ದೇರಾಜೆಯವರ ಮಹಾಭಾರತ ಕಥಾಮೃತ

ದೇರಾಜೆಯವರ ಮಹಾಭಾರತ ಕಥಾಮೃತ

‘ದೋಣಿ ಸಾಗುತ್ತಿತ್ತು-ನದಿ ಹರಿಯುತ್ತಿತ್ತು-ತಂಗಾಳಿ ಬೀಸುತ್ತಲೇ ಇತ್ತು. ಎಲ್ಲವೂ ಮೊದಲಿನಂತೆಯೇ-ಆದರೆ ತಾನಾಗಿ ಹೊಂದಿದ್ದ ಹೊಸ ಪರಿಮಳವು ಮಾತ್ರ ಅದನ್ನಿತ್ತು ಕರುಣಿಸಿದ ಮುನಿಪೋತ್ತಮರ ಯಾವುದೋ ಸುಪ್ತ ಭಾವವೊಂದನ್ನು ಬಡಿದೆಬ್ಬಿಸಿತು; ಅಂತೆಯೇ ಅವರ ಕಣ್ಣರಳಿತು-ನಗೆ ಮೂಡಿತು; ಅಂಬಿಗರ ಕನ್ಯೆಯು ಅದನ್ನರಿತುಕೊಂಡಳು; ಭಯವೋ? ಲಜ್ಜೆಯೋ? ಹರ್ಷವೋ? ಇನ್ನೇನೋ? ಪಾಪ! ಸತ್ಯವತಿಯು ಒಮ್ಮೆ ತತ್ತರಿಸಿಯೇಹೋದಳು. ಮಹಾತ್ಮರಾದ ಪರಾಶರರು ತಮ್ಮ ಹೃದಯಭಾವವನ್ನು ಅವಳಲ್ಲಿ ತೋಡಿಕೊಂಡು, ಅಭೀಷ್ಟವನ್ನು ಪೂರೈಸಿಕೊಡೆಂದು ಪ್ರಾರ್ಥಿಸಿಕೊಂಡರು. ಅವಳು ಮತ್ತಾವುದನ್ನೂ ಎಣಿಸಲಿಲ್ಲ-ಆಡಲೂ ಇಲ್ಲ; ಕ್ಷಣಕಾಲ ಅಲ್ಲಿ ಮೌನವೇ ಆವರಿಸಿತು; ಅಷ್ಟರಲ್ಲಿ ಆ ತಪಸ್ವಿಗಳ ತಪಃ ಪ್ರಭಾವದಿಂದ ಆ ನಾವೆಯ ಸುತ್ತಲೂ ಹತ್ತು ಮಾರಿನ ಅಂತರದಲ್ಲಿ ಮತ್ತಾವುದೂ ಕಾಣದಂತೆ ದಟ್ಟೈಸಿಕೊಂಡ ನೀರ್ವನಿಯ ಪ್ರಾಕಾರವೇ ಪಸರಿಸಿತು. ಹರಿಯುವ ನೀರಿನ ಮೇಲೆ ತೇಲಿ ಸಾಗುವ ದೋಣಿ-ಆ ಸುತ್ತಲೂ ಮಂಜಿನ ಮುಸುಕು ಅದರ ನಡುವೆ ಯಾವುದೋ ಅದೃಷ್ಟವಶವರ್ತಿಗಳಾದ ಸತ್ಯವತೀ ಪರಾಶರರು.’

ಇದು ಮಹಾಭಾರತದ ಆದಿಪರ್ವದಲ್ಲಿ ಬರುವ, ಸುಮಾರಾಗಿ ಎಲ್ಲರಿಗೂ ಗೊತ್ತಿರುವ ಸತ್ಯವತೀ ಪರಾಶರ ಪ್ರಸಂಗ. ಆದರೆ ಇದನ್ನು ಈ ರೀತಿ ಹೇಳಿದವರು ದೇರಾಜೆ ಸೀತಾರಾಮಯ್ಯನವರು, ‘ಶ್ರೀಮನ್ಮಹಾಭಾರತ ಕಥಾಮೃತಂ’ ಎಂಬ ತಮ್ಮ ವಿಶಿಷ್ಟ ಕೃತಿಯಲ್ಲಿ. ಇಲ್ಲಿ ಪರಾಶರರು ಸತ್ಯವತಿಯಲ್ಲಿ ಅನುರಾಗ ಹೊಂದುವುದು ಆಕೆಯ ಮೈಯ ದುರ್ಗಂಧವನ್ನು ತಮ್ಮ ತಪೋಬಲದಿಂದ ಹೋಗಲಾಡಿಸಿ ಅವಳನ್ನು ಸುಗಂಧಮೈಯವಳಾಗಿಸಿದ ನಂತರ. ಇದೊಂದು ರೀತಿಯಲ್ಲಿ ಗ್ರೀಕ್ ಪುರಾಣದ ಶಿಲ್ಪಿ ಪಿಗ್ಮಾಲಿಯನ್ ತಾನು ಕೆತ್ತಿದ ಶಿಲ್ಪಸುಂದರಿಯಲ್ಲಿ ತಾನೇ ಅನುರಕ್ತನಾದಹಾಗೆ! ದೇರಾಜೆಯವರು ತಮ್ಮ ನಿರೂಪಣೆಯನ್ನು ಮುಂದುವರಿಸುತ್ತ, ಪರಾಶರರು ಸದ್ಯೊಗರ್ಭವನ್ನೂ ಸದ್ಯೋಜಾತತ್ವವನ್ನೂ ಕರುಣಿಸಿದ್ದರಿಂದ ಹೇಗೆ ಒಂದೇ ಕ್ಷಣದಲ್ಲಿ ಸತ್ಯವತಿಯು ಗಂಡುಮಗುವಿಗೆ ಜನ್ಮವಿತ್ತಳು ಎಂಬುದನ್ನೂ ಹೇಳುತ್ತಾರೆ. ಆ ಮಗುವಿಗೆ ಯಾಕೆ ಕೃಷ್ಟದ್ವೈಪಾಯನ ಎಂಬ ಹೆಸರು ಬಂತು ಎಂಬುದನ್ನೂ ವಿವರಿಸುತ್ತಾರೆ. ದ್ವೀಪರೂಪವಾದ ನಾವೆಯಲ್ಲಿ ಜನಿಸಿದ ಕಾರಣ ದ್ವೈಪಾಯನನೆಂಬ ಹೆಸರು. ಕಪ್ಪು ಮೈಬಣ್ಣದ ಕಾರಣ ಕೃಷ್ಣನೆಂತಲೂ ಉಪಾಧಿ.

ಇದೆಲ್ಲವೂ ನಮಗೆ ಗೊತ್ತಿರುವ ಕತೆಯೇ. ಆದರೂ ಎಲ್ಲವೂ ಗೊತ್ತಿದೆಯೇ? ದೇರಾಜೆಯವರು ತಮ್ಮ ಕಥಾನಿರೂಪಣೆಯಲ್ಲಿ ಯಾವ ಪ್ರಶ್ನೆಗೂ ಎಡೆಯಿಲ್ಲದಂತೆ ಓದುಗಸಹಾಯಕವಾದ ಕಾಳಜಿ ವಹಿಸುತ್ತಾರೆ. ಉದಾಹರಣೆಗೆ, ಈ ದೈಪಾಯನ ಎಂಬ ಹೆಸರು ಹೇಗೆ ಬಂತೆನ್ನುವುದು ಸಾಧಾರಣ ಓದುಗರಿಗೆ ಗೊತ್ತಿರದು. ಅದೇ ರೀತಿ, ಕೃಷ್ಣ ಎನ್ನುವ ಪದದ ಹೆಸರು ಕಪ್ಪು ಎನ್ನುವುದೂ ಎಲ್ಲರಿಗೂ ಗೊತ್ತಿರುವುದಿಲ್ಲ. ಇದಕ್ಕಿಂತಲೂ ಹೆಚ್ಚಿನ ಹಲವಾರು ಕುತೂಹಲದ ಸಂಗತಿಗಳನ್ನು ದೇರಾಜೆಯವರು ತಮ್ಮ ಕಥನದಲ್ಲಿ ನಮಗೆ ತಿಳಿಹೇಳುತ್ತ ಹೋಗುತ್ತಾರೆ. ಪುರೂರವನ ಮಗ ಆಯು; ಅವನಿಗೆ ಸ್ವರ್ಭಾನವಿ ಎಂಬವಳಲ್ಲಿ ಹುಟ್ಟಿದ ಮಗ ಮಹಾತ್ಮನಾದ ನಹುಷ. ನಹುಷನಿಗೆ ಕನ್ಯೆಯಾದ ವಿರಜೆಯಲ್ಲಿ ಯತಿ, ಯಯಾತಿ, ಸಂಯಾತಿ, ಆಯತಿ, ಅಯತಿ ಎಂಬ ಮಕ್ಕಳಾದರು. ನಂತರ ಯಯಾತಿ ಅರಸನಾಗುತ್ತಾನೆ. ಆದರೆ ಎರಡನೆಯ ಮಗನಾದ ಯಯಾತಿ ಹೇಗೆ ಅರಸನಾದ? ಈ ಪ್ರಶ್ನೆ ವ್ಯಾಸ ಮಹಾಭಾರತದ ಆದಿಪರ್ವವನ್ನು ಓದುತ್ತಿದ್ದಾಗ ನನಗೇ ಎದುರಾದ್ದು. ವ್ಯಾಸ ಮಹಾಭಾರತದಲ್ಲಿ ಇದಕ್ಕೆ ಉತ್ತರವಿಲ್ಲ. ಆದರೆ ದೇರಾಜೆಯವರು ತಮ್ಮ ಕಥೆಯಲ್ಲಿ, ‘ಯತಿಯು ವಿರಕ್ತನಾದುದರಿಂದ ಯಯಾತಿಯು ಅರಸನಾದನು’ ಎಂದು ಹೇಳುತ್ತಾರೆ. ಈ ವಿವರಣೆ ಅವರ ಸ್ವಂತದ್ದೋ ಅಥವಾ ಇನ್ನು ಯಾವ ಮೂಲದಿಂದ ಅವರು ತೆಗೆದುಕೊಂಡದ್ದೋ ತಿಳಿಯದು. ಆದರೆ ಓದುಗರಿಗೆ ಸಮಾಧಾನ ನೀಡುವಂಥದು. ದೇರಾಜೆಯವರು ತಮ್ಮ ನಿರೂಪಣೆಗೆ ಮುಖ್ಯವಾಗಿ ವ್ಯಾಸ ಮಹಾಭಾರತವನ್ನು ಆಧಾರವಾಗಿ ಇಟ್ಟುಕೊಂಡರೂ ಅಲ್ಲಿರಬಹುದಾದ ಇಂಥ ಎಡೆಗಳನ್ನು ತುಂಬುತ್ತಲೂ ಇರುತ್ತಾರೆ. ಆರಂಭದಲ್ಲೇ ನೈಮಿಷಾರಣ್ಯವನ್ನು ವಿವರಿಸುತ್ತ, ಅದಕ್ಕೆ ಆ ಹೆಸರು ಹೇಗೆ ಬಂತು ಎನ್ನುವುದನ್ನು ಹೇಳುತ್ತಾರೆ: ರಾಜರ್ಷಿಗಳಾದ ನಿಮಿವಂಶದ ಅರಸರು ಇಲ್ಲಿ ವಂಶಾನುಕ್ರಮದಿಂದ ಯಜ್ಞಯಾಗಾದಿಗಳನ್ನು ನಡೆಸಿಕೊಂಡು ಬಂದುದರಿಂದ ಈ ಹೆಸರು ಬಂತು; ಹಾಗೂ ಅರಣ್ಯಕಗಳೇ ಮುಂತಾದುವುಗಳ ಅಧ್ಯಯನವೋ ಚಿಂತನವೋ ಬಹಳಷ್ಟು ಇಲ್ಲಿ ನಡೆದುದರಿಂದ ಈ ಹೆಸರು ಈ ಅರಣ್ಯಕ್ಕೆ ಸಾರ್ಥಕವೂ ಆಯಿತು ಎನ್ನುತ್ತಾರೆ ದೇರಾಜೆ. ವ್ಯಾಸ ಮಹಾಭಾರತದಲ್ಲಿ ನೈಮಿಷಾರಣ್ಯದ ಈ ರೀತಿಯ ಅರ್ಥ ವಿವರಣೆ ಇಲ್ಲ.

ಈ ತರದ ನಿರೂಪಣೆ ದೇರಾಜೆ ಸೀತಾರಾಮಯ್ಯನವರಿಗೆ ಸಾಧ್ಯವಾದುದು ಅವರ ಅಗಾಧವಾದ ಪಾಂಡಿತ್ಯ ಮಾತ್ರದಿಂದಲೇ ಅಲ್ಲ; ಅವರು ದಕ್ಷಿಣ ಕನ್ನಡದ ಯಕ್ಷಗಾನ ಕಲಾವಿದರೂ ಆಗಿದ್ದರು ಎಂಬ ಕಾರಣಕ್ಕೆ. ಈ ಪ್ರದೇಶದ ಖ್ಯಾತ ‘ಅರ್ಥಧಾರಿ’ಗಳಾದ ಶೇಣಿ ಗೋಪಾಲಕೃಷ್ಣ ಭಟ್ಟರು, ಮಲ್ಪೆ ಶಂಕರನಾರಾಯಣ ಸಾಮಗರು, ಕೀರಿಕ್ಕಾಡು ವಿಷ್ಣು ಭಟ್ಟರು, ಪೆರ್ಲ ಕೃಷ್ಣ ಭಟ್ಟರು ಮುಂತಾದವರ ಸಾಲಿನಲ್ಲಿ ನಿಲ್ಲುವವರು ದೇರಾಜೆ ಸೀತಾರಾಮಯ್ಯನವರು ಕೂಡಾ. ತಾಳಮದ್ದಳೆಯಲ್ಲಿ ಪಾತ್ರಧಾರಿಗಳು ಮಾತನಾಡುವುದಕ್ಕೆ “ಅರ್ಥ ಹೇಳುವುದು” ಅಥವಾ “ಅರ್ಥಗಾರಿಕೆ” ಎನ್ನುತ್ತಾರೆ; ಆದ್ದರಿಂದ ಈ ಪಾತ್ರಧಾರಿಗಳನ್ನು “ಅರ್ಥಧಾರಿಗಳು” ಎಂದೇ ಕರೆಯಲಾಗುತ್ತದೆ. ಎಂದರೆ ಪುರಾಣಕತೆಗಳು, ಪಾತ್ರಗಳು ಜನರಿಗೆ ಅರ್ಥವಾಗುವಂತೆ ಇವರು ಮಾತಾಡಬೇಕು, ಆದ್ದರಿಂದಲೇ ಇವರು ಪುರಾಣಪಾಂಡಿತ್ಯವುಳ್ಳವರು ಆಗಿದ್ದಷ್ಟೂ ಒಳ್ಳೆಯದು. ತಾಳಮದ್ದಳೆಯಲ್ಲಿ ಕೇವಲ ‘ನೈಮಿಷಾರಣ್ಯ’ ಎಂದರೆ ಸಾಲದು; ಅದು ಎಲ್ಲಿದೆ, ಅದಕ್ಕೆ ಆ ಹೆಸರು ಹೇಗೆ ಬಂತು ಎಂಬುದನ್ನು ವಿವರಿಸುವುದು ಕೂಡಾ ಅಪೇಕ್ಷಣೀಯವಾಗುತ್ತದೆ. ಕೃಷ್ಣದ್ವೈಪಾಯನ ಎಂದರೆ ಸಾಲದು; ಆತನ ಕುಲಗೋತ್ರ, ಹೆಸರಿನ ವಿವರ ಎಲ್ಲವನ್ನೂ ಹೇಳಬೇಕು. ಒಬ್ಬ ಅರ್ಥಧಾರಿ ಪ್ರಸಂಗವನ್ನು ಮಾತ್ರವೇ ಅಲ್ಲ, ಸಮಸ್ತಪುರಾಣಗಳನ್ನೂ ತಿಳಿದರೆ ಆತನ ಅರ್ಥಗಾರಿಕೆಗೆ ಶೋಭೆ ಬರುತ್ತದೆ. ದೇರಾಜೆ, ಶೇಣಿ, ಸಾಮಗ, ಪೆರ್ಲ ಮುಂತಾದವರು ಪುರಾಣಗಳನ್ನು ಮಾತ್ರವಲ್ಲ, ವೇದ, ಉಪನಿಷತ್ತು, ಆಧುನಿಕ ಕನ್ನಡ ಸಾಹಿತ್ಯವನ್ನು ಕೂಡಾ ಅಭ್ಯಾಸ ಮಾಡಿಕೊಂಡವರು. ಆದ್ದರಿಂದ ಅವರ ಮಾತು ಬರಹಗಳಲ್ಲಿ ಈ ವಿದ್ವತ್ತು ಸಹಜವಾಗಿ ಕಾಣಿಸಿಕೊಂಡರೆ ಆಶ್ಚರ್ಯವಿಲ್ಲ. ದೇರಾಜೆಯವರ ಈ ಮಹಾಭಾರತ ಕಥಾನಕದ ಪ್ರತಿಯೊಂದು ಪುಟವೂ ಅವರ ವಿದ್ವತ್ತಿಗೆ ಸಾಕ್ಷಿ ನಡಿಯುತ್ತದೆ. ಕೇವಲ ಕತೆಯೊಂದೇ ಅಲ್ಲ; ಜಗದ ಹುಟ್ಟು ಸಾವಿನ ಕುರಿತಾದ, ಮನುಷ್ಯಜೀವನದ ಉದ್ದೇಶದ ಕುರಿತಾದ ಜಿಜ್ಞಾಸೆಗಳು ಇದರ ಗಾಂಭೀರ್ಯತೆಯನ್ನು ಹೆಚ್ಚಿಸಿವೆ. ಹಾಗೆಂದು ದೇರಾಜೆಯವರ ನಿರೂಪಣೆ ಕ್ಲಿಷ್ಟ ಭಾಷೆಯಲ್ಲೂ ಇಲ್ಲ. ಸೊಗಸಾದ ಆಧುನಿಕ ಕನ್ನಡದಲ್ಲಿದೆ. ಯಾಕೆಂದರೆ, ಅವರು ತಾಳಮದ್ದಳೆ ಅರ್ಥಧಾರಿ ಮಾತ್ರವೇ ಅಲ್ಲ, ಒಬ್ಬ ಅತ್ಯುತ್ತಮ ಸಾಹಿತಿಯೂ ಹೌದು. ರಾಮಾಯಣ ಮತ್ತು ಮಹಾಭಾರದ ಕಥಾನಿರೂಪಣೆ ಅಲ್ಲದೆ ಇತರ ಹಲವು ಕೃತಿಗಳನ್ನೂ ಅವರು ರಚಿಸಿದ್ದಾರೆ. ಇವುಗಳಲ್ಲಿ ತುಂಬಾ ಪ್ರಸಿದ್ಧವಾದುದು ‘ಕುರುಕ್ಷೇತ್ರಕ್ಕೊಂದು ಆಯೋಗ’ ಎಂಬ ಕೃತಿ. ಇದರಲ್ಲಿ ಪಾತ್ರಗಳು ಧರ್ಮದೇವತೆಯ ಮುಂದೆ ಬಂದು ತಂತಮ್ಮ ಕಾರ್ಯಗಳಿಗೆ ಕಾರಣ ನೀಡುವ ನವೀನ ತಂತ್ರವನ್ನು ಉಪಯೋಗಿಸಲಾಗಿದೆ.

ಕಾದಂಬರೀ ಪ್ರಕಾರವನ್ನು ವಿಶ್ಲೇಷಿಸುತ್ತ ರಶಿಯನ್ ವಿಮರ್ಶಕ ಮಿಖಾಯಿಲ್ ಬಖ್ತೀನ್ ಗುರುತಿಸುವ ‘ಸಂವಾದ ಕಲ್ಪನೆ’ (Dialogic imagination) ಎಂಬ ಸಂಗತಿಯನ್ನು ನಾವು ಯಕ್ಷಗಾನ-ತಾಳಮದ್ದಳೆಯಲ್ಲೂ (ಯಕ್ಷಗಾನಕ್ಕಿಂತಲೂ ಹೆಚ್ಚಾಗಿ ತಾಳಮದ್ದಳೆಯಲ್ಲಿ) ಕಾಣುತ್ತೇವೆ. ‘ಡಯಲಾಜಿಕ್’ ಎಂದರೆ ಏಕತ್ರ ಮಾತಿಗೆ ವಿರುದ್ಧವಾಗಿ ಪರಸ್ಪರ ಮಾತುಕತೆಯ ವಿಧಾನ; ಇದು ಅನೇಕ ಧ್ವನಿಗಳಿಗೆ, ಬಹುಳತ್ವಕ್ಕೆ ಎಡೆಮಾಡಿಕೊಡುತ್ತದೆ. ತಾಳಮದ್ದಳೆಯಲ್ಲಿ ಒಬ್ಬೊಬ್ಬರೂ ಒಂದೊಂದು ಪಾತ್ರವಹಿಸಿ ಸಂಭಾಷಣೆ (ಕೆಲವೊಮ್ಮೆ ವಾದವಿವಾದ) ಮಾಡುವುದರಿಂದ ಅದರ ಬಗೆಯೇ ಬಹುಳತ್ವದ್ದು. ರಾಮಾಯಣ, ಮಹಾಭಾರತ, ಭಾಗವತ ಮುಂತಾದ ಪುರಾಣಗಳಿಂದ ಕಥಾನಕಗಳನ್ನು ಎತ್ತಿಕೊಳ್ಳುವ ಯಕ್ಷಗಾನ-ತಾಳಮದ್ದಳೆಯಲ್ಲಿ ಪ್ರತಿಯೊಂದು ಪ್ರಸಂಗವೂ ಒಂದೊಂದು ‘ಸಮಸ್ಯಾತ್ಮಕತೆ’ಯನ್ನು (problematic) ಒಳಗೊಂಡಿರುತ್ತದೆ. ಆದ್ದರಿಂದಲೇ ಇಲ್ಲಿ ದೈಹಿಕ ಸಂಘರ್ಷಕ್ಕಿಂತ ವೈಚಾರಿಕ ಸಂಘರ್ಷಕ್ಕೆ ಹೆಚ್ಚು ಒತ್ತು. ಶ್ರೀರಾಮನು ವಾಲಿಗೆ ಮರೆಯಲ್ಲಿ ನಿಂತು ಬಾಣ ಹೊಡೆದದ್ದು ಸರಿಯೇ ತಪ್ಪೇ, ಭೀಷ್ಮನು ಅಂಬೆಯನ್ನು ಮದುವೆಯಾಗಲು ನಿರಾಕರಿಸಿದ್ದು ಸರಿಯೇ ತಪ್ಪೇ, ಪಾಂಡವರು ರಾಜ್ಯದಲ್ಲಿ ಅರ್ಧಭಾಗವನ್ನು ಕೇಳುವುದು ಸರಿಯೇ ತಪ್ಪೇ ಎಂದು ಮುಂತಾಗಿ ಒಂದೊಂದು ಸಮಸ್ಯೆಗೂ ಕನಿಷ್ಠ ಎರಡು ಮುಖಗಳಿರುತ್ತವೆ, ಹಾಗೂ ಇವು ‘ಸರಿ- ತಪ್ಪು’ ಎಂಬ ಧರ್ಮ ಜಿಜ್ಞಾಸೆಗೆ ಕಾರಣವಾಗುತ್ತವೆ. ಕೆಲವು ಪಾತ್ರಗಳು ತಮ್ಮೊಳಗೇ ಇಂಥ ಧರ್ಮಸಂಕಟಕ್ಕೂ ಗುರಿಯಾಗುತ್ತವೆ. ಈ ಸರಿ-ತಪ್ಪುಗಳು ಪುರಾಣಗಳಲ್ಲಿ ಈಗಾಗಲೇ ಪರಿಹಾರವಾಗಿದ್ದರೂ, ಆಗಿಲ್ಲ ಎಂಬ ರೀತಿಯಲ್ಲಿ ಇವು ಮತ್ತೆ ಮತ್ತೆ ಚರ್ಚೆಗೆ ಒಳಗಾಗುವುದೇ ಇಲ್ಲಿನ ಸ್ವಾರಸ್ಯ. ದೇರಾಜೆಯವರ ಕಥಾನಕದ ತುಂಬಾ ಇಂಥ ಚರ್ಚೆಗಳಿರುವುದಕ್ಕೂ ಅವರ ಈ ಯಕ್ಷಗಾನ-ತಾಳಮದ್ದಳೆಯ ಹಿನ್ನೆಲೆಯೇ ಕಾರಣ. ಬಖ್ತೀನ್‍ನ ಸಂವಾದ ಕಲ್ಪನೆಯೆಂದರೆ ಇಂಥ ವಿಭಿನ್ನ ಧ್ವನಿಗಳ ಮುಖಾಮುಖಿಯೇ.

ದೇರಾಜೆಯವರು ವ್ಯಾಸ ಮಹಾಭಾರತವನ್ನು ಆಧಾರವಾಗಿ ಇಟ್ಟುಕೊಂಡು ಕತೆ ಹೇಳುತ್ತಾರಾದರೂ, ಕತೆಯ ಆಶಯಕ್ಕೆ ಕುಂದಾಗದಂತೆ ಕೆಲವೊಂದು ಕಡೆ ತಮಗೆ ಬೇಕಾದ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಾರೆ. ಯಯಾತಿ-ದೇವಯಾನೆ (ದೇವಯಾನಿ) ಪ್ರಸಂಗದಲ್ಲಿ ಇದನ್ನು ಕಾಣಬಹುದು. ವ್ಯಾಸ ಮಹಾಭಾರತದ ಪ್ರಕಾರ, ದೇವಯಾನೆಯನ್ನು ಶರ್ಮಿಷ್ಠೆ ನೀರಿಲ್ಲದ ಒಂದು ಬಾವಿಗೆ ಹಾಕಿ ಹೋಗುತ್ತಾಳೆ. ಯಯಾತಿಗೆ ದೇವಯಾನೆ ಕಾಣಿಸುವುದು ಈ ಬಾವಿಯಲ್ಲೇ. ಆದರೆ ದೇರಾಜೆಯವರ ಪ್ರಕಾರ, ಯಯಾತಿಗೆ ದೇವಯಾನೆ ಕಾಣಿಸುವುದು ಕೊಳದಲ್ಲಿ. ಬೇಟೆಗಾರರ ಸದ್ದು ಕೇಳಿ ತನ್ನ ಗೆಳತಿಯರೆಲ್ಲಾ ಎದ್ದು ಓಡಿಹೋದರು; ಆಗ ಶರ್ಮಿಷ್ಠೆ ತನ್ನ ಸೀರೆಯನ್ನು ಉಟ್ಟುಕೊಂಡು ಹೋದ ಕಾರಣ ತಾನು ಇಲ್ಲೇ ಉಳಿಯುವಂತಾಯಿತು ಎನ್ನುತ್ತಾಳೆ ದೇವಯಾನಿ. ವ್ಯಾಸ ಮಹಾಭಾರತದಲ್ಲಿ ಈ ಸೀರೆ ಅದಲುಬದಲಾದ ಪ್ರಕರಣವೇ ಮುಂದೆ ಶರ್ಮಿಷ್ಠೆ ದೇವಯಾನೆಯನ್ನು ಬಾವಿಗೆ ತಳ್ಳಿಹಾಕುವುದಕ್ಕೆ ಕಾರಣವಾಗುತ್ತದೆ. ಆದರೆ ದೇರಾಜೆಯವರು ಅವುಗಳನ್ನು ಒಂದಾಗಿ ಮಾಡುತ್ತಾರೆ. ಅದೇ ರೀತಿ, ಕಚ-ದೇವಯಾನೆಯರ ಕತೆಯನ್ನು ವ್ಯಾಸ ಮಹಾಭಾರತದಲ್ಲಿ ಪ್ರತ್ಯೇಕವಾಗಿ ಹೇಳಿದರೆ. ದೇರಾಜೆಯವರ ಕಥಾನಕದಲ್ಲಿ ಅದು ಶರ್ಮಿಷ್ಠೆ ಯಯಾತಿಗೆ ನಿರೂಪಿಸುವ ರೀತಿಯಲ್ಲಿ ಬರುತ್ತದೆ. ಇದೆಲ್ಲ ದೇರಾಜೆಯವರ ಸೃಜನಶೀಲ ಮಾರ್ಪಾಟುಗಳು.

‘ಶ್ರೀಮನ್ಮಹಾಭಾರತ ಕಥಾಮೃತಂ’ ೧೯೭೭ರಲ್ಲಿ ಪ್ರಕಟವಾಯಿತು. ಲೇಖಕರೇ ಇದರ ಪ್ರಕಾಶಕರು ಕೂಡಾ. ಹಲವು ದಾನಿಗಳ ಕೊಡುಗೆಯಿಂದಾಗಿ ಇದು ಸಾಧ್ಯವಾಯಿತು. ಕ್ರೌನ್ ೧/೪ ಆಕಾರದ ೭ಂಂ ಪುಟಗಳ ಈ ಬೃಹತ್ಸಂಪುಟ ದೇರಾಜೆಯವರ ಇಂಥ ಎರಡನೆಯ ಕೊಡುಗೆ. ಇದಕ್ಕೆ ಮೊದಲು ಅವರು ರಾಮಾಯಣದ ಕುರಿತೂ ಇಂಥದೇ ಆದರೆ ಇದಕ್ಕಿಂತ ಸ್ವಲ್ಪ ಸಣ್ಣ ಗಾತ್ರದ ಸಂಪುಟವೊಂದನ್ನು ತಂದಿದ್ದರು. ಅದಕ್ಕೂ ಜನಾದರಣೆ ಪ್ರಾಪ್ತವಾಗಿತ್ತು. ಸೀತಾರಾಮಯ್ಯನವರ ಮರಣಾನಂತರ (೧೯೮೪) ಈ ರಾಮಾಯಣದ ಸಂಪುಟ ಮಿತ್ತೂರು ತಿಮ್ಮಯ ಭಟ್ಟ ಪ್ರತಿಷ್ಠಾನದಿಂದ ಮರುಮುದ್ರಣಗೊಂಡಿತು. ಈಗ, ಮೊದಲ ಪ್ರಕಟಣೆಯ ಮೂವತ್ತು ವರ್ಷಗಳ ನಂತರ, ಮಹಾಭಾರತ ಕಥಾಮೃತದ ಮರುಮುದ್ರಣ ಕಾರ್ಯವೂ ಆರಂಭವಾಗಿದ್ದು ಅಕ್ಟೋಬರ್ ೨ಂಂ೭ರ ಸುಮಾರಿಗೆ ಪ್ರಕಟಗೊಳ್ಳುವ, ಹಾಗೂ ಇದು ಪುತ್ತೂರಿನ ಜ್ಞಾನಗಂಗಾ ಪುಸ್ತಕ ಭಂಡಾರದ ಮೂಲಕ ವಿತರಣೆಯಾಗುವ ನಿರೀಕ್ಷೆಯಿದೆ. ಕನ್ನಡ ಪುಸ್ತಕ ಪ್ರಾಧಿಕಾರ ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಾವಾಗಿಯೇ ಗುರುತಿಸಿ ಎಂದೋ ಪ್ರಸರಣಗೊಳಿಸಬೇಕಾಗಿದ್ದ ಕೃತಿ ಇದು. ಆದರೆ ಬೆಂಗಳೂರಿನ ಕಣ್ಣಿಗೆ ವಿಟ್ಳದಂಥ ಸಣ್ಣ ಊರು ಕಾಣಿಸುವುದೇ?

ಈ ಕೃತಿರಚನೆಗಾಗಿ ದೇರಾಜೆಯವರಿಗೆ ಏನಾದರೂ ಪಶಸ್ತಿ ದೊರಕಿತೋ ಇಲ್ಲವೋ ನನಗೆ ತಿಳಿಯದು. ಕರ್ನಾಟಕದಾದ್ಯಂತ ಇದರ ಪ್ರಚಾರ ಆದಂತೆಯೂ ತೋರುವುದಿಲ್ಲ. ಲೇಖಕನೇ ಪ್ರಕಾಶಕನೂ ಆದಾಗ ಎದುರಿಸಬೇಕಾದ ಸಮಸ್ಯೆ ಒಂದೆರಡಲ್ಲ. ಇದರಲ್ಲಿ ಮುಖ್ಯವಾದದ್ದು ವಿತರಣೆಯ ಸಮಸ್ಯೆ. ಮಾಧ್ಯಮಗಳೂ ಇಂಥ ಕೃತಿಗಳ ಬಗ್ಗೆ ಗಮನ ಹರಿಸುವುದು ಕಡಿಮೆ. ಮಹಾಭಾರತ ಕಥಾಮೃತ ಪ್ರಕಟವಾದ ೧೯೭೭ ಎಮರ್ಜೆನ್ಸಿಯಿಂದ ಮನುಷ್ಯರು ಸುಸ್ತಾಗಿದ್ದ ಕಾಲ ಎನ್ನುವುದನ್ನು ಮರೆಯಬಾರದು. ಬಹುಶಃ ಇಂದಿನ ದಿನಗಳಲ್ಲಿ ಇಂಥದೊಂದು ಕೃತಿ ಮೂಡಿಬರುತ್ತಿದ್ದರೆ, ಯೋಗ್ಯವಾದ ಪ್ರಚಾರ ಸಿಗುತ್ತಿತ್ತು. ಆದರೂ, ಪುರಾಣಗಳೆಂದರೆ ಆಧುನಿಕರಿಗೆ ತಾತ್ಸಾರ. ಯಾಕೆಂದರೆ ಅಲ್ಪಸ್ವಲ್ಪ ಪುರಾಣ ಕತೆಗಳು ಹೇಗೋ ಎಲ್ಲರಿಗೂ ಗೊತ್ತಿರುತ್ತವೆ. ಇನ್ನು ವಿಸ್ತೃತವಾಗಿ ಓದಿದ್ದರಿಂದ ಏನು ಲಾಭ ಎಂಬ ಪ್ರಶ್ನೆ. ಸುದೀರ್ಘ ಗ್ರಂಥಗಳನ್ನು ಕಂಡರೇ ದೂರ ಸರಿಯುವ ಯುಗ ಇದು. ಇನ್ನು ಪುಟ ತೆರೆದು ಪುರಾಣ ಓದುವುದಕ್ಕೆ ಮನಸ್ಸು ಮಾಡುವವರು ಯಾರು? ಅವು ವೈಜ್ಞಾನಿಕ ದೃಷ್ಟಿಕೋನಕ್ಕೆ ವಿರುದ್ಧವಾಗಿವೆ, ಅಂಧಶ್ರದ್ಧೆಯನ್ನು ಪ್ರೋತ್ಸಾಹಿಸುತ್ತವೆ, ಆದ್ದರಿಂದ ಅವುಗಳನ್ನು ಓದುವುದರಿಂದ ವಿವೇಚನಾಶಕ್ತಿ ಕುಸಿದು ಸಮಾಜ ಪ್ರತಿಗಾಮಿಯಾಗುತ್ತದೆ ಎಂಬ ಧೋರಣೆ ಕೆಲವು ಕಟ್ಟಾವಿಚಾರವಾದಿಗಳದು. ಆದರೆ ಈ ಪುರಾಣಕತೆಗಳು ಮನುಷ್ಯನ ಸೃಜನಶೀಲತೆಗೆ ಸಾಕ್ಷಿ ಮಾತ್ರವೂ ಅಲ್ಲ, ಅದನ್ನು ಉದ್ದೀಪಿಸುವಂಥವು ಕೂಡಾ ಎಂಬುದನ್ನು ಮರೆಯಬಾರದು.

ಜಗತ್ತಿನಲ್ಲಿ ರಾಮಾಯಣ ಮಹಾಭಾರತಗಳು ಮಾತ್ರವೇ ಅಲ್ಲ, ಇನ್ನೆಷ್ಟೋ ಪುರಾಣಗಳಿವೆ. ಗ್ರೀಕ್ ಪುರಾಣಕತೆಗಳು, ಬೈಬಲಿನ ಹಳೆ ಒಡಂಬಡಿಕೆ (ಓಲ್ಡ್ ಟೆಸ್ಟಮೆಂಟ್), ಮೆಸೊಪೊಟೇಮಿಯಾದ ಗಿಲ್ಗಮೇಶ್, ಹಳೆ ಇಂಗ್ಲಿಷ್ನ ಬೆಯೊವುಲ್ಫ್ ಇವೆಲ್ಲವೂ ಪುರಾಣಕತೆಗಳೇ. ಇವಲ್ಲಿ ಕೆಲವು ಮತಧರ್ಮಮೂಲದವಾದರೆ, ಇನ್ನು ಕೆಲವು ರಾಷ್ಟ್ರೀಯತಾ ಸೂಚಕವಾದಂಥವು. ಆದರೆ ಇಂದು ನಾವು ಅವುಗಳನ್ನು ಆ ರೀತಿ ಓದಬೇಕಾಗಿಲ್ಲ; ಮನುಷ್ಯನ ಕಲ್ಪನಾಶಕ್ತಿಯ ಅದ್ಭುತ ನಿರ್ಮಾಣಗಳೆಂದು ಓದಿದರೆ ಸಾಕು. ಪುರಾಣಕತೆಗಳು, ದಂತಕತೆಗಳು, ಜನಪದ ಸಾಹಿತ್ಯ ಮುಂತಾದುವು ವಿಶ್ವದ ಎಲ್ಲೇ ಇದ್ದರೂ ಅವು ಮಾನವಸಮೂಹದ ಸಂಪನ್ಮೂಲಗಳೆಂದು ತಿಳಿದರೆ ಅವೆಲ್ಲ ನಮ್ಮದಾಗುತ್ತವೆ. ಬದಲಾಗಿ ಅವನ್ನು ನಿರಾಕರಿಸಿದರೆ, ನಮ್ಮದೇ ನಷ್ಟ. ಎಚ್. ಜಿ. ವೆಲ್ಸ್ ಲೋಕಚರಿತ್ರೆಯನ್ನು ಒಂದೆಡೆ ಸೇರಿಸಿ ಕೊಟ್ಟಂತೆ (The Outline of History), ಇಡೀ ಮಹಾಭಾರತವನ್ನು ಒಟ್ಟಿಗೆ ಕಲ್ಪಿಸಿ ಕೊಟ್ಟ ದೇರಾಜೆಯವರಿಗೆ ನಾವು ಕೃತಜ್ಞರಾಗಿರಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬುದ್ಧನ ದಾರಿಯ ಹಿಡಿದೇವು
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೦

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…