ಜೋಗುಳ ಹಾಡನ್ನು ಲಾಲಿಸು, ಜೋ! ಜೋ!
ತೂಗುವೆ ತೊಟ್ಟಿಲ, ಮಲಗಿರು, ಜೋ! ಜೋ!
ಸುಮಲತೆಗಳ ಪರಿಮಳವ ಬಿತ್ತರಿಸಿ,
ಕಮಲದ ಕೋಮಲ ಗಂಧವ ಬೆರಸಿ,
ಮಂದ ಮಾರುತವು ಬೀಸುತ್ತಿರಲಿನಿಸು,
ತಂದೆ, ತಂದಿಹೆನೊಂದು ಮುದ್ದಿನ ಕನಸು.
ಮೊದಲೆವೆಗಳನು ಮುಕುಳಿಸೆನ್ನ ಸಿರಿಯೇ!
ತೊದಲನ್ನು ನಿಲ್ಲಿಸೆನ್ನಯ ಹೊನ್ನ ಮರಿಯೇ!
ಸದ್ದು ಮಾಡಲು ಬೇಡ ನೀ ಶಾಂತನೆನಿಸು!
ಕದ್ದು ತಂದಿಹೆನೊಂದು ಮುದ್ದಿನ ಕನಸು!
ರವಿ ಮುಳುಗಿಹನು, ಕಂದಿತು ಸಂಜೆಗೆಂಪು;
ಸವಿಯಾಗಿ ಕಾಂಬುದು ಚಂದ್ರನ ಸೊಂಪು.
ನೊಂದಿಸು ನಿನ್ನಯ ಮಾಯೆಯ ಮುನಿಸು!
ತಂದೆನಿಗೋ, ಚಿಕ್ಕ ಮುದ್ದಿನ ಕನಸು!
ತನುಮನ ಧನವನರ್‍ಪಿಸಿ ಮೋದದಿಂದಾ
ವಿನಿಯೋಗಿಸುತ ಬಲು ಸಾಸಿಗನೆನಿಸು!
ಜನನ ಭೂಮಿಯ ಸೇವೆಯನು ಮಾಡೊ ಕಂದಾ!
ಜನುಮ ಎಂಬುದು ಪುಟ್ಟ ಮುದ್ದಿನ ಕನಸು.
ಮಲಗೊ! ವಿಶ್ರಮಿಸೆನ್ನ ಮೋಹದ ಗೊಂಬೆ!
ಮಲಗೊ! ಗಲ್ಲವನೊತ್ತಿ ನಾ ಬೇಡಿಕೊಂಬೆ,
ರಂಗನಾಥನೆ! ಸರ್‍ವದಾ ನೀ ಸಮನಿಸು,
ಮಂಗಳಕರವಾದ ಮುದ್ದಿನ ಕನಸು.
*****
(“ಆನಂದದಿಂದ”)