ಶ್ರಾವಣ ಮಾಸ ಬಂತೆಂದರೆ
ಸಿಗದು ಉಪಾಹಾರ ಜಳಕವಿಲ್ಲದೆ
ಎರಡು ದಿನಕ್ಕೊಮ್ಮೆ ಮಾಡುತ್ತಿದ್ದ ಜಳಕ
ನೀರಿಲ್ಲದಿದ್ದರೂ ಈಗ ದಿನವೂ ಜಳಕ
ದೇವರ ಪೂಜೆ ಮಾಡದಿದ್ದ ನಾನು
ಅವರ ಮೈ ತೊಳೆಯುವುದೀಗ ನನ್ನ ಸರದಿ
ಶ್ರಾವಣ ನೆಪದಲ್ಲಾದರೂ ಎಚ್ಚರಿಸುವಳು
ಮಾಡದ ತಪ್ಪಿಗೆ ಮನ್ನಿಸೆಂದು
ದೇವರಲ್ಲಿ ಬೇಡಿಕೊಳ್ಳಿ ಎಂದು
ಇಷ್ಟವಿಲ್ಲದಿದ್ದರೂ ಸಂಜೆ
ಬಿಡದೇ ಕರೆದೊಯ್ಯುವಳು ನನ್ನ
ದೇವಸ್ಥಾನಕೆ ಜೊತೆಯಲಿ
ಮುಗಿದರೂ ಶ್ರಾವಣ ಮಾಸ
ದೇವರಿಗೆ ಮಾಡಿಸುವಳು ಅಭಿಷೇಕ
ನನಗೆ ಮಾತ್ರ ನಿತ್ಯ ಅಭಿಷೇಕ
ಮಾಡಿ ದೇವರಿಗೆ ಪೂಜೆ ಎಂದು
ಶ್ರಾವಣ ಕಳೆಯುವ ತನಕ
ನಾನು ಪಕ್ಕಾ ಬ್ರಹ್ಮಚಾರಿ ಗೊತ್ತಾ!
ಆದರೂ
ಬಂತೆಂದರೆ ಶ್ರಾವಣ
ನನಗದೇನೋ ಸಂಭ್ರಮ ಮಹದಾನಂದ
ಮಾಡುವಳು ರುಚಿ ರುಚಿ ಅಡುಗೆ
ಬಗೆ ಬಗೆ ತಿಂಡಿ ತಿನಿಸು
ಕಡುಬು ಪಾಯಸ ಖೀರು ಕೋಸುಂಬರಿ
ನಾ ತಿನ್ನುವೆ ಚಪ್ಪರಿಸಿ
ಕೈ ಬಳೆ ಸದ್ದಿನಲಿ ಮಾಡಿದಡುಗೆ
ಘಮ-ಘಮಿಸುತಲಿ
ಅದೇನೋ ಪರಿಮಳದಾಕರ್ಷಣೆ ಅದರಲಿ
ಓರೆಗಣ್ಣಿನಲಿ ನೋಡುತ ಪ್ರೀತಿಯಲಿ
ಬಡಿಸಿದರೆ ಪಾಯಸದ ರುಚಿ ಸಿಗದು ಬೇರೆಲ್ಲೂ
ಅವಳ ನಡಿಗೆಯ ಗೆಜ್ಜೆಯ ಸಪ್ಪಳದಲಿ
ಸಿರಿಲಕ್ಷ್ಮಿ ಇಲ್ಲೆಂದೆನಿಸದಿರದು ಮನೆಯಲಿ
ನನಗದು ಕೋಟಿ ರುಪಾಯಿಗೂ ಮಿಗಿಲು
*****
೫-೯-೨೦೧೦ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟ