ರಾಜಮಹಾರಾಜರ, ಚಕ್ರವರ್ತಿ ಬಾದಶಹರ
ಜೀವ ಕಾಪಾಡಲು, ನೆರಳಂಬಂತೆ
ಹಿಂದಿದ್ದೆ, ಮುಂದಿದ್ದೆ, ಜೊತೆಗಿದ್ದೆ.
ಗೆಳೆಯನಾಗಿ, ಭಂಟನಾಗಿ, ಸಲಹೆಗಾರನಾಗಿ,
ಚರಣದಾಸನಾಗಿ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದೆ.
ನನ್ನ ಜೀವ ತೆತ್ತು ಅವನ ಜೀವ ರಕ್ಷಿಸಿದ್ದೆ.
ನಾನಿಲ್ಲ ಅವನಿಲ್ಲ… ಆಗ,
ಅವನಿಲ್ಲ, ನಾನಿದ್ದೇನೆ… ಈಗ.
ಈಗ ನಾನು ಅಂಗರಕ್ಷಕನಲ್ಲ – ಬಾಡಿಗಾರ್ಡ್.
ದೇಶದ ಅಧ್ಯಕ್ಷರ, ಉಪಾಧ್ಯಕ್ಷರ ಮಂತ್ರಿಗಳ
ಹಿಂದೆ ಮಾತ್ರ ಇರುವೆ – ಜೊತೆಗಿಲ್ಲ.
ಕಟ್ಟುಮಸ್ತಾದ ಸಿಪಾಯಿ ನಾನು
ಶಿಸ್ತಾಗಿ ನಿಲ್ಲುವೆ ಸಮವಸ್ತ್ರ ಧರಿಸಿ.
ಕೆಲವೊಮ್ಮೆ ಮಫ್ತಿಯಲ್ಲಿ
ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ.
ನನ್ನ ಮುಂದಿರುವ ರಾಜಕೀಯ ಪುಢಾರಿ
ಯಾರಿರಲಿ, ಹೇಗಿರಲಿ, ಏನು ಮಾಡುತ್ತಿರಲಿ
ಏನೇ ಮಾತಾಡುತ್ತಿರಲಿ, ಯಾರ ಜತೆಗಿರಲಿ
ಎಲ್ಲಾ ನೋಡುತ್ತಿದ್ದರೂ, ನಾ ಕುರುಡ
ಎಲ್ಲಾ ಕೇಳುತ್ತಿದ್ದರೂ, ನಾ ಕಿವುಡ
ಎಂದೂ ಏನೂ ಮಾತನಾಡದ ಮೂಗ.
ನನ್ನ ಮುಂದೆ ನಿಂತು ಸಹಸ್ರ ಸಹಸ್ರ
ಜನಸ್ತೋಮವನ್ನು ಮೋಡಿ ಮಾಡಿ
ನಗೆಗಡಲಲ್ಲಿ ಮುಳುಗಿಸಿ,
ಕರುಣೆಯಿಂದ ಕಂಬನಿ ಬರಿಸಿ,
ಬೇರೆಯವರ ಮೇಲೆ ಎತ್ತಿಕಟ್ಟಿ
ತನ್ನೆಡೆಗೆ ಸೆಳೆದುಕೊಳ್ಳುವ ಆಟ
ಎಲ್ಲ ನಾಟಕ ನೋಡುವುದೆನಗೆ ಕಾಟ!
ನಾನು ನಗುವುದಿಲ್ಲ, ಅಳುವುದಿಲ್ಲ.
ನಿರ್ಲಿಪ್ತರಲ್ಲಿ ನಿರ್ಲಿಪ್ತ. ನನಗೆ
ಎಲ್ಲ ಭಾಷೆ ಗೊತ್ತು, ಭಾವ ಗೊತ್ತು
ಎಲ್ಲರ ಕಥೆಗಳೂ ಚೆನ್ನಾಗಿ ಗೊತ್ತು
ಯಾರನ್ನು ಬೇಕಾದರೂ ಬ್ಲ್ಯಾಕ್‌ಮೈಲ್
ಮಾಡಬಲ್ಲೆ, ಮುಳುಗಿಸಲೂ ಬಲ್ಲೆ.
ಆದರೆ ನಾನು ಮಾತನಾಡುವಂತಿಲ್ಲ
ನಗುವಂತಿಲ್ಲ, ಅಳುವಂತಿಲ್ಲ!
ನಾನು ಕೇವಲ ನೆರಳು ಗೊಂಬೆ.
ನೀವೆಲ್ಲಾ ನನ್ನ ನೋಡುವಿರಿ ಪ್ರತಿ ದಿನ
ಟಿ.ವಿ.ಯಲ್ಲಿ, ಬಹಿರಂಗ ಸಭೆಯಲ್ಲಿ.
ನನ್ನ ಮುಖ ಚಿರಪರಿಚಿತ
ಆದರೆ ನಾನಾರಿಗೂ ಗೊತ್ತಿಲ್ಲ
ನನಗೊಂದು ಹೆಸರಿಲ್ಲ, ಬಾಳಿಲ್ಲ
ನಾನು ಒಬ್ಬ ಸರ್ಕಾರಿ ನೌಕರ
ಆದರೂ ನಾನು ಜೀತದ ಜೀವ.
ದೊಡ್ಡವರ ಹಿಂದಿದ್ದರೂ ನನಗಾವ
ಪ್ರಭಾವವಿಲ್ಲ. ಈಗಲೂ ನಾನು
ಜೀವಕ್ಕೆ ಜೀವ ಕೊಡುತ್ತೇನೆ
ನಾನು ಎಂದೆಂದಿಗೂ ಅಂಗರಕ್ಷಕ.
*****
೧೨-೦೬-೧೯೮೭