ನಿನ್ನ ಹರಕೆಯ ಕೈಯ ಹೊಂದಿ ತಣಿದೆನು ತಾಯೆ
ಬನ್ನವೇನೇ ಬರಲಿ, ಇರಲಿ ನಿನ್ನ ಭಯಛಾಯೆ ! || ಪ ||
ನಾಡನೆಲೆಯನು ತೊರೆದು ದೂರದೂರಕೆ ನಡೆದು
ಕಾಡುಕತ್ತಲೆಯಲ್ಲಿ ನಾ ಸಾಗಿರೆ
ನೇಸರನ ಮರೆಮಾಡಿ ನೆರೆದ ಮರಬಳ್ಳಿಗಳು
ಹಾಸಿರುವ ನೆರಳಲ್ಲಿಯೇ ಬಾಗಿರೆ. ೧
ಏನೋ ಏಕೋ ಕುಳಿತೆನಲ್ಲಿರುವ ಕಲ್ಲಿನಲಿ
ಮುನ್ನರಿವು ಇಲ್ಲದಲೆ ಮರುಳನಂತೆ
ಕುಳಿಕುಳಿತು ತುಳಿತುಳಿದು ಕಲ್ಲಹಾಸುಗೆಯನ್ನು
ಕೆಳಗಾಲಿನಿಂದೊದೆದೆ ಗರುವನಂತೆ. ೨
ಮರುಚಣದಿ ಕಣ್ಣಿಳಿಸಿ ಕೆಳಕಂಡೆ ಬೆರಗಿನಲಿ
ಹಿರಿಯ ಚೆಲುವಿನ ದಿವ್ಯ ಮೂರ‍್ತಿಯೊಂದು
ಬೇವಸದಿ ಮೈಯೆಲ್ಲ ಉರಿಯದ್ದು ಮೇಲೆದ್ದೆ
ಸಾವಸಂಕಟದಲ್ಲಿ ನೊಂದು ಬೆಂದು. ೩
ತುಳಿದ ಕಲ್ಲನು ತೊರೆದು ಮರುಕದುರಿಯಲಿ ನಿಂದು
ಹೊಳೆವ ಚಿನ್ನದ ಬೊಂಬೆಯಾಗಿ ನಿಲಲು
ಕುರುಡು ಕಂಗಳತನವು ಕಳೆದು ತಿಳಿವಿನ ತೊರೆಯು
ಗರುವಬಿಂಕವ ಮೀರಿ ಹರಿಯುತಿರಲು. ೪
ನೆಲದಿಂದಲೊಯ್ಯೊಯ್ಯನೇರಿ ನೀ ಬೆಳೆಬೆಳೆದು
ಕೆಲದಲ್ಲಿ ನಿಂದೆಯಲ ಲೋಕಮಾತೆ !
ನಿನ್ನ ನೋಟದಿ ನಾನು ಬಿಲ್ಲುಬೆರಗಾಗಿರಲು
ನನ್ನ ತಲೆಯಲಿ ನಿನ್ನ ಕೈಯನಿತ್ತೆ. ೫
ಅಭಯಹಸ್ತವ ಕಂಡು ಕೃಪೆಯ ಕಡಲೆನ್ನೆಡೆಗೆ
ಶುಭದ ತೆರೆಗೈಯ ಸಾರ‍್ಚಿತು ಎಂದೆ
ಕನಸಿನಲಿ ಕಂಡರೂ ಬಾಳ ಬೆಳಗಿಸುವ ಹಿರಿ-
ನನಸೆಂದು ನಾ ಹಿಗ್ಗಿನಲಿಯೆ ಮಿಂದೆ. ೬
ದುಕ್ಕದುಮಾನಗಳ ಸಿಡಿಲಿನೇಟಿಗೆ ಸಿಲುಕಿ
ತಕ್ಕ ತಿಳಿವನು ಪಡೆದು ಅರಿತೆನೀಗ
ಆರಡಿಯ ನಾನಿಡಲು ಸರಿದಾರಿಯಲಿ ನೀನು
ನೂರುಗಾವುದ ಹರಿದು ಒಲಿವೆ ಬೇಗ. ೭
ಮನುಜಮತಿಯರಿಯಲಾರದ ದಯೆಯ ಅಪರಿಮಿತ
ಕಣಜವೇ ! ಧನ್ಯನಾನಿಂದು ಧನ್ಯ !
ನಿನ್ನ ಕಂಡಿಹ ಕನಸು ನಿಚ್ಚ ನಂದಾದೀಪ-
ದನ್ನ ವಾಗಲಿ ಬೆಳೆಯೆ ನನ್ನ ಪುಣ್ಯ !
*****








