ನಾನು, ಅನ್ನಿಸಿಕೊಂಡ ನನ್ನನ್ನು
ಅದೋ.. ಇದೋ.. ಅವನೋ.. ಇವನೋ.. ನನಗೆ ಗೊತ್ತಿಲ್ಲ!
ಯಾವುದೋ ಒಂದು ಶಕ್ತಿ
ರೂಪ ಕೊಟ್ಟು, ಪ್ರಾಣ ಕೊಟ್ಟು
ಅಪ್ಪ, ಅಮ್ಮನ ಹೊಟ್ಟೆಯಲ್ಲಿ ತಂದು ಬಿಟ್ಟಿತು.
ಅಪ್ಪ, ಅಮ್ಮ ಭೂಮಿಗಿಳಿಸಿ
ಪ್ರೀತಿಯಿಂದ ತೊಳೆದು, ಬಳಿದು, ಬೆಳೆಸಿ
ಯಾವುದು ? ಏನು ? ಎಂತು ?
ಆಡಿ, ಮಾಡಿ, ನೋಡೋದು ಕಲಿಸಿಕೊಟ್ಟರು;
ಮನೆಮಂದಿ, ಊರು ಜನರ ಸಹಯೋಗ, ಸ್ನೇಹದಿ
ಪರಮ ಗುರುಗಳಾದರು.
ಶಾಲೆಯಲ್ಲಿ
ಸಂತ ಗುರುಗಳು
ಲೋಕ ಜ್ಞಾನ ನೀಡಿ
ನಿನ್ನೆ, ಇಂದು, ನಾಳೆಗಳ ನೋಡುವಂತಹ
ಕಣ್ಣು ಇಟ್ಟರು.
ಇಂದು, ನಾನು ಏನಾಗಿರುವೆ
ಏನನ್ನಾದರೂ ನೀಡಿರುವೆಯೆಂದರೆ
ಅದಕ್ಕೆ, ಎಲ್ಲದಕ್ಕೆ ಕಾರಣ ನಾನು ಹೇಗೆ ಆದೇನು ?
ಈ ಋಣ ಭಾವವು ನನ್ನನ್ನು ತಬ್ಬಿದಾಗ
ಮೊದಲ ಮಳೆ ಬಿದ್ದ ಮಣ್ಣಂತಾಗುವೆನು; ಘಂ! ಎನ್ನುವೆನು.
*****