ಕೊಡಬೇಡವೋ ಶಿವನೆ!
ಕೂಸು ಮುದ್ದ
ಲೋಕವೆಲ್ಲಾ ಬಂಜೆ ಅಂದ್ರೂ ಪರವಾಗಿಲ್ಲ
ತೀರಿ ಹೋಗಲಿ ನಮ್ಮ ತಲೆಗೆ ಎಲ್ಲಾ!
ಅವರು ಇವರು ಯಾರ ಮಾತು ಏಕೆ ?
ಅಪ್ಪ ಯಾರೋ ಗೊತ್ತಿಲ್ಲ
ಸಾಯೋತನಕ ಅಮ್ಮನನ್ನಾದರು ನೋಡಿಕೊಂಡಿರುವ
ಭಾಗ್ಯವೂ ನಮಗಿಲ್ಲ; ಕಾರಣ ನಾವು ದನಗಳು.
ಎಲ್ಲೋ ಹುಟ್ಟಿ
ಎಲ್ಲೆಲ್ಲೋ ಯಾರು ಯಾರಿಗೋ ದಾಸರಾಗಿ ಜೀವತೇದು
ಹೇಗೋ ಕಂತೆ ಒಗೆದು ಹೋಗುವ
ಪರ್ದೇಸಿ ಬದುಕು ಯಾರಿಗೆ ಬೇಕ್ರಿ ?
ಹುಟ್ಟಿನಿಂದಲೇ ಶುರು
ನಮ್ಮ ಗೋಳು ಬಾಳು
ತಲೆ-ಕಾಲು, ಬೆನ್ನು-ಬಾಲ, ಅಚ್ಚೆ-ಮಚ್ಚೆ, ಸುಳಿ-ಮೂಳೆ
ನಂಬಿಕೆಗೆ ತಕ್ಕನಾಗಿ ಇದ್ದರೆ ಮಾತ್ರ ಲೇಸು!
ಆರೈಕೆ ಮನಸ್ಸಿದ್ದಂಗೆ
ತಾಯಿ ಹಾಲು ರುಚಿಗೆ ಮಾತ್ರ
ಮೈಗತ್ತುತ್ತೋ ಇಲ್ಲವೋ ಹಾಕಿದ ಕಸಕಡ್ಡಿ ತಿಂದು
ಜೀವ ಹೊರೆಯಬೇಕು.
ಹಲ್ಲು ಮೂಡಿರದಿದ್ದರೂ ಮರುಕ ತೋರಿಸರು
ತುಸುವೇ ಬನಿಯಾಗಿದ್ದರು ಸಾಕು
ಎಲ್ಲಾ ತರದ ನೊಗಗಳು ಹೆಗಲಿಗೇರುತ್ವೆ
ಬಿದ್ದು ಹೋಗೋ ತನಕ ಇದು ಸಾಗೇ ಇರುತ್ತೆ.
ಬೇನೆ-ಬೇಸರಿಕೆ, ಸುಸ್ತು-ಸಂಕಟ
ದಾಹ, ಹಸಿವು ಏರು ಇಳಿವು ಲೆಕ್ಕಕ್ಕಿಲ್ಲ
ಭಾವನಿಕೆಗೆ ಅರ್ಹವಾಗಲು, ಪ್ರೀತಿ ವಿಶ್ವಾಸ
ಪಡೆಯಲು
ನಾವೇನು ಮನುಷ್ಯರೇನು ?
ದುಡ್ಡಿನಾಸೆಗೋ… ಷೋಕಿಗೋ…
ಇಲ್ಲ! ನಮ್ಮ ಕ್ಷಮತೆ ಕಡ್ಡಿಯಷ್ಟು ಕಡಿಮೆಯಾದರೂ
ಸಂತೆ, ಜಾತ್ರೆಗೆ ಅಟ್ಟಿಕೊಂಡು ಹೋಗಿ
ತೋಚಿದ ಬೆಲೆಗೆ ತೂರಿ ಬಿಡುವರು.
ಯಾರು ಇಟ್ಟುಕೊಳ್ಳರು ನಮ್ಮನ್ನ ಕೊನೆತನಕ
ಉದ್ದಕ್ಕೂ ಮಾರುತ್ತಾ ನಡೆವರು
ಆಯ್ಕೆಗೆ ಎಲ್ಲಿದೆ ಸ್ವಾತಂತ್ರ್ಯ ?
ಅನುಭವಿಸುವುದನ್ನು ಬಿಟ್ಟು.
ಬರಬಾರದ್ದೇನಾದರು ಬಂದೋ…
ಬರ್ಬರ ದುಡಿಮೆಯಲಿ ಘಾತ ಸಂಭವಿಸಿಯೋ…
ವ್ಯರ್ಥ! ಹೊರೆಯೆನಿಸಿದರೆ
ತಿನ್ನುವ ಜನರಿಗೆ ಕೊಟ್ಟು ಮನೆಮಂದಿಗೆಲ್ಲಾ ಕೆರ
ಹೊಲಿಸಿಕೊಳ್ಳುವರು.
ಇವರಲ್ಲಿ ಸತ್ತರೆಂತಿಟ್ಟುಕೊಳ್ಳಿ,
ಎಲ್ಲರೂ ಸೇರುವರು, ಇನ್ನಿಲ್ಲದ ನೇಮ ನಡೆಸುವರು
ತೊಳೆದು, ಸಿಂಗರಿಸಿ ಹೂಳುವರು, ಸುಡುವರು
ಪೂಜೆ ಮಾಡುವರು ಆಗಲೂ… ಅನಂತರವು…
ಭಯದಿಂದ.
ನಾವು ಸತ್ತರೆ ಬಹಳ ಜನ
ಬಿಸಾಕಿ ಬರುವರು ಬಯಲಲ್ಲಿ
ಪ್ರಾಣಿ, ಪಕ್ಷಿಗೆ ಆಹಾರ ಮಾಡಿ
ನಾವು ಬದುಕಿನಲಿ ಸಾವಿನಲಿ ಉಪಯುಕ್ತರು
ಆದರೂ ನಮಗೀ ಗತಿ ನೋಡಿ!
ಬಯಲ ಮಹಾಮನೆ ಕಟುಕರಂಗಡಿಯಲಿ
ಕೊರಡು, ಮಚ್ಚುಗಳ ಉನ್ಮತ್ತ ನರ್ತನಕೆ
ನವರಂಗವಾಗುವೆವು ನಾವು
ತುಂಡು, ತುಂಡಾಗಿ ರವಾನೆಯಾಗುವೆವು
ಬೇಯಲಿಕೆ
ಪದಾರ್ಥವಾಗಿ.
ಕೊಡಬೇಡವೋ ಶಿವನೇ! ಕೂಸು ಮುದ್ದ
ನಮ್ಮ ಕುಲ ಹುಟ್ಟೋದು ಬೇಡ
ಈ ಸಾವು ಸಾಯೋದು ಬೇಡ
ತೀರಿ ಹೋಗಲಿ ನಮ್ಮ ತಲೆಗೆ… ಎಲ್ಲಾ!
*****