-೧-
ಸೀತಾ, ‘ಬೇಗನೆ ಕಾಗದ ಬರಿ; ಕಾಯುತ್ತಿರುತ್ತೇನೆ, ಮರೆಯಬೇಡ’ ಎಂದು ಬರೆದಿರುವೆ. ಕಾಗದ ಬರೆಯದಿದ್ದುದಕ್ಕೆ ಕ್ಷಮಿಸು. ನೀನು ಯೋಚಿಸಿರುವಂತೆ ಬರೆಯದಿರುವುದಕ್ಕೆ ಕಾರಣ ನಿನ್ನನ್ನು ಮರೆತದ್ದೂ ಅಲ್ಲ-ಹೊಸ ಸ್ನೇಹಿತರೂ ಅಲ್ಲ. ನಿನಗಿಂತಲೂ ಹೆಚ್ಚಿನ ಸ್ನೇಹಿತರು ಹೊಸಬರಾಗಲು ಸಾಧ್ಯವೇ ? ಕಾರಣ ಏನೆನ್ನಲಿ? ಹೇಳುವುದಕ್ಕೆ ಯತ್ನಿಸುವುದಿಲ್ಲ. ನೀನು ನನ್ನನ್ನು ನಂಬಬೇಕಾದರೆ ಕಾರಣಗಳ ಅಗತ್ಯವಿಲ್ಲ. ನೀನು ನನ್ನನ್ನು ಬಲ್ಲೆ; ಮತ್ತೇಕೆ ಹೆಚ್ಚಿನ ವಿಚಾರ?
ನನ್ನ ಸೀತಾ, ನಿನಗೆ ಗಳಿಗೆಗೊಂದು ಕಾಗದ ಬರೆದರೂ ನನಗೆ ತೃಪ್ತಿಯಿಲ್ಲ. ನಿನಗೆ ಬರೆಯುವ ನನ್ನ ಕಾಗದಗಳಿಗಾಗಿ ಸರ್ಕಾರದವರೊಂದು ಅಂಚೆಯು ಮನೆಯನ್ನು ನನ್ನ ಮನೆಯ ಹತ್ತಿರ ಸ್ಥಾಪಿಸಿದರೂ ಅವರಿಗೆ ನಷ್ಟವಾಗಲಾರದು.
ನೀನು ಪರೀಕ್ಷೆಯಲ್ಲಿ ತೇರ್ಗಡೆಹೊಂದಿದುದನ್ನು ತಿಳಿದು ಸಂತೋಷವಾಯಿತು. ಹಿಂದಿನ ಕಾಗದದಲ್ಲಿ ಉತ್ತೀರ್ಣಗಳಾಗಬೇಡ ಎಂದು ಬರೆದಿದ್ದೆ. ಹಾಗೆ ಬರೆದುದರ ಕಾರಣ ನನ್ನ ಸ್ವಾರ್ಥವೆಂದು ನೀನು ಊಹಿಸಿರಬಹುದು. ಹೇಗೂ ನೀನು ಪಾಸಾದದ್ದು ನನಗೆ ತುಂಬಾ ಆನಂದದ-ಹೆಮ್ಮೆಯ ವಿಷಯ. ನಾನೂ ಹಿಂದೀ ಭಾಷೆಯನ್ನು ಅಭ್ಯಾಸ ಮಾಡಲು ತೊಡಗಿರುವೆನು. ಅದಕ್ಕೆ ಕಾರಣಗಳು ನೀನೆಂದು ಹೇಳಬೇಕೆ? ಬಾನ್ ರಸ್ಕಿನ್ ರವರ ‘ಆಫ್‌ಕ್ವೀನ್ಸ ಗಾರ್ಡನ್ಸ್’ ನೆನಪಾಗುವುದು. ಹೆಂಗಸರ ಉತ್ತೇಜನವಿದ್ದರೆ ಗಂಡಸರು ಯಾವ ಕೆಲಸವನ್ನಾದರೂ ಮಾಡಬಲ್ಲರಂತೆ. ಹಿಂದೂ ದೇಶದ ಗಂಡಸರಿಗೆ ‘ನನ್ನ ಸೀತೆ’ಯಂತವರು ಇರುತ್ತಿದ್ದರೆ ಇಷ್ಟರಲ್ಲಿ ಇಡೀ ಭಾರತವು ಭಾಷೆಯಲ್ಲಿ ಒಂದಾಗಿಹೋಗುತಿತ್ತು.
ಸೀತಾ, ನನಗೆ ಮೊದಲೇ ನೀನು ಅನೇಕ ಹೆಸರುಗಳಟ್ಟಿರುವೆ. ಈ ಸಾರಿಯಂತೂ ‘ಹರಟೆಯ ಮಲ್ಲ’ ಎಂಬ ಬಿರುದನ್ನು ಖಂಡಿತವಾಗಿಯೂ ಕೊಡದಿರಲಾರೆ ಎಂದು ನನಗೆ ಗೊತ್ತಿದೆ. ಬಿರುದುಗಳಿಗಾಗಿ ಹೊಡೆದಾಡುವ ಈ ಕಾಲದಲ್ಲಿ ನನ್ನ ಭಾಗ್ಯಕ್ಕೆ ಸರಿಯಿಲ್ಲ-ಅಲ್ಲವೆ? ಕಷ್ಟ ಪಟ್ಟರೂ ಸಿಕ್ಕದ ಬಿರುದುಗಳನ್ನು ನೀನು ನನಗೆ ಕೊಡುತ್ತಿರುವಾಗ ನಾನು ಅದೃಷ್ಟವಂತನೆಂದರೆ ತಪ್ಪೇನು?
ಆದರೆ ಬಿರುದನ್ನು ನೀನೇ ಬಂದು ದಯಪಾಲಿಸಬೇಕು. ಕಾಗದದ ಮೂಲಕ ಕಳುಹಿಸಬೇಡ-ಆಗದೇ?
ನಿನ್ನ,
ರಾಮು
-೨-
ಸೀತಾ, ಏಕೆ ಕೋಪ? ಬರೆಯುವುದೇ ಇಲ್ಲವೆಂದು ನಿಶ್ಚಯಿಸಿರುವಿಯೇನು? ಆದರೂ ನನಗೆ ಗೊತ್ತಿದೆ ಸೀತಾ, ನಿನ್ನ ಮನಸ್ಸು ಎಷ್ಟು ಮೆದುವೆಂದು; ಈ ಕಾಗದವನ್ನು ನೋಡಿದಕೂಡಲೆ ಕೋಪವೆಲ್ಲವನ್ನೂ ಮರೆತು ಬರೆಯತೊಡಗುವೆ ಎಂದೂ ನನಗೆ ಗೊತ್ತಿದೆ. ಹಿಂದೂ ರಮಣಿಯರ ಮನಸ್ಸೇ ಅಷ್ಟು ಕೋಮಲ-ಅದರಲ್ಲೂ ನನ್ನ ಸೀತೆಯ ಮನಸ್ಸು!
ಮೊನ್ನೆದಿನ ಕ್ಲಬ್ಬಿನಿಂದ ಬರುವಾಗ ಒಂದು ವಿಶೇಷವನ್ನು ನೋಡಿದೆ; ನೋಡಿ ಸ್ತ್ರೀಯರ ಸಹನಶೀಲತೆ, ಪ್ರೇಮ, ಭಕ್ತಿ, ವಿಶ್ವಾಸಗಳ ಆಳವನ್ನು ಕಂಡುಹಿಡಿಯುವುದು ಸುಲಭವಲ್ಲವೆಂದು ತಿಳಿದುಕೊಂಡೆ.
ನಾನು ಪ್ರತಿದಿನವೂ ಆಫೀಸಿಗೆ ಹೋಗುವರಸ್ತೆ ನಿನಗೆ ಗೊತ್ತಿದೆ. ರಸ್ತೆಯ ಬದಿಯಲ್ಲಿರುವ ನಮ್ಮ ಆಫೀಸಿನ ಜವಾನ ತಿಮ್ಮನ ಮನೆಯನ್ನು ನೀನು ನೋಡಿರುವೆ. ತಿಮ್ಮ, ಅವನ ಹೆಂಡತಿ, ಒಂದು ವರ್ಷದ ಮಗು ಮೂರೇ ಜನರು ಆ ಮನೆಯಲ್ಲಿ. ತಿಮ್ಮನ ಮಗು ಯಾವಾಗಲೂ ಬೀದಿಯ ಬಾಗಿಲಲ್ಲಿ ಆಡುತ್ತಿರುತ್ತದೆ. ಮೈಮೇಲೆ ಮಸಿ ಹಚ್ಚಿದರೆ ಮಸಿಯೇ ಬಿಳಿದಾಗಿ ತೋರಬಹುದಾದಷ್ಟು ಕಪ್ಪು ಆ ಮಗು. ಆದರೂ ಮಗು ಬಲು ಮುದ್ದಾಗಿದೆ. ಅದರ ಮುಖದಲ್ಲಿ ಸದಾ ನಗು, ಮೈ ಕಪ್ಪಾದರೇನು ಸೀತಾ? ನಿಷ್ಕಲ್ಮಷವಾದ ಮುಖದ ಸೊಬಗೇ ಸಾಲದೆ?
ಮೊನ್ನೆ ದಿನ ಅದೇ ರಸ್ತೆಯಲ್ಲಿ ನಾನು ಕ್ಲಬ್ಬಿನಿಂದ ಹಿಂತಿರುಗಿ ಬರುತ್ತಿದ್ದೆ. ಎಂಟುಗಂಟೆ ಹೊಡೆದುಹೋಗಿತ್ತು. ದಾರಿಕರೆಯ ಮನೆಯ ಬಾಗಿಲುಗಳೆಲ್ಲವೂ ಮುಚ್ಚಲ್ಪಟ್ಟಿದ್ದವು. ತಿಮ್ಮನ ಮನೆಯ ತೆರೆದ ಬಾಗಿಲಿನಿಂದ ಮಾತ್ರ ದೀಪದ ಬೆಳಕು ರಸ್ತೆಯಲ್ಲಿ ಇಣಿಕಿ ನೋಡುತ್ತಿತ್ತು. ಒಳಗಿನಿಂದ ಜೋರಾಗಿ ಕೂಗು ಕೇಳಿಸುತ್ತಿತ್ತು. ಹತ್ತಿರ ತಲುಪಿದಾಗ ತಿಮ್ಮ ತನ್ನ ಹೆಂಡತಿಯನ್ನು ಹೊಡೆಯುತ್ತಿರುವನೆಂದು ತಿಳಿಯಿತು. ನಾನು ಆ ಮನೆಯನ್ನು ದಾಟಿ ಒಂದೆರಡು ಹೆಜ್ಜೆ ಮುಂದೆ ಹೋಗಿದ್ದೆ. ಅಷ್ಟರಲ್ಲೇ ತಿಮ್ಮ ಅವಳನ್ನು ಎಳೆದುಕೊಂಡು ರಸ್ತೆಗೆ ಬಂದು ಬೆತ್ತದಿಂದ ಇನ್ನೂ ಜೋರಾಗಿ ಹೊಡೆಯತೊಡಗಿದ. ಸುತ್ತುಮುತ್ತಲಿನ ಮನೆಯವರು ಬಾಗಿಲನ್ನು ತೆರೆದುಕೊಂಡು ಹೊರಗೆ ಬಂದು ನೋಡತೊಡಗಿದರು. ನೋಡಿ, ‘ಇದೂ ಒಂದು ಸಂಸಾರ’ ಎಂದೆನಿಸಿತು ನನಗೆ.
ಮರುದಿನ ಬೆಳಗ್ಗೆ ಆಫೀಸಿಗೆ ಹೋಗುತ್ತಿದ್ದೆ, ಅದೇ ದಾರಿಯಿಂದ ತಿಮ್ಮ ತನ್ನ ಮನೆ ಇದಿರಿನ ಮುರಿದ ಬೇಲಿಯನ್ನು ಸರಿಮಾಡಿ ಕಟ್ಟುತ್ತಿದ್ದ. ಹತ್ತಿರವೆ ಅವನ ಹೆಂಡತಿ ನಿಂತು ನಗುತ್ತಾ ಅವನೊಡನೆ ಮಾತನಾಡುತ್ತಿದ್ದಳು. ಎಂದಿನಂತೆ ಅವರ ಮಗು ಅಂಗಳದಲ್ಲಿ ಆಟವಾಡುತ್ತಿತ್ತು.
ನಾನು ನೋಡುತ್ತಿದ್ದಂತೆ ಆಕೆ ಮಗುವನ್ನೆತ್ತಿ ಅವನ ಭುಜದ ಮೇಲೆ ಕೂರಿಸಿದಳು. ಮಗು ಕೇಕೆಹಾಕಿ ನಗತೊಡಗಿತು ಅವಳೂ ನಕ್ಕಳು. ತಿಮ್ಮ ನಗುತ್ತ ಮಗುವನ್ನು ಮುದ್ದಿಟ್ಟುಕೊಂಡನು. ನೋಡಿ ಆಶ್ಚರ್ಯವಾಯಿತೆಂದರೆ-ಆಶ್ಚರ್ಯವೇನು ಸೀತಾ! ಪಾಶ್ಚಾತ್ಯ ದೇಶಗಳಲ್ಲಾಗಿದ್ದರೆ ವಿವಾಹವಿಚ್ಛೇದನದ ಕೋರ್ಟಿಗೆ ಹೊಸದೊಂದು ಫಿರ್ಯಾದು ದಾಖಲಾಗುತ್ತಿತ್ತು.
ನಿನ್ನ,
ರಾಮು
-೩-
ಸೀತಾ, ನಾನು L. A. ಯಲ್ಲಿ ಹೆಣ್ಣು ಮಕ್ಕಳಿಗೂ ತಂದೆಯ ಆಸ್ತಿಯಲ್ಲಿ ಪಾಲು ದೊರೆಯಬೇಕೆಂದು ಮಸೂದೆಯನ್ನು ತರಲಿರುವರು ಎಂಬುದಕ್ಕೆ ನೀನು ನಕ್ಕು ‘ನಿನಗೆ ತಂಗಿಯರಿಲ್ಲ ರಾಮು, ಅದೇ ಅಷ್ಟೊಂದು ಧೈರ್ಯ’ ಎಂದು ಚೇಷ್ಟೆ ಮಾಡಿದುದು ನಿನಗೆ ನೆನಪಿದೆಯೆ ಸೀತಾ, ಆದರೂ ನಿನ್ನ ಮನಸ್ಸಿಗೆ ಗೊತ್ತಿರಬಹುದು ನನಗೆ ತಂಗಿಯರಿದ್ದರೂ ರಮಣಿಯರ ಆರ್ಥಿಕಸ್ವಾತಂತ್ರತೆಗೆ ನಾನು ಶತ್ರುವಾಗಲಾರೆ ನೆಂದು, ಅಲ್ಲವೇ? ನಿಜವನ್ನು ಹೇಳು-
ನಿನ್ನೆ ದಿನ ತೋಟಕ್ಕೆ ಹೋಗಿದ್ದೆ. ಬರುವಾಗ ಕತ್ತಲಾಗಿತ್ತು. ಈಗಿನ ಚಳಿಯಂತೂ ನಿನಗೆ ಪರಿಚಯವಿಲ್ಲದೆ ಇಲ್ಲ. ಕೋಟನ್ನು ಹಾಕಿಕೊಂಡು ಹೋಗುವುದನ್ನು ಮರೆತಿದ್ದೆ. ಚಳಿಯಿಂದ ನಡುಕಹಿಡಿದು ‘ಮನೆಗೊಂದುಸಾರಿ ತಲುಪಿದರೆ ಸಾಕಪ್ಪಾ’ ಎನಿಸಿತ್ತು. ಬೇಗಬೇಗನೆ ನಡೆಯುತ್ತಿದ್ದೆ, ತೋಟಕ್ಕೆ ಹೋಗುವ ದಾರಿಯಲ್ಲಿ ದೊಡ್ಡದೊಂದು ನಂದಿಯ ಮರವಿದೆಯಲ್ಲ, ಅಲ್ಲಿಯವರೆಗೆ ಬಂದಿದ್ದೆ. ಮರದ ಬುಡದಲ್ಲಿ ಯಾರೋ ಕುಳಿತಿದ್ದಂತೆ ಕಂಡಿತು. ಬೀರ ಹೇಳಿರಲಿಲ್ಲವೇ? ನಂದಿಯ ಮರ ದಡಿಯಲ್ಲಿ ಭೂತವಿದೆಯೆಂದು, ಟಾರ್ಚ ಹಾಕಿ ನೋಡಿದೆ-ಭೂತದ ವಿಷಯ ನಂಬಿಕೆಯಿಂದಲ್ಲ. ಕೂತವರು ಯಾರೆಂದು ನೋಡುವ ಸಲುವಾಗಿ. ಅವಳೊಬ್ಬ ಹೆಂಗಸು, ಮಡಿಲಲ್ಲೊಂದು ಮಗು ನಿದ್ರೆ ಮಾಡುತ್ತಿತ್ತು. ತಾಯಿ ಚಳಿಯಿಂದ ನಡುಗುತ್ತಿದ್ದರೂ ಮಗು ಅವಳ ಸೆರಗಿನ ಆಶ್ರಯದಲ್ಲಿ ಸ್ವಸ್ಥವಾಗಿ ಮಲಗಿತ್ತು. ಅತ್ತು ಕೆಂಪಾದ ಕಣ್ಣುಗಳು, ಕೆದರಿದ ಕೂದಲು, ಹರಕು ಸೀರೆ. ಕತ್ತಲಲ್ಲಿ ಒಂದು ಮಗುವಿನೊಡನೆ ಒಬ್ಬಳೇ ಕುಳಿತಿರುವುದನ್ನು ನೋಡಿ ಕೇಳಿದೆ-ಕತ್ತಲಲ್ಲಿ ಅಲ್ಲೇಕೆ ಕುಳಿತಿರುವುದೆಂದು. ಅಯ್ಯೋ ಸೀತಾ, ನೀನಾಗ ನನ್ನೊಡನಿದ್ದಿದ್ದರೆ ಸ್ತ್ರೀಯರ ಆರ್ಥಿಕ ಸ್ವತಂತ್ರತೆಯ ವಿಷಯದಲ್ಲಿ ನಾನು ಮಾತೆತ್ತುವಾಗ ನಗುತ್ತಿರಲಿಲ್ಲ.
ಆ ಅನಾಥ ವಿಧವೆಯನ್ನು ಜಗಳವಾಡಿ ಮಗುವಿನೊಡನೆ ಮಧ್ಯ ರಾತ್ರಿಯಲ್ಲಿ ಅವಳತ್ತೆ ಮನೆಯಿಂದ ಹೊರಡಿಸಿದಳಂತೆ.
ಇದಕ್ಕೇನನ್ನುವೆ ಸೀತಾ? ಭಾರತ ರಮಣಿಯರಿಗೆ ಆರ್ಥಿಕ ಸ್ವತಂತ್ರತೆ ಇಲ್ಲದೆ ಎಷ್ಟೊಂದು ದುಷ್ಪರಿಣಾಮಗಳಾಗುತ್ತಿರುವವೆಂದು ಈ ಒಂದು ಉದಾಹರಣೆಯಿಂದ ನೀನು ತಿಳಿದುಕೊಂಡರೆ ನಿಜವಾಗಿಯೂ ನನಗೆ ಸಂತೋಷವಾಗುವುದು. ಇನ್ನೇನು ಬರೆಯಲಿ ?
ನಿನ್ನ,
ರಾಮು
-೪-
ನನ್ನ ಸೀತಾ
ನಿನ್ನ ಕಾಗದ ಕಳೆದ ವಾರವೇ ಬಂದಿತ್ತು. ಆದರೆ ನಾನು ಮಾತ್ರ ಊರಲ್ಲಿರಲಿಲ್ಲ. ಈಗ ತಾನೇ ಬಂದೆ. ಮೇಜಿನ ಮೇಲೆ ಕಾಗದಗಳ ಕಟ್ಟೊಂದು ಇತ್ತು. ನಿನ್ನ ಕಾಗದವು ಬಂದಿರಬಹುದೆಂದು ನನಗೆ ಗೊತ್ತಿತ್ತು. ಬೇಗ ಬೇಗನೆ ಅದನ್ನು ತೆಗೆದು ಓದಿದೆ, ಓದಿದೆ, ಎಷ್ಟು ಓದಿದರೂ ತೃಪ್ತಿಯಿಲ್ಲ ಸೀತಾ! ಓದುತ್ತಾ ಕುಳಿತರೆ ನಿನಗೆ ಬರೆಯಲು ನಿಧಾನವಾಗುವುದು. ನಾನು ಸಾವಕಾಶ ಮಾಡಿದರೆ ನೀನೂ ಹಾಗೆಯೇ ಮಾಡಿಬಿಡುವೆ. ಆದುದರಿಂದ ನಿನಗೆ ಮೊದಲು ಕಾಗದ ಬರೆದು ನಿನ್ನ ಇನ್ನೊಂದು ಕಾಗದ ಬರುವವರೆಗೂ ಇದನ್ನು ಓದುತ್ತಿರುತ್ತೇನೆ. ಬೇಗ ಬರೆ, ಈ ಸಾರಿ ವಿಳಂಬವಾಯಿತೆಂದು ಮುಯ್ಯ ತೀರಿಸಿಕೊಳ್ಳುವ ಯತ್ನ ಮಾಡಬೇಡ. ವಿಲಂಬಕ್ಕೆ ಕಾರಣವು ತಿಳಿದರೆ ಹಾಗೆ ಮಾಡಲಾರೆ.
ನಿನ್ನ ಕಾಗದವು ಬರುವಾಗ ನಾನು ಊರಲ್ಲಿರಲಿಲ್ಲ ಎಂದು ಬರೆದಿದ್ದೇನೆ. ಎಲ್ಲಿಗೆ ಹೋಗಿದ್ದೆ ಗೊತ್ತೇ? ಗೋವಿಂದ ರಾಯರ ಮನೆಗೆ; ಅವರ ಮೊಮ್ಮಗನ ನಾಮಕರಣಕ್ಕೆ. ಒಂದು ದಿನ ಮುಂದಾಗಿಯೇ ಹೋಗಿದ್ದೆ; ಅವರ ಒತ್ತಾಯ ತಡೆಯಲಾರದೆ. ಅಪರೂಪದ ಮಗು- ಮನೆಯವರ ಆದರದ ಬೊಂಬೆ. ಬಹಳ ಸಂಭ್ರಮದಿಂದ ನಾಮಕರಣದ ಸಿದ್ಧತೆಗೆ ಆರಂಭವಾಯ್ತು,
ಸೊಸೆ ಬಾಣಂತಿತನಕ್ಕೆ ಹೋದವಳು ಹಿಂದಿರುಗಿ ಬಂದಿರಲಿಲ್ಲ. ಮಗ ಕರೆತರಲು ಹೋಗಿದ್ದ. ನಾನು ಹೋಗಿ ಸ್ವಲ್ಪ ಹೊತ್ತಾಗಿತ್ತು. ಬಂದಿದ್ದವರೊಡನೆ ಹರಟೆ ಹೊಡೆಯುತ್ತಾ ಜಗುಲಿಯ ಮೇಲೆ ಕುಳಿತಿದ್ದೆ. ಅಷ್ಟರಲ್ಲಿ ಅವರ ಮಗ ಹೆಂಡತಿಯನ್ನೂ ಮಗುವನ್ನೂ ಕರೆದುಕೊಂಡು ಬಂದ. ಆಗ ಬೆಳಗಿನ ಹತ್ತುಗಂಟೆಯಾಗಿತ್ತು. ಗೋವಿಂದರಾಯರ ಹೆಂಡತಿ ಅವರನ್ನು ಇದಿರುಗೊಂಡು ಮಗುವನ್ನು ಎತ್ತಿ ಮುದ್ದಿಟ್ಟು ದೃಷ್ಟಿಯಾಗದಂತೆ ಮೊಮ್ಮಗನಿಗೆ ಮಸಿಬೊಟ್ಟಿಟ್ಟರು. ಸೊಸೆಗೆ ಕುಂಕುಮವಿಟ್ಟು ಕೈಹಿಡಿದು ಒಳಗೆ ಕರೆದುಕೊಂಡು ಹೋದರು.
ಎಲ್ಲರಿಗೂ ಸಂತೋಷ-ಸಂಭ್ರಮ-ಹಿಗ್ಗೇಹಿಗ್ಗು. ಅಪರೂಪದ ಮಗು, ಸಾಲದುದಕ್ಕೆ ಮುದ್ದಿನ ಚಂಡಿನಂತಹ ಗಂಡು. (ನಗಬೇಡ) ಕೇಳಬೇಕೆ-ಆನಂದದ ಸುರಿಮಳೆ!
ಸೊಸೆ ಒಳಗೆ ಹೋದಳು. ಹಿತ್ತಲಜಗುಲಿಯಲ್ಲಿ ಹಾಸಿದ ಚಾಪೆಯ ಮೇಲೆ ಅತ್ತೆ, ಸೊಸೆಯನ್ನು ಕೂಡಿಸಿ ಮೊಮ್ಮಗನಿಗೆ ಕುಡಿಸಲು ಹಾಲು ತಂದಿಟ್ಟರು. ಆಕೆ ಹಾಲು ಕುಡಿಸತೊಡಗಿದಳು. ಇನ್ನೇನು-ಎರಡೇ ಎರಡು ಚಮಚ ಹಾಲು ಉಳಿದಿತ್ತು. ಅಷ್ಟರಲ್ಲಿ ‘ಢಂ’ ಎಂದು ಶಬ್ಬವಾಯಿತು. ಹಾಲು ಕುಡಿಸುತ್ತಾ ಕೂತಿದ್ದ ತಾಯಿ ಕೆಳಗುರುಳಿದಳು. ಮಗು ನೆಲಕ್ಕೆ ಬಿದ್ದು ಚೀರತೊಡಗಿತು. ಎಲ್ಲರೂ ಓಡಿಹೋಗಿ ನೋಡಿದೆವು. ಅಜ್ಜಿ ಮಗುವನ್ನೆತ್ತಿಕೊಂಡರು. ಮಗ ಹೆಂಡತಿಯನ್ನು ಎತ್ತಿದ. ಧಾರೆಧಾರೆಯಾಗಿ ಅವಳ ಎದೆಯಿಂದ ರಕ್ತ ಸೋರುತ್ತಿತ್ತು. ನೆಲದಿಂದ ಎತ್ತುವ ಮೊದಲೇ ಪ್ರಾಣವು ಹಾರಿಹೋಗಿತ್ತು.
ಕ್ಷಣಹೊತ್ತಿನ ಮೊದಲು ತಾಯ್ತನದ ಹೆಮ್ಮೆಯಿಂದ, ಯೌವನದ ಸೊಬಗಿನಿಂದ ಬೆಳಗುತ್ತಿದ್ದ ಅವಳು ಈ ಜನ್ಮದ ಸುಖದುಃಖಗಳನ್ನು ಬಿಟ್ಟು ಹೊರಟು ಹೋಗಿದ್ದಳು. ಎಲ್ಲರೂ ಏನೂ ತೋರದೆ ಬೊಂಬೆಗಳಂತೆ ನಿಂತಿದ್ದೆವು. ಮಗು ಮಾತ್ರ ಚೀರಿಚೀರಿ ಅಳುತ್ತಿತ್ತು. ಮಗುವಿನ ತಂದೆಗೆ ಪ್ರಜ್ಞೆಯೇ ಇರಲಿಲ್ಲ.
ಸ್ವಲ್ಪ ಹೊತ್ತಿನ ಮೇಲೆ ತಿಳಿಯಿತು; ಅವಳ ಅಕಾಲಮೃತ್ಯುವಿಗೆ ಹಿತ್ತಲ ಕಿತ್ತಳೆಯ ತೋಟದಲ್ಲಿ ಕಾಗೆಗಳನ್ನು ಅಟ್ಟುವುದಕ್ಕಾಗಿ ಹೊಡೆದ ಗುಂಡು ಅಕಸ್ಮಾತ್ತಾಗಿ ಅವಳಿಗೆ ತಗಲಿದುದೇ ಕಾರಣವೆಂದು.
ನೋಡಿದೆಯಾ ಸೀತಾ, ಮೊಮ್ಮಗನ ಜನನದಿಂದ ಶಾಂತಿ, ಸುಖ, ಸಂತೋಷದಿಂದ ಮೆರೆಯುತ್ತಿದ್ದ ಆ ಸಂಸಾರಕ್ಕೆ ಬಂದ ದುಃಖ! ಅದು ಬಂದೊದಗಿದ ರೀತಿ!!
ಮನುಷ್ಯರು ಮರುಕ್ಷಣದ ಗತಿಯನ್ನರಿಯದೆ ಹೊಡೆದಾಡುವ ಜೀವನದ ರಹಸ್ಯ ಇದೇ ಏನು? ತಿಳಿದವರಾರು!
ಯಾವಾಗಲೂ ನಿನ್ನ,
ರಾಮು
ಮೇ ೧೯೩೫
*****