ಹಗಲಿನ್ಯಾಗ ಮಾತ್ರ ಇವು ಅರಳ್ತಾವು
ಸೂರ್ಯೋದಯದ ನಂತರ ಕೆಲವು ಅರಳ್ತಾವು
ಸೂರ್ಯನ ಕಿರಣ ಮೈ ಮ್ಯಾಗ ಬಿದ್ದ ಕೂಡ್ಲೆ
ಕೆಲವು ಪಕಳಿ ಬಿಚ್ಚತಾವು
ಇನ್ನು ಕೆಲವು ಸಂಜೆಯಿಂದ ಶುರುವಾಗಿ
ನಡುರಾತ್ರಿ ಪೂರ್ಣ ಅರಳ್ತಾವು
ಅಂದ್ರ ನಮಗ ಆಶ್ಚರ್ಯ ಆಗ್ತೈತಿ
ಹಸಿರು ಎಲೆಗಳ ನಡುವೆ ಬಿಳುಪಿನ ಚೆಲುವು
ಹುಣ್ಣಿಮೆ ಚಂದ್ರನ್ನ ಮೀರಸ್ತಾವು
ಕಮಲದಷ್ಟೆ ದೊಡ್ದಿರ್‍ತಾವು
ಇವಕ್ಕ ಸುಗಂಧಭರಿತ
ಪರಿಮಳ ಬೇರೆ ಐತಿ
ಇದರ ಹೆಸರು ಬ್ರಹ್ಮಕಮಲ
ಇದಕ್ಕ ಇನ್ನೊಂದು ಹೆಸರೈತಿ
ರಾತ್ರಿ ರಾಣಿ ಅಂತ
ಯಾಕಂದ್ರ
ಇವು ಅರಳಾದು ರಾತ್ರ್ಯಾಗ ಮಾತ್ರ
ಇದರ ಎಲಿ ಹಚ್ಚೀದ್ರ ಸಾಕು
ಬೆಳ್ದ ಎಲ್ಯಾಗ ಅರಳ್ತಾವು ಈ ಚೆಲ್ವೇರು
ವಜ್ರದ್ಹಾಂಗ ಹೊಳೆದು ರಾತ್ರಿ ಮಿಂಚತಾವು
ಮೋಹದ ಮೋಡಿಯೊಳಗ ಬೀಳಸ್ತಾವು
ರಾತ್ರಿ ಹನ್ನೆರಡಕ್ಕ ಅರಳಿ
ಬೆಳಗಾಗೋದ್ರೊಳಗ ಮುದುಡಿ ಹೋಗ್ತಾವು
ಇವಕ್ಕ ಹ್ಯಾಲೋಜಿನ್ನು ಫ್ಲ್ಯಾಷನ್ನು
ತಡಕೊಳ್ಳುವ ಶಕ್ತಿ ಇಲ್ಲ
ಇನ್ನು ತನ್ನ ಮ್ಯಾಗ ಬಿದ್ದ ಸೂರ್ಯನ ಬೆಳಕನ್ನ
ಹ್ಯಾಂಗ ತಡಕೊಳ್ತಾವು
ಅದಕ್ಕ
ಎಲ್ಲಾ ಕಳ್ಕೊಂಡು ಬಾಡಿಹೋಗ್ತಾವು
ಈ ಬದುಕೆ ಹೀಂಗ
*****