ರಾಜಕೀಯ ಶಕ್ತಿಯಾಗಿ ಕನ್ನಡ

ರಾಜಕೀಯ ಶಕ್ತಿಯಾಗಿ ಕನ್ನಡ

ಕಾವೇರಿ ನದಿಯ ನೀರಿಗೆ ರಾಜಕೀಯ ಶಕ್ತಿ ಬಂದಿದೆ; ಯಾಕೆಂದರೆ ಆ ನೀರಿಗೆ ರೈತರಿಗೆ ಬೆಳಕಾಗುವ ಜೀವಶಕ್ತಿಯಿದೆ. ಕೃಷ್ಣಾನದಿಗೂ ಅಷ್ಟೆ, ಕಾವೇರಿಯ ವಿಷಯದಲ್ಲಿ ತಮಿಳುನಾಡಿನ ಜೊತೆ, ಕೃಷ್ಣಾ ವಿಷಯದಲ್ಲಿ ಆಂಧ್ರದ ಜೊತೆ ಜಗಳ ಬಂದಾಗಲೆಲ್ಲ ರೈತರನ್ನೂ ಒಳಗೊಂಡಂತೆ ಕರ್ನಾಟಕದ ವಿವಿಧ ವರ್ಗಗಳ ಜನ ಸ್ಪಂದಿಸಿದ್ದಾರೆ; ಈ ನದಿಗಳಲ್ಲಿ ಹರಿಯುವ ನೀರು ಜನರ ‘ಜೀವಜಲ’ವಾಗಿರುವುದು ಒಂದು ಕಾರಣವಾದರೆ, ರಾಜ್ಯದ ಹಕ್ಕು ಭಾವನಾತ್ಮಕ ರೂಪ ಪಡೆದದ್ದು ಇನ್ನೊಂದು ಕಾರಣ. ನದಿ ನೀರಿನ ವಿವಾದಗಳು ಭುಗಿಲೆದ್ದಾಗ ಆಯಾ ರಾಜ್ಯದ ಕುರ್ಚಿಗಳು ಕಂಪಿಸಿವೆ. ರಾಜ್ಯದ ಪರವಾಗಿ ತರ್ಕ ಮೀರಿ ಮಾತಾಡಲು ಹಿಂಜರಿಯದಷ್ಟು ದೊಡ್ಡ ದನಿ ಮಾಡಿವೆ. ಯಾಕೆಂದರೆ ‘ನದಿನೀರು’ ಅಂತರ ರಾಜ್ಯ ವಿವಾದದ ಕಾರಣದಿಂದ ರಾಜಕೀಯ ಆಯಾಮ ಪಡೆದಿದೆ, ಹೀಗಾಗಿ ರಾಜಕೀಯ ಶಕ್ತಿಯಾಗಿದೆ. ಆದರೆ ನೀರು ತುಂಬಿ ಕೊಳ್ಳಲು ಸದಾ ತಹತಹಿಸುವ ನಾಡಿನ ಕೆರೆಗಳು ರಾಜಕೀಯ ಶಕ್ತಿಯನ್ನು ಪಡೆದಿಲ್ಲ. ಯಾಕೆಂದರೆ ಅವುಗಳ ಸುತ್ತ ಅಂತರ ರಾಜ್ಯ ವಿವಾದದ ಸುಳಿಯಿಲ್ಲ. ಕೆರೆಯ ನೀರನ್ನು ನಂಬಿದವರಿಗೂ ರಾಜಕೀಯ ಶಕ್ತಿಯಿಲ್ಲ; ಕನ್ನಡದ ಸ್ಥಿತಿ ಈ ನಮ್ಮ ಕೆರೆಗಳ ಸ್ಥಿತಿಯೇ ಆಗಿದೆ.

ನಿಜ; ಕನ್ನಡದ ಬಗ್ಗೆ ಭಾವೋದ್ರೇಕದಿಂದ ಮಾತಾಡುವವರು ಸಾಕಷ್ಟು ಜನರಿದ್ದಾರೆ; ಈ ಆಯಾಮವುಳ್ಳ ಸಂಘಟನೆಗಳೂ ಇವೆ. ಆದರೆ ಕನ್ನಡವೊಂದರಿಂದಲೇ ಅಧಿಕಾರಸ್ಥರನ್ನು ಅಲುಗಾಡಿಸುವ ಶಕ್ತಿ ಮಾತ್ರ ಇಲ್ಲ. ಅರ್ಥಾತ್ ರಾಜಕೀಯ ಶಕ್ತಿಯಿಲ್ಲ. ಹೀಗೆಂದ ಕೂಡಲೇ ಕನ್ನಡದ ಆಧಾರದ ಮೇಲೆ ರಾಜಕೀಯ ಪಕ್ಷ ರಚನೆಯಾಗಬೇಕೆಂದು ನಾನು ಪ್ರತಿಪಾದಿಸುತ್ತಿಲ್ಲ. ರಾಜಕೀಯ ಪಕ್ಷವೊಂದೇ ರಾಜಕೀಯ ಶಕ್ತಿಯಲ್ಲ; ಕನ್ನಡದ ಪರಿಕಲ್ಪನೆಗೆ ಸೂಕ್ತ ರಾಜಕೀಯ ಪ್ರಜ್ಞೆಯಿರಬೇಕು; ಈ ರಾಜಕೀಯ ಪ್ರಜ್ಞೆಗೆ ಸಾಮಾಜಿಕ-ಆರ್ಥಿಕ ಆಯಾಮವಿರಬೇಕು. ಕನ್ನಡವನ್ನೇ ನಂಬಿರುವ ಮತ್ತು ಉಳಿಸಿ ಬೆಳೆಸುತ್ತಿರುವ ಸಾಮಾನ್ಯ ಜನರ ಆಶಯಗಳ ಅಂತಃಶಕ್ತಿಯಾದ ಸಾಮಾಜಿಕ-ಆರ್ಥಿಕ ಆಯಾಮವನ್ನು ಒಳಗೊಂಡ ‘ಕನ್ನಡ ಪ್ರಜ್ಞೆ’ಯು ತನಗೆ ತಾನೇ ರಾಜಕೀಯ ಪ್ರಜ್ಞೆಯನ್ನು ಪಡೆಯುತ್ತದೆ; ಭಾವಾನಾತ್ಮಕವಷ್ಟೇ ಆಗದ ಸೈದ್ಧಾಂತಿಕ ಹೋರಾಟಗಳನ್ನು ಒಳ ಗೊಳ್ಳುತ್ತದೆ. ಕನ್ನಡವು ಅನ್ನದ ಪ್ರಶ್ನೆಯಾಗುತ್ತದೆ.

ಭಾಷೆಯ ಪ್ರಶ್ನೆ ಬಂದಾಗ ಭಾವನಾತ್ಮಕತೆ ಇರುತ್ತದೆ; ಆದರೆ ಅದೇ ಸರ್ವಸ್ವವಾದರೆ ಬಣ್ಣದ ಬೆಲೂನಾಗುತ್ತದೆ. ಕನ್ನಡಾಭಿಮಾನದ ವಿಷಯ ಬಂದ ಕೂಡಲೇ ತಮಿಳುನಾಡನ್ನು ಮಾದರಿಯಾಗಿ ನೋಡುವ ಅನೇಕರು ಅಲ್ಲಿನ ಚಾರಿತ್ರಿಕ ಬೆಳವಣಿಗೆಗಳನ್ನು ಗಮನಿಸಬೇಕು. ತಮಿಳುನಾಡಿಗೆ ಪೆರಿಯಾರ್ ನೇತೃತ್ವದ ದ್ರಾವಿಡ ಸಂಸ್ಕೃತಿ ಚಳವಳಿಯ ಹಿನ್ನೆಲೆಯಿದೆ. ಆನಂತರ ಈ ಚಳವಳಿಯ ನಾಯಕರು ಭಿನ್ನ ನೆಲೆಗಳಿಂದ ಕವಲುದಾರಿ ಹಿಡಿದರೂ ಮೂಲ ಆಶಯ ಮಣ್ಣು ಮುಕ್ಕಲಿಲ್ಲ. ಅದು ಒಂದು ‘ಪ್ರಜ್ಞೆ’ಯಾಗಿ ಅಸ್ತಿತ್ವ ಪಡೆದುಕೊಂಡೇ ಇದೆ. ‘ದ್ರಾವಿಡ ಪ್ರಜ್ಞೆ’ಯಲ್ಲಿ ‘ತಮಿಳು’ ಎನ್ನುವುದು ಒಂದು ‘ಭಾಷೆ’ಯಾಗಿ ಮಾತ್ರ ಬೆಳೆಯಲಿಲ್ಲ. ಒಂದು ಜನಾಂಗವಾಗಿ, ಸಂಸ್ಕೃತಿ ವಿನ್ಯಾಸವಾಗಿ, ಬೆಳೆಯುತ್ತ ಬಂತು. ಹೀಗಾಗಿ ಆ ರಾಜ್ಯದವರು ತಮಿಳನ್ನು ಭಾಷೆ ಮಾತ್ರವಾಗಿ ಭಾವಿಸಲಿಲ್ಲ. ಬದುಕಾಗಿ ಭಾವಿಸಿದರು. ಜೊತೆಗೆ ಕರ್ನಾಟಕಕ್ಕೆ ಹೋಲಿಸಿದಾಗ ಕೆಳವರ್ಗ ಮತ್ತು ಕೆಳಮಧ್ಯಮ ವರ್ಗದ ಜನರೇ ತಮಿಳುನಾಡಿನಲ್ಲಿ ಹೆಚ್ಚಾಗಿದ್ದು ದ್ರಾವಿಡ ಚಳವಳಿ ಇವರನ್ನೇ ಪ್ರಧಾನವಾಗಿ ಒಳಗೊಂಡಿದ್ದು. ಇದರ ಫಲವಾಗಿ ರಾಜಕೀಯ ನಾಯಕತ್ವಕ್ಕೂ ‘ತಮಿಳು’ ಅಂತರಂಗದ ಆಯಾಮವಾಯಿತು. ಕೆಳವರ್ಗ ಮತ್ತು ಕೆಳಮಧ್ಯಮ ವರ್ಗಗಳ ಭಾವಾವೇಶವು ಭಾಷೆ ಮತ್ತು ಬದುಕಿನ ವಿನ್ಯಾಸವಾಯಿತು.

ಕೇರಳ ಮತ್ತು ಪಶ್ಚಿಮ ಬಂಗಾಳಗಳನ್ನೂ ಇಲ್ಲಿ ಮಾದರಿಯಾಗಿ ನೋಡಬಹುದು. ಈ ಎರಡೂ ರಾಜ್ಯಗಳಲ್ಲಿ ಜನಚಳವಳಿಗಳು ಪ್ರಧಾನವಾಗಿ ಕೆಲಸ ಮಾಡಿ ಎಡಪಕ್ಷಗಳನ್ನು ಅಧಿಕಾರಕ್ಕೆ ತರುವ ಶಕ್ತಿ ಪಡೆದಿವೆ. ಇಲ್ಲಿ ಭಾಷೆಗಾಗಿ ಪ್ರತ್ಯೇಕ ಚಳವಳಿ ನಡೆಯಲಿಲ್ಲ. ಆದರೆ ಭಾಷೆಯು ಜನಚಳವಳಿಗಳ ಭಾಗವಾಗಿಯೇ ಬೆಳೆಯಿತು. ಯಾವುದೆ ಜನಕೇಂದ್ರಿತ ಚಳವಳಿಯು ಜನಭಾಷೆಯನ್ನು ನಿರ್ಲಕ್ಷಿಸಿ ಬೆಳೆಯಲಾರದೆಂಬ ಪ್ರಜ್ಞೆ ಈ ರಾಜ್ಯಗಳ ಎಲ್ಲ ಪಕ್ಷಗಳ ಹಾಗೂ ಚಳವಳಿಗಳ ನೇತಾರರಿಗಿತ್ತು. ಹೀಗಾಗಿ ಭಾಷೆಗಾಗಿಯೇ ಪ್ರತ್ಯೇಕ ಚಳವಳಿ ನಡೆಯಲಿಲ್ಲ. ಆಂಧ್ರಕ್ಕೆ ಬಂದರೆ ಅಲ್ಲಿಯೂ ಜನ ಚಳವಳಿಗಳು ಜಾಗೃತವಾಗಿದ್ದವು. ಅನೇಕ ಭೂ ಹೋರಾಟಗಳು ನಡೆದವು. ಅವರಿಗೆ ಭಾಷೆಯ ಪ್ರಶ್ನೆ ಒಂದು ಸಮಸ್ಯೆಯಾಗಿ ಕಾಡಲೇ ಇಲ್ಲ. ಉದಾಹರಣೆಗೆ ಹೇಳುವುದಾದರೆ, ಆಂಧ್ರಪ್ರದೇಶದ ಹದಿಮೂರು ಜಿಲ್ಲೆಗಳಲ್ಲಿ ಉರ್ದು ಎರಡನೇ ಆಡಳಿತ ಭಾಷೆ. ಕೇರಳದಲ್ಲಿರುವ ಕಾಸರಗೋಡು ಜಿಲ್ಲೆಯನ್ನು ಅಲ್ಲಿನ ಸರ್ಕಾರ ‘ಭಾಷಾ ಅಲ್ಪಸಂಖ್ಯಾತರ ಪ್ರದೇಶ’ ಎಂದು ಅಧಿಕೃತವಾಗಿ ಘೋಷಿಸಿರುವುದರಿಂದ ಅಲ್ಲಿ ಕನ್ನಡದಲ್ಲೂ ವ್ಯವಹರಿಸುವ ಅವಕಾಶವಿದೆ. ಈ ರಾಜ್ಯಗಳಲ್ಲಿ ಜನ ಚಳವಳಿ ಮತ್ತು ಭಾಷಾ ಚಳವಳಿಗಳು ಅಭೇದ್ಯವಾಗಿದ್ದು ಅಂತರಂಗದ ಆಯಾಮದಲ್ಲಿ ಭಾಷೆ ಬದುಕಿದೆ.

ಆದರೆ ಕರ್ನಾಟಕದ ಸನ್ನಿವೇಶವೇ ಬೇರೆ; ಕನ್ನಡಪರ ನೇತಾರರ ಆದ್ಯತೆಗಳೂ ಬೇರೆ. ಸಾಂಕೇತಿಕವಾಗಿ ಒಂದು ಉದಾಹರಣೆ ಕೊಡುತ್ತೇನೆ. ಕರ್ನಾಟಕ ಸರ್ಕಾರವು ೩೧.೩.೨೦೦೪ ರಂದು ಒಂದು ಆದೇಶವನ್ನು ಹೊರಡಿಸಿ ಕೆಲವು ಮುಖ್ಯ ಆದೇಶಗಳನ್ನು ಕನ್ನಡದ ಜೊತೆಗೆ ಅಲ್ಪಸಂಖ್ಯಾತರ ಭಾಷೆಗಳಲ್ಲೂ ಕೊಡಬೇಕೆಂದು ತಿಳಿಸಿತು. ಈ ಆದೇಶದ ಜೊತೆಗೆ ಅಲ್ಪ ಸಂಖ್ಯಾತರ ಭಾಷಾ ವಲಯಗಳನ್ನು ಸೂಚಿಸಿದ ಒಂದು ಅವೈಜ್ಞಾನಿಕ ಪಟ್ಟಿಯಿತ್ತು. ಈ ಪಟ್ಟಿಯನ್ನು ಹೊರತುಪಡಿಸಿದರೆ ಸದರಿ ಆದೇಶದಲ್ಲಿ ವಿಶೇಷವೇನೂ ಇರಲಿಲ್ಲ. ಯಾಕೆಂದರೆ ಇದೇ ಆದೇಶಗಳು – ಪಟ್ಟಿಯನ್ನು ಹೊರತುಪಡಿಸಿದಂತೆ – ೧೯೬೬, ೧೯೮೨, ೧೯೯೦, ೧೯೯೯ ಮತ್ತು ೨೦೦೧ರಲ್ಲಿ ಹೊರಟಿದ್ದವು. ಅಲ್ಪಸಂಖ್ಯಾತರಿಗೆ ಸಂವಿಧಾನಾತ್ಮಕವಾಗಿರುವ ಅವಕಾಶಕ್ಕನುಗುಣವಾಗಿ ಇಂಥ ಆದೇಶಗಳು ಹೊರಡುತ್ತವೆ. ಆದರೆ ಕೆಲವು ಕನ್ನಡ ನೇತಾರರು – ವಿಶೇಷವಾಗಿ ವಿದ್ವಾಂಸರು – ೨೦೦೪ರ ಆದೇಶವನ್ನು ವಿರೋಧಿಸಿ ಸರ್ಕಾರವು ತಾತ್ಕಾಲಿಕ ವಾಗಿ ಹಿಂಪಡೆಯುವಂತೆ ಮಾಡಿ ಸಂತೋಷಪಟ್ಟರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ – ಇವರಿಗೆ ಸಂವಿಧಾನಾತ್ಮಕ ವಾಸ್ತವಕ್ಕಿಂತ ಅಲ್ಪಸಂಖ್ಯಾತ ವಿರೋಧವೇ ಕನ್ನಡದ ಆದ್ಯತೆಯಾಯಿತು; ೨೦೦೪ರ ಆದೇಶ ಹಿಂಪಡೆದ ಮೇಲೂ ಹಿಂದಿನ ಐದು ಆದೇಶಗಳು ಹಾಗೇ ಇದ್ದರೂ ಜಾಣ ಮೌನ ವಹಿಸಿ ಸಂಭ್ರಮಿಸಲಾಯಿತು. ಆದರೆ ತಮಿಳುನಾಡಿನ ಧರ್ಮಪುರಿ, ಕೇರಳದ ಕಾಸರಗೋಡುಗಳಲ್ಲಿ ಕನ್ನಡದಲ್ಲಿ ಆದೇಶಗಳನ್ನು ಕೊಡುವ ಆದೇಶಗಳಿವೆ. ಆಂಧ್ರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮುಂತಾದ ಎಲ್ಲ ರಾಜ್ಯಗಳಲ್ಲೂ ಭಾಷಾ ಅಲ್ಪಸಂಖ್ಯಾತರ ರಕ್ಷಣೆಗೆ ಅಧಿಕೃತ ಆದೇಶಗಳಿವೆ; ಮಹಾರಾಷ್ಟ್ರವೊಂದರಲ್ಲೇ ಮೂರು ವರ್ಷಗಳ ಅವಧಿಯಲ್ಲಿ ೧೭೦೯ ಅಧಿನಿಯಮಗಳೂ ೬೦೯ ಸುತ್ತೋಲೆಗಳೂ ಕನ್ನಡದಲ್ಲಿ ಬಂದಿವೆ. ಕರ್ನಾಟಕದಲ್ಲಿ – ೧೯೯೯ರಲ್ಲಿ ೨೮, ೨೦೦೦ದಲ್ಲಿ ೧೧, ೨೦೦೧ರಲ್ಲಿ ೧೦, ೨೦೦೨ರಲ್ಲಿ ೨ ಮತ್ತು ೨೦೦೩ರಲ್ಲಿ ಆದೇಶಗಳು ಉರ್ದುವಿನಲ್ಲೂ ೧೯೯೯ರಲ್ಲಿ ೨೮, ೨೦೦೦ದಲ್ಲಿ ೧೧, ೨೦೦೧ರಲ್ಲಿ ೧೦ ಆದೇಶಗಳು ಮರಾಠಿಯಲ್ಲೂ ಹೊರಟಿವೆ. ೨೦೦೨ ಮತ್ತು ೨೦೦೩ರಲ್ಲಿ ಯಾವ ಆದೇಶವೂ ಮರಾಠಿ ಭಾಷೆಯಲ್ಲಿ ಬಂದಿರಲಿಲ್ಲ. ಹೀಗಿದ್ದರೂ ೨೦೦೪ರ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಅದೇ ಆದ್ಯತೆಯಾಯಿತು. ನಿಜವಾದ ಕನ್ನಡದ ಸಮಸ್ಯೆಗಳು ಗೌಣವಾದವು.

ಕರ್ನಾಟಕ ಏಕೀಕರಣ ಚಳವಳಿಯನ್ನು ಹೊರತುಪಡಿಸಿದರೆ, ‘ಗೋಕಾಕ್ ಚಳವಳಿ’ಯೇ ಕನ್ನಡ ಪರ ಚಳವಳಿಯಾಗಿ ಜನಸಮುದಾಯವನ್ನು ವ್ಯಾಪಕವಾಗಿ ತಲುಪಿತು. ಸಾಹಿತಿಗಳೂ ಕಲಾವಿದರೂ ಸಾಮಾನ್ಯರೂ ಭಾಗವಹಿಸುವುದರ ಜೊತೆಗೆ ಡಾ. ರಾಜಕುಮಾರ್ ಅವರ ಪ್ರವೇಶವೇ ಪ್ರಧಾನ ಶಕ್ತಿಯಾಯಿತು; ಇದರ ಫಲವಾಗಿ ಕನ್ನಡ ಪರ ಮನೋಭೂಮಿಕೆಯೊಂದು ತೀವ್ರತರವಾಗಿ ವಿಸ್ತಾರಗೊಂಡಿತು. ಆದರೆ ಯಾವ ಸಂಸ್ಕೃತ, ಪ್ರೌಢಶಾಲೆಗಳಲ್ಲಿ ಪ್ರಥಮ ಭಾಷೆಯ ಅಂದರೆ ಮಾತೃಭಾಷೆಗಳ ಪಟ್ಟಿಯಲ್ಲಿ ಇರಬಾರದೆಂದು ಹೋರಾಟ ಪ್ರಾರಂಭ ವಾಯಿತೊ ಅದೇ ಸಂಸ್ಕೃತ ಈಗಲೂ ಪ್ರಥಮ ಭಾಷೆಯ ಸ್ಥಾನದಲ್ಲಿದೆ. ಈ ದೃಷ್ಟಿಯಿಂದ ನೋಡಿದರೆ ಗೋಕಾಕ್ ಚಳವಳಿ ಯಶಸ್ವಿಯಾಯಿತೆ?

ಹಾಗಾದರೆ ಕರ್ನಾಟಕದ ಭಾಷಾ ಚಳವಳಿಗೆ ಏನಾಗಿದೆ? ಇಲ್ಲಿ ಕನ್ನಡ ಹೋರಾಟಗಾರರು ಮತ್ತು ಸಾಹಿತಿ-ಚಿಂತಕರ ನಡುವೆ ಕಂದಕವಿದೆ. ಕೆಲವು ಕನ್ನಡಪರ ಸಾಹಿತಿ-ವಿದ್ವಾಂಸರ ಆಶಯಗಳನ್ನೇ ಕನ್ನಡ ಹೋರಾಟಗಾರರು ತೀವ್ರವಾಗಿ ತೆಗೆದುಕೊಂಡು ಬೀದಿಗಿಳಿಯುತ್ತಾರೆ. ಅಷ್ಟರಮಟ್ಟಿಗೆ ಅವರು ನಂಬಿದಂತೆ ನಡೆಯುತ್ತಾರೆ. ಕೆಲವರು ತಪ್ಪುಹಾದಿಯನ್ನೇ ಸರಿಯೆಂದು ಭಾವಿಸುತ್ತಾರೆ. ಆದರೆ ಇದೇ ರೀತಿಯ ಭಾವನೆಗಳುಳ್ಳ ಕೆಲಸಾಹಿತಿ – ವಿದ್ವಾಂಸರು ಸೂಕ್ತ ಮಾರ್ಗದರ್ಶನ ಮಾಡದೆ ಮೌನವಾಗಿರುತ್ತಾರೆ. ಇದು ಇಂದಿನ ಒಂದು ಸ್ಥಿತಿಯಾದರೆ, ಚಾರಿತ್ರಿಕವಾಗಿ ಇನ್ನೊಂದು ಸ್ಥಿತಿಯಿದೆ. ನಮ್ಮ ರಾಜ್ಯದಲ್ಲಿ ಕಾರ್ಮಿಕ ಚಳವಳಿ ಮತ್ತು ಕನ್ನಡ ಚಳವಳಿಯ ಮಧ್ಯೆ ಕಂದಕವಿದೆ; ರೈತ ಚಳವಳಿ, ದಲಿತ ಚಳವಳಿ, ಮಹಿಳಾ ಚಳವಳಿ – ಇವೇ ಮುಂತಾದ ಚಳವಳಿಗಳು ಕನ್ನಡಪರವಾಗಿದ್ದರೂ ಸಹಜವಾಗಿಯೇ ಆದ್ಯತೆಗಳು ಬೇರೆಯಾಗಿರುತ್ತವೆ. ಅಂದರೆ ಬೇರೆ ಕೆಲವು ರಾಜ್ಯಗಳಲ್ಲಿ ಆದಂತೆ ಜನ ಚಳವಳಿ ಮತ್ತು ಭಾಷಾ ಚಳವಳಿಗಳೂ ಏಕೀಭವಿಸಲಿಲ್ಲ. ಬೇರಾವ ರಾಜ್ಯಗಳಲ್ಲೂ ಭಾಷಾ ಚಳವಳಿಯೇ ಪ್ರಧಾನ ಹಾಗೂ ಪ್ರತ್ಯೇಕ ಚಳವಳಿಯಾಗಿ ಬೆಳೆದಂತೆ ಕಾಣುವುದಿಲ್ಲ. ಹಾಗೂ ನಮ್ಮಲ್ಲಿ ಕೆಲವರಿಗೆ ಮಾದರಿಯ ಭ್ರಮೆ ಹಿಡಿಸಿದ ಹಾಗೂ ದಾಂಧಲೆಗೆ ಹೆಸರಾದ ಮಹಾರಾಷ್ಟ್ರದ ಶಿವಸೇನೆ ಸಹ ಮರಾಠಿ ಭಾಷೆಯನ್ನಷ್ಟೇ ಮುಂದೆ ಮಾಡುವ ಬದಲು ಮರಾಠಿಗರನ್ನು ಮುಂದೆ ಮಾಡಿ ‘ಹೋರಾಟ’(?) ನಡೆಸಿತು.

ಆದರೆ ಕರ್ನಾಟಕದಲ್ಲಿ ‘ಕನ್ನಡ’ವನ್ನು ಮುಂದೆ ಮಾಡುತ್ತೇವೆ. ಕನ್ನಡಿಗರನ್ನು ಹಿಂದೆ ಮಾಡುತ್ತೇವೆ. ಕನ್ನಡ ಮತ್ತು ಕನ್ನಡಿಗ ಎರಡೂ ಒಂದೇ ಅಲ್ಲವೆ ಎಂದು ಕೇಳಬಹುದು. ಎರಡಕ್ಕೂ ಸಂಬಂಧವಿದೆಯಾದರೂ ಕನ್ನಡಿಗರನ್ನು ಬದುಕಿಸುವುದರ ಮೂಲಕ ಕನ್ನಡವನ್ನು ಬದುಕಿಸಿಕೊಳ್ಳಬೇಕೆ, ಕನ್ನಡದ ಮೂಲಕ ಕನ್ನಡಿಗರನ್ನು ಬದುಕಿಸಿಕೊಳ್ಳಬೇಕೆ ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ನನ್ನ ದೃಷ್ಟಿಯಲ್ಲಿ ಕನ್ನಡಿಗರು ಬದುಕಿದರೆ ಕನ್ನಡ ಬದುಕುತ್ತದೆ. ಹೀಗಾಗಿ ಬದುಕು ಮತ್ತು ಭಾಷೆಯನ್ನು ಒಟ್ಟಿಗೇ ಗ್ರಹಿಸಿದ ಕನ್ನಡ ಪ್ರಜ್ಞೆ ಮುಖ್ಯವಾಗಬೇಕು. ಕನ್ನಡಿಗರಿಗೆ ಅನ್ನ, ವಸತಿ, ಉದ್ಯೋಗದ ಭದ್ರತೆಯಿದ್ದರೆ, ಇದೆಲ್ಲಕ್ಕೂ ಕನ್ನಡವು ಒಂದು ಮಾನದಂಡವಾಗುವುದಾದರೆ, ಕನ್ನಡ ತಾನೇ ತಾನಾಗಿ ಜನಗಳಲ್ಲಿ ಉಳಿದು ಬೆಳೆಯುತ್ತದೆ. ಅನ್ನವನ್ನು ಕೊಡದ ಭಾಷೆಯನ್ನು ಭಾವನೆಗಳ ನೆಲೆಯಲ್ಲಿ ಉಳಿಸಿಕೊಳ್ಳಬಹುದೇ ಹೊರತು ಬದುಕಿನಲ್ಲಿ ಅಲ್ಲ. ಈ ನೆಲೆಯಲ್ಲೇ ನಾನು ಕನ್ನಡವು ಅನ್ನದ ಪ್ರಶ್ನೆಯಾಗಬೇಕೆಂದು ಹೇಳುತ್ತೇನೆ.

ಹಾಗಾದರೆ ಇದಕ್ಕೆಲ್ಲ ಪ್ರಾದೇಶಿಕ ಪಕ್ಷಗಳೇ ಪರಿಹಾರವೆ? ನನ್ನ ದೃಷ್ಟಿಯಲ್ಲಿ ಪ್ರಾದೇಶಿಕ ಪಕ್ಷಗಳು ಸರ್‍ವಸಂಜೀವಿನಿಯಲ್ಲ. ಕೇಂದ್ರ ಸರ್ಕಾರವು ಅಭದ್ರವಾಗಿದ್ದಾಗ, ಪ್ರಾದೇಶಿಕ ಪಕ್ಷಗಳ ಬೆಂಬಲ ಬೇಕಾದಾಗ ಇವುಗಳ ‘ರಾಜಕೀಯ ಶಕ್ತಿ’ ಅಲ್ಲ- ‘ರಾಜಕೀಯ ಯುಕ್ತಿ’ಗೆ ಮನ್ನಣೆ ಸಿಗುತ್ತದೆ. ಚೌಕಾಶಿ ರಾಜಕೀಯ ಮೇಲುಗೈ ಪಡೆದು ಪ್ರಾದೇಶಿಕ ಪಕ್ಷಗಳೇ ಪರಿಹಾರವೇನೊ ಎಂಬ ಭಾವನೆ ಮೂಡುತ್ತದೆ. ಪ್ರಾದೇಶಿಕ ಪಕ್ಷವಾಗಲಿ, ರಾಷ್ಟ್ರೀಯ ಪಕ್ಷವಾಗಲಿ, ಭಾಷೆ ಮತ್ತು ಬದುಕಿನ ಬಗ್ಗೆ ಸ್ಪಷ್ಟ ಸಾಮಾಜಿಕ-ಆರ್ಥಿಕ ನೀತಿಯನ್ನು ಒಳಗೊಂಡಿರುವುದು ಮುಖ್ಯ.

ಇಂದಿನ ಸನ್ನಿವೇಶದಲ್ಲಿ ಚೌಕಾಶಿ ರಾಜಕೀಯವನ್ನೇ ನೈಜ ರಾಜಕೀಯ ಶಕ್ತಿಯೆಂದು ಬಿಂಬಿಸುವ ಪ್ರಯತ್ನಗಳಿಗೆ ಬದಲಾಗಿ ಶಿಕ್ಷಣ, ಉದ್ಯೋಗ ಮತ್ತು ಆಡಳಿತಗಳಲ್ಲಿ ರಾಜ್ಯ ಭಾಷೆಯೇ ಮುಖ್ಯವಾಗುವ ರಾಷ್ಟ್ರೀಯ ನೀತಿಗಾಗಿ ಪ್ರಾದೇಶಿಕ ಹೋರಾಟಗಳು ನಡೆಯಬೇಕು. ಮುಖ್ಯ ಮಾತೃಭಾಷಾ ಮಾಧ್ಯಮ, ಉದ್ಯೋಗಕ್ಕೆ ಪ್ರಾದೇಶಿಕ ಭಾಷೆಯ ಅಗತ್ಯ ಮತ್ತು ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ – ಇವೇ ಮುಂತಾದ ವಿಷಯಗಳನ್ನು ಒಳಗೊಂಡ ರಾಷ್ಟ್ರೀಯ ನೀತಿ ರೂಪುಗೊಳ್ಳದಿದ್ದರೆ ಜಾಗತೀಕರಣದ ಈ ಸಂದರ್ಭದಲ್ಲಿ ಪ್ರಾದೇಶಿಕ ಪಕ್ಷಗಳು ಸಹ ತಾವಾಗಿಯೇ ಎಲ್ಲವನ್ನೂ ಅನುಷ್ಠಾನಗೊಳಿಸಲು ಸಾಧ್ಯವಾಗದು. ಆದ್ದರಿಂದ ರಾಜಕೀಯ ಪಕ್ಷಕ್ಕಿಂತ ಮುಂಚೆ ಸೂಕ್ತ ರಾಜಕೀಯ ಪ್ರಜ್ಞೆಯಿಂದ ‘ಶಕ್ತಿ’ಯಾಗಿ ಹೊರಹೊಮ್ಮುವ ಭಾಷಾ ಚಳವಳಿ ರೂಪುಗೊಳ್ಳಬೇಕು. ಈ ಅರ್ಥದಲ್ಲಿ ಕನ್ನಡ ‘ರಾಜಕೀಯ ಶಕ್ತಿ’ಯಾಗಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೋಗುಳ ಹಾಡು
Next post ನನಗೋ ಇಂಥ ಹೆಳವು…

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…