೨೦೦೯ರ ಲೋಕಸಭಾ ಚುನಾವಣೆಯ ಫಲಿತಾಂಶ : ಒಂದು ನೋಟ

೨೦೦೯ರ ಲೋಕಸಭಾ ಚುನಾವಣೆಯ ಫಲಿತಾಂಶ : ಒಂದು ನೋಟ

೨೦೦೯ರ ಲೋಕಸಭಾ ಚುನಾವಣೆಯು ಅನೇಕ ದೃಷ್ಟಿಗಳಿಂದ ಮಹತ್ವ ಪಡೆದಿದೆ. ಅತಂತ್ರ ಲೋಕಸಭೆಯ ನಿರೀಕ್ಷೆಯಲ್ಲಿ ಹಗ್ಗ ಜಗ್ಗಾಟಕ್ಕೆ ಸಿದ್ದವಾಗಿಯೇ ಚುನಾವಣೆಗಿಳಿದ ಪಕ್ಷಗಳಿಗೆ ನಿರಾಶೆಯಾಗಿದೆ. ನಿರೀಕ್ಷೆ ಮೀರಿ ಬೆಂಬಲಗಳಿಸಿದ ಕಾಂಗ್ರೆಸ್‌ಗೆ ಸಂಭ್ರಮವೆನಿಸಿದೆ. ಪ್ರಧಾನಿ ಹುದ್ದೆಗೆ ಮೇಕಪ್ ಮಾಡಿಕೊಳ್ಳುತ್ತಿದ್ದ ಕೆಲವು ನಾಯಕರು ಯು.ಪಿ.ಎ. ಮೈತ್ರಿ ಕೂಟಕ್ಕೆ ಬೆಂಬಲವೆಂದು ಹೇಳಲು ತೋರಿದ ತರಾತುರಿ ಒಡೆದು ಕಂಡಿದೆ. ಅತಂತ್ರ ಸ್ಥಿತಿಯಲ್ಲಿ ಕಾಂಗ್ರೆಸ್ ನಿಯೋಜಿತ ಪ್ರಧಾನಿ ಅಭ್ಯರ್ಥಿ ಮನಮೋಹನ ಸಿಂಗ್, ಬದಲಾವಣೆ ಅನಿವಾರ್ಯವಾದರೆ ಒಂದು ‘ಕೈ’ ನೋಡಲು ಒಳಗೊಳಗೇ ಕಾತುರರಾಗಿದ್ದ ಒಂದಿಬ್ಬರು ಕಾಂಗ್ರೆಸ್ ನಾಯಕರು ಸುಖಾ ಸುಮ್ಮನೆ ಸಂತೋಷ ತೋರುತ್ತಿದ್ದಾರೆ. ತೃತೀಯ ರಂಗದ ಕನಸಿನಲ್ಲಿ ಸರ್ಕಾರ ರಚನೆ ಮಾಡುತ್ತೇವೆಂದು ಭಾವಿಸಿದ್ದು ಅಥವಾ ಭ್ರಮಿಸಿದ್ದ ಎಡಪಕ್ಷಗಳು ತಬ್ಬಿಬ್ಬಾಗಿವೆ. ‘ಉಕ್ಕಿನ ಮನುಷ್ಯ’ನೆಂದು ಬಿಂಬಿತವಾದ ಎಲ್.ಕೆ. ಅದ್ವಾನಿಯವರು ಅದನ್ನು ತಮಗೆ ತಾವೇ ನಂಬಿ ಮನಮೋಹನ ಸಿಂಗ್ ಅವರನ್ನು ಅತ್ಯಂತ ದುರ್ಬಲ ಪ್ರಧಾನಿ ಎಂದು ಬಿಂಬಿಸಲು ಹರಸಾಹಸ ಮಾಡಿ ತಾವೇ ದುರ್ಬಲವಾಗಿದ್ದಾರೆ. ಭಾರತೀಯ ಜನತಾ ಪಕ್ಷವು ತನ್ನ ಸೋಲಿಗೆ ಕಾರಣ ಹುಡುಕಲು ಹೋಗಿ ದುಃಸ್ವಪ್ನದಿಂದ ಧೃತಿಗೆಟ್ಟು ಕೂತಂತೆ ಕಾಣುತ್ತದೆ. ಈ ಎಲ್ಲದರ ಮಧ್ಯೆ ಆತುರಾತುರದಲ್ಲಿ ರಾಹುಲ್ ಗಾಂಧಿಯವರನ್ನು ಸಚಿವ ಸಂಪುಟಕ್ಕೆ ಆಹ್ವಾನಿಸಿದ ಮನಮೋಹನ ಸಿಂಗ್ ಅವರು ಸದ್ಯ, ಪ್ರಮಾಣವಚನ ಸ್ವೀಕಾರಕ್ಕೆ ಜಾರ್ಜ್ ಬುಷ್ ಅವರನ್ನು ಆಹ್ವಾನಿಸಿಲ್ಲ ಎಂದು ಸಮಾಧಾನಪಟ್ಟುಕೊಳ್ಳಬಹುದಾಗಿದೆ!

ಅದೇನೇ ಇರಲಿ, ಕಾಂಗ್ರೆಸ್ ಪಕ್ಷವು ೨೦೬ ಸ್ಥಾನಗಳನ್ನು ಪಡೆದದ್ದು ಮತ್ತು ಚುನಾವಣಾ ಪೂರ್ವ ಹೊಂದಾಣಿಕೆಯ ಪಕ್ಷಗಳೊಂದಿಗೆ ಒಟ್ಟು ೨೬೨ ಸ್ಥಾನಗಳನ್ನು ಕ್ರೋಢೀಕರಿಸಿಕೊಂಡದ್ದನ್ನು ಮುಖ್ಯ ಮುನ್ನಡೆಯೆಂದು ಹೇಳಲೇಬೇಕು. ಯಾಕೆಂದರೆ ೨೦೦೪ ರಿಂದ ೨೦೦೯ರ ಚುನಾವಣಾ ಘೋಷಣೆಯ ದಿನದವರೆಗೆ ಯು.ಪಿ.ಎ.ಯಲ್ಲಿದ್ದ ಲಾಲೂ ಅವರ ಆರ್.ಜೆ.ಡಿ., ಪಾಸ್ವಾನರ ಎಲ್.ಜೆ.ಪಿ., ಶರದ್ ಪವಾರರ ಎನ್.ಸಿ.ಪಿ. – ಇಂತಹ ಪಕ್ಷಗಳು ಕಾಂಗ್ರೆಸ್ ಜೊತೆ ಇರಲಿಲ್ಲ. ಪವಾರ್ ಅವರು ಮಹಾರಾಷ್ಟ್ರದಲ್ಲಿ ಅನಿವಾರ್ಯವಾಗಿ ಕಾಂಗ್ರೆಸ್ ಜೊತೆ ಇದ್ದರೂ ಒರಿಸ್ಸ, ಸಿಕ್ಕಿಂಗಳಲ್ಲಿ ಬೇರೆ ರೀತಿಯ ಹೊಂದಾಣಿಕೆಯಲ್ಲಿದ್ದರು. ಲಾಲೂ ಮತ್ತು ಪಾಸ್ವಾನ್ ಅವರು ಕಾಂಗ್ರೆಸ್‌ಗೆ ‘ನಾವು ಕೊಟ್ಟಷ್ಟು ಸ್ಥಾನಕ್ಕೆ ಅಭ್ಯರ್ಥಿ ಹಾಕಿ (ಕೇವಲ ೩ ಸ್ಥಾನ)’ ಎಂದು ಹೇಳುವ ಮೂಲಕ ದೂರ ಮಾಡಿ, ಮುಲಾಯಂ ಜೊತೆ ಒಂದಾದರು. ಬಿ.ಜೆ.ಪಿ.ಯು ಅಧಿಕಾರಕ್ಕೆ ಬರಲು ಸಿದ್ಧತೆ ಎಂಬಂತೆ, ತನ್ನದು ಮಾತ್ರ ದೊಡ್ಡದಾದ ಚುನಾವಣಾಪೂರ್ವ ರಂಗವೆಂದು ಬಿಂಬಿಸಲು ಪಂಜಾಬ್‌ನ ಲೂಧಿಯಾನದಲ್ಲಿ ಎಲ್ಲ ಎನ್.ಡಿ.ಎ. ಅಂಗಪಕ್ಷ ಗಳೊಂದಿಗೆ ಬೃಹತ್ ಸಮಾವೇಶ ಮಾಡಿತು. ನರೇಂದ್ರ ಮೋದಿಯವರ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲವೆಂದು ಘೋಷಿಸಿದ್ದ ಬಿಹಾರ್‌ನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈ ಸಮಾವೇಶಕ್ಕೆ ಬಂದು ಮೋದಿಯವರ ಕೈಕುಲುಕಿದರು. ಟಿ.ಆರ್.ಎಸ್.ನ ಚಂದ್ರ ಶೇಖರರಾವ್ ಅವರು ತೃತೀಯರಂಗ ಮತ್ತು ತೆಲುಗು ದೇಶಂ ನಂಟನ್ನು ಬಿಟ್ಟು (ಆಗ ಆಂಧ್ರದ ಚುನಾವಣೆ ಮುಗಿದಿತ್ತು) ಎನ್.ಡಿ.ಎ. ಸಮಾವೇಶಕ್ಕೆ ಬಂದು ಬೀಗುತ್ತ ನಿಂತರು. ಇತ್ತ ರಾಹುಲ್ ಗಾಂಧಿಯವರು ತಮ್ಮ ಮಾಧ್ಯಮಗೋಷ್ಠಿಯಲ್ಲಿ ನಿತೀಶ್ ಕುಮಾರ್‌ರಂತೆ ಒಳ್ಳೆ ಕೆಲಸ ಮಾಡಿದವರೂ ಇದ್ದಾರೆ’ ಎಂದು ಒಂದು ವಾಕ್ಯ ಹೇಳಿ ವಿವಿಧ ವ್ಯಾಖ್ಯಾನಕ್ಕೆ ಕಾರಣವಾದರು. ಅಂದರೆ, ಎಲ್ಲ ಪಕ್ಷಗಳೂ ಮೇಲ್ನೋಟಕ್ಕೆ ಆತ್ಮವಿಶ್ವಾಸವನ್ನು ಪ್ರದರ್ಶಿಸುತ್ತ ಒಳಗಿದ್ದ ಅಳುಕಿಗೆ ಅಭಿವ್ಯಕ್ತಿ ಕೊಡುವುದನ್ನು ಮುಚ್ಚಿಟ್ಟುಕೊಳ್ಳಲಾಗದ ಸ್ಥಿತಿಗೆ ತಲುಪಿದ್ದವು. ಯಾವೊಂದು ಪಕ್ಷದ ನಡೆಯೂ ಸೈದ್ಧಾಂತಿಕವಾಗಿರಲಿಲ್ಲ. ನೇರ, ನಿಷ್ಟುರ ನಡವಳಿಕೆಯನ್ನು ತೋರಲಿಲ್ಲ. ಇದಕ್ಕೆ ಎಡಪಕ್ಷಗಳೂ ಹೊರತಾಗಿರಲಿಲ್ಲ.

೨೦೦೪ ರಿಂದ ಅಧಿಕಾರಕ್ಕೆ ಬಂದ ಯು.ಪಿ.ಎ. ಸರ್ಕಾರವು ಕೈಗೊಂಡ ಕೆಲವು ಜನಪರ ಕೆಲಸಗಳ ಹಿಂದೆ ಎಡಪಕ್ಷಗಳ ಒತ್ತಡವಿದ್ದುದು ನಿಜ. ಆಗ ೫೯ ಜನ ಸಂಸದರನ್ನು ಹೊಂದಿದ್ದ ಎಡರಂಗವು ಸರ್ಕಾರದೊಳಗೆ ಸೇರಿ ಮತ್ತಷ್ಟು ಜನಮುಖಿ ಯೋಜನೆಗಳಿಗೆ ಕಾರಣವಾಗಬಹುದಿತ್ತು ಎಂದು ಹೇಳುವವರಲ್ಲಿ ನಾನೂ ಒಬ್ಬ. ಸಂಸದೀಯ ಪ್ರಜಾಪ್ರಭುತ್ವವನ್ನು ಒಪ್ಪಿದ ಮೇಲೆ ಆಯಾ ಸಂದರ್ಭದಲ್ಲಿ ಒದಗಿಬರುವ ಸವಾಲುಗಳನ್ನು ‘ಸಂಸದೀಯ ವಿಧಾನ’ದಲ್ಲೇ ಎದುರಿಸುವುದು ಸೂಕ್ತ. ಅದೇನೇ ಇರಲಿ, ಎಡಪಕ್ಷಗಳಿಗೆ, ಹೊರಗಿನ ನಮ್ಮಂಥ ವರಿಗೆ ಅರಿವಾಗದ ಕೆಲವು ಆತಂಕಗಳಿರಬಹುದು. ಆದರೆ ೨೦೦೯ರ ಈ ಚುನಾವಣೆಯಲ್ಲಿ ತೃತೀಯ ರಂಗದ ಹೆಸರಿನಲ್ಲಿ ಎಡಪಕ್ಷಗಳು ಯಾವ್ಯಾವ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡವು ಎನ್ನುವುದನ್ನು ನೋಡಿದಾಗ ತೀರಾ ವಿಷಾದವಾಗುತ್ತದೆ. ಅಣು ಒಪ್ಪಂದದ ವಿಷಯದಲ್ಲಿ ಯು.ಪಿ.ಎ. ಸರ್ಕಾರದ ವಿರುದ್ಧ ಮತ ಚಲಾಯಿಸಿದ್ದಕ್ಕೆ ಎಡಪಕ್ಷಗಳಿಗೆ ಸೂಕ್ತ ಸೈದ್ದಾಂತಿಕ ಕಾರಣಗಳು ಇರಬಹುದು. ಆದರೆ ತೃತೀಯರಂಗದ ಹೆಸರಿನಲ್ಲಿ ಕಂಡ ಕಂಡವರ ಮನೆಬಾಗಿಲು ತಟ್ಟಲು ಸೂಕ್ತ ಸೈದ್ದಾಂತಿಕ ಕಾರಣಗಳಿಲ್ಲ. ಇಲ್ಲಿ ಕುರುಡು ಕಾಂಗ್ರೆಸ್ ವಿರೋಧವಷ್ಟೇ ಮುಖ್ಯವಾದಂತೆ ಕಾಣುತ್ತದೆ. ಕಾಂಗ್ರೆಸ್ಸನ್ನು ವಿರೋಧಿಸುವುದಕ್ಕೆ ಎಡಪಕ್ಷಗಳಿಗೆ ನೈಜ ಸೈದ್ದಾಂತಿಕ ನೆಲೆಗಳಿರುವುದು ನಿಜ. ಆದರೆ ಎಡಪಕ್ಷಗಳು ಎಡತಾಕಿದ ಯಾವ ಪಕ್ಷವೂ ಕಾಂಗ್ರೆಸ್‌ಗಿಂತ ಉತ್ತಮ ಸೈದ್ದಾಂತಿಕ ಹಿನ್ನೆಲೆಯನ್ನು ಪಡೆದಿಲ್ಲ. ಕಾಂಗ್ರೆಸ್‌ಗಾದರೂ ಜಾತ್ಯತೀತ ಪರಂಪರೆಯಿದೆ. ಹಾಗೆಂದು ಎಡಪಕ್ಷಗಳು ಕಾಂಗ್ರೆಸ್ ಜೊತೆ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಯಾಕೆಂದರೆ ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಕಾಂಗ್ರೆಸ್ ಪಕ್ಷವು ಎಡರಂಗಕ್ಕೆ ವಿರೋಧಿ. ಜೊತೆಗೆ ನಾಲ್ಕೂವರೆ ವರ್ಷಗಳ ಕಾಲ ಸರ್ಕಾರ ನಡೆಸಲು ಬೆಂಬಲ ಪಡೆದ ಮನಮೋಹನ್ ಸಿಂಗ್ ಅವರು ‘ಇಷ್ಟವಿಲ್ಲದಿದ್ದರೆ ಬಿಟ್ಟು ಹೋಗಿ’ ಎಂದು ‘ಬುಷ್’ ಎಂದು ಬಾಯಿ ಮಾಡಿದ್ದನ್ನು ಸಹಿಸಿಕೊಂಡು ಕಾಂಗ್ರೆಸ್ ಜೊತೆ ಇರಬೇಕಾಗಿರಲಿಲ್ಲ. ಆದರೆ ಹನ್ನೊಂದು ವರ್ಷಗಳ ಕಾಲ ಬಿ.ಜೆ.ಪಿ. ಜೊತೆಗಿದ್ದ ಒರಿಸ್ಸಾದ ನವೀನ್ ಪಟ್ನಾಯಕ್ ಜೊತೆ ಯಾಕೆ ಹೋಗಬೇಕಿತ್ತು? ಇವರ ಆಡಳಿತಾವಧಿಯಲ್ಲೇ ಒರಿಸ್ಸಾದಲ್ಲಿ ಕ್ರೈಸ್ತ ಪಾದ್ರಿಯನ್ನು, ಸನ್ಯಾಸಿನಿಯರನ್ನು ಸುಟ್ಟದ್ದು. ಇದಕ್ಕೆ ಬಿ.ಜೆ.ಪಿ. ಕಾರಣ, ನವೀನ್ ಪಟ್ನಾಯಕ್ ಅಲ್ಲ ಎಂದು ಹೇಳಿದರೆ ಯಾರು ನಂಬುತ್ತಾರೆ? ಕೋಮುವಾದದ ಕಟ್ಟಾ ವಿರೋಧಿಗಳಾದ ಎಡಪಕ್ಷಗಳು ಸ್ನೇಹ ಬೆಳೆಸಿದ್ದು ಕೋಮುವಾದಿ ಪಕ್ಷದ ಸ್ನೇಹಿತರೊಂದಿಗೆ ಎನ್ನುವುದು ಒಡೆದು ಕಾಣುತ್ತದೆ. ಒರಿಸ್ಸಾದ ಬಿ.ಜೆ.ಪಿ., ಆಂಧ್ರದ ತೆಲುಗು ದೇಶ, ತಮಿಳುನಾಡಿನ ಅಣ್ಣಾ ಡಿ.ಎಂ.ಕೆ., ಕರ್ನಾಟಕದ ಜಾತ್ಯತೀತ ಜನತಾದಳ, ಉತ್ತರ ಪ್ರದೇಶದ ಬಿ.ಎಸ್.ಪಿ. – ಎಡಪಕ್ಷಗಳು ತಮ್ಮ ‘ತೃತೀಯ’ ರಂಗಕ್ಕೆ ಸೇರಿಸಿಕೊಂಡ ಈ ಎಲ್ಲ ಪಕ್ಷಗಳೂ ವಿವಿಧ ಪ್ರಮಾಣ ಮತ್ತು ವಿವಿಧ ವಿಧಾನಗಳಲ್ಲಿ ಕೋಮುವಾದಿ ಬಿ.ಜೆ.ಪಿ.ಯ ಜೊತೆಗಿದ್ದ ಪಕ್ಷಗಳು. ಇವರ ಜೊತೆ ಮುಗಿಬಿದ್ದು ಸೇರುವಾಗ ಕೋಮುವಾದ ವಿರೋಧಿ ಸಿದ್ದಾಂತ ಎಲ್ಲಿ ಹೋಯಿತು? ನಿಜ; ಬಿ.ಜೆ.ಪಿ. ಜೊತೆಗಿದ್ದ ಕೆಲವು ಪಕ್ಷಗಳಿಗೆ ಈಗ ಪಶ್ಚಾತ್ತಾಪವಾಗಿರಬಹುದು. ಜಾತ್ಯತೀತ ಜನತಾದಳದ ನಾಯಕರು ಪಶ್ಚಾತ್ತಾಪದ ಮಾತಾಡಿದ್ದಾರೆಂದು ಕೇಳಿದ್ದೇನೆ. ಆದರೆ ಸದಾ ಕೋಮುವಾದವನ್ನು ಕಟಿಬದ್ದವಾಗಿ ವಿರೋಧಿಸುತ್ತ ಬಂದ ಎಡಪಕ್ಷಗಳು ಬಿ.ಜೆ.ಪಿ.ಯ ಸ್ನೇಹಿತರಾಗಿದ್ದ ಪಕ್ಷಗಳ ಜೊತೆ ಸಂಭ್ರಮದಿಂದ ಸ್ನೇಹ ಬೆಳೆಸಿದ್ದು ಸಮರ್ಥನೀಯವೆಂದು ಅನ್ನಿಸುವುದಿಲ್ಲ. ಯಾಕೆಂದರೆ ಇವರು ಸ್ನೇಹ ಬೆಳೆಸಿದ ಪಕ್ಷಗಳಿಗೆ ಇವರಿಗಿರುವಂತ ಸೈದ್ದಾಂತಿಕ ಬದ್ಧತೆಯಿಲ್ಲ, ಜಯಲಲಿತಾ ಅವರನ್ನೇ ನೋಡಿ. ಅವರು ಯಾವಾಗ ಎಲ್ಲಿ ಗುರುತಿಸಿಕೊಳ್ಳುತ್ತಾರೆಂದು ಹೇಳಲು ಸಾಧ್ಯವೆ? ಜಾತ್ಯತೀತ ಜನತಾದಳ ‘ಜಾತ್ಯತೀತ’ ಕಾರಣ ಹೇಳಿ ಎಲ್ಲರಿಗಿಂತ ಮುಂಚೆ ಯು.ಪಿ.ಎ.ಗೆ ಬೆಂಬಲ ಕೊಟ್ಟಿಲ್ಲವೆ? ಬಿ.ಎಸ್.ಪಿ.ಯ ಮಾಯಾವತಿ ಮುಲಾಯಂ ಅವರ ಎಸ್.ಪಿ.ಯೊಂದಿಗೆ ಸ್ಪರ್ಧೆಗಿಳಿದಂತೆ ಯು.ಪಿ.ಎ.ಗೆ ಬಾಹ್ಯ ಬೆಂಬಲ ಘೋಷಿಸಲಿಲ್ಲವೆ? ಇವೆಲ್ಲವನ್ನೂ ಮುಂಚೆಯೇ ಅರ್ಥಮಾಡಿ ಕೊಳ್ಳಲು ಸಾಧ್ಯವಾಗಿಲ್ಲವೆಂದರೆ ಅದು ಎಡರಂಗದ ನಾಯಕರ ರಾಜಕೀಯ ತಿಳುವಳಿಕೆಯ ತೆಳುತನವನ್ನು ತೋರಿಸುತ್ತದೆ. ಹೀಗೆ ಸಾಂದರ್ಭಿಕ ರಾಜಕೀಯ ಹೊಂದಾಣಿಕೆ ಮತ್ತು ಸೈದ್ಧಾಂತಿಕತೆ – ಎರಡೂ ನೆಲೆಗಳಲ್ಲಿ ತಪ್ಪು ಹೆಜ್ಜೆಯಿಟ್ಟ ಎಡರಂಗ ತನ್ನ ಶಕ್ತಿಯನ್ನು ಸಾಕಷ್ಟು ಕಳೆದುಕೊಂಡು ರಾಷ್ಟ್ರ ರಾಜಕಾರಣದಲ್ಲಿ ವಹಿಸಬಹುದಾಗಿದ್ದ ಪ್ರಮುಖ ಪಾತ್ರದಿಂದ ವಂಚಿತವಾಗಿದೆ.

ಕಾಂಗ್ರೆಸ್ ಜೊತೆ ಚುನಾವಣಾ ಹೊಂದಾಣಿಕೆ ಸಾಧ್ಯವಿಲ್ಲದ ಎಡಪಕ್ಷಗಳು, ಕೋಮುವಾದಿ ಪಕ್ಷದ ಸ್ನೇಹಿತರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧಿಸ ಬೇಕಿತ್ತು. ತೃತೀಯರಂಗವನ್ನು ರೂಪಿಸುವಲ್ಲಿ ಜಿದ್ದಿನಿಂದ ಮುಂದಾಗಿ ಈಗ ನಿಜವಾದ ಅರ್ಥದಲ್ಲಿ ತೃತೀಯ ರಂಗವೆನ್ನುವುದು ಇರಲಿಲ್ಲವೆಂದು ಹೇಳಿಕೆ ಕೊಡುವುದು ಅರ್ಥವಿಲ್ಲದ ಮಾತು. ಈಗ ನೋಡಿ, ಯು.ಪಿ.ಎ. ಸರ್ಕಾರವು ಲಂಗುಲಗಾಮಿಲ್ಲದೆ ತನ್ನ ಆರ್ಥಿಕ ನೀತಿಯನ್ನು ಕ್ಷಮಿಸಿ – ಅಮೇರಿಕ ಆರ್ಥಿಕ ನೀತಿಯನ್ನು ತೀವ್ರಗತಿಯಲ್ಲಿ ಜಾರಿಗೊಳಿಸಿದರೆ ನಿಯಂತ್ರಿಸುವವರು ಯಾರು? ಅವರ ನೀತಿಯನ್ನು ವಿರೋಧಿಸಬಹುದು. ಆದರೆ ವಿರೋಧ, ನಿಯಂತ್ರಣವಲ್ಲ. ನಿಯಂತ್ರಣದ ವಿಷಯ ಬಂದಾಗ, ಯು.ಪಿ.ಎ., ಸರ್ಕಾರವನ್ನು ಎಡಪಕ್ಷಗಳು ನಿಯಂತ್ರಿಸಿದ ಒಂದು ಬಗೆಯನ್ನು ಇಲ್ಲಿ ಹೇಳುವುದು ಅಗತ್ಯ. ೫೯ ಸದಸ್ಯ ಬಲದ ‘ಎಡರಂಗ’ವು ಕಳೆದ ಅವಧಿಯಲ್ಲಿ (೨೦೦೪ ರಿಂದ ೨೦೦೮) ಯು.ಪಿ.ಎ. ಸರ್ಕಾರಕ್ಕೆ ಬಾಹ್ಯಬೆಂಬಲ ಕೊಟ್ಟಿತ್ತು. ಕೆಲವು ಆರ್ಥಿಕ ನೀತಿಗಳ ಬಗ್ಗೆ ಎಡರಂಗದ ತಕರಾರು ಬಂದಾಗಲೆಲ್ಲ ಅದನ್ನು ಆರ್ಥಿಕ ಸುಧಾರಣೆಯ ವಿರೋಧ ಮತ್ತು ಅಭಿವೃದ್ದಿಯ ವಿರೋಧ ಎಂದು ಬಿಂಬಿಸಲಾಗುತ್ತಿತ್ತು. ಸಂಪೂರ್ಣ ಖಾಸಗೀಕರಣ ಮತ್ತು ಆರ್ಥಿಕ ವಿದೇಶೀಕರಣಕ್ಕೆ ವ್ಯಕ್ತಪಡಿಸಿದ ವಿರೋಧವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ. ಒಂದು ಉದಾಹರಣೆ : ವಾಜಪೇಯಿ ಸರ್ಕಾರವು ನಮ್ಮ ರಾಷ್ಟ್ರೀಕೃತ ಬ್ಯಾಂಕುಗಳ ಠೇವಣಿಗಳ ಮುಖ್ಯಪಾಲನ್ನು ವಿದೇಶಿ ಬ್ಯಾಂಕುಗಳಿಗೆ ವರ್ಗಾಯಿಸುವ ನಿರ್ಧಾರಕ್ಕೆ ಬಂದರೂ ಚುನಾವಣೆಗಳು ಮುಂಚೆಯೇ ಘೋಷಣೆಯಾದ್ದರಿಂದ ಅನುಷ್ಠಾನ ಗೊಳಿಸಲಿಲ್ಲ. ಮುಂದೆ ಮನಮೋಹನ್ ಸಿಂಗ್ ಸರ್ಕಾರ ಸುಮ್ಮನಿರಲಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳ ಶೇ. ೭೪ರಷ್ಟು ಠೇವಣಿಗಳನ್ನು ವಿದೇಶಿ ಬ್ಯಾಂಕುಗಳಲ್ಲಿಡಲು ಮುಂದಾಯಿತು. ನಮ್ಮ ವಿಮಾ ಕಂಪನಿಯ ಶೇ. ೪೯ ಪಾಲು ವಿದೇಶಿ ಕಂಪನಿಗಳದಾಗಲಿ ಎಂದಿತು. ಪ್ರಾವಿಡೆಂಟ್ ಫಂಡ್‌ನ ಹಣವನ್ನು ಷೇರುಪೇಟೆಗಳಲ್ಲಿ ತೊಡಗಿಸಬೇಕೆಂದು ನಿರ್ಧರಿಸಿತು. ಈ ಎಲ್ಲವನ್ನೂ ಎಡಪಕ್ಷಗಳು ವಿರೋಧಿಸಿದ್ದಷ್ಟೇ ಅಲ್ಲ, ನಿಯಂತ್ರಿಸಿದವು. ಅನಾಹುತವನ್ನು ತಪ್ಪಿಸಿದವು. ನಮ್ಮ ಹಣ ನಮ್ಮ ಬ್ಯಾಂಕು, ಮತ್ತೂ ಇಲಾಖೆಗಳಲ್ಲೇ ಉಳಿಯಿತು. ಇಲ್ಲದಿದ್ದರೆ ಅಮೇರಿಕದ ಆರ್ಥಿಕ ಹಿಂಜರಿತದಿಂದ ನಮ್ಮ ಬ್ಯಾಂಕುಗಳೂ ದಿವಾಳಿಯಾಗುತ್ತಿರಲಿಲ್ಲವೆ? ನಮ್ಮ ಬಡ ಭಾರತೀಯನ ಠೇವಣಿಗಳು ಮಂಗಮಾಯವಾಗುತ್ತಿರಲಿಲ್ಲವೆ? ಹೀಗೆ ತಮ್ಮ ನಿಯಂತ್ರಣದಿಂದ ‘ಮುಖ್ಯ ಸಾಧನೆ’ಗೆ ಕಾರಣವಾದ ಎಡಪಕ್ಷಗಳು ಆನಂತರ ಕಮ್ಯುನಿಸಂಗೆ ಕರ್ಮಠತೆ ತರಬೇಕಾಗಿರಲಿಲ್ಲವೆಂದು ಎಡಪಂಥೀಯತೆಯನ್ನು ನಂಬಿದ ನನ್ನ ಕಳಕಳಿಯಾಗಿದೆ.

ಅದೇನೇ ಇರಲಿ, ಈ ಸಾರಿಯ ಚುನಾವಣಾ ಫಲಿತಾಂಶವೂ ಒಂದು ದೃಷ್ಟಿಯಿಂದ ಬಹಳ ಮುಖ್ಯವಾದುದು. ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಬಹುಮತದ ಸಮೀಪ ಬಂದಿದೆ ಎನ್ನುವ ಕಾರಣಕ್ಕಿಂತ ಮುಖ್ಯವಾಗಿ ಹಾರ್ಡ್‌ಕೋರ್‌ ಹಿಂದುತ್ವವಾದವನ್ನು – ಒಟ್ಟಾರೆ ಕೋಮುವಾದವನ್ನು – ನಮ್ಮ ದೇಶದ ಮತದಾರರು ಬಹುದೊಡ್ಡ ಬಹುಮತದಿಂದ ನಿರಾಕರಿಸಿದ್ದಾರೆ ಎನ್ನುವುದು ಬಹುಮುಖ್ಯವಾದುದು. ಈಗ ಯು.ಪಿ.ಎ.ಗೆ ಬೆಂಬಲ ಘೋಷಿಸಿರುವ ೩೨೨ ಜನ ಸಂಸದರು ಪ್ರತಿನಿಧಿಸುವ ಪಕ್ಷಗಳಲ್ಲಿ ಹಿಂದೆ ಬಿ.ಜೆ.ಪಿ. ಸಹವಾಸ ಮಾಡಿದ ಬಿ.ಎಸ್.ಪಿ.ಯಂತಹ ಪಕ್ಷಗಳೂ ಇರಬಹುದು. ಆದರೆ ಇಂತಹ ಪಕ್ಷಗಳು ಸಹ ಹಾರ್ಡ್‌ಕೋರ್ ಹಿಂದುತ್ವವಾದವನ್ನು ಒಪ್ಪಿರಲಿಲ್ಲ. ಬಿ.ಜೆ.ಪಿ.ಯೊಂದಿಗೆ ಅಧಿಕಾರ ಹಂಚಿಕೊಳ್ಳದೆ ಸ್ವತಂತ್ರವಾಗಿ ಇರುವ, ಸ್ಪಷ್ಟ ಸಿದ್ದಾಂತವಿಲ್ಲದೆ ಅಧಿಕಾರಕ್ಕಾಗಿ ಯಾರಾದರೂ ಸರಿ ಎಂಬ ‘ನೀತಿ’ ಅನುಸರಿಸಿದ್ದರೂ ಇವರನ್ನು, ಇವರ ಪಕ್ಷಗಳನ್ನು ಕೋಮುವಾದಿ ಎನ್ನುವಂತಿಲ್ಲ. ಎಡಪಕ್ಷಗಳಂತೂ ಸದಾ ಕೋಮುವಾದದ ವಿರೋಧಿಗಳು, ತಾಂತ್ರಿಕವಾಗಿ ಈಗಲೂ ಎನ್.ಡಿ.ಎ. ಜೊತೆಯಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಮತ್ತು ಶರದ್ ಯಾದವ್ ಅವರು ಹಾರ್ಡ್ ಕೋರ್ ಹಿಂದುತ್ವವಾದಿಗಳಲ್ಲ. ಅಂದರೆ ಈ ಚುನಾವಣಾ ಫಲಿತಾಂಶವು ದೊಡ್ಡ ಪ್ರಮಾಣದಲ್ಲಿ ಹಾರ್ಡ್ ಕೋರ್ ಹಿಂದುತ್ವವಾದಕ್ಕೆ ವಿರುದ್ದವಾಗಿದೆಯೆನ್ನುವುದು ಒಂದು ಚಾರಿತ್ರಿಕ ಸಂಗತಿಯಾಗಿದೆ. (ಹಾರ್ಡ್‌ಕೋರ್ ಹಿಂದುತ್ವವಾದಿಗಳಲ್ಲವೆಂದೇ ಈ ಪಕ್ಷಗಳೊಂದಿಗೆ ತೃತೀಯರಂಗ ರಚಿಸಲು ಎಡಪಕ್ಷಗಳು ಹೊಂದಾಣಿಕೆ ಮಾಡಿಕೊಂಡವು ಎಂದು ನನ್ನ ತರ್ಕವನ್ನು ನನಗೇ ತಿರುಗಿಸಲು ಕೆಲವರು ಪ್ರಯತ್ನಿಸಬಹುದು. ಆದರೆ ನವೀನ್ ಪಟ್ನಾಯಕ್, ಜಯಲಲಿತಾ ರಂಥವರು ಇದಕ್ಕೆ ಹೊರತಾದವರು ಮತ್ತು ಬಿಜೆಪಿಯೊಂದಿಗೆ ಸೇರಿದ ಎಲ್ಲ ಪಕ್ಷಗಳೂ ತಂತಮ್ಮ ರಾಜಕೀಯ ಲಾಭವನ್ನು ಮುಖ್ಯ ಮಾಡಿಕೊಂಡಿದ್ದವು ಎನ್ನುವುದನ್ನು ಮರೆಯಬಾರದು. ಅದು ಅವರಿಗೆ ಸ್ವಾಭಾವಿಕವಾದುದು. ಎಡಪಕ್ಷಗಳಿಗೆ ಇಂತಹ ರಾಜಕೀಯ ಸ್ವಾಭಾವಿಕವಾಗ ಬೇಕಿಲ್ಲ.)

ಈ ಚುನಾವಣೆಯಲ್ಲಿ ಸ್ಥಳೀಯ ರಾಜಕೀಯ ಸನ್ನಿವೇಶಗಳು ಸಹ ಕೆಲಸ ಮಾಡಿವೆ. ಈಗ ಒರಿಸ್ಸ ರಾಜ್ಯವನ್ನೇ ನೋಡಿ. ಹನ್ನೊಂದು ವರ್ಷ ಬಿ.ಜೆ.ಪಿ.ಯ ಜೊತೆಗೆ ಅಧಿಕಾರ ಹಂಚಿಕೊಂಡ ಬಿ.ಜೆ.ಪಿ.ಯ ನವೀನ್ ಪಟ್ನಾಯಕ್ ಕೋಮುದಳ್ಳುರಿಯನ್ನು ತಡೆಯಲಾಗಲಿಲ್ಲ. ಬುಡಕಟ್ಟು ಹಿಂದುಳಿದ ಮತ್ತು ಅಲ್ಪಸಂಖ್ಯಾತ ಜನಾಂಗಗಳು ಅಭದ್ರತೆ ಮತ್ತು ಪರಕೀಯತೆಯಿಂದ ನರಳತೊಡಗಿದ್ದವು. ತಮ್ಮ ಸರ್ಕಾರಕ್ಕೆ ವಿರುದ್ಧವಾದ ಅಭಿಮತ ಮೂಡುತ್ತಿರುವುದನ್ನು ಅರಿತ ನವೀನ್ ಪಟ್ನಾಯಕ್ ಬಿ.ಜೆ.ಪಿ.ಗೆ ಸ್ವಯಂಪ್ರೇರಿತ ವಿಚ್ಛೇದನ ನೀಡಿದರು. ಕೋಮು ದ್ವೇಷದ ಪರಿಣಾಮಗಳಿಗೆ ಪ್ರಾಯಶ್ಚಿತ್ತ ಮಾಡಿಕೊಂಡಂತೆ ಕಾಣಿಸಿಕೊಂಡರು. ಒರಿಸ್ಸದಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾಗುವ ಶಕ್ತಿಯಿರಲಿಲ್ಲ. ನವೀನ್ ಪಟ್ನಾಯಕ್ ದೊಡ್ಡ ಹಗರಣಗಳಲ್ಲಿ ವಿಜೃಂಭಿಸಿರಲಿಲ್ಲ. ಹೀಗಾಗಿ ಒರಿಯಾ ಭಾಷೆಯನ್ನು ಓದಲು, ಬರೆಯಲು ಸಮರ್ಥರಲ್ಲದ ನವೀನ್ ಪಟ್ನಾಯಕ್ ಅವರನ್ನೇ ಒರಿಯಾ ಜನ ಮತ್ತೆ ಆರಿಸಿದರು. ಲೋಕಸಭೆಗೂ ಹೆಚ್ಚು ಸ್ಥಾನ ನೀಡಿದರು. ಪ್ರಾದೇಶಿಕ ಪಕ್ಷವೆಂದರೆ ನಾಡು-ನುಡಿಗೆ ಆದ್ಯತೆಯೆಂದು ಬಿಂಬಿಸುತ್ತಿರುವ ದಕ್ಷಿಣದ ರಾಜ್ಯಗಳ ಎದುರು ಭಾಷೆಯನ್ನು ಮೀರಿ ನಾಯಕನನ್ನು ಆಯ್ಕೆ ಮಾಡಿದ ಒರಿಸ್ಸ ಒಂದು ವಿಸ್ಮಯವೇ ಸರಿ.

ಒರಿಸ್ಸದಂತೆಯೇ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಒಟ್ಟಾಗಿ ಚುನಾವಣೆ ನಡೆದ ರಾಜ್ಯ ಆಂಧ್ರಪ್ರದೇಶ. ಜಾತಿವಾರು ಪರಿಗಣನೆ ಮತ್ತು ಆಡಳಿತ ವಿರೋಧಿ ಅಂಶಗಳ ಲೆಕ್ಕಾಚಾರಗಳ ನಡುವೆಯೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿದೆ. ರಾಜಶೇಖರ ರೆಡ್ಡಿಯವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಗ್ರಾಮೀಣ ಜನರಿಗೆ ಉಪಯುಕ್ತವಾದ ಕೆಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದಿದೆ. ಹೀಗಾಗಿ ಈ ಒಳ್ಳೆಯ ಕೆಲಸಗಳು, ಕೆಟ್ಟ ಕೆಲಸಗಳಿಗೆ ಕ್ಷಮೆ ನೀಡಿರಬಹುದಾದ್ದು ಒಂದು ಅಂಶವಾದರೆ ಮೆಗಾಸ್ಟಾರ್ ಚಿರಂಜೀವಿಯವರ ಪ್ರಜಾ ರಾಜ್ಯಂ ಪಡೆದ ಮತಗಳು ಯಾವುವು ಎಂಬ ಇನ್ನೊಂದು ಅಂಶವೂ ಇಲ್ಲಿ ಮುಖ್ಯ. ರೆಡ್ಡಿ, ತಮ್ಮ ಜನಾಂಗಗಳ ಪ್ರಾಬಲ್ಯವನ್ನು ಕ್ರಮವಾಗಿ ಮೆರೆಯುವ ಕಾಂಗ್ರೆಸ್ ಮತ್ತು ತೆಲುಗು ದೇಶಂ ಪಕ್ಷಗಳ ಎದುರು ಕಾಪು ಜನಾಂಗಕ್ಕೆ ರಾಜಕೀಯ ಪ್ರಾಧಾನ್ಯ ನೀಡುತ್ತಾರೆಂದು ಭಾವಿಸಲಾದ ಚಿರಂಜೀವಿಯವರು ನಿರೀಕ್ಷಿಸಿದಷ್ಟು ಯಶ ಪಡೆಯಲಿಲ್ಲ. ಆದರೆ ತೆಲುಗು ದೇಶಂಗೆ ಹೋಗುತ್ತಿದ್ದ ಆಡಳಿತ ವಿರೋಧಿ ಮತಗಳ ವಿಭಜನೆಗೆ ಕಾರಣರಾದರು. ಕಾಂಗ್ರೆಸ್ ವಿರೋಧಿ ಮತಗಳನ್ನು ತೆಲುಗು ದೇಶಂನೊಂದಿಗೆ ಹಂಚಿಕೊಂಡರು. ಕಾಂಗ್ರೆಸ್ ಶಕ್ತಿ ಕ್ಷೀಣಿಸಿದರೂ ಬಹುಮತ ಪಡೆಯಿತು. ಅಧಿಕಾರದ ಚುಕ್ಕಾಣಿ ಹಿಡಿಯುವ ತೆಲುಗು ದೇಶಂ ಕನಸು ಭಗ್ನ ವಾಯಿತು. ಎನ್.ಟಿ.ಆರ್. ಕಾಲ ಬೇರೆ, ಚಿರಂಜೀವಿ ಕಾಲ ಬೇರೆ ಎಂದು ಸಾಬೀತಾಯಿತು. ಎನ್.ಟಿ.ಆರ್. ಅವರು ರಾಜಕೀಯಕ್ಕೆ ಬಂದಾಗ ತೆಲುಗರ ಸ್ವಾಭಿಮಾನದ ಪ್ರಶ್ನೆಯನ್ನು ಮುಂದು ಮಾಡಿದರು. ಕಾಂಗ್ರೆಸ್ ಮತ್ತೆ ಮತ್ತೆ ಮುಖ್ಯಮಂತ್ರಿಗಳನ್ನು ಬದಲಾಯಿಸಿದ್ದಲ್ಲದೆ, ಸಂಜಯಗಾಂಧಿ ಮುಖ್ಯಮಂತ್ರಿ ಅಂಜಯ್ಯಾನವರನ್ನು ಅವಮಾನಿಸಿದ್ದರು. ಮುಖ್ಯಮಂತ್ರಿಗಾದ ಅವಮಾನವನ್ನು ತೆಲುಗರ ಸ್ವಾಭಿಮಾನದ ಪ್ರಶ್ನೆಯನ್ನಾಗಿ ರೂಪಿಸುವ ಶಕ್ತಿ ಎನ್.ಟಿ.ಆರ್. ಅವರಿಗಿತ್ತು. ಸಿನಿಮಾದ ತಾರಾಮೌಲ್ಯ ಪೂರಕವಾಯಿತು. ಚಿರಂಜೀವಿಯವರಿಗಿದ್ದ ಸನ್ನಿವೇಶ ಬೇರೆ. ತೆಲುಗು ದೇಶಂನಲ್ಲೂ ಜೂನಿಯರ್ ಎನ್.ಟಿ.ಆರ್., ಬಾಲಕೃಷ್ಣ ಮುಂತಾದ ಸ್ಟಾರ್ ಗಳಿದ್ದರು. ಇಡೀ ಜನಸಮುದಾಯವನ್ನು ಬಡಿದೇಳಿಸುವಂತಹ ವಿಷಯಗಳಿರಲಿಲ್ಲ. ಒಟ್ಟಿನಲ್ಲಿ ಕಾಂಗ್ರೆಸ್ ಮತ್ತೆ ಬಂತು.

ತಮಿಳುನಾಡು ನೋಡಿ ಡಿ.ಎಂ.ಕೆ.ಯ ಬಲ ತುಂಬಾ ಕ್ಷೀಣವಾಗುತ್ತದೆಯೆಂದು ಭಾವಿಸಲಾಗಿದ್ದ ರಾಜ್ಯವಿದು. ಆದರೆ ತುಂಬಾ ಕ್ಷೀಣವಾದದ್ದು ಕರುಣಾನಿಧಿಯವರ ಬಲ; ಡಿ.ಎಂ.ಕೆ. ಬಲವಲ್ಲ, ಕರುಣಾನಿಧಿ ವೈಯಕ್ತಿಕವಾಗಿ ಬಲಹೀನರಾಗಿದ್ದರೂ ಡಿ.ಎಂ.ಕೆ.ಯನ್ನು ಉಳಿಸುವಲ್ಲಿ ಶಕ್ತರಾದರು. ಬಲಹೀನ ಸ್ಥಿತಿಯಲ್ಲಿ ಶ್ರೀಲಂಕಾ ತಮಿಳರ ರಕ್ಷಣೆಗಾಗಿ ದಿಢೀರ್ ಉಪವಾಸ ಸತ್ಯಾಗ್ರಹ ಮಾಡಿದರು. ಚುನಾವಣೆಯ ಸಂದರ್ಭದಲ್ಲಿ ಆಸ್ಪತ್ರೆಯನ್ನೂ ಸೇರಿದರು. ಸಹಾನು ಭೂತಿಗೆ ಇನ್ನೇನು ಬೇಕು? ಎಲ್ಲರಿಗಿಂತ ಮುಂಚೆ ಶ್ರೀಲಂಕಾ ತಮಿಳರು ಮತ್ತು ಎಲ್.ಟಿ.ಟಿ.ಇ. ವಿಷಯವನ್ನು ಚುನಾವಣಾ ವಿಷಯ ಮಾಡಿದ ಜಯಲಲಿತಾರ ತಂತ್ರವನ್ನು ಕರುಣಾನಿಧಿಯವರು ತಮ್ಮ ಪ್ರತಿ ತಂತ್ರದಿಂದ ಹಿಮ್ಮೆಟ್ಟಿಸಿದರು. ಆಡಳಿತ ವಿರೋಧಿ ಅಂಶಗಳು ಪ್ರಬಲವಾಗದಂತೆ ನೋಡಿಕೊಂಡರು. ಜೊತೆಗೆ ಚುನಾವಣೆಗೆ ತನ್ನ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಸಿನಿಮಾ ಸ್ಟಾರ್ ವಿಜಯಕಾಂತ್ ಅವರು ಜಯಲಲಿತಾ ನೇತೃತ್ವದ ಅಣ್ಣಾ ಡಿ.ಎಂ.ಕೆ.ಯ ಸ್ವಲ್ಪ ಮತಗಳನ್ನು ಸೆಳೆದರು. ಡಿ.ಎಂ.ಕೆ. ಮತ್ತು ಕಾಂಗ್ರೆಸ್‌ಗೆ ಸ್ವಲ್ಪಮಟ್ಟಿಗೆ ಇದು ಸಹಾಯಕವಾಯಿತು.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್.ಸಿ.ಪಿ. ಮೈತ್ರಿ ಮಾಡಿಕೊಂಡಿದ್ದವು. ರಾಜ್ಯ ಸರ್ಕಾರವನ್ನು ಈ ಪಕ್ಷಗಳ ಮೈತ್ರಿಕೂಟವೇ ನಡೆಸುತ್ತಿದೆ. ಈ ಸಾರಿ ಶರದ್ ಪವಾರ್ ಮಹತ್ವಾಕಾಂಕ್ಷೆಯಿಂದ ಎಲ್ಲಾ ಕಡೆ ಸಲ್ಲುವ ‘ಜಾಣತನ’ಕ್ಕೆ ಜೋತು ಬಿದ್ದು ಈಗ ಕಾಂಗ್ರೆಸ್ ಗಷ್ಟೇ ಜೋತು ಬೀಳುವಂತಾಗಿದೆ. ಯು.ಪಿ.ಎ.ಯ ಅಧಿಕೃತ ಅಂಗಪಕ್ಷವೆಂದು ಹೇಳಿಕೊಳ್ಳುತ್ತ, ಅದರಂತೆ ಮೈತ್ರಿ ಮಾಡಿಕೊಳ್ಳುತ್ತಲೇ ಒರಿಸ್ಸದಲ್ಲಿ ನವೀನ್ ಪಟ್ನಾಯಕ್‌ರ ಬಿ.ಜೆ.ಡಿ. ಜೊತೆ ಸೇರಿದರು. ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಜೊತೆ ಸದಾ ಸಂಪರ್ಕ ಇಟ್ಟುಕೊಂಡು ಪ್ರಧಾನಿ ಅಭ್ಯರ್ಥಿಯಾಗುವ ಹವಣಿಕೆಯಲ್ಲಿದ್ದರು. ಆದರೆ ಫಲಿತಾಂಶ ಬಂದಾಗ ಕಾಂಗ್ರೆಸ್ ಮೇಲುಗೈ ಸಾಧಿಸಿತ್ತು. ಮುಂಬೈ ಭಯೋತ್ಪಾದನೆಯ ನಂತರ ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶಮುಖ್ ಅವರ ಸ್ಥಾನಪಲ್ಲಟ ಮಾಡಿತ್ತು. ಮುಂಬೈ ಜನರು ಭಯೋತ್ಪಾದನೆ ಯನ್ನು ಚುನಾವಣೆಯ ವಿಷಯವಾಗಿ ನೋಡಲಿಲ್ಲ ಎನ್ನುವುದು ಒಂದು ಕಡೆಯಾದರೆ ಮತ ವಿಭಜನೆಯಲ್ಲಿ ರಾಜ್ ಠಾಕ್ರೆಯವರ ಎಂ.ಎನ್.ಎಸ್. ವಹಿಸಿದ ಪಾತ್ರ ಇನ್ನೊಂದು ಕಡೆ – ಎರಡೂ ಸೇರಿ ಕಾಂಗ್ರೆಸ್ ಮುಂಬೈನಗರದ ಆರೂ ಕ್ಷೇತ್ರಗಳನ್ನೂ ತನ್ನದಾಗಿಸಿಕೊಂಡಿತು. ಎಂ.ಎನ್.ಎಸ್. ತನ್ನದಾಗಿಸಿಕೊಂಡ ಮತಗಳು ಶಿವಸೇನೆ – ಬಿ.ಜೆ.ಪಿ.ಯ ಮೂಲ ಮತಗಳೆನ್ನುವುದನ್ನು ಗಮನಿಸಬೇಕು. ಮುಂಬೈ ಆಚೆಗಿನ ಮಹಾರಾಷ್ಟ್ರದಲ್ಲಿ ಬಿಜೆಪಿ – ಶಿವಸೇನೆ ಮತ್ತು ಎನ್.ಸಿ.ಪಿ.ಗಳು ಎದೆ ನಡುಗಿಸುವ ಸಂಖ್ಯಾಬಲವನ್ನೇನೂ ಪಡೆಯಲಿಲ್ಲ. ಸಾಂಪ್ರದಾಯಿಕ ಮತಗಳು ವಿಭಜನೆಗೊಳ್ಳುತ್ತಿರುವ ಪ್ರಕ್ರಿಯೆಯನ್ನು ಮಹಾರಾಷ್ಟ್ರದ ಕೆಲವು ಕಡೆ ಕಾಣಬಹುದು.

ಬಿಹಾರದಲ್ಲಿ ಈ ಸಾರಿ ಲಾಲೂ ಜಾದು ನಡೆಯಲಿಲ್ಲ. ಲಾಲೂ ಪ್ರಸಾದ್ ಯಾದವ್ ಅವರು ಹಿಂದುಳಿದವರ ಅಲ್ಪಸಂಖ್ಯಾತರ ನೇತಾರರಾಗಿ ಮತ್ತು ರಾಮವಿಲಾಸ್ ಪಾಸ್ವಾನ್ ಅವರು ದಲಿತರ ನೇತಾರರಾಗಿ ಹೊರಹೊಮ್ಮಲು ಚಾರಿತ್ರಿಕ ಕಾರಣಗಳಿವೆ. ಸ್ವಾತಂತ್ರ್ಯೋತ್ತರ ಭಾರತದ ಬಿಹಾರದಲ್ಲಿ ಮೇಲ್ಜಾತಿ ಮತ್ತು ವರ್ಗದವರ ಕೈಯ್ಯಲ್ಲಿದ್ದ ಕಾಂಗ್ರೆಸ್ ಹಿಂದುಳಿದವರನ್ನೂ ಕ್ರಮೇಣ ದಲಿತರನ್ನೂ ರಾಜಕೀಯ ನಾಯಕತ್ವದಿಂದ ದೂರವೇ ಉಳಿಸಿತು. ಇದರ ಫಲವಾಗಿ ಮುಂದೆ ಕರ್ಪೂರಿ ಠಾಕೂರರಂಥ ಅತ್ಯಂತ ಹಿಂದುಳಿದ ಜನಾಂಗದ ನಾಯಕರು ಹೊರ ಹೊಮ್ಮಿದರು; ಮುಖ್ಯಮಂತ್ರಿಯಾದರು. ಉತ್ತಮ ಕೆಲಸ ಮಾಡಿದರು. ಆನಂತರ ಸಾಮೂಹಿಕವಾಗಿ ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಆತ್ಮವಿಶ್ವಾಸ ತುಂಬಿದವರು ಲಾಲೂ ಪ್ರಸಾದ್ ಯಾದವ್. ಬಿಹಾರದಲ್ಲಿ ಬಹುಸಂಖ್ಯಾತರಾದ ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ದಲಿತರು ಲಾಲೂ ಮತ್ತು ಪಾಸ್ವಾನ್ ಅವರಲ್ಲಿ ತಮ್ಮ ನಾಯಕತ್ವವನ್ನು ಗುರುತಿಸಿದ್ದು ಒಂದು ಚಾರಿತ್ರಿಕ ಬೆಳವಣಿಗೆ. ಆದರೆ ಅಭಿವೃದ್ಧಿಯತ್ತ ಹೆಚ್ಚು ಗಮನ ಹರಿಸಲಿಲ್ಲವೆಂಬ ಆಕ್ಷೇಪದ ಜೊತೆಗೆ ಭ್ರಷ್ಟಾಚಾರದ ಆರೋಪ ಹೊತ್ತ ಲಾಲೂ ಯಾದವೇತರ ಹಿಂದುಳಿದವರನ್ನು ನಿರ್ಲಕ್ಷಿಸಿದ್ದು ಅವರಿಗೆ ಮುಳುವಾಯಿತು. ಯಾದವೇತರ ಹಿಂದುಳಿದವರ ನಾಯಕರಾಗಿ ನಿತೀಶ್ ಕುಮಾರ್ ಹೊರಹೊಮ್ಮಿದರು. ನಡವಳಿಕೆಯಿಂದ ಸಹ ಲಾಲೂ ಅವರಿಗಿಂತ ಸರಳ, ಸೌಜನ್ಯಗಳನ್ನು ಪಡೆದಿದ್ದ ನಿತೀಶ್ ಬಹುಜನಪ್ರಿಯ ನೆಲೆಯನ್ನು ತಲುಪಿದರು. ಈ ನೆಲ ಮೂಲ ವಾಸ್ತವಗಳನ್ನು ಕಡೆಗಣಿಸಿದ ಲಾಲೂ ಮತ್ತು ಪಾಸ್ವಾನ್ ಕಾಂಗ್ರೆಸ್‌ಗೂ ಕೈ ಕೊಟ್ಟು ಉತ್ತರ ಪ್ರದೇಶದ ಮುಲಾಯಂ ಸಿಂಗ್ ಯಾದವ್ ಜೊತೆ ಸೇರಿದರು. ಮೂವರು ಚುನಾವಣೆಯ ನಂತರ ದಾಳ ಎಸೆಯಬಹುದೆಂದು ಭಾವಿಸಿ ಭ್ರಮನಿರಸನಗೊಂಡರು.

ಹಿಂದೆ ಉತ್ತರ ಪ್ರದೇಶದಲ್ಲೂ ಬಿಹಾರದ ಸ್ಥಿತಿಯೇ ಇತ್ತು. ಕಾಂಗ್ರೆಸ್ ಮೇಲ್ ಜಾತಿ ಮತ್ತು ವರ್ಗದವರ ಕೈಯ್ಯಲ್ಲಿತ್ತು. ಹಿಂದುಳಿದವರು ಮತ್ತು ದಲಿತರು ರಾಜಕೀಯ ನಾಯಕತ್ವದ ಸಂದರ್ಭದಲ್ಲಿ ನಿರ್ಲಕ್ಷಿತರಾಗುತ್ತ ಬಂದರು. ಹೀಗಾಗಿ ಮುಲಾಯಂ ಸಿಂಗ್ ಮತ್ತು ಕಾನ್ಶಿರಾಂ ಉದಯ ಚಾರಿತ್ರಿಕವಾಯಿತು. ಎಸ್.ಪಿ. ಮತ್ತು ಬಿ.ಎಸ್.ಪಿ.ಗಳು ಶೋಷಿತ ವರ್ಗಗಳ ಪರವಾದ ದನಿಯಾಗಿ ಹುಟ್ಟಿದರೂ ಮುಂದೆ ಪರಸ್ಪರ ಎದುರು ಬದರಾದವು. ಬದ್ಧವೈರಿಗಳಂತೆ ವರ್ತಿಸತೊಡಗಿದವು. ಉತ್ತಮ ಉದ್ದೇಶವುಳ್ಳ ಪಕ್ಷಗಳು ಕಾಲಾನುಕ್ರಮದಲ್ಲಿ ಹಾದಿ ತಪ್ಪಿದ ನಡವಳಿಕೆಗಳಿಗೆ ಕಾರಣವಾದರೆ ನಷ್ಟವಾಗುವುದು ಕೇವಲ ಪಕ್ಷಗಳಿಗಲ್ಲ, ಈ ಪಕ್ಷಗಳನ್ನು ನಂಬಿದ ಮುಗ್ಧಜನರಿಗೆ. ಮಾಯಾವತಿಯವರು ಮೇಲ್ಜಾತಿಯವರಿಗೂ ಮೀಸಲಾತಿ ಎಂಬ ಘೋಷಣೆಯೊಂದಿಗೆ ದಲಿತರು ಮತ್ತು ಬ್ರಾಹ್ಮಣರನ್ನು ಬೆಸೆದಂತೆ ಮಾಡಿ ಮುಖ್ಯಮಂತ್ರಿ ಯಾದರು. ದಲಿತರ ಪರವಾಗಿರುವುದೆಂದರೆ ಮೇಲ್ಜಾತಿ ದ್ವೇಷವಲ್ಲ ಎಂದು ತೋರಿಸಿದರು. ಆದರೆ ಒಂದು ಮಾತನ್ನು ಇಲ್ಲಿ ಹೇಳಬೇಕು ‘ಮೇಲ್ಜಾತಿ ಬಡವರಿಗೂ ಮೀಸಲಾತಿ’ ಎಂಬುದನ್ನು ದೇವರಾಜ ಅರಸು ಅವರು ಕರ್ನಾಟಕದಲ್ಲಿ ಜಾರಿಗೆ ತಂದಿದ್ದರು. ಹಾವನೂರು ವರದಿಯನ್ನು ಜಾರಿಗೆ ತರುವಾಗ, ಈ ವರದಿಯಲ್ಲಿ ಇಲ್ಲದ ‘ಮೇಲ್ಜಾತಿ ಬಡವರಿಗೆ ಮೀಸಲಾತಿ’ ಎಂಬ ಅಂಶವನ್ನು ತಾವೇ ಹೊಸದಾಗಿ ರೂಪಿಸಿ ‘ಬ್ಯಾಕ್‌ವರ್ಡ್ ಸ್ಪೆಷಲ್ ಗ್ರೂಪ್’ (B.S.G.) ಎಂಬ ವಿಶೇಷ ವಿಭಾಗ ಮಾಡಿ ಶೇ. ೧೫ರಷ್ಟು ಮೀಸಲಾತಿ ಇಟ್ಟರು. ಅಂದರೆ ಈ ಪ್ರಯೋಗ ಕರ್ನಾಟಕದಲ್ಲಿ ತನ್ನದೇ ವಿಧಾನದಲ್ಲಿ ಆರಂಭವಾಗಿತ್ತು. ಇರಲಿ; ಈಗ ಚುನಾವಣೆಗೆ ಬರೋಣ. ಪರಸ್ಪರ ವಿರೋಧದ ವೈಪರೀತ್ಯ ಮತ್ತು ಅತಿರೇಕಗಳ ನಡುವೆ ಕಾಂಗ್ರೆಸ್ ತನ್ನ ಪಾಲು ಪಡೆಯಲು ಮುಂದಾಯಿತು. ಸ್ವತಂತ್ರವಾಗಿಯೇ ಸ್ಪರ್ಧಿಸಬೇಕೆಂದು ಪ್ರತಿಪಾದಿಸಿದ ರಾಹುಲ್‌ಗಾಂಧಿ ವ್ಯಾಪಕ ಪ್ರಚಾರ ಕೈಗೊಂಡರು. ಹೈಟೆಕ್‌ನಂತೆಯೂ ಕಂಡರು, ಮಧ್ಯಮ ವರ್ಗದವರಿಗೂ ಪ್ರಿಯವಾಗತೊಡಗಿದರು. ದಲಿತರ ಮನೆಗಳಿಗೂ ಹೋದರು; ಜೊತೆಯಲ್ಲಿ ಉಂಡರು. ಬಿ.ಎಸ್.ಪಿ. ಮತ್ತು ಎಸ್.ಪಿ.ಗಳಿಂದ ಬೇರೆಯದಾದ ಪರ್ಯಾಯ ಇದೆ ಎಂಬುದನ್ನು ಕಾಂಗ್ರೆಸ್ ತೋರಿಸಲು ಸಾಧ್ಯವಾದದ್ದರಿಂದ ೨೦ ಸ್ಥಾನಗಳನ್ನು ಗೆದ್ದಿತು ನಿಜ. ಅದರ ದಾರಿ ಇನ್ನೂ ದೂರವಿದೆ. ಆದರೆ ಎಸ್.ಪಿ. ಮತ್ತು ಬಿ.ಎಸ್.ಪಿ.ಗಳಿಗೆ ಇದೊಂದು ಪಾಠ. ವಿಚಿತ್ರವೆಂದರೆ ಎಸ್.ಪಿ. ಮತ್ತು ಬಿ.ಎಸ್.ಪಿ.ಗಳೆರಡೂ ಈಗಿನ ಯು.ಪಿ.ಎ.ಗೆ ಅಧಿಕೃತ ಬೆಂಬಲ ಘೋಷಿಸಿವೆ. ಸಚಿವಸ್ಥಾನ ಸಿಗುವುದಿಲ್ಲವೆಂದು ಗೊತ್ತಾಗಿದ್ದರೂ ಬೆಂಬಲ ನೀಡುವುದರಲ್ಲಿ ತೋರಿದ ಸ್ಪರ್ಧೆಯ ಗುಟ್ಟು ಬೇರೆಯೇ ಇದ್ದೀತು!

ಹರಿಯಾಣ ಮತ್ತು ದೆಹಲಿ ರಾಜ್ಯಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು ನಿರೀಕ್ಷಿತ. ಇದ್ದ ಎಲ್ಲಾ ಸ್ಥಾನಗಳೂ ಇಲ್ಲಿ ಕಾಂಗ್ರೆಸ್ ಪಾಲಾಗಿವೆ. ಆದರೆ ಚುನಾವಣೆಯ ಕೊನೇ ಹಂತದಲ್ಲಿ ಪಂಜಾಬ್‌ನ ಲೂಧಿಯಾನದಲ್ಲಿ ನಿತೀಶ್ ಕುಮಾರ್, ಶರದ್ ಯಾದವ್, ಚಂದ್ರಶೇಖರ ರಾವ್ (ಟಿ.ಆರ್.ಎಸ್.) ಅವರನ್ನೆಲ್ಲ ಕರೆಸಿಕೊಂಡು ಬೃಹತ್ ಸಮಾವೇಶದ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದ ಎನ್.ಡಿ.ಎ. ರಾಷ್ಟ್ರಮಟ್ಟದಲ್ಲಷ್ಟೇ ಅಲ್ಲ ಪಂಜಾಬ್‌ನಲ್ಲೂ ಹಿನ್ನೆಡೆ ಅನುಭವಿಸಿತು. ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮೇಲೆ ಇದ್ದ ಭ್ರಷ್ಟಾಚಾರದ ಕೇಸುಗಳು ಲೆಕ್ಕಕ್ಕೆ ಬರಲಿಲ್ಲ. ಯಾಕೆಂದರೆ ಹಾಲಿ ಮುಖ್ಯಮಂತ್ರಿಯವರ ಮೇಲೂ ಅನೇಕ ಆರೋಪಗಳಿವೆ. ಇಲ್ಲಿ ಶಿರೋಮಣಿ ಅಕಾಲಿದಳ ಮತ್ತು ಬಿ.ಜೆ.ಪಿ. ಹೆಚ್ಚು ಸ್ಥಾನ ಗಳಿಸಬಹುದೆಂಬ ಅನೇಕರ ಊಹೆ (ಆಸೆ ?) ಸುಳ್ಳಾಯಿತು. ಮನಮೋಹನ್ ಸಿಂಗ್ ಅವರನ್ನು ಪ್ರಧಾನ ಮಂತ್ರಿಯಾಗಿ ಬಿಂಬಿಸಿದ್ದು ಮತ್ತು ಎಲ್ಲೂ ಬಾರದ ಅವರು ಪಂಜಾಬ್‌ನಲ್ಲಿ ಬಹಿರಂಗ ಸಭೆ ನಡೆಸಿದ್ದು ಒಂದು ತಿರುವನ್ನು ನೀಡಿದೆಯೆನ್ನಬಹುದು.

ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳಲ್ಲಿ ಎಡರಂಗದ ಸರ್ಕಾರಗಳಿದ್ದವು. ಕೇರಳದಲ್ಲಿ ಸಾಮಾನ್ಯವಾಗಿ ಪ್ರತಿಸಾರಿಯೂ ಪರ್ಯಾಯವನ್ನು ಹುಡುಕುವ ಮತದಾರರಿದ್ದಾರೆ. ಎಡ ಪಕ್ಷಗಳ ಎಲ್.ಡಿ.ಎಫ್. ಒಮ್ಮೆ ಬಂದರೆ ಮತ್ತೊಮ್ಮೆ ಯು.ಡಿ.ಎಫ್. (ಕಾಂಗೈ ನೇತೃತ್ವ) ಬರುತ್ತದೆ. ಇದು ವಿಧಾನಸಭೆಯ ಚುನಾವಣೆಗೆ ಸಂಬಂಧಿಸಿದ ಅಂಶವಾದರೂ ಲೋಕಸಭಾ ಚುನಾವಣೆಯಲ್ಲೂ ತನ್ನ ಪಾತ್ರ ವಹಿಸುತ್ತದೆ. ಕೇರಳದಲ್ಲಿ ಎಡರಂಗದ ಎಲ್.ಡಿ.ಎಫ್. ಅಧಿಕಾರದಲ್ಲಿದೆ. ಮತದಾರ ಪರ್ಯಾಯವಾಗಿ ಕಾಂಗ್ರೆಸ್‌ನ ಯು.ಡಿ.ಎಫ್. ಕಡೆ ವಾಲುತ್ತಾನೆಂದರೂ ಎಲ್.ಡಿ.ಎಫ್. ನಾಲ್ಕು ಸ್ಥಾನಗಳಿಗೆ ಸೀಮಿತವಾಗಬೇಕಾಗಿ ಬಂದದ್ದು ಒಂದು ಪಾಠವೇ ಸರಿ. ಇಂತಹ ಫಲಿತಾಂಶಕ್ಕೆ ಸಿ.ಪಿ.ಎಂ.ನಲ್ಲಿ ಮುಖ್ಯಮಂತ್ರಿ ಅಚ್ಯುತಾ ನಂದನ್ ಮತ್ತು ವಿಜಯನ್ ಅವರ ನಡುವೆ ಇದ್ದ ಭಿನ್ನಾಭಿಪ್ರಾಯವನ್ನು ಒಂದು ಕಾರಣವಾಗಿ ನೀಡುವವರೂ ಉಂಟು. ಆದರೆ ಯು.ಡಿ.ಎಫ್.ಗೆ ಸಮಬಲದಲ್ಲು ನಿಲ್ಲದೆ ಹೋದದ್ದಕ್ಕೆ ಒಳ ಜಗಳವನ್ನೂ ಒಳಗೊಂಡಂತೆ, ಅದನ್ನು ಮೀರಿದ ಕಾರಣಗಳೂ ಇರುತ್ತವೆ. ಪಶ್ಚಿಮ ಬಂಗಾಳವನ್ನು ನೋಡಿ, ‘ನನ್ನ ಜೀವಾತಾವಧಿಯಲ್ಲಿ ಅತ್ಯಂತ ಹೀನಾಯ ಸೋಲನ್ನು ಕಂಡೆ’ ಎಂದು ಜ್ಯೋತಿಬಸು ಅವರು ವ್ಯಾಕುಲಗೊಳ್ಳುವಷ್ಟು ಎಡಪಕ್ಷಗಳ ಶಕ್ತಿ ಕುಗ್ಗಿ ಹೋಗಿತ್ತು. ೩೨ ವರ್ಷಗಳಲ್ಲಿ ಕಂಡ ಅತ್ಯಂತ ಹೀನಾಯ ಸೋಲು ಎಂದು ಇದನ್ನು ಹೇಳಲಾಗುತ್ತದೆ. ನಂದಿ ಗ್ರಾಮದ ಗಲಭೆ, ಸಿಂಗೂರ್‌ನ ನ್ಯಾನೊ ಕಾರಿನ ಕಾರ್ಖಾನೆಯ ವಿವಾದಗಳ ನೆರಳು ಭೂತದಂತೆ ಕಾಡಿಸಿರುವುದರ ಜೊತೆಗೆ ಜನರಿಗೆ ಇನ್ನೊಂದು ಪರ್ಯಾಯ ಕಾಣಿಸಿದೆ. ಪರಸ್ಪರ ವಿರುದ್ದವಾಗಿದ್ದ ಕಾಂಗ್ರೆಸ್ ಮತ್ತು ತೃಣ ಮೂಲ ಕಾಂಗ್ರೆಸ್ ಒಂದಾಗಿ ಪರ್ಯಾಯವನ್ನು ನೀಡಲು ಸಿದ್ದವಾದಾಗ ತಟಸ್ಥ ಮತದಾರರು, ಒಂದಷ್ಟು ಅಲ್ಪಸಂಖ್ಯಾತರು ಈ ಕಡೆ ಒಲಿದಿದ್ದಾರೆ. ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಸ್ಥಳೀಯ ಕಾರಣಗಳ ಜೊತೆಗೆ ಎಡಪಕ್ಷಗಳ ವಿಶ್ವಾಸಾರ್ಹತೆಯೂ ಅನುಮಾನಗಳನ್ನು ಹುಟ್ಟು ಹಾಕಿದೆ. ಇದಕ್ಕೆ ‘ದೂರದೃಷ್ಟಿ ಮತ್ತು ದರ್ಶನಾತ್ಮಕತೆಯಿಂದ ದೂರವಾದ ನಾಯಕತ್ವ’ವೂ ಒಂದು ಕಾರಣವಾಗಿದೆ.

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಅದಕ್ಕೆ ಆಡಳಿತ ವಿರೋಧಿ ಅಲೆಯೂ ಕಡಿಮೆ ಇದ್ದುದರಿಂದ ಬಿ.ಜೆ.ಪಿ.ಗಿಂತ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗಳಿಸಿತು. ಮಧ್ಯಪ್ರದೇಶದಲ್ಲಿ ಬಿ.ಜೆ.ಪಿ. ಸರ್ಕಾರವಿದ್ದರೂ ಕಾಂಗ್ರೆಸ್ ಸಾಕಷ್ಟು ಸ್ಪರ್ಧೆ ನೀಡಿತು. ಹೀಗಾಗಿ ಬಿ.ಜೆ.ಪಿ.ಯು ‘ತುಂಬಾ’ ಮುನ್ನಡೆ ಸಾಧಿಸಲಾಗಲಿಲ್ಲ. ನಿರೀಕ್ಷಿಸಿದಂತೆ ಗುಜರಾತ್ ಮುನ್ನಡೆ ನೀಡಿದ್ದರೂ ಬಿ.ಜೆ.ಪಿ.ಯವರು ಅಂದುಕೊಂಡಂತೆ ಕಾಂಗ್ರೆಸ್‌ ಕುಗ್ಗಿ ಹೋಗಲಿಲ್ಲ. ‘ಮೋದಿ ಮೋಡಿ’ ಎನ್ನುವುದು ಕಳೆದ ಸಾರಿಗಿಂತ ಒಂದು ಸ್ಥಾನವನ್ನಷ್ಟೇ ಹೆಚ್ಚು ಮಾಡಿತು (೧೫) ಕಾಂಗ್ರೆಸ್ ಕಳೆದ ಸಾರಿಗಿಂತ ಒಂದು ಸ್ಥಾನವನ್ನು ಕಳೆದುಕೊಂಡಿತು (೧೧).

ಕರ್ನಾಟಕವೂ ಗುಜರಾತ್‌ಗಿಂತ ಹೆಚ್ಚೇನೂ ವ್ಯತ್ಯಾಸ ಮಾಡಲಿಲ್ಲ. ಮೋದಿಯವರನ್ನು ‘ಮಾಡೆಲ್’ ಮಾಡಿಕೊಂಡ ಯಡ್ಯೂರಪ್ಪನವರು ಮೋದಿಯವರಂತೆಯೇ ಒಂದು ಸ್ಥಾನ ಹೆಚ್ಚಿಗೆ ಗಳಿಸಿಕೊಟ್ಟರು (೧೯) ದೇವೇಗೌಡರು, ಕುಮಾರಸ್ವಾಮಿಯವರು ಸೇರಿ ಕಳೆದ ಬಾರಿಗಿಂತ ಒಂದು ಸ್ಥಾನ ಹೆಚ್ಚು ಗಳಿಸಿದರು (೩) ಕಳೆದ ಸಾರಿಗಿಂತ ಸ್ವಲ್ಪವಾದರೂ ಹೆಚ್ಚು ಸ್ಥಾನಗಳಿಸುತೇವೆಂದುಕೊಂಡಿದ್ದ ಕಾಂಗ್ರೆಸ್ ಎರಡು ಸ್ಥಾನ ಕಡಿಮೆ ಗಳಿಸಿ ತನ್ನ ಪರಂಪರೆಯನ್ನು ಕಾಯ್ದು ಕೊಂಡಿತು (೬). ಕರ್ನಾಟಕದಿಂದ ಹೆಚ್ಚು ಜನರನ್ನು ಆಯ್ಕೆ ಮಾಡಿಸಿ ಎಲ್.ಕೆ. ಅದ್ವಾನಿಯವರನ್ನು ಪ್ರಧಾನಿ ಪಟ್ಟದಲ್ಲಿ ಕಾಣಬೇಕೆಂದು ಕನಸಿದ್ದ ಯಡ್ಯೂರಪ್ಪನವರು ಹೆಚ್ಚು ಸ್ಥಾನ ಗೆಲ್ಲುವಷ್ಟಕ್ಕೆ ಸಮಾಧಾನಪಡಬೇಕಾಯಿತು. ಕರ್ನಾಟಕ ಕಂಡ ಅತ್ಯಂತ ಭ್ರಷ್ಟ ಚುನಾವಣೆಯೆಂಬ ಕುಖ್ಯಾತಿಯನ್ನೂ ನಮ್ಮ ರಾಜ್ಯ ಗಳಿಸಬೇಕಾಯಿತು. ಕರ್ನಾಟಕವು ಕೊಟ್ಟಿರುವ ಲೋಕಸಭಾ ಚುನಾವಣೆಯ ಫಲಿತಾಂಶವು ಒಂದು ಆಘಾತಕರ ಅಂಶವನ್ನು ಒಳಗೊಂಡಿದೆ. ಮೂರು ಪಕ್ಷಗಳಿಂದ ಗೆದ್ದಿರುವ ಅಭ್ಯರ್ಥಿಗಳು ಯಾವ್ಯಾವ ಸಾಮಾಜಿಕ ನೆಲೆಗೆ ಸೇರಿದವರೆಂಬುದನ್ನು ಒಮ್ಮೆ ಗಮನಿಸಿ. ಬಿ.ಜೆ.ಪಿ.ಯಲ್ಲಿ ಗೆದ್ದು ಬಂದಿರುವವರಲ್ಲಿ ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದಂತೆ ಪ್ರಧಾನವಾಗಿ ಲಿಂಗಾಯತರು, ಆನಂತರದಲ್ಲಿ ಬ್ರಾಹ್ಮಣರು ಇದ್ದಾರೆ. ಜಾತ್ಯತೀತ ಜನತಾದಳದ ಮೂವರೂ ಒಕ್ಕಲಿಗರಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಗೆದ್ದವರು ದಲಿತರು ಮತ್ತು ಹಿಂದುಳಿದವರು ಮಾತ್ರ. ಯಾವುದೇ ಒಂದು ಜಾತಿಯವರು ನೂರಕ್ಕೆ ನೂರು ಒಂದೇ ಪಕ್ಷವನ್ನು ಬೆಂಬಲಿಸುತ್ತಾರೆಂದು ಹೇಳಿದರೆ ಆಯಾ ಜಾತಿಗೆ ಸೇರಿದ ಪ್ರಜ್ಞಾವಂತರಿಗೆ ಅವಮಾನ ಮಾಡಿದಂತಾಗುತ್ತದೆ. ಆದರೆ ಒಂದು ಜಾತಿಯ ‘ಬಹುಸಂಖ್ಯಾತರು’ ತಂತಮ್ಮ ಜಾತಿಮೋಹಕ್ಕೆ ಕಟಿಬದ್ದರಾದಾಗ ಕರ್ನಾಟಕದಲ್ಲಿ ಬಂದಿರುವಂತಹ ಫಲಿತಾಂಶ ಬರುತ್ತದೆ. ಆಗ ಆಯಾ ಜಾತಿಯಲ್ಲಿರುವ ‘ಅಲ್ಪ ಸಂಖ್ಯಾತರು’ ಅನಾಥ ಪ್ರಜ್ಞೆಗೆ ಒಳಗಾಗಿ ನರಳಬಹುದು. ಮುಂದೊಂದು ದಿನ ಉಳಿದವರಂತೆಯೇ ಆಗುವ ಅನಿವಾರ್ಯ ಬರಬಹುದು. ಹಾಗೇನಾದರೂ ಆದರೆ ಎಂಥ ದುರಂತ! ಈಗಲೇ ಒಂದು ದುರಂತ ಕಣ್ಣೆದುರಿಗಿದೆ. ಪ್ರಬಲ ಜನಾಂಗಗಳ ದ್ರುವೀಕರಣ ನಡೆಯುತ್ತಿದೆ. ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತರಿಂದ ವಿಶೇಷ ಶಕ್ತಿ ಪಡೆದು ಪ್ರಬಲ ಕೋಮುಗಳನ್ನೂ ಉಳಿಸಿಕೊಳ್ಳುತ್ತ ಬಂದು ಸಮತೋಲನ ಸಾಧಿಸಿದ್ದ ಕಾಂಗ್ರೆಸ್‌ಗೆ ಈಗ ಲಭ್ಯವಾದ ಫಲಿತಾಂಶ ‘ಕೈ’ ಎಲ್ಲಿದೆ ಮತ್ತು ಯಾರು ‘ಕೈ’ ಹಿಡಿದಿದ್ದಾರೆ ಎಂಬುದರ ಸಂಕೇತವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕೇಂದ್ರದ ಕಾಂಗ್ರೆಸ್ ಸರ್ಕಾರ ಪ್ರತಿಪಾದಿಸುತ್ತ ಬಂದ ಆರ್ಥಿಕ ನೀತಿಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದರೂ ಸಾಮಾಜಿಕವಾಗಿ ಎಲ್ಲ ವಲಯಗಳ ಪ್ರಾತಿನಿಧ್ಯವನ್ನು ಒಳಗೊಂಡ ಪಕ್ಷವಾಗಿದೆಯೆಂಬುದನ್ನು ಅಲ್ಲಗಳೆಯಲಾಗದು. ಕರ್ನಾಟಕದ ಮಟ್ಟಿಗೆ ಈ ಮಾತು ಇನ್ನಷ್ಟು ನಿಜ.

ಡಾ. ಮನಮೋಹನ್ ಸಿಂಗ್ ನೇತೃತ್ವದ, ಕಾಂಗ್ರೆಸ್ ಪ್ರಾಬಲ್ಯವಿರುವ ಯು.ಪಿ.ಎ. ಸರ್ಕಾರ ಈಗ ಅಸ್ತಿತ್ವಕ್ಕೆ ಬಂದಿದೆ. ಆರ್ಥಿಕ ಸುಧಾರಣೆಯ ಹೆಸರಿನಲ್ಲಿ ಬಡವರ ಬದುಕನ್ನು ಮರೆತರೆ ಕಾಂಗ್ರೆಸ್ ಪಕ್ಷವು ತನ್ನ ‘ಕೈ’ ಹಿಡಿದವರನ್ನು ಕೈಬಿಟ್ಟಂತಾಗುತ್ತದೆ. ಸಮಾನತೆ ಮತ್ತು ಸಾಮರಸ್ಯಕ್ಕೆ ಧಕ್ಕೆ ತರುವ ಯಾವುದೇ ಸುಧಾರಣೆ, ನಿಜವಾದ ಅರ್ಥದಲ್ಲಿ ಸುಧಾರಣೆಯಾಗಿರುವುದಿಲ್ಲ. ಸಜ್ಜನಿಕೆ, ಸಂಭಾವಿತ ನಡೆ-ನುಡಿಗಳಿಂದ ಪ್ರಿಯರಾಗಿರುವ ಮನಮೋಹನಸಿಂಗ್ ಅವರು ಜನಸಾಮಾನ್ಯರ ಪ್ರತಿನಿಧಿಯಂತೆ ಕೆಲಸ ಮಾಡಿದರೆ ಕಾಂಗ್ರೆಸ್‌ಗೂ ಒಳ್ಳೆಯದು; ದೇಶಕ್ಕೂ ಒಳ್ಳೆಯದು. ಮನಮೋಹನ್ ಸಿಂಗ್ ಸರ್ಕಾರವು ಈ ಸಾರಿಯ ಫಲಿತಾಂಶವನ್ನು ಸರಿಯಾಗಿ ಗ್ರಹಿಸಿದರೆ ಸರಿಯಾದ ದಾರಿಯಲ್ಲಿ ಹೋಗುತ್ತದೆ.

ಈಗ ನೋಡಿ : ಮನಮೋಹನ್ ಸಿಂಗ್ ಸರ್ಕಾರದ ಬಹುಮುಖ್ಯ ಸಾಧನೆಯೆಂದು ಬಿಂಬಿತವಾಗಿದ್ದ ಅಮೇರಿಕ ಜೊತೆಗಿನ ಅಣು ಒಪ್ಪಂದವನ್ನು ಸ್ವತಃ ಕಾಂಗ್ರೆಸ್ ಪಕ್ಷವೇ ತನ್ನ ಪ್ರಣಾಳಿಕೆಯಲ್ಲಿ ಮತ್ತು ಪ್ರಚಾರದಲ್ಲಿ ದೊಡ್ಡದಾಗಿ ಬಿಂಬಿಸಲಿಲ್ಲ. ರೈತರ ಸಾಲ ಮನ್ನಾ ಯೋಜನೆ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಬಡವರಿಗೆ ಮೂರು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ಕೊಡುವ ಆಶ್ವಾಸನೆ, ಐದು ವರ್ಷ ಹಗರಣರಹಿತ ಆಡಳಿತ ನಡೆಸಿದ ಸಾಧನೆ – ಇವೇ ಮುಂತಾದವು ಮುಂಚೂಣಿಯಲ್ಲಿದ್ದವು. ಆರ್ಥಿಕ ಸುಧಾರಣೆಯ ಹೆಸರಿನಲ್ಲಿ ಮಾಡಿದ ಯಾವ ‘ಸಾಧನೆ’ಗಳೂ ಮತದಾರರ ಮುಂದಿರಲಿಲ್ಲ. ಈ ಕಟುವಾಸ್ತವವನ್ನು ಅರ್ಥಮಾಡಿಕೊಂಡರೆ ಆರ್ಥಿಕ ಸುಧಾರಣೆಯನ್ನು ಬಂಡವಾಳಗಾರರ ಬೆಲೆವೆಣ್ಣು ಮಾಡುವ ಬದಲು ಜನ ಸಾಮಾನ್ಯರ ಜೀವಶಕ್ತಿಯಾಗಿಸುವುದು ಹೇಗೆಂದು ಚಿಂತಿಸಲು ಸಾಧ್ಯವಾಗುತ್ತದೆ.

ಮನಮೋಹನ್ ಸಿಂಗ್ ಅವರು ಚುನಾವಣೆಗಳು ಪ್ರಾರಂಭವಾದಾಗ ಪ್ರಾದೇಶಿಕ ಪಕ್ಷಗಳು ರಾಷ್ಟ್ರಕ್ಕೆ ಮಾರಕ ಎಂಬಂತೆ ಮಾತಾಡಿದರು. ಆನಂತರ ತಿದ್ದಿಕೊಂಡು ‘ಪ್ರಾದೇಶಿಕ ಪಕ್ಷಗಳು ಇಂದಿನ ವಾಸ್ತವ’ ಎಂದರು. ಈ ಚುನಾವಣೆಯ ಫಲಿತಾಂಶದಿಂದ ಪ್ರಾದೇಶಿಕ ಪಕ್ಷಗಳೆಂದು ಪ್ರತಿನಿಧಿಸಿಕೊಂಡಿದ್ದವರ ಶಕ್ತಿ ಕ್ಷೀಣವಾಗಿದೆಯೆಂದು ಮನಮೋಹನಸಿಂಗ್ ಸರ್ಕಾರ ಮೈದುಂಬಬಾರದು. ನನಗನ್ನಿಸಿದಂತೆ ಇಲ್ಲೀವರೆಗೆ ಯಾವ ಪಕ್ಷಗಳೂ ಪ್ರಾದೇಶಿಕತೆಯನ್ನು ಸಮರ್ಥವಾಗಿ ಪ್ರತಿನಿಧಿಸಿಲ್ಲ. ನಮ್ಮ ಸಂವಿಧಾನವು ಒಕ್ಕೂಟ ವ್ಯವಸ್ಥೆಯನ್ನು ನೀಡಿದೆ. ರಾಷ್ಟ್ರ ಮಟ್ಟದಲ್ಲಿ ‘ಸಂಯುಕ್ತ ಸರ್ಕಾರ’ (Union Government) ಇರುತ್ತದೆಯೇ ಹೊರತು ರೂಢಿಯಲ್ಲಿ ಕರೆಯುವಂತೆ ಕೇಂದ್ರ ಸರ್ಕಾರವಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ತನ್ನದೇ ಆದ ಅಸ್ತಿತ್ವವಿರುತ್ತದೆ. ಅವು ‘ಕೇಂದ್ರ’ದ ಅಡಿಯಾಳಲ್ಲ, ಪ್ರಾದೇಶಿಕತೆ ಎನ್ನುವುದು ಸಾಮಾಜಿಕ, ಸಾಂಸ್ಕೃತಿಕ ವೈಶಿಷ್ಟ್ಯಗಳಿಗೂ ಸಂಬಂಧಿಸಿದ್ದು, ಆಡಳಿತಾತ್ಮಕ ಮತ್ತು ಆರ್ಥಿಕ ವಿಷಯಗಳಿಗೂ ಸಂಬಂಧಿಸಿದ್ದು, ಪ್ರಾದೇಶಿಕತೆ ರಾಷ್ಟ್ರೀಯತೆಗೆ ವಿರುದ್ಧವಾಗಬೇಕಿಲ್ಲ. ಯಾಕೆಂದರೆ ಅದೂ ಒಂದು ರಾಷ್ಟ್ರೀಯತೆ. ಬಹುರೂಪತೆಯೇ ಭಾರತೀಯತೆ, ಏಕರೂಪತೆ ಅಲ್ಲ. ಈ ಸೈದ್ಧಾಂತಿಕತೆಯ ಮೇಲೆ ಕಟ್ಟಿದರೆ ಅದು ಪ್ರಾದೇಶಿಕ ಪಕ್ಷ. ಆದರೆ ನಮ್ಮ ‘ಪ್ರಾದೇಶಿಕ ಪಕ್ಷಗಳು’ ಕೇಂದ್ರ ಸರ್ಕಾರ’ದ ಕೈ ಕೆಳಗೆ ಇರುತ್ತವೆ, ಇಲ್ಲವೆ ಚೌಕಾಶಿ ರಾಜಕೀಯದಲ್ಲಿ ತೊಡಗುತ್ತವೆ. ‘ಕೇಂದ್ರ ಸರ್ಕಾರ’ವು ತಮ್ಮ ಪಕ್ಷವನ್ನು ಅವಲಂಬಿಸಬೇಕಾಗಿ ಬಂದಾಗ ಚೌಕಾಶಿ ರಾಜಕೀಯ ಜಾಸ್ತಿ ಯಾಗುತ್ತದೆ. ಇದನ್ನು ಪ್ರಾದೇಶಿಕ ಪಕ್ಷಗಳ ಜಯ ಎಂದು ತಪ್ಪಾಗಿ ಬಿಂಬಿಸಲಾಗುತ್ತದೆ! ವಾಸ್ತವ ಬೇರೆಯೇ ಇರುತ್ತದೆ.

ಈಗ ಬಂದಿರುವ ಯು.ಪಿ.ಎ. ಸರ್ಕಾರವು ಒಕ್ಕೂಟ ವ್ಯವಸ್ಥೆಯನ್ನು ಸರಿಯಾಗಿ ಗ್ರಹಿಸಿ ಆಡಳಿತ ನಡೆಸಬೇಕು. ವಿವಿಧ ಪ್ರಾದೇಶಿಕ ಅಗತ್ಯಗಳನ್ನು ನಿರ್ಲಕ್ಷ ಮಾಡಬಾರದು. ರಾಷ್ಟ್ರ ಮಟ್ಟದಲ್ಲಿ ಪ್ರಾದೇಶಿಕ ಅಸಮತೋಲನಕ್ಕೆ ಅವಕಾಶವಿರಬಾರದು.

ಈ ಸಾರಿಯ ಚುನಾವಣೆಯಲ್ಲಿ ಬಿ.ಜೆ.ಪಿ.ಯು ಭಯೋತ್ಪಾದನೆಯ ವಿಷಯವನ್ನು ಮುಂದು ಮಾಡಿತು. ಮನಮೋಹನ ಸಿಂಗ್ ಅವರನ್ನು ‘ದುರ್ಬಲ’ ಎಂದು ಜರೆದು ‘ಉಕ್ಕಿನ ಮನುಷ್ಯ’ನನ್ನು ಪರ್ಯಾಯವಾಗಿ ಮುಂದೆ ತಂದಿತು; ಸ್ವಿಸ್ ಬ್ಯಾಂಕ್‌ನಿಂದ ಕಪ್ಪು ಹಣ ವಾಪಸ್ ತರುತ್ತೇವೆಂದಿತು. ಕೈ ಕತ್ತರಿಸಬೇಕೆಂದು ಭಾಷಿಕ ಹಿಂಸಾಚಾರಕ್ಕೆ ನಾಂದಿ ಹಾಡಿದ ವರುಣ್ ಗಾಂಧಿಯವರನ್ನೂ ಮುಂಚೂಣಿ ಪ್ರಚಾರಕರನ್ನಾಗಿಸಿತು. ಆದರೆ ಆದದ್ದೇನು? ನಿರೀಕ್ಷೆ ಯಂತೆ ಕರ್ನಾಟಕ ಮತ್ತು ಗುಜರಾತ್ ಬಿಟ್ಟರೆ ಬೇರೆಲ್ಲೂ ಬಹು ಜನರು ಕಿವಿಗೊಡಲಿಲ್ಲ. ಭಯೋತ್ಪಾದನೆಯ ಸಮಸ್ಯೆಯನ್ನು ಒಂದು ಪಕ್ಷದ ತಲೆಗೆ ಕಟ್ಟುವುದು ಜನರಿಗೆ ಇಷ್ಟವಾಗಲಿಲ್ಲ. ಸಜ್ಜನ ಪ್ರಧಾನಮಂತ್ರಿಯನ್ನು ‘ದುರ್ಬಲ’ ಎಂದು ಒಂದೇ ಸಮ ಜರೆದದ್ದು ಪಥ್ಯವಾಗಲಿಲ್ಲ. ಎದುರಿಗೇ ಕಪ್ಪುಹಣದ ಖದೀಮರು ಇರುವಾಗ ಸ್ವಿಸ್ ಬ್ಯಾಂಕ್ ಬಹುದೂರ ಎನ್ನಿಸಿ ಮನಸ್ಸಿಗೆ ತಟ್ಟಲಿಲ್ಲ. ಹೊಡಿ ಬಡಿ ಎಂದವರು ಯಾವುದೇ ಪಕ್ಷದವರಾದರೂ ಸರಿ ಎನ್ನಿಸಲಿಲ್ಲ. (ವರುಣ ಗಾಂಧಿ ಗೆದ್ದದ್ದು ಬೇರೆ. ಆದರೆ ಆತ ಪ್ರಚಾರ ಮಾಡಿದ ಕಡೆಯೆಲ್ಲಾ ಗೆಲ್ಲಲಿಲ್ಲ.) ಹೀಗೆ ಬಹು ಜನರು ಬೇರೆಯೇ ರೀತಿಯಲ್ಲಿ ಯೋಚಿಸಿ ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಯಾಕೆ ತಮ್ಮನ್ನು ಅಧಿಕಾರಕ್ಕೆ ತಂದರು ಎಂಬ ಬಗ್ಗೆ ಯು.ಪಿ.ಎ. ಆತ್ಮಾವಲೋಕನ ಮಾಡಿಕೊಳ್ಳಬೇಕು. ಯಾಕೆ ತನ್ನನ್ನು ಸೋಲಿಸಿದರು ಎಂದು ಎನ್.ಡಿ.ಎ. ಆತ್ಮಾವಲೋಕನ ಮಾಡಿಕೊಳ್ಳಬೇಕು. ಈ ಎರಡು ವಿಭಿನ್ನ ಆತ್ಮಾವಲೋಕನಗಳಿಂದ ಅವರ ಆತ್ಮಗಳನ್ನು ಹುಡುಕಿಕೊಂಡಂತಾಗುತ್ತದೆ. ದೇಶಕ್ಕೂ ಆತ್ಮವಿದೆಯೆಂದು ಅರಿವಾಗುತ್ತದೆ. ಆರಿವೇ ಗುರುವಾಗಿ ಜನರಿಗೆ ಒಳ್ಳೆಯದಾಗುತ್ತದೆ.
*****
ಜೂನ್ ೨೦೦೯

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೨
Next post ಅಂಗರಕ್ಷಕ

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…