ಸಣ್ಣ ಬಿಡಾರವನ್ನೂ ಸ್ವಂತಕ್ಕೆ ಮಾಡಿಕೊಳ್ಳುವುದು ಅವನಿಂದ ಸಾಧ್ಯವಾಗಲಿಲ್ಲ. ತನಗೆಂದು ಮಾಡಿದ್ದನ್ನು ಅವಳು ಸತ್ತಮೇಲೆ ಮಗನ ಹೆಸರಿಗೆ ಮಾಡಿಕೊಟ್ಟಿದ್ದ. ಮನೆಮಾಡಿ ಸಂಸಾರ ಕಟ್ಟಿಕೊಳ್ಳುವಷ್ಟು ತನ್ನ ಹುಡುಗನಲ್ಲಿ ಕ್ಷಮತೆ ಬೆಳೆಯಲಿಲ್ಲವೆಂದು ದುಃಖ ಪಟ್ಟ. ಆದರೆ ಅವನು ತನ್ನ ಅಯೋಗ್ಯತೆಗೆ ತಂದೆಯೇ ಕಾರಣವೆಂದು ಸಾರಿ ಹೇಳಿದನಲ್ಲ. ನಿನ್ನೆ ರಾತ್ರಿಯೂ ಸಹ ‘ಒಬ್ಬ ಆಫೀಸ ಕ್ಲಾರ್ಕು ಆಗುವಷ್ಟು ಯೋಗ್ಯತೆ ಕೊಡಲು ನಿನಗಾಗಲಿಲ್ಲ. ನಿನ್ನ ಹಾಗೆಯೆ ನಾನೂ ಕಚೇರಿಯ ಸಿಪಾಯಿ ಆಗಿಯೆ ರಿಟಾಯರಾಗಬೇಕು. ಒಂದು ಬ್ಯಾಂಕ್ ಅಥವಾ ಒಳ್ಳೇ ಕಂಪನಿಯಲ್ಲಿ ನೌಕರಿ ಕೊಡಿಸಲು ನಿನಗಾಗಲಿಲ್ಲ. ಈಗ ಬರುವ ಈ ಸಂಬಳದಲ್ಲಿ ನನ್ನ ಮೂರು ಮಕ್ಕಳನ್ನು ಕರ್ಮಕ್ಕೆ ಅದೂ ಹೆಣ್ಣೆ-ನಿನ್ನನ್ನು ಹೇಗೆ ಸಾಕುವುದು’ ಮುಖಕ್ಕೆ ಹೊಡೆದು ಹೇಳಿದ ಮಾತು. ಆಟ ಓಟದಲ್ಲಿ ಮುಂದೆ ಬಂದು ಒಂದು ಒಳ್ಳೆಯ ನೌಕರಿಯನ್ನು ಸಂಪಾದಿಸಿಕೊಳ್ಳುವ ಯೋಗ್ಯತೆಯಿಲ್ಲದವನು ತನ್ನ ವೈಫಲ್ಯಕ್ಕೆ ತಂದೆಯನ್ನು ಹಳಿಯುತ್ತಾನೆ.
“ಊರಿನಲ್ಲಿ ಹೇಗೂ ಆ ಗುಡಿಸಲು ಇದೆ. ಇನ್ನು ನೀನು ಅಲ್ಲೇ ಇದ್ದು ಬಿಡಪ್ಪ. ನಿನ್ನ ಖರ್ಚಿಗೆ ಏನಾದರೂ ಕಳಿಸಿ ಕೊಡುತ್ತೇನೆ. ನಮ್ಮಂಥ ಕುಟುಂಬಕ್ಕೆ ಮುಂಬೈಯಲ್ಲಿ ಯಾವ ಭವಿಷ್ಯವೂ ಇಲ್ಲ. ಈ ಮಕ್ಕಳು ಹುಟ್ಟುವ ಮೊದಲೇ ಏನಾದರೂ ಮಾಡಬೇಕಿತ್ತು. ದುಬಾಯಿಗಾದರೂ ಹೋಗಿ ಹಣ ಗಳಿಸಬೇಕಿತ್ತು. ಇನ್ನು ಸಾಧ್ಯವಿಲ್ಲ. ನೀನೇ ಏನಾದರೂ ಮಾಡಬೇಕಿತ್ತು. ಆಗ ಅವಕಾಶಗಳಿದ್ದವು. ಒಳ್ಳೇ ನೌಕರಿ ಸುಲಭವಾಗಿ ಸಿಗುತ್ತಿತ್ತು. ಈ ಪಾರ್ಸಿ ಮುದುಕರ ಜೊತೆಗೆ ನೀನೂ ಮುದುಕನಾದೆ. ನಿನಗೆ ಭವಿಷ್ಯದ್ದು ಹೊಳೆಯಲಿಲ್ಲ” ಪದ್ದಣ್ಣ ಕಾಲು ಎಳೆದು ಕುಳಿತುಕೊಂಡ. ಮಗನ ಮಾತುಗಳು ಈಗ ಅರ್ಥವಾಗತೊಡಗಿದವು. ಬಸ್ಸು ರಭಸದಿಂದ ಓಡುತ್ತಿತ್ತು. ಪ್ರತಿಯೊಬ್ಬನು ರಾತ್ರಿಯ ಊಟದ ನೆನಪಿನಲ್ಲಿ ಆಮೇಲೆ ನಿಶ್ಚಿತವಾಗಿ ಮಲಗುವ ಗುಂಗಿನಲ್ಲಿ ಮೈಮರೆತಂತಿತ್ತು. ಅವನು ತನ್ನ ಪಕ್ಕದ ವ್ಯಕ್ತಿಯನ್ನು ನೋಡಿದ. ಮಧ್ಯವಯಸ್ಸಿನ ಆತ ಅನುಕೂಲವಂತನಂತೆ ಕಂಡ. ಮಾತಾಡಿಸುವ ಚಪಲವಾಯಿತು. ಮನಸ್ಸು ಈಗ ಬೇಡವೆಂದು ಹಿಂದೇಟು ಹಾಕಿತು. ಜೊತೆಗೆ ಸೊಸೆಯ ಮಾತು ನೆನಪಿಗೆ ಬಂದು ಪಾಪ ಪ್ರಜ್ಞೆವುಂಟಾಯಿತು.
“ನಿಮಗೇನು ನೀವು ಮಾತುಬಡಕರು. ಯಾರನ್ನೂ ಮಾತಾಡಿಸುತ್ತೀರಿ ನನ್ನ ತಂದೆಯನ್ನು ಮಾತಿನಲ್ಲೇ ಮರುಳುಗೊಳಿಸಿ ನನ್ನನ್ನು ಈ ನಿಮ್ಮ ಮಗನಿಗೆ ಕಟ್ಟಿಹಾಕಲಿಲ್ಲವೆ…. ಇಲ್ಲವಾದರೆ ಏನಿದೆಯೆಂದು….” ಸೊಸೆಗೆ ಮಾರುತ್ತರ ಕೊಟ್ಟಿರಲಿಲ್ಲ. ಅವಳು ಹೇಳಿದ್ದು ಸರಿಯೆಂದು ಕಂಡಿತ್ತು. ತನ್ನ ಆಯೋಗ್ಯ ಮಗನಿಗೆ ಈ ಹುಡಿಗಿ ಹೆಂಡತಿಯಾಗಿ ಕೆಟ್ಟಂತಾಯಿತು. ಮೂರು ಹೆಣ್ಣು ಮಕ್ಕಳನ್ನು ಈಗಾಗಲೇ ಹೆತ್ತು ಇಳಿದು ಹೋಗಿದ್ದಾಳೆ. ಇನ್ನೊಂದೆರಡು ಹೆತ್ತರೆ ಮುದುಕಿಯಾಗುತ್ತಾಳೆ, ಕಾಯಿಲೆ ಬಂದು ಸಾಯುತ್ತಾಳೆ. ತನ್ನ ಜೀವಿತವಾದರೂ ಏನು? ರಾತ್ರಿ ಶಾಲೆಯಲ್ಲಿ ಪದ್ಮನಾಭನಾಗಿ ಕಲಿಯುವಾಗ ಓಟದ ಗೀಳು ಹಿಡಿದು ಅದೂ ಮುಂದುವರಿಯಲಿಲ್ಲ. ಕಲಿತು ಆಗಬೇಕಾದುದು ಏನಿದೆ ಎಂಬ ತಿಳಿಗೇಡಿತನದಲ್ಲಿಯೆ ತಾನು ಊಟಕ್ಕಿದ್ದ ಖಾನವಳಿಯ ಸೀತಕ್ಕನ ಮಗಳನ್ನು ಮದುವೆಯಾಗಬೇಕಾಯಿತು. ದಂಧೆ ಮಾಡಬೇಕೆಂದು ಎಷ್ಟೋ ಸಾರಿ ಹೊಳೆದರೂ ಮಾಡುವುದಾಗಲಿಲ್ಲ.
ನಿನ್ನೆ ರಾತ್ರಿಯಿಡೀ ನಿದ್ರೆ ಬಂದಿರಲಿಲ್ಲ. ಹೆಂಡತಿಯ ಸಂಬಂಧಿಕರನ್ನು, ತನ್ನ ತಂಗಿಯನ್ನು, ಕೆಲವು ಮಿತ್ರರನ್ನು ಕಂಡು ಮಾತಾಡಿಸಿ ಬಂದು ಸ್ವಲ್ಪವೂ ಮಲಗಲಾಗಲಿಲ್ಲ. ಎಲ್ಲರೂ ಮತ್ತೆ ಮತ್ತೆ ಕಣ್ಣೆದುರು ಬಂದರು. ‘ಹೋಗುತ್ತೀಯಾ ಆಗಲಿ’ ಎಂಬ ಮಾತುಗಳೆಲ್ಲ ಒಟ್ಟುಗೊಂಡು ಬಂದು ಅವನ ಕಿವಿಗೆ ಅಪ್ಪಳಿಸಿದ್ದವು. ‘ಹೋಗ ಬೇಡ ಎಲ್ಲಿಯಾದರೂ ಬಿದ್ದಿರು. ಇಡೀ ಆಯುಷ್ಯ ಇಲ್ಲಿ ಕಳೆದು ಈಗೆಲ್ಲಿಗೆ ಹೋಗುವುದು. ಇನ್ನೆಷ್ಟು ದಿನ…..’ ಎಂಬ ಹಿತದ ಮಾತುಗಳನ್ನಾಡುವ ಧಾರ್ಷ್ಟವನ್ನು ಮಾತ್ರ ಯಾರೂ ತೋರಲಿಲ್ಲ. ಒಳಗೊಳಗೆಯೆ ಕೆಲವರು ‘ಮುದುಕ ಸಾಯಲಿಕ್ಕೆ ಅಲ್ಲಿ ಹೋಗುತ್ತಾನೆ’ ಎಂದು ಅನುಕಂಪ ತೋರಿಸಿರಬಹುದು. ಆದರೆ ಮಾಯೆಕರ ಮಾತ್ರ-‘ಅಂತೂ ನೀನೋ ತೀರ್ಮಾನಿಸಿಯಾಯಿತು. ನಾನು ಈಗಲೂ ಹೇಳುತ್ತೇನೆ ಉಳಿದು ಬಿಡು, ಏನಾದರೂ ಆಗುತ್ತೆ’ ಎಂದಿದ್ದ.
‘ಆಗುವುದಿಲ್ಲ ಪಾಂಡು, ತೀರ್ಮಾನ ನನ್ನದಲ್ಲ. ಮಗನದ್ದು, ಸೊಸೆಯದ್ದು, ತಂಗಿಯದ್ದು ಸಹ. ದಿನವನ್ನಾದರೂ ಮೈದಾನದಲ್ಲಿ ಕಳೆಯಬಹುದು ರಾತ್ರಿಯನ್ನೆಲ್ಲ ಹೇಗೆ ಕಳೆಯುವುದು, ಅದೂ ಸಹ ಎಷ್ಟು ಕಾಲ….’
‘ನೀನು ಹೇಳುವುದು ಸರಿ, ಮುದುಕರು ಪ್ರಾಯಹೋದಂತೆ ಯಾರಿಗೂ ಬೇಡ, ಎಲ್ಲರಿಗೂ ರಗಳೆಯಾಗುತ್ತಾರೆ. ಅವರ ಸುಖ-ಸಮಾಧಾನಕ್ಕೆ ಅಡ್ಡಿಯಾಗುತ್ತಾರೆ. ಹಿರಿಯರ ಬಗೆಗಿದ್ದ ಆದರ-ಸತ್ಕಾರ ಈಗ ಇಲ್ಲ, ಮುಂಬಯಿಯ ಈ ಒಂಟಿ ಕುಟುಂಬ ಬೆಳೆದ ಮೇಲಂತೂ.’
‘ನಿಮ್ಮ ಮರಾಠಿ ಕುಟುಂಬ ನಮ್ಮ ಹಾಗಿಲ್ಲ. ನಿಮ್ಮಲ್ಲಿ ಮುದುಕರು ಎಲ್ಲರೊಡನೆ ಸೇರಿಕೊಂಡಿರುತ್ತಾರೆ.’
‘ಒಂದು ಲೆಕ್ಕದಲ್ಲಿ ನೀನು ಹೇಳುವುದು ಸರಿ. ಪದ್ದು, ಇನ್ನೊಂದು ಲೆಕ್ಕದಲ್ಲಿ ಸರಿಯಿಲ್ಲ. ಈಗೀಗ ನಮ್ಮ ಮಕ್ಕಳಿಗೂ ಮುದುಕರು ಬೇಡವಾಗಿದ್ದಾರೆ. ನಾವು ಮಾತ್ರ ಅವರೊಡನೆ ಜಗಳವಾಡಿಕೊಂಡಾದರೂ ಇದ್ದು ಬಿಡುತ್ತೇವೆ.’
ಹಾಸಿಗೆಯಲ್ಲಿ ಬಹಳ ರಾತ್ರಿಯವರೆಗೆ ಹೊರಳಾಡಿದ, ದಿನವಿಡೀ ನಡೆದ ಮಾತುಕತೆಗಳು ನೆನಪಿಗೆ ಬಂದಿದ್ದವು. ಊಟದ ಹೊತ್ತಿನಲ್ಲಿ ಸೊಸೆ ಸರಳವಾಗಿ ಹೇಳಿದ್ದಳು ‘ಚಿಂತಿಸಬೇಡಿ ಮಾವ-ನಮಗೆ ಹೊರೆಯೆಂದು ನಿಮ್ಮನ್ನು ಕಳಿಸುವುದಿಲ್ಲ. ಇಲ್ಲಿಯಾದರೂ ಕುಳಿತು ಏನು ಮಾಡುತ್ತೀರಾ ಎಂದು. ನಾವು ಹಣ ಕಳಿಸುತ್ತೇವೆ.’
ಹಣ! ಅವನಿಗೆ ನಗು ಬಂದಿತ್ತು. ಇವರ ಹಣವನ್ನು ನಂಬಿ ತಾನು ಬದುಕಬೇಕೆ. ಇದ್ದ ಹಣ ಮುಗಿದಿತ್ತು. ನೌಕರಿಯಿಂದ ಬಿಡುಗಡೆಯಾದಾಗ ಸಿಕ್ಕಿದ ಅಲ್ಪ ಹಣ ಮಗನ ಮೂರನೆಯ ಮಗಳ ಹೆರಿಗೆಯ ಸಂದರ್ಭದಲ್ಲಿ ಮತ್ತು ಈ ನಾಲೈದು ವರ್ಷಗಳ ಬೇಕಾರಿಯಲ್ಲಿ ಖರ್ಚಾಗಿತ್ತು. ಈಗ ಎಲ್ಲರೂ ಸೇರಿಸಿ ಕೊಟ್ಟ ಹತ್ತು ಸಾವಿರದಷ್ಟು ಹಣವನ್ನು ಎಂದಿನತನಕ ಖರ್ಚುಮಾಡಬಹುದು. ಮುಪ್ಪಿಗಾಗಿ ಹಣ ಉಳಿಸಬೇಕಿತ್ತು. ಊರ ಮನೆ ಮಠವನ್ನು ಸುಧಾರಿಸಬೇಕಿತ್ತು. ಬೀಡಿಗಾಗಿ, ಚಾ ಕ್ಕಾಗಿ, ಕೈಯೊಡ್ಡುವ ಪ್ರಸಂಗ ಬಂದರೆ ಎಂಬ ಭಯವಾಗಿತ್ತು. ಒಮ್ಮೆಲೆ ಅದರಿಂದ ದಿಗ್ಗನೆ ಎದ್ದು ಕುಳಿತು ಬೀಡಿ ಹೊತ್ತಿಸಿದ್ದ. “ಬೇಡ, ಊರು ಬೇಡ, ಸತ್ತರೆ ಆದಷ್ಟು ಬೇಗ ಇಲ್ಲಿಯೆ ಸಾಯುವುದು, ನಾಳೆ ಮಗನಿಗೆ ಹೇಳಬೇಕು. ಯಾರಿಂದಲಾದರೂ ಹೇಳಿಸಬೇಕು” ಎಂದು ಪುಸ್ ಪುಸ್ ಹೊಗೆ ಬಿಟ್ಟಿದ್ದ. ಆನಂತರ ಯಾವಾಗ ನಿದ್ದೆ ಹತ್ತಿತ್ತೊ ಗೊತ್ತಾಗಿರಲಿಲ್ಲ. ಬೆಳಗಾತ ಎಲ್ಲರೂ ದಡಬಡಿಸಿ ಎಬ್ಬಿಸಿದ್ದರು. ಮಗ ಟ್ಯಾಕ್ಸಿಗೆ ಸಾಮಾನು ಹಾಕಿ “ಹೋಗಪ್ಪ” ಎಂದು ಒಬ್ಬನನ್ನೆ ಕಳಿಸಿದ್ದ.
ರಾತ್ರಿಯಾಗುತ್ತಲೂ ಸೀಟಿನಲ್ಲಿ ಹಾಯಾಗಿ ಒರಗಿ ನಿದ್ರಿಸಬೇಕು. ಲೋಕದ ಜಂಜಡ ಮುಗಿಯದ ಯೋಚನೆಗಳನ್ನು ಹರಡುವ ಕತ್ತಲಿನಲ್ಲಿ ಹುದುಗಿಸಬೇಕು. ನಾಳೆ ಬೆಳಿಗ್ಗೆಯೆ ಕಣ್ಣು ತೆರೆದು ದೂರದ ಊರುಗಳ ಹೊಂಗಿರಣಗಳನ್ನು ನೋಡಿ ಭೂತಕಾಲವನ್ನು ಸಂಪೂರ್ಣ ಮರೆಯಬೇಕು ಎಂದು ನಿರ್ಣಯಿಸಿದ್ದ. ಪದ್ದಣ್ಣನಿಗೆ ಕಣ್ಣು ಭಾರವೇ ಆಗಲಿಲ್ಲ. ಮನಸ್ಸು ಮತ್ತೆ ಮತ್ತೆ “ಮುಂಬೈಯನ್ನು ಬಿಡಲೇ ಬಾರದಿತ್ತು” ಎನ್ನುತ್ತಿತ್ತು. ಮುದುಕರಿಗಾಗಿ ಸರಕಾರ ಏನೋ ಮಾಡುತ್ತಿದೆಯಂತೆ. ಅದರ ವಿವರಗಳನ್ನಾದರೂ ಸಂಗ್ರಹಿಸಿ ಮುಂದೆ ಬದುಕುವ ಉಪಾಯವನ್ನು ಹುಡುಕಬಹುದಿತ್ತು. ಆದರೆ ನಮ್ಮ ಮಕ್ಕಳು ಮಾತ್ರ ಹೀಗೇಕೆ… ಮುದುಕನಾದ ಮೇಲೆ, ಮನುಷ್ಯನ ಶರೀರದ ಶಕ್ತಿ ಸಂಪಾದನೆಗಳು ಖಾಲಿಯಾದ ಮೇಲೆ ಅವನನ್ನು ನೋಡಿಕೊಳ್ಳುವ ಧರ್ಮ ಜವಾಬ್ದಾರಿ ಮಕ್ಕಳದಲ್ಲವೆ…. ಬದಲಾಗಿ ಅವರು ಅಡ್ಡಿ ಆತಂಕ ಎಂದು ತಿಳಿದರೆ ಮನುಷ್ಯ ನಿವೃತ್ತಿಯೊಂದಿಗೆಯೆ ಸಾಯಬೇಕು. ಎಷ್ಟೋ ಕಂಪನಿಗಳು, ಸರಕಾರಗಳು ನಿವೃತ್ತಿ ಹಣವನ್ನು ಕೊಡುತ್ತವೆ. ಆದರೆ ಚಿಕ್ಕ ಖಾಸಗೀ ಕಂಪನಿಗಳಲ್ಲಿ ಜೀವನವಿಡೀ ದುಡಿದು ಬಿಟ್ಟು ಹೋಗುವ ತನ್ನಂಥವರ ಭವಿಷ್ಯವೇನು? ನಮ್ಮ ಭಾವನೆ, ಮನಸ್ಸುಗಳು ಪ್ರಾಯದೊಂದಿಗೆ ಮುದಿಗೊಳ್ಳುವುದಿಲ್ಲ. ನಾಶ ಹೊಂದುವುದಿಲ್ಲ ಎನ್ನುವುದರ ಕಲ್ಪನೆ ಈ ಮಕ್ಕಳಿಗೆ ಬರುವುದೆಂದು… ಒಂದು ಲೆಕ್ಕದಲ್ಲಿ ತಾನು ಹೊರಟಿದ್ದೆ ಸರಿಯೆಂದು ತೋರಿತು. ಇದ್ದಷ್ಟನ್ನು ಖರ್ಚು ಮಾಡುತ್ತ ಮಗ ಇಲ್ಲವೆ ಇತರರಿಂದ ಹಣ ಬಂದರೆ ಏನಾದರೂ ಮಾಡಿಕೊಂಡು ಇರಬಹುದು. ಸೊಸೆಯ ನಿಷ್ಠುರ ಮಾತುಗಳಿಲ್ಲ, ಮಗನ ಅಸಹಾಯ ನಿಟ್ಟುಸಿರಿಲ್ಲ.
ಆದರೆ ಊರಿನಲ್ಲಿಯೂ ಒಂದು ನೆಲೆ ಸಿಗುತ್ತೋ ಇಲ್ಲವೊ. ಇದ್ದ ಮನೆಯನ್ನು ಗಟ್ಟಿ ಮಾಡಲಾಗಲಿಲ್ಲ. ಎಲ್ಲರೂ ಬಿಟ್ಟು ಹೋದ ಹಾಳು ಮನೆ. ಈಗ ಎಪ್ಪತ್ತು ಸೆಂಟಿನ ಆ ಜಾಗ ಮತ್ತು ಮನೆಯನ್ನು ಗಂಡ ಸತ್ತ ತಂಗಿ ಅವಳ ಹೆಸರಿನಲ್ಲಿ ಮಾಡಿಕೊಂಡಿದ್ದಾಳೆ. ಅವಳ ದರ್ಬಾರು ಏನೆಂದು ಈಗ ನಾಲ್ಕೈದು ವರ್ಷಗಳಿಂದ ತಿಳಿದಿಲ್ಲ. ಮೊದಲು ಅವಳ ಶೀಲಕ್ಕೆ ಗಂಡ ಅವಳನ್ನು ಬಿಟ್ಟಿದ್ದ. ನಿವೃತ್ತಿಯಾದ ಮೊದಲಿಗೆ ಊರಿಗೆ ಬಂದಿದ್ದಾಗ ಅವಳು ಆ ಜಾಗ-ಮನೆಯನ್ನು ತನ್ನ ಹೆಸರಿಗೆ ಮಾಡಿಕೊಂಡದ್ದು ತಿಳಿದಿತ್ತು. ಈಗ ಅಕಸ್ಮಾತ್ ತಾನು ಅಲ್ಲಿಯೆ ಇರಲು ಹೋದಾಗ ಅವಳ ಪ್ರತಿಕ್ರಿಯೆ ಯಾವ ರೀತಿಯದಿರಬಹುದೆಂದು ಕಲ್ಪಿಸಲಾರದೆ ಹೆದರಿಕೆಯಾಗಿ ಸೀಟಿನಲ್ಲಿ ಕುಗ್ಗಿದ. ಅವಳ ಸ್ವಭಾವವೂ ಸಿಟ್ಟಿನದು. ಹಿಂದೊಮ್ಮೆ ಅವಳ ಸ್ಟೇಚ್ಛೆಗೆ ಬುದ್ದಿ ಹೇಳುವಾಗ ‘ಯಾರೋ ನಾಯಿ ನೀನು ನನಗೆ ವಿವೇಕ ಹೇಳುವವ’ ಎಂದು ಕತ್ತಿ ಎತ್ತಿದ್ದು ಮರೆಯಲು ಸಾಧ್ಯವೇ? ಅವಳ ಮಗ ಈಗ ಊರ ಬಸ್ಸಿನ ಡ್ರೈವರ್ ಸಾಕಷ್ಟು ಪೋಲಿಯಂತೆ, ಈ ಮುದುಕನನ್ನು ಸಹಿಸಿ ಕೊಂಡಾರೆ ಅವರು.
ಬಸ್ ಎಲ್ಲಿಯೋ ನಿಂತಿತು. ಪನವೆಲ್ ಇರಬೇಕು. ಸಂಜೆ ಕತ್ತಲು ಕವಿಯುತ್ತಿತ್ತು. ಎಲ್ಲರೂ ಇಳಿದು ಚಾಕ್ಕೆ ಹೋದರು. ಪದ್ದಣ್ಣನಿಗೆ ಮನಸ್ಸಾಗಲಿಲ್ಲ. ಸ್ವಲ್ಪ ಹೊತ್ತು ಅಲ್ಲಿಯೇ ಕುಳಿತು ಮೂಗಿಗೆ ಒಂದೆರಡು ಬಾರಿ ನಸ್ಯ ಸೇರಿಸಿಕೊಂಡ. ಆ ಮೇಲೆ ನಿಧಾನವಾಗಿ ಇಳಿದು ಚಾ ಕುಡಿಯಲು ಹೋದ. ಚಾ ಕುಡಿದು ಬಂದು ಹಾಯಾಗಿ ಮಲಗಬೇಕು, ನಾಳೆ ಉಡುಪಿಯಲ್ಲಿ ಎಚ್ಚರವಾದರೂ ಸರಿಯೆ.
ಸ್ವಲ್ಪ ಹೊತ್ತಿನಲ್ಲಿ ಬಸ್ ಮತ್ತೆ ಹೊರಡಿತು, ಪದ್ದಣ್ಣ ಸೀಟಿಗೆ ಕುಸಿದು ಕುಳಿತು ಒರಗಿದ. ಕಾಲುಗಳನ್ನು ಆದಷ್ಟು ಎದುರು ಸೀಟಿನ ಅಡಿಗೆ ಸೇರಿಸಿದ. ಬಸ್ ದೂರ ಓಡುತ್ತಿದ್ದಂತೆ, ಒಳಗಿನ ಬೆಳಕು ಆರಿತು. ಒಳಗೆಲ್ಲ ಕತ್ತಲು ಕಪ್ಪು ಹಾವಿನಂತೆ ಹರಿದು ಬಂತು. ದಿಗಿಲುಗೊಂಡ ಪದ್ದಣ್ಣ ಕಣ್ಣು ಮುಚ್ಚಿಕೊಂಡ; ರೆಪ್ಪೆ ಮುಚ್ಚಿಕೊಂಡರೂ ಕಣ್ಣು ಬೊಂಬೆ ಅರಳಿಕೊಂಡೆಯಿತ್ತು, ಇದನ್ನು ಯಾರಿಂದಲೂ ಮುಚ್ಚಲು ಸಾಧ್ಯವಿಲ್ಲ ಎನ್ನುವಂತೆನಿಸಿತು. ಮುಖಕ್ಕೆ ಬಟ್ಟೆ ಹಾಕಿಕೊಂಡ. ಮುದಿಹೆಬ್ಬಾವು ಏದುತ್ತ ತೆವಳಿಕೊಂಡು ಮೈಮೇಲೆ ಏರುತ್ತಿತ್ತು. ಅದನ್ನು ಜಾಡಿಸಲೆಂದು ಮುಖದ ಬಟ್ಟೆ ಎಳೆದ. ಕಿಟಕಿಯನ್ನು ತುಸು ತೆರೆದು ಹೊರಗೆ ನೋಡಿದ. ಬಸ್ಸು ಖಂಡಾಲಾ ಬೆಟ್ಟವನ್ನು ಮೆಲ್ಲನೆ ಏರುತ್ತಿತ್ತು. ದೂರದಲ್ಲಿ ಬಿಟ್ಟು ಹೋದ ಬಸತಿ ಪ್ರಪಾತದಲ್ಲಿ ಹರಡಿಕೊಂಡಿರುವ ಮಿಣುಕು ಹುಳಗಳಂತೆ ಕಂಡಿತು. ತಾನೂ ಹೀಗೆಯೇ…. ಎಲ್ಲರಿಂದ ದೂರ, ತಾನು ಬೆಳೆದು ಬದುಕಿದ ಸುಂದರ ಮುಂಬಯಿ ನಗರದಿಂದ ದೂರ ಹೋಗಿ ಹೋಗಿ ಕೊನೆಗೆ ಕರಗಿ ಹೋಗುತ್ತೇನೆ.
ಮುಂಬಯಿಯಿಂದ ಊರಿಗೆ, ಊರಿನಿಂದ ಮುಂಬಯಿಗೆ ಈವರೆಗೆ ಅವನು ಎಷ್ಟೋ ಸಲ ಹೋಗಿ ಬಂದಿದ್ದ. ಆಗ ಪ್ರತಿಸಾರಿಯೂ ಪ್ರಯಾಣದ ಉತ್ಸಾಹವಿತ್ತು, ಮನಸ್ಸಿನಲ್ಲಿ ಗೆಲವಿತ್ತು, ಮರಳಿ ಸ್ವಪ್ನನಗರಕ್ಕೆ ಹೋಗುವ ಆತುರವಿತ್ತು. ಪಕ್ಕದಲ್ಲಿ ಅನೇಕ ಸಲ ಹೆಂಡತಿ ಇದ್ದಳು. ಪುಣೈ, ಬೆಳಗಾವಿಯಲ್ಲಿ ಇಳಿದು, ಜೊತೆಯಾಗಿ ಉಂಡು, ಒತ್ತಿ ಕುಳಿತು ಹರಟೆ ಹೊಡೆಯುತ್ತ ಮಾಡಿದ ಪ್ರವಾಸದಲ್ಲಿ ಸುಖವಿತ್ತು. ಆದರೆ ಈ ಪ್ರಯಾಣ ಭಯವನ್ನು ಪದೇಪದೇ ಹುಟ್ಟಿಸುತ್ತಿದೆ. ತಾನು ಹೋಗಿ ಮುಟ್ಟುವೆನೋ, ಇಲ್ಲವೋ ಎಂಬ ಭ್ರಮೆ, ಮರಳಿ ಬರುವ ಮಾತಂತೂ ಇಲ್ಲ. ಹೋಗುವುದು ಎಲ್ಲಿಯೋ ಹೂತು ಹೋಗಲಿಕ್ಕೆ, ಕಾಣೆಯಾಗಲಿಕ್ಕೆ, ನಿರ್ನಾಮವಾಗಲಿಕ್ಕೆ…. ತಾನು ಹುಟ್ಟಿದ್ದೆ ವ್ಯರ್ಥವೆಂದು ಕಂಡಿತು.
ಘಟ್ಟದ ಗಾಳಿ ರುಂಯ್ಯನೆ ಒಳ ಹರಿದು ಅವನನ್ನು ಬಾಚಿಕೊಂಡಿತು. ದೇಹವನ್ನು ಪಕ್ಕಕ್ಕೆ ಸರಿಸಿದಾಗ ಪಕ್ಕದವನು ‘ಬಾಗಿಲು ಹಾಕಿ’ ಎಂದ. ಈ ವರೆಗೂ ಮಾತಾಡದ ವ್ಯಕ್ತಿ. ‘ಎಲ್ಲಿಗೆ ಹೊರಟಿರಿ’ ಎಂದ. ‘ಎಂದು ಮರಳುತ್ತೀರಿ’ ಎಂದ. ಎದ್ದು ಮೇಲಿನ ಚೀಲ ಕೆಳಗಿಳಿಸಿ ಅದರಿಂದ ಏನನ್ನೂ ತೆಗೆಯ ಹತ್ತಿದ. ಕತ್ತಲು-ಬೆಳಕಿನಲ್ಲಿ ಏನೆಂದು ತಿಳಿಯಲಿಲ್ಲ.
“ಚಳಿ ಶುರುವಾಯ್ತು, ಪುಣೆ ಬರುತ್ತಿದೆ” ಎಂದ. “ಪುಣೆಯಲ್ಲಿ ಊಟ ಮಾಡುತ್ತೀರಾ. ಮಾಡಿ….ನಂತರ ಮಲಗಿದರೆ ಬೆಳಗಾತ ಏಳುವದು” ಎಂದ. ಕತ್ತಲಲ್ಲಿ ಅವನ ಮುಖ ನೋಡಿ ಪದ್ದಣ್ಣ ಹೀಗೆ ತುಟಿ ಬಿಡಿಸಿದ, ಸ್ವಲ್ಪ ಹೊತ್ತಿನ ನಂತರ “ನೀವು ಕುಡಿಯುತ್ತಿರಾ… ಸ್ವಲ್ಪ ತಗೊಳಿ” ಎಂದ. ಆಶ್ಚರ್ಯವಾಗಲಿಲ್ಲ. ಇದು ಸಾಮಾನ್ಯ ವಿಷಯ. ತನ್ನ ಪೆಟ್ಟಿಗೆಯಲ್ಲಿಯೂ ಒಂದು ಇಡೀ ಬಾಟ್ಲಿ ಇದೆಯಲ್ಲ. ಊರಲ್ಲಿ ಅದನ್ನು ಸ್ವಲ್ಪ ಸ್ವಲ್ಪವಾಗಿ ತೆಗೆದು ಕೊಳ್ಳಲು ಎಂಟ್ನೂರು ರುಪಾಯಿ ಕೊಟ್ಟು ಕೊಂಡದ್ದು, ಮುಂಬೈಯಲ್ಲಿ ಎಷ್ಟೋ ಕುಡಿದದ್ದಿದೆ, ವಾರಕ್ಕೊಮ್ಮೆಯಾದರೂ, ಹಣ ಇಲ್ಲದಾಗ ದೇಶೀ ಮಾಲು… ಈಗ ಬೇಡ ಎನ್ನಲು ಬಾಯಿ ಬರಲಿಲ್ಲ ಮುದುಕನೆಂದು ಅವನು ಕೊಡುತ್ತಿರುವಾಗ ಕೈಚಾಚಿದ… ಅವನು ನೀಡಿದ ಗ್ಲಾಸಿಗೆ, ಕೊಟ್ಟವನು ಆಗಲೇ ಎರಡು ಮೂರು ಪೆಗ್ ಹೊಟ್ಟೆಯೊಳಗೆ ಇಳಿಸಿದ್ದ.
“ನನಗೆ ಗೋರೆಗಾವಿನಲ್ಲಿ ವೈನ್‌ಶೋಪು ಇದೆ, ಸಾಕಷ್ಟು ದುಡ್ಡು ಮಾಡಿದ್ದೇನೆ. ಒಂದು ಬೀರ್‌ಬಾರೂ ಇದೆ. ಊರಿನಲ್ಲಿ ಆಸ್ತಿಯ ಕುರಿತು ಒಂದು ಕೇಸಿದೆ, ತಮ್ಮ ದುಡುಕಿನಿಂದ ಒಬ್ಬ ಒಕ್ಕಲಿಗೆ ಹೊಡೆದು ಕಾಲು ಮುರಿದಿದ್ದಾನೆ. ಆತ ಆ ತೋಟ ತನ್ನದೆಂದು ಖಟ್ಲೆ ಹೊರಿಸಿದ್ದಾನೆ. ಊರಿನವರು ಸುಮ್ಮನೆ ಇಲ್ಲದ ಲಫ್ಡಮಾಡುತ್ತಾರೆ, ಹೂಂ…..ತಗೊಳ್ಳಿ….. ತಗೊಳ್ಳಿ….’ ಎಂದು ತನ್ನ ಕುರಿತು ಹೇಳುತ್ತ ಮತ್ತೆ ಪದ್ದಣ್ಣನ ಗ್ಲಾಸಿಗೆಸುರಿದ.
ಇಂದಾದರೂ ಚೆನ್ನಾಗಿ ಕುಡಿಯಬೇಕು. ಮನಸ್ಸಿನ ಅಳುವನ್ನು ಬದುಕಿನ ಸೋಲನ್ನು, ಜೊತೆಯಾಗಿ ಅವಸರದಿಂದ ಬಂದು ಈಗ ಗಹಗಹಿಸಿ ಹೆದರಿಸುವ ಮುಪ್ಪಿನ ಭೂತವನ್ನು, ಒಂಟಿತನದ ನೋವನ್ನು; ಈ ಒಳ್ಳೆ ವಿಸ್ಕಿಯ ಗ್ಲಾಸಿನಲ್ಲಿ ಮುಳುಗಿಸಿ ಮೈಮರೆಯಬೇಕು. ಹಿಂದೆ ಎಂದೂ ಕುಡಿಯದಷ್ಟು ಇಂದು ಕುಡಿದು ಎಲ್ಲವನ್ನೂ ಮರೆಯಬೇಕು… ಎಂದು ನಿರ್ಧಾರ ಮಾಡಿದಂತೆ ಪದ್ದಣ್ಣ ತನ್ನ ಗ್ಲಾಸನ್ನು ಮುಂದು ಮಾಡಿದ, ಪಕ್ಕದಲ್ಲಿ ಕುಳಿತ ವ್ಯಕ್ತಿ ಅಪರಿಚಿತನೆಂಬ ಲಜ್ಜೆ ಉಳಿಯಲಿಲ್ಲ. ಕತ್ತಲೆಯಲ್ಲಿ ಆ ಗ್ಲಾಸಿಗೆ ಎಷ್ಟು ಬಿತ್ತೆಂದು ತಿಳಿಯಲಿಲ್ಲ. ಸೆರೆಯ ಅಮಲು ನರಗಳನ್ನು ಸೇರಿಕೊಂಡು ಮೇಲೇರುತ್ತಿತ್ತು. ಮೈ-ಮನ ನಿಧಾನವಾಗಿ ಬಿಸಿಯಾಗಿ, ನಿಯಂತ್ರಣ ಕ್ಷಣ ಕ್ಷಣಕ್ಕೆ ಕಡಿಮೆಯಾದಂತೆನಿಸುತ್ತಿತ್ತು. ತಾನೊಂದು ಬಹುತಾರಾ ಹೊಟೇಲಿನ ವಾತಾನುಕೂಲ ಕೋಣೆಯಲ್ಲಿ ಕುಳಿತು ಬಾಳಿನ ರಸವನ್ನು ಸ್ವಾದಿಸುತ್ತಿದ್ದಂತೆ ಅವನ ಅಬೋಧ ಬುದ್ದಿಗೆ ಅನಿಸಿತು. ಸುಖ-ಭೋಗ ಸಂಪತ್ತುಗಳಿಗೆ ನೆಲೆವೀಡಾದ ಮುಂಬಯಿಯಲ್ಲಿ ತಾನೊಂದು ಹುಳುವಾಗಿ ಬದುಕಿದೆ. ಆಯುಷ್ಯದಲ್ಲಿ ಒಂದು ದಿನವಾದರೂ ದೊಡ್ಡ ಹೊಟೇಲನ್ನು ಹೊಕ್ಕು, ತಿಂದು-ತೇಗಿದ ನೆನಪಾಗುವದಿಲ್ಲ. ಅಷ್ಟು ಹಣವೇ ಕೈಗೆಂದೂ ಬಂದಿರಲಿಲ್ಲ ಬಂದಿದ್ದರೂ ಹಾಗೆ ಖರ್ಚು ಮಾಡಲಿಲ್ಲ. ಅವನಿಗೆ ಹೆಂಡತಿಯ ನೆನಪಾಯಿತು. ಒಳಗೆಯೆ ಅಳು ಬಂದಿತು, ಆ ಜೀವಕ್ಕೆ ಎರಡು ಹೆತ್ತು ಕಾಯಿಲೆ ಬಂತು. ಮುಂದೆ ಜೀವಿಸಲಿಲ್ಲ. ಅವಳು ಇಂದು ಇದ್ದಿದ್ದರೆ ತನ್ನ ಮನೆ ಉಳಿಯುತ್ತಿತ್ತು. ತನ್ನನ್ನು ಈ ಕೊನೆಯ ದಿನಗಳಲ್ಲಿ ಅನಾಥನನ್ನಾಗಿ ಸಾಯಲಿಕ್ಕೆ ಊರಿಗೆ ಕಳಿಸುವ ಧೈರ್ಯ ಮಕ್ಕಳಿಗೆ ಬರುತ್ತಿದ್ದಿಲ್ಲ. ಅವಳಿಗೆ ಯಾವ ಸುಖವೂ ಲಭಿಸಲಿಲ್ಲ, ಮುಗಿಯದ ದಂದುಗದಲ್ಲಿ ಸಂಸಾರದ ನೋವಿಗೆ ಬಲಿಯಾದಳು. ಬದಿಯ ವ್ಯಕ್ತಿ ಕಾಣಿಸಲಿಲ್ಲ. ಬಸ್ ಓಡುವ ಸದ್ದು ಕೇಳಿಸಲಿಲ್ಲ.
ಪದ್ದಣ್ಣ ತೊದಲಿದ, ಅವನ ಮಾತುಗಳು ತುಂಡು ತುಂಡಾಗಿ ಬಂದವು. ಬದಿಯ ವ್ಯಕ್ತಿಗೆ ಅಮಲು ಏರಿತ್ತು. ಹೊಗೆಯಲ್ಲಿ ಮುಳುಗಿದ ಅವನಿಗೆ ಮುದುಕನ ದುಗುಡವೇನೆಂದು ತಿಳಿಯಲು ತಡವಾಗಲಿಲ್ಲ. ಸ್ವಲ್ಪ ಕನಿಕರವೂ ಆಗಿ ಅನುಕಂಪದಿಂದ ಅವನನ್ನೆ ನೋಡಿದ.
‘ಪಾಂಡು, ಊರಿನಲ್ಲಿ ನಾನಿರಲಾರೆ, ಬದುಕಲಾರೆ, ನಿನ್ನಾಣೆ, ಕೂದಲು ಹಣ್ಣಾಗುವವರೆಗೆ ಮುಂಬಯಿಯಲ್ಲಿದ್ದು ಈಗ ಸಾಯಲು ಊರೆ…ಬೇಡ, ಅಲ್ಲಿಯೂ ನನಗೆ ಯಾರೂ ಇಲ್ಲ. ಸತ್ತರೆ ಬೆಂಕಿ ಕೊಡುವವರಿಲ್ಲ. ಇನ್ನೂ ಕೆಲವು ವರ್ಷ ಬದುಕಿದರೆ ಪ್ರತಿದಿನವೂ ಸತ್ತಂತಾಗುವುದು, ಬೇಡ. ಒಂದೆರಡು ವಾರವಿದ್ದು ಮರಳಿ ಬರುತ್ತೇನೆ… ನಿನ್ನಲ್ಲಿಗೆ, ನಿನಗೆ ತೊಂದರೆಯಾದರೆ ಆಗಲಿ. ನೀನೂ ಬೇಡವೆಂದರೆ ವಿಶಾಲವಾದ ಮುಂಬಯಿಯ ಬೀದಿಯಲ್ಲಿ ಬಿದ್ದು ಸಾಯುತ್ತೇನೆ. ಶೀನ ಸತ್ತ ಹಾಗೆ…’ ಎನ್ನುತ್ತ ಪದ್ದಣ್ಣ ಮತ್ತೆ ಭಾವುಕನಾದ. ಪಕ್ಕದ ವ್ಯಕ್ತಿಯ ಮೇಲೆ ಕೈ ಹಾಕಿದ, ಅವನು ತಡೆದು ‘ಪಾಂಡು ಯಾರು’ ಎಂದು. ‘ಮರಾಠಿಯವನು, ನನ್ನ ಹಳೇ ಮಿತ್ರ, ಮುದುಕ,’ ‘ನೀವು ಹೆದರ ಬೇಡಿ, ಒಂದು ಸಣ್ಣ ಪೆಗ್ ತಗೊಳ್ಳಿ’ ಎಂದು ಅವನ ಗ್ಲಾಸಿಗೆ ಸುರಿದ.
“ಪುಣೆ ಬರುತ್ತಿದೆ. ನಿಮಗೆ ತುಂಬ ಹಸಿವಾಗಿರಬಹುದು. ಇದರ ಗುಣವೇ ಹಾಗೆ, ಅಲ್ಲಿ ಸಮಾ ಊಟ ಮಾಡುವ, ಮತ್ತೆ ಬಂದು ನೀವು ಮಲಗಿರಿ, ನಾಳೆ ಎದ್ದರಾಯಿತು. ಆ ಮೇಲೆ ನೋಡುವ, ನಿಮಗೆ ಊರು ಬೇಡವಾದರೆ… ನನ್ನೊಟ್ಟಿಗೆ ಹಿಂದಿರುಗಿ ಬನ್ನಿ…” ಅವನು ಮತ್ತಷ್ಟು ಹೀರುತ್ತ ಈ ಮಾತು ಹೇಳಿದ, ಪುಣೆಯಲ್ಲಿ ಇಬ್ಬರೂ ಉಂಡರು. ಇಬ್ಬರ ಹಣವನ್ನು ಆ ವ್ಯಕ್ತಿಯೇ ತೆತ್ತನು. ಅರ್ಧಗಂಟೆಯ ನಂತರ ಬಸ್ಸು ಬಿಟ್ಟಿತು.
ರಾತ್ರಿಯಿಡೀ, ನಿದ್ದೆ ಬಂದಿತ್ತು. ಬೆಳಗ್ಗೆ ಏಳುವ ಮನಸ್ಸಾಗಲಿಲ್ಲ, ಎಲ್ಲಿಯೊ ಚಾ ಕೆಂದು ನಿಂತ ಬಸ್ಸಿನಿಂದ ಅವನು ಇಳಿಯಲಿಲ್ಲ. ತಲೆ ಭಾರವಾಗಿತ್ತು. ಊರು ಸಮೀಪವಾದಂತೆ ಮುಖದ ಚಿಂತೆ ಹೆಚ್ಚಿತು. ನೇರವಾಗಿ ಮಧ್ಯಾಹ್ನ ಕುಂದಾಪುರದಲ್ಲಿ ಊಟ, ಮತ್ತೆ ಉಪ್ಪೂರ ಅಲ್ಲಿಂದ ಪೆರಂಪಳ್ಳಿ, ಮೈಯಲ್ಲಿ ನಡುಕ ಬೆಳಗಿನಿಂದ ಒಂದೇ ಸವನೆ ಶುರುವಾದಂತೆ, ಸ್ಥೈರ್ಯಗುಂದಿದಂತೆ, ತಾನೊಂದು ಸ್ವಂತನೆಲೆಗಲ್ಲ, ಹುಟ್ಟಿದ ಮನೆಗಲ್ಲ; ಬಾಲ್ಯದಿಂದ ಬಂಧನ ಕಳಕೊಂಡ ಅನಿಶ್ಚಿತ, ಪರಸ್ಥಾನದೆಡೆಗೆ ಧಾವಿಸುತ್ತಿದ್ದೇನೆಂಬ ಭೀತಿ ನವಿರಾಗಿ ಮೈಯನ್ನು ಆವರಿಸಿದ ಅನುಭವವಾಗಿ ಬಹಳ ಹೊತ್ತು ಅನಾಥವಾಗಿ ತತ್ತರಿಸಿದ.
*****