ದೇವಸ್ಥಾನದ ಜಗಲಿಯ ಮೇಲೆ ಮಲಗಿದ್ದ ನಾನು ಇಲ್ಲಿಗೆ ಬಂದಾದರೂ ಹೇಗೆ ಮಲಗಿದೆ ಎಂಬುದೇ ಅರ್ಥವಾಗುತ್ತಿಲ್ಲ. ಹೊಟ್ಟೆಯಲ್ಲೆಲ್ಲಾ ವಿಚಿತ್ರ ಬಾಧೆ, ಎದೆಯಲ್ಲಿ ನಗಾರಿ ಬಾರಿಸಿದಂತಹ ಸದ್ದು, ಪ್ರಯಾಸಪಟ್ಟು ಕಣ್ಣು ತೆರೆದರೆ ಬೀದಿ ದೀಪ ಕಾಣುತ್ತದೆ. ಎರಡು ಪುಟ್ಟ ತೆಂಗಿನ ಮರಗಳು ಕಾಣುವಾಗ ಯಾತನೆಯಲ್ಲೂ ಅದೊಂದು ಬಗೆಯ ಚೇತನ. ಅವು ನಾನೇ ನೆಟ್ಟ ಸಸಿಗಳು. ಇನ್ನು ಮೂರು ವರ್ಷಗಳಲ್ಲಿ ಫಲಬಿಟ್ಟಾವು, ವಾತಾವರಣ ನೋಡಿದರೆ ನನ್ನದೇ ಮನೆಯ ಜಗಲಿಯ ಮೇಲೆ ಮಲಗಿದ್ದೇನೆ. ಜಿಗುಪ್ಸೆಯಿಂದ ಉಸಿರುಗಟ್ಟುತ್ತದೆ. ನಾನು ಸಾಯುತ್ತೇನೆಂಬುದು ನಿಖರವಾಗಿರಬಹುದು ಅದಕ್ಕೆ ಹೊರಗಡೆ ಮಲಗಿಸಿರಬಹುದು. ಸಾರಿಗೆ ಕರಿಬೇವು ಬೇಕೇಬೇಕಾದರೂ ಅದು ಕಡೆಗೆ ಊಟದ ತಟ್ಟೆಯಿಂದ ಹೊರಗೇ ಅಲ್ಲವೆ? ನಿಟ್ಟುಸಿರು ಬರುವಾಗ ಎದೆ ಬಿರಿದಂತಾಗುತ್ತದೆ. ಗಾಜಿನ ಬಿರಡೆಯಲ್ಲಿ ಮಂದಬೆಳಕು ಬೀರುವ ಝೀರೋ ಕ್ಯಾಂಡಲ್ ಬಲ್ಬ್‍ಗೆ ಕತ್ತಲನ್ನು ಓಡಿಸುವ ತಾಕತ್ತಿಲ್ಲ. ಅದರಂತೆ ನಾನು ಕೂಡ ಲೈಫ್‌ನಲ್ಲಿ ಝೀರೋ ಆದವನೆ. ನಾನು ಬದುಕಿದ ರೀತಿ ನೀತಿಗಳ ಬಗ್ಗೆ ಪಶ್ಚಾತ್ತಾಪವೇನಿಲ್ಲ. ಮತ್ತೊಬ್ಬರಿಗೆ ಉಪಕಾರ ಮಾಡಲಾಗದಿದ್ರೂ ಅಪಕಾರ ಮಾಡುವ ಯೋಚನೆ ಸಹ ನನ್ನಲ್ಲಿ ಸುಳಿದಿದ್ದಿಲ್ಲ. ಆದರೂ ನಾನೆಂದರೆ ಮನೆಯವರಿಗೆ ತೃಣ, ವಿಪರೀತ ಮತ್ಸರ ತಾತ್ಸಾರ. ನೋವಿನ ನಡುವೆ ತುಟಿಯಂಚಿನಲ್ಲೊಂದು ಸಣ್ಣ ನಗೆ ಮಿಂಚುತ್ತದೆ.
ನಾಲಿಗೆ ಒಣಗಿ ಅಟ್ಟೆ ಕಟ್ಟಿದಂತಾಗಿದೆ. ಒಬ್ಬರೂ ಕಾಣುತ್ತಿಲ್ಲ. ಎಷ್ಟು ಗಂಟೆಯಾಗಿದೆಯೋ ತಿಳಿಯದು. ನಾಯಿಗಳು ಬೇರೆ ವಿಕಾರವಾಗಿ ಬೊಗಳುತ್ತಿವೆ. ಸದಾ ಪಕ್ಕದಲ್ಲಿ ಸಿಕೊಳ್ಳುತ್ತಿದ್ದ ನೀರಿನ ಚೊಂಬಿಗಾಗಿ ತಡಕಾಡಲು ಯತ್ನಿಸಿದಾಗ ಬಲಭಾಗ ಪೂರಾ ಮಾತೇ ಕೇಳುತ್ತಿಲ್ಲವೆಂಬುದು ಅರಿವಿಗೆ ಬರುತ್ತದೆ. ನಿನ್ನೆ ದೇವಸ್ಥಾನದಲ್ಲಿ ಮಲಗಿದ್ದಾಗ ದೇಹದ ಬಲಭಾಗದಲ್ಲಿ ತಟ್ಟನೆ ಮಿಂಚು ಹರಿದಂತೆ ಯಾತನೆ, ಎಚ್ಚರ ಬಂದಾಗ ಸುತ್ತಲಿನವರು ‘ಪಾಪ…. ಲಕ್ವ ಹೊಡೆದಿದೆ’ ಎಂದು ಲೊಚಗುಟ್ಟುವ ಸದ್ದು ಕೇಳಿತ್ತು. ‘ಈತನ ಮನೆಯೋರ್‍ಗೆ ಹೇಳಿ ಬಂದು ಬಿಡೋ ಸಿದ್ಲಿಂಗ. ಇಲ್ಲಿಂದ ಎತ್ಕೊಂಡು ಹೋಗ್ಲಿ’ ಪೂಜಾರಿಯ ಸಿಡುಕು. ಸಿದ್ಲಿಂಗ ಓಡುವಾಗ, ‘ಬೇಡ್ರಯ್ಯ. ನಾನು ಮನೆಗೆ ಹೋಗೋಲ್ಲ ಇಲ್ಲೇ ಸಾಯ್ತಿನಿ’ ಅಂತ ಬೊಬ್ಬೆ ಹೊಡೆದರೂ ಇವರಾರಿಗೂ ನನ್ನ ಕೂಗೇ ಕೇಳದು! ಬಾಯಿ ಸೊಟ್ಟಗಾದಂತಿದೆ. ಉಸಿರಾಟ ಕೂಡ ಸರಾಗವಿಲ್ಲ. ‘ನನ್ನನ್ನು ಬೀದಿಗೆ ಎಸೀರ್ರಪಾ. ಮನೆಗೆ ಮಾತ್ರ ಕಳಿಸಬೇಡಿ’ ಅಂಗಾಲಾಚುತ್ತೇನೆ. ನನ್ನ ಮಾತೂ ಯಾರಿಗೂ ಅರ್ಥವಾಗುತ್ತಿಲ್ಲ. ಅಸಹಾಯಕವಾಗಿ ಮೈ ಚೆಲ್ಲುತ್ತೇನೆ. ಆಮೇಲೆ ಮಕ್ಕಳಿಬ್ಬರು ಬಂದದ್ದು ಆಟೋದಲ್ಲಿ ಎತ್ತಿಹಾಕಿದ್ದಷ್ಟು ನೆನಪು. ‘ಸರ್ಕಾರಿ ಆಸ್ಪತ್ರೆಗೆ ನಡಿ’ ಮೊದಲ ಮಗ ರಿಕ್ಷಾದವನಿಗೆ ಹೇಳಿದ ಪೆಡಸು ದನಿ ಇನ್ನೂ ಕಿವಿಯಲ್ಲಿ ಸುತ್ತುತ್ತಲೇ ಇದೆ. ಆದರೆ ಮನೆಯ ಜಗಲಿಯ ಮೇಲಿದ್ದೇನಲ್ಲ! ತಲೆಯ ನರಗಳು ಸಿಡಿಯುತ್ತವೆ. ಮೈ ಕೊರೆವ ಚಳಿಗೆ ಸರಿಯಾಗಿ ಹೊದೆಯಲೂ ಆಗದು! ಎಡಗೈ, ಎಡಕಾಲು ಆಡಿಸಿದಷ್ಟೂ ಹೊದಿಕೆ ಮೈಯಿಂದಾಚೆಗೆ ಸರಿಯುತ್ತದೆ. ಹಲ್ಲು ಗಿಟಗಿಡಿದಾಗ ಉಬ್ಬಸ ಹೆಚ್ಚುತ್ತದೆ. ಕೆಮ್ಮಲು ಯತ್ನಿಸಿದರೆ ಗಂಟಲಿನಿಂದ ಗೊರಗೊರ ಬರುವ ಸದ್ದಿಗೆ ನನಗೆ ಭಯವಾಗುತ್ತದೆ. ನನ್ನ ಶರೀರ ಹತೋಟಿಯಲ್ಲಿಲ್ಲ. ನಾನೇನಾಗಬಾರದೆಂದು ದಿನನಿತ್ಯ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೋ ಅದು ಕೂಡ ಸಫಲವಾಗಲಿಲ್ಲ. ಕಡೆಗಾದರೂ ಕೆಟ್ಟವರಿಗೆ ಕೆಟ್ಟದ್ದಾಗುತ್ತದೆ. ಒಳ್ಳೆಯವರಿಗೆ ಒಳ್ಳೆಯದಾಗುತ್ತದೆಂಬ ನಂಬಿಕೆ ಬರೀ ಡೋಂಗಿ, ಕೆಟ್ಟವರೆ ಇಂದು ಮೆರೆಯುತ್ತಿದ್ದಾರೆ – ನಗು ಬರುತ್ತದೆ.
ಒಬ್ಬರಿಂದ ಸೇವೆ ಮಾಡಿಸಿಕೊಳ್ಳದೆ ಹೇಲು ಉಚ್ಚೆಯಲ್ಲಿ ಬಿದ್ದು ಹೊರಳಾಡುವ ಮೊದಲೆ ತಗೊಂಡು ಹೋಗಪ್ಪಾಗುರುವೆ ಎಂದ ನನ್ನ ಮಾತುಗಳಿಗೆ ಗುರುಗಳೂ ಕಿವಿಗೊಟ್ಟಿರಲಿಲ್ಲ. ತಾನಾದರೂ ಗುರುಗಳಿಗೆ ಯಾವ ಮಹಾ ಸೇವೆ ಮಾಡಿದ್ದೇನೆ. ಪಂಚಾಮೃತಾಭಿಷೇಕಕ್ಕೆ ಹತ್ತು ರೂಪಾಯಿ ಕೊಟ್ಟಿದ್ದರೆ ಅದೇ ಹೆಚ್ಚು. ರಥೋತ್ಸವ ಸೇವೆ ಮಹಾಪೂಜೆ ಮಾಡಿಸುವ ಸಿರಿವಂತರಿಗಲ್ಲದೆ ಬಡ ಬಿಕನಾಸಿಯನ್ನು ದೇವರು ಕೂಡ ಮೂಸುವುದಿಲ್ಲ. ಬಾಳಿನ ಸಿಂಹಾವಲೋಕನ ಮಾಡುವಾಗಲೂ ನಗೆ ಬರುತ್ತದೆ.
ನಾನೆಂದರೆ ‘ಮೊದಲು’ ಹೆಂಡತಿಗೆ ಅಸಡ್ಡೆ ಇತ್ತು, ಮಕ್ಕಳು ಬೆಳೆಯುತ್ತಾ ಹೋದಂತೆ ಅವಕ್ಕೂ ನಾನೆಂದರೆ ಕೋಪ, ಕೋಪವನ್ನಾದರೂ ನುಂಗಿಕೊಳ್ಳಬಹುದು, ಅದು ತಾತ್ಸಾರವೆನ್ನಿಸಹತ್ತಿದಾಗ ನೊಂದುಕೊಂಡಿದ್ದೆ. ಮನೆಯವರನ್ನು ಸುಖವಾಗಿಡಲು ನನ್ನಿಂದ ಆಗಲೇ ಇಲ್ಲವೆಂಬುದು ನಿಜ. ಹೊಟ್ಟೆಗೆ ಅನ್ನ ಮೈಗೆ ಬಟ್ಟೆ ಸಿಕ್ಕರೆ ಅದಕ್ಕಿಂತ ಪರಮ ಸುಖ ಮತ್ತೇನಿದೆ. ಅದೂ ಇಲ್ಲದವರಿಗಿಂತ ನಾವು ಉತ್ತಮರಲ್ಲವೆ ಅಂಬೋದು ನನ್ನ ಸಿದ್ಧಾಂತ. ಒಬ್ಬ ಮಾಮೂಲಿ ಗುಮಾಸ್ತ ಇನ್ನಾವ ಕನಸು ಕಾಣಲು ಸಾಧ್ಯ? ನನಗೆ ಈವರೆಗೆ ನಿದ್ದೆಯಲ್ಲೂ ಕನಸು ಬಿದ್ದದ್ದೇ ಇಲ್ಲ. ರಾತ್ರಿ ದಿಂಬಿಗೆ ತಲೆಇಟ್ಟರೆ ಬೆಳಿಗ್ಗೆಯೇ ಎಚ್ಚರ. ಎಂತಹ ನೋವು ಅಪಮಾನ ತಿರಸ್ಕಾರಗಳನ್ನೂ ಮನಸ್ಸಿಗೆ ಹಚ್ಚಿಕೊಂಡವನಲ್ಲ. ಬಡತನದೊಂದಿಗೆ ರಾಜಿಯಾದವನಿಗೆ ಯಾತರ ಭಯ. ಆದರೆ ಹೆಂಡತಿ ಮಕ್ಕಳಿಗೆ ಬಡತನದ ಸಂಕೋಲೆಯಿಂದಾಚೆಗೆ ಬರುವ ಸಹಜ ಕಾತರ. ಬರೀ ಸಂಬಳದಲ್ಲೇ ಜೀವನ ನಿರ್ವಹಿಸಬೇಕೆಂದು ಪಣ ತೊಟ್ಟ ನನ್ನಂಥವನು ಸರ್ಕಾರಿ ನೌಕರನಾಗಲೇ ನಾಲಾಯಕ್ ಎಂಬುದು ಹೆಂಡತಿ ಕಮಲೆಯ ಮನೋಸ್ಥಿತ.
ಬಡತನ ನನಗೆ ಹೊಸತಲ್ಲ. ಅಮ್ಮ ಕಂಡವರ ಮನೆ ಕಸ ಮುಸುರೆ ಮಾಡಿ ಓದಿಸಿದಳು. ಎಸ್.ಎಸ್.ಎಲ್.ಸಿ. ಪ್ರಥಮ ದರ್ಜೆಯಲ್ಲಿ ಪಾಸಾದೆ. ಮುಂದೆ ಓದಿಸಲು ಅಮ್ಮಸಿದ್ಧಳಿದ್ದಳು. ಇನ್ನು ನಾಲ್ಕು ಮನೆ ಕಸ ಮುಸರೆ ಹೆಚ್ಚು ಮಾಡ್ತೇನೆ’ ಅಂದಳು. ನನ್ನ ಮೇಷ್ಟ್ರುಗಳೂ ಅದನ್ನೇ ಒತ್ತಿ ಹೇಳಿದರು. ‘ನೀನು ಮೆರಿಟ್ ಸ್ಟೂಡೆಂಟ್. ಮುಂದೆ ಓದು ದೊಡ್ಡ ಕೆಲಸದರಲ್ಲಿರ್‍ಬೋದು’ ಅಂತೆಲ್ಲಾ ಉಪದೇಶಿಸಿದರು. ಡಾಕ್ಟ್ರು, ಎಂಜಿನಿಯರ್ ಲೆಕ್ಚರರ್ ಆಗುವುದಕ್ಕಿಂತ ನನ್ನಮ್ಮನನ್ನು ಸುಖವಾಗಿರುವುದರಲ್ಲೇ ಸುಖವಿದೆ ಎಂಬ ತೀರ್ಮಾನಕ್ಕೆ ಬಂದ ನಾನು ಕೆ.ಪಿ.ಎಸ್.ಸಿ. ಪರೀಕ್ಷೆಗೆ ಕುರ್ಚಿ ಹಿಡಿದು ಕೂತಾಗ ಸ್ವರ್ಗ ಕೈಗೆಟಕಿದಷ್ಟು ಆನಂದ. ಅಂದೇ ಕಸಮುಸುರೆಗೆ ಹೋಗದಂತೆ ಅಮ್ಮನನ್ನು ತಡೆದೆ. ಮೊದಲ ಸಂಬಳ ತಂದು ಆಕೆಯ ಕೈಗಿಟ್ಟಾಗ ಆ ಜೀವ ಪಟ್ಟ ಸಂತೋಷ ಸಡಗರ ಇನ್ನೂ ಕಣ್ಣಲ್ಲೇ ಇದೆ. ಸಂತೋಷ ತಡೆಯಲಾರದೆ ಆಕೆ ಅಳುವಾಗಲೂ ನಾನು ನಕ್ಕಿದ್ದೆ. ಅಂತಹ ಆನಂದದ ಕ್ಷಣಗಳನ್ನು ಮತ್ತೆ ನೋಡಲಾಗದ ನತದೃಷ್ಟ ನಾನು, ಅಮ್ಮ ಬಡವರ ಮನೆಯ ಹುಡುಗಿಯೇಬೇಕೆಂದು ಹಠ ಹಿಡಿದು ಸಂಬಂಧದಲ್ಲೇ ಹೆಣ್ಣು ತಂದಳು. ರೈತನ ಮಗಳಿಗೆ ಎರಡು ಹೊತ್ತು ಊಟ ಕೊಡುವ ಸರ್ಕಾರಿ ಕೆಲಸ್ದೋನು ಸಿಕ್ಕಿದ್ದು ಸೌಭಾಗ್ಯವಲ್ಲವೆ ಎಂದಾಕೆಯೇ ಹಿರಿಹಿರಿ ಹಿಗ್ಗಿದಳು. ಕಮಲೆಗೆ ಬಡತನವಾಗಲೆ ವಾಕರಿಗೆ ಬರಿಸಿತ್ತೆಂದು ಕಾಣುತ್ತೆ. ವಯಸ್ಸಿಗೆ ತಕ್ಕ ಆಶೆಗಳಿದ್ದವು. ಸೀರೆ, ಬಟ್ಟೆ, ಬಂಗಾರ, ಸಿನೆಮಾ, ಹೋಟ್ಲು ಚೈನಿ ಹೊಡೆವ ಮನಸ್ಸವಳದು. ನಾನು ಆರಂಭದಲ್ಲಿ ಸ್ನೇಹಿತರ ಬಳಿ ಸಾಲ ಮಾಡಿ ಅವಳ ಆಶೆಗಳನ್ನೆಲ್ಲಾ ತಕ್ಕ ಮಟ್ಟಿಗೆ ಪೂರೈಸಿದೆ. ಅದು ಮುಗಿಯದ ಆಶೆಗಳೆಂದೆನ್ನಿಸಿದಾಗ ಮೊದಲು ದಿಗ್ಭ್ರಮೆಗೊಂಡವಳು, ಅಮ್ಮ. ನನಗೆ ಬರುವ ಸಂಬಳದಲ್ಲಿ ಸುಂದರವಾಗಿ ಸಂಸಾರ ಮಾಡುತ್ತಿದ್ದ ಅಮ್ಮನಿಗೂ ಸಹ ನನ್ನ ನೌಕರಿ ಕೆಲಸಕ್ಕೆ ಬಾರದ್ದು ಎಂಬ ಭ್ರಮೆ ಹುಟ್ಟುವಂತೆ ಮಾಡಿದವಳು ಕಮಲೆ. ಅಕ್ಕಪಕ್ಕದಲ್ಲಿರುವ ಗುಮಾಸ್ತರ ಕುಟುಂಬದಲ್ಲಿ ರೇಡಿಯೋ, ಫ್ಯಾನು, ಪ್ರಿಜ್ಜು, ಸ್ಕೂಟರ್‌ಗಳಿರುವಾಗ ಮನೆಗೆ ಬಂದವರಿಗೆ ಚಾಪೆ ಹಾಸುವ ಕಮಲೆಗೆ ಅವಮಾನ. ಕಂತುಗಳಲ್ಲಿ ಒಂದೆರಡು ಕುರ್ಚಿಗಳನ್ನೇನೋ ಕೊಂಡೆ. ‘ನಿಮ್ಮ ಆಫೀಸಿನಲ್ಲಿ ಬರಿ ಸಂಬಳವೋ ಗಿಂಬಳ ಏನಾದ್ರೂ ಸಿಗುತ್ತೋ?’ ಎಂದೊಮ್ಮೆ ಅವಳು ಕೇಳಿಯೇ ಬಿಟ್ಟಾಗ ನಗದಿರಲಾಗಲಿಲ್ಲ. ‘ನಾನೆಂದೂ ಎಂಜಲ ಕಾಸಿಗೆ ಕೈ ಒಡ್ಡಿದವನಲ್ಲ. ಬರುವ ಸಂಬಳ ನಮಗೆ ಸಾಲದೆ? ಲಂಚದ ಹಣ ಪಾಪದ ಹಣ’ ಪುಟ್ಟ ಭಾಷಣ ಅಥವಾ ತಿಳಿವಳಿಕೆ ನೀಡಿದ್ದೆ. ‘ಹಂಗಾರೆ ಪ್ರಪಂಚದಲ್ಲಿರೋರೆಲ್ಲಾ ಪಾಪಿಗಳು. ನೀವು ಮಾತ್ರ ಪುಣ್ಯಾತ್ಮರು. ಅದಕ್ಕೆ ಹೊಟ್ಟೆಗಿದ್ದರೆ ಬಟ್ಟೆಗಿಲ್ಲ. ಬಟ್ಟೆಗಿದ್ದರೆ ಹೊಟ್ಟೆಗಿಲ್ಲ’ ಗೇಲಿ ಮಾಡಿದ್ದಳು ಕಮಲೆ.
‘ನಮಗೂ ಬಡತನ ಇತ್ತೂರಿ, ಆದರೆ ನಮ್ಮಪ್ಪ ಹೊಟ್ಟೆಗೆಂದೂ ಅರೆಕೊರೆ ಮಾಡೋನಲ್ಲ. ದೊಡ್ಡ ಸರ್ಕಾರಿ ನೌಕರಿದಾರನಿಗೆ ಮಗಳನ್ನು ಕೊಟ್ಟೆ ಅಂತ ಬೀಗೋ ನಮ್ಮಪ್ಪ ನೆದ್ದು ಬಿದ್ದು ಸಾಯ್ಲಿ. ವರದಕ್ಷಿಣೆ ಕೇಳಲಿಲ್ಲ ಅಂತ ಉಬ್ಬಿಹೋಗಿ ನನ್ನ ನಿಮ್ಮ ಕೊರಳಿಗೆ ಕಟ್ದ. ನನ್ನ ಸ್ಥಿತಿ ಬಾಣಲೆಯಿಂದ ಬೆಂಕಿನಾಗೆ ಬಿದ್ದಂಗಾತೋ ಸಿವ್ನೆ’ ಕಮಲೆಯ
ಚುಚ್ಚು ಮಾತುಗಳಿಗೆ ಕೊನೆಯಿರಲಿಲ್ಲ. ದಿನ ಏನಾದರೂ ನೆಪ ತೆಗೆದು ಜಗಳ ಮಾಡೋದು, ಅಳೋದು ಉಣ್ಣದೆ ಮುಸುಗು ಹೊದ್ದು ಮಲಗೋದು ಹೆಚ್ಚಾಯಿತು. ಮೊದಲು ಹತಾಶೆಗೊಂಡು ಬಿಳಿಚಿಕೊಂಡವಳು ಅಮ್ಮ. ನೆಲ ಹಿಡಿಯಿತು ಮುದುಕಿ. ಅದೇನು ರೋಗವೋ ದಿನದಿಂದ ದಿನಕ್ಕೆ ಕೃಶವಾದಳು. ಆಸ್ಪತ್ರೆಯೋರು ಇದು ಕ್ಷಯ ರೋಗವೆನ್ನುತ್ತಲೆ ಕಮಲೆ ಹೌಹಾರಿದಳು. ನಾವು ಅಮ್ಮನನ್ನು ಮನೆಯಲ್ಲಿಟ್ಟುಕೊಂಡೇ ನೋಡಿಕೊಳ್ಳಬಹುದಂತೆ, ವೈದ್ಯರೇ ಹೇಳಿದ್ದಾರೆ ಎಂದರೂ ಸುತ್ರಾಂ ಒಪ್ಪಲಿಲ್ಲ. ಅವಳಪ್ಪನೂ ಬಂದು ವಕಾಲತ್ತಿಗೆ ನಿಂತ. ‘ಮೊದ್ಲೆ ಕಮ್ಲಿ ಬಸರಿ ಹೆಣ್ಣು ಮಗು, ನಾಳೆ ಬರೋ ಮಗೀಗೂ ಅಪಾಯವಾದೀತು. ಕ್ಷಯರೋಗ ಅಂಟುರೋಗ ಕಣ್ ತಮಾ’ ಎಂದು ಗದರುವ ಧಾಟಿಯಲ್ಲೇ ಮಾವ ತಿಳಿ ಹೇಳಿದ್ದ. ಅಮ್ಮನತ್ತ ನೋಡಿದೆ. ತನ್ನದೊಂದು ಪುಟ್ಟಗಂಟಿನೊಂದಿಗೆ ಆಸ್ಪತ್ರೆಗೆ ಸೇರಲು ಅಮ್ಮ ಸಿದ್ದಳಾಗಿ ಹೊರಟೇ ಬಿಟ್ಟಿದ್ದಳು.
ಕ್ಷಯ ರೋಗಿಗಳ ವಾರ್ಡ್‌ನಲ್ಲಿ ಆ ರೋಗಿಗಳ ಮಧ್ಯೆ ಅಮ್ಮ ಬದುಕುವುದನ್ನು ನೋಡುವಾಗ ಕರುಳಲ್ಲಿ ಕತ್ತರಿ ಆಡಿಸಿದಂತಾಗುತ್ತಿತ್ತು. ಒಬ್ಬರಿಗೆ ಕೇಡು ಬಯಸದ ಜೀವಕ್ಕೆ ಇಂತಹ ವ್ಯಾಧಿಯೆ! ಹೊಯ್ದಾಡುತ್ತಿದ್ದೆ. ನಾನೇ ಊಟ ಒಯ್ದು ಉಣ್ಣಿಸಿ ಬರುತ್ತಿದ್ದೆ. ಆಕೆಗೆ ಊಟವೂ ಸೇರದಂತಾಯಿತು. ಕಮಲೆ ಆಸ್ಪತ್ರೆಗೆ ತಪ್ಪಿಯೂ ಬರಲಿಲ್ಲ. ಅಮ್ಮ ಮತ್ತೆ
ಮನೆಗೂ ಬರಲಿಲ್ಲ.
ಹೆರಿಗೆಗೆ ಹೋದ ಕಮಲೆ ಹೆಣ್ಣು ಮಗು ಹೆತ್ತು ಬಂದಿದ್ದಳು. ಅಮ್ಮನೇ ಹುಟ್ಟಿ ಬಂದಳೆಂದು ಸರಸಮ್ಮ ಅಂತ ಅವಳ ಹೆಸರೇ ಇಟ್ಟೆ. ಪಟ್ಟಣ ಸೇರಿ ಬದಲಾಗಿದ್ದ ಕಮಲೆ ಮಗಳಿಗೆ ‘ಶ್ವೇತ’ ಅಂತಲೇ ಕರೆದಳು. ಸ್ಕೂಲಲ್ಲೂ ಹಾಗೆ ಬರೆಸಿದಳು. ನನ್ನನ್ನು ದ್ವೇಷಿಸುತ್ತಲೇ ಪುನಃ ಗಂಡು ಮಕ್ಕಳಿಬ್ಬರನ್ನು ಹೆತ್ತಳು. ಗಂಡ ಹೆಂಡತಿ ರಾತ್ರಿ ಕೂಡಲು, ಮಕ್ಕಳನ್ನು ಹೆರಲು, ಪ್ರೀತಿ ಅನಗತ್ಯವೆಂಬ ವಿಚಿತ್ರ ಸತ್ಯ ಗೋಚರಿಸಿತ್ತು. ಸಂಸಾರ ದೊಡ್ಡದಾಗುತ್ತಾ ಹೋದಂತ ಕಮಲೆಯ ಕಿರಿಕಿರಿಯೂ ದೊಡ್ಡದಾಯಿತು. ಪಕ್ಕದ ಮನೆಯವಳ ಮಾತು ಕೇಳಿ ಚಿನ್ನದ ಮಾಂಗಲ್ಯದ ಸರ ಮಾಡಿಸಿಕೊಡಿ ಎಂದು ಚಂಡಿ ಹಿಡಿದಳು. ಅದೇನೋ ಫ್ಯಾನು, ಫ್ರಿಜ್ಜು, ಫೋನು, ಕಾಟು, ಚಿನ್ನ ಇವೆಲ್ಲಾ ಜೀವನಾವಶ್ಯಕ ವಸ್ತುಗಳೆಂದು ನನಗನ್ನಿಸಿದ್ದೇ ಇಲ್ಲ. ಆದರೇನು ಕಂತಿನ ಮೂಲಕ ಚಿನ್ನದ ಮಾಂಗಲ್ಯ ಅವಳ ಕೊರಳೇರಿತು. ‘ಹಿಂಗೆ ಸಾಲ ಸೂಲ ಮಾಡಿ ಒದ್ದಾಡೋ ಬದ್ಲು ಫುಡ್ ಸೆಕ್ಷನ್‌ನಲ್ಲಿದ್ದಿಯಾ, ರೊಕ್ಕ ಮಾಡಬಾರ್ದೆನಯ್ಯ’ ಅಂತ ಪಕ್ಕದ ಟೇಬಲ್ಲಿನ ಗುಮಾಸ್ತ ತಲೆ ತಿಂದ. ಅವನ ಬಳಿ ಸಾಲ ಕೇಳುವುದನ್ನೇ ಬಿಟ್ಟೆ.
ಆಫೀಸಿನಲ್ಲೂ ನನಗೇನಂತಹ ನೆಮ್ಮದಿ ಇದ್ದಿಲ್ಲ. ಹಲವರ ಪಾಲಿಗೆ ಮಾಂಸದಲ್ಲಿನ ಮುಳ್ಳಿನಂತಾಗಿದ್ದೆ. ಸಾಹೇಬನಿಗೂ ನಾನೆಂದರೆ ಅಲರ್ಜಿ. ನನ್ನಂತಹ ಎಡಬಿಂಡಗಿ ತನ್ನ ಆಫೀಸನಲ್ಲಿರೋದೇ ಅಪಮಾನವೆಂಬಂತೆ ಸಿಡಿಮಿಡಿಗೊಳ್ಳುತ್ತಿದ್ದನಾತ. ನನಗೊ ನಗು. ಹೀಗಾದರೂ ಇವರಿಗೆಲ್ಲಾ ಹಿಂಸೆ ಕೊಡುವಷ್ಟು ಶಕ್ತನಾದೆನಲ್ಲ ಎಂದು ಒಳಗೇ ಖುಷಿ. ಹಗಲೇ ಕುಡಿದು ಬರುವ ದುಷ್ಟ ಗುಮಾಸ್ತರಿಗೆ ಲಂಚಕೊಟ್ಟರೆ ಮಾತ್ರ ಫೈಲ್ ಮೂವ್ ಮಾಡುವ ತೋಳಗಳಿಗೆ ಸಲಾಂ ಹೊಡೆಯುತ್ತಾ ಹೆದರಿ ತತ್ತಿಹಾಕುವ ಜವಾನರು ನನಗೆ ಕೇರೇ ಮಾಡರು. ಹೊರಗಿನಿಂದ ಬರುವ ಕಂಟ್ರಾಕ್ಟರ್‌ಗಳೂ ನನ್ನನ್ನು ವಿಚಿತ್ರ ಪ್ರಾಣಿಯಂತೆ ನೋಡುತ್ತಿದ್ದರು. ನಾನೊಬ್ಬ ನಿಸ್ಪೃಹ ಶುದ್ಧಹಸ್ತನೆಂದು ನಾನೆಂದೂ ಯಾರನ್ನೂ ಕೀಳಾಗಿ ಕಂಡವನಲ್ಲ. ಧಿಮಾಕಿನಿಂದ ವರ್ತಿಸಲಿಲ್ಲ. ಆದರೂ ನನ್ನೊಡನೆ ಯಾರೂ ನಿಜವಾದ ಸ್ನೇಹ ತೋರಿದ್ದೇ ಇಲ್ಲ. ಆಗೆಲ್ಲಾ ಒಬ್ಬನೇ ಸದ್ದಾಗದಂತೆ ನಕ್ಕು ಬಿಡುತ್ತಿದ್ದೆ.
ಮನೆಗೆ ಬಂದರೆ ಬೆಳೆದ ಮಕ್ಕಳನ್ನು ಸಂಭಾಳಿಸಬೇಕಿತ್ತಾಗ. ಅವರ ಕಾಲೇಜು ಓದು ಬರಹ ಫೀಜು ಪುಸ್ತಕಗಳಿಗೆ ಹೊಂಚಬೇಕು. ಸಾಲ ಕೊಡುವವರಿರುವಾಗ ಯಾವುದಕ್ಕೂ ಅಂಜಲಿಲ್ಲ. ಹೆಂಡತಿ ಮಕ್ಕಳು ಆಶೆಗಳಾವುವು ದುರಾಶೆಗಳಾವುವು ಅಂತ ಭಾಗ ಮಾಡಿ ಆಶೆಗಳನ್ನು ತಪ್ಪದೆ ಪೂರೈಸಲು ಹೆಣಗಾಡುತ್ತಿದ್ದೆ. ಮಕ್ಕಳು ಕಾಲೇಜಿಗೆ ಹೋಗಲು ಸೈಕಲ್ ಬೇಕೆಂದಾಗ ಕೈಲಾಗದ ನಾನು ರೇಗಿ ಹೊಡೆದು ಆಮೇಲೆ ಪಶ್ಚಾತ್ತಾಪ ಪಟ್ಟಿದ್ದೂ ಇದೆ. ಏನನ್ನೂ ಎಂದೂ ಕೇಳದೆ, ನಾನು ಕೊಡಿಸಿದಷ್ಟಕ್ಕೆ ತೃಪ್ತಿ ಪಡುತ್ತಿದ್ದವಳು, ನಗುನಗುತ್ತಾ ಮಾತನಾಡಿಸುತ್ತಿದ್ದವಳು, ನನ್ನಲ್ಲಿ ಬದುಕಬೇಕೆಂಬ ಆಶೆ ಹುಟ್ಟಿಸುತ್ತಿದ್ದವಳು, ಸರಸು ಮಾತ್ರ – ನನ್ನಮ್ಮನಲ್ಲವೇ ಅವಳು. ಅಮ್ಮನಂತೆ ಲಕ್ಷಣವಂತೆ. ಓದಿನಲ್ಲೂ ಚುರುಕು. ಕಾಲೇಜಿಗೆ ಹೋಗುವ ಅವಳು ನನಗೆಂದೂ ಪುಸ್ತಕ, ಪೆನ್ನಿಗೆ ಜೀವ ಹಿಂಡಲಿಲ್ಲ. ‘ನನ್ನಪ್ಪ ಸ್ವಾತಿಮುತ್ತು ಕಣೆ, ಲಂಚ ತಿನ್ನೋ ಹಂದಿಯಲ್ಲ. ಬಡವನಾದರೂ ಭ್ರಷ್ಟನಲ್ಲ……. ಪ್ರಾಮಾಣಿಕ, ಎಷ್ಟು ಜನ ಇದ್ದಾರೆ ನನ್ನಪ್ಪನಂಥೋರು?’ ಎಂದಾಕೆ ಗೆಳೆಯರೊಂದಿಗೆ ಹೆಮ್ಮೆ ಪಡುವಾಗ ಆ ಕ್ಷಣದಲ್ಲಿ ಬದುಕು ಸಾರ್ಥಕವೆನ್ನಿಸುತ್ತಿತ್ತು. ನಿನ್ನಪ್ಪನ್ನ ನೀನೇ ಹೊಗಳಿಕೊಬೇಕು ನೋಡು ಶ್ವೇತ. ಸರ್ವಿಸ್ ಕಳಿತಾ ಬಂತು. ಒಂದು ಮನೆ ಕಟ್ಟಲಿಲ್ಲ. ಮಗಳ ಲಗ್ನಕ್ಕೆ ಅಂತ ದುಡ್ಡು ಬ್ಯಾಂಕ್ನಾಗೆ ಮಡಗ್ಲಿಲ್ಲ. ಗಂಡು ಮಕ್ಕಳ ಓದಿಗೆ ಹೆಂಗಪ್ಪಾ ಅಂತ ತಲಿ ಕೆಡಿಸ್ಕಳ್ಳಿಲ್ಲ. ನೆಟ್ಟಗೆ ಆಫೀಸಿಗೆ ಹೋಗಿ ಬಂದ್ರಾತು, ಮನೆಯಾಗ ಏನೈತೆ ಏನ್ ಇಲ್ಲ ಅನ್ನೋ ಪರಿವಿಲ್ಲದ ಗ್ಯಾನ್‌ಗೇಡಿ ನಿನ್ನಪ್ಪ, ಏನೋ ನನ್ನ ತವರು ಮನೆಯೋರು ಕೈ ಹಿಡಿದರು. ಇಲ್ಲದಿದ್ದರ ಇವಯ್ಯತರೋ ಸಂಬಳದಾಗ ನೀವೆಲ್ಲಾ ಓದಿ ಬಕ್ಕುಬಾರ್‍ಲು ಬಿದ್ದಂಗೆ ಇತ್ತು. ನಮ್ದು ಒಂದು ಬಾಳೆ’ ಕಮಲೆಯದು ನಿಲ್ಲದ ಪ್ರವರ.
ವಯಸ್ಸಾದಂತೆ ನನ್ನ ಮೇಲಿನ ಅಪವಾದಗಳು ಬೆಳೆಯುತ್ತಲೇ ಹೋದವು. ಮಕ್ಕಳನ್ನೆಲ್ಲಾ ಕೂರಿಸಿಕೊಂಡು ಸಂಜೆ ಹೊತ್ತು ಮುಸು ಮುಸು ಅಳುತ್ತಾ ಸೆರಗಿನಿಂದ ಕಣ್ಮರೆಸಿಕೊಳ್ಳುತ್ತ ನನ್ನ ಮೇಲೆ ದೂರು ಹೇಳಿ ತನ್ನ ದುಃಖವನ್ನು ಹಗುರಗೊಳಿಸಿಕೊಳ್ಳುವ ಅವಳ ಪರಿ ಕಂಡಾಗ ರೇಗುವ ಬದಲು ಒಳಗೇ ನಕ್ಕು ಮೌನ ವಹಿಸುತ್ತಿದ್ದೆ. ಮೊದಮೊದಲು ಜಗಳವಾಡುತ್ತಿದ್ದೆ. ತಡೆಯಲಾರದೆ ಅಸಹಾಯಕತೆಯಿಂದ ಒಂದೆರಡು ಸಲ ಹೊಡೆದಿದ್ದೆನಾದರೂ ಕೋಪದಿಂದಲ್ಲ. ಮಕ್ಕಳು ದೊಡ್ಡವಾದ ಮೇಲೆ ಅವಳೇ ಮೇಲೇರಿ ಬಂದರೂ ಸೈರಣೆ ಕಳೆದುಕೊಳ್ಳುತ್ತಿರಲಿಲ್ಲ. ಈಗೀಗ ಅವಳು ಹಂಗಿಸುವ ಮಾತಿನಲ್ಲೂ ಸತ್ಯವಿದೆ ಅನಿಸುತ್ತಿತ್ತು. ‘ನಿಮ್ಮಪ್ಪನ್ನ ಕಟ್ಟಿಕೊಂಡಾಗ್ನಿಂದ ಇದೇ ವನವಾಸ ಆಗೋತ್ರಪಾ. ಬೇಕು ಅಂದಿದ್ದ ಉಡಲಿಲ್ಲ. ಉಣ್ಣಲಿಲ್ಲ. ಒಂದಪನಾರ ಹೆಣ್ಣಿಗೆ ಅಂತ ಹೂವಿನ ಪೊಟ್ಟಣ ಹಿಡ್ಕೊಂಡು ಬಂದ ಸರದಾರನಲ್ಲ, ಎಂದಾರ ಒಂದು ಸಿನಿಮಾ ನೋಡ್ಬೇಕು ಅಂದ್ರೆ ಎಷ್ಟು ದಿನ ಊಟ ಬಿಡಬೇಕು. ಅದು ಪಕ್ಕದ ಮನೆಯೋರ ಜೊತೆ ಹೋಗ್ಬೇಕು. ತಾನಾಗೇ ಎಂದೂ ಸಿನಿಮಾಕ್ಕಾಗ್ಲಿ, ಹೊಟ್ಟೆಲ್‍ಗಾಗ್ಲಿ ಕರ್‍ಕೊಂಡು ಹೋದ ಜೀವಲ್ಲದು. ವರ್ಷಕ್ಕೆ ಎಲ್ಡು ಸೀರೆ ಕಂಡ್ರೆ ಅದೇ ಹೆಚ್ಚು. ಹೆರಿಗೆ ಕಷ್ಟ ಅಂತ ಅಂದ್ರೂ ನರ್ಸಿಂಗ್ ಹೋಮ್‌ಗೆ ಸೇರಿಸಿ ದೋನಲ್ಲ. ಸರ್ಕಾರಿ ಆಸ್ಪತ್ರೆಗೆ ನೂಕ್ದೋನು ನಿಮ್ಮಪ್ಪ. ಹೆಂಗೋ ನಾನ್ ಮಾಡಿದ ಪೂಜೆ ಪುನಸ್ಕಾರ ನನ್ನ ಕಾಪಾಡ್ತು. ನೀವೂ ಹುಟ್ಕೊಂಡ್ರಿ ಬೆಳದ್ರಿ’ ಮಧ್ಯೆ ಮಧ್ಯೆ ಬಿಕ್ಕುತ್ತಾ, ‘ನಿಮಗಾರ ಏನ್ ಸುಖ ಐತಿಲ್ಲಿ. ಒಂದು ಜೀನ್ಸ್ ಪ್ಯಾಂಟ್ ತಗಣಾಕ ಈತನ ಹತ್ರ ಜಗಳ ಆಡ್ತಿರಾ. ಬೈಕಿನ ಮ್ಯಾಲೆ ಹೋಗೋ ಗೆಳೇರ ನೋಡಿ ಬಾಯಿ ಬಾಯಿ ಬಿಡ್ತೀರ, ನಿಮ್ಮ ಯೋಗ್ಯತೆಗೆ ಒಂದು ಸೈಕಲ್ಲಾರ ಬ್ಯಾಡ್ವೆ?’ ಹಡದೊಟ್ಟೆ ನಂದು ಉರಿತೇತ್ರಪಾ. ಈ ಮನುಷ್ಯನ್ನ ಕಟ್ಕೊಂಡ ಸಂಪತ್ತಿಗೆ ಏನಾರ ನಾ ಕೇಳಿದ್ರೋ ದನಕ್ಕೆ ಬಡ್ಡಂಗೆ ಬಡಿತಿದ್ದ ಮಾರಾಯ, ನಾನೇನು ಕಮ್ಮಿ ಉರ್‍ದಿದಿನಾ ಇವನ ಹತ್ತಿರ. ಮಕ್ಕಳು ಮುಂದೆ ನನ್ನ ಚರಿತ್ರೆ ಹೇಳುತ್ತ ಏಕ ವಚನದಲ್ಲಿ ಮೂದಲಿಸುವಾಗ ಪಾಪ ಎನ್ನಿಸದಿರಲಿಲ್ಲ. ಅವಳ ಎಲ್ಲಾ ಮಾತು ಸುಳ್ಳಲ್ಲವಲ್ಲ. ನನ್ನನ್ನು ಕಟ್ಟಿಕೊಂಡು ಅವಳು ತನ್ನ ಕಲ್ಪನೆಯ ಸುಖ ಪಡೆದಿರಲಿಕ್ಕಿಲ್ಲ. ‘ನೀವಾರ ಚೆನ್ನಾಗಿ ಓದ್ರಪಾ. ವಿದ್ಯಾವಂತರಾಗ್ರೊ…… ನಿಮ್ಗೇನ್ ಅಡವೆ ಆಸ್ತಿನೆ ನಿಲ್ಲಕೊಂದು ನೆಲೆ ಇಲ್ಲ. ಈ ಮನುಷ್ಯನ್ನ ನೆಚ್ಚಿಕೊಂಡ್ರೆ ಮೂರು ಕಣ್ಣಿನ ಚಿಪ್ಪಗತಿ ಕಣ್ರೋ’ ಕಮಲೆ ಮಕ್ಕಳಿಗೆ ಬುದ್ದಿ ಹೇಳುತ್ತಿದ್ದ ವಿಧಾನ ಹೀಗಿತ್ತು. ಹೀಗಾಗಿ ಗಂಡು ಮಕ್ಕಳಿಗೆ ನಾನೆಂದರೆ ಹೆದರಿಕೆ.
ಈಗೀಗ ಆಫೀಸಿನಿಂದ ಬರುವಾಗಲೇ ಬಳಲಿದ ಮುಖವನ್ನು ಮತ್ತಷ್ಟು ಗಂಟಿಕ್ಕಿಕೊಂಡು ಬರುವುದನ್ನು ಕಲಿತಿದ್ದೆ. ಮಕ್ಕಳಿಗೂ ನಾನೆಲ್ಲಿ ರೇಗಿಬಿಡುವೆನೋ ಎಂಬ ಭಯ. ಆ ಮುಖ ನನಗೆ ಫಿಫ್ಟಿ ಪರ್ಸೆಂಟ್ ರಕ್ಷಣೆ ನೀಡುವಾಗ ಅದೇ ಅಭ್ಯಾಸವಾಗಿ ಹೋಗಿತ್ತು. ಆದರೆ ಒಳಗೇ ನಗುನಗುತ್ತಾ ಇರುವುದನ್ನು ಮಾತ್ರ ಎಂದೂ ಮರೆತವನಲ್ಲ. ಇತ್ತೀಚೆಗೆ ಕಮಲ ಅವಳ ಇಬ್ಬರು ಮಕ್ಕಳು ನನ್ನ ಬಳಿ ಮಾತಾಡುತ್ತಲೇ ಇರಲಿಲ್ಲ. ಏನಾದರೂ ಬೇಕಾದರೆ ಅವರಮ್ಮ ಅವರ ಪರವಹಿಸಿ ಕೇಳುತ್ತಿದ್ದಳು. ಆಗಷ್ಟೇ ಮಾತು. ಆದರೆ ಸರಸು ಮಾತ್ರ ನನ್ನನ್ನೆಂದು ಉಪೇಕ್ಷೆ ಮಾಡಿದವಳಲ್ಲ. ಅವಳೇ ಈಗ ನನ್ನ ಬೇಕು ಬೇಡಗಳನ್ನು ನೋಡಿಕೊಳ್ಳಿತ್ತಿದ್ದವಳು. ಅವಳಿಗೆ ಸರಿಯಾದ ವರನಿಗೆ ಕೊಟ್ಟು ಮದುವೆ ಮಾಡಬೇಕೆಂಬಾಶೆ. ಅವಳು ಹುಟ್ಟಿದ ದಿನವೆ ಬ್ಯಾಂಕಲ್ಲಿ ಅವಳ ಹೆಸರಿಗೆ ಡಿಪಾಸಿಟ್ ಇಟ್ಟುಬಿಟ್ಟಿದ್ದೆ. ಆದರೇನು ಗಂಡು ಮಕ್ಕಳಿಗಿಂತ ದೊಡ್ಡ ‘ಶಾಕ್’ ಕೊಟ್ಟವಳು ಮುದ್ದಿನ ಮಗಳೆ, ಕಾಲೇಜಿಗೆ ಹೋದವಳು ಮನೆಗೆ ಬರಲೇ ಇಲ್ಲ. ಮನೆ ಮಂದಿಯೆಲ್ಲಾ ಹುಡುಕಿದ್ದೇ ಹುಡುಕಿದ್ದು, ಒಬ್ಬರೂ ರಾತ್ರಿ ಕಣ್ಣು ಮುಚ್ಚಲಿಲ್ಲ. ಎರಡು ದಿನ ಹೀಗೆ ಕಳೆಯಿತು. ಮೂರನೆ ದಿನ ಹುಡುಗನೊಬ್ಬನ ಜೊತೆ ಬಂದಳು. ಅವಳ ಕೊರಳಲ್ಲಿನ ಶಿಲುಬೆ ಹೊಳೆಯುತ್ತಿತ್ತು. ‘ಅಪ್ಪಾ ಬ್ಲೆಸ್ ಮಿ’ ಅಂತ ಪಾದ ಮುಟ್ಟಿದಳು. ತಬ್ಬಿಬ್ಬಾದೆ. ಹುಡುಗನೂ ಪಾದ ಮುಟ್ಟಿದ. ನಗುತ್ತಲೆ ತಲೆ ನೇವರಿಸಿದೆ. ‘ಕ್ರಿಸ್ತ ಕ್ರಿಷ್ಣ ಎಲ್ಲಾ ಒಂದೆ’ ಅಂದ. ಕಮಲೆ ದೊಡ್ಡ ರಂಪ ಮಾಡಿದಳು. ಮಗಳಿಗೆ ನಾಲ್ಕು ಏಟು ಬಿಗಿದಳು. ಹುಡುಗ ಶ್ರೀಮಂತ, ಕಾಲೇಜಿನಲ್ಲಿ ಮೇಷ್ಟ್ರು ಎಂದು ಗೊತ್ತಾದಾಗ ಅವಳ ರಂಪಾಟ ಹಿಂಗಿತು. ‘ಎಲ್ಲಾರ ಸುಖವಾಗಿರು. ಈ ಮನಿಯಾಗೆ ಮಾತ್ರ ನಿನಗೆ ಜಾಗ ಇಲ್ಲ…….. ಹೋಗಾಚೆ’ ನಿರ್ದಾಕ್ಷಿಣ್ಯವಾಗಿ ಗೇಟು ತೋರಿದ್ದಳು. ನನ್ನನ್ನು ಪ್ರೀತಿಸುವ ಒಂದು ಜೀವ ನನ್ನಿಂದ ದೂರಾಗಿತ್ತು.
ಸರಸು ಗಂಡು ಮಗು ಹೆತ್ತಾಗಲೂ ಇವಳು ನೋಡಲು ಹೋದವಳಲ್ಲ. ಮನಸ್ಸು ತಡೆಯಲಾರದೆ ಆಸ್ಪತ್ರೆಗೆ ಹೋಗಿ ನೋಡಿ ಕೂಸಿನ ಕೈಗೆ ಹತ್ತು ರೂಪಾಯಿ ಇಟ್ಟು ಮುತ್ತಿಟ್ಟು ಬಂದಿದ್ದೆ. ಸರಸು ಮನೆಗೆ ಕರೆಯುತ್ತಿದ್ದಳು. ನನಗೂ ಹೋಗುವ ಬಯಕೆ. ಆದರೆ ಇವಳದ್ದೊಂದು ಹೆದರಿಕೆ. ಇವಳಿಗೆ ಜಾತಿ ಅಹಂ ಭಾಳ, ದೇವರ ಬಗ್ಗೆ ಭಯ ಭಕ್ತಿ ವಿಪರೀತ. ಊರಿನ ಎಲ್ಲಾ ಗುಡಿಗುಂಡಾರಗಳಿಗೂ ವಿಸಿಟ್ ಕೊಡುವ ಇವಳು ಯಾವ ದೇವರನ್ನೂ ಬಿಟ್ಟವಳಲ್ಲ. ಮಕ್ಕಳಿಬ್ಬರಿಗೂ ಮಾಲೆ ಹಾಕಿಸಿ ಶಬರಿಮಲೆಗೂ ಬೇರೆ ಕಳಿಸಿದ್ದಳು. ನಾನು ನಾಸ್ತಿಕನಲ್ಲವಾದರೂ ದೇವರ ಬಗ್ಗೆ ಅಷ್ಟಕ್ಕಷ್ಟೆ.
ಈಗಂತೂ ತಾಯಿ ಮಕ್ಕಳೆಲ್ಲಾ ಒಂದು ನಾನೊಬ್ಬನೆ ಒಂದು ಎನ್ನುವ ಭಾವನೆಯ ಅಧೀರತೆ. ಮನೆಗೆ ಕಾಲಿಟ್ಟರೆ ಮಾತನಾಡಿಸುವವರೇ ಇಲ್ಲ. ದೊಡ್ಡವನು ಆರನೆ ರ್‍ಯಾಂಕ್‌ನಲ್ಲಿ ಬಿ.ಎ. ಪಾಸ್ ಮಾಡಿದ್ದ. ಊರಿನಲ್ಲೇ ಫುಡ್ ಫ್ಯಾಕ್ಟರಿನಲ್ಲಿ ಕೆಲಸ ಸಿಕ್ಕ ಮೇಲಂತೂ ನಾನೆಂದರೆ ಕಸ. ಇದೆಲ್ಲಾ ಅಯ್ಯಪ್ಪನ ವರ ಎಂದೇ ನಂಬಿದ್ದ ಕಮಲೆ, ‘ನನ್ನ ಗಂಡನಿಗೆ ಲಂಚ ಹೊಡೆಯೋವಂತ ಒಳ್ಳೆ ಬುದ್ದಿ ಕೊಡಪ್ಪಾ’ ಎಂದು ಬೇಡುವಾಗ ನುಗ್ಗಿ ಬರುವ ನಗುವನ್ನು ನಿರ್ಬಂಧಿಸುತ್ತಿದ್ದೆ. ಮಗಳ ಮದುವೆಗೆಂದು ಡಿಪಾಸಿಟ್ ಇಟ್ಟಿದ್ದ ಹಣವನ್ನು ಅವಳಿಗೆ ಒಪ್ಪಿಸುವ ಆಶೆ ನನ್ನದು. ಅದು ಹೇಗೋ ಪತ್ತೆ ಹಚ್ಚಿದ ಇವಳು ಅದಕ್ಕೆಲ್ಲಾ ಆಸ್ಪದ ಕೊಡಲಿಲ್ಲ. ಪಾಲಿಸಿ ಮೆಚೂರ್ ಆದೊಡನೆ ಹಠಕ್ಕೆ ಬಿದ್ದು ತೆಗೆಸಿ ಅದರಿಂದ ಭೋಗ್ಯಕ್ಕೆಂದು ಮನೆ ಹಾಕಿಸಿಕೊಂಡಳು. ಅಷ್ಟೊಂದು ದೊಡ್ಡ ಮನೆಯ ಅಗತ್ಯವೇ ಇರಲಿಲ್ಲ. ಮನೆಗೆ ಕಲರ್ ಟಿ.ವಿ. ಯೂ ಬಂತು. ಕಮಲೆಯ ಮುಖದಲ್ಲೀಗ ಅಪರೂಪದ ನಗೆಯೂ ಹುಟ್ಟಿಕೊಂಡಿತ್ತು. ಎರಡನೆ ಮಗ ಡಿಪ್ಲೊಮಾ ಓದುತ್ತಿದ್ದ. ದೇವರು ದರಿದ್ರ ಕೊಟ್ಟರೇನು ನನ್ನ ಮಕ್ಕಳಿಗೆ ಬುದ್ದಿ ದಾರಿದ್ರ ಕೊಡಲಿಲ್ಲವಲ್ಲ. ಇದಕ್ಕಿಂತ ಸಿರಿವಂತಿಕೆ ಬೇಕೆ ಎಂಬ ಹಿಗ್ಗು ನನ್ನ ಮುಖದ ಸುಕ್ಕುಗಳಲ್ಲೂ ನಗು ಅರಳಿಸಿತ್ತು. ನನ್ನ ನಗುವನ್ನು ಉಳಿಸುವ ಪ್ರಯತ್ನವನ್ನು ಈ ಮಕ್ಕಳು ಮಾತ್ರ ಮಾಡಲೇ ಇಲ್ಲ.
ಇತ್ತೀಚೆಗೆ ನನಗೆ ಒಣಕೆಮ್ಮು ಬೇರೆ ಗಂಟು ಬಿದ್ದಿತ್ತು. ನಾನು ಕವ್ ಕವ್ ಎಂದು ಕೆಮ್ಮುವಾಗ ಕಫ ಉಗಿಯುವಾಗ ನನಗೆ ಕ್ಷಯವಿರಬೇಕೆಂದು ಸಂಶೋಧಿಸಿದವಳು ನನ್ನ ಅರ್ಧಾಂಗಿ. ‘ಈ ಮನುಷ್ಯ ವರ್ಷದಲ್ಲೇ ರಿಟೈರ್ ಆಗ್ತಾನೆ. ಮೊದಲೆ ಸತ್ತರೆ ನನಗೆ ನೌಕರಿನಾದ್ರೂ ಸಿಗುತ್ತೆ’ ಎಂದು ಎರಡನೇ ಮಗ ಗೊಣಗುವಷ್ಟು ಕರುಣೆ ತೋರಿದ, ಎಂದೂ ಬೀಡಿ ಸೇದದ ಕುಡಿಯದ ತನಗೆ ಪ್ರಾಣ ಹಿಂಡುವ ಕೆಮ್ಮು ಏಕೆ ಅಂಟಿಕೊಂಡಿತೋ ಎಂದು ಕೊರಗುವ ಬದಲು ತರ್ಕಕ್ಕೆ ಬಿದ್ದೆ. ನನ್ನ ಸಾವಿನಿಂದ ಇತರರಿಗೆ ಲಾಭವಾಗುವುದಾದರೆ ಸಾಯಬಾರದೇಕೆ ಎಂದು ಅದಕ್ಕೂ ಸಿದ್ದನಾದೆ. ಆದರೆ ಭೀಷ್ಮನಂತೆ ತತ್ರಾಪಿ ನಾನು ಇಚ್ಛಾಮರಣಿಯಾಗಲು ಸಾಧ್ಯವೆ. ರಾತ್ರಿಯೆಲ್ಲಾ ಕೆಮ್ಮುವ ನಾನು ಕಡೆಗೆ ಹೊರ ಜಗಲಿಯ ಮೇಲೆ ಮಲಗುವಂತಾದೆ, ಕೆಮ್ಮಿ ಕ್ಯಾಕರಿಸುತ್ತಲೆ ರಿಟೈರೂ ಆದೆ. ಇವಳಿಗೀಗ ಮಕ್ಕಳ ಮದುವೆ ಬಗ್ಗೆ ತರದೂದು ಹತ್ತಿತ್ತು. ‘ಇವರವ್ವನಂಗೆ ಈ ಮುದ್ಯನಿಗೂ ಕ್ಷಯರೋಗ ಅಂಟಿಕೊಂತೇನೋ. ಇಂಥ ಮನಿಗೆ ಹೆಣ್ಣು ಯಾರು ಕೊಡ್ತಾರಲೆ’ ಎಂದು ಭಯ ವಿಹ್ವಲಳಾದಳು. ಆಸ್ಪತ್ರೆಗೆ ಓಡಿದೆ. ಎಕ್ಸ್‌ರೇ – ಕಫ ರಕ್ತ ಎಲ್ಲಾ ಪರೀಕ್ಷೆಗಳಾದವು.
ಅಂತದ್ದೇನಿಲ್ಲವೆಂದಾಗ ನಿರಾಶೆಯಾಯಿತು. ಮಾತ್ರೆಗಳಾವುವು ಕೆಲಸ ಮಾಡಿಲಿಲ್ಲ. ನಾನು ಬಡ ಪೆಟ್ಟಿಗೆ ಸಾಯುವವನಲ್ಲವೆನಿಸಿತು. ಬಿ.ಪಿ. ಒಂದು ಬಿಟ್ಟರೆ ಮಿಕ್ಕಂತೆ ನಾನು ಮೋಪಾಗಿದ್ದೆ. ನನಗೆ ಯಾವ ರೋಗವಿಲ್ಲವೆಂದರೂ ದಾಖಲೆ ಮುಖಕ್ಕೆ ಹಿಡಿದರೂ ನಂಬುವವರೇ ಇಲ್ಲ. ಬಿ.ಪಿ. ಏರಿತು ಕೂಗಾಡಿದೆ.
ಮಾರನೆ ದಿನದಿಂದ ನನಗೇ ಪ್ರತ್ಯೇಕ ತಟ್ಟೆ, ಲೋಟ, ಹಾಲ್‌ನಲ್ಲಿನ ಮೂಲೆಯಲ್ಲಿ ಊಟ, ರೇಗಾಡಿ ಅಡಿಗೆ ಮನೆಗೆ ನುಗ್ಗಿದ್ದೆ. ಇವಳನ್ನು ಹೊಡೆಯಲು ಹೋದೆ. ದೊಡ್ಡ ಮಗ ಮಾತೃವಾತ್ಸಲ್ಯದಿಂದಾಗಿ ಕೆರಳಿ ಕೆನ್ನೆಗೆ ಬಿಗಿದ ರಭಸಕ್ಕೆ ಕೆಳಗೆ ಬಿದ್ದೆ. ಎಚ್ಚರ ಬಂದಾಗ ಹಾಲ್‌ನಲ್ಲಿ ಚಾಪೆಯ ಮೇಲಿದ್ದೆ. ‘ನಾವು ಹಾಕಿದ್ದ ತಿಂಡ್ಕೊಂಡು ಬಿದ್ದಿರೋ ಹಂಗಿದ್ರೆ ಇರು. ಇಲ್ಲದಿದ್ದರೆ ಎಲ್ಲಾರ ಹಾಳಾಗಿ ಹೋಗಿ ಸಾಯಿ’ ಎಂದು ಹಿರಿಮಗ ಕಾಲೆತ್ತಿದ್ದ. ಸಣ್ಣ ಮಗನೊಡನೆ ಒಳಗಿದ್ದ ಇವಳು ಹೊರಗೆ ತಲೆ ಹಾಕಲೇ ಇಲ್ಲ. ಅದೇ ಚಾಪೆ ಮುದುರಿಕೊಂಡು ತಟ್ಟೆ, ಲೋಟ ಎತ್ತಿಕೊಂಡು ಏದುಸಿರು ಬಿಡುತ್ತ ಹೊಸ್ತಿಲು ದಾಟಿದೆ. ಎಲ್ಲಿ ಹೋಗುವುದೆಂದು ದಿಕ್ಕೇ ತೋಚದು!
ನನ್ನಂತಹ ವೃದ್ಧರು ಉಚ್ಚಂಗಿ ಯಲ್ಲಮ್ಮನ ದೇವಸ್ಥಾನದಲ್ಲಿ ಆಶ್ರಯ ಪಡೆಯೋದನ್ನ ನೋಡಿದ್ದೆ. ಅಲ್ಲಿಗೇ ಹೋಗಿ ಸೇರ್ಪಡೆಯಾದೆ. ಪುಣ್ಯಕ್ಕೆ ಯಾರೂ ಬೇಡವೆನ್ನಲಿಲ್ಲ. ಮೊದಮೊದಲು ಹುಳಿ ಹುಳಿ ನೋಡಿದರು. ಆಮೇಲೆ ನೋವು ಹಂಚಿಕೊಂಡರು. ಒಬ್ಬೊಬ್ಬರದು ಒಂದೊಂದು ಕಥೆ. ‘ನಿಮ್ಮಪ್ಪ ನಿಮಗಾಗಿ ಎಷ್ಟು ಕಷ್ಟಪಟ್ಟಿದ್ದಾರೆ ಗೊತ್ತೇನ್ರೋ, ಹಗಲು ರಾತ್ರಿ ದುಡಿದು ನಮ್ಮನ್ನ ಸಾಕಿದ್ದಾರೆ.’ ಎಂದು ಒಂದು ಮಾತನ್ನು ತಾಯಿಯಾದವಳು ಮಕ್ಕಳಿಗೆ ಹೇಳಿದಿದ್ದರೆ ಗೌರವ ತೋರಿದಿದ್ದರೆ ಬಹಳಷ್ಟು ಜನ ಇಳಿವಯಸ್ಸಿನಲ್ಲಿ ಬೀದಿಪಾಲಾಗುತ್ತಿರಲಿಲ್ಲವೇನೋ. ನಿಟ್ಟುಸಿರು ಒಂದೇ ಈಗ ಸಂಗಾತಿ. ನನ್ನ ಕೆಮ್ಮಿನಿಂದಾಗಿ ಇತರರ ನಿದ್ದೆ ಕೆಟ್ಟಾಗ ನಾನೇ ಹೊರಗಡೆಯ ಜಗಲಿಯ ಮೇಲೆ ಹೊಟ್ಟೆಗೆ ಕಾಲು ಸೇರಿಸಿ ಚಳಿಯಲ್ಲೂ ಹಾಯಾಗಿ ಮಲಗುವುದನ್ನು ಒಗ್ಗಿಸಿಕೊಂಡೆ. ಅಲ್ಲಿನ ಮುದುಕರಲ್ಲಿ ಹಲವರು ಭಿಕ್ಷೆ ಬೇಡುತ್ತಿದ್ದರು ದೇವಸ್ಥಾನಕ್ಕೆ ಬರುವ ಭಕ್ತರಲ್ಲಿ. ಆ ಕಾಸಿನಲ್ಲಿ ಕುಡಿದು ಗಾಂಜಾ ಸೇದವವರೂ ಕೆಮ್ಮಿಗೆ ಹೆದರಿ ನನ್ನ ಬಳಿ ಬರುತ್ತಿರಲಿಲ್ಲ. ಆದರೂ ಅವರಲ್ಲಾ ನನಗಿಂತ ಅದೆಷ್ಟೋ ಪುಣ್ಯಶಾಲಿಗಳು. ಒಂದೆರಡು ದಿನಗಳಲ್ಲೇ ಅವರ ಮನೆಯವರು ಪ್ರೀತಿಯಿಂದಲೂ ಪಶ್ಚಾತ್ತಾಪದಿಂದಲೋ ನಿಂದನೆಗೆ ಹೆದರಿಯೋ ತಿರುಗಿ ಮುದುಕರನ್ನು ಮನೆಗೆ ಕರೆದೊಯ್ಯಲು ಬರುವ ಮನೆತನಸ್ಥರೂ ಇದ್ದರು. ಆದರೆ ನನಗಾಗಿ ಯಾರೂ ಬಾರದೆ ಹೋದಾಗ ದಿಗಿಲು ಬಿದ್ದೆ. ಪೂಜಾರಿ ಸಹೃದಯಿ, ಮಗನ ಮೇಲೆ ನನಗೇನು ಕೋಪವಿರಲಿಲ್ಲ. ಹೇಗೋ ಅವನಿಗೂ ಒಂದು ಬದುಕಲು ದಾರಿಯಾಯಿತಲ್ಲ ಎಂದು ನಿರುಮ್ಮಳನಾಗಿದ್ದೆ. ಆದರೆ ಇವ ಪೆನ್‌ಶನ್ ಹಣವನ್ನೂ ಲಪಟಾಯಿಸಿದಾಗ ದಿಗ್ಬ್ರಮೆ. ಸಾಕಷ್ಟು ವಿದ್ಯಾವಂತರ ಮುಂದೆಯೇ ಈ ಘಟನೆ ನಡೆದರೂ ಯಾರೂ ತಮಗೆ ಸಂಬಂಧವಿಲ್ಲವೆಂಬಂತೆ ಮೂಕಪ್ರೇಕ್ಷಕರಾದಾಗ ಸ್ವಾರ್ಥಿಗಳ ಜಗತ್ತು ಮಾನವೀಯತೆಯನ್ನೂ ನುಂಗಿ ನಿಂತಿದೆ ಅನ್ನಿಸಿತು.
ಮತ್ತದೇ ದೇವರ ಪ್ರಸಾದವೇ ಗತಿಯಾಗಿತ್ತು. ಕಫವನ್ನು ಎದ್ದು ಹೋಗಿ ಉಗುಳಲಾರದಷ್ಟು ನಿತ್ರಾಣವಾದ ನಾನು ಅಲ್ಲೇ ಉಗಿಯುವಾಗ ಪೂಜಾರಿ ಕೆಂಡವಾದ. ‘ನಾಳೆನೆ ಜಾಗ ಖಾಲಿ ಮಾಡಿ ಆಸ್ಪತ್ರೆ ಸೇರ್‍ಕಳಪ್ಪಾ ಮುದ್ಕ’ ಎಂದ ತಾಕೀತು ಮಾಡಿದ. ಆಸ್ಪತ್ರೆ ಯಾಕೆ ಸ್ಮಶಾನಾನೇ ಸೇರ್‍ಕೊಂತೀನಿ ಎಂಬ ಹಠದಿಂದ ಬೊಗಸೆಗಟ್ಟಲೆ ಬಿ.ಪಿ. ಮಾತ್ರೆ ನುಂಗಿದ್ದೆ. ಆದರೂ ಸ್ಮಶಾನ ಸೇರದೆ ಮತ್ತದೇ ಮನೆಯ ಜಗುಲಿಯ ಮೇಲೆ ಬಿದ್ದಿರುವ ನನ್ನ ಬಗ್ಗೆ ನನಗೇ ಕೆಟ್ಟ ಅಸಹ್ಯ ಉಂಟಾಗಿದೆ. ಸಾವು ಕೆಲವೊಮ್ಮೆ ಎಂಥ ನಿಷ್ಕರುಣಿ. ಬೆಳಗಿನ ಜಾವದ ಚಳಿಗೆ ಸತ್ತೇ ಹೋಗುತ್ತೇನೆಂದು ನನ್ನನ್ನು ನಾನೇ ಸಂತೈಸಿಕೊಂಡೆ. ಮೈತುಂಬಾ ಸೂಜಿ ಚುಚ್ಚಿದಂತೆ ನೋವು, ನರಳಲೂ ಆಗದು. ಹೇಳಲೂ ಆಗದು. ಪಂಚೆಯೆಲ್ಲಾ ಒದ್ದೆಯಾಗುತ್ತಿದ್ದರೂ ಆಕಾಶ ನೋಡುವುದಷ್ಟೇ ನನಗುಳಿದ ದಾರಿ, ಚಳಿ ಕರಗಿ ಸೂರ್ಯನ ಕಿರಣಗಳು ಮೈಮೇಲೆ ಬೀಳುವಾಗ ಕಿರಿಕಿರಿ, ಸಾಯುವಷ್ಟು ನಾಚಿಕೆ. ಇದೆಂತಹ ಭಂಡ ಜೀವ, ಕಿರಣಗಳ ಹೊಳಪಿಗೆ ತಾಳಲಾರದೆ ತೆರೆದ ಕಣ್ಣುಗಳು ತನ್ನಿಂದ ತಾನೇ ಮುಚ್ಚಿಕೊಂಡವು. ಪುನಃ ತೆರೆಯಲೇಬಾರದು ಯಾರನ್ನೂ ನೋಡಲೇಬಾರದು ಸಾವು ಬಂದಾಗಲೆ ಕಣ್ಣು ಬಿಟ್ಟು ಅದನ್ನು ಸ್ವಾಗತಿಸಬೇಕು. ಕಣ್ಣುಗಳಲ್ಲಿ ಅದನ್ನು ಬಚ್ಚಿಟ್ಟುಕೊಳ್ಳಬೇಕು ಎಂಬ ದೃಢ ನಿರ್ಧಾರಕ್ಕೆ ಬಂದಾಗ ಎದೆ ಕಲ್ಲಾಗಿತ್ತು. ಇದೀಗ ಜನ ಸಂಚಾರ ಗದ್ದಲ ಎಲ್ಲವೂ ಕೇಳಿಬರುತ್ತಿತ್ತು. ನೆರೆಯವರೂ ಬಹಳಷ್ಟು ಜನ ನೋಡಲು ನೆರೆದಂತೆ ತೋರಿತು.
‘ಬಿಸಿಲು ಕಣ್ರಿ. ಒಂದು ಶಾಮಿಯಾನನಾರ ಹಾಕಿಸಿರಪ್ಪಾ’ ಅನ್ನುತ್ತಿದ್ದನೊಬ್ಬ ಇನ್ನೇನು ಗಂಟೆಗಳಷ್ಟೆ…….Few Hours ಅಂದಿದ್ದರು ಡಾಕ್ಟ್ರು, ಆದರೂ……..’ ಅಂದ ಹಿರಿಯ ಮಗ ಮಾತನ್ನು ಅಲ್ಲಿಗೇ ನಿಲ್ಲಿಸಿ ಹೊಯ್ದಾಡಿದ. ‘ಯಾರನ್ನಾದ್ರೂ ನೋಡೋ ಆಸೆ ಇಟ್ಕೊಂಡಿರ್‍ಬೇಕು. ಬೇಗ ಕರೆಸಿಬಿಡಿ ನೆಮ್ಮದಿಯಿಂದ ಜೀವ ಹೋಗ್ಲಿ’ ಪಕ್ಕದ ಮನೆಯವ ಆತುರಪಟ್ಟ. ‘ಶ್ವೇತನ್ನಾರ ಕರ್‍ಕೊಂಡು ಬನ್ರೋ’ ಕಮಲೆ ಕಾಳಜಿ ತೋರಿದಳು. ‘ಮನುಷ್ಯ ಹಸುವಿನಂತೋನು, ಸರ್ವಿಸ್‌ನಲ್ಲಿದ್ದಾಗ ಒಂದು ನಯಾಪೈಸೆ ಲಂಚ ಮುಟ್ಟಿದೋನಲ್ಲ’ ಯಾರದ್ದೋ ಗುರುತಿನ ದನಿ. ‘ಹುಂ. ಮನಿಗೆ ಮಾರಿ ಊರಿಗೆ ಉಪಕಾರಿ’ ಇವಳಂದದ್ದು ಆಳದಿಂದೆಲ್ಲೋ ಕೇಳಿತು.
ಆಟೋ ಬಂದು ನಿಂತ ಶಬ್ದ. ‘ಅಪ್ಪಾ….. ಅಪ್ಪಾ’ ಅಂತ ಬೋರಾಡಿ ಅಳುವ ಸದ್ದಿಗೆ ಮೈಯೆಲ್ಲಾ ಪುಳಕ. ನನಗಾಗಿ ಅಳುವ ಜೀವ ಜಗತ್ತಿನಲ್ಲಿ ಒಂದುಂಟು ಎಂಬ ಗರ್ವ. ನನ್ನ ಸರಸಮ್ಮ ಬಂದಿದ್ದಾಳೆ. ಮಿಸುಗಲೂ ಆಗುತ್ತಿಲ್ಲ. ಎಷ್ಟು ಕಷ್ಟಪಟ್ಟರೂ ಕಣ್ಣುಗಳು ತೆರೆಯಲೊಲ್ಲವು. ‘ಅಪ್ಪಾ…. ಅಪ್ಪಾ…….’ ಎಂದವಳು ಚೀರುವುದನ್ನು ಕೇಳಲಾರದೆ ಕಣ್ಣು ತೆರೆಯಲು ಹರಸಾಹಸ ಮಾಡಿದೆ. ಆರುವ ಮುನ್ನ ಪ್ರಜ್ವಲಿಸುವ ದೀಪದಂತೆ ಹೃದಯದಲ್ಲಿನ ನೋವು ಬಗ್ಗನೆ ಹತ್ತಿಕೊಂಡಿತು. ನನ್ನಮ್ಮ ಸರಸುವನ್ನು ನೋಡಲೇಬೇಕೆಂಬ ಜಿದ್ದಿನಿಂದ ಭಾರವಾದ ರೆಪ್ಪೆಗಳನ್ನು ಪ್ರಯಾಸದಿಂದ ಎತ್ತಿದೆ. ಜೀವ ನಡುಗಿಸುವಂತಹ ಕಾರ್ಗತ್ತಲು ಕಣ್ಣೆ ಕಾಣುತ್ತಿಲ್ಲ. ಮಗಳ ಅಳುವೂ ಕೇಳುತ್ತಿಲ್ಲ. ಒಮ್ಮೆಲೆ ಅಂಜಿಕೆ ಹುಟ್ಟಿಸುವಂತಹ ಪರಮ ನಿಶ್ಯಬ್ದ ನನ್ನನ್ನಾವರಿಸಿದಾಗ ಸಾಯುತ್ತಿರಬಹುದೆ ಅನ್ನಿಸಿ ನಗು ಬಂತು.
*****