ಕವಿ:- ನನ್ನ ಹಾಡುಗಳನ್ನೆ ನೀನು ಕೇಳುತ ಕುಳಿತೆ,
ನಿನ್ನ ಹಾಡನು ನಾನು ಕೇಳಲೆಂದು
ಕುಳಿತೆ, ನನ್ನೀ ಹಿಗ್ಗು ಮರುದನಿಯ ಕೊಡುವಂತೆ
ನಿನ್ನ ಕಣ್ಣಲಿ ಕಂಡೆ ಕುಣಿವುದೊಂದು.
ರಸಿಕ:- ನನ್ನ ಕಂಗಳ ಕುಣಿತಗಳ ತಾಳಲಯದಲ್ಲಿ
ಕಟ್ಟಿರುವೆ ನಿನ್ನ ನವ ಕಾವ್ಯವನ್ನು;
ಸುಗ್ಗಿ ಹಿಗ್ಗುತ್ತಲಿರೆ ಬಗ್ಗಿಸದೆ ಕೋಗಿಲೆಯು ?
ನಿನ್ನ ಹಾಡಲ್ಲವದು ನನ್ನದೆನ್ನು!
ಕವಿ:- ಹಿಗ್ಗು ಸುಖ-ದುಃಖಗಳ ಸುಲಿದ ತಿಳಲು;
ಯಾವ ಎದೆಯಲ್ಲೇನು ಒಂದೆ ನೆಳಲು!
ನೋಟದಲಿ ಮರೆತಿತ್ತು ಹಾಡೆ ಹುರುಳು,
ನಿನ್ನ ಕೊಳಲಹದು ಈ ನನ್ನ ಕೊರಳು.
*****