೧
ಸತ್ತವರ ಬದುಕಿಸಲು ನಾವರಿಯದಿರುವಾಗ
ಜೀವಿಪರ ಕೈಯಾರೆ ಕೊಲ್ಲುವುದು ತಪ್ಪು
ವಿಶ್ವದ ಸಮಸ್ತ ಮಾನವರೊ೦ದೆ ಜಾತಿಯಿಹ-
ರಂತರದ ಕಲ್ಪನೆಯ, ಬರೆ ಮೌಢ್ಯ-ಬೆಪ್ಪು!
೨
ದಯೆಯೆ ಧರ್ಮದ ಮೂಲ, ಹಿಂಸೆಯೆಂದರೆ ಪಾಪ
ಇದ್ದಷ್ಟು ಸಂತೃಪ್ತಿ, ಮಾನವ ಪ್ರೇಮ-
ಇವೆ ಸತ್ಯ ಸಂಸ್ಕೃತಿಯ ಸಾರ ಸರ್ವಸ್ವವೆನೆ
ಭೂಷಣವೆ ಹಿಂದಿನಂತೆಯೆ ಯುದ್ಧ ಕಾಮ?
೩
‘ಸಾಹಿತ್ಯ- ವಿಜ್ಞಾನ- ಕಲೆಗಳಲ್ಲಿ ಮು೦ದಿಹೆವು
ನಾಗರೀಕತೆಯಲ್ಲಿ ಪ್ರಗತಿಯಾ೦ತಿಹೆವು’
ಎಂಬ ಜಂಭದ ರಾಷ್ಟ್ರಗಳಲಿ ಕಾಡಿನ ಪಶುಗ-
ಳಂತೆ ಮಾರಣಯಜ್ಞ ಲಜ್ಜೆಗಾಸ್ಪದವು
೪
ಎಷ್ಟೆಷ್ಟೊ ಸತಿಯರನು ಪತಿಗಳಿಂದಗಲಿಸಿದ,
ಮಕ್ಕಳನು ಕ೦ಬನಿಯ ಮಳೆ ಕರೆಯಿಸಿರುವ,
ಬಂಧು-ಬಳಗವ ಗೆಳೆಯ-ಗೆಳತಿಯರ ಕೂಗಿಸಿದ-
ರಣ ಯಾಗಕಾಯ್ತು ಪೂರ್ಣಾಹುತಿಯ ಭಾವ!
೫
ಸೋತವರ ಗೆದ್ದವರು ಕಾಲ್ಕೆಳಗೆ ತುಳಿಯುವುದು,
ಸ್ವಾರ್ಥ ಸಂಪೋಷಣೆಗೆ ಮರ್ದನದ ರೀತಿ,
ರಾಷ್ಟ್ರ-ರಾಷ್ಟ್ರಗಳಲ್ಲಿ ಭೇದ ಕಲ್ಪನೆಯಿಷ್ಟು
ಬರುವ ಯುದ್ಧಕೆ ಮೂಲ; ಮರೆಯುವುದನೀತಿ
೬
ವಿಶ್ವ ಸಾಗರದಲ್ಲಿ ಯುದ್ದೋರ್ಮಿ ನಿಂತಿರಲಿ!
ದ್ವೇಷಾಗ್ನಿ ಯುದ್ಗಮಿಸಿ ಕಿಡಿ ಸಿಡಿಯದಿರಲಿ!
ಗಾಳಿಯಲಿ ಸರ್ವ ಸಮತಾ ಭಾವ ಕಂಪಿಡಲಿ!
ವಿಶ್ವ ಶಾಂತಿಯ ಕಹಳೆ ಭೋರ್ಗರೆಯತಿರಲಿ!
*****
೧೯೪೫
ದ್ವಿತೀಯ ಮಹಾಯುದ್ಧದ ವಿಜಯ ದಿನಾಚರಣೆಯ ನೆನಪಿಗಾಗಿ








