ಭೀಮನಾಯಕನ ಮನೆಯಲ್ಲಿ ಗದ್ದಲವೋ ಗದ್ದಲ. ಹೆಣ್ಣುಮಕ್ಕಳ ಕೂಗಾಟ, ಅಳುವುದು, ಮಕ್ಕಳ ಚೀರಾಟದಿಂದ ಮನೆಯು ತುಂಬಿತ್ತು. ಅತ್ತು ಅತ್ತು ಎಲ್ಲರ ಮುಖವೂ ಊದಿ ಹೋಗಿತ್ತು. ಊರಿನ ದೊಡ್ಡ ಸಾಹುಕಾರನ ಕಾಲು ಹಿಡಿದುಕೊಂಡು “ನಮ್ಮಪ್ಪನ ಹೆಣ ಬಿಟ್ಟುಬಿಡ್ರಪ್ಪೋ, ಹೆಣಾನ ಸುಡುಗಾಡಿಗೆ ಒಯ್ಯಲು ಬಿಡ್ರಪ್ಪೋ” ಎಂದು ಹೊಯ್ಕೊಳ್ಳುತ್ತಿದ್ದರು; ಭೀಮನಾಯಕನ ಮಕ್ಕಳು.
ಭೀಮನಾಯ್ಕನು ಸಾಹುಕಾರ ನಾಗಪ್ಪನ ಹತ್ತಿರ ಐವತ್ತು ವರ್ಷಗಳಿಂದ ಜೀತದಾಳಾಗಿದ್ದ. ಅವನ ದೇಹವು ಸವಕಲು ಬರುವವರೆಗೂ ದುಡಿಯುತ್ತ ಬಂದಿದ್ದ. ಮಕ್ಕಳು ದೊಡ್ಡವಾಗಿದ್ದವು. ಅವರ ಸಂಸಾರವು ಬಡತನವೆಂಬ ಪೆಡಂಬೂತದಿಂದ ತಡೆಯಲಾರದೆ ತತ್ತರಿಸಿತ್ತು. “ಸಾಹುಕಾರನ ಹತ್ತಿರ ಸ್ವಲ್ಪ ದುಡ್ಡಾದರೂ ತೆಗೆದುಕೊಂಡು ಬರಬಾರದೆ” ಎಂದು ಭೀಮನಾಯ್ಕನ ಹೆಂಡತಿ ಜೋರು ಮಾಡಿದಳು. ಆಗ ಸಾಹುಕಾರನ ಹತ್ತಿರ ಹೋಗಿ “ಸಾಹುಕಾರ್ರೆ ಮಕ್ಕಳು ಉಪವಾಸ ಮಲಗಿವೆ ಅಕ್ಕಿ ತರಬೇಕು… ಅದಕ್ಕೆ ಸ್ವಲ್ಪ ದುಡ್ಡು ಕೊಡ್ರಿ, ನಿಮ್ಮ ತೋಟದಾಗೆ ಮಕ್ಕಳನ್ನು ಕೆಲಸಕ್ಕೆ ಬಿಡ್ತೀನಿ” ಎಂದ, ಸಾಹುಕಾರ ಖುಷಿಯಾಗಿ ೨ ಸಾವಿರ ರುಪಾಯಿ ಕೊಟ್ಟಿದ್ದ. ಅದು ಇಂದಿಗೆ ೪ರಷ್ಟಾಗಿ ೮ ಸಾವಿರವಾಗಿತ್ತು. ಸಾಹುಕಾರನ ಕೃಪೆಯಿಂದ.
ಅಂದು ಬೆಳಿಗ್ಗೆ ಭೀಮನಾಯ್ಕ ಸತ್ತಿದ್ದ. ಅವನ ಸಾವಿನ ಸುದ್ದಿ ಕೇಳಿದಾಕ್ಷಣ ಸಾಹುಕಾರನು ಎದೆಯೊಡೆದಂತಾಗಿ ಸಾಲದ ಹಣವನ್ನು ವಸೂಲಿ ಮಾಡಲು ಸ್ವತಃ ತಾನೇ ಬಂದಿದ್ದ. “ಎಲಾ ಮಕ್ಕಳ್ರಾ, ನಿಮ್ಮಪ್ಪ ಮಾಡಿದ್ದ ಸಾಲ ಮೊದಲು ಮುಟ್ಟಿಸಿ ನಂತರ ಹೆಣವನ್ನು ಎತ್ತಿ” ಎಂದು ಕೂಗಾಡುತ್ತಿದ್ದ. ಯಾರು ಏನು ಹೇಳಿದರೂ ಕೇಳದೆ ಸಾಹುಕಾರ ಪಟ್ಟು ಹಿಡಿದಿದ್ದ.
ಸಾಲವನ್ನು ಹೇಗಾದರೂ ಮಾಡಿ ವಸೂಲಿ ಮಾಡಬಹುದು, ಮನೆಗೆ ಒಬ್ಬ ಆಳು ಬೇಕಾಗಿತ್ತು. ಹಿರಿಯ ಮಗನಾಗಿದ್ದ ರಾಮನಾಯ್ಕನನ್ನು ತನ್ನ ಮನೆಗೆ ಜೀತದಾಳಾಗಿ ದುಡಿಯಲು ಎಲ್ಲಾ ಜನರು ಹೇಳಲಿ ಎಂಬ ಯೋಚನೆ ಅವನದಾಗಿತ್ತು. ಈ ಯೋಚನೆಯಿಂದಾಗಿ ಸಾಹುಕಾರ ಹೆಣವನ್ನು ಎತ್ತಲು ಬಿಟ್ಟಿರಲಿಲ.
ಕೊನೆಗೆ ಊರಿನ ಪ್ರಮುಖರು ರಾಮನಾಯ್ಕನನ್ನು ಸಾಹುಕಾರನ ಮನೆಯಲ್ಲಿ ದುಡಿಯಲು ತಿಳಿಸಿ ಅವನನ್ನು ಒಪ್ಪಿಸಿ, ಹೆಣವನ್ನು ಸ್ಮಶಾನಕ್ಕೆ ಎತ್ತಿಸಿದರು. ಭೀಮನಾಯ್ಕನ ಹೆಂಡತಿ ದ್ಯಾಮವ್ವ ಮುದುಕಿ, ಹಿರಿಮಗನಾದ ರಾಮನಾಯ್ಕ ಕಟ್ಟುಮಸ್ತಾದ ಆಳು. ಕುಸ್ತಿಯಲ್ಲಿ ಹತ್ತು ಜನರನ್ನು ಬೇಕಾದರೂ ಎತ್ತಿ ಹಾಕುವ ಶಕ್ತಿಯನ್ನು ಪಡೆದಿದ್ದ. ಸಾಹುಕಾರನ ಕಣ್ಣು ಮಾತ್ರ ಅವನ ಮೇಲಿತ್ತು. ಇನ್ನು ಅವನ ತಮ್ಮ ಪುಟ್ಟನಾಯ್ಕ, ತಂಗಿ ಪಾರವ್ವ, ಇವರನ್ನು ಅನಾಥರನ್ನಾಗಿ ಬಿಟ್ಟು ಇಹ ಲೋಕವನ್ನು ತ್ಯಜಿಸಿದ್ದ. ಅವನು ತನ್ನ ಮಡದಿ ಮಕ್ಕಳಿಗೆ ಬಿಟ್ಟಿದ್ದು ಸಾಲ ಮಾತ್ರ.
ತಂದೆಯು ಸತ್ತ ಚಿಂತೆ ಮನದಲ್ಲಿ ಇನ್ನೂ ಹಸಿಹಸಿಯಾಗಿಯೇ ಇತ್ತು. ಆಗಲೇ ರಾಮನಾಯ್ಕನನ್ನು ಕೆಲಸಕ್ಕೆ ಕರೆಯಲು ಸಾಹುಕಾರನೇ ಬಂದಿದ್ದ. ಅವನಿಗೆ ದಿಕ್ಕೇ ತೋಚದಂತಾಗಿ ಗರ ಬಡಿದವನಂತೆ ಕುಳಿತಿದ್ದ.
“ಏಳಲೇ ಮಗನ, ನಿಮ್ಮಪ್ಪನ ಸಾಲ ಯಾರು ತೀರಿಸಬೇಕಲೇ?”
“ಬೇಡ ಸಾಹುಕಾರ್ರೇ, ಬೇಡ, ನಮ್ಮನ್ನು ಬಿಟ್ಟುಬಿಡ್ರಿ” ಎಂದು ತಾಯಿ, ತಂಗಿ, ತಮ್ಮ ಎಷ್ಟು ಕೇಳಿಕೊಂಡರೂ ಬಿಡಲಿಲ್ಲ. ಸಾಹುಕಾರ ಬಲವಂತವಾಗಿ ಕೆಲಸಕ್ಕೆ ಎಳೆದುಕೊಂಡು ಹೋಗಿದ್ದ.
ದಿನಗಳು ಉರುಳಿದವು, ಕೆಲಸ ಮಾತ್ರ ಹೆಚ್ಚಾಗಿತ್ತೇ ವಿನಹಃ ಅವರ ಮನೆಗೆ ಕೊಡಬೇಕಾದ ಕಾಳು ಕಡಿಗಳನ್ನು ಸರಿಯಾಗಿ ಕೊಡುತ್ತಿರಲಿಲ್ಲ. ಆದರೂ ಸಹ ಹೊಲಗದ್ದೆಗಳಲ್ಲಿ ರಾಮನಾಯ್ಕ ಆತನ ತಾಯಿಯನ್ನು ಚೆನ್ನಾಗಿ ದುಡಿಸಿಕೊಳ್ಳುತ್ತಿದ್ದ. ಜೊತೆಯಲ್ಲಿ ಉಳಿದ ಎರಡು ಮಕ್ಕಳಿಗೂ ಸಹಾ ಕೆಲಸ ಹಚ್ಚುತ್ತಿದ್ದ.
ಇತ್ತ ಊರಿನೊಳಗೆ ಸಡಗರವೋ ಸಡಗರ, ದ್ಯಾಮವ್ವನ ಜಾತ್ರೆ ಎಲ್ಲರೂ ಸಂತೋಷದಿಂದ ಇದ್ದಾರೆ. ರಾಮನಾಯ್ಕ, ಅವನ ತಾಯಿ, ತಂಗಿಯರಿಗೆ ಮಾತ್ರ ಸಂತೋಷವಿರಲಿಲ್ಲ. ಮನೆಮಂದಿಯೆಲ್ಲಾ ಸಾಹುಕಾರನ ಹೊಲ್ದಾಗ ದುಡೀಬೇಕು. ರಾಮನಾಯ್ಕನ ಮನಸ್ಸು ಮಾತ್ರ ಜಾತ್ರೆ ಮಾಡಬೇಕು, ಜಾತ್ರೆಯಲ್ಲಿ ತಂಗಿಗೆ ಹೊಸಬಟ್ಟೆ, ಬಳೆ ಕೊಡಿಸಬೇಕೆಂದು ಹಂಬಲಿಸಿತ್ತು. ಅವನ ಹಂಬಲಕ್ಕೆ ಸಾಹುಕಾರ ಕೊಳ್ಳಿ ಇಟ್ಟಿದ್ದ. ಆದರೇನು ಮಾಡುವುದು ಜಾತ್ರೆಯು ನಿಲ್ಲದೇ ಆರಂಭವಾಗಿತ್ತು.
ಊರಿನ ದ್ಯಾಮವ್ವನ ಜಾತ್ರೆಯ ಉತ್ಸವವು ಬಹಳ ವಿಜೃಂಭಣೆಯಿಂದ ನಡೆಯುತ್ತಿತ್ತು. ಅದರ ಅಂಗವಾಗಿ ಕುಸ್ತಿಗಳನ್ನು ಏರ್ಪಡಿಸಿದ್ದರು. ಸುತ್ತಮುತ್ತಲಿನ ಹಳ್ಳಿಯ ಪೈಲ್ವಾನರು ಬಂದಿದ್ದರು. ಅವರ ಜೊತೆಯಲ್ಲಿ ಅದೇ ಊರಿನ ಪೈಲ್ವಾನರುಗಳಲ್ಲಿ ರಾಮನಾಯ್ಕನು ಒಬ್ಬನಾಗಿದ್ದ, ಊರಿನ ಜನರ ಕಣ್ಣೆಲ್ಲಾ ಇವನ ಮೇಲೆ ಇತ್ತು. ಊರಿನ ಸಾಹುಕಾರರು ಸಹ ಹಾಜರಿದ್ದರು. ಅವರ ಜೊತೆಯಲ್ಲಿ ಸುಂದರ ದುಂಡು ಮುಖದ ಅಪ್ಸರೆಯನ್ನು ಮೀರಿಸುತ್ತಿದ್ದ ಮಗಳು ಚಂದ್ರಲೇಖಳು ದೊಡ್ಡ ಸಾಹುಕಾರ ನಾಗಪ್ಪನೊಂದಿಗೆ ಬಂದಿದ್ದಳು. ಆಕೆಯ ಕಣ್ಣು ಮಾತ್ರ ರಾಮನಾಯ್ಕನನ್ನು ಹುಡುಕುತ್ತಿದ್ದವು.
ಸುತ್ತಮುತ್ತಲಿನ ಹಳ್ಳಿಯ ಜನರು ಅಖಾಡದ ಸುತ್ತಲೂ ನೆರೆದಿದ್ದರು. ಗದ್ದಲವೋ ಗದ್ದಲ. ಅಲ್ಲದೇ ಕುಸ್ತಿ ಪಟುಗಳನ್ನು ಅಖಾಡದ ಸುತ್ತಲೂ ಅವರನ್ನು ಹಲಗೆಯ ಸಪ್ಪಳದೊಂದಿಗೆ ಪರಿಚಯ ಮಾಡಿಸುತ್ತಿದ್ದರು. ಕುಸ್ತಿ ಆರಂಭವಾದೊಡನೆ ಎಲ್ಲಾ ಪಟುಗಳು ಒಂದು ಕಡೆ ಕುಳಿತರು. ರಾಮನಾಯ್ಕನು ತನ್ನ ಪ್ರತಿಸ್ಪರ್ಧಿಯನ್ನು ಹುಡುಕುತ್ತಿದ್ದನು. ಪ್ರತಿವರ್ಷದ ಅಖಾಡದ ಬಳೆಯನ್ನು ರಾಮನಾಯ್ಕನೇ ಪಡೆಯುತ್ತಿದ್ದ. ಈ ಸಾರಿ ಯಾರ ಪಾಲಿಗೋ ಎಂದು ಯೋಚಿಸುವಂತೆ ಮಾಡಿತ್ತು.
ರಾಮನಾಯ್ಕ ಸಾಹುಕಾರನ ಜೀತದಾಳಾಗಿ ಕೆಲಸ ಮಾಡುತ್ತಿದ್ದ, ಸರಿಯಾಗಿ ಊಟವಿಲ್ಲ. ನಿದ್ದೆ ಇಲ್ಲ. ಸಂಸಾರವನ್ನು ನಡೆಸುವ ಹೊಣೆಗಾರಿಕೆ ಅವನ ಮೇಲೆ ಬಿದ್ದಿತ್ತು. ಜೊತೆಯಲ್ಲಿ ತಂದೆಯನ್ನು ಕಳೆದುಕೊಂಡ ಬಳಿಕ ಅವನು ಒಂದು ದುಡಿಯುವ ಎತ್ತಿನಂತೆ ಆಗಿದ್ದು, ಇವೆಲ್ಲದರ ನಡುವೆ ಅವನು ಕುಸ್ತಿಯನ್ನು
ಆಡಲೋ, ಬಿಡಲೋ ಎಂದು ಯೋಚಿಸುತ್ತಿದ್ದ, ಅಷ್ಟರಲ್ಲಿಯೇ “ಏ ರಾಮಾ ಯಾಕೋ ಒಂಥರಾ ಇದ್ದೀಯಾ”
“ಏನು ಇಲ್ರವ್ವ”
“ನನ್ನ ಹತ್ತಿರ ಹೇಳಲ್ವೇನೋ”
ಅಂತಾದ್ದೇನೂ ಇಲ್ರವ್ವ
‘ಇಲ್ಲ ನೀನು ಏನನ್ನೋ ಮುಚ್ಚಿಡ್ತಿದ್ದಿ, ನಿನು ಹೇಳಲೇಬೇಕು’ ಎಂದು ಚಂದ್ರಲೇಖಳು ಪಟ್ಟು ಹಿಡಿದಳು.
‘ನಾನು ಈ ಸಾರಿ ಕುಸ್ತಿ ಆಡುವುದಿಲ್ಲ’ ಎಂದಾಗ,
ಚಂದ್ರಲೇಖಳ ಮನಸ್ಸು ಒಂದು ರೀತಿ ಆಯಿತು. ಆದರೂ ಬಿಡದೇ ‘ನೀನು ಈ ಬಾರಿ ಅಖಾಡದ ಬಳೆ ಗೆಲ್ಲುತ್ತೀಯ. ನೀನು ಹಿಂಜರಿಯಬೇಡ, ಮನಸ್ಸು ಮಾಡು’ ಎಂದು ಅವನ ಕೆನ್ನೆ ಸವರಿ ಪ್ರೋತ್ಸಾಹಿಸಿದ್ದಳು. ಅಂತೂ ಕಡೆಗೆ ಹೇಗೋ ಮಾಡಿ ಅವನನ್ನು ಅಖಾಡಕ್ಕೆ ಇಳಿಯುವಂತೆ ಮಾಡಿದ್ದಳು.
ಕುಸ್ತಿಗಳು ಪ್ರಾರಂಭವಾದವು. ಕಟ್ಟುಮಸ್ತಾದ ಜಟ್ಟಿಯ ಪ್ರತಿಸ್ಪರ್ಧಿಯಾಗಿ ರಾಮನಾಯ್ಕ ನಿಂತಿದ್ದ. ಊರಿನ ಜನರೆಲ್ಲ ಕೇಕೆ ಹಾಕುತ್ತಿದ್ದರು. ಆದರೂ ಸಹ ಜನತೆಯ ಮನದಲ್ಲಿ ರಾಮನಾಯ್ಕ ಸೋಲುವನು ಎಂಬಂತೆ ಭಾಸವಾಗುತ್ತಿತ್ತು. ಚಂದ್ರಲೇಖಳ ಮನವು ‘ಈ ಬಾರಿಯೂ ನನ್ನ ಸ್ನೇಹಿತ ಗೆಲ್ಲಲಿ’ ಎಂದು ದ್ಯಾಮವ್ವನನ್ನು ಪ್ರಾರ್ಥಿಸುತ್ತಿತ್ತು. ಕುಸ್ತಿಯು ಆರಂಭವಾಯಿತು. ರಾಮನಾಯ್ಕನು ಬಹಳಷ್ಟು ಕಷ್ಟ ಪಡುತ್ತಿದ್ದನು. ಆ ಜಟ್ಟಿಯು ಬಹಳ ತೂಕದವನಾಗಿದ್ದ. ಒಂದು ಭುಜವು ನೆಲಕ್ಕೆ ತಾಗಿ ಇನ್ನೇನು ರಾಮನಾಯ್ಕ, ಕೆಳಕ್ಕೆ ಬೀಳಬೇಕು ಎನ್ನುವಷ್ಟರಲ್ಲಿಯೇ ಅವನ ದೃಷ್ಟಿಯು ಮನಮೋಹಕ ನಗೆ, ಆಕರ್ಷಿಸುವ ಕಣ್ಗಳು, ಬೊಂಬೆಯಂತಹ ಚೆಲುವೆಯಾದ ಚಂದ್ರಲೇಖಳ ಮೇಲೆ ಬಿತ್ತು. ಆಕೆಯು ಕಣ್ಣು ಮಿಟುಕಿಸಿ ಸನ್ನೆ ಮಾಡಿದಳು. ಆಕೆ ಕೆನ್ನೆ ಸವರಿದ್ದು ನೆನಪಾಯ್ತು. ರಾಮನಾಯ್ಕ ಪುಳಕಿತನಾಗಿ ಆಕೆಯು ಮಾಡಿದ ಸನ್ನೆಯಿಂದ ಉತ್ಸಾಹಿತನಾಗಿ ಮನದಲ್ಲಿ ದ್ಯಾಮವ್ವನನ್ನು ನೆನೆದು ತನ್ನೆಲ್ಲಾ ಶಕ್ತಿಯೊಂದಿಗೆ ಜಟ್ಟಿಯನ್ನು ಎತ್ತಿ ನೆಲಕ್ಕೆ ಹಾಕಿದನು. ಇದನ್ನು ಕಂಡು ಜನರು ಆಶ್ಚರ್ಯದಿಂದ ಹರ್ಷೋದ್ಧಾರ ಮಾಡಿದಾಗ ಚಂದ್ರಲೇಖಳು ಮನದಲ್ಲಿಯೇ ಕುಣಿದಾಡಿದಳು.
ಚಂದ್ರಲೇಖಳ ಮನವು ಪ್ರಫುಲ್ಲಗೊಂಡಿತು. ಹೀಗೆಯೇ ಯಾವುದೋ ಶಕ್ತಿಯಿಂದ ಇನ್ನು ಮೂರು ಮಂದಿ ಜಟ್ಟಿಯನ್ನು ಕುಸ್ತಿಯಲ್ಲಿ ಸೋಲಿಸಿದನು. ಕೊನೆಯಲ್ಲಿ ಅಖಾಡದ ಬಳೆಯನ್ನು ಯಾರಾದರೂ ಹಿಡಿಯುವರೆಂದು ಹಲಗೆ ಹೊಡೆಸಿದರು. ಅಖಾಡದ ಬಳೆಯನ್ನು ಗೆದ್ದವರಿಗೆ ಒಂದು ಬೆಳ್ಳಿ ಗದೆಯನ್ನು ಕೊಡುವ ವಾಡಿಕೆ. ಅದರಂತೆ ಮೂರು ನಾಲ್ಕು ಬಾರಿ ಅಖಾಡದ ಸುತ್ತ ಹಲಗೆಯನ್ನು ಬಾರಿಸಿದರು. ಆದರೂ ಅದನ್ನು ಹಿಡಿಯಲು ಯಾರೂ ಮುಂದಾಗಲಿಲ್ಲ. ಐದಾರು ಸುತ್ತು ಆದ ನಂತರ ಒಬ್ಬ ಎರೆನಾಡು ಸೀಮೆಯ ಬಲವಾದ ಜಟ್ಟಿಯೊಬ್ಬ ಅಖಾಡದ ಬಳೆಯನ್ನು ಹಿಡಿದ. ಇದನ್ನು ಕಂಡು ಎಲ್ಲಾ ಹಳ್ಳಿಗರು ಹೌಹಾರಿದರು, ಈ ಜಟ್ಟಿಯನ್ನು ಕಂಡು ಎಲ್ಲಾ ಜಟ್ಟಿಗಳು ನಿರಾಶರಾದರು. ಕೊನೆಗೆ ಚಂದ್ರಲೇಖಳ ಸೂಚನೆಯಂತೆ ರಾಮನಾಯ್ಕ ಅವನ ಸ್ಪರ್ಧಿಯಾಗಿ ನಿಂತ. ಈ ಜಟ್ಟಿಯ ಜೊತೆಯಲ್ಲಿ ರಾಮನಾಯ್ಕ ಸರಿಯಾದ ಪ್ರತಿಸ್ಪರ್ಧಿಯಾಗಲಾರ ಎಂದು ಎಲ್ಲರೂ ತಿಳಿದಿದ್ದರು. ಕುಸ್ತಿಯು ಪ್ರಾರಂಭವಾಯಿತು. ಇಬ್ಬರೂ ಬಲವಂತವಾಗಿ ಸೆಣಸಾಡಿದರು. ಆದರೆ ಜಟ್ಟಿಯು ಹಾಕಿದ ಎಲ್ಲಾ ಪಟ್ಟುಗಳನ್ನು ರಾಮನಾಯ್ಕ ಲೀಲಾಜಾಲವಾಗಿ ಬಿಡಿಸಿಕೊಳ್ಳುತ್ತಿದ್ದ. ಇದನ್ನು ಕಂಡು ಜಟ್ಟಿ ಕೊನೆ ಕೊನೆಗೆ ನಿರಾಶನಾಗುತ್ತಾ ಬಂದನು. ಇದನ್ನು ಕಂಡು ರಾಮನಾಯ್ಕ ತನ್ನೆಲ್ಲಾ ಶಕ್ತಿಯನ್ನು ಒಂದುಗೂಡಿಸಿ ಏಕ ಮನಸ್ಸಿನಿಂದ ತನ್ನ ಮನೆ ದೇವತೆಯನ್ನು ನೆನೆದು ಜಟ್ಟಿಯನ್ನು ಮೇಲಕ್ಕೆ ಎತ್ತಿದನು. ಮತ್ತೆ ಪುನಃ ಈ ವರ್ಷವೂ ಸಹ ಅಖಾಡದ ಬಳೆಯು ನಮ್ಮ ಊರಿನ ವಶವಾಯಿತು ಎಂದು ಹರ್ಷೋದ್ಧಾರ ಮಾಡಿದರು. ಕೊನೆಗೆ ರಾಮನಾಯ್ಕ ಎತ್ತಿದ ಜಟ್ಟಿಯನ್ನು ಮೂರು ಬಾರಿ ತಿರುಗಿಸಿ ನೆಲಕ್ಕೆ ಒಗೆದನು. ಎಲ್ಲರೂ ಒಮ್ಮೆಲೇ ರಾಮನಾಯ್ಕನಿಗೆ ಜಯವಾಗಲಿ ಎಂದು ಕೂಗಿದರು.
ಊರಿನ ದೊಡ್ಡ ಸಾಹುಕಾರ ಅಖಾಡದ ಬಳೆ ಹಾಗೂ ಬೆಳ್ಳಿಗದೆಯನ್ನು ರಾಮನಾಯ್ಕನಿಗೆ ಕೊಟ್ಟರು. ಊರಿನ ಯುವಕರು ಅವನನ್ನು ಎತ್ತಿ ಮೆರವಣಿಗೆ ಮಾಡಲು ತೊಡಗಿದರು. ಅವನನ್ನು ಎಲ್ಲಾ ಮಾತೆಯರು, ಹೆಂಗಳೆಯರು ಆಶೀರ್ವಾದ ಮಾಡಿದರು. ಹೊಗಳಿದರು. ಎಲ್ಲರ ಮನದಲ್ಲಿ ಅವನ ಹೆಸರೇ ತುಂಬಿ ಮನೆಯ ಮಾತಾಗಿ ಹೋಗಿದ್ದನು. ಇದನ್ನು ಕಂಡು ಚಂದ್ರಲೇಖಳು. ಮನದಲ್ಲಿಯೇ ಉಬ್ಬಿ ಹೋಗಿದ್ದಳು. ಅವನೊಂದಿಗೆ ಮಾತನಾಡಬೇಕೆಂದು ಚಡಪಡಿಸುತ್ತಿದ್ದಳು.
ಸಂತೋಷದ ಭರದಲ್ಲಿ ಎರಡು ದಿನ ಕೆಲಸಕ್ಕೆ ಹೋಗಿರಲಿಲ್ಲ. ಸಾಹುಕಾರ ಸಿಟ್ಟಿನಿಂದ ಬಂದು ಅವನನ್ನು ಎಳೆದುಕೊಂಡು ಹೋಗಿದ್ದ.
ಒಂದು ದಿನ ಸಾಹುಕಾರನ ಮನೆಯಲ್ಲಿ ಕಳ್ಳತನವಾಗಿತ್ತು. ಕಳ್ಳತನದ ಆರೋಪವನ್ನು ಪುಟ್ಟನಾಯ್ಕನ ಮೇಲೆ ಹೊರಿಸಿ ಅವನ ಕೈಕಾಲು ಕಟ್ಟಿಸಿ ಮೈ ಚರ್ಮ ಸುಲಿಯುವ ರೀತಿಯಲ್ಲಿ ಹೊಡೆಸಿದ್ದನು. ಇದರಿಂದ ಅವನ ಅಣ್ಣ ವಿಷ ಸರ್ಪದಂತೆ ಆಗಿದ್ದ.
ದಿನಗಳುರುಳಿದಂತೆ ರಾಮನಾಯ್ಕ ಮತ್ತು ಚಂದ್ರಲೇಖಳ ಸ್ನೇಹ ಬೆಳೆದು ಪ್ರೀತಿಯ ಹೆಮ್ಮರವಾಗಿತ್ತು. ಅವರಿಬ್ಬರೂ ಒಂದೇ ಹೃದಯದಂತಿದ್ದರು. ಆಕೆಯ ಹೃದಯ ಒಮ್ಮೆಯಾದರೂ ತನ್ನ ಇನಿಯನನ್ನು ಭೇಟಿಯಾಗಿ ಮಾತನಾಡಿಸದಿದ್ದರೆ ಆಕೆಗೆ ಊಟವೇ ರುಚಿಸುತ್ತಿರಲಿಲ್ಲ. ಅಂದು ಚಂದ್ರಲೇಖಳು ಎರಡು ಮೂರು ದಿನಗಳಿಂದ ರಾಮನಾಯ್ಕನ ದರ್ಶನವು ಆಗದೇ ಚಡಪಡಿಸುತ್ತಿದ್ದಳು. ಇದೇ ಸಂದರ್ಭದಲ್ಲಿ ಸಾಹುಕಾರನು ಯಾವುದೋ ಕೆಲಸದ ಸಲುವಾಗಿ ಪಕ್ಕದ ಹಳ್ಳಿಗೆ ಹೋಗಿದ್ದ. ಎರಡು ಮೂರು ದಿನಗಳಾಗಿದ್ದವು. ಇತ್ತ ತಂದೆಯು ಊರಲ್ಲಿ ಇರಲಿಲ್ಲ. ಹಾಗೂ ತನ್ನ ಮನದಿನಿಯ ಬೇರೆ ಕಂಡಿರಲಿಲ್ಲ. ಆಕೆಗೆ ಮನಸ್ಸು ತಡೆಯಲಾರದೆ ರಾಮನಾಯ್ಕನನ್ನು ಹುಡುಕಿಕೊಂಡು ತೋಟಕ್ಕೆ ಹೋಗಿದ್ದಳು. ಅಲ್ಲಿ ರಾಮನಾಯ್ಕನು ತನ್ನಷ್ಟಕ್ಕೆ ತಾನೇ ಏಕಾಗ್ರತೆಯಿಂದ ಬೇರೆ ಕಡೆಗೆ ಲಕ್ಷ ಕೊಡದೆ ಕೆಲಸ ಮಾಡುತ್ತಿದ್ದ. ಆತನ ದಷ್ಟಪುಷ್ಟವಾಗಿ ಬೆಳೆದಿದ್ದ ರಟ್ಟೆಗಳು, ಹರವಾದ ಎದೆಯ ಮೇಲೆ ಬೆವರಿನ ಹನಿಗಳು ಬಿಸಿಲಿಗೆ ಮಿರಮಿರನೆ ಹೊಳೆಯುತ್ತ ಆಕರ್ಷಣೀಯವಾಗಿದ್ದವು. ಆಕೆಯು ಬಂದದ್ದನ್ನು ಗಮನಿಸಿದ್ದ. ಸ್ವಲ್ಪ ಹೊತ್ತಿನ ನಂತರ,
‘ರಾಮಾ, ನಿನಗೆ ಆಸೆ ಆಕಾಂಕ್ಷೆ ಇಲ್ವೆ?’
‘ನನ್ನ ಆಸೆ ಎಂದೋ ಬತ್ತಿ ಹೋಗಿದೆ. ಆದರೆ ಏನು ಮಾಡುವುದು. ತಾಯಿ, ತಮ್ಮ, ತಂಗಿಗಾಗಿ ಬದುಕಬೇಕಷ್ಟೆ.’
‘ನಾನು ನಿನ್ನನ್ನು ಪ್ರೀತಿಸುತ್ತೇನೆ’
ಅವನು ಮೌನವಾಗಿದ್ದ.
‘ಏಕೋ ಸುಮ್ಮನಾಗಿಬಿಟ್ಟೆ ಮಾತಾಡಲ್ವೇನೋ, ನಾನು ನಿಂಗೆ ಇಷ್ಟವಿಲ್ವೇನೋ?’
‘ಹಾಗೇನು ಇಲ್ಲ. ಆದರೆ ನಾವು ಬಡವರು, ಕೂಲಿ ಮಾಡಿ ಬದುಕುವವರು. ಹೀಗಿರುವಾಗ ನನ್ನನ್ನು ಇಷ್ಟಪಟ್ಟರೆ ನಿನಗೇನು ಸುಖ ಸಿಕ್ಕುತ್ತೆ.’
‘ನನಗೆ ನಿನ್ನ ಪ್ರೀತಿ ಸಿಕ್ಕರೆ ಸಾಕು. ಅದರಲ್ಲೇ ಬದುಕ್ತೀನಿ.’
‘ಅದೆಂದಿಗೂ ಸಾಧ್ಯವಿಲ್ಲ’ ಎಂದ
ಆದರೂ ಆಕೆ ಬಿಡದೇ ಆತನ ಕೈಹಿಡಿದು ಬಲವಾಗಿ ಅದುಮಿದಳು.
‘ಕೈ ಬಿಡಿ’ ಎಂದ.
‘ಇಲ್ಲಾ ನಾನು ನಿನ್ನ ಕೈ ಬಿಡುವುದಿಲ್ಲ’ ಎಂದಳು.
ಆದರೇನು ಮಾಡುವುದು. ಸೂರ್‍ಯನ ರಶ್ಮಿಗೆ ಮಂಜು ಕರಗಿದಂತೆ ಹೂವಿನ ಪರಿಮಳ ಗಾಳಿಯೊಂದಿಗೆ ಒಂದಾದಂತಾಯಿತು. ಅವನ ಬೆವರಿನ ಹನಿಗಳ ಬೆಳ್ಳಿ ಬೆಳಕು ಅವಳ ಬಯಕೆಯ ಕಡಲನ್ನು ಒಂದೊಂದಾಗಿ ಸೇರಿತು. ನಂತರ ಇಬ್ಬರೂ ಪ್ರೀತಿಯಿಂದ ಮಾತನಾಡುತ್ತಾ ಇದ್ದಾಗ, ತೋಟದ ಕೆಲಸ, ಜೀತದಾಳು ಸರಿಯಾಗಿ ಮಾಡುವನೋ, ಇಲ್ಲವೋ ಎಂದು ಸಾಹುಕಾರ ನಾಗಪ್ಪ ಬಂದು ನೋಡಲು ಸಿಡಿಮಿಡಿಗೊಂಡು, ಅರ್‍ಜೆಂಟಾಗಿ ಕೆಲಸ ಮುಗಿಸಿ ಬಂದಾಗ ತನ್ನ ಮಗಳು ಇವನೊಂದಿಗೆ ಸಲುಗೆಯಿಂದ ಮಾತನಾಡುತ್ತಾ ನಗುತ್ತಿರುವುದನ್ನು ಕಂಡು ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಯಿತು. ಹಾಗೇ ವಾಪಾಸ್ಸು ಹೋಗಿ ಆಳು ಕಳುಹಿಸಿ ರಾಮನಾಯ್ಕನನ್ನು ಕರೆಸಿ, ‘ಏನೋ ಬಡವಾ, ಒಪ್ಪತ್ತಿನ ಕೂಳಿಗೆ ಗತಿಯಿಲ್ಲ ನಿನಗೆ, ನನ್ನ ಮಗಳ ಹತ್ತಿರ ನಿನ್ನ ಸಲಿಗೆ ಎಷ್ಟು ಸೊಕ್ಕು ನಿನಗೆ. ತೊತ್ತಿನ ಮಗನೇ’ ಎಂದು ಬಾಸುಂಡೆ ಬರುವ ರೀತಿಯಲ್ಲಿ ಹೊಡೆಸಿದ್ದನು. ನರಳತ್ತಾ ಮನೆಯ ಹಾದಿಯನ್ನು ಹಿಡಿದಾಗ, ಅಲ್ಲಿಗೇ ಚಂದ್ರಲೇಖಳು ಬಂದು ಸಮಾಧಾನ ಮಾಡಿದಳು. ಅವನು ಅದ್ಯಾವುದರ ಪರಿವೇ ಇಲ್ಲದೆ ಮನೆಯ ಹಾದಿ ಹಿಡಿದಿದ್ದನು. ಇದರಿಂದ ಬಂದ ದಾರಿಗೆ ಸುಂಕವಿಲ್ಲದೇ ಹಿಂದಿರುಗಿದ್ದಳು. ಇತ್ತ ತಂದೆ ಸಿಟ್ಟಿನಿಂದ ಆಕೆಗೂ ಭಾರಿಸಿ ಅವನ ಸಂಗಡ ಮಾತನಾಡದಂತೆ ಎಚ್ಚರಿಕೆ ಕೊಟ್ಟಿದ್ದನು. ಅವರ ಅಂತಸ್ತಿಕೆಯ ಅಂತರದಿಂದ ಅವರನ್ನು ಎಂದಿಗೂ ಸೇರದಂತೆ ಎಚ್ಚರವಹಿಸಿದ್ದ ಸಾಹುಕಾರ. ಹೊರಗಡೆ ಹೋದೆಯೋ ಬೂತಪ್ಪ ಎಂದರೆ ಗವಾಕ್ಷಿಲಿ ಬಂದೆನಪ್ಪ ಎನ್ನುವಂತೆ ರಾಮನಾಯ್ಕನನ್ನು ಬಿಡದೇ ಬೆಂಬತ್ತಿ ಬಂದಿದ್ದರು ಸಾಹುಕಾರನ ಆಳುಗಳು.
ಬಡತನದ ಭೂತದಿಂದ ನರಳತ್ತಾ ಇದ್ದ ಅವನ ಸಂಸಾರಕ್ಕೆ ಅವನೇ ಜೀವಾಳವಾಗಿದ್ದ. ಆದ್ದರಿಂದ ಪುನಃ ಕೆಲಸಕ್ಕೆ ಹೋಗದೇ ಇರಲು ಸಾಧ್ಯವಿರದೇ ಹೋಗಿದ್ದ.
ಅಂದು ಮುಂಜಾನೆ ಸಾಹುಕಾರ ತನ್ನ ತೋಟದಲ್ಲಿ ರಾಮನಾಯ್ಕನಿಂದ ಕೆಲಸ ಮಾಡಿಸುತ್ತಿದ್ದ. ದೂರದ ಊರಿನಿಂದ ರಾಮನಾಯ್ಕನ ಸೋದರಮಾವ ಬಂದಿದ್ದ. ಈ ಸಮಾಚಾರವನ್ನು ತಿಳಿಸಲು ಪಾರವ್ವನೇ ತೋಟಕ್ಕೆ ಬಂದಾಗ ಸಾಹುಕಾರನ ಕಣ್ಣು ಆಕೆಯ ಮೇಲೆ ಬಿತ್ತು. ಆಕೆಯ ಸುಂದರವಾದ ಹಾಲುಗೆನ್ನೆಯ ಮುಖವು ದೇಹದ ಸುಂದರವಾದ ಉಬ್ಬುತಗ್ಗುಗಳು ಮೋಹಕವಾಗಿ ಕಾಣುತ್ತಿದ್ದವು, ಚಲುವೆಯು ಚಿಲುಮೆಯ ಬುಗ್ಗೆಯಂತಿದ್ದಳು. ಸದಾ ನಗುವಿನಿಂದ ಇರುವುದು, ಆಕೆಯ ನಗುವಿನಿಂದುಂಟಾದ ಮೋಹಕವಾದ ಚಲುವು ಮಾತ್ರ ಯಾರನ್ನಾದರು ಕೆಲವು ಕ್ಷಣ ಕುಕ್ಕಿ ಮನ ಕೆರಳುವಂತೆ ಮಾಡುತ್ತಿದ್ದವು. ಇಂತಹ ಚೆಲುವನ್ನು ಪಡೆದ ಹೆಣ್ಣು ನನ್ನವಳಾದರೆ ನನ್ನ ಸಂತೋಷಕ್ಕೆ ಪಾರವೇ ಇಲ್ಲ ಎಂದು ಮನಸ್ಸಿನಲ್ಲಿಯೇ ಹೊಂಚು ಹಾಕಿ ಆ ದಿನವು ಎಂದು ಬರುವುದೋ ಎಂದು ಕಾದು ಕುಳಿತಿದ್ದ.
ಚಂದ್ರಲೇಖಳು, ರಾಮನಾಯ್ಕನನ್ನು ಸಂಧಿಸಿ ಮಾತನಾಡಿದ್ದು ಸಾಹುಕಾರನು ಮನದಲ್ಲಿಯೇ ನೆನೆದು ಅವನ ಮೇಲೆ ಬೆಂಕಿ ಕಾರುತ್ತಿದ್ದನು. ಇವನಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕು ಎಂದು ಯೋಚಿಸುತ್ತಾ ತೋಟದಿಂದ ಬರುತ್ತಾ ಇದ್ದ. ಅದೇ ದಾರಿಯಲ್ಲಿ ಈ ಸುರ ಸುಂದರಿಯು ತನ್ನ ಕುಣಿಯುವ ಎದೆಯ ಮೈಮಾಟದಿಂದ ಬರುವುದನ್ನು ಕಂಡು ಸಾಹುಕಾರನ ಬಾಯಲ್ಲಿ ನೀರೂರಿತು. ಆಕೆ, ಹತ್ತಿರ ಬಂದಾಕ್ಷಣ ಸಾಹುಕಾರ ಸಾವರಿಸಿಕೊಂಡು ಆಕೆಯನ್ನು ತಡೆದು-
‘ಏನವ್ವ ಪಾರು ಯಾವ ಕಡೆ ಹೊರಟಿದ್ದೀಯಾ?’
‘ಅಣ್ಣನ ಹತ್ತಿರ ಹೊರಟಿರುವೆಯೋ? ಏನು ವಿಷಯ?’
‘ನಿನ್ನ ತಾಯಿ ಚೆನ್ನಾಗಿದ್ದಾರೋ?’
‘ಹೂಂ ಸಾಹುಕಾರ್ರೆ ಅಣ್ಣನ ಹತ್ತಿರ ಬಂದಿದ್ದೆ. ಊರಿಂದ ಮಾವ ಬಂದಿದ್ದ. ಅದಕ್ಕೆ ಅಣ್ಣನಿಗೆ ತಿಳಿಸಿ ಹೋಗಾನ ಅಂತ ಬಂದೆ.’
‘ನನ್ನ ಹತ್ತಿರ ಹೇಳದೆ ಇರುವಂತಹ ವಿಷಯ ಏನು ಚಿನ್ನಾ?’ ಎಂದು ತಡೆಯದೇ ಸಾಹುಕಾರ ಆಕೆಯ ಕೆಂಪು ಕೆಂಪಾಗಿರುವ ದುಂಡನೆಯ ಗಲ್ಲದ ಮೇಲೆ ಕೈಯಾಡಿಸಲು ಹೋದ.
‘ಯಾಕ್ರೀ ಸಾಹುಕಾರೇ, ಮೈಯಾಗ ಆರಾಮು ಇಲ್ವಾ?’
‘ಯಾಕೇ? ಒಂದು ತರಾ ಇಂಗು ತಿಂದ ಮಂಗನಾಂಗೆ ಮಾಡಾಕ ಹತ್ತೀರಿ’
‘ಅಂಗೇನು ಇಲ್ಲ ಚಿನ್ನಾ.’
‘ನೀನು ಮನಸ್ಸು ಮಾಡಿದ್ರೆ ನಿನ್ನ ಮಾರಾಣಿಯಾಂಗೆ ನೋಡ್ಕೊತೀನಿ’
‘ನೀನು ಒಂದ್ಸಲ ನನ್ನವಳಾಗು’
ಎಂದು ಆಕೆಯ ಕೈಯನ್ನು ಎಳೆದ. ಆಕೆ ಸಾಹುಕಾರನಿಗೆ ಕಪಾಳ ಮೋಕ್ಷ ಮಾಡಿ ತಪ್ಪಿಸಿಕೊಂಡು ಓಡಿಹೋದಳು.
“ಎಲಾ ಇವನ, ನನಗೇ ಮೋಕ್ಷ ಮಾಡಿದಳಲ್ಲಾ.. ಈ ಸಾಹುಕಾರನನ್ನ ಕೆಣಕಿದರೆ ನಾಗರ ಹಾವನ್ನು ಕೆಣಕಿದಂತೆ. ನನ್ನ ಹೆಸರೇ ನಾಗಪ್ಪ ಇನ್ನು ನೀನು ನನ್ನಿಂದ ಹೇಗೆ ತಪ್ಪಿಸಿಕೊಳ್ಳುವಿಯೋ ನಾನು ನೋಡಿಯೇ ಬಿಡುತ್ತೇನೆ.” ಎಂದು ಹೇಳುತ್ತ ತನ್ನ ಮನೆಯ ದಾರಿಯನ್ನು ಹಿಡಿದನು.
ನಡೆದ ಘಟನೆಯನ್ನು ಪಾರವ್ವ ತನ್ನ ಅಣ್ಣನ ಹತ್ತಿರ ತಿಳಿಸಿದಳು. ಮೊದಲೇ ಸಾಹುಕಾರನನ್ನು ಕೊಚ್ಚಿ ಹಾಕಬೇಕೆಂದು ಯೋಚಿಸಿದ್ದ. ಇದಕ್ಕೆ ತನ್ನ ತಂಗಿಯನ್ನು ಕೆಣಕಿದ್ದು ಮತ್ತಷ್ಟು ರೋಷಕ್ಕೆ ಎಡೆ ಮಾಡಿಕೊಟ್ಟಿತ್ತು.
ಈ ವಿಷಯವು ಸಾಹುಕಾರನಿಗೆ ಹೇಗೋ ತಿಳಿದು ಇವನಿಗಿಂತ ಮುಂಚೆಯೇ ಅವನನ್ನು ಮುಗಿಸಿ ಬಿಡಬೇಕೆಂದು ಯೋಚಿಸಿದ್ದ ಸಾಹುಕಾರ.
ಸಂಜೆ ಪಟ್ಟನಾಯ್ಕ ತಂಗಿ ಪಾರವ್ವನೊಡಗೂಡಿ ಸಾಹುಕಾರನ ತೋಟಕ್ಕೆ ಅಣ್ಣನ ಹತ್ತಿರ ಹೊರಟಿದ್ದರು. ಸಾಹುಕಾರನ ಆಳು ಇದನ್ನೇ ಹೊಂಚು ಹಾಕಿ ಕಾಯುತ್ತಿದ್ದರು. ಇದೇ ಸಂದರ್ಭ ಎಂದು ತಿಳಿದು ನಾಲ್ಕು-ಐದು ಜನ ಸೇರಿ. ಅವರಿಬ್ಬರ ಬಾಯಿಗೆ ಬಟ್ಟೆ ತುರುಕಿ ಪಾರವ್ವನನ್ನು ಸಾಹುಕಾರನ ತೋಟದ ಮನೆಗೆ ಸಾಗಿಸಿದರು. ಪಟ್ಟನಾಯ್ಕನು ಎಷ್ಟು ಸೆಣಸಾಡಿದರೂ ಬಿಡದೇ ಅವನನ್ನು ಮಚ್ಚಿನಿಂದ ಕೊಚ್ಚಿ ಗೋಣಿ ಚೀಲದಲ್ಲಿ ತುಂಬಿ ಊರ ಹೊರಗಿನ ಹಾಳು ಬಾವಿಯಲ್ಲಿ ಹಾಕಿ ಬಂದಿದ್ದರು ಸಾಹುಕಾರನ ಆಳುಗಳು.
ಇತ್ತ ಸಾಹುಕಾರನ ಕಾಮದಾಹಕ್ಕೆ ಮುಗ್ಧ ಚೆಲುವೆ ಪಾರವ್ವಳು ಬಲಿಯಾಗಿ ಎಲ್ಲವನ್ನೂ ಕಳೆದುಕೊಂಡಿದ್ದಳು. “ಎಲ್ಲಾ ಹೋದಮೇಲೆ ಇನ್ನೇನಿದೆ ನನ್ನಲ್ಲಿ” ಎಂದು ಬೇರೆ ದಾರಿ ಕಾಣದೇ ಅದೇ ತೋಟದ ಹುಣಸೇ ಮರಕ್ಕೆ ನೇಣುಹಾಕಿಕೊಂಡಿದ್ದಳು.
ಎರಡು ಮೂರು ದಿನಗಳಲ್ಲಿಯೇ ಹಣ್ಣು ಮುದುಕಿ ದ್ಯಾಮವ್ವ ತನ್ನ ಇಬ್ಬರು ಮಕ್ಕಳ ಸ್ಥಿತಿಯನ್ನು ತಿಳಿದು ಮಲಗಿದಲ್ಲಿಯೇ ಉಸಿರು ಬಿಟ್ಟಿದ್ದಳು. ಇವೆಲ್ಲವನ್ನೂ ಕಂಡಿದ್ದ ರಾಮನಾಯ್ಕ ತಾಳಲಾರದೆ ಬುಸುಗುಡುತ್ತಿದ್ದ.
ಹೆತ್ತ ತಾಯಿ ಸತ್ತು ಹೋದಳು. ತಮ್ಮನನ್ನು ಕೊಚ್ಚಿ ಹಾಕಿ ಬಿಟ್ಟರು. ನನ್ನ ಮುದ್ದಿನ ತಂಗಿಯನ್ನು ಹಾಳುಮಾಡಿಕೊಂದು ಹಾಕಿದ ಸಾಹುಕಾರ, ಎಂದು ನೆನಪಿಸಿಕೊಂಡು ಹಲ್ಲು ಕಡಿಯುತ್ತಿದ್ದ. ಇವೆಲ್ಲವನ್ನೂ ಮನಸ್ಸಿನಲ್ಲಿ ಹುದುಗಿಸಿಕೊಂಡು ಕೆಲಸ ಮಾಡುತ್ತಿದ್ದ. ಆದರೆ ಏನು ಮಾಡುವುದು. ನೆನಪುಗಳು ಒಂದೊಂದಾಗಿ ಸುರುಳಿ ಬಿಚ್ಚತೊಡಗಿದವು. ಕುಸ್ತಿಯಲ್ಲಿ ಗೆದ್ದು ಬಂದಾಗ “ಅವ್ವ ನಮ್ಮ ಅಣ್ಣ ಭೀಮ ಇದ್ದಂಗವ್ವ” ಎಂದು ತಾಯಿಗೆ ಹೇಳಿ ಮನೆಯೊಳಗಿದ್ದ ಅಂಬಲಿಗೆ ಮಜ್ಜಿಗೆ, ಹಾಲನ್ನು ಬೆರೆಸಿ ನನಗೆ ಪ್ರೀತಿಯಿಂದ ಕೊಟ್ಟಿದ್ದಳು ತಂಗಿ, ಅದು ನೆನಪಾಗಿ ಬಿಕ್ಕಿ ಬಿಕ್ಕಿ ಅಳತೊಡಗಿದ್ದ. ಆದರೆ ಆಳು ಬಂದು ಕೆಲಸಕ್ಕೆ ಎಳಕೊಂಡು ಹೋಗಿದ್ದರು. ರಾಮನಾಯ್ಕ ಮಾತ್ರ ಸಾಹುಕಾರನ್ನ ಕಂಡ್ರೆ ಬುಸುಗುಡುತ್ತಲೇ ಇದ್ದ.
ಒಮ್ಮೆ ತೋಟದಲ್ಲಿ ರಾಮನಾಯ್ಕ ಕೆಲಸ ಮಾಡುತ್ತಾ ತನ್ನ ಸೇಡನ್ನು ಹೇಗೆ ತೀರಿಸಬೇಕೆಂದು ಯೋಚಿಸುತ್ತಿದ್ದ. ಅದೇ ಹೊತ್ತಿಗೆ ಸಾಹುಕಾರ ಅಲ್ಲಿಗೆ ಬಂದು ಅವನ ಮೇಲೆ ಕೆಟ್ಟದಾಗಿ ರೇಗಾಡಿದ. ರೋಸಿ ಹೋಗಿದ್ದ ರಾಮನಾಯ್ಕ ತಡೆಯಲಾರದೇ,
“ಲೋ ಸಾಹುಕಾರಾ ಕೆರಳಿದ ಸರ್ಪವನ್ನು ಕೆಣಕಬ್ಯಾಡ
ನಿನ್ನ ಜೀವ ಕೈಯಾಗ ಹಿಡ್ಕೊಂಡು ಮಾತಾಡೋ”
ಎಂದು ಉಗ್ರವಾಗಿ ನುಡಿದ, ಸಿಟ್ಟು ತಡೆಯಲಾರದೆ ಅಲ್ಲೇ ಇದ್ದ ಮಚ್ಚನ್ನು ತೆಗೆದುಕೊಂಡು ಸಾಹುಕಾರನ ಮೇಲೆ ಎರಗಿದ. ಇನ್ನೇನು ಮಚ್ಚು ಸಾಹುಕಾರನ ಕುತ್ತಿಗೆ ಮೇಲೆ ಬಿತ್ತು ಎನ್ನುವಷ್ಟರಲ್ಲಿಯೇ ಅವನ ಆಳುಗಳು ಅವರನ್ನು ಬಿಡಿಸಿ, ರಾಮನಾಯ್ಕನನ್ನು ಎಳ್ಕೊಂಡು ಹೋಗಿ ಕೊಚ್ಚಿ ಗೋಣಿಚೀಲದಲ್ಲಿ ತುಂಬಿ ಪುಟ್ಟನಾಯ್ಕನನ್ನು ಹಾಕಿದ ಹಾಳು ಬಾವಿಗೆ ಹಾಕಿದರು.
ಅಂತೂ ಇಂದಿಗೆ ಅವರನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿದೆ ಎಂದು ಅಟ್ಟಹಾಸದಿಂದ ಕೂಗಾಡುತ್ತಿದ್ದ ಸಾಹುಕಾರ. ಆದರೆ ಆ ಮೂರ್ಖನಿಗೇನು ತಿಳಿದಿತ್ತು……!
*****
೧೧.೦೨.೧೯೯೬