ನಿಜವಾದ ಏಕಾಂತ ಯಾರಿಗೆ ದೊರೆತಿದೆಯೋ ಅಂಥದ್ದು ಇದೆಯೋ ಗೊತ್ತಿಲ್ಲ. ನಾವು ಏಕಾಂತ ಎಂದು ಕರದುಕೊಳ್ಳುವುದರಲ್ಲಿ ಲೋಕ ಇದ್ದೇ ಇರುತ್ತದೆ. ಲೋಕ ಎಂಬುದು ಕೂಡ ನಾವು ಏಕಾಂತದಲ್ಲಿ ಏನೇನು ಕಲ್ಪಿಸಿಕೊಳ್ಳುತ್ತೇವೋ, ಭಾವಿಸುತ್ತೇವೋ, ಅನುಭವಿಸುತ್ತೆವೋ ಅದರ ಪತಿಫಲನವೇ ಆಗಿರುತ್ತದೆ. ನಮ್ಮ ಏಕಾಂತಗಳಲ್ಲಿ ಬೇರು ಬಿಟ್ಟು ದೃಢವಾಗಿ ಬೆಳೆದು ನಿಂತಿರುವ, ನಮ್ಮ ಲೋಕದ ರೂಪರೇಖೆಗಳನ್ನು ತಿದ್ದುವ ಕೆಲವು ಮೂಲ ಕಲ್ಪನೆಗಳನ್ನೂ, ನಂಬಿಕೆಗಳನ್ನೂ ಪರಿಶೀಲಿಸುವುದು ಈ ಅಂಕಣ ಬರಹದ ಉದ್ದೇಶ. ಇಲ್ಲಿ ಹೇಳುವ ಮಾತುಗಳೆಲ್ಲವೂ ನನ್ನದೇ, ನನ್ನ ಸ್ವಂತದ್ದೇ ಎಂಬ ಭ್ರಮೆ ನನಗಿಲ್ಲ. ಕೇಳಿದ್ದು, ಹೇಳಿದ್ದು, ಓದಿದ್ದು, ಎಲ್ಲ ಈಗ ಈ ರೂಪ ತಳೆದು ನಿಮ್ಮೆದುರು ಅಕ್ಷರಗಳಾಗಿ ಕಾಣಿಸಿಕೊಳ್ಳುತ್ತಿವೆ. ಎಷ್ಟೆಂದರೂ ಎಲ್ಲ ಲೇಖಕರೂ ಮರುಪ್ರಸಾರ ಕೇಂದ್ರಗಳೇ ಅಲ್ಲವೇ? ಹೊಸತೆಂಬುದೇನೂ ಇಲ್ಲ, ಇರುವುದೇನಿದ್ದರೂ ಹೊಸ ಬಗೆಯ ಸಂಯೋಜನೆ, ಜೋಡಣೆ ಮಾತ್ರ. ಏಕಾಂತದಲ್ಲಿ ನಡೆವ ಸಂಯೋಜನೆಗಳು, ವಿಚಾರ ಜೋಡಣೆಗಳು ಹೊಸಬಗೆಯಲ್ಲಿ ನೋಡಲು ನಿಮನ್ನೂ ಪ್ರೇರೇಪಿಸಲಿ ಎಂಬ ಆನೆ ಇದೆ.
ಈಗ ಇರುವ ಈ ಬಿಸಿಲು, ಈ ಮೋಡ, ಈ ಗಾಳಿ, ಆಕಾಶದ ಈ ಬಣ್ಣ ಇವೆಲ್ಲ ನಿನ್ನೆ ಇರಲಿಲ್ಲ, ಕೊಂಚ ಹೊತ್ತು ಮೊದಲು ಇರಲಿಲ್ಲ. ಇದೆಲ್ಲ ಕ್ಷಣ ಕ್ಷಣ ಹೊಸತೆಂಬಂತೆ ಕಾಣುವ ಲೋಕ ಹಿಮಾಲಯದಲ್ಲಿ ಅಡ್ಡಾಡುವಾಗ ಹೀಗನ್ನಿಸುತ್ತಿತ್ತು. “ಸಾರ್, ದಿನಾ ಒಂದೇ ಥರ ಕೆಲಸ, ಒಂದೇ ಥರ ರೊಟೀನು, ಬೋರು ಅನ್ನಿಸುತ್ತೆ” ಪ್ರತಿವಾರ ಚರ್‍ಚೆಗೆ ಸೇರುವ ವಿದ್ಯಾರ್ಥಿಗಳಲ್ಲಿ ಒಬ್ಬ ಹುಡುಗಿ ಹದಿನೈದು ದಿನದ ಹಿಂದೆ ಹೀಗೆ ಅಂದಿದ್ದಳು. ಕೊಟ್ಟೂರಿನಲ್ಲಿರುವ ಕನ್ನಡದ ಕಥೆಗಾರ ಕುಂವೀ ಮನೆಯಲ್ಲಿ ಮೊನ್ನೆಯೆಂದರೆ ಮೊನ್ನೆಯಷ್ಟೇ ಸೇರಿದ್ದ ಹುಡುಗರನ್ನು “ನೀವಲ್ಲ ಏಕೆ ಓದುತ್ತೀರಿ?” ಎಂದು ಕೇಳಿದ್ದಕ್ಕೆ ಕೊಟ್ಟ ಉತ್ತರಗಳಲ್ಲಿ ಒಂದು ಬದಲಾವಣೆಯನ್ನು ಬಯಸಿ, ಬದಲಾವಣೆಯ ದಿಕ್ಕು ದೆಸೆ ಅರಿಯಲು ಓದುತ್ತೇವೆ ಅನ್ನುವ ಉತ್ತರ.
ಪಂಪ ಕವಿತೆಯನ್ನು ಕಡಲಿನಂತೆ ನಿತ್ಯವೂ ಹೊಸತು ಎಂದು ಹೇಳಿದ ಮಾತು ಇದ್ದಕ್ಕಿದ್ದ ಹಾಗೆ ನೆನಪಾಗುತ್ತಿದೆ. ಕಡಲು ನಿತ್ಯವೂ ಹೊಸತು ಇರಬಹುದು, ಬಿಸಿಲು, ಗಾಳಿ, ಆಕಾಶದ ಬಣ್ಣ ಎಲ್ಲವೂ ಕ್ಷಣ ಕ್ಷಣವೂ ಹೊಸತಾಗುತ್ತಿರಬಹುದು. ನಮ್ಮೊಡನೆ ಬದುಕುವ ಜನ ಕ್ಷಣ ಕ್ಷಣವೂ ಬದಲಾಗುತ್ತಿರಬಹುದು. ಆದರೆ ನಮ್ಮ ಮನಸ್ಸು ಕೂಡ ಕ್ಷಣಕ್ಷಣವೂ ಹೊಸತಾಗದಿದ್ದರೆ ಬೋರಾಗುವುದನ್ನು ತಪ್ಪಿಸಿಕೊಳ್ಳುವುದು ಹೇಗೆ? ಓದಿನ ಮೂಲಕ ಮನಸ್ಸು ನಿಜವಾಗಿ ಹೊಸತಾಗುತ್ತದೆಯೋ? ನಮ್ಮಲ್ಲಿ ನಿಜವಾಗಿಯೂ ಬದಲಾವಣೆಯ ಅಪೇಕ್ಷೆ ಇದೆಯೋ ಅಥವ ಬದಲಾವಣೆ ಎಂಬುದು ಕೇವಲ ಸುಖಕೊಡುವ ಕಲ್ಪನೆ ಮಾತ್ರವೋ? ವ್ಯಕ್ತಿತ್ವ ನಿರ್‍ಮಾಣದ ಕಾರ್‍ಯಕ್ರಮಗಳು, ನಮ್ಮದೇ ಆದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಆಸೆ ಇವೆಲ್ಲ ಅಂತರಂಗದಲ್ಲಿ ಆಗುವ ಬದಲಾವಣೆಯನ್ನು ನಿರಾಕರಿಸುವ ಕ್ರಿಯೆಗಳೇ ಅಲ್ಲವೇ? ನನ್ನ ವ್ಯಕ್ತಿತ್ವ ಎಂಬುದು-ನಾನು ಎಂದರೆ ಇಂಥವನು; ನಾನು ಇದನ್ನು ಒಪ್ಪುತ್ತೇನೆ, ಅದನ್ನು ಒಪ್ಪುವುದಿಲ್ಲ; ನನ್ನ ಮಟ್ಟಿಗೆ ಇದು ಸರಿ, ಅದು ತಪ್ಪು; ಒಳ್ಳೆಯದು ಎಂದರೆ ಇದೇ, ಅದು ಅಲ್ಲ; ಗಂಡ ಎಂದರೆ ಹೀಗೆ ಇರಬೇಕು; ಮಕ್ಕಳು ಹೀಗೆ ಹೀಗೆಯೇ ನಡೆದುಕೊಳ್ಳಬೇಕು- ಎಂಬಂಥ ಹಲವಾರು ನಿರ್ದಿಷ್ಟ ಕಲ್ಪನೆಗಳ ಮೊತ್ತವೇ ಅಲ್ಲವೇ? ಈ ಕಲ್ಪನೆಗಳಾದರೂ ನನ್ನ ಸುತ್ತ ಇರುವ ಜನ, ತಮ್ಮ ಭಾಷೆಯ, ನಡವಳಿಕೆಯ, ವಿಚಾರದ ಕಾರಣದಿಂದ ನನ್ನೊಳಗೆ ತುಂಬಿಸಿದ್ದೇ ಅಲ್ಲವೇ? ಹೀಗೆ ನನ್ನ ಬಗ್ಗೆ ನಾನು ರೂಪಿನಿಕೊಂಡ ಕಲ್ಪನೆಗಳು ಸ್ಥಿರವಾಗಿದ್ದಷ್ಟೂ ನನ ವ್ಯಕಿತ್ವ ಗಟ್ಟಿಯಾದದು ಎಂದು ತಿಳಿಯುತ್ತೇನಲ್ಲವೇ? ಹೀಗೆ ನನ್ನ ವ್ಯಕ್ತಿತ್ವ ಗಟ್ಟಿಯಾದಷ್ಟೂ ನನ್ನ ಸುತ್ತಲೂ ಆಗುತ್ತಿರುವ ಬದಲಾವಣೆಯನ್ನು ಗ್ರಹಿಸುವುದು ಕಡಮೆಯಾಗುತ್ತದೆ. ಆಗುತ್ತಿರುವುದನ್ನೆಲ್ಲ ನನ್ನ ತಿಳಿವಳಿಕೆಯಂತೆ, ನನ್ನ ಇಷ್ಟದಂತೆ ವ್ಯಾಖ್ಯಾನಿಸುವುದೋ, ಸಮರ್‍ಥಿಸುಪ್ರದೋ, ತಿರಸ್ಕರಿಸುವುದೋ ಮುಖ್ಯವಾಗುತ್ತದೆ. ನನ್ನ ಬಗ್ಗೆ ಇರುವ ಕಲ್ಪಿತಗಳಿಗೆ ಧಕ್ಕೆ ಒದಗದಂತೆ ಬದುಕುವುದೇ ಮುಖ್ಯವಾಗುತ್ತದೆ. ಅಂದರ ನಾನು ಅಂದುಕೊಂಡಿರುವುದೆಲ್ಲ ಸ್ಥಿರವಾಗಿ ಹಗೆಯೇ ಇರಬೇಕೆಂಬ ಅಪೇಕ್ಷೆ ಬಲವಾಗುತ್ತದೆ. ಬದಲಾವಣೆ ಬೇಕು ಆದರೆ ನಾನು ಇರುವ ರೀತಿ ಬದಲಾಗಬಾರದು, ನನ್ನ ಬದುಕಿನ ಕ್ರಮ ಹಾಗೇ ಇರಬೇಕು ಅನ್ನುವ ಅಪೇಕ್ಷೆ ಮೂಡುತ್ತದೆ. ನಾನು ಈಗ ಇರುವಂತೆಯ ಇದ್ದು ಲೋಕವೆಲ್ಲ ಬದಲಾಗಬೇಕು, ಲೋಕವನ್ನು ಬದಲಾಯಿಸಬೇಕು ಎಂಬ ಹುಸಿ ಅಪೇಕ್ಷೆ, ಹಟ ಮೂಡುತ್ತವೆ.
ಅಲ್ಲಮನ ಒಂದು ವಚನ ಮತ್ತು ಜರ್ಮನ್ ಕವಿ ಬ್ರೆಕ್ಟ್‍ನ ಒಂದು ಕವಿತೆ ನೆನಪಿಗೆ ಬರುತ್ತಿವೆ. ಅಲ್ಲಮ ಒಂದು ವಚನದಲ್ಲಿ ಹೇಳುತ್ತಾನೆ. -ನಮ್ಮ ತನು ಒಂದು ದ್ವೀಪ, ಮನ ಇನ್ನೊಂದು ದ್ವೀಪ, ನಮ್ಮ ಆಪ್ಯಾಯನ ಅಥವ ರುಚಿ ಇನ್ನೊಂದು ದ್ವೀಪ, ನಮ್ಮ ವಚನ ಮತ್ತೊಂದು ದ್ವೀಪ ಅಗಿಬಿಟ್ಟಿವೆ. ಇವು ನಾಲ್ಕೂ ಬೆಸಗೊಂಡರೆ, ಬೆಸುಗೆಗೊಂಡರೆ ಆಗ ಗುಹೇಶ್ವರ ಕಾಣುತ್ತಾನೆ- ಬ್ರೆಕ್ಟ್ ಬರೆದ ಒಂದು ಕವಿತೆ ಹೀಗಿದೆ:- ಹೊಸ ಅನ್ವೇಷಣೆಗಳು ಹೊಸ ಕಾಲವನ್ನು ತರುವುದಿಲ್ಲ. ಹೂಸ ಮಾಡಲಿನ ಕಾರು, ಹೊಸ ಬಾಂಬರು ವಿಮಾನ, ಇವುಗಳಿಂದಷ್ಟೆ ಹೊಸ ಕಾಲ ಹುಟ್ಟುವುದಿಲ್ಲ. ಬಹುಶಃ ಅಜ್ಜ ಆಗಲೇ ಹೊಸ ಕಾಲದಲ್ಲಿದ್ದ, ಮೊಮ್ಮಗ ಹಳಬನಾಗಿಯೇ ಉಳಿದಿದ್ದಾನೆ. ಹೊಸ ಪ್ಲೇಟು, ಹೊಸ ಫೋರ್‍ಕಿನಲ್ಲಿ ತಿನ್ನುತ್ತಿರುವುದು ಹಳೆಯ ಮಾಂಸವನ್ನೇ, ಹೊಸ ಟ್ರಾನ್ಸಿಸ್ಟರ್‍ಗಳಿಂದ ಹಳೆಯ ಮೌಢ್ಯಗಳೇ ಪ್ರಸಾರಗೊಳ್ಳುತ್ತಿವೆ. ಹೊಸ ಪುಸ್ತಕ ಹಳೆಯ ಅಜ್ಞಾನವನ್ನೇ ಪ್ರಸಾರ ಮಾಡುತ್ತಿದೆ. ವಿವೇಕ ಮಾತ್ರ ಬಾಯಿಂದ ಬಾಯಿಗೆ ಹರಡುತ್ತದೆ.
ಮಾಹಿತಿಯನ್ನೇ ಜ್ಞಾನವೆಂದುಕೊಳ್ಳುತ್ತಾ, ಹೊಸ ಸಲಕರಣೆಗಳ ಬಳಕೆಯಿಂದ ಹೊಸಬರಾದೆವೆಂದು ಭ್ರಮಿಸುತ್ತಾ, ಆದರೆ ನಮ್ಮ ತಲೆಯೊಳಗೆ, ನಮ್ಮ ಮನಸುಗಳೊಳಗೆ ತುಂಬಿಕೊಂಡಿರುವ ಸ್ಥಿರವಾದ ಹಳೆಯ ಕಲ್ಪನೆಗಳನ್ನು ಬಿಡಲು ಹೆದರುತ್ತಾ, ಅಂಜುತ್ತಾ, ನಮ್ಮ ಮೈ ಬೇರೆ, ಮನಸ್ಸು ಬೇರೆ, ರುಚಿ ಬೇರೆ, ಮಾತು ಬೇರೆಯಾಗಿ ಛಿದ್ರವಾಗಿ ಬದುಕುತ್ತಾ ಇರುತ್ತೇವೆ. ಹೇಗೋ ಹೊಂದಿಕೊಂಡು ಇರುವುದೇ ಕ್ಷೇಮ ಎಂಬ ನಂಬಿಕೆ ನಮ್ಮಲ್ಲಿ ಇರುವವರೆಗೆ ನಾವು ಬದಲಾಗುವುದೇ ಇಲ್ಲ. ನಾವು ಬದಲಾಗುವುದೆಂದರೆ ನಮ್ಮ ಬಗ್ಗೆ ನಾವು ಕಟ್ಟಿಕೊಂಡು ಪೋಷಿಸಿಕೊಂಡು ಬಂದಿರುವ ಎಲ್ಲ ಕಲ್ಪನೆಗಳನ್ನೂ ನೀಗಿಕೊಳ್ಳುವುದು. ಅದು ಅತ್ಯಂತ ಭಯದ ಸಂಗತಿ. ಹಾಗಾಗಿ ನಾವು ಬದಲಾಗಲು ಬಯಸದೆ ಲೋಕ ಮಾತ್ರ ಬದಲಾಗಲಿ ಆಮೇಲೆ ನಾನು ಬದಲಾಗುತ್ತೇನೆ ಎಂದು ಕನಸು ಕಾಣುತ್ತಾ ಇರುತ್ತೇವೆ. ಕ್ಷೇಮ, ಸ್ಥಿರತೆಗಳು ಕಳೆದುಹೋದಾವೆಂಬ ಭಯ ಇರುವವರೆಗೆ ಬದಲಾವಣೆಯ ಮಾತು ಬರೀ ಮೋಸದ್ದು. ಇಲ್ಲದಿದ್ದರೆ ಮನುಷ್ಯನ ನಾಗರಿಕತೆಯಲ್ಲಿ ಇಷ್ಟೆಲ್ಲ ಕ್ರಾಂತಿಗಳು, ಚಳವಳಿಗಳು, ಬದಲಾವಣೆಗಳು ಸಂಭವಿಸಿದ್ದರೂ ನಾವು ಏಕೆ ಹಾಗೆಯೇ-ದುಷ್ಟತನ, ಕ್ರೌರ್‍ಯ, ಹಿಂಸೆ, ದ್ವೇಷ, ಅಸೂಯೆಗಳನ್ನು ತುಂಬಿಕೊಂಡೇ-ಇದೇವೆ? ಬದಲಾವಣೆ ಒಮ್ಮೆ ಆಗಿ ಮುಗಿಯುವಂಥದ್ದಲ್ಲ, ಸದಾ ಆಗುತ್ತಲೇ ಇರುವಂಥದ್ದು. ಹಾಗಾದರೆ ನಾವೂ ಕೂಡ ಸದಾ ನಮ್ಮೊಳಗಿನಿಂದಲೇ ಬದಲಾಗುತ್ತ ಇರದಿದ್ದರೆ ಲೋಕದಲ್ಲಿ ಕ್ಷಣಕ್ಷಣವೂ ಆಗುತ್ತಿರುವ ಹೊಸತನ್ನು ಹೇಗೆ ತಾನೇ ಗ್ರಹಿಸಬಲ್ಲೆವು? ನಿತ್ಯವೂ ಹೊಸತಾದುದನ್ನು ತಿಳಿಯಲು ನಾವು ಕೂಡ ನಿತ್ಯವೂ ಹೊಸಬರಾಗುತ್ತಲೇ ಇರಬೇಕಲ್ಲವೇ? ದಿನ ನಿತ್ಯದ ಬೋರ್‍ಗೆ ಕಾರಣ ಗಟ್ಟಿಯಾಗಿ ನಾವು ಅಪ್ಪಿಹಿಡಿದಿರುವ ನಾವು ಇಂಥವರು ಎಂಬ ಕಲ್ಪನೆಯೇ ಅಲ್ಲವೇ? ನಾನು ಹೀಗೆಯೇ ಇದ್ದು ಉಳಿದೆಲ್ಲ ಬದಲಾಗಲಿ ಎಂಬ ಆಸೆಯೇ ತಪ್ಪಲ್ಲವೇ? ಬದಲಾವಣೆಗೆ ನನ್ನನ್ನೂ ಒಡ್ಡಿಕೊಳ್ಳುವ ಧೈರ್ಯವಿಲ್ಲದೆ ಸುಮ್ಮನೆ ಕ್ರಾಂತಿಯ ಬಗ್ಗೆ, ಬದಲಾವಣೆಯ ಬಗ್ಗೆ ಮಾತನಾಡುತ್ತಾ, ನಿಷ್ಕ್ರಿಯರಾಗೇ ಇದ್ದು ಬಿಡುತ್ತೇವೆಯೋ? ಯಾವುದೇ ಬದಲಾವಣೆಯ ಕ್ರಾಂತಿಯ ನಾಯಕರನ್ನು ನೋಡಿ. ಬುದ್ಧನೋ, ಬಸವನೋ, ಅಂಬೇಡ್ಕರೋ, ಗಾಂಧಿಯೋ, ಯಾರೇ ಆಗಿರಲಿ ಅವರು ತಾವೂ ಆಮೂಲಾಗ್ರ ಬದಲಾಗುವ ಧೈರ್‍ಯ ತೋರಿದವರೇ ಅಲ್ಲವೆ?, ‘ನಾನು’ ಬದಲಾಗದೆ ಸುಮ್ಮನೆ ಬದಲಾವಣೆಯ ಬಗ್ಗೆ ಮಾತನಾಡುವುದು ಬರೀ ಮೋಸ ಅನ್ನಿಸುತ್ತದೆ.
*****