ಇಲ್ಲ !
ಬರಲಿಲ್ಲ
ಆ ದಿನ ಬರಲಿಲ್ಲ.
ಸಾಲು ಸಾಲು ಮೇಘ, ಮಾರುತಗಳ ಬರಳೊರಳಿಸಿ
ಗುಡುಗು, ಮಿಂಚುಗಳ
ಬಾಣ, ಬಿರುಸಿನ ಮಾಲೆ ಹೊತ್ತಿಸಿ
ಗಿಡ, ಮರಗಳ ಬುಡ ನಡುಗಿಸಿ
ತಲೆ ಕೊಡವಿಸಿ
ಏಕಕಾಲಕೆ ಗಲಿಬಿಲಿ, ಸಂತಸ ಹುಟ್ಟಿಸಿ
ಜನ, ದನ, ಕ್ರಿಮಿ, ಕೀಟ ಪಕ್ಷಿಗಳ ತಾರಾಡಿಸಿ
ಬಾನು, ಭುವಿಯನು ಬೆಸೆವ ಕೆಂದೂಳ ಸೇತುವೆಯನೆಬ್ಬಿಸುವ
ಮಳೆ ಗಾಳಿ ನೀನು ಬರಲಿಲ್ಲ.
ಬಯಲು, ಬೇಲಿ, ತಬ್ಬಿ
ಬಣ್ಣ ಗಂಧವ ರುಬ್ಬಿ
ಕಣ್ಮನಕೆ ಹಬ್ಬ ತರುವ
ಭಾದ್ರಪದ ನೀನು
ಬರಲಿಲ್ಲ
ಪ್ರೇಮ ಚುಂಬನದಿ
ಮಿಂಚು ರೋಮಾಂಚನವ ಸ್ಪುರಿಸಿ
ನವ, ನವ ಭಾವಗಳ ಚಿಗುರು ಉಡಿಸಿ
ಕಣಿವೆ ಕೊಳ್ಳಗಳಲಿ
ಕೋಗಿಲೆಗಳ ಮಧುರ ಗಾನವ ಮೊಳಗಿಸಿ
ಕನಸುಗಳ ತೇಲಿಬಿಡುವ
ಬಾಲ ಗ್ರೀಶ್ಮನು ನೀನು ಬರಲಿಲ್ಲ.
ಮಧುರ ಪರಿಮಳದ
ಮುಂಗಾರು ಮಲ್ಲಿಗೆಯ
ಮೊಗ್ಗಿನ ಮುಖದಲ್ಲಿ
ಮುಗುಳು ನಗೆ ತೇಲಿಸುವ
ಸಂಜೆ ಗಾಳಿ ನೀನು ಬರಲಿಲ್ಲ.
ನನ್ನಾಸೆ ಹೂವುಗಳು
ಕಾಯಾಗಿ ಹೊರೆಯಲು, ಹಣ್ಣಾಗಿ ಮಾಗಲು
ತಹತಹಿಪ
ಅನುರಾಗ ಪರಾಗ ನಿಯೋಗಿ ನೀನು ಬರಲಿಲ್ಲ.
ಹಸಿದು
ಕಂಗಾಲಾಗಿ
ಕೀಚ್ ಕೀಚೆನುತ ತಪಿಸುವ
ಗೂಡಿನ ಮರಿಗಳಿಗೆ
ಜೀವ ಗುಟುಕನು ತರುವ
ತಾಯಿ ಹಕ್ಕಿ ನೀನು
ಬರಲಿಲ್ಲ.
ಜಗವ ಕವಿದಿರುಳ ಮೇಲೆ
ಬೆಳಕ ದಾಳಿ ನಡೆಸಿ
ಸೋತ ತಾರಾ ಕುಲವ
ಮುನ್ನಡೆಸಿ ಗೆಲುವ
ಚಂದ್ರಿಕೆ ನೀನು
ಬರಲಿಲ್ಲ.
*****