ಬಹುಮುಖ್ಯವಾದ ಫೈಲುಗಳನ್ನು ಅಟೆಂಡ್ ಮಾಡಿ ಸಾಹೇಬನ ಟೇಬಲ್ಲಿಗೆ ಕಳಿಸಿದರೂ ಮನಸ್ಸಿಗೆ ಉಲ್ಲಾಸವಿಲ್ಲ. ತಲೆತುಂಬಾ ನನ್ನ ಶ್ರೀಮತಿಯೇ ತುಂಬಿಕೊಂಡಿದ್ದಾಳೆ. ಅವಳಿಗದೆಂತಹ ಕಾಯಿಲೆಯೋ ಅರ್ಥವಾಗುತ್ತಿಲ್ಲ. ಪರಿಚಿತ ಡಾಕ್ಟರ ಬಳಿ ತೋರಿಸೋಣವೆಂದು ದಮ್ಮಯ್ಯ ಬಿದ್ದರೂ ಬರಲಿಲ್ಲ. ಮಂಜುನಾಥ ಮೆಡಿಕಲ್ ಸ್ಟೋರ್‌ನ ಅಣ್ಣಪ್ಪನೇ ನನಗೀಗ ಡಾಕ್ಟರ್, ಆತ ಸೂಚಿಸಿದ ಮಾತ್ರೆಗಳನ್ನೆಲ್ಲ ತಂದು ಇವಳಿಗೆ ಕೊಟ್ಟಿದ್ದಾಗಿದೆ. ಆದರೂ ಇವಳ ಬೆನ್ನು ನೋವು ಗುಣ ಕಂಡಿಲ್ಲ ಹಾಸಿಗೆಯನ್ನೇ ಹಿಡಿದುಬಿಟ್ಟಿದ್ದಾಳೆ. ಎರಡು ದಿನ ಇದ್ದು ಹೋಗಲು ಬಂದ ನನ್ನ ತಾಯಿ, ತಂಗಿಯೇ ಅಡಿಗೆಮನೆ ಉಸ್ತುವಾರಿಗೆ ನಿಂತಿದ್ದಾರೆ. ಅವರೇನೋ ಹೇಳಿ ಕಳಿಸಿದಂತೆ ಬಂದಿದ್ದಾರೆ ಅಂತಾರಲ್ಲ ಹಾಗೆ ಬಂದಿದ್ದಾರೋ, ಅವರು ಬಂದಿದ್ದಕ್ಕೆ ಅವಳಿಗೆ ಕಾಯಿಲೆ ಬಂದಿದೆಯೋ ಒಂದೂ ಅರ್ಥವಾಗುತ್ತಿಲ್ಲ. ಇವಳಿಗೆ ಮೊದಲಿನಿಂದಲೂ ನನ್ನ ತಾಯಿ, ತಂಗಿಯನ್ನು ಕಂಡರೆ ಅಷ್ಟಕ್ಕಷ್ಟೆ. ಇವಳೇನು ಬಂತು ಅತ್ತೆ ನಾದಿನಿಯರನ್ನು ಪ್ರೀತಿಸುವ ಹೆಣ್ಣು ಪ್ರಾಯಶಃ ಪ್ರಪಂಚದಲ್ಲಿ ಬಹುವಿರಳ. ಅಥವಾ ಇಲ್ಲೇ ಇಲ್ಲವೋ! ಅತ್ತೆ ನಾದಿನಿ ಅತ್ತೆ ಸೊಸೆಯ ಮಾತಿರಲಿ ಹೆಣ್ಣು ಹೆಣ್ಣನ್ನೇ ಪ್ರೀತಿಸದಿರುವುದೂ ಸಹ ಹೆಣ್ಣಿನ ಒಂದು ಸ್ಪೆಷಾಲಿಟಿ. ವರದಕ್ಷಿಣೆ ಸಾವಿನ ಹಿನ್ನೆಲೆಯಲ್ಲಿ ಪಾತ್ರವಹಿಸುವವಳೂ ಹೆಣ್ಣೆ, ಹೆತ್ತ ಮಗನಿಗೆ, ‘ವರದಕ್ಷಿಣೆ ತಗೊಳ್ಳೋ ಅಂಥ ಷಂಡನಾಗಬೇಡವೋ’ ಎಂದು ತಿಳಿಹೇಳುವ ಬದಲು ಸೊಸೆಗೆ ಕಿರುಕುಳ ಕೊಡುತ್ತಾ ಸೀಮೆಎಣ್ಣೆ ಕ್ಯಾನ್ ಸಿದ್ಧ ಮಾಡುವ ಅತ್ತೆ – ಹೆಣ್ಣು. ಹೆಣ್ಣನ್ನು ‘ಬಂಜೆ’ ಎಂದು ಆಡಿಕೊಂಡು ನಗುವ ಮಕ್ಕಳ ತಾಯಿ – ಹೆಣ್ಣು. ‘ಇವಳಿಗೆ ಮೂವತ್ತೈದು ಮೀರಿ ವಯಸ್ಸಾಗಿದೆ. ಇವಳಿಗಿನ್ನೆಲ್ಲಿಯ ಮದುವೆ’ ಎಂದು ಗೆಳತಿಯ ಬಗ್ಗೆಯೇ ಕುಹಕವಾಡುವವಳೂ ಹೆಣ್ಣು. ‘ಅವಳು ಯಾವತ್ತೋ ಇಟ್ಟುಕೊಂಡಿದ್ದಾಳೆ’ ಎಂದು ಸುಲಭವಾಗಿ ಊಹೆಮಾಡಿ ಹಗುರವಾಗಿ ಹೆಣ್ಣಿನ ಮಾನವನ್ನು ಕೇರಿಯಲ್ಲಿ ಹರಾಜ್ ಹಾಕುವವಳೂ ಹೆಣ್ಣೆ! ಹೆಣ್ಣಿಗೆ ಹೆಣ್ಣೆ ಶತ್ರು ಎಂದು ಎಲ್ಲೋ ಓದಿದ ನೆನಪು ಮರುಕಳಿಸುತ್ತದೆ. ಹೆಣ್ಣಿಗೆ ಹೋಲಿಸಿದಾಗ ಗಂಡು ಅಷ್ಟೊಂದು ಸ್ವಾರ್ಥಿಯಾಗಲಿ, ನಿರ್ದಯಿಯಾಗಲಿ ಖಂಡಿತ ಅಲ್ಲ ಎನಿಸುತ್ತದೆ. ಪಕ್ಷಪಾತ ಮಾಡುವುದರಲ್ಲಂತೂ ಹೆಣ್ಣಿಗೆ ಹೆಣ್ಣೆ ಸಾಟಿ. ಒಂದೇ ಪಂಕ್ತಿ ಊಟದಲ್ಲಿ ಗಂಡನಿಗೊಂದು ತರಹ ಮಾವ ಮೈದುನನಿಗೆ ಇನ್ನೊಂದು ತರಹ ಊಟ ಬಡಿಸಬಲ್ಲ ಚಾಣಾಕ್ಷೆ.
ಇವಳನ್ನು ಮದುವೆಯಾಗಿ ಮನೆ ತುಂಬಿಸಿಕೊಂಡಾಗ ಇವಳನ್ನು – ಅದೇ ನನ್ನತ್ತೆ ತುಂಬಾ ಭಯಸ್ಕ ಹುಡುಗಿ, ಜೋರಾಗಿ ಗದರಬೇಡಿ……. ಏನೂ ತಿಳೀದ ಮಗೀನ ತರಾ’ ಅಂತ ಗೋಗರೆದಿದ್ದರು. ಬಂದ ಮೂರು ತಿಂಗಳು ಹಾಗೇ ಇದ್ದಳು ಸಹ. ಆಮೇಲೆ ಅವಳಿಗೆ ಭಯ ಪಡುವ ಸರದಿ ನನ್ನದಾಯಿತು. ಆರು ತಿಂಗಳೂ ನನ್ನಮ್ಮನ ಜೊತೆ ಹೊಂದಿಕೊಳ್ಳಲಿಲ್ಲ. ಮುದುಕಿಯೂ ಸುಮ್ಮನಿರುವುದಿಲ್ಲ. ನನ್ನ ತಾಯಿಯ ನೆರಳು ಕಂಡರೇ ಇವಳಿಗೆ ಅಸಹ್ಯ, ಅಡಿಗೆ ಮನೆಗೆ ಬಂದರೆ ಏನಾದರೂ ಸಾಮಾನುಗಳನ್ನು ಮುಟ್ಟಿದರೆ ಇವಳು ಮತ್ತೆ ಮತ್ತೆ ತೊಳೆದುಕೊಳ್ಳುತ್ತಿದ್ದಳು. ಅಮ್ಮನಿಗಾಗಿಯೇ ಬೇರೆ ತಟ್ಟೆ, ಲೋಟ ಇಟ್ಟುಬಿಟ್ಟಿದ್ದಳು. ಅಮ್ಮನೂ ಒಂದಿಷ್ಟು ಕೊಳಕಾಗಿಯೇ ಇರುತ್ತಾಳೆ. ಅದವಳಿಗೆ ಬಡತನ ಕೊಟ್ಟ ಬಳುವಳಿ. ಹಳ್ಳಿಯಲ್ಲಿ ಹೊಲ ಬೇಸಾಯ ಮಾಡಿ ದನದ ಸಗಣಿ ಗಂಜಲು ಬಾಚುವ ಅಮ್ಮ ಇವಳಂತೆ ದಿನಾ ಸ್ನಾನ ಮಾಡುವ, ವಾಸನೆ ಎಣ್ಣೆಯಿಂದ ತಲೆ ಬಾಚುವ, ಮುಖ ಮೈಗೆ ಟಾಲ್ಕಂ ಪೌಡರ್ ಪೂಸುವ ಹಲ್ಲಿಗೆ ಕ್ಲೋಸ್ ಆಪ್ ತೀಡುವ ನಾಜೂಕು ಹೆಂಗಸಾಗಿರಲಿಲ್ಲ. ಅಪ್ಪ ಸತ್ತಮೇಲೆ ಹೊಲ ಮನೆಯಲ್ಲಿ ಗಂಡಸಿನಂತೆ ದುಡಿದು ನಮ್ಮನ್ನು ಸಾಕಿದವಳು. ಅವಳಿಗೆ ಸ್ನಾನ ಮಾಡಲೂ ಪುರುಸೊತ್ತಿರಲಿಲ್ಲ. ವಾರಕ್ಕೊಮ್ಮೆ ಶನಿವಾರವಷ್ಟೇ ಅವಳ ಜಳಕ – ಶಿವಪೂಜೆ. ಎಪ್ಪತ್ತಾಗಿದ್ದರಿಂದ ಮೈಚರ್ಮ ಹೆಚ್ಚೇ ಸುಕ್ಕುಗಟ್ಟಿತ್ತು. ಕಣ್ಣಲ್ಲಿ ಒರೆಸಿದಷ್ಟೂ ಪಿಸುರುಗಟ್ಟುತ್ತಿತ್ತು. ಕಣ್ಣು ಮಂದ, ಅದೇನೋ ಅದರಲ್ಲಿನ ಕಾಂತಿಯೆಲ್ಲಾ ಬತ್ತಿ ಅಲ್ಲಿ ಕ್ರೌರ್ಯ ಮಡುಗಟ್ಟಿದಂತೆ ಕಾಣುತ್ತಿತ್ತು. ಪ್ರಾಯಶಃ ತನಗೆ ಸಿಕ್ಕ ಬಾಳಿನ ಬಗ್ಗೆ ಆಕೆಯಲ್ಲಿ ಮಡುಗಟ್ಟಿದ ಕ್ರೋಧ ಕಣ್ಣುಗಳಲ್ಲಿ ಜಾಗ ಪಡೆದಿತ್ತೇನೋ. ಕುಡುಕ ಗಂಡನ ಜೊತೆ ಹೆಣಗಾಡಿ ಬಡಿದಾಡಿ ಸಂಸಾರದ ನೊಗ ಹೊತ್ತು ಒಬ್ಬಳೇ ಉತ್ತು ಬಿತ್ತಿ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗೆ ಗಂಜಿ ಕಾಣಿಸಿದ ದೊಡ್ಡ ಜೀವ. ಓದಿನಲ್ಲಿ ಚುರುಕಿದ್ದ ನನ್ನನ್ನು ಕಂಡರೆ ಆಕೆಗೆ ಬಲು ಪ್ರೀತಿ. ಅಪ್ಪನೊಂದಿಗೆ ಕಾದಾಡಿ ಕಾಲೇಜಿಗೆ ಹತ್ತಿಸಿದ್ದಳು. ನಾನೆಂದರೆ ಎಂತದೋ ಭರವಸೆ. ‘ನನ್ನ ಗಿರಿಯಣ್ಣ ಎಂದೂ ತಪ್ಪು ಮಾಡಾನಲ್ಲ. ತಪ್ಪು ದಾರಿ ತುಳಿಯಾನಲ್ಲ. ನನಗೆ ಹೆಂಗಾರ ಸದ್ಗತಿ ಕಾಣಿಸ್ತಾನೆ ನನ್ನಪ್ಪ’ ಎಂದಾಕೆ ಅನೇಕ ಸಲ ಹಟ್ಟಿಯವರ ಮುಂದೆ ಆಡಿಕೊಳ್ಳುವಾಗ ನನ್ನ ಎದೆ ಉಬ್ಬಿದ್ದಿದೆ. ಸರಿಯಾದ ಕೆಲಸ ಹಿಡಿದು ಅಮ್ಮನ್ನ ರಾಣಿ ತರಾ ಸಾಕಬೇಕೆಂದು ತುಡಿದಿದ್ದಿದೆ. ಅವಳನ ಹತ್ತಿರದ ಸಂಬಂಧದಲ್ಲಿ ಅವಳು ನೆಚ್ಚಿದ ಹೆಣ್ಣನ್ನೇ ಮದುವೆಯಾಗಿದ್ದೇನೆ. ಆದರೆ ಮನೆಗೆ ಬಂದ ಹೆಣ್ಣು ನೆಮ್ಮದಿ ತರಲಿಲ್ಲ.
‘ನಿಮ್ಮ ತಾಯಿ ಸಿಂಬಳ ಸೀನಿ ಗೋಡೆಗೆ ತೀಡುತ್ತಾಳೆ. ಕೈಯನ್ನು ತೊಳೀದ ನೀರಿನ ಹಂಡೇಲಿ ಕೈ ಇಡುತ್ತಾಳೆ. ಮೈಕೈ ತೀಡಿ ಬೆವರು ಮಣ್ಣು ತೆಗೆದು ಎಲ್ಲೆಂದರಲ್ಲಿ ಹಾಕುತ್ತಾಳೆ. ಬಂದವರ ಎದುರು ಮಾತಿಗೆ ಕೂತರೆ ಸೆರಗಿನ ಬಗ್ಗೆ ನಿಗಾನೇ ಇಲ್ಲ……..’ ವಯಸ್ಸಾದ ಮುದುಕಿಯ ಮೇಲೆ ಸಾಲು ಸಾಲು ಆಪಾದನೆಗಳು. ನಾನೆಷ್ಟೋ ಮೆದುವಾಗಿ ಅಮ್ಮನಲ್ಲಿಯೂ ಗೋಗರೆದೆ. ಆದರೇನು ಕೊಳಕು ಅವಳ ಜೀವನದ ಒಂದು ಅಂಗವೇ ಆಗಿಬಿಟ್ಟಿತ್ತು. ಇದೆಲ್ಲಾ ನನಗೆಂದೂ ದೊಡ್ಡದಾಗಿ ಕಂಡಿರಲಿಲ್ಲ. ಅಸಹ್ಯವೂ ಎನ್ನಿಸಿರಲಿಲ್ಲ. ಆದರೆ ನನ್ನವಳು ಎತ್ತಿ ತೋರಿಸುವಾಗ ನನ್ನಲ್ಲೂ ಕೀಳರಿಮೆ. ಒಂಥರಾ ಜುಗುಪ್ಸೆ, ಆದರೆ ಅಸಹಾಯಕ ನಾನೀ ಮಟ್ಟದಲ್ಲಿ ಜೀವನ ಸಾಗಿಸುತ್ತಿದ್ದರೆ ಅದಕ್ಕೆ ತನ್ನ ಜೀವವನ್ನೇ ತೇಯ್ದವಳನ್ನು ಕೊಳಕು ಮುದುಕಿ ಎಂಬ ಒಂದೇ ಒಂದು ಕಾರಣದಿಂದ ದೂರ ಸರಿಸಲು ಸಾಧ್ಯವೆ? ಅಲ್ಲಿಗೂ ನಾನು ಒಂದು ನಿರ್ಧಾರಕ್ಕೆ ಬರಲೇಬೇಕಿತ್ತು – ಬಂದೆ. ‘ಅಮ್ಮಾ ಮಾಡಿ ಹಾಕಿದ್ದನ್ನ ತಿಂದ್ಕೊಂಡು ಹಾಯಾಗಿರು. ನಿನಗ್ಯಾಕೆ ಅಡಿಗೆ ಮನೆ ಚಿಂತೆ’ ಎನ್ನುತ್ತಿದ್ದೆ. ‘ಅಯ್ಯೋ, ಕುಡಿಯಾಕೆ ನೀರು ಬೇಕು ಅನ್ನಿಸಿದ್ರೆ ತಗೊಂಡು ಕುಡಿಯೋ ಸ್ವಾತಂತ್ರ್ಯ ಇಲ್ಲ ಅಂದ್ಮಲೆ ನಾನು ಯಾಕೋ ಈ ಮನೆಯಾಗಿರ್‍ಲಿ’ – ಅಂತ ಅಮ್ಮನೂ ದುಮುಗುಟ್ಟುತ್ತಿದ್ದಳು! ‘ಇವಳೆಲ್ಲಿಂದ ಸಿಕ್ಳೋ ಬಣ್ಣದ ಬೀಸಣಿಗೆ, ಗುರೇರಿಲ್ಲ ಹಿರೇರಿಲ್ಲ ಚಂಡಾಳಿ’ ಎಂದು ಗಟ್ಟಿಯಾಗಿಯೇ ಗೊಣಗುಟ್ಟುತ್ತಿದ್ದಳು. ಅಮ್ಮನಿಗೆ ಪರಿಸ್ಥಿತಿ ಅರ್ಥವಾಗಿತ್ತು. ಆದರೆ ಆಕೆಗೆ ನನ್ನನ್ನು ಬಿಟ್ಟು ಹೋಗಲು ಇಷ್ಟವಿಲ್ಲ. ಹೋಗೋದಾದರೂ ಎಲ್ಲಿಗೆ? ಒಬ್ಬನೇ ಮಗ, ಒಬ್ಬಳೇ ಮಗಳು ಆಕೆಗಿದ್ದ ಚರಸ್ಥಿರ ಆಸ್ತಿ. ‘ಸೊಸೆ ಬಿನ್ನಾಣಗಿತ್ತಿ ಸಿಕ್ಕರೂ ಅಳಿಮಯ್ಯ ಬಸವಣ್ಣನಂತೋನು’ ಅಂತ ಅಮ್ಮ ಆಗಾಗ ಎಲ್ಲರೆದುರೂ ಅಳಿಯನ ಗುಣಗಾನ ಮಾಡುತ್ತಿದ್ದುದುಂಟು. ನಿಜಕ್ಕೂ ಚೆನ್ನಣ್ಣ ಸಂಭಾವಿತ, ಬೆವರು ಬಸಿದು ದುಡಿವ ರೈತ. ನಮ್ಮ ಹೊಲವನ್ನೂ ಅವನೇ ನೋಡಿಕೊಳ್ಳುತ್ತಿದ್ದ. ತಂಗಿಯನ್ನೂ ವೈನಾಗಿಟ್ಟುಕೊಂಡಿದ್ದ. ನನ್ನ ಹೆಂಡತಿಯಂತೂ ಅಮ್ಮನಿಗೆ ಹೊಂದಿಕೊಳ್ಳುವುದಿಲ್ಲ ಎಂಬ ಕಟುಸತ್ಯದ ಅರಿವಾಗಿತ್ತು. ಹಾಗಂತ ಅಮ್ಮನಿಗೆ ಹೇಳೋದಾದರೂ ಹೇಗೆ? ಅಮ್ಮನಿಗೆ ಒಂದು ತುತ್ತು ಅನ್ನ ಹಾಕಲಾರದವನು ಅಂತ ಜನ ನನ್ನನ್ನು ಆಡಿಕೊಳ್ಳುವುದಿಲ್ಲವೆ ಎಂಬ ನೈತಿಕ ಭಯ ನನ್ನನ್ನು ಕಾಡುತ್ತಿತ್ತು.
ಒಂದು ಸಂಜೆ ಬಂದಾಗ ನನ್ನವಳ ಮುಖ ಜ್ವಾಲಾಮುಖಿಯಾಗಿತ್ತು. ಬಾಗಿಲಲ್ಲೆ ಅಮ್ಮ ಎಳೆ ಬಿಸಿಲಿಗೆ ಕೂತು ತಲೆಬಾಚಿಕೊಳ್ಳುತ್ತಾ ಬಾಚಣಿಕೆಯಿಂದ ಹೇನು ಹೆಕ್ಕಿ ತೆಗೆಯುತ್ತಾ ಎಡ ಹೆಬ್ಬೆಟ್ಟಿನ ಮೇಲೆ ಹಾಕಿ ಬಲಹೆಬ್ಬೆಟ್ಟಿನ ಉಗುರಿನಿಂದ ಹೇನು ಸಂಹಾರ ನಡೆಸಿದ್ದಳು. ಇದರಲ್ಲಿ ನನಗೇನಂತಹ ಅತಿಶಯೋಕ್ತಿ ಕಾಣಲಿಲ್ಲ. ಆದರೆ ನನ್ನವಳು ಆಸ್ಫೋಟಿಸಿದಳು. “ನಾನು ಇರಬೇಕು. ಇಲ್ಲ ಈ ಮನೇಲಿ ನಿಮ್ಮ ಅಮ್ಮ ಇರಬೇಕು. ಅದು ಈವತ್ತೇ ಡಿಸೈಡ್ ಆಗಿ ಬಿಡಬೇಕು…… ಛಿ……. ಛಿ…….. ದೇವರು ಬಡತನ ಕೊಟ್ಟಿರಬಹುದು. ಬೀದಿ ಬಾಗಲಲ್ಲಿ ಕೂತು ಹೇನು ಕುಕ್ಕುತ್ತೆ, ಗೋಡೆಗೆಲ್ಲಾ ಸಿಂಬಳ ಬಳಿಯುತ್ತೆ, ಎಲ್ಲಂದರಲ್ಲೆ ಉಗಿಯುತ್ತೆ ದಿನಾ ಸ್ನಾನ ಮಾಡೋಕೇನು ಬಂದಿರೋದು ಧಾಡಿ?” – ಇವಳ ಪ್ರವರ ನಿಲ್ಲುವ ಮೊದಲೇ ಅಮ್ಮನೂ ಇದುವರೆಗೂ ತಡೆಹಿಡಿದಿದ್ದ ಸಿಟ್ಟಿನ ಪ್ರವಾಹವನ್ನು ಹರಿಯಬಿಟ್ಟಳು. ‘ನಾನು ನನ್ನ ಮಗನಿಗೆ ಹಣರಣ ಸೋಸಿ ಹೊಟ್ಟೆಬಟ್ಟೆ ಕಟ್ಟಿ ಬಿ.ಎ. ಪ್ಯಾಸ್ ಮಾಡಿಸದಿದ್ರೆ ನೀನೆಲ್ಲಿಂದ ಬರ್ತಿದ್ದೆ ಭಿಕನಾಸಿ? ನಾನು ಕೊಳಕಿನೇ ಕಣೆ. ಆದರೆ ನಿನ್ನಂಗೆ ಮೇಲೆ ಥಳಕಿನ ಹೆಂಗಸಲ್ಲ. ಅತ್ತೆ ಅಂತ ಭಯವೆ? ಹೋಗ್ಲಿ ಕಟ್ಟಿಕೊಂಡ ಗಂಡಾ ಅಂತ ಭಯವೆ? ನೀನೆಲ್ಲಿ ಸಿಕ್ಕೆ ವಿಧಿಮುಂಡೆ….” ಅತ್ತೆ ಸೊಸೆಯರಿಬ್ಬರೂ ಮಾತಿನಿಂದ ಕೈಗಿಳಿದಾಗ ನಾನು ಅಸಹಾಯನಾಗಿ ರೇಗಬೇಕಾಯಿತು. ನೀನು ಸುಮ್ಮಿರಮ್ಮ, ರತ್ನ ಹೇಳೋದ್ರಲ್ಲಿ ಏನ್ ತಪ್ಪಿದೆ. ಕ್ಲೀನಾಗಿರಬೇಕು ಇದು ಸಿಟಿ – ನಿನ್ನ ಹಳ್ಳಿ ಅಲ್ಲ’ – ಅಂದೆ ದೊಡ್ಡದಾಗಿ ಕಣ್ಣು ಬಿಡುತ್ತಾ. ಆಕೆ ಇನ್ನೂ ದೊಡ್ಡದಾಗಿ ಕಣ್ಣು ಕಣ್ಣು ಬಿಡುತ್ತಾ ಮೋರೆಗೆ ತಿವಿದುಬಿಟ್ಟಳು. ‘ನಾಮರ್ದಾ. ಹೆಂಡತಿ ಮುಠಾಳ ಕಟ್ಟಿಕೊಂಡ ನಾಯಿಗೆ ಬುದ್ದಿ ಹೇಳೋದು ಬಿಟ್ಟು, ಹೆತ್ತ ತಾಯಿಗೆ ಬುದ್ದಿ ಹೇಳ್ತಿಯೇನೋ ಗುಲಾಮ. ನನ್ನ ಕೈ ಮೈ ಕೊಳೆಯಾಗದಿದ್ರೆ ನೀನೆಲ್ಲಿ ಓದಿ ಸಿಟಿಗೆ ಬರ್ತಿದ್ಯೋ? ಮೈ ತೊಳಿಯೋದೇ ಘನಂದಾರಿ ಕೆಲ್ಸವಲ್ಲ ಕಣೆ. ಮನಸ್ಸು ತೊಳಿಬೇಕು!’ ನಾನು ಕೈ ಕೈ ಮುಗಿದೆ. ‘ಕೂಗಾಡಬೇಡಮ್ಮ ಫ್ಲಾಟ್‌ನಲ್ಲಿರೋರೆಲ್ಲಾ ನಮ್ಮ ಮನೆ ಕಡೇನೇ ನೋಡ್ತಿದಾರೆ’ ಅಂತ. ‘ನೀನೂ ಬ್ಯಾಡ ನಿನ್ನ ಮನೇನೂ ಬ್ಯಾಡ ಹೋಗಲೆ ನಾಯಿ’ ಎಂದು ಬರಬರನೆ ಹೊರಟೇಹೋದಳು ಮುದುಕಿ. ‘ಅಮ್ಮಾ ಅಮ್ಮಾ’ ಎಂದು ಕೂಗಿದರೂ ತಿರುಗಿ ಸಹ ನೋಡಲಿಲ್ಲ. ಗಂಟೆಗಳುರುಳಿದರೂ ಅಮ್ಮ ಹಿಂದಿರುಗಲಿಲ್ಲ. ಅನೇಕ ಸಲ ಹೀಗೆ ಜಗಳ ಕಾಯ್ದು ಹೋದರೂ ಬೇಗ ಬಂದು ಬಿಡುತ್ತಿದ್ದಳು. ಆದರೆ ರಾತ್ರಿ ಹತ್ತಾದರೂ ಮುದುಕಿ ಪತ್ತೆಯಿಲ್ಲ. ಇನ್ನೆಲ್ಲಿ ಹೋಗುತ್ತೆ. ಕತ್ತೆ ಸತ್ತರೆ ಹಾಳು ಗೋಡೆ. ನಿಮ್ಮ ಚಿಕ್ಕಮ್ಮನ ಮನೇಲಿ ಬಿದ್ದಿರಬೇಕು. ಬರ್ತಾಳೆ ಬಿಡಿ…..’ ತಿರಸ್ಕಾರದ ನುಡಿ. ’ಅಲ್ವೆ ಕತ್ತಲಾಗಿದೆ…..’ ಎಂದು ನಾನು ಗಾಬರಿಗೊಂಡರೆ ಇವಳಿಗೆ ನಗು. ‘ಏನು ಹರೇದ ಹುಡುಗಿ ನಿಮ್ಮವ್ವ- ’ ಎಂಬ ಉಡಾಫೆ. ಮತ್ತೂ ಒಂದು ಗಂಟೆ ಕಳೆದಿತ್ತು. ‘ನೀವೇನು ಊಟಕ್ಕೆ ಬರ್ತಿರೋ ಇಲ್ಲೋ?’ ಇವಳ ದಬಾವಣೆ, ಊಟ ಗಂಟಲಲ್ಲಿ ಇಳಿಯುವುದಾದರೂ ಹೇಗೆ? ‘ಈಗ ಬಂದೆ ತಡಿಯೆ’ ಎಂದು ಇವಳ ಪ್ರತಿಕ್ರಿಯೆಗೂ ಕಾಯದೆ ಚಿಕ್ಕಮ್ಮನ ಮನೆಗೆ ಸ್ಕೂಟರ್ ಓಡಿಸಿದೆ. ಮುದುಕಿ ಅಲ್ಲಿಲ್ಲ. ಆಕಿ ಗೆಳತಿಯರಿಬ್ಬರ ಮನೆಯನ್ನೂ ತಪಾಸಣೆ ಮಾಡಿದೆ. ಅಲ್ಲೂ ಇಲ್ಲ! ಹಾಗಾದರೆ ಸರಿ ರಾತ್ರಿ ಮುದುಕಿ ಎಲ್ಲಿ ಹೋಯಿತು? ಜೀವಕ್ಕೆ ಏನಾದರೂ ಮಾಡಿಕೊಂಡಿತೆ? ಅಂತಹ ಅಳ್ಳದೆಯ ಮುದುಕಿಯಲ್ಲ. ಸಾಲ ಮಾಡಿ, ಚಿಕ್ಕಮಕ್ಕಳನ್ನು ಕೊರಳಿಗೆ ಕಟ್ಟಿ ಕುಡಿಕುಡಿದು ಸರಾಯಿ ಅಂಗಡಿಯಲ್ಲೇ ಗಂಡ ಸತ್ತಾಗಲೂ ಅಂಜಿದವಳಲ್ಲ. ಆತ್ಮಹತ್ಯೆ ಬಗ್ಗೆ ಎಂದೂ ಯೋಚಿಸಿದವಳಲ್ಲ. ಊಟ ಸೇರಲಿಲ್ಲ. ಇವಳಂತೂ ಹಾಯಾಗಿ ಮಲಗಿಬಿಟ್ಟಳು. ಎರಡು ದಿನವಾದರೂ ಮುದುಕಿಯ ಸುಳಿವಿಲ್ಲ. ಪೊಲೀಸ್ ಸ್ಟೇಷನ್‌ಗಾದ್ರೂ ಹೋಗಿ ದೂರು ಕೊಡಲೆ ಎಂದಾಲೋಚಿಸುವಾಗಲೆ ಹಳ್ಳಿಯಿಂದ ಬಂದ ಕ್ರಿಸ್ಪಿ ಅಮ್ಮನ ಸುದ್ದಿ ತಂದಿದ್ದ. ಅಮ್ಮ ಹಳ್ಳಿಯಲ್ಲಿ ಅಳಿಯನ ಮನೆಯಲ್ಲಿರುವ ಸುದ್ದಿ ಕೇಳಿ ಉರಿವ ಎದೆ ತಣ್ಣಗಾಗಿತ್ತು. ಹೊಟ್ಟೆಯಲ್ಲಿದ್ದ ಸಂಕಟ ಇಂಗಿತ್ತು. ನಾನಿದ್ದೂ ಮಗಳ ಮನೇಲೆ ಯಾಕೆ ಸೇರ್‍ಕೊಂಡೆ ಎಂದು ನಾನೇನು ರಂಪ ಮಾಡಲಿಲ್ಲ. ಸ್ವಾಭಿಮಾನವನ್ನು ಕೊಂದು, ಎಲ್ಲಿಯಾದರೂ ಸುಖವಾಗಿರಲಿ. ಅಮ್ಮ ಚೆನ್ನಾಗಿರೋದೇ ನನಗೆ ಮುಖ್ಯ ಎಂದು ಜವಾಬ್ದಾರಿಯಿಂದ ನುಣುಚಿಕೊಂಡೆ.
ಆಗ ಮನೆಬಿಟ್ಟು ಹೋದವಳು ಈಗ ಬಂದಿದ್ದಳು – ತಂಗಿ ಜೊತೆ. ಬಂದವಳು ಹಳೆಯದನ್ನು ಎತ್ತಿಎಣಿಸದೆ ನಗುನಗುತ್ತಲೆ ಹೊಂದಿಕೊಂಡಳು. ‘ವಯಸ್ಸಾಯ್ತು. ಈ ಮುದಿ ಕೊರಡು ಎಷ್ಟು ದಿನ ಇರುತ್ತೆ. ಒಂದಲ್ಲ ಒಂದಿನ ಬಿದ್ದೋಗದೆ, ಮಗ ಸೊಸೆ ವೈರ ಕಟ್ಕೊಂಡು ಸಾಧಿಸಾದಾನ ಏನೈತೆ. ಸಾಯ ಕಾಲ್ನಾಗೆ ನಿನ್ನ ಮಕಾ ನೋಡಂಗೆ ಸಾಯೋ ಸ್ಥಿತಿಯಾ ನಾನಾಗೇ ತಂದ್ಕೋಬಾರ್ದು ಅಂತ ಬಂದೆ ಕಣಾ’ ಎಂದು ಸೆರಗಿನಲ್ಲಿ ಕಣ್ಮರೆಸಿಕೊಂಡಿದ್ದಳು. ಅಮ್ಮ ತಂದ ಸೇಂಗಾ ಮೂಟೆ, ತರಕಾರಿ ಚೀಲ, ಉರಿಟ್ಟು, ಮಿಡಿ ಮಾವಿನಕಾಯಿ ಎಲ್ಲಾ ಅಡಿಗೆ ಮನೆ ಸೇರಿದ್ದವು. ಅಮ್ಮ ಮಾತ್ರ ಅಡಿಗೆ ಮನೆಗೆ ಕಾಲಿಡಲಿಲ್ಲ. ಏನೇನೋ ಉಂಡೆ ತಿಂಡಿ ಮಾಡಿ ತಂದಿದ್ದಳು, ತಿಂಡಿ ತಿಂದಿದ್ದು ನಾನೊಬ್ಬನೆ. ಇವರೂ ಇವಳಿಗೆ ಬಲವಂತ ಮಾಡಲಿಲ್ಲ. ಇವಳೂ ಜಾಣೆ. ‘ಹೊರಗಾಗಿದೀನಿ’ ಅಂತ ಮೂರು ದಿನ ಹೊರಗೇ ಕುಳಿತಳು – ಕಾದಂಬರಿ ಹಿಡಿದು, ಅಡಿಗೆ ಮನೆ ಚಾರ್ಜು ನನಗೇ ಬಿತ್ತು. ನಾನೇ ಅನ್ನ, ತಿಳಿಸಾರು, ಎಲ್ಲರಿಗೂ ಕಾಣಿಸಿದೆ. ಪಾತ್ರೆ ಪಡಗತೊಳೆದು ಕಸಮುಸರೆಗೆ ತಾಯಿ ತಂಗಿ ನಿಂತರು. ನಾಲ್ಕನೆ ದಿನ ನೀರು ಹಾಕಿಕೊಂಡು ಒಳಬಂದವಳು ಸೊಂಟನೋವು ಅಂತ ರೂಮು ಸೇರಿದಳು. ಯಾವ ಗುಳಿಗೆ ಮಾತ್ರೆಗಳೂ ಅವಳ ನೋವನ್ನು ಪಾರು ಮಾಡಿದಂತೆ ಕಾಣಲಿಲ್ಲ, ನನಗೆ ದಿಕ್ಕೇ ತೋಚಲಿಲ್ಲ. ನರ್ಸಿಂಗ್ ಹೋಮ್‌ನಲ್ಲಾದ್ರೂ ತೋರಿಸೋಣವೆಂದರೆ ಜಪ್ಪಯ್ಯ ಎಂದರೂ ಇವಳು ಕೇಳಲಿಲ್ಲ. ನಾಲ್ಕು ಜನರಿಗೆ ಅಡಿಗೆ ನೀರು ಅಂತ ನಾನು ಪಡ್ಚಾಆದೆ. ‘ನೀವು ಬಂದು ವಾರವಾಯ್ತು ಪಾಪ. ಹೋಲ ಮನೆ ಕಡೆ ಏನೋ ಹೆಂಗೋ’ ಎಂದು ರಾಗ ತೆಗೆದೆ ನಾನು. ‘ಅಯ್ಯೋ! ನಿನ್ನ ಹೆಣ್ತಿಗೆ ಹಿಂಗಿರೋವಾಗ ಹೆಂಗೋ ಬಿಟ್ಟೋಗೋದು’ ಎಂದು ತಂಗಿ ಅನುಕಂಪ ಸೂಸಿದಳು. ‘ಮೊದ್ಲೆ ಮಾಯಕಾತಿ ಹೆಣ್ಣು…… ನಾನು ಸಾಯ್ತಾ ಬಿದ್ದಿದ್ದು ಬಿಟ್ಟು ಹೋದ್ರು ಅಂತ ಗಂಡನ ಕಿವಿ ಊದ್ದೇ ಇರ್ತಾಳ್ಯೆ…… ಇಲ್ಲಿ ಅವಳು ಒಂದೀಟು ಎದ್ದು ಓಡಾಡ್ಲಿ ತಾಳು’ ಎಂದು ಅಮ್ಮನೂ ಮಾತಿನಲ್ಲೇ ಇರಿದಳು. ನನ್ನ ಮಾತುಗಳು ಗಂಟಲಲ್ಲೇ ಉಳಿದವು. ‘ಒಂದು ಸಿಹಿನಾದರೂ ಮಾಡಿ ಹಾಕಿ……. ಹೋಗ್ತಾರೇನೊ’ ಎಂದಿವಳು ನರಳಿದಳು. ಶ್ಯಾವಿಗೆ ಪಾಯಸ ಬಸಿದೆ. ಒಂದು ಪಿಕ್ಚರ್ ತೋರಿಸಿದರೆ ಅಲ್ಲಿಗೆ ‘ಹೋಗಿ’ ಅಂತ ಸಿಗ್ನಲ್ ಅಂದುಕೊಂಡು ತಾಯಿ – ತಂಗಿಯನ್ನು ಪಿಕ್ಚರ್‍ಗೆ ಹೊರಡಿಸಿದೆ. ‘ಬ್ಯಾಡಣ್ಣಾ, ಅತ್ತಿಗೆಗೆ ಹುಷಾರಿಲ್ಲ’ ಎಂದು ತಂಗಿ ಕಣ್ಣಲ್ಲಿ ನೀರು ತುಂಬಿಕೊಂಡಳು. ಮಾರನೆ ದಿನ ಇವಳಿಗೆ ಭಾರಿ ಹೊಟ್ಟೆನೋವು ಕಾಣಿಸಿಕೊಂಡಿತು. ಮಾತ್ರೆ ಬದಲಾಯಿಸಿದೆ. ಜಗ್ಗಲಿಲ್ಲ. ‘ನಾವ್ ಹೋದ್ರೆ ಹೊಟ್ಟೆನೋವು ಸೊಂಟನೋವು ಎಲ್ಲಾ ಹೋಯ್ತದೆ ಕಣಪ್ಪಾ’ ಎಂದು ಅಮ್ಮ ಕೊಂಕು ನುಡಿದೇಬಿಟ್ಟಳು. ‘ಎಲ್ಲಾ ನನ್ನ ಪ್ರಾರಬ್ಬ’ ಎಂದು ನನ್ನನ್ನು ನಾನೇ ಬೈದುಕೊಂಡೆ – ನಿನ್ನ ಮಾತು ಅರ್ಥವಾಯಿತು ಎಂಬಂತೆ ನಕ್ಕೆ. ‘ಯಾವಾಗ ಹೋಗ್ತಿರಾ?’ ಎಂದು ಕೇಳುವ ಮನಸ್ಸಾಗಲಿಲ್ಲ. ನನ್ನ ಸ್ಥಿತಿಯ ಬಗ್ಗೆ ನನಗೇ ಹೇಸಿಕೆಯಾಯಿತು. ತಾಯಿಯ ಮುಖ ನೋಡುವ ಧೈರ್ಯ ಸಾಲದೆ ಆಫೀಸಿಗೆ ಬಂದಿದ್ದೆ.
ಇವಳಾದರೂ ಹಾಗೆಲ್ಲ ಸುಮ್ಮನೆ ಮಲಗುವವಳಲ್ಲ. ತುಂಬಾ ಚುರುಕು ಹೆಂಗಸು. ವಾರಗಟ್ಟಲೆ ಮುಲುಗುತ್ತಾ ಮಲಗಿದ್ದಾಳೆಂದ ಮೇಲೆ ನಿಜವಾಗಿಯೂ ನೋವಿರಬೇಕು. ಹೊಟ್ಟೆನೋವು ಅಂದ ಮೇಲೆ ಅಲ್ಸರ್ ಏನಾದರೂ ಆಯಿತೆ. ಮೊದಲೆ ಖಾರ ಹೆಚ್ಚು ತಿನ್ನುತ್ತಾಳೆ. ಊಟಕ್ಕೆ ದಿನಾ ನೆಂಚಿಗೆಗೆ ಮೆಣಸಿನಕಾಯಿಬೊಂಡಾ ಇರಲೇಬೇಕು. ಕರಿದಿದ್ದನ್ನು ತಿನ್ನೋದು ಜಾಸ್ತಿನೇ. ಏನಾಯಿತಿವಳಿಗೆ? ಈಗಲೆ ಇವಳ ಗುಳಿಗೆ ಮಾತ್ರೆಗಳಿಗೆಂದು ಖರ್ಚು ಮಾಡಿದ ದುಡ್ಡಿನಿಂದಾಗಿ ನನ್ನ ತಿಂಗಳ ಬಡ್ಜಟ್ ಏರುಪೇರಾಗಿತ್ತು. ಸಂಬಳವನ್ನೇ ನಂಬಿಕೊಂಡಿರುವ ನನ್ನಂತವನ ಪಾಡೇನು. ಅಲ್ಸರ್ ಪಲ್ಸರ್ ಅಂತಾಗಿ ಆಪರೇಷನ್‌ವರೆಗೂ ಕಾಯಿಲೆ ಎಳೆದರೆ ಎಲ್ಲಿ ಲೋನ್ ತೆಗೆದುಕೊಳ್ಳಲಿ ಎಂಬ ಪೇಚಿಗೆ ಬಿದ್ದೆ. ನನ್ನಂತಹವರಿಗೆ ಲೋನಾದರೂ ಬಲ್ಲವರು ಯಾರು ಕೊಡುತ್ತಾರೆ? ಕೆಲವು ಸಲ ತಿಂಗಳ ಕೊನೆಗೆ ಆಫೀಸಿನ ಸ್ನೇಹಿತರನ್ನು ಸಾಲಕ್ಕಾಗಿ ಅಂಗಲಾಚುವುದೂ ಇದೆ. ‘ಅಲ್ಲಯ್ಯ ಸಂಸಾರಕ್ಕೆ ಸಂಬಳಾನೇ ಸಾಕಾಗೋಲ್ಲ ಅಂತಿ. ನಮ್ಮ ಸಾಲ ಹೆಂಗಯ್ಯ ತೀರಿಸ್ತಿ?’ ಎಂದೊಬ್ಬ ನಕ್ಕರೆ, ‘ಸತ್ಯಹರಿಶ್ಚಂದ್ರ ನೀನು. ಪಾಪ….. ಗಿಂಬಳ ಮುಟ್ಟೋದಿಲ್ಲ. ದರಿದ್ರ ನಿನ್ನ ಬಿಡೋದಿಲ್ಲ’ ಮತ್ತೊಬ್ಬ ಗೇಲಿಮಾಡುತ್ತಾನೆ. ಪ್ರಾಮಾಣಿಕವಾಗಿ ಜೀವಿಸುವುದೂ ಇತ್ತೀಚೆಗೆ ಅಪರಾಧವೆನ್ನಿಸಿದೆ. ‘ನಾವು ಸಾಲ ಕೊಟ್ಟರೆ ಹೇಗಯ್ಯ ತಗೋತಿ? ಈ ಹಣ ಗಿಂಬಳದ್ದು’ ಎಂದು ಜೋರಾಗಿಯೇ ಹೇಳಿ ತಾಂಬೂಲ ಸಿಡಿಯುವಂತೆ ನಗುತ್ತಾನೆ ಇನ್ನೊಬ್ಬ. ಹೀಗೆ ಲಂಚಕ್ಕೆ ಕೈಚಾಚದ ಕುಡಿಯದ ಆದರ್ಶದ ಏಣಿ ಏರಿ ಕಛೇರಿಯ ಸಹೋದ್ಯೋಗಿಗಳ ಸ್ನೇಹವಿಲ್ಲದೆ ಒಂಟಿಯಾಗಿದ್ದೆ. ಲಂಚವನ್ನು ‘ಲಂಚ್’ ಎಂದು ತಿಳಿದ ಸಾಹೇಬನ ದೃಷ್ಟಿಯಲ್ಲಿ ಕ್ಷುಲ್ಲಕ ಹುಳುವಾಗಿದ್ದೆ. ನಾನಂದುಕೊಂಡಂತೆ ಕಛೇರಿಯಲ್ಲಾಗಲಿ, ಹೊರಗಾಗಲಿ ಕಟ್ಟಿಕೊಂಡು ಕನ್ಯಾರತ್ನಳಿಂದಾಗಲಿ ನನ್ನ ನಿಸ್ಪೃಹತೆಗೆ ಹೆಚ್ಚಿನ ಗೌರವವೇನೂ ದೊರಕಿರಲಿಲ್ಲ. ‘ಕೆಲಸಕ್ಕೆ ಬಾರದವ, ತಾನು ತಿನ್ನಲ್ಲ. ತಿನ್ನುವವರಿಗೂ ಬಿಡೋಲ್ಲ’ ಅನ್ನೋ ಅಕ್ಕಪಕ್ಕದ ಗುಮಾಸ್ತರ ಪಾಲಿಗೆ ಬಿಸಿತುಪ್ಪವಾಗಿದ್ದೆ. ‘ನೋಡಿ, ನಿಮ್ಮ ಸ್ನೇಹಿತ ಭರ್ಜರಿ ಮನೆ ಕಟ್ಟಿದ. ಹೆಂಡತಿಗೆ ನೆಕ್ಲೆಸ್ ಮಾಡ್ಸಿ ಹಾಕಿದಾನೆ. ನೀವು ಅದೇ ಆಫೀಸಿನಲ್ಲಿದ್ದೀರಿ ದಂಡಕ್ಕೆ, ಒಂದು ಜೊತೆ ಬಳೆನಾದ್ರೂ ಮಾಡಿಸಿದ್ದಿರಾ ನಿಮ್ಮ ಯೋಗ್ಯತೆಗೆ….. ನಿಮ್ಮ ಕೈನಿಂದ ಎಂತದೂ ಆಗಲ್ಲ ಬಿಡಿ’ ಎಂಬ ಹೆಂಡತಿಯ ಪಾಲಿಗೆ ಗುಡ್ ಫಾರ್ ನಥಿಂಗ್ ಆಗಿದ್ದೆ.
ಮದುವೆಯಾಗುವ ವಿಷಯದಲ್ಲೂ ನಾನೇನು ಅಷ್ಟೊಂದು ಜವಾಬ್ದಾರಿಯಿಂದ ನಡೆದುಕೊಳ್ಳಲಿಲ್ಲವೆಂದು ಈಗ ಅನ್ನಿಸುತ್ತಿದೆ. ವರದಕ್ಷಿಣಿ ವರೋಪಚಾರದ ಮಾತು ಎತ್ತದೆ ಸರಳ ವಿವಾಹವೇ ನನಗಿಷ್ಟವೆಂದು ಇವಳನ್ನು ಮಠ ಒಂದರಲ್ಲಿ ಮದುವೆಯಾದೆ. ಅದದ್ದೇನು? ವರದಕ್ಷಿಣೆ ವಸೂಲಿ ಮಾಡಿ ಇವಳ ಅಕ್ಕನನ್ನು ಮದುವೆಯಾದ ದೊಡ್ಡ ಅಳಿಯನೆಂದರೆ ನನ್ನ ಮಾವ ಅತ್ತೆಗೆ ಜೀವ ಭಯ, ಆತನಿಗೆ ದೊರಕುವ ಆದರಾತಿಥ್ಯವೇ ಬೇರ: ನಾನೆಂದರೆ ಅವರಿಗೆ ಅಲಕ್ಷವೋ, ನಿರುಪದ್ರವಿ ಎಂಬ ಅನುಕಂಪವೋ ಪತ್ತೆ ಹಚ್ಚಬೇಕಾಗಿದೆ. ವರದಕ್ಷಿಣೆ ತೆಗೆದುಕೊಳ್ಳುವ ‘ವರಹಾ’ ಗಳನ್ನು ನಿತ್ಯವೂ ಬೈದುಕೊಳ್ಳುವ; ತನ್ನ ಸಣ್ಣ ತಂಗಿಗೆ ಮೂವತ್ತಾದರೂ ಮನೆಯಲ್ಲಿ ಬಿದ್ದಿರುವುದಕ್ಕೆ ಗಂಡುಗಳು ಕೇಳುವ ದಂಡಿಗಟ್ಟಲೆ ವರದಕ್ಷಿಣೆ ಕಾರಣ ಎಂದು ಕೂಗಾಡುವ ನನ್ನ ಶ್ರೀಮತಿ ಅವಳನ್ನು ‘ಫ್ರೀ’ ಯಾಗಿ ಮದುವೆಯಾದ ನನ್ನನ್ನು ಒಂದು ಸಾರಿಯೂ ಹೊಗಳಿದ್ದಿಲ್ಲ. ನನ್ನ ಅವಳ ಮಧ್ಯೆ ಆಗಾಗ ಕೋಲ್ಡ್ ವಾರ್‌ನಲ್ಲಿ ನಾನು ಅನ್ನುವುದಿದೆ ‘ನಿನ್ನನ್ನ ಪುಗಸಟ್ಟೆ ಆದ್ನಲ್ಲ ನಂದೇ ತಪ್ಪು ಕಣೆ ’ ಅಂತ. ಆಗ ಇವಳು ರುದ್ರಾವತಾರ ತಾಳುತ್ತಾಳೆ ‘ನಮ್ಮಪ್ಪನ್ನ ಕೇಳಬೇಕಿತ್ತು ಬಿಸಾಕ್ತಿದ್ದರು. ವರದಕ್ಷಿಣಿ ಇಲ್ಲೆ ಮದುವೆಯಾಗಿ ಈಗ ಗೋಳುಹೊಡ್ಕೊತಿದಿರೇನ್ರಿ’ ಎಂದು ನೆರೆಹೊರೆಯವರಿಗೆ ಕೇಳುವಂತೆ ಅರಚಾಡಿ ಅಳುವಾಗ ನನಗೆ ಒಳಗೇ ದಿಗಿಲು, ಗರಮ್ ಆದವನು ನರಮ್ ಆಗಿಬಿಡುತ್ತೇನೆ. ವರದಕ್ಷಿಣೆ ತೆಗೆದುಕೊಂಡು ಹಿಂಸಿಸುವ, ಅಪಮಾನಿಸುವ, ಕುಡಿದುಬಂದು ಜಾಡಿಸಿ ಒದೆವ ಗಂಡಂದಿರಿಗೇ ಹೆಣ್ಣು ಹೆದರುವುದೇನೋ ಎಂಬ ಅನುಮಾನಕ್ಕೂ ಪಕ್ಕಾಗಿದ್ದೇನೆ. ನಾನೂ ಕಂಠಮಟ್ಟ ಕುಡಿಯಬೇಕು. ಕುಡಿದು ಬಂದು ಹೊಡೆಯಬಾರದೇಕೆ ಅನ್ನಿಸಿದೆ. ಈಗ ಪ್ರಾಮಾಣಿಕ ಬದುಕಿಗೆ ಬೆಲೆ ಎಲ್ಲಿ? ನೋಟು ತುಂಬಿದವನಿಗೆ ಮಾತ್ರ ನಜರುಮುಜರೆ ಸಲ್ಲಿಸುವ ಕಾಲ ಇದು. ಲಂಚ ತೆಗೆದುಕೊಳ್ಳುವ ಗುಮಾಸ್ತನಿಗೆ ಸಲಾಂ ಹೊಡೆವ ಜನ ನನ್ನನ್ನು ಕಂಡರೆ ‘ಕೇರ್’ ಮಾಡುವುದೇ ಇಲ್ಲ. ಅವನ ಹತ್ತಿರ ಫೈಲಿದೆಯಾ…… ಮಾಡಿಕೊಡ್ತಾನ್ ಬಿಡ್ರಿ’ ಅಂತ ನಿರ್ಲಕ್ಷ್ಯದಿಂದ ಮಾತಾಡುವುದನ್ನು ಗಮನಿಸಿದ್ದೇನೆ. ಆದರ್ಶ ಎಂಬ ಪದ ಎಷ್ಟೊಂದು “ಅಗ್ಗ” ವಾಗಿಬಿಟ್ಟಿದೆಯಲ್ಲ ಎಂಬ ವ್ಯಥೆ ಮನಸ್ಸನ್ನು ಇರಿಯುತ್ತದೆ. ನಾಲ್ಕು ಜನರಂತೆ ಬಾಳದೆ ಹೋದದ್ದೇ ನನ್ನ ತಪ್ಪೆ ಎಂದು ಮರುಗುವಂತಾಗುತ್ತದೆ. ಯಾವನೋ ಫರಮ್‌ನವನು ಬಂದು ಟೇಬಲ್ ಬಡಿದಾಗ ಆಲೋಚನೆಗಳ ಮೂಟೆ ಇಳಿಸುತ್ತೇನೆ. ನಿದ್ದೆ ಮಾಡ್ತಿದಿರೇನ್ರಿ?’ ಎಂದು ಒರಟಾಗನ್ನುತ್ತಾನೆ. ನಾನು ಉತ್ತರಿಸುವ ಗೋಜಿಗೆ ಹೋಗದೆ ಅವನ ಪಾಸಾದ ಬಿಲ್ ಅನ್ನು ಅವನ ಮುಂದಿಟ್ಟು ರುಜು ಪಡೆಯುತ್ತೇನೆ. ‘ವೆರಿಗುಡ್’ ಎಂದ ಅವನು ಸರಕ್ಕನೆ ಜೇಬಿನಲ್ಲಿ ನೂರು ರೂಪಾಯಿ ನೋಟನ್ನು ಇಡುತ್ತಾನೆ. ಅವನೇ ಥ್ಯಾಂಕ್ಸ್ ಹೇಳುತ್ತಾನೆ. ನನಗೆ ಮೈಯೆಲ್ಲಾ ಉರಿಯುತ್ತದೆ. ‘ಏನ್ರಿ ಇದು ಮಿಸ್ಟರ್?’ ಎಂದು ಜೇಬಿನಲ್ಲಿರುವ ನೋಟನ್ನೂ ಅವನನ್ನೂ ಏಕಕಾಲದಲ್ಲಿ ನೋಡಿ ಸಿಡಿಯುತ್ತೇನೆ. ‘ಕಡಿಮೆ ಆಯ್ತಾ….?’ ಎಂದು ನಗುತ್ತಾ ಅವನು ಇನ್ನೊಂದು ನೂರರ ನೋಟು ತೆಗೆಯುತ್ತಾನೆ. ‘ರೀ ಮಿಸ್ಟರ್. ನಾನು ಎಂಜಲು ನಾಯಿಯಲ್ಲ….. ತಗೊಳ್ಳಿ ನಿಮ್ಮ ನೋಟು’ ಎಂದು ಗದರಿಸುತ್ತೇನೆ. ಅವನು ಅವಾಕ್ಕಾಗುತ್ತಾನೆ. ಕಛೇರಿಯ ಎಲ್ಲರ ಕಣ್ಣುಗಳೂ ನನ್ನನ್ನೇ ಸುಡುವಂತೆ ನೋಡುತ್ತವೆ. ‘ತಗೊಳ್ಳಿ ನಿಮ್ಮ ನೋಟು’ ಮತ್ತೆ ಆಜ್ಞಾಪಿಸುವ ಧಾಟಿಯಲ್ಲಿ ಕೂಗುತ್ತೇನೆ. ‘ಓಕೆ….. ಓಕೆ….. ಪ್ಲೀಸ್ ಗಿವ್ ಮಿ’ ಎನ್ನುತ್ತಾನೆ. ‘ನೀವೇ ತಗೊಳ್ಳಿ. ಇಂತಹ ಹಣ ನಾನು ಮುಟ್ಟೋದೂ ಇಲ್ಲ……. ಕ್ವಿಕ್’ ಮತ್ತೆ ಹರಿಹಾಯುತ್ತೇನೆ. ಅವನು ಚಡಪಡಿಸುತ್ತಾ, ನನ್ನ ಜೇಬಿನಲ್ಲಿದ್ದ ನೋಟನ್ನು ಎತ್ತಿಕೊಂಡು ದುರ್ದಾನ ತೆಗೆದುಕೊಂಡವನಂತೆ ಓಡುತ್ತಾನೆ. ಎಲ್ಲರೂ ನನಗೆ ತಿಳಿ ಹೇಳುವವರೆ. ‘ನೀನು ತಗೊಳ್ಳದಿದ್ರೆ ಅದನ್ನೇ ಶಾಂತವಾಗಿ ಹೇಳಬಾರ್ದೆನಯ್ಯಾ’, ’ನಿನಗೆ ಬೇಡವಾಗಿದ್ದರೆ ನಮಗೆ ಕೊಟ್ಟಿದ್ದರೆ ಆಗ್ತಿರಲಿಲ್ವೆ. ಅವನಿಗೇನು ಧಾಡಿ ಫರಮ್‌ನವನಿಗೆ, ಲಕ್ಷಗಟ್ಟಲೆ ದುಡಿವಾಗ ನಮಗೊಂದೆರಡು ನೂರು ಕೊಟ್ಟರೆ ಅವರಪ್ಪನ ಮನೆ ಗಂಟೇನ್ ಹೋಗೋದು? ಅವನೇನ್ ಸಾಚಾನಾ? ಅವನ ಫಾರ್ಮಾಸ್ಯುಟಿಕಲ್ಸ್‌ನ ಔಷಧಿಯಲ್ಲಿ ಯಾವ ಸತ್ವ ಇರುತ್ತೆ?’, ‘ಕೆರೆಯ ನೀರನು ಕೆರೆಗೆ ಚಲ್ತಿದಾನಷ್ಟೆ’ ಹೀಗೆ ಒಬ್ಬೊಬ್ಬರ ಉಪದೇಶವೂ ಸಾಗುತ್ತದೆ. ‘ಸಾಹೇಬರು ಕರಿತಾ ಅವರೆ ಸಾ’ ಎಂದು ಜವಾನ ಸುದ್ದಿ ಮುಟ್ಟಿಸುತ್ತಾನೆ. ಛೇಂಬರ್‌ಗೆ ಹೋಗುವಾಗ ‘ಬಹಳ ಅಂಗಾರ್ ಆಗವ್ರೆ ಸಾ’ ಎನ್ನುತ್ತಾನೆ.
ಛೇಂಬರ್‌ಗೆ ಕಾಲಿಟ್ಟಾಗ ಉರಿವ ಸಿಗರೇಟಿನ ಜೊತೆ ಸಾಹೇಬನೂ ಉರಿಯುತ್ತಿರುತ್ತಾನೆ. ಎದುರಿನ ಸೀಟಿನಲ್ಲಿ ಫರಮ್‌ನವನು ಪವಡಿಸಿದ್ದಾನೆ. ನನ್ನನ್ನು ನೋಡುತ್ತಲೇ ಸಾಹೇಬ ಸೀಟಿನ ಮುಂದಕ್ಕೆ ಸರಿದು ಇರಿವ ಗೂಳಿಯಂತೆ ಹೊಳ್ಳೆಗಳನ್ನರಳಿಸಿ ಗುರುಗುಟ್ಟುತ್ತಾನೆ. ‘ನೀನು ಸತ್ಯಹರಿಶ್ಚಂದ್ರ ಅಂತ ನನಗೆ ಗೊತ್ತಯ್ಯ. ಅದಕ್ಕೆ ಓಪನ್ ಆಫೀಸಲ್ಲಿ ಕೂಗಾಡಿ ಗಲಾಟೆ ಮಾಡ್ತಿಯಾ? ಆಫೀಸಿನ ಡೀಸೆನ್ಸಿನ ಹಾಳು ಮಾಡ್ತಿಯಾ ನಾನ್‌ಸೆನ್ಸ್, ಇವರು ಯಾರು? ಕೋಟ್ಯಾಧಿಪತಿಗಳು. ಇಂಥವರಿಗೆ ಅವಮಾನ ಮಾಡ್ತಿಯಾ?’
ಆತನ ವೀರಾಲಾಪಕ್ಕೆ ಅಂಜದಿದ್ದರೂ, ನನ್ಮಗ ಯಾವುದಾದ್ರೂ ನೆಪ ಹಾಕಿ ಅಮಾನತ್ತಿನಲ್ಲಿಟ್ಟು ತೊಂದರೆ ಕೊಟ್ಟಾನೆಂದು ಅಂಜುತ್ತೇನೆ. ‘ಅವಮಾನ ಮಾಡಲಿಲ್ಲ ಸಾರ್. ಲಂಚ ನಾನ್ ತಗೊಳ್ಳೋಲ್ಲ ಅಂದೆ ಅಷ್ಟೆ’ ಎಂದು ಉಸುರುತ್ತೇನೆ.
‘ಅದನ್ನೇ ಸೌಮ್ಯವಾಗಿ ಶಿಸ್ತಿನಿಂದ ಹೇಳಬೇಕಯ್ಯ, ನಾವಿರೋದು ಸಾರ್ವಜನಿಕರ ಸೇವೆಗೆ. ಅವರಿಗೆ ಇಷ್ಟವಾಗೋ ರೀತಿ ನಡ್ಕೊಬೇಕು. ನನ್ನ ಆಫೀಸಿನವರಿಂದ ನಾನು ಡೀಸೆನ್ಸಿ ಡಿಸಿಪ್ಲಿನ್ ಬಯಸೋದು. ಇನ್ನೊಂದು ಸಲ ಈ ರೀತಿ ಹುಚ್ಚು ಹುಚ್ಚಾಗಿ ನಡ್ಕೊಂಡ್ರೆ ಐ ವಿಲ್ ಟೇಕ್ ಎ ಸೂಟಬಲ್ ಆಕ್ಷನ್ ಎಗೆನೆಸ್ಟ್ ಯು………. ಅಂಡರ್‌ಸ್ಟ್ಯಾಂಡ್……… ಹೋಗು’ – ಸಾಹೇಬ ಗದರಿಬಿಡುತ್ತಾನೆ. ಅವನ ಮುಖಕ್ಕೆ ಉಗಿಯಬೇಕೆನಿಸಿದರೂ ನುಂಗಿಕೊಂಡು ಹೊರಬರುತ್ತೇನೆ. ಸಹೋದ್ಯೋಗಿಗಳ ಕುಹಕ ನೋಟವನ್ನು ಎದುರಿಸಲಾರದೆ ಫೈಲುಗಳನ್ನು ಬೀರುವಿನಲ್ಲಿ ಎಸೆದು ಈಚೆ ಬರುತ್ತೇನೆ.
ಮನೆಯ ನೆನಪಾದೊಡನೆ ಇವಳ ನರಳಾಟ ಕಿವಿಯನ್ನು ಹಿಂಜುತ್ತದೆ. ಹೇಗಾದ್ದಾಳೋ ಏನೋ. ಇವತ್ತು ಇವಳನ್ನು ವೈಶಾಲಿ ನರ್ಸಿಂಗ್ ಹೋಮಿಗೆ ಕರೆದೊಯ್ಯಬೇಕು. ಡಾಕ್ಟರ್ ಜಯಶ್ರೀ ತುಂಬಾ ಒಳ್ಳೆ ಗೈನಕಾಲಜಿಸ್ಟ್. ಸ್ಕೂಟರ್ ಏರುತ್ತೇನೆ. ಇವಳಿಗೋ ಆಸ್ಪತ್ರೆ ವಾರ್ಡ್ ಎಂದರೆ ಅಲರ್ಜಿ ಎಂದಾಲೋಚಿಸುವಾಗ ಹೇಗಾದರೂ ಆಗಲೆಂದು ನಾನೇ ಡಾಕ್ಟರ್ ಜಯಶ್ರೀ ಅವರನ್ನು ಕಂಡು ಅವಳ ಹೊಟ್ಟೆನೋವಿನ ಬಗ್ಗೆ ಪ್ರವರ ಹೇಳುತ್ತೇನೆ. ಅವರು ಬರೆದುಕೊಟ್ಟ ಮಾತ್ರೆಗಳನ್ನು ಮೆಡಿಕಲ್ ಸ್ಟೋರ್‌ನಲ್ಲಿ ಕೊಂಡು ಮನೆದಾರಿ ಹಿಡಿಯುತ್ತೇನೆ. ಹಾಗೆ ಸುಮ್ಮನೆ ಮಲಗುವವಳಲ್ಲ. ಯಾರಾದ್ರೂ ದೊಡ್ಡ ಡಾಕ್ಟರ್ ಬಳಿ ಒಮ್ಮೆ ಚೆಕ್ – ಅಪ್ ಮಾಡಿಸಬೇಕು. ಈಗಿನ ಕಾಯಿಲೆ ಹಿಂಗೇ ಅಂತ ಹೇಳೋಕಾಗಲ್ಲ – ಮನ ಹೊಯ್ದಾಡುತ್ತದೆ. ಅವಳ ಮೇಲೆ ನನಗೆ ಅಪಾರವಾದ ಪ್ರೀತಿ ಇರದಿದ್ದರೂ ದ್ವೇಷವೇನೂ ಮೊಳಕೆ ಹೊಡೆದಿರಲಿಲ್ಲ. ಮೂಲತಃ ನನ್ನದು ಭಾವುಕ ಮನಸ್ಸು, ಮೌಲ್ಯಗಳಿಗೆ ತುಡಿವ, ಆದರ್ಶಗಳಿಗೆ ಮಿಡಿವ, ನೊಂದವರ ಬಗ್ಗೆ ಚಡಪಡಿಸುವ ತೆಳ್ಳಗಿನ ತಿಳಿಮನಸ್ಸು. ನಾನು ಯಾರನ್ನೂ ದ್ವೇಷಿಸುವವನಲ್ಲ. ನಾನಾಯಿತು ನನ್ನ ಪಾಡಾಯಿತು. ಪ್ರೀತಿಸಿಯೂ ಏನನ್ನೂ ಈವರೆಗೆ ಸಾಧಿಸದ ನಾನು ದ್ವೇಷಿಸುವುದರಿಂದ ಏನು ತಾನೆ ಘನ ಸಾಧನೆ ಮಾಡಬಲ್ಲೆ. ನನ್ನನ್ನಂತೂ ನೆರೆಹೊರೆ, ಆಫೀಸಿನವರು, ಹೆತ್ತ ತಾಯಿ, ಕಟ್ಟಿಕೊಂಡ ಹೆಂಡತಿ, ಯಾರೂ ಪ್ರಾಮಾಣಿಕವಾಗಿ ಪ್ರೀತಿಸವುದಿಲ್ಲವೆಂಬುದೂ ನನಗೆ ಗೊತ್ತಿದೆ. ಪ್ರೀತಿಸಿಯೂ ಪ್ರೀತಿಯನ್ನು ಪಡೆಯದ, ಪ್ರಾಮಾಣಿಕವಾಗಿ ಬದುಕಿಯೂ ಗೌರವ ಸಂಪಾದಿಸದ, ಆದರ್ಶಗಳ ಬೆನ್ನತ್ತಿಯೂ ಸೋತುಹೋದ ನನಗೆ ಗೆಲ್ಲಬೇಕೆಂಬ ಛಲವೂ ಎಂತದಿಲ್ಲ. ನನಗೆ ತೋಚಿದಂತೆ ನಾನು ಬದುಕುತ್ತೇನೆ. ಎಲ್ಲರ ಜೊತೆಗಿದ್ದೂ ಒಂಟಿಯಂತೆ ಬದುಕುವ ಶಾಪ ಹೊತ್ತರೂ ಸರಿ ಅಪಮೌಲ್ಯಗೊಂಡ ಜೀವನದ ಹಾದಿಯಲ್ಲಿ ಮೌಲ್ಯದ ಹೆಜ್ಜೆಗಳನ್ನೂರುತ್ತೇನೆ. ನನ್ನ ಮೇಲೆ ನಾನೇ ರೇಗಿಕೊಳ್ಳುತ್ತಾ ಗೇರ್ ಬದಲಿಸಿ ವೇಗ ಹೆಚ್ಚಿಸುತ್ತೇನೆ. ಮನೆ ಹತ್ತಿರವಾಗುತ್ತಲೆ ಇವಳ, ಇವಳ ಕಾಯಿಲೆ ನೆನಪು ಮಿದುಳಿಗೆ ಮೊಳೆ ಹೊಡೆದರೆ, ತಾಯಿ ತಂಗಿಯ ನೆನಪು ನಾಲಿಗೆಯನ್ನು ಕಹಿ ಮಾಡುತ್ತದೆ. ನಾಳೆ ಹೇಗಾದರೂ ಮಾಡಿ ಇವರನ್ನು ಹಳ್ಳಿಗೆ ಸಾಗಹಾಕಬೇಕೆಂದು ಯೋಚಿಸುತ್ತಾ ಕುಬ್ಜನಾಗುತ್ತೇನೆ.
ಮನೆಯ ಮುಂದೆ ಸ್ಕೂಟರ್ ನಿಲ್ಲಿಸಿದಾಗ ಮನೆಯ ಒಳಗಿಂದ ತೂರಿಬರುವ ಒಬ್ಬಟ್ಟಿನ ವಾಸನೆ ಮೂಗಿಗೆ ಬಡಿದರೆ, ನಗೆ ಕೇಕೆಗಳು ಕಿವಿಯನ್ನು ತುಂಬಿಕೊಳ್ಳುತ್ತವೆ. ನಮ್ಮಮ್ಮ ತಂಗಿ ಹೆಂಡತಿ ಒಟ್ಟಿಗೆ ಇರುವ ಮನೆಯಲ್ಲಿ ನಗೆ!? ಉತ್ಸಾಹದಿಂದಲೆ ಒಳಬರುತ್ತೇನೆ. ಇವಳು ಇಷ್ಟಗಲ ನಗುತ್ತಾ ಬಾಗಿಲಿಗೇ ಬರುತ್ತಾಳೆ. ‘ನಮ್ಮ ಅಪ್ಪ ಅಮ್ಮ ತಂಗಿ ಬಂದಿದಾರಿ….’ ಎಂದು ಪುಟಿಯುತ್ತಾಳೆ. ಇವಳ ನಗೆಮುಖ ನೋಡದೆ ವಾರವಾಗಿರುತ್ತದೆ. ನನಗೂ ಖುಷಿಯಾಗುತ್ತದೆ. ಅವಳ ಅಪ್ಪ ಅಮ್ಮ ತಂಗಿ ಒಮ್ಮೆ ನನ್ನತ್ತ ನೋಡಿ ಕಿರುನಗೆ ಪ್ರಸಾದಿಸಿ ಇವಳೊಂದಿಗೆ ಮಾತಿನಲ್ಲಿ ಮುಳುಗಿಬಿಡುತ್ತಾರೆ. ತಾಯಿ ತಂಗಿಯ ಸಪ್ಪಳವಿಲ್ಲ. ಅವರು ಮೂಲೆಯಲ್ಲಿಟ್ಟಿದ್ದ ಟ್ರಂಕು, ಬ್ಯಾಗುಗಳೂ ಕಾಣುವುದಿಲ್ಲ. ನಿರಾಳವಾಗಿ ಉಸಿರು ಬಂದರೂ ಭಾರವಾಗಿರುತ್ತದೆ. ಮನೆಯಲ್ಲೋ ಹಬ್ಬದ ವಾತಾವರಣ! ‘ಮಾತ್ರೆಗಳನ್ನು ತಂದಿದೀನಿ ಕಣೆ’ ಎಂದು ಒಂದೆರಡು ಬಾರಿ ಹೇಳಿದ ಮೇಲೆ ಇವಳು ನನ್ನತ್ತ ಕೃಪಾಕಟಾಕ್ಷ ಬೀರುತ್ತಾಳೆ.
‘ಷೋಕೇಸ್‌ನಲ್ಲಿಡಿ ಅಪ್ಪಾ’ ಮುದ್ದು ಮುದ್ದಾಗಿ ಅಪ್ಪಣಿಸಿ ಅಡಿಗೆ ಮನೆಗೆ ಹೋಗುತ್ತಾಳೆ. ಹಿಂದೆಯೇ ಅವಳ ತಾಯಿ ತಂಗಿಯೂ ಅಡಿಗೆ ಮನೆಗೆ ಹೋಗುತ್ತಾರೆ. ಅವಳಪ್ಪ ಪೇಪರ್ ಹಿಡಿದು (ಸಂಜೆಯ ತಂಗಳು ಪೇಪರ್) ಬಲು ಆಸಕ್ತಿಯಿಂದ ಕಣ್ಣಾಡಿಸುತ್ತಾ ಕೂರುತ್ತಾನೆ. ನನಗೂ ಮಾತುಗಳು ಬೇಕಿರುವುದಿಲ್ಲ. ಜೇಬಿನಲ್ಲಿರುವ ಮಾತ್ರೆಗಳನ್ನು ಷೋಕೇಸ್‌ನಲ್ಲಿಡುತ್ತೇನೆ. ವಾರದಿಂದ ತಂದುಕೊಟ್ಟ ಮಾತ್ರೆಗಳೆಲ್ಲವೂ ಅಲ್ಲೇ ಅನಾಥವಾಗಿ ಬಿದ್ದಿರುತ್ತದೆ.
*****