ಕರಕರ ಹೊತ್ತುಟ್ಟೊ ಹೊತ್ತು. ದಕ್ಕಲು ಬಾಲಪ್ಪಗೌಡ ದಿಡಿಗ್ಗನೆದ್ದ. ಕೂಗಳತೆಯಲ್ಲಿದ್ದ ಕುಂಟೆ ಕಡೆ ನಡೆದು, ನಿತ್ಯಕರ್ಮ ಮುಗಿಸಿ, ಅಲ್ಲೇ ಮಡುವಿಗೆ ಹಾರಿ ಈಜು ಹೊಡೆದ. ಸುಸ್ತೆನಿಸಿ, ಕುಂಟೆಕಟ್ಟೆಗೆ ಹೋಗಿ ಕುಳಿತ. ಉಟ್ಟಬಟ್ಟೆಯಲ್ಲೇ ಇಷ್ಟಲಿಂಗ ಪೂಜೆಯಲ್ಲಿ ಮಗ್ನನಾದ. ಇಷ್ಟು ವರ್ಷಗಳಾದ್ರೂ ತಾನ್ಯಾರೆಂಬುದಕ್ಕೆ ಉತ್ತರ ಹುಡುಕಿ ಹುಡುಕಿ ಸಿಕ್ಕಿಲ್ಲದ್ದಕ್ಕೆ ಕ್ಷಣ ವಿಲವಿಲನಾದ.
ರಾತ್ರಿ ಹಟ್ಟಿಯಲ್ಲಿ ಮಾದಿಗ್ರ ಪಿರಿಪಿರಿಗೆ ರೋಸಿ ಹೋಗಿದ್ದು, ತಲೆಯಿಂದ ದೂರವಾಗಿರಲಿಲ್ಲ. ಕಣ್ಣು ಮುಚ್ಚಿ ಕಣ್ಣು ತೆರೆದರೂ ಅದೆಂಥಾ ಮಾತುಗಳು?! ಅಬ್ಬಾ!
’ಎಳೆ ಮಗಿನಂಗೆ ಹಟ ಮಾಡ್ತಾ ಮಾದಿಗರ್ನ ಜೀವತಿಂತಾ ಇದ್ರೆ ಎಲ್ಲಿಂದ ತರಾದು? ನಿನ್ ಎರ್ಡು ಎಂಡ್ರು, ಮಕ್ಳಿಗೆ, ಕೋಳಿ, ನಾಯಿಗಳಿಗೆ, ಹಂದಿ ಕತ್ತೆ, ಕುದುರೆಗೆ ಅನ್ನ……ನೀರು, ಬಟ್ಟೆಬರೆ ಎಲ್ಲಿಂದ ತರಾನು? ದುಡ್ಡು ತಿನ್ನೋದು ಇನ್ನಾದ್ರೂ ಕಲೀಬೇಕು.” ಎಂದು ಛೇಡಿಸಿದ್ದು! ಕೇರಿ ಮುಖಂಡ, ಮಾರೆಪ್ಪನ ಮಾತು, ಕರಿನಾಗರನ ಕೆರಳಿಸುವಂತೆ ಕೆರಳಿಸುತ್ತಾ ಹೋಯ್ತು.
ಇಷ್ಟಲಿಂಗ ಪೂಜೇನ ಇಷ್ಟಕ್ಕೆ ನಿಲ್ಲಿಸುವುದು ಪಾಡೆಂದು ಬಾಲಪ್ಪ ಬಗೆದು, ಗೊಮ್ಮಟನಂತೆ, ನಿಂತ ರಭಸಕ್ಕೆ, ಸೂರ್ಯ ಭುಮಿಯೊಳಗಿಂದ ಮೇಲೆದ್ದು ಬಂದ! ಕುಂಟೆ ಬಯಲಿಂದ ಬಿಡಾರದ ಕಡೆ ಹೊಂಟ. ಬಿಡಾರದ ಮೂಲೆಯಲ್ಲಿ ತಬ್ಬಲಿಯಂತೆ ಅಳೂತ್ತಾ ಉರಿಯಲೋ ಬೇಡೋ ಎಂಬಂತೆ ಉರಿಯುತ್ತಿದ್ದ ಲಾಟೀನ್ ನ ತಣ್ಣಗೆ ಮಾಡಿದ. ಅಲ್ಲೇ ಗೂಟಕ್ಕೆ ಸಿಗಿಹಾಕಿದ್ದ ಹರಕಂಗಿ, ಹಣೆಗೆ ಒಪ್ಪುವಂತೆ ವಿಭೂತಿಪಟ್ಟಿ ಎಳೆದುಕೊಂಡ. ಕುತಿಗೆಗೆ ’ಕಂಚಿಶಾಸನ’ ಇಳಿಬಿಟ್ಟ. ಎಡಗೈಯಲ್ಲಿ ಬಿದರಕೋಲು, ಬಲಗೈಗೆ ಬೆಳ್ಳಿಯ ’ನಾಗ ಕಡುಗ’ ಧರಿಸಿದ. ಎಂದಿನಂತೆ ಸಿಬ್ಲಿ, ಮುತ್ಲಿ, ತಟ್ಟೆ, ಗಂಗಾಳ, ಚೊಂಬು, ಲೋಟಗಳನ್ನು ಜೋಳಿಗೆಗೆ ತುರುಕಿಕೊಂಡ. ಎಡಗಡೆ ಕಾಲಿಗೆ ಗಗ್ರೀ ಏರಿಸಿದ. ಕಾಲಿಗೆ ಮೂರು ಬಾರಿನ, ಗಿರಕಿ ಕಾಲುಮುರಿಗಳನ್ನು ಮೆಟ್ಟಿದ.
ಕ್ವಾರೆ ಮೀಸೆ ಮೇಲೆ, ಅಭ್ಯಾಸಬಲದಂತೆ, ಕೈಯಾಡ್ಸಿ ಟಗರು ’ಗುಟುರು’ ಹಾಕಿದಂತೆ ಮಾಡಿದ. ಮೂಲೆಗೆ ಮುದ್ರಿ ಕುಳಿತಿದ್ದ ಇಬ್ರು ಹೆಂಡ್ರು ಲಕ್ಕಿ-ಸಾರಮ್ಮ ಎದ್ದು ಬಂದು, ಸಿಂಗಾರಕ್ಕೆ ಆದ ಅಂಗಾರ ಹಚ್ಚಿ ಆರತಿ ಎತ್ತಬೇಕು, ಅನ್ನುವಷ್ಟರಮಟ್ಟಿಗೆ ಸಾಕ್ಷಾತ್ ’ಶಿವನಂಗೆ’ ಒಬ್ರುಗೆ ಕಾಣಿಸಿದ್ರೆ, ಇನ್ನೊಬ್ರಿಗೆ ’ಆದಿಜಾಂಬವ್ನಂಗೆ’ ಕಾಣತೊಡಗಿದ! ಇಬ್ರೂನೂ ಒಂದಪ ಕಣ್ಣು ತುಂಬ ನೋಡಿ, ಕೇರಿಕಡೆ ಗೂಳಿಯಂಗೆ ನುಗ್ಗಿದ.
ದಾರಿಯಲ್ಲಿ ಬಿದ್ದಿದ್ದ….. ಕಲ್ಲು, ಮಣ್ಣು, ಮುಳ್ಳು, ಬೇಲೀನ ಅತ್ತಿತ್ತ ಸರಿಸುತ್ತಾ ಹೊಂಟ ಪರಿಗೆ ಕೆಂದೂಳು ಕೈಲಾಸಕ್ಕೆ ಹಾರಿತು. ಏಳು ಅಡಿ ಎತ್ತರದ ಆಳಿಗೆ ಒಪ್ಪುವ ಅಗಲವಾದ ಎದೆ, ದುಂಡನೆ ಕಣ್ಣುಗಳಿಗೆ ತೀಡಿಮಾಡಿದಂಥಾ ಹುಬ್ಬುಗಳು, ಗಿರಿಜಾ ಕ್ರಾಪು, ಜೋತು ಕಿವಿಯಲ್ಲಿ ಮೂರು ’ಅಳ್ಳಿನ’ ಬಂಗಾರದ ಬೆಂಡೋಲೆ! ಎದ್ದು ಕಾಣುವ ದುಂಡು ಮಕದಲ್ಲಿ ಚೂಪೂ ಮೂಗು. ಸಾಕ್ಷಾತ್ ’ಭೀಷ್ಮನೆದ್ದು’ ಬರುತ್ತಿರುವಂತೆ ಭಾಸವಾಗತೊಡಗಿದ್ದನ್ನು ಕಂಡು, ಮಾದಿಗರು ಬೆಚ್ಚಿಬಿದ್ದು ಎದ್ದು….. ನಿಂತರು!
ಬಾಲಪ್ಪನೆಂದ್ರೆ ಮಾದಿಗ್ರ ಎದೆ ’ಢವ ಢವ’. ಇಡೀ ದಕ್ಕಲು ಜನಾಂಗಕ್ಕೆ ನ್ಯಾಯ, ಪಂಚಾಯ್ತಿಗೆ ಮುಖ್ಯಸ್ಥ, ಗೌಡಿಕೆ ಮನೆತನ, ಉಳಿದ ಗಣಾಚಾರಿ, ಪೂಜಾರಿ ಮನೆತನಗಳಿಗೂ ಹೆಚ್ಚಿನವ! ಬೇರೆ ಜಾತಿ ಜನಾಂಗದವರಿಗೆ ಪಂಚಾಯ್ತಿ ಬಗೆಹರಿಸುವ ಬೆಂಕಿಚೆಂಡೆಂಬ ಭೂಪತಿ! ಈಗ ಕೇರಿ ಮುಂದೆ ಪ್ರತ್ಯಕ್ಷ ಆಗಿದ್ದಕ್ಕೆ….. ಮುಟ್ಟಿ ಮುಟ್ಟಿ ನೋಡಿಕೊಂಡರು.
ಬಾಲಪ್ಪ, ಕೇರಿ ಮುಂದುಗಡೆ, ಕುಳಿತ ಠೀವಿಗೆ, ಸೂರ್ಯ ಕೂಡಾ ಕೆಂಪಡರಿ ನೋಡುತ್ತಿದ್ದ, ಬಂದವನೇ ಕಂಚಿನ ಸ್ವರದಲ್ಲಿ ಕೇರಿ ಮುಖಂಡರ ಹೆಸರ್ಹಿಡಿದು ಕೂಗತೊಡಗಿದ. ಕೂಗಿದ ದೆಬ್ಬೆಗೆ ಇಬ್ಬನಿ ಕರಗಿ, ಇಡೀ ಕೇರಿಕೇರಿನೇ ಬಿಸಿ ಏರತೊಡಗಿತು. ಮಾದಿಗರ ಮುಖಂಡರು, ವರಕಡಿಗೆ ಬಂದಂಗೆ, ಮನೆ ಮನೆಗೆ, ಓಡಾಡತೊಡಗಿದರು.
ಇತ್ತ ಬಾಲಪ್ಪ, ಏರಿದ ಧ್ವನಿಯಲ್ಲಿ…. ’ಓ ಮಾರೆಪ್ಪ ಗೌಡ್ರೇ, ಕೃಷ್ಣಪ್ಪ ಗೌಡ್ರೇ, ಮರಿಯಣ್ನ ಗೌಡ್ರೇ, ಕರಿಯಣ್ನ ಗೌಡ್ರೇ ಬಹಳ ಹೊತ್ತಾಯ್ತು. ಮುದ್ದೆ ನೀಡೀ ಗೌಡ್ರೇ……’ ಎಂದು ಹಲುಬತೊಡಗಿದ.
ಹೊತ್ತು ಏರಿದಂತೆಲ್ಲ….. ಬಾಲಪ್ಪ ಗೌಡನ ತಲೆ….ಸುಣ್ಣದ ಭಟ್ಟಿಯಾಯಿತು. ಹಸಿದ ಡೊಳ್ಳು ಹೊಟ್ಟೆ, ಬಿರುಕುಬಿಟ್ಟ ಎರೆಭೂಮಿಯಂಗೆ, ಬಾಯಿ ಬಿಡತೊಡಗಿತ್ತು. ಗೌಡ್ರೇ…ಹೊತ್ತಾಗ್ ಹೊಯ್ತು ಗೌಡ್ರೇ….. ಮುದ್ದೆ…. ಅನ್ನ …… ನೀರು…. ನೀಡ್ರೀ’ ಎಂದು, ಕೂಗಿ ಗಂಟಲು ಒಣಗಿಸಿಕೊಂಡ.
ಸ್ವಲ್ಪ ಹೊತ್ತಿನ ಬಳಿಕ, ಮಾದಿಗರ ಮನೆಯಿಂದ….. ಮುದ್ದೆ, ಸಾರು, ಚಟ್ನಿ, ಪಲ್ಯ, ನೀರು ತಂದು ಹಾಕತೊಡಗಿದ್ರು. ಕೇರಿಯೊಳಗಿನ ಹಿರಿತಲೆ ಮುದುಕ ಮುದುಕಿಯರು ತಂತಮ್ಮ ಮಕ್ಕಳೊಂದಿಗೆ ಬಾಲಪ್ಪಗೌಡನ ಸುತ್ತಾ ಕೋಟೆಯಾದರು.
’ಸರಿದು ನಿಲ್ಲ್ರೀ, ಮುದ್ದೆಸಾರು ತಂದು ನೀಡೋರಿಗೆ ದಾರಿ ಬಿಡ್ರೀ’ ಎಂದು ಬಾಲಪ್ಪ ಗದರಿಕೊಂಡ. ಹಸುಗೂಸುಗಳು ಎಗರಿಬಿದ್ದು ಅಳತೊಡಗಿದವು.
’ಏ ನೀನಂತೂ ಒಳ್ಳೆಯಪ್ಪ ನೋಡು! ಎಂಗ ಎಗರಿ ಬೀಳಂಗೆ ಮಾಡ್ಬಿಟ್ಟೆ ಬಿಡು! ಯಾರದೋ ಸಿಟ್ಟು ತಗೊಂಡು, ಯಾರ ಮ್ಯಾಲೋ ತೋರ್ಸಿಬಿಟ್ಟೆ’ ಎಂದು, ಬಾಲಮ್ಮಜ್ಜಿ ಛೇಡಿಸಿದಳು.
ರವೊಷ್ಟೊತ್ತಾಯ್ತು. ಬಾಲಪ್ಪಗೌಡ ಕೇರಿ ಮುಖಂಡರ ಹೆಸರುಗಳನ್ನು ಪುಂಖಾನುಪುಂಖವಾಗಿ ಕೂಗಿ ’ ನೀವೆಲ್ಲ ಇಲ್ಲಿಗೆ ಸ್ವಲ್ಪ ಬಂದ್ ಹೋಗಿ ಗೌಡ್ರೇ’ ಎಂದ. ಅದರಂತೆ, ಐದಾರು ಮಂದಿ, ಹಿರಿತಲೆಗಳು ಬಾಲಪ್ಪಗೌಡನ ಮುಂದೆ, ಕುಕ್ಕರಗಾಲಲ್ಲಿ ಕುಳಿತರು.
’ಕೇರಿಗೆ ಬಂದು, ಐದಾರು ದಿನ ಆಯ್ತು. ನಾಳೆ ರಾತ್ರಿ ’ದಕ್ಕಲು ಪುರಾಣ’ ಹೇಳಬೇಕೆಂದಿದ್ದೇನೆ. ಏರ್ಪಾಟು ಮಾಡಬೇಕು ಗೌಡ್ರೇ’ ಎಂದ.
’ನಿನ್ಗೆ ಏನ್ ನೋಡಿ, ಏನ್ ಇಟ್ರು ಅಷ್ಟ್ರಾಗೈತಿ! ನಿನ್ಹತ್ರ ಯಾವ ಪುರಾಣ್ನ ಕೇಳಿ ಏನಾಗಬೇಕೈತಿ!? ನಿನ್ನೆ ಬಿಸಿ ಮುದ್ದೆ ತಂದ್ಕೊಟ್ಟ, ಕೇರಿ ಯಜಮಾನಿಗೆ, ಬೀಸಿ ಮುದ್ದೆ ಒಗೆದು, ಅವಮಾನ ಮಾಡಿದ್ದು, ಸರಿ ಏನು? ಮುದ್ದೆ ಸಣ್ಣದು ಕಟ್ಟಿರಬಹುದು, ಸಾರಿನಾಗ, ಮಾಂಸದ ತುಂಡುಗಳಿಲ್ಲಾಂತ, ನೀ ಹಿಂಗೆ ಮಾಡಿದ್ರೆ ಎಂಗೆ?’ ಎಂದು ಮಾರೆಪ್ಪ ತರಾಟೆಗೆ ತೆಗೆದುಕೊಂಡ.
’ನಾ ಬ್ರಿಟೀಷರ ಕಾಲದಿಂದ ನೋಡ್ತಾ ಬಂದೀನಿ. ಈ ಕೇರಿ ಇದ್ದಷ್ಟು ಎಡವಟ್ಟು ನಾ ಯಾ ಕೇರಿನಾ ನೋಡಿಲ್ಲ! ಹನ್ನೆಲ್ಡು ಜನ ಮಣೆಗಾರ್ರು ಹನ್ನೆಲ್ಡು ದಿಕ್ಕಿಗ್ ಹಿದೀರಿ! ಒಬ್ಬರಿಗೊಬ್ರು ತಾಳಿಲ್ಲ ಮೇಳಿಲ್ಲ. ವರ್ಷಕ್ಕೊಂದು ಸಾರಿ, ಕೇರಿ ಮುಂದಕ ಬಂದಾ….. ದಕ್ಕಲು ಮಗಾನ ಸಾಕಿ ಸಲ್ಹುಕಾ ನಿಮ್ಮ ಕೈಲಿ ಆಗವಲ್ದು. ಪಂತ್ಯಾಗ ಪರಪಂತಿ ಮಾಡ್ತೀರಿ, ಮನ್ಯಾಗ ಮಕ್ಕಳಿಗೆ ಹಿಂಗೇ ನೀಡ್ತೀರಾ?’ ಎಂದು ಕಂಡಾಬಟ್ಟೆ ಬಾಲಪ್ಪ ರುಬ್ಬತೊಡಗಿದ. ತಿಮ್ಮಣ್ಣ, ’ವಸಿ ಮೆತ್ತಗೆ ಮಾತಾಡು. ತುಂಬಿದ ಊರು – ಕೇರ್ಯಾಗ ಮರ್ಯಾದಿ ತೆಗೀಬ್ಯಾಡ. ಮಳೆ ಬೆಳೆ ಹೋಗಿ ರೈತ್ರೂ ಕೂಡ ದಿನಗೊಲೀ ಮಾಡಿ, ಹೊಟ್ಟೆ ಹೊರಿತಾರೇ ಅಂಥಾದ್ರಲ್ಲಿ ನಿನ್ಗೆಲ್ಲಿಂದ ಸುಡುಸುಡಾದ್ನ ಬಸ್ದಿಡಾಣ?’
’ಕಾಲ ಏನು ಬದಲಾಗಿಲ್ಲ ಗೌಡ್ರೇ. ಎಲ್ರ ಮೈಯಾಗೂ ಈಗ್ಲೂ ರಕ್ತ! ಏನ್ ಬದಲಾಗೈತಿ? ಬದಲಾಗಿರೋದು ಈ ಕೇರಿ ಹನ್ನೆರ್ಡು ಜನ…. ನೀವು ಉಪಾಸಿದ್ದು ನನ್ ಸಾಕಾದು ನಿಮ್ಗೇನು ಹೊಸ್ದೇನು? ಬೇಬಿಟ್ಟಿ ಅಂದ್ರೆ ನನ್ ಕೈಲಿ ಸಹಿಸಕಾಗಲ್ಲ! ನಿಮ್ಮನ್ನೆಲ್ಲ ’ಕಟ್ಟೆಮನೆ’ ಗೊಯ್ದು ನಿಲ್ಲಿಸ್ತೀನಿ. ಇಲ್ಲಾ….. ನಾಯಿ ಕೊರಳಿಗೆ ’ದಕ್ಲುಗೊಂಬೆ’ ಕಟ್ಟಿ, ಏಳು ಹಳ್ಳಿಯೊಳಗೆ ಮರ್ವಾದೆ ಹರಾಜಿಗಿಡ್ತೀನಿ.’ ಬಾಲಪ್ಪಾ ಮಾದಿಗರ್ನ ಎಳ್ಳು ಕೊಡವಿದಂಗೆ ಕೊಡವಿದ.
’ಈಗ ಸಿಬ್ರು ಕೆತ್ತೋ ಕೆಲ್ಸ ಬ್ಯಾಡ. ನಾಳೆ ಪುರಾಣ ನಡೇದು ನೋಡ್ಕೋಳ್ಳಾಣ ನಡ್ರೀ……’ ಎಂದು ಕೇರಿಯವರು ತನ್ನ ಮುಂದಿಟ್ಟ ಎಲೆ ಅಡಿಕೆ ಹನ್ನೊಂದು ರೂಪಾಯಿ ದಕ್ಷಿಣೆ ’ಈಳ್ಯ’ ವನ್ನು ಬಾಲಪ್ಪ ಒಪ್ಪಿ, ಅದ್ನೆಲ್ಲ ಕೋಟಿನ ಜೇಬಿಗೆ ತುರುಕಿದ.
’ಈಗಿನ್ನು ಮೂರ್ನೆ ಮದ್ವೆ ಮಾಡಿಕೊಳ್ಳೋ ಹರೇದಾಗ ಅದೀಗಿನೋಡು’ ಎಂದು ಮಾರೆಪ್ಪ ಬಾಲಪ್ಪನನ್ನು ’ಕುವ್ಹಾಡ’ ಮಾಡಿದ.’ .
’ಈಗಿರೋ ಇಬ್ರು ಹೆಂಡ್ರುನ್ನ ಹದಿನಾರು ಮಕ್ಳನ್ನ ಸಾಕಿ ಸಲ್ಹೋದೇ ಏಳು ಹನ್ನೊಂದಾಗಿರುವಾಗ, ಇನ್ನೊಂದು ಮದ್ವೇ ತಂಟಿ ಯಾಕೆ ಗೌಡ್ರೇ’ ದಕ್ಕಲು ಬಾಲಪ್ಪ, ತನ್ನ ಅಸಹಾಯಕತೇನ ತೋಡಿಕೊಂಡ.
ಅಲ್ಲಿದ್ದ ಜನಜಾತ್ರೆ ಮೆಲ್ಲಗೆ ಕರಗಿತು.
ಬಾಲಪ್ಪ ಕೇರಿ ಹೊರಗಿನ ಬಿಡಾರ ಸೇರಿದ. ಬಿಡಾರದಲ್ಲಿ ಹೆಂಡ್ರೂ ಮಕ್ಕಳೂ ಮೊಮ್ಮಕ್ಕಳೂ ಬಾಲಪ್ಪನನ್ನು ಕಂಡೊಡನೆ ’ಏನೇನು ತಂದೀಯಾ?’ ಎಂದು ಮುತ್ತಿದರು.
* * *
ಕೇರಿ ಮುಖಂಡ ಕೃಷ್ಣಪ್ಪ, ಗೋಡೆಗೆ ಸಿಗಿಹಾಕಿದ್ದ ತಪ್ಪಡೆ ತೆಗೆದು, ಮನೆ ಮುಂದೆ ಒಟ್ಟಿದ್ದ ಸಪ್ಪೆಸೆದೆ, ಕಡ್ದಿಪುಳ್ಳೆ, ಕಾಗದ ಇತ್ಯಾದೀನೆಲ್ಲ ಹುಣಸೆತೊಕ್ಕು, ರಂಗೋಲಿಪುಡಿ ರುಬ್ಬೋ ಗುಂಡುಗಳ ಸಂದಿಗೆ ಹಾಕಿ, ಬೆಂಕಿ ಗೀರಿ, ಮೋಟು ಬೀಡೀಗೆ ಬೆಂಕಿಕೊಟ್ಟು ’ದಮ್ಮು’ ಎಳೆಯುತ್ತಲೇ….. ತಪ್ಪಡೆಯನ್ನು ’ಝಣ ಝಣ’ ಕಾಸತೊಡಗಿದ. ಶಬ್ದ ನಗಾರಿಯಾಯಿತು. ’ಊರ ಗೌಡ್ರು ಕ್ವಾಣಗರದ್ದು ತ್ವಗಲು ಕಣ್ಲ ಇದು! ಇದರ ಆರ್ಭಟಾ ಕೇಳಬೇಕೆ? ಏಳು ಹಳ್ಳಿಯಾಗೇ ಇಲ್ಲ! ಇಂಥಾ ತಪ್ಪಡೆ ಮಗಾ’ ಪೆರ್ಲಜ್ಜ ಕಿವಿ ನಿಗರಿಸಿ, ಮೂಗರಳಿಸಿ ಮಾತಿಗೆ ಕುಳಿತ.
ಎಡಗಡೆ ತೋಳಿಗೆ ತಪ್ಪಡೆಯನ್ನು ಏರಿಸಿಕೊಂಡ. ಗುಣಿ, ಚಿಟಿಕೆ ಪುಳ್ಳೆ, ಸಿದ್ಧ ಮಾಡಿಕೊಂಡು ತಪ್ಪಡೆ ಭಾರಿಸಿದ. ’ ಝಗ್ಗಾಣಾಕು…. ಸಿಂಕಣಾಕ….ಝಗ್ ಝಗ್….’ ನಾಲ್ಕೈದು ’ಗಸ್ತು’ ಬಡಿದ. ಅಲ್ಲೇ ಇದ್ದ ಕರಿಯಣ್ಣ, ಮರಿಯಣ್ಣ, ತಿಮ್ಮಣ್ಣ ಎದ್ದು ಬಂದು ತಪ್ಪಡೆ ಮುಂದೆ, ಸುತ್ತಲ ಪೊಸಿಗೆ ಹಾಕಿ, ಅಲಾಯಿ ಕುಣಿತ ಶುರುಮಾಡಿದ್ದೇ ತಡ, ಶಿಳ್ಳೆಕೇಕೆ ಮುಗಿಲು ಮುಟ್ಟಿದವು. ಊರುಕೇರಿ ಬೀದಿಬೀದಿಗುಂಟಾ ಡಂಗೂರಾ ಸಾರುತ್ತ ’ನಾಳೆ ರಾತ್ರಿ, ಎಂಟು ಗಂಟೆಗೆಲ್ಲಾ, ಪಾತಪ್ಪನ ಗುಡಿ ಬಯಲಾಗೆ, ’ದಕ್ಕಲು ಪುರಾಣ’ ಐತೆ ಮಹಾಜನ್ರೆಲ್ಲಾ ಬರಬೇಕ್ರಪ್ಪೋ ಬರಬೇಕು….’ ಎಂದು, ಮೂರು ಮೂರು ಸಾರಿ, ಕೃಷ್ಣಪ್ಪ ಸಾರಿದ. ಕೇರಿ ಮುಖಂಡರಿಗೆಲ್ಲ ಒಂದು ಕಡೆ ಖುಷಿ, ಇನ್ನೊಂದು ಕಡೆ ಪೇಚಾಟ. ರಾತ್ರಿಯೆಲ್ಲ ಬಾಲಪ್ಪ ಗೌಡನಿಗೆ ಕಾಫೀ, ಟೀ, ಎಲೆ, ಅಡಿಕೆ, ಬೀಡಿ – ಸಿಗರೇಟು ಜತೆಗೆ, ಎರಡು ಮೂರು ಧರಾಮ್ ’ತೀರ್ಥದ’ ಏರ್ಪಾಟು, ನೂರಾ ಒಂದು ರೂಪಾಯಿ ದಕ್ಷಿಣೆ, ಮರದ ತುಂಬಾಕಾಳು, ಒಂದು ಪಂಚೆ, ಟವಲು ಅಂಗಿ, ಬಿಳಿ ಟೊಪ್ಪಿಗೆ…. ಇಷ್ಟೆಲ್ಲಾ ಕಾಣಿಕೆ ಹೊಂದಿಸುವ ಯೋಚನೆ ತಲೆ ತಿನ್ನತೊಡಗಿತು.
ಅವರವ್ರ ಮನೆಯಂಗಳ ಗುಡಿಸಿ, ಸಗಣಿ ನೀರ್ಹಾಕಿ, ರಂಗೋಲ್ಹಾಕಿ, ಬಟ್ಟೆಬರೇನೆಲ್ಲ ಕೆರೆಕುಂಟೆ ಕಾಲುವೆಗಳಲ್ಲಿ ಅದ್ದೆದ್ದಿ ತೆಗೆದು, ಮನೆಮಂದಿಯೆಲ್ಲಾ ಮಡಿಯಾಗಿ ಊರುಕೇರಿ ಹಬ್ಬದ ಸಡಗರದಲಿ ತೇಲಿತು. ಮಟಮಟ ಮಧ್ಯಾಹ್ನಕ್ಕೆಲ್ಲ, ಕೇರಿ ಹೊರಗಿನ ಪಾತಪ್ಪನ ಗುಡಿ ಬಯಲಾಗೆ, ಕರೆಂಟು ಕಂಬದ ಕೆಳಗೆ, ಹಸಿರು ತಳಿರು ತೋರಣ, ತೆಂಗು, ಬಾಳೆ, ಕಾನಿಗನ ಸೊಪ್ಪಿನ ಚಿಕ್ಕ ಮಂಟಪ ಹಾಕಿ, ಮಂಟಪದ ಒಳಗಡೆ ಐದಾರು ಜನ ನಿಲ್ಲಲು ಕೂಡಲೆಂಬಂತೆ ಮಣ್ಣಿನಿಂದ ’ದಿಬ್ಬ’ ಮಾಡಿ, ಅದರ ಮೇಲೆ ಕಂಬಳಿ ಹಾಸಿ ’ದೊಕ್ಕಲು ದಿಬ್ಬ,’ ’ಜ್ಞಾನದ ದಿಬ್ಬ,’ ಮಹಿಮೆ ದಿಬ್ಬ’ ಎಂದರು! ಅದ್ರಾ…. ಮೇಲಿದ್ದಾಗ ಮಾತ್ರ ’ದೊಕ್ಕಲು ಪುರಾಣ’ ನೆಪ್ಪಾಗುವುದೆಂದೋ…. ದಕ್ಕಲಿಗರು ಹೇಳಿಕೊಳ್ಳುವರಲ್ಲದೆ, ಕಥೆ ಆರಂಭಕ್ಕೆ ಮುನ್ನ, ಕೋರ್ಟಿನ ಕಟಕಟೆಯಲ್ಲಿ ಸಾಕ್ಷಿದಾರರಿಂದ ಪ್ರಮಾಣ ಮಾಡಿಸುವಂತೆ, ಇಲ್ಲಿಯೂ ದಿಬ್ಬದ ಮೇಲೆ, ದಕ್ಕಲಿಗರು ನಿಂತು ’ದಕ್ಕಲು ಪುರಾಣದ ಮೇಲೆ, ಆಣೆ ಮಾಡಿ ’ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ. ಆದಿಜಾಂಬವಂತನ ಮೇಲೆ ಆಣೆ…..’ ಎಂದು, ಮೊದಲ ಸೊಲ್ಲು ನುಡಿವ ’ಸ್ಥಳ ಮಹಿಮೆ’ ಇದೆಂದು ಕೈ ತೋರಿ, ಮಾರೆಪ್ಪ ತನ್ನ ಪಂಡಿತತನವ ಕೇರಿಗರ ಮುಂದೆ ತೋರಿಸತೊಡಗಿದ.
* * *
ಕತ್ತಲಾಗುವುದನ್ನೇ ಜನ ಕಾದರು. ಜಾಗ ಸಿಕ್ಕ ಕಡೆಗೆಲ್ಲಾ ಕಂಬಳಿ, ಜಮಖಾನೆ, ಚಾಪೆ ರಗ್ಗು, ಗೋಣಿಚೀಲಗಳ ಹಾಸಿ ಕುಂತರು. ಹಳೆ ಚಕ್ಕಡಿಗಳನ್ನು ಎಳೆತಂದು, ಅದರೊಳಗೆ ಕುಂತು, ಬಾಲಪ್ಪಗೌಡ ಬರುವುದನ್ನೇ ಕಣ್ಣಲ್ಲಿ ಕಣ್ಣಿಟ್ಟರು.
ಕರೆಂಟಿನ ದೀಪ ಸಾಲದೆಂಬಂತೆ, ಬಣ್ಣ ಬಣ್ಣದ, ಚಿನಕುರಳಿ ದೀಪಗಳೂ… ಅಲ್ಲಲ್ಲಿ ಕಣ್ಣು ಕುಕ್ಕುತ್ತಿದ್ದವು. ನಾಲ್ಕು ಮೂಲೆಗೆ, ನಾಲ್ಕು ಲಾಟೀನು ದೀಪಗಳನ್ನು ’ಪದ್ಧತಿಯಂತೆ’ ತೂಗು ಹಾಕಿದ್ದು ವಿಶೇಷವಾಗಿತ್ತು! ಸಣ್ಣ ಪುಟ್ಟ ಅಂಗಡಿಗಳು ಸಂಜೆಯಿಂದಲೇ ಬೀಗುತ್ತಿದ್ದವು. ಸಕಾಲಕ್ಕೆ ಬಾಲಪ್ಪ, ಆತನಿಬ್ಬರು ಹೆಂಡ್ರು, ನಾಲ್ಕು ಮಕ್ಕಳೊಂದಿಗೆ, ಜನರ ಮಧ್ಯ ಕಂಡಿದ್ದೇ ತಡ, ಚಪ್ಪಾಳೆ ತಟ್ಟಿ, ಸಿಳ್ಳೆ ಹಾಕಿ ಸ್ವಾಗತಿಸಿ, ಕುತೂಹಲ ಭರಿತರಾಗಿ, ಜನಸಾಗರ ಅವರನ್ನೇ ತಿನ್ನುವವರಂತೆ, ನೋಡಿದರು.
ಬಾಲಪ್ಪ, ಮೆಲ್ಲಗೆದ್ದು ನಿಂತು, ಗಂಟಲು ಸರಿಪಡಿಸಿಕೊಂಡ, ಎರಡು ಕೈ ಎತ್ತಿ…. ’ಊರುಕೇರಿ ಗೌಡ್ರಿಗೆಲ್ಲಾ ನಮಸ್ಕಾರ. ಈಗ ದಕ್ಕಲು ಪುರಾಣ ಪ್ರಸಂಗ ನಡೆಸಲು ಅಪ್ಪಣೆ ಕೊಡಬೇಕು’ ಎಂದು, ಕೇರಿ ಮುಖಂಡಾರ ಹೆಸರುಗಳನ್ನು, ಒಂದೊಂದಾಗಿ ಹೇಳಿ, ಕಿನ್ನುರಿಯನ್ನು ಇಂಪಣವಾಗಿ…. ನುಡಿಸುತ್ತಾ ಹಾಡತೊಡಗಿದ.
’ತಂದನಾನು….. ತಂದಾಂದಾ ನಾನು ತಾನೆ/ ಬಂದಾನು ಜಾಂಬುಮುನಿ…..’
ಅರ್ಧ ಗಂಟೆ ಹಾಡಿ ಮುಗಿಸುತ್ತಿದ್ದಂತೆಯೇ, ಬಾಲಪ್ಪನ ಇಬ್ಬರು ಹೆಂಡಿರು, ನಾಕು ಮಕ್ಕಳು, ಸೇರಿ ಕಿವಿಗಿಂಪಾಗುವಂತೆ ಜಾಂಬುವಂತನ ಕುರಿತು ಹಾಡೊಂದು ಗಟ್ಟಿಯಾಗಿ ಹಾಡಿದರು.
’ಕಲ್ಲು ಹುಟ್ಟದ ಮುನ್ನ/ ಕಲ್ಯಾಣ ಹುಟ್ಟದ ಮುನ್ನ/ ಅಲ್ಲೇ ಹುಟ್ಯಾನ….. ಆದಿಜಾಂಬವಂತ….’ ಜನಸಾಗರ ತಲೆದೂಗಿ ಕೇಳುತ್ತಾ ಕುಳಿತಿತು. ಹಾಡು ಮುಗಿಯುತ್ತಿದ್ದಂತೆಯೇ, ಬಾಲಪ್ಪ ಎದ್ದು ನಿಂತ. ಬೈಲಾಟದ ಮಾತುಗಳಂತೆ ಬಲು ಸ್ಪಷ್ಟವಾಗಿ, ಎತ್ತರದ ದನಿಯಲ್ಲಿ, ದಕ್ಕಲಿಗರ ಕುರಿತು ಕತೆ ಹೇಳುತ್ತಾ ನಿಂತ! ಹೊಸತು ಲೋಕ, ಕೇಳರಿಯದ ಜಗತ್ತಿಗೆ, ಜನರ ಕರೆದೊಯ್ದ. ’ರಾತ್ರಿಯೆಲ್ಲ ರಾಮಾಯಣ ಕೇಳಿ, ಬೆಳಿಗೆದ್ದು, ರಾಮ ಸೀತೆಗೆ ಏನಾಗಬೇಕೆಂದು ಕೇಳಿದಂತೆ, ದಕ್ಕಲಿಗರಿಗೆ ಮಾದಿಗರಿಗೆ ಏನು ಸಂಬಂಧಾಂತ ಕೇಳಬೇಡಿ! ದಕ್ಕಲಿಗರೆಂದರೆ….. ಮಾದಿಗರು, ಮೊದಲಿಗರು. ಈ ನೆಲದ ಒಕ್ಕಲಿಗರು….. ಆದಿಜಾಂಬವಂತನ ಮಕ್ಕಳು…. ಶಿವಪಾರ್ವತಿಯ ವಂಶಜರು…. ಬಲಿಚಕ್ರವರ್ತಿಯ ವಂಶಸ್ಥರು…..’ ಪ್ರತಿಯೊಂದಕ್ಕೂ ಕತೆ ಮಾಡಿ ತಾಸುಗಟ್ಟಲೆ ಹೇಳುತ್ತಾ ನಿಂತ.
’ಮಹಾಜನ್ರೆ, ಗೌಡ್ರೆ, ಈಗ ಅಪೂರ್ವ ರಂಜನೀಯ ಕಲೆಗಳಾದ ಕಿನ್ನುರಿ ನುಡಿಸುವ, ನವಿಲು ಕುಣಿಸುವುದನ್ನು, ನನ್ನ ಮಕ್ಕಳಾದ ಗೋವಿಂದಪ್ಪ, ಆನಂದಪ್ಪ ಈಗ ತೋರಿಸುವರೆಂದು, ಹೇಳಿ ಕುಳಿತ. ಅಷ್ಟೊತ್ತಿಗಾಗಲೇ ಮುಂಗೋಳಿ ಕೂಗಿದವು.
ಗೋವಿಂದಪ್ಪ ಕಿನ್ನರಿ ಕೈಗೆತ್ತಿದ. ’ಅನ್ನ ನೀಡುವ ದೈವದಾಣೆ, ಆದಿಜಾಂಬವನಾಣೆ, ಆದಿಶಕ್ತಿ ಮೇಲಾಣೆ’ ಎಂದು ಕಿನ್ನುರಿಗೆ ನಮಸ್ಕರಿಸಿ, ಮೆಲ್ಲಗೆ ಮೀಟುತ್ತಾ, ಮಧುರವಾದ ಧ್ವನಿ ಹೊರಡಿಸುತ್ತಾ ಹೋದ. ಕಿನ್ನರಿ ನಾದವು ಮೋಹಕವಾಗಿ ಕಿವಿಗಿಂಪಾಯಿತು. ಜನಜಂಗುಳಿಯು ತಲೆ ತೂಗಿತು. ಹರಕೆ ಹಾಕುವ ಪರಿಗೆ ಜನ ಸೋತು ಸುಣ್ಣವಾದರು. ತಾಸುಗಟ್ಟಲೆ ಹರಕೆ ಹಾಕುವ ಕಲೆಗೆ ಮಾದಿಗರೂ ಬೆರಗಾದರು! ದಕ್ಕಲು ಪುರಾಣ ಮುಗಿಯೆತೆಂಡು ತಿಳಿದ ಕೇರಿ ಮುಖಂಡ ಮಾರೆಪ್ಪ, ಕೃಷ್ಣ್ತಪ್ಪ, ತಿಮ್ಮಣ್ಣ, ಮರಿಯಣ್ಣ ಕರಿಯಣ್ಣ ಎಲ್ಲಾ ಸೇರಿ, ಮೊರದ ತುಂಬಾ ಜೋಳ, ಹೊಸ ಅಂಗಿ, ಬನಿಯನ್, ಸೀರೆ, ಪಂಚೆ, ಕುಬ್ಸ, ಟವಲ್ಲು, ಎಲೆ – ಅಡಿಕೆ, ನೂರ ಒಂದು ರೂಪಾಯಿ ದಕ್ಷಿಣೆಯೊಂದಿಗೆ ಊದುಗಡ್ಡಿ ಹಚ್ಚಿ ಬಾಲಪ್ಪನ ಮುಂದಿಟ್ಟರು.
’ನನ್ನ ಭಿಕ್ಷುಕನೆಂದು ತಿಳಿದು ಬಿಟ್ಟ್ರೇನ್ರಿ? ನಾನೂ ನಿಮ್ ಮನೆ ಮಗ ಗೌಡ್ರೇ, ನನ್ದು ಸಂಸಾರ ಐತೆ, ಈಂಗೆ ನೀವು ಬೇಬಿಟ್ಟಿ ಮಾಡಿದ್ರೆ ನಾಕೇಳಾಕಿಲ್ಲ ಗೌಡ್ರೇ….’ ದಕ್ಕಲು ಬಾಲಪ್ಪ ಕೇರಿ ಮಖಂಡರೆದುರಿಗೆ ಹಠಕ್ಕೆ ನಿಂತ. ಇನ್ನೊಂದು ಮೊರದ ತುಂಬಾ, ರಾಗಿ ತಂದು, ಕೇರಿ ಮುಖಂಡ್ರು, ಬಾಲಪ್ಪನ ಮುಂದಿಟ್ಟು, ಒಬ್ಬರ ಮುಖ ಒಬ್ರು ನೋಡುತ್ತಾ….. ಕೂತರು.
ಇಷ್ಟಾದ ಮೇಲೂ ’ಖುಷಿಗೆ ಕೊಡ್ರೀ ಗೌಡ್ರೇ…..’ ಬಾಲಪ್ಪ ಮತ್ತೂ ಬಾಯಿಬಿಟ್ಟ! ಕೇರಿ ಮುಖಂಡ್ರಿಗೆ ಮೊದಲೇ ಗೊತ್ತಿತ್ತು. ಬಾಲಪ್ಪ ಮತ್ತೇ ಬಾಯಿ ಬಿಡ್ತಾನಂತ…. ಅದಕೆ ಮಾರೆಪ್ಪ ಜೇಬಿಗೆ ಕೈ ಹಾಕಿ, ಹತ್ತರ ಎರಡು ನೋಟು ಎಳೆದು, ಬಾಲಪ್ಪನ ಮುಂದಿಟ್ಟ! ಬಾಲಪ್ಪನ ಮುಖ, ಹಿಗ್ಗಿ ಹೀರೇಕಾಯಿ ಆಯ್ತು. ಊದುಗಡ್ಡಿಯಿಂದ ಕಿನ್ನರಿಗೆ, ನವಿಲಿಗೆ ಪೂಜೆ ಮಾಡಿ, ಊದುಗಡ್ಡಿಯನ್ನು ಭೂಮಿಗೆ ಸಿಗಿಸಿ, ಹಿಡಿಕಾಳನ್ನು ಮೂರು ಸಾರಿ, ಭೂಮಿ ಮೇಲೆ, ಮೂರು ಗುಡ್ಡೆ ಹಾಕಿ, ಭೂಮಿಗೆ ಅಡ್ಡಾಬಿದ್ದ! ’ಬರ್ತಿನಿ ಗೌಡ್ರೆ’ ಎಂದ್ ಹೇಳಿ ಹೊಂಟ ಗತ್ತು ಗಮ್ಮತ್ತುನ್ನು ಕಣ್ಣಿಗೆ ತುಂಬುತ್ತಾ ನಿಂತರು.
* * *
ಎಳೆಯ ಸೂರ್ಯರಶ್ಮಿ, ಮೋಡದ ಮರೆಯಿಂದ, ಚದುರಂಗ ವಾಡತೊಡಗಿದ್ದ. ರಾತ್ರಿಯೆಲ್ಲಾ “ದಕ್ಕಲು ಪುರಾಣ” ಕೇಳಿದ್ದ ಊರುಕೇರಿ ಮಲಗಿತ್ತು! ಇದ್ದಕ್ಕಿದ್ದಂತೆ ಮನೆಗಳ ಮೇಲೆ ಕಲ್ಲು ಗುಂಡುಗಳು ರಪರಪನೆ ಬಿದ್ದ ಶಬ್ದವಾಯಿತು! ಜನ ಹೌಹಾರಿ ಎದ್ದು ಕುಂತು, ಕಣ್ಣು ಕಣ್ಣು ಬಿಟ್ಟರು. ಕತ್ತಲು! ಮಬ್ಬುಗತ್ತಲು! ಕೊಡದಿಂದ ನೀರು ಸುರಿದಂತೆ, ಆಲಿಕಲ್ಲು ಮಳೆ, ಭೀಕರವಾಗಿ ಸುರಿಯುತ್ತಿತ್ತು. ಇದೇನು ಮಾಯದಂಥಾ ಮಳೇನಾ?! ಜನ ಹಬ್ಬೇರಿಸಿದರು. ನೆಲಮಾಳಿಗೆಗಳು ಸೋರತೊಡಗಿದ್ದವು. ಕೊಪ್ಪೆ ಹೊದ್ದು, ಪಡ್ಡೆ ಹುಡುಗರು, ನುಚ್ಚುಣಿಗೆ ಹಾಕಿ, ಕುಂಬೆ ಏರಿ, ’ಮಂಗೆ’ ತುಳಿಯತೊಡಗಿದರು. ಗುದ್ರ ಮುಚ್ಚಿ ಮುಚ್ಚಿ ಸುಸ್ತಾದರು. ಮೊದಲ ಮಳೆಗೆ ಬಿಡದ ಪ್ರಾರಬ್ಧಗಳು!
ಮಳೆ, ತಿರುಗಿ ತಿರುಗಿ, ಗಟ್ಟಿಸತೊಡಗಿತು. ಮಳೆ, ಗಾಳಿಗೆ, ಮರಗಿಡಗಳು ನೆಲಕ್ಕೊರಗಿದವು. ’ಮಳೆ ಹೋಗಿ ಬರಬಿದ್ದು, ಎರೆಭೂಮಿ ಒಣಗಿದಾಗ, ದಕ್ಕಲರ್ನ ಹುಡುಕಿ ಕರೆತಂದು, ಕತೆ ಹೇಳ್ಸಿದರೆ, ಬಹಳ ಹಿಂದೆ, ಹೀಗೆ ಮಳೆ ಸುರಿತಿತ್ತು….. ಈಗ ದಕ್ಕಲಿಗರಿಂದ, ಕತೆ ಹೇಳ್ಸಿದ್ದರ ಫಲವಿದು, ದಕ್ಕಲು ಪುರಾಣ ಮಹಿಮೆ ಅಂದ್ರೆ ಹಿಂಗೇನೇ…. ದಕ್ಕಲೋರ ಹರಕೆ ಅಂದ್ರೆ…. ಇಳೆ ತುಂಬ ಮಳೆ! ….’ ಹಳೆ ತಲೆಗಳು ’ಕಲ್ಡೆ ಬತ್ಲು’ …. ಕುಟ್ಟುತ್ತಾ… ಎಲೆ, ಅಡಿಕೆ, ಹೊಗೆಸೊಪ್ಪು ನಮಲುತ್ತಾ, ’ದಾಸಿಣಿಕೆ’ ತಿಕ್ಕುತ್ತಾ, ಕಡ್ಡಿಪುಡಿ ಬುಕ್ಕುತ್ತಾ, ಮೋಟು ಬೀಡಿ ಎಳೆಯುತ್ತಾ…. ಅವರವರ ಮೂಗಿನ ನೇರಕ್ಕೆ…. ಮಾತಿಗೆ ಕುಂತರು. ಅತ್ತಕಡೆ, ಪ್ಯಾಂಟು – ಶರ್ಟಿನ ಎಳೆ ನಿಂಬೆಕಾಯಿಗಳು, ’ಇದು ಅಕಾಲಿಕ ಮಳೆ, ಸೈಕ್ಲೋನ್ ಎಫೆಕ್ಟ್’ ಎಂದು ಜರ್ದಾ, ಗುಟ್ಕಾ ಜಗಿಯುತ್ತಾ…. ಮಾತಿಗೆ ನಿಂತರು.
ಮೂರು ದಿನ, ಹಿಡಿದ ಮಳೆ ಬಿಡಲಿಲ್ಲ. ಊರುಕೇರಿಗಳೆಲ್ಲ ನಡುಗಡ್ಡೆಗಳಾದವು. ನೀರಿನ ಮೇಲೆ…. ಮರಗಿಡಗಳು ತೇಲಿದವು. ಕೆರೆಕುಂಟೆ, ಹಳ್ಳಕೊಳ್ಳಗಳೆಲ್ಲ ನೀರು ಹರಿದ ರಭಸಕ್ಕೆ ಜನದನ, ಮಕ್ಳುಮರಿಗಳು, ಬೆಳೆಗಳು, ನೀರಿನಲ್ಲಿ… ತೆಪ್ಪವಾದವು, ಮನೆ ಮಠಗಳು ನೆಲ ಕಚ್ಚಿದವು.
* * *
ಸರಿ ರಾತ್ರಿ ಹೊತ್ತಿನಲ್ಲಿ ’ಕೃಷ್ಣಪ್ಪಗೌಡ…… ಓ….. ಕೃಷ್ಣಪ್ಪ ಗೌಡ್ರೇ…. ’ ಬಾಲಪ್ಪ ಮತ್ತವ್ನ ಹೆಂಡ್ರು, ಮಕ್ಳ ಕೂಗಾಟ, ಹಾರಾಟ….. ಮಳೆಗೂ ಮಿಗಿಲು…… ಕಿವಿಗಪ್ಪಳಿಸಿತು. ಕೇರಿ ಮುಖಂಡ ಕೃಷ್ಣಪ್ಪ, ಕದ ತೆಗೆದು, ಗೋಣು ಹೊರಗಿಕ್ಕಿದ…. ಗೋಣಿ ತಾಟಿನ ಕೊಪ್ಪೆ ಹೊದ್ದು, ಕಾಲು ಭದ್ರವಾಗಿ, ನೆಲಕ್ಕೂರುತ್ತಾ…. ಬಾಲಪ್ಪನ ಮುಂದೆ, ಕೃಷ್ಣಪ್ಪ ಪ್ರತ್ಯಕ್ಷನಾದ! ಮಳೆಯ ನೀರಿಗೂ ಮಿಗಿಲು, ಕಣ್ಣೀರು ಕಪಾಳದ ಮೇಲೆ ಹರಿದಿತ್ತು. ’ಏನ್ ಬಾಲಪ್ಪ ಏನಾಯ್ತು…. ಏನ್ ಇಷ್ಟೊತ್ತಿನಾಗ? ಏನ್ ಬೇಕಾಗಿತ್ ಹೇಳ್ರಿ…..!’ ಕೃಷ್ಣಪ್ಪ ಬಡಬಡಿಸಿದ.
’ಏನಂತಾ ಹೇಳಾನ ಗೌಡ್ರೇ……?! ನನ್ನ ಐದಾರು ಮರಿಮೊಮ್ಮಕ್ಕಳು, ತಿಂಗ್ಳು, ಮೂರು ತಿಂಗ್ಳು, ಆರು ತಿಂಗ್ಳು ಹಸುಗೂಸುಗಳೆಲ್ಲ….. ಹಣ್ಣು ಹಣ್ಣು ತಾಯಿ ಕೂಡಾ ಕುಂಟೆ ನೀರಿನಲ್ಲಿ…. ಕೊಚ್ಚಿಹೋದ್ರು! ಬಿಡಾರ ಹಾರಿ. ಗಾಳಿ ಪಟವಾಗಿ. ಕುಂಟೆ ಬಯಲಲ್ಲಿ ತೇಲಿದ್ರೆ, ದನಕರು, ಹಂದಿ, ಕೋಳಿ, ನಾಯಿ ಮರಿಗಳು. ಕತ್ತೆ, ಕುದುರೆಗಳೂ ಸಹ ಬಡುಕೊಂಡು ನೀರಿನ ಗುಂಟಾ ಹೊಂಟೋದುವು ಗೌಡ್ರೇ…… ಇದ್ದು ಬದ್ದಿದ್ದೆಲ್ಲ…… ಕಾಳುಕಡಿಯೆಲ್ಲ….. ಬಟ್ಟೆಬರೆಯೆಲ್ಲ…. ನೀರು ಪಾಲು…..’ ಗೋಳಾಟ ಒಮ್ಮೆಲೆ ಮುಗಿಲು ಮುಟ್ಟುವಂತಿತ್ತು.
’ಮೊದ್ಲು ಮನೆಯೊಳಗೆ ಬನ್ರೀ…. ಮುಂಜಾನೆ ನೋಡೋಣ….’ ಎಂದು, ಕೃಷ್ಣಪ್ಪ ಎಲ್ಲರ್ನೂ ಒಳಕರೆದ. ’ಅದು ಆಗದು ಗೌಡ್ರೇ. ನಾವೆಲ್ಲಿ ನೀವೆಲ್ಲಿ? ಯಾರನ್ನ ನೋಡಿದ್ರೆ, ಕೇಳಿದ್ರೆ, ಏನ್ ಗತಿ? ನಿಮ್ಗು ಒಳ್ಳೆದಲ್ಲ. ನಮ್ಗು ಛಲೋ ಅಲ್ಲ. ಇಲ್ಲೇ ನಿಲ್ತೀವಿ ನಾವು!’ ಬಾಲಪ್ಪ ಗಟ್ಟಿಯಾಗಿ, ಅಲ್ಲೇ ಕಲ್ಲಾಗಿ ಕೂತ. ’ನಾ ಈ ಕೇರಿಗೆ, ಏಳು ಹಳ್ಳಿಗೇ ನಂಬರ್ ವನ್ ಯಜಮಾನ! ಮೂರಂಕಣ ಮೇಟಿ ಮನೆಯವನಾಗಿ, ಕರದ್ರೆ ಅಲ್ಲೇ ನಿಂತಿರಲ್ಲಾ, ಇನ್ಯಾವಾಗ ಮನುಷ್ಯರಾಗಾದು ನೀವು? ನಿಮ್ಗೆ ಬುದ್ಧಿ ಐತೋ ಇಲ್ಲೋ….?! ಇಂಥಾ ವೇಳ್ಯಾಗ ಜಾತಿಮತ, ಮೇಲು, ಕೀಳು, ನೋಡ್ಬಾರ್ದು! ಏನಾದ್ರು ಅನಾಹುತವಾದ್ರೆ ಯಾರ್ಗೆ ಯಾರಿಲ್ಲ! ನಮ್ ಕೇರ್ಯಾಗ ಜೀವ ಬಿಡಬೇಕಂತಿರೇನು? ಬರ್ರೀ…. ಬರ್ರೀ….’ ಕೃಷ್ಣಪ್ಪ ಜೋರಾದ.
ಚಳಿಗೆ, ಗಡಗಡ ನಡುಗುತ್ತಲೇ, ಕೃಷ್ಣಪ್ಪನ ಹೆಜ್ಜೆಗೆ, ಹೆಜ್ಜೆ ಆದರು. ಸರಿಹೊತ್ತಿನಲ್ಲಿ…. ಬೇಡದವ್ರ್ನ ಕಂಡು ಕೃಷ್ಣಪ್ಪನ ಹೆಂಡ್ತೀ ಮೂರು ಜನ…. ಮಕ್ಕಳು ಕೆಂಡವಾದ್ರು! ಕಣ್ಣಲ್ಲೇ ಅವರ್ನ ಸುಮ್ನಿರ್ಸಿ ’ಬಂದವರಿಗೆ ಮೊದ್ಲು, ಹೊಟ್ಟೆ, ಬಟ್ಟೆಗೆ, ನೋಡ್ರೀ’ ಎಂದು, ಹಳೆ ಸೀರೆ, ಕುಬುಸ, ಪಂಚೆ, ಟವಲು ಅಂಗಿಗಳನ್ನು ಕೊಟ್ಟ. ಉಳಿದಿದ್ದು ಬಳಿದಿದ್ದು ರಾಗಿ ಮುದ್ದೆ, ನವಣೆಬಾನ, ಮಜ್ಜಿಗೆ, ಸಾರು ಉಪಚಾರವಾಯಿತು. ’ಮೂರು ದಿನದಿಂದ ಹೊಟ್ಟೆ, ಬಟ್ಟೆಗೆ, ಮಳೆನೀರೆ ಗತಿ.’ ಎಂದ್ ಹೇಳಿದ್ದು ಕೇಳಿ, ಕೃಷ್ಣಪ್ಪನ ಕರುಳು ಮಿಡಿಯಿತು. ’ಉಸಿರಾಡಾಕ ಪುರುಸೊತ್ತಿಲ್ಲದಂಗೆ ಮಳೆ ಹೊಯ್ದರೆ, ನಿಮ್ಮನಾ…. ಮರೀದಿನ್ನೇನು? ಕೃಷ್ಣಪ್ಪ ತನ್ನ ಅಸಹಾಯಕತೇನ ತೋಡಿಕೊಂಡ.
* * *
ಹೊತ್ತಿಗ್ಮುಂಚೆ ಎದ್ದು ಕುಳಿತ,ಬಾಲಪ್ಪ ಮತ್ತು ಪರಿವಾರದವರಿಗೆ, ಕೃಷ್ಣಪ್ಪ ಮನೆಯೊಳಗಿನ ಪುಟ್ಟಿ ತಟ್ಟೆ, ಲೋಟ, ಗಂಗಾಳ, ಸಿಬ್ಲಿ, ಬಟ್ಟೆ ಬರೆಗಳನಿತ್ತು ಕಳಿಸಿಕೊಟ್ಟ. ಅವರು ಹೊರ ಬರುವುದಕ್ಕೂ ಕೇರಿಯ ಮುಖಂಡರಾದ ಕರಿಯಣ್ಣ, ಮರಿಯಣ್ಣ, ತಿಮ್ಮಣ್ಣ….. ಎದುರಾಗಿ ಗರಬಡಿದಂತೆ ನಿಂತಲ್ಲೇ ಕಂಬವಾದರು. ಇವ್ರ್ನ ಕಂಡು ದಕ್ಕಲಿಗರೂ ಕುಸಿದರು! ’ಬನ್ರಪ್ಪೋ… ಬನ್ರೀ….’ ಎಂದು, ಈ ಮೂವರೂ….. ಬೊಬ್ಬೆ ಇಟ್ಟಿದ್ದೇ ತಡ, ಊರು ಕೇರಿಯ ಮಂದಿ, ದಿಗಿಲುಬಿದ್ದು, ಓಡೋಡಿ ಬಂದು, ಗುಂಪಾದರು. ಬಾಲಪ್ಪ ಕೇರಿಯ ಹೊರಗೆ, ಮೆಲ್ಲಗೆ ’ಮುಸವನಂತೆ’ ನಡೆದ. ತಾನು ಕೂಡುವ ಜಾಗೆಗೆ ಕುಳಿತ. ಪರಿವಾರದವರೆಲ್ಲ ಬಂದು ಅಕ್ಕ-ಪಕ್ಕ ಕುಳಿತರು.
’ಕೃಷ್ಣಾ….. ಹೊರಗೆ ಬಾಲೇ …. ದಕ್ಲಾರಿಗೆ ಹುಟ್ದೋನೆ…. ಇಷ್ಟು ದಿನ್ಕೆ ಕೈಗೆ ಸಿಕ್ಯಲೇ….. ತಡೀ ಮಗ್ನೇ…..’ ತಿಮ್ಮಣ್ಣ, ಅವರಪ್ಪ – ಇವರಪ್ಪನಾ ಕಾಲದಿಂದ ಇದ್ದ ಹಗೆಗೆ ಜೀವಕೊಟ್ಟು, ತೊಡೆ ತಟ್ಟಿ, ಕೂಗಿದ. ಹಾಗಲಕಾಯಿಯಂಗೆ ಮರಿಯಣ್ಣ, ಕರಿಯಣ್ಣ ಗುದ್ದಾಟಕ್ಕೆ ಪುಟಿಮೆಬ್ಬಿಸಿದರು.
ಚಪ್ಪರದಾಗ ನಿಂತವರಿಗೆ ಬರಸಿಡಿಲೊಡೆದಂತಾಯಿತು. ಮಳೆ ನಿಂತಿತೆಂದು ನಿಟ್ಟುಸಿರಿಟ್ಟರೆ, ಅದಕ್ಕೂ ಮಿಗಿಲಾಗಿ, ಮಾತಿನ ಸುರಿಮಳೆ, ಹೆಜ್ಜೇನು ಮುತ್ತಿದಂಗಾಯಿತು. ಅಂಗಾಲೊಳಗಿಂದ ಕೋಪ ಉಕ್ಕಿ ಬಂತು…… ತಿಮ್ಮಣ್ಣನ ಮೇಲೆ ದೊಡ್ಡಾಟದಾಗ ಬಾಲಕೃಷ್ಣ ’ಥಕದಿಮಿ…. ಥಕ….’ ಅಂತಾ ಕುಣಿಯುತ್ತಾ…. ಕುಪ್ಪಳಿಸುತ್ತಾ… ಸುತ್ತಲಪೊಸಿಗೆ ಹಾಕುತ್ತಾ… ಛಂಗನೆ, ನೆಲದ ಮೇಲಿಂದ, ಅಟ್ಟಕ್ಕೇ ಹಾರುವ, ವೇಗದಲ್ಲಿ ಕೃಷ್ಣಪ್ಪ ಓಡೋಡಿ ಬಂದವನೇ ಜಾಡ್ಸಿ ತಿಮ್ಮಣ್ಣನ ಎದೆಗೆ, ಬಲಗಾಲಿಂದ ಒದ್ದ! ಅದೇ ಬಿರುಸಲ್ಲಿ ಮರಿಯಣ್ಣ, ಕರಿಯಣ್ಣನಿಗೆ ಬಲಗೈಯಿಂದ ಬೀಸಿ, ಕಪಾಳಕ್ಕೆ ಹೊಡೆದೇ ಬಿಟ್ಟ! ಜನ ಬಾಯಿ ಮೇಲೆ ಕೈ ಇಟ್ಟು ನಿಂತರು.
“ಕಳ್ ಸೂಳೇ ಮಕ್ಳೇ….. ಏನ್ ಮಾಡ್ಬಾರ್ದು ಮಾಡಿನ್ರಲೇ? ಈ ಊರು ನೋಡಿದ್ದ್ರೆ, ಮುಂದ್ಲೂರು ನೋಡಿಲ್ಲ ನೀವು! ಜೀತ ದುಡೇದು ಬಿಟ್ಟು , ಮತ್ತೊಂದು ಗೊತ್ತಿಲ್ಲ. ನಮ್ಮಪ್ಪ ಬಾಳಿದಂಗೆ ನೀವ್ಯಾರಾದ್ರು ಬಾಳ್ತಿದ್ದೀರಾ? ಬೊಗಳ್ರೀ – ಬೋಳಿ ಮಕ್ಳೇ….. ಕಂಡೋರಿಗೆ ಹುಟ್ಟಿದೋರು ನೀವೂ….. ನಿಮ್ಮಪ್ಪ … ಅಮ್ಮಂದಿರಲೇ…… ನಾನಲ್ಲ.! ಜೀವ ಉಳ್ಸಿಲ್ಹೋಗಿ ದಕ್ಲರ್ನ ಮನೆಯೊಳಕ್ಕೆ ಬಿಟ್ಕೊಂಡಿದ್ದು ತಪ್ಪೇನ್ಲೇ? ನಾನು ಬಿಟ್ಟು ಕೊಂಡ್ರೆ ಈ ನನ್ ಮಕ್ಳುದೇನು ಹೋಯ್ತು…..?!’ ಎಂದು, ಹಲಸಿನ ತೊಳೆ ಬಿಚ್ಚಿಟ್ಟಂಗೆ, ಬಿಚ್ಚಿಡುತ್ತಾ ಹೋದ. ಜನ ತೇರು ನೋಡಿದಂಗೆ ನೋಡುತ್ತಾ ನಿಂತರು.
’ಗೌಡ್ರ ಮನ್ಯಾಗ, ಜೀತ ಮಾಡೋನು, ದುಡ್ದೋನು ಅವನು ಗಂಡಸು. ಕೇರಿಗೇ ದೊಡ್ಡೋನು! ನಿಜವಾದ ಮಣೆಗಾರ! ದಕ್ಲೋರ್ನ ಯಂಗೆ ಕೇರಿಗೆ, ಮನೆಗೆ ಸೇರ್ಸಿದೆ? ನಿನ್ಗೆ ಅವರಿಗೆ ಅನೈತಿಕ ಸಂಬಂಧ ಐತೋ…… ಇಲ್ಲೋ?” ಎಂದು, ತಿಮ್ಮಣ್ಣ ನಾಯಿಮರಿ ಹೋದಂಗೆ ಕೃಷ್ಣಪ್ಪನ ಮೇಲೆ, ಹೋಗತೊಡಗಿದ. ಮಾತಿನ ಕೆಸರಾಟವನ್ನು ಊರುಕೇರಿಯವರು ನೋಡುತ್ತಾ ಕಲ್ಲು ಕಂಬವಾದರು.
’ದಕ್ಲೋರು ಜಾಗದಲ್ಲಿದ್ದು ಕ್ಷಣ ಮಾತಾಡ್ರೀ! ನೆಗಡಿ, ಚಳಿ, ಜ್ವರ, ಬಂದು ಗಡಗಡ ನಡುಗುವ ಸ್ಥಿತಿ ಕಂಡು, ಒಳಗೆ ಕರೆದೆ. ಜಾತಿ ಮತ ಎಲ್ಲಿದೆ? ಮನುಷ್ಯತ್ವ ನೋಡ್ರಿ…… ಸಣ್ಣ ಕುಲದವರಾಗಿ, ನೀವೇ ಈ ರೀತಿ ಭೇದ….. ಎಣಿಸಿದ್ರೆ ಹೆಂಗೆ?’ ಕೃಷ್ಣಪ್ಪ ಮೀಸೆ ಹುರಿ ಮಾಡಿ, ಆರ್ಭಟಿಸಿದ. ಮರಿಯಣ್ಣ ಕಪಾಳ್ನ ಮುಟ್ಟಿ ಮುಟ್ಟಿ….. ನೋಡ್ಕೊಂತಾ ’ಇವ್ನ ಕುಲದಿಂದ ಹೊರಗಿಡೋಣ! ಇವ್ನ ಪಾಲು…. ಹಣ್ಣುಕಾಯ್, ಎಲೆಅಡಿಕೆ, ತೆರವು ….. ಕಟ್ಟ್ಯಾಕ್ ಹಾನೆ…..’ ಎಂದು….. ಹುಚ್ಚುನಾಯಿಯಂಗೆ ಬೊಗಳ್ತಿದ್ದ.
’ನಿಮ್ಮ ಹಣ್ಯಾಗೆ ಬರೆದಿಲ್ಲಲೇ ನನ್ನ ಟಚ್ ಮಾಡೋದು! ಎದೆ ಸೀಳಿದ್ರೆ ಮೂರು ಅಕ್ಷರಯಿಲ್ಲ. ಇಲ್ಲಿಂದ ಮೊದ್ಲು ’ರೈಟ್’ ಹೇಳಿದ್ರೆ ಬದುಕಿದ್ರಿ! ಇಲ್ಲಾ…. ಒಂದು ಕೈ ನೋಡೇ ಬಿಡ್ತೀನಿ ಹುಷಾರ್….’ ಎಂದು, ಕೃಷ್ಣಪ್ಪ ಎರಡೂ ತೋಳು ಏರ್ಸಿದ.
’ಈ ದಕ್ಲೋರಿಗೆ ಬುದ್ಧಿ ಎಲ್ಲೈತಿ? ಅವ್ನು ಕರೆದ್ರೆ ಇವ್ರು ಮನೆಗೇ ನುಗ್ಗಾದಾ? ಅವ್ನು ಊರುಕೇರಿಗೆ ಅಂಬೇಡ್ಕರ್ ಆಗ್ಯಾನೇನು? ಇನ್ಮೇಲೆ ಇವ್ರಿಗೆ ಯಾರೂ ಬಾನ, ನೀರು ಬಟ್ಟೆ, ಬರೆ, ಕಾಳು, ಕಡಿ, ರಕ್ಕಾ…. ಕೊಡ್ಬಾರ್ದು…….’ ಮರಿಯಣ್ಣ, ತಿಮ್ಮಣ್ಣ, ಕರಿಯಣ್ಣ ಅವ್ರ ಹೆಂಡ್ರು ಮಕ್ಳು ಸಿಡಿ ಸಾಪಿಸಿದರು.
’ಗೌಡ್ರೇ…. ಅಡ್ಡ ಬೀಳ್ತೀವಿ. ನಾವು ಹಾದ್ರ ಮಾಡೋ ಜನ್ರಲ್ಲ! ಕೇರಿ ಕೇರಿಗೆ ಆದಿಜಾಂಬುವಂತನ ಪ್ರಸಂಗ ಹೇಳಾರು! ಭಾರೀ ಮಳೆಗಾಳಿಗೆ ಹೆದ್ರಿ, ಗೌಡ್ರು ಕರೆದ್ರು ಅಂತಾ, ಜೀವ ಬಿಗಿ ಹಿಡಿದು, ಹೋಗಿದ್ದು ಸತ್ಯವಿದೆ. ಹೊಟ್ಟೆ ಮ್ಯಾಲೆ ಬಡೀಬೇಡ್ರಿ ಗೌಡ್ರೇ….. ತಪ್ನ ಕ್ಷಮಿಸಿ, ದೊಡ್ಡೋರಾಗ್ರಿ…. ಹೆಂಡ್ರುಮಕ್ಳು ಮಕ ನೋಡಿ ಗೌಡ್ರೇ….. ಇನ್ಮೇಲೆ ಈ ರೀತಿ ತಪ್ಪು ಮಾಡಲ್ಲ……’ ಬಾಲಪ್ಪ ಕೈ ಮುಗಿಯುತ್ತಾ…. ಉದ್ದೂಕ ಅಡ್ಡ ಬಿದ್ದ. ಯಾರ ಮನಸ್ಸು ಕರಗಲಿಲ್ಲ.
ಹೊತ್ತು ನೆತ್ತಿಗೇರಿತು. ಕೃಷ್ಣಪ್ಪ ಸುಡುಸುಡೋ ಬಾನ, ಸಾರು, ನೀರು….. ಬೇಕೆಂತಲೇ ಎಲ್ರ ಎದುರಿಗೇ ತಂದು, ಇನ್ನೇನು ದಕ್ಲೋರಿಗೆ, ಹಾಕಬೇಕು. ಅಷ್ಟರಲ್ಲಿ ತಿಮ್ಮಣ್ಣ, ಮರಿಯಣ್ಣ, ಕರಿಯಣ್ಣ ಅವ್ನ ಹೆಂಡ್ರು ಮಕ್ಳು ಓಡೋಡಿ ಬಂದು, ಕೈಯಿಂದ ಕಿತ್ತು ಮುಗಿಲಿಗೆ ಒಗೆದ್ರು! ಅನ್ನ, ಸಾರು, ನೀರು ಓಕುಳಿಯಾಗಿ ಹೋಯ್ತು. ಎಲ್ಲರ ಮಾತುಗಳೂ ’ಟ, ಠ, ಡ, ಢ, ಣ…..’ ಆದವು! ಕಾಲಿನವು ಕೈಗೆ ಬಂದವು. ಬಾಯಿ ಹೊಲಸಾಯಿತು. ಜನ ಮಾತ್ರ ತಲೆತಲೆ ಕೊಡವಿಕೊಂಡು ಮಸಿ-ಮುಸಿ….. ನಗುತ್ತಾ…. ಗೊಂಬೆಯಾದರು.
ಬಾಲಪ್ಪ, ಆತನ ಪರಿವಾರ, ಬಿಸಿಲಿನ ಝಳಕ್ಕೆ ಹಸಿದು, ಬಸವಳಿದರು. ಯಾರೊಬ್ಬರೂ ಉಣ್ಣಾಕೆ ನೀಡಲು ಮುಂದಾಗಲಿಲ್ಲ. ಬೇಸತ್ತ ಬಾಲಪ್ಪ ಕಣ್ಣೀರಿಟ್ಟ. ’ಬರುಬಾರದ ಮಳೆ ಬಂತು! ಥೂ! ಇದ್ಯಾಥರ ಜನ್ಮ? ಕೇರಿ ಹೊರಗಿನ ಬದುಕು. ತಿರಿದು ತಿನ್ನಾರ್ನ ಹಿರಿದು ತಿನ್ನಾದು? ನಮ್ಗೆ ಗತಿಯಿಲ್ಲ. ನಿಮ್ಗೆ ಮತಿಯಿಲ್ಲ. ಈ ಕೇರ್ಗಿ ಯಟ್ಟಾವಟ್ಲಿ, ಬಿದ್ದ ಮನೆ ಎದ್ ಹಾಳದಂಗಿರ್ಲಿ, ಎದ್ದ ಮನೆ ಬಿದ್ ಹೋಗ್ಲಿ, ಹೊಟ್ಟೆ ಬಟ್ಟೆಗಿಲ್ದೆ ಮಧ್ಯಾಹ್ನದಾಗ ವರುಗ್ರೀ” ಎಂದು… ಬಾಲಪ್ಪಗೌಡ, ಕಣ್ಣೀರಿಡುತ್ತಾ ಶಪಿಸಿ, ಮಣ್ಣು ತೂರಿದ. ದೊಡ್ಡ ಗುಂಡು ಕಲ್ಲು ತಂದು, ನೆಲದ ಮೇಲೆ, ಹರವಿದ್ದ ತಟ್ಟೆಲೋಟ, ಗಂಗಾಳ, ಕ್ವಣಿಗಿ ಎಲ್ಲವುಗಳ ಮೇಲೆ ಎತ್ತೆತ್ತಿ ಹಾಕಿ, ಪುಡಿ -ಪುಡಿ ಮಾಡಿದ. ’ಇಲ್ಲಿಗೆ ಈ ವೃತ್ತಿ, ಈ ಹಾಳಾದ ದರಿದ್ರ ಪದ್ಧತಿ… ಬೆನ್ನು ಬಿದ್ದ ಶನಿನೇ…… ಹೋಯ್ತು. ನಡ್ರೀ …. ಇನ್ಮೆಲೆ ಇವ್ರು ಯಾರೋ? ನಾವು ಯಾರೋ? ದುಡಿದು ತಿನ್ನಾನ ನಡ್ರೀ…..’ ಎಂದು, ಬಾಲಪ್ಪ ತನ್ನ ಪರಿವಾರನ್ನೆಲ್ಲ ….. ತೆಕ್ಕೆಗೆ ಬಾಚಿಕೊಂಡು, ಸೂರ್ಯ ಮುಳಗೋ ಕಡೆ… ಹೆಜ್ಜೆ ಕಿತ್ತಿಟ್ಟ.
*****