ದೀಪ್ತಿ ಅವರ ಕವಿತೆಗಳನ್ನು ಓದುತ್ತಿದ್ದರೆ, ಬರಿಗಾಲಿನಲ್ಲಿ ಹುಲ್ಲಿನ ಮೇಲೆ ನಡೆದಂತಹ ಅನುಭವ, ಹಿತವಾಗಿ ಕಚಗುಳಿಯಿಕ್ಕುವಂತಹ ಧಾಟಿ. ತಾಜಾ ಅನ್ನಿಸುವ ಭಾವಗಳನ್ನಿಟ್ಟುಕೊಂಡು ಕವಿತೆ ಬರೆಯುವುದೇ ಹೊಸ ಕವಿಯ ಪ್ಲಸ್ ಪಾಯಿಂಟ್. ಹೀಗೆ ಬರೆಯುತ್ತಿರುವ ದೀಪ್ತಿ ಮೊದಲ ಸಂಕಲನ ಬಂದು ಕೆಲದಿನಗಳ ಅಂತರದಲ್ಲೇ ಇನ್ನೊಂದು ಸಂಕಲನ ತರಲು ಮುಂದಾಗಿದ್ದಾರೆ. ಹಾಗೆ ನೋಡಿದರೆ ಇಲ್ಲಿರುವ ಕವಿತೆಗಳು ಆ ಸಂಕಲನದ ಮುಂದುವರಿಕೆಯೇ ಆಗಿರುವಂತಿದೆ. ಹೊಸ ಸಂವೇದನೆಯೊಂದು ಆಳಕ್ಕೆ ಇಳಿದು ಒಡಮೂಡುವುದಕ್ಕೆ ಸ್ವಲ್ಪ ಕಾಲಾವಕಾಶ ಬೇಕು. ಆ ದೃಷ್ಟಿಯಿಂದ ಅವರ ಒಟ್ಟು ಕವಿತೆಗಳನ್ನು ಗಮನಿಸಿದರೆ ಇವು ಹೊಸ ಕವಿಯ ಸೃಜನಶೀಲತೆಯ ಹೊಸ ಕೋಡುಗಳು. ಇವಕ್ಕೆ ಹೆಮ್ಮೆಯೂ ಇದೆ. ಇನ್ನೂ ಬೆಳೆದು ಬಲಿಯಬೇಕಾದ, ಮಾಗಬೇಕಾದ ನಿರೀಕ್ಷೆಯೂ ಇದೆ ಎಂದರೆ ತಪ್ಪಾಗಲಾರದು. ಕವಿತೆ ಹೇಗೂ ಹುಟ್ಟಿಬಿಡಬಹುದು. ಕವಿಯಾಗುವುದು ಮಾತ್ರ ಕಷ್ಟ. ಏಕೆಂದರೆ, ಕವಿ ಪ್ರತಿಭೆ ಎನ್ನುವುದು ಕವಿತ್ವದ ಭಾವ, ತತ್ವಗಳಿಂದ ಹಿಡಿದು ಕಟ್ಟುವ ಕಲೆಯ ತನಕ ವ್ಯಾಪಿಸಿರುವಂತದ್ದು. ಹಾಗೆಂದೇ ಪ್ರತಿಯೊಂದು ಕವಿತೆ ಹುಟ್ಟಿದಾಗಲೂ ಅದರ ಸಾರ್ಥಕತೆ ಇನ್ನಷ್ಟು ಇನ್ನಷ್ಟು ಉನ್ವೇಷಗಳನ್ನು ಬೇಡುತ್ತದೆ. ದೀಪ್ತಿ ಅವರ ಹಲವಾರು ಸಾರ್ಥಕ ಕವಿತೆಗಳು ಹೀಗೆ ಸಹ ಹೊಸ ಹೊಸದನ್ನು ನಿರೀಕ್ಷಿಸುತ್ತಿವೆ.
ದೀಪ್ತಿ ಅವರ ಕವಿತೆಗಳಲ್ಲಿ ಸ್ವ ಪ್ರಜ್ಞೆಯು ಎದ್ದು ಕಾಣುತ್ತದೆ. ನಾನು ಎನ್ನುವ ಕೇಂದ್ರದಿಂದ ಹುಟ್ಟುವ ಅವರ ಬಹುಪಾಲು ಕವಿತೆಗಳು ಸ್ವಾನುಭವದಿಂದಲೇ ಕೂಡಿರುತ್ತವೆ. ಅವು ಸಹಜವಾಗಿಯೇ ಜೆಂಡರ್ ಅಂಶವನ್ನು ಹೊಳೆಯಿಸುತ್ತವಾದರೂ ಸರ್ವೇಸಾಧಾರಣವಾಗಿ ಲಿಂಗಭೇದದ ಅಸಮಾನತೆಗಳಿಂದ ಅಬ್ಬರಿಸುವ ಸಂಗತಿಗಳನ್ನು ಎತ್ತಿಕೊಂಡಿಲ್ಲ. ಲಿಂಗಸಂಬಂಧಿತ ವಸ್ತುಗಳು ಪಡೆದುಕೊಳ್ಳುವ ಅತಿಯಾದ ಸಾಮಾಜಿಕ ಚಹರೆಗಳು ಕ್ಲೀಷೆಯಾಗುತ್ತಾ ಬಂದಿದ್ದು ಮುಂದೆ ಬರುವ ಕವಯಿತ್ರಿಯರು ಹೊಸ ಹೊಸ ಸವಾಲುಗಳನ್ನು ಎದುರಿಸಬೇಕಾಗಿದೆ. ಹಾಗೆಂದೆ ಅವರ ಮೇಲಿನ ನಿರೀಕ್ಷೆಯ ಭಾರವೂ ಹೆಚ್ಚಾಗಿದೆ. ಉದಾಹರಣೆಗೆ ದೀಪ್ತಿ ಅವರ ‘ನನ್ನ ಅಮ್ಮ’ ಎನ್ನುವ ಕವಿತೆಯಲ್ಲಿ ಅಮ್ಮ ಮತ್ತು ಮಗಳ ತಲೆಮಾರುಗಳ ಅಂತರದೊಂದಿಗೇ ಅಮ್ಮನ ಪ್ರೀತಿ ಹಾಗೂ ಜವಾಬ್ದಾರಿಯನ್ನು ನೆನೆಯಲಾಗಿದೆ. ಅದು ಒಂದು ಮಟ್ಟಿಗೆ ಸಾರ್ಥಕವಾದರೂ ಅಲ್ಲಿಂದಾಚೆಯ ಸಂಕೀರ್ಣತೆಯನ್ನು ಕಂಡುಕೊಳ್ಳಲಾರದೆ ಹೋಗುತ್ತದೆ. ಹಾಗೆಯೇ ‘ನಕ್ಷತ್ರ’ ಕವಿತೆ ಗಮನಿಸಿ:
ಹತ್ತನೇ ಇಯತ್ತೆಯಲಿ ಅಮ್ಮ ನಪಾಸಾದಾಗ
ಒಲೆಯ ಮುಂದೆಯೇ ಕೂತು
ಸೆರಗ ಚುಂಗು ಬಾಯಿಗೆ ಒತ್ತಿ
ಹಿಡಿದು ಅತ್ತಿದ್ದಳಂತೆ ನನ್ನಜ್ಜಿ
ಎಂದು ಸಾಗುವ ಕವಿತೆ
ನಾನೂ ಮತ್ತೆ ಅದೇ ಹಾದಿಯ
ಹಿಡಿದಾಗ ತಲೆಯ ಮೊಟಕಿ
ತಾನೂ ಬಿಕ್ಕಿದ್ದಳು ಅಮ್ಮ
ಎಂದು ಕೊನೆಯಾಗುತ್ತದೆ. ಇದು ಅಜ್ಜಿ ಅಮ್ಮ ಮಗಳು ವಿನ್ಯಾಸವನ್ನು ಪಾರಂಪರಿಕವಾಗಿ ಮುಂದುವರೆಸುತ್ತಾ ಹೋಗುತ್ತದೆ. ಅದನ್ನು ಮುರಿಯುವ ಕಟ್ಟುವ ಅಂಶಗಳಿಗಿಂತಲೂ ಅದನ್ನು ಸ್ತ್ರೀ ಪರಂಪರೆಯಾಗಿ ಮುಂದುವರೆಸುವುದೇ ಕವಿಗೆ ಮುಖ್ಯವಾಗಿದೆ. ಇಂತಲ್ಲಿ ಕವಿ ನಿಯಮಗಳನ್ನ, ಪರಂಪರೆಯನ್ನ ಮೀರಬೇಕು ಎನ್ನಿಸುತ್ತದೆ.
ಇಲ್ಲಿನ ಕವಿತೆಗಳಲ್ಲಿ ಸ್ವ-ದ ಅನುಭವವೇ ಕೇಂದ್ರ. ನಾನು ಎಂಬ ಪ್ರಜ್ಞೆಯಿಂದಲೇ ಲೋಕವನ್ನು ವೀಕ್ಷಿಸುವ, ತನ್ನೊಳಗೆ ತಂದುಕೊಳ್ಳುವ ವಿನ್ಯಾಸವಿದೆ. ‘ನಾನೀಗ ಸುಖಶೃಂಗದ ತುತ್ತ ತುದಿಯಲ್ಲಿ ನಿಂತಿದ್ದೇನೆ ಪ್ರಪಾತ ಹುಡುಕುತ್ತಾ’ ಎನ್ನುವ ಕವಿತೆಯನ್ನೇ ನೋಡಿದರೆ, ಅದು ಅನುಭವಗಳ ಅನೇಕ ಮಗ್ಗುಲುಗಳನ್ನು ಕಂಡುಕೊಳ್ಳ ಬಯಸುತ್ತಿರುವುದು ನಾನು ಎಂಬ ಕೇಂದ್ರದಿಂದಲೇ. ಗಂಡು ಹೆಣ್ಣುಗಳ ಅನುಭವವೂ ಈ ನಾನು ಎಂಬ ಕೇಂದ್ರದಿಂದಲೇ ಹೊರಟು ನಾನು ಎಂಬುದು ನೀನು ಎಂಬ ವಿಸ್ತಾರದಲ್ಲಿ ಕಂಡುಕೊಳ್ಳುತ್ತದೆ. ಇಲ್ಲಿ ವಿಸಂಗತಿಗಳನ್ನು ದಾಖಲಿಸುತ್ತಾ ಸಾಮರಸ್ಯವನ್ನು ಆಶಿಸುತ್ತಾ ಇರುವ ಕವಿತೆಗಳೂ ಇವೆ.
ದೀಪ್ತಿ ಅವರ ಕವಿತೆಗಳಲ್ಲಿ ರಾಧಾ ಮಾಧವರ ವಿನ್ಯಾಸಗಳನ್ನು ಒಳಗೊಂಡ ಗಂಡು ಹೆಣ್ಣಿನ ಸಂಬಂಧವು ಚೆನ್ನಾಗಿ ನಿರೂಪಿಸಲ್ಪಡುತ್ತದೆ, ರಾಧಾಮಾಧವರ ಪ್ರೀತಿಯು ಸಂಚಾರಿಭಾವಗಳನ್ನು ಮನೋಜ್ಞವಾಗಿ ಕಾಣಿಸಿವೆ. ಉದಾಹರಣೆಗೆ
ತಪ್ತ ದ್ವಾರಕೆಯಲಿ ಮಂಕಾಗಿ
ಕೂತಿದ್ದಾನೆ ಮಾಧವ
ರಾಶಿ ರಾಶಿ ಪತ್ರಗಳ ಸುತ್ತಲೂ
ಸುರವಿಕೊಂಡು
ಹದಿನಾರು ಸಾವಿರ ಹೆಂಡಿರ ಓಲೆಗಳವು
ಹೊತ್ತು ತಂದವ ಇವನನ್ನೊಮ್ಮೆ ಸುಮ್ಮನೆ
ನೋಡಿ ಕನಿಕರಿಸಿ ಹೋಗಿದ್ದಾನೆ
ನಡುಗುವ ಬೆರಳು ಪ್ರತಿ
ಸಾಲುಗಳ ಸ್ಪರ್ಶಿಸುತ್ತಿದೆ
ಎಲ್ಲದುರುಗಳ ಒಕ್ಕಣೆಯೂ ಏಕಚಿತ್ತ
ಬೃಂದಾವನದ ಹಸಿ ಮನಸುಗಳಲಿ ಮಡುಗಟ್ಟಿಹ
ಯಮುನೆ
ಕಣ್ಣ ರಸ್ತೆಯ ಇಕ್ಕೆಲಗಳಲಿ
ಮುರಿದು ಬಿದ್ದಿವೆ ಕನಸುಗಳ ಅವಶೇಷ-
(ಇಳಿಹಗಲು)
`ಕಟಿಪಿಟಿ ರಾಧೆ’ಯಂತಹ ಕವಿತೆಗಳನ್ನೂ ಇಲ್ಲಿ ಗಮನಿಸಬಹುದು.
ದೀಪ್ತಿ ಅವರ ಕವಿತೆಗಳಲ್ಲಿ ನಾನು ಗಮನಿಸಿದ ಒಂದೆರಡು ಅಂಶಗಳ ಬಗ್ಗೆ ಮಾತ್ರ ಇಲ್ಲಿ ಬರೆಯಲು ಸಾಧ್ಯವಾಗಿದೆ. ಎಲ್ಲ ಕವನಗಳನ್ನು ಹಿಂಜಿ ಹಿಂಜಿ ನೋಡುವುದಕ್ಕಿಂತ ಕವಿತೆಯ ಓದುಗರಿಗೇ ಕವಿತೆಗಳನ್ನು ಓದಲು ಬಿಡುವುದು ಸೂಕ್ತ ಕೂಡ. ಈಗಷ್ಟೆ ಬರೆಯುತ್ತಿರುವವರಿಗೆ ತಮ್ಮಷ್ಟಕ್ಕೆ ತಾವು ಬರೆಯಲು ಬಿಡುವುದು ಒಳ್ಳೆಯದು. ಇಷ್ಟಾದರೂ ಹೇಳುವ ಮಾತುಗಳಿವೆ. ಹೊಸಗಾಲದ ಕವಿಗಳಲ್ಲಿ ಒಬ್ಬರಾದ ದೀಪ್ತಿ ಅವರ ಕವಿತೆಗಳು ಅಭಿವ್ಯಕ್ತಿ ದೃಷ್ಟಿಯಿಂದ ಸಾಧಿಸುವ ಹೊಸತನವನ್ನು ಕಾವ್ಯದ ಲಯ ಕಂಡುಕೊಳ್ಳುವಲ್ಲಿ, ವಿವಿಧ ವಿನ್ಯಾಸಗಳಲ್ಲಿ ಸಾಧಿಸಬೇಕಾಗಿದೆ. ತಮ್ಮದೇ ಆದ ನುಡಿಗಟ್ಟುಗಳನ್ನು ರೂಪಿಸಿಕೊಳ್ಳುವ ಸವಾಲೂ ಅವರ ಮುಂದೆ ಇದೆ. ಈಗ ಬರೆದ ಕವಿತೆಗಳಷ್ಟೇ ಅವರನ್ನು ಹೆಮ್ಮೆ ಪಡಿಸದಿರಲಿ, ಹೊಸದರತ್ತ ತುಡಿಯುತ್ತಾ ನವನವೋನ್ವೇಷಗಳನ್ನು ಅರಸಿ, ಅನೇಕ ಲಯ ಮತ್ತು ವಸ್ತುಗಳನ್ನು ಅವರ ಪ್ರತಿಭೆ ಅರಸಿ ತಮ್ಮದನ್ನಾಗಿ ಮಾಡಿಕೊಳ್ಳಲಿ; ಕನ್ನಡದಲ್ಲಿ ಒಳ್ಳೆಯ ಕವಿತೆಗಳನ್ನು ಕೊಡಲಿ ಎಂದು ಹಾರೈಸುವೆ. ಹಾಗೆಯೇ ಅವರ ಹೊಸ ಕವಿತಾ ಸಂಕಲನಕ್ಕೆ ಶುಭ ಕೋರುವೆ.
*****